ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ; ಭಾರತ ವಿರೋಧಿ, ಚೀನಾ ಬೆಂಬಲಿಗ ಯಮೀನ್‍ಗೆ ಸೋಲು

ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜನರು ವಿಪಕ್ಷಗಳ ಅಭ್ಯರ್ಥಿ ಮಹಮದ್ ಸಾಲಿಹ್ ಅವರನ್ನು ಆಯ್ಕೆ ಮಾಡುವ ಮೂಲಕ, ಹಾಲಿ ಅಧ್ಯಕ್ಷ ಯಮೀನ್‍ಗೆ ಆಘಾತ ಉಂಟುಮಾಡಿದ್ದಾರೆ. ತಂತ್ರ ಬಳಸಿಯಾದರೂ ಯಮೀನ್ ಗೆಲ್ಲುತ್ತಾರೆ ಎನ್ನಲಾಗಿತ್ತು. ಆದರೆ, ಜನ ಅವರನ್ನು ತಿರಸ್ಕರಿಸಿದ್ದಾರೆ

ಸುಂದರ ದ್ವೀಪಸಮುದಾಯ ದೇಶ ಮಾಲ್ಡೀವ್ಸ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ಹಾಲಿ ಅಧ್ಯಕ್ಷ ಯಮೀನ್ ಅಬ್ದುಲ್ ಗಯೂಮ್ ಸೋತಿದ್ದಾರೆ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಇಬ್ರಾಹಿಂ ಮಹಮದ್ ಸಾಲಿಹ್ ಜಯ ಗಳಿಸಿದ್ದಾರೆ.

ಏನಾದರೂ ತಂತ್ರ ಬಳಸಿ ಯಮೀನ್ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಜನರು ಅವರನ್ನು ತಿರಸ್ಕರಿಸಿದ್ದಾರೆ. ಭಾನುವಾರ ನಡೆದ ಚುನಾವಣೆಯ ಮೊದಲ ಫಲಿತಾಂಶಗಳು ಸೋಮವಾರ ಪ್ರಕಟವಾಗಿದ್ದು; ಸಾಲಿಹ್ ಅವರು ಶೇ.58.3ರಷ್ಟು ಮತ ಗಳಿಸಿದ್ದರೆ, ಯಮೀನ್ ಅವರು ತೀರಾ ಹಿಂದೆ ಬಿದ್ದಿದ್ದಾರೆ. ಅಂತಿಮ ಫಲಿತಾಂಶಗಳು ಮುಂದಿನ ಒಂದೆರಡು ದಿನಗಳಲ್ಲಿ ಘೋಷಿತವಾಗುವ ಸಂಭವವಿದೆ. ದೇಶದಲ್ಲಿ ಪ್ರಜಾತಂತ್ರದ ಪುನರ್ ಸ್ಥಾಪನೆಯಾಗಿದೆ ಎಂದು ಗೆದ್ದ ಅಭ್ಯರ್ಥಿ ಸಾಲಿಹ್ ಹೇಳಿದ್ದಾರೆ. ಆದರೆ, ಯಮೀನ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಅವರು ಯಾವಾಗ ರಾಜಿನಾಮೆ ನೀಡುತ್ತಾರೆ ಅಥವಾ ಅಧಿಕಾರದಲ್ಲಿ ಉಳಿಯಲು ಮತ್ತಾವುದಾದರೂ ದಾರಿ ಆಯ್ಕೆ ಮಾಡಿಕೊಳ್ಳುತ್ತಾರೋ ಎಂಬುದು ಗೊತ್ತಾಗಿಲ್ಲ.

ಚೀನಾ ಸ್ನೇಹ ಬೆಳೆಸಿದ್ದ ಯಮೀನ್, ಭಾರತಕ್ಕೆ ಸಾಕಷ್ಟು ಮುಜುಗರ ಉಂಟುಮಾಡುತ್ತ ಬಂದಿದ್ದರು. ಹೀಗಾಗಿ, ಅವರ ಸೋಲು ಸಹಜವಾಗಿಯೇ ಭಾರತಕ್ಕೆ ಹರ್ಷ ತಂದಿದೆ. ಚೀನಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಮೀನ್ ಅವರ ಅವಕೃಪೆಗೆ ಗುರಿಯಾಗಿ ಅನಾರೋಗ್ಯದ ಕಾರಣದಿಂದ ಶ್ರೀಲಂಕಾದಲ್ಲಿ ಆಶ್ರಯ ಪಡೆದಿರುವ ಹಿಂದಿನ ಅಧ್ಯಕ್ಷ ಮತ್ತು ಭಾರತದ ಪರವಾದಿ ಮಹಮದ್ ನಸೀದ್ ಅವರು ಚುನಾವಣಾ ಫಲಿತಾಂಶಗಳನ್ನು ಪ್ರಜಾತಂತ್ರಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಚೀನಾ ಆರ್ಥಿಕ ಬಲ ಬಳಸಿ ಭಾರತದ ಸುತ್ತಲ ದೇಶಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಪ್ರಯತ್ನ ನಡೆಸುತ್ತ ಬಂದಿದೆ. ಈ ಪೈಕಿ, ಮಾಲ್ಡೀವ್ಸ್ ಕೂಡ ಒಂದು. ಮಾಲ್ಡೀವ್ಸ್‌ನಲ್ಲಿ ಚೀನಾ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅಪಾರ ಪ್ರಮಾಣದಲ್ಲಿ ಹಣ ಹೂಡಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟವರು ಈಗಿನ ಅಧ್ಯಕ್ಷ ಯಮೀನ್ ಅಬ್ದುಲ್ ಗಯೂಮ್. ಚೀನಾದ ಬೆಂಬಲದಿಂದ ಅಹಂಕಾರದಿಂದ ಮೆರೆಯುತ್ತಿದ್ದ ಯಮೀನ್ ಸರ್ಕಾರ, ದೇಶದ ವಿವಿಧ ಕಡೆ ಕೆಲಸ ಮಾಡುತ್ತಿದ್ದ ಭಾರತೀಯರನ್ನು ಹೊರಹಾಕುವ ಪ್ರಯತ್ನವನ್ನೂ ಮಾಡಿತು. ನೆರೆಯ ದೇಶವಾದ ಮಾಲ್ಡೀವ್ಸ್‌ನಲ್ಲಿ ಭಾರತ ಕೂಡ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿತ್ತು; ಆದರೆ, ಅವು ಸ್ಥಗಿತಗೊಂಡಿವೆ. ದೇಶದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದಾಗ ಮಧ್ಯಪ್ರವೇಶ ಮಾಡದೆ ದೂರ ಉಳಿಯಬೇಕೆಂದು ಚೀನಾ ಬಹಿರಂಗವಾಗಿ ಭಾರತಕ್ಕೆ ಸಲಹೆ ಮಾಡಿದ್ದು ಸಾಕಷ್ಟು ವಿವಾದ ಎಬ್ಬಿಸಿತ್ತು. ಈ ಹಿನ್ನೆಲೆಯಲ್ಲಿ, ಈಗಿನ ಬೆಳವಣಿಗೆ ಭಾರತಕ್ಕೆ ಅನುಕೂಲಕರವಾಗಿದೆ. ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಲಿಹ್, ಈಗಾಗಲೇ ತಾವು ಭಾರತದ ಜೊತೆಗೆ ಬಾಂಧವ್ಯ ಮರುಸ್ಥಾಪಿಸುವುದಾಗಿ ಹೇಳಿದ್ದಾರೆ. ಅಂದರೆ, ಚೀನಾಕ್ಕೆ ಅಡ್ಡಗಾಲು ಹಾಕಿದಂತೆಯೇ ಸರಿ.

ಭಾರತದ ನೆರೆಯ ದೇಶವಾದ ಮಾಲ್ಡೀವ್ಸ್‌ನ ಜನಸಂಖ್ಯೆ ಸುಮಾರು ನಾಲ್ಕು ಲಕ್ಷ. ಹಿಂದೂ ಮಹಾಸಾಗರದಲ್ಲಿರುವ ದ್ವೀಪಸಮುದಾಯವಿದು. ಸುಮಾರು 1,192 ದ್ವೀಪಗಳಿದ್ದು, ನಿಸರ್ಗ ರಮಣೀಯ ತಂಗುದಾಣಗಳಿಗೆ ಹೆಸರಾಗಿದೆ. ವರ್ಷವೊಂದಕ್ಕೆ ಪ್ರವಾಸೋದ್ಯಮವೊಂದರಿಂದಲೇ ದೇಶಕ್ಕೆ ಬರುವ ಆದಾಯ ಮೂರು ಬಿಲಿಯನ್ ಡಾಲರ್‌ಗಳು. ಮಾಲ್ಡೀವ್ಸ್‌ನಲ್ಲಿ ಮುಸ್ಲಿಮರೇ ಹೆಚ್ಚು ಇದ್ದಾರೆ. ಆದರೆ, ಇಸ್ಲಾಂ ಮೂಲಭೂತವಾದ ಅಲ್ಲಿ ವಿಕೃತ ಸ್ವರೂಪ ಪಡೆದಿಲ್ಲ. ಮಮೂನ್ ಅಬ್ದುಲ್ ಗಯೂಮ್ ಅವರ ಮೂರು ವರ್ಷಗಳಿಗೂ ಹೆಚ್ಚು ಕಾಲದ ಸರ್ವಾಧಿಕಾರಿ ಆಡಳಿತ 2008ರಲ್ಲಿ ಅಂತ್ಯವಾಗಿ ಪ್ರಜಾತಂತ್ರ ಸ್ಥಾಪನೆಯಾಯಿತು. ಆಗ ಆಯ್ಕೆಯಾದ ಭಾರತ ಪರವಾದಿ ಮಹಮದ್ ನಸೀಬ್, 2012ರಲ್ಲಿ ವಿಚಿತ್ರ ಸನ್ನಿವೇಶದಲ್ಲಿ ರಾಜಿನಾಮೆ ನೀಡಬೇಕಾಯಿತು. ಭ್ರಷ್ಟಾಚಾರ ಆರೋಪದ ಮೇಲೆ ಕ್ರಿಮಿನಲ್ ಕೋರ್ಟ್‍ನ ನ್ಯಾಯಾಧೀಶರೊಬ್ಬರನ್ನು ಬಂಧಿಸಲು ಅವರು ಆದೇಶಿಸಿದ್ದರು. ಅದಕ್ಕೆ ಪೊಲೀಸರು ಮತ್ತು ವಿರೋಧಪಕ್ಷಗಳು ಅವಕಾಶ ನೀಡಲಿಲ್ಲ. ಈ ಸನ್ನಿವೇಶದಲ್ಲಿ ಬಲವಂತದಿಂದ ಅವರ ರಾಜಿನಾಮೆ ಪಡೆಯಲಾಯಿತು.

2013ರಲ್ಲಿ ನಡೆದ ಚುನಾವಣೆಗಳಲ್ಲಿ ಅಬ್ದುಲ್ ಯಮೀನ್ ಅಧ್ಯಕ್ಷರಾಗಿ ಆಯ್ಕೆಯಾದರು. ನಸೀದ್ ಸೋತರು. ಯಮೀನ್ ಅವರು ಸರ್ವಾಧಿಕಾರಿಯಾಗಿ ಪರಿವರ್ತನೆಗೊಂಡರು. ನಸೀದ್ ಜೊತೆ ಭಾರತ ಸ್ನೇಹದಿಂದ ಇತ್ತೆಂಬ ಕಾರಣಕ್ಕೆ ಅವರು ಚೀನಾದ ಜೊತೆ ಸ್ನೇಹ ಬೆಳೆಸಿದರು. ಕೋರ್ಟುಗಳು ಅವರು ಹೇಳಿದಂತೆ ತೀರ್ಪು ನೀಡುವಂತೆ ಮಾಡಿಕೊಂಡರು. ಆ ಮೂಲಕ ಹಿಂದಿನ ಅಧ್ಯಕ್ಷ ನಸೀದ್ ಅವರೂ ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ದೂಡಿದರು. ಹಿಂದಿನ ಅಧ್ಯಕ್ಷ, ಅವರ ಸೋದರ ಸಂಬಂಧಿ ಮಮೂನ್ ಅಬ್ದುಲ್ ಗಯೂಮ್ ಅವರನ್ನೂ ಬಂಧಿಸಲಾಯಿತು. ಚುನಾವಣೆಗಳಿಗೆ ಸ್ಪರ್ಧಿಸದಂತೆ ವಿರೋಧಿ ನಾಯಕರನ್ನು ಅನರ್ಹಗೊಳಿಸಲಾಯಿತು. ಒಂದು ರೀತಿಯಲ್ಲಿ ಪ್ರಜಾತಂತ್ರ ಅಂತ್ಯವಾಯಿತೋ ಎಂಬಂಥ ಬೆಳವಣಿಗೆಗಳಿಗೆ ಯಮೀನ್ ಕಾರಣರಾದರು.

ಇದನ್ನೂ ಓದಿ : ಮಾಲ್ಡೀವ್ಸ್‌ನಲ್ಲಿ ರಾಜಕೀಯ ಅಸ್ಥಿರತೆ, ಚೀನಾಕ್ಕೆ ಭಾರತದತ್ತಲೇ ಕಣ್ಣು!

ರಾಜಕೀಯ ಕಾರಣಗಳಿಗಾಗಿ ಬಂಧಿಸಲಾದ ವಿರೋಧಿ ನಾಯಕರನ್ನು ಬಿಡುಗಡೆ ಮಾಡಬೇಕೆಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನೇ ಬಂಧಿಸಲು ಆದೇಶ ನೀಡಿದರು. ಈ ಬೆಳವಣಿಗೆ ಅಂತಾರಾಷ್ಟ್ರೀಯವಾಗಿ ದೊಡ್ಡ ವಿವಾದ ಎಬ್ಬಿಸಿತು. ಮಾನವ ಹಕ್ಕುಗಳ ದಮನ ಆರೋಪದ ಮೇಲೆ ಆರ್ಥಿಕ ನಿರ್ಬಂಧ ವಿಧಿಸುವುದಾಗಿ ಭದ್ರತಾ ಮಂಡಳಿ ಬೆದರಿಕೆ ಹಾಕುವಂಥ ಸ್ಥಿತಿ ಬಂದಿತು. ಈ ಬೆಳವಣಿಗೆಗಳು ಜನಾಭಿಪ್ರಾಯ ಬದಲಾಗಲು ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಜನರು ಯಮೀನ್ ಅವರನ್ನು ಸೋಲಿಸಿ, ಪ್ರಜಾತಂತ್ರವಾದಿ ಸಾಲಿಹ್ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಆಯ್ಕೆಯನ್ನು ಯಮೀನ್ ಗೌರವಿಸುತ್ತಾರೋ ಅಥವಾ ಮಿಲಿಟರಿ ಬಲ ಬಳಸಿ ಅಧಿಕಾರದಲ್ಲಿ ಉಳಿಯಲು ಪ್ರಯತ್ನಿಸುವರೇ ಎಂಬುದರ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ನಡೆಯಲಿವೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More