ಟ್ರಂಪ್ ಸೂಚಿಸಿದ ಸುಪ್ರೀಂ ನ್ಯಾಯಮೂರ್ತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮನಿರ್ದೇಶನಗೊಂಡಿರುವ ಬ್ರೆಟ್ ಕ್ಯಾವನಾವ್ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಒಳಗಾಗಿ ತೀವ್ರ ಮುಜುಗರ ಎದುರಿಸುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧದ ಕ್ರಮದ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ವಿವಾದಕ್ಕೆ ಒಳಗಾಗಿದ್ದಾರೆ. ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ ಸರ್ಕೀಟ್ ಕೋರ್ಟ್‍ನ ನ್ಯಾಯಮೂರ್ತಿ ಬ್ರೆಟ್ ಮೈಕೆಲ್ ಕ್ಯಾವನಾವ್ ಲೈಂಗಿಕ ದೌರ್ಜನ್ಯ ಆರೋಪಗಳಿಗೆ ಒಳಗಾಗಿದ್ದಾರೆ. ಒಬ್ಬರಲ್ಲ, ಇಬ್ಬರಲ್ಲ ಮೂವರು ಮಹಿಳೆಯರು ಅವರ ವಿರುದ್ಧ ಲೈಂಗಿಕ ದೌಜನ್ಯದ ಆರೋಪ ಹೊರಿಸಿದ್ದು, ಅವರ ನೇಮಕಕ್ಕೆ ಸೆನೆಟ್ ಸಮ್ಮತಿ ಕೊಡುತ್ತದೆಯೋ ಇಲ್ಲವೋ ಎನ್ನುವಂಥ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದೇ ಗುರುವಾರ ಸೆನೆಟ್‍ನ ಜುಡಿಶಿಯಲ್ ಕಮಿಟಿಯು ನ್ಯಾಯಮೂರ್ತಿ ವಿರುದ್ಧದ ಆರೋಪಗಳ ಬಗ್ಗೆ ಆರೋಪ ಮಾಡಿದವರಿಂದಲೇ ಹೇಳಿಕೆ ದಾಖಲೆ ಮಾಡಿಕೊಳ್ಳಲಿದೆ.

“ಕ್ಯಾವನಾವ್ ಅವರನ್ನು ಸುಪ್ರೀಂ ಕೋರ್ಟ್‍ಗೆ ನಾಮನಿರ್ದೇಶನ ಮಾಡಲು ತಮಗೆ ಹರ್ಷವಾಗುತ್ತದೆ, ಅವರು ಸದ್ಗುಣ ಸಂಪನ್ನರು ಮತ್ತು ನ್ಯಾಯಶಾಸ್ತ್ರದಲ್ಲಿ ಬುದ್ಧಿವಂತರು,” ಎಂದು ಟ್ರಂಪ್ ಬಣ್ಣಿಸಿದ್ದರು. ಇದೀಗ, ಅವರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ರಾಜಕೀಯ ದುರುದ್ದೇಶದ್ದು ಎಂದೂ ಟ್ರಂಪ್ ಆರೋಪಿಸಿದ್ದಾರೆ. ಒಂದು ಕಡೆ ತಮ್ಮ ನಿರ್ಧಾರವನ್ನು ಟ್ರಂಪ್ ಸಮರ್ಥಿಸಿಕೊಂಡರೆ, ಮತ್ತೊಂದು ಕಡೆ ಕ್ಯಾವನಾವ್ ತಮ್ಮ ಮೇಲೆ ಬಂದಿರುವ ಆರೋಪಗಳೆಲ್ಲ ಸುಳ್ಳು ಎಂದು ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್‍ಗೆ ನಾಮನಿರ್ದೇಶನಗೊಂಡವರೊಬ್ಬರು ಸಂಸಾರ ಸಮೇತ ಟಿವಿಯಲ್ಲಿ ಸಂದರ್ಶನ ಕೊಟ್ಟದ್ದು ಅಮೆರಿಕದ ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲು ಎನ್ನಲಾಗಿದೆ.

ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ಕ್ಯಾವನಾವ್ ಬಹಿರಂಗವಾಗಿ ಹೇಳುತ್ತಿರುವಂತೆಯೇ, ಆರೋಪ ಮಾಡಿದ ಮಹಿಳೆಯರೂ ತಮ್ಮ ಮೇಲೆ ದೌಜನ್ಯ ನಡೆದ ಬಗ್ಗೆ ಬಹಿರಂಗವಾಗಿ ಪತ್ರಿಕೆಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಕ್ಯಾವನಾವ್ ವಿರುದ್ಧ ಮೊದಲು ಆರೋಪ ಮಾಡಿದವರು ಕ್ಯಾಲಿಫೋನಿರ್ಯಾದ ಸೈಕಾಲಜಿ ಪ್ರೊಫೆಸರ್ ಕ್ರಿಸ್ಟೀನ್ ಬ್ಲಾಸ್ ಫೋರ್ಡ್. ಮೊದಲು ಅವರು ಸೆನೆಟ್‍ನ ಜುಡಿಶಿಯಲ್ ಕಮಿಟಿಗೆ ದೂರು ನೀಡಿದರು. ಕಮಿಟಿ ಮೊದಲು ಆ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಿರಾಶೆಗೊಂಡ ಫೋರ್ಡ್, ಆ ಬಗ್ಗೆ ಜುಡಿಷಿಯಲ್ ಕಮಿಟಿಯಲ್ಲಿದ್ದ ಸೆನೆಟ್ ಸದಸ್ಯರೊಬ್ಬರಿಗೆ ಮತ್ತು ವಿರೋಧಿ ಡೆಮಾಕ್ರಟಿಕ್ ಪಕ್ಷದ ಸದಸ್ಯರೊಬ್ಬರಿಗೆ ಮಾಹಿತಿ ನೀಡಿದರು. ಡೆಮಾಕ್ರಟಿಕ್ ಸದಸ್ಯರು ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ ನಂತರ ಜುಡಿಷಿಯಲ್ ಸಮಿತಿ ಕಳೆದ ವಾರವೇ ಹೇಳಿಕೆ ದಾಖಲಿಸಲು ಬರುವಂತೆ ಸೂಚಿಸಿತ್ತು. ಫೋರ್ಡ್ ಅವರು ವಿಚಾರಣೆಗೆ ಹಾಜರಾಗಲು ಗುರುವಾರ ಬರುವುದಾಗಿ ತಿಳಿಸಿದ ನಂತರ ಅನಿವಾರ್ಯವಾಗಿ ವಿಚಾರಣೆ ದಿನ ಈಗ ಬದಲಾಗಿದೆ. ಎಂಬತ್ತರ ದಶಕದಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ತಮ್ಮನ್ನು ಕ್ಯಾವನಾವ್ ಮತ್ತು ಅವರ ಸ್ನೇಹಿತರೊಬ್ಬರು ಕುಡಿತ ಮತ್ತಿನಲ್ಲಿ ರೂಮೊಂದಕ್ಕೆ ಎಳೆದುಕೊಂಡು ಹೋಗಿ ಮೈಮೇಲಿನ ಬಟ್ಟೆಗಳನ್ನು ಕಳಚಲು ಮತ್ತು ಅತ್ಯಾಚಾರ ಮಾಡಲು ಯತ್ನಿಸಿದರು, ಕೂಗಿಕೊಳ್ಳಲು ಹೋದರೆ ಬಟ್ಟೆಯಿಂದ ಬಾಯಿ ಮುಚ್ಚಿದರು ಎಂದು ಫೋರ್ಡ್ ಆರೋಪಿಸಿದ್ದಾರೆ. ಇದು 36 ವರ್ಷಗಳ ಹಿಂದಿನ ಘಟನೆಯಾದರೂ ಆ ಘಟನೆ ನಡೆದ ನಂತರ ಆಘಾತದಿಂದ ಹೊರಬರಲು ಹಲವು ವರ್ಷಗಳೇ ಆದವು ಎಂದು ಹೇಳಿದ್ದಾರೆ.

ಫೋರ್ಡ್ ವಿರುದ್ಧ ಆರೋಪ ಮಾಡಿದ ನಂತರ ಮತ್ತೊಬ್ಬ ಮಹಿಳೆ ಡೇಬರವ್ ರಮೀಜ್ ಎಂಬುವವರು ಕ್ಯಾವನಾವ್ ವಿರುದ್ಧ ವಕೀಲರ ಮೂಲಕ ಸೆನೆಟ್ ಜುಡಿಷಿಯಲ್ ಕಮಿಟಿಗೆ ದೂರು ನೀಡಿದ್ದಾರೆ. ಕಾಲೇಜು ದಿನಗಳಲ್ಲಿ ತಮ್ಮ ಮೇಲೆ ಅತ್ಯಾಚಾರ ಮಾಡುವ ಪ್ರಯತ್ನವನ್ನು ಕ್ವಾವನಾವ್ ಮಾಡಿದ್ದರೆಂದು, ಕುಡಿದ ಮತ್ತಿನಲ್ಲಿ ತಮ್ಮನ್ನು ರೂಮೊಂದಕ್ಕೆ ಎಳೆದುಕೊಂಡು ಹೋಗಿ ಮಲಗಿಸಿ ಅವರು ತಮ್ಮ ಶಿಶ್ನವನ್ನು ಮುಖಕ್ಕೆ ತಾಗಿಸಿ ವಿಕೃತವಾಗಿ ವರ್ತಿಸಿದರೆಂದೂ ದೂರಿದ್ದಾರೆ. ಇದೀಗ ಮೂರನೆಯ ದೂರೊಂದು ಬಂದಿದೆ. ಟ್ರಂಪ್ ಅವರು ಲೈಂಗಿಕ ಸಂಪರ್ಕ ಪಡೆದಿದ್ದ ಬೆತ್ತಲೆ ತಾರೆ ಸ್ಟಾರ್ಮಿ ಡೇನಿಯಲ್ಸ್‍ಗೆ ವಕೀಲರಾಗಿರುವ ಮೈಕೆಲ್ ಅವನೆಟ್ಟಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮುಂಬರುವ ದಿನಗಳಲ್ಲಿ ಆ ದೂರೂ ಹೆಚ್ಚು ಸದ್ದು ಮಾಡಲಿದೆ.

ಇದನ್ನೂ ಓದಿ : ಡೊನಾಲ್ಡ್‌ ಟ್ರಂಪ್ ನಿಕಟ ಸಲಹೆಗಾರರಲ್ಲಿ ಶಿಕ್ಷೆಗೊಳಗಾದವರು ಯಾರ್ಯಾರು?

ಅಮೆರಿಕದಲ್ಲಿ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯೇ ವಿಚಿತ್ರ. ಜಿಲ್ಲೆ ಮತ್ತು ಹೈಕೋರ್ಟಿಗೆ ಸ್ಥಳೀಯ ಗರ್ವನರ್ ಅವರು ಸ್ಥಳೀಯ ಕೋರ್ಟುಗಳ ನ್ಯಾಯಾಧೀಶರನ್ನು ನೇಮಿಸುತ್ತಾರೆ. ಹಾಗೆಯೇ ಸುಪ್ರೀಂ ಕೋರ್ಟಿಗೆ ದೇಶದ ಅಧ್ಯಕ್ಷರು ನ್ಯಾಯಮೂರ್ತಿಗಳನ್ನು ನೇಮಿಸುತ್ತಾರೆ. ಮೊದಲು ನಾಮನಿರ್ದೇಶನ ಮಾಡುತ್ತಾರೆ. ಅವರ ನೇಮಕವನ್ನು ಸೆನೆಟ್ ಪರಿಶೀಲಿಸಿ ಸಮ್ಮತಿ ಸೂಚಿಸುವುದು ಕಡ್ಡಾಯ. ಸೆನೆಟ್ ಒಪ್ಪದಿದ್ದರೆ ನ್ಯಾಯಮೂರ್ತಿಗಳ ನೇಮಕ ಆಗುವುದಿಲ್ಲ. ಹಲವೊಮ್ಮೆ ಪಕ್ಷದ ಬಹುಮತ ಆಧರಿಸಿಯೇ ನೇಮಕಾತಿಗೆ ಸಮ್ಮತಿ ದೊರೆಯುತ್ತದೆ. ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಸೂಚಿಸಿದ್ದ ಒಬ್ಬರು ನ್ಯಾಯಾಧೀಶರ ಹೆಸರನ್ನು ಸೆನೆಟ್ ತಿಸ್ಕರಿಸಿದ ಉದಾಹರಣೆಯೂ ಇದೆ. ಜಾಜ್ ಬುಷ್ ಅವರು ಅಧ್ಯಕ್ಷರಾಗಿದ್ದಾಗ ಅವರು ನಾಮನಿರ್ದೇಶನ ಮಾಡಿದವರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬಂದಿತ್ತು. ಸೆನೆಟ್ ವಿಚಾರಣೆ ನಡೆದಿತ್ತು ಕೂಡ. ಆದರೆ ನ್ಯಾಯಾಧೀಶರ ನೇಮಕಕ್ಕೆ ಸೆನೆಟ್ ಸಮ್ಮತಿ ನೀಡಿತ್ತು. ಸದ್ಯ ಸೆನೆಟ್‍ನಲ್ಲಿ ರಿಪಬ್ಲಿಕನ್ ಸದಸ್ಯರು ಹೆಚ್ಚು ಇದ್ದಾರೆ (51). ವಿರೋಧಪಕ್ಷ ಡೆಮಾಕ್ರಟಿಕ್ ಸದಸ್ಯರ ಸಂಖ್ಯೆ 49. ಈ ಸಂಖ್ಯಾಬಲದ ಆಧಾರದ ಮೇಲೆ ಕ್ಯಾವನಾಮ್ ನೇಮಕಕ್ಕೆ ಸಮ್ಮತಿ ಸಿಗುವುದು ಸುಲಭ. ಆದರೆ, ಇಬ್ಬರು ಮೂವರು ಮಹಿಳಾವಾದಿ ಸೆನೆಟ್ ಸದಸ್ಯರು ಮತದಾನದ ವೇಳೆ ಡೆಮಾಕ್ರಟಿಕ್ ಸದಸ್ಯರ ಜೊತೆಗೂಡಿ ಕ್ಯಾವನಾವ್ ನೇಮಕ್ಕೆ ಸಮ್ಮತಿ ಸೂಚಿಸುವುದರ ವಿರುದ್ಧ ಮತ ಹಾಕಬಹುದು ಎಂದು ಊಹಿಸಲಾಗಿದೆ.

ಫೋರ್ಡ್ ಪ್ರಕರಣ ಭಿನ್ನ ಸನ್ನಿವೇಶದಲ್ಲಿ ಸಾರ್ವಜನಿಕರ ಚರ್ಚೆಯ ವಿಷಯವಾಗಿದೆ. ಈಗ ‘ಮೀ... ಟು’ ಚಳವಳಿ ಮಹಿಳೆಯರಲ್ಲಿ ಅರಿವನ್ನು ಮೂಡಿಸುವಲ್ಲಿ ಸಾಕಷ್ಟು ಸಫಲವಾಗಿದೆ. ಹೆಣ್ಣಿಗೆ ದೌರ್ಜನ್ಯ ನಡೆದಿದೆ ಎನ್ನುವುದೇ ಮುಖ್ಯವೇ ಹೊರತು ಅದು ಎಷ್ಟು ವರ್ಷಗಳ ಹಿಂದೆ ನಡೆದಿದೆ ಎನ್ನುವುದಲ್ಲ ಎನ್ನುವ ವಾದಕ್ಕೆ ಈಗ ಮಹತ್ವ ಬಂದಿದೆ. ಈ ಸೂಕ್ಷ್ಮವನ್ನು ಅರಿತೇ ಸೆನೆಟ್, ಫೋರ್ಡ್ ಅವರ ವಿಚಾರಣೆಗೆ ಒಪ್ಪಿದೆ. ಅಂತಿಮವಾಗಿ ಸೆನೆಟ್ ತೀರ್ಪು ಏನೇ ಬರಲಿ, ಸುಪ್ರೀಂ ಕೋರ್ಟ್‍ಗೆ ನ್ಯಾಯಮೂರ್ತಿಗಳ ನೇಮಕವೂ ಸಾರ್ವಜನಿಕ ಚರ್ಚೆಗೆ ಒಳಗಾಗುವಂತಾದದ್ದು ಒಳ್ಳೆಯ ಬೆಳವಣಿಗೆ.

ಈಗಾಗಲೇ ಟ್ರಂಪ್ ಅವರು ಸಂಪ್ರದಾಯವಾದಿಯೊಬ್ಬರನ್ನು ಸುಪ್ರೀಂ ಕೋರ್ಟ್‌ಗೆ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಒಂಬತ್ತು ನ್ಯಾಯಮೂರ್ತಿಗಳಿರುವ ಸುಪ್ರೀಂ ಕೋರ್ಟ್ ಈಗಾಗಲೇ ಹೆಚ್ಚು ಸಂಪ್ರದಾಯವಾದಿಗಳಿಂದಲೇ ತುಂಬಿದೆ. ಇನ್ನು, ಕ್ಯಾವನಾವ್ ಕೂಡ ನೇಮಕಗೊಂಡರೆ ಸುಪ್ರೀಂ ಕೋರ್ಟ್ ಸಂಪ್ರದಾಯವಾದಿಗಳ ತೆಕ್ಕೆಗೆ ಸಿಗಲಿದೆ. ಇದನ್ನು ತಪ್ಪಿಸಬೇಕೆಂಬುದು ವಿರೋಧಿ ಡೆಮಾಕ್ರಟಿಕ್ ಪಕ್ಷದ ಗುರಿ. ಆದರೆ, ಆ ಪಕ್ಷ ಈ ವಿಷಯದಲ್ಲಿ ಯಶಸ್ವಿಯಾಗುವುದೇ ಎಂಬುದನ್ನು ಕಾದುನೋಡಬೇಕು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More