ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 8 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಅಮೆರಿಕ-ಚೀನಾ ವಾಣಿಜ್ಯ ಸಮರ ತಾರಕಕ್ಕೆ

ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಬಿಕ್ಕಟ್ಟು ಸ್ಫೋಟಗೊಳ್ಳುವ ಹಂತಕ್ಕೆ ಬಂದಿದ್ದು, ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಸುಧಾರಣೆ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಮಂಗಳವಾರ ಹೇಳಿದ್ದಾರೆ. ಚೀನಾ ಉತ್ಪಾದಕ ವಸ್ತುಗಳ ಮೇಲೆ ಅಮೆರಿಕ ಸರ್ಕಾರ ಸುಂಕ ಹೆಚ್ಚಿಸಿರುವಂತೆಯೇ ಚೀನಾ ಕೂಡ ಅಮೆರಿಕ ವಸ್ತುಗಳ ಮೇಲಿನ ತನ್ನ ಸುಂಕ ಹೆಚ್ಚಿಸಿತ್ತು.

ಫೇಸ್‌ಬುಕ್‌ನಿಂದ ಹೊರಬಂದ ಇನ್ಸ್ಟಾಗ್ರಾಂ

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಸಹಸಂಸ್ಥಾಪಕರಾದ ಕೆವಿನ್ ಸಿಸ್ಟ್ರಾಮ್ ಮತ್ತು ಮೈಕ್ ಕ್ರೈಗರ್ ಫೇಸ್ಬುಕ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್ ಜೊತೆಗಿನ ಒಪ್ಪಂದದಿಂದ ಮಂಗಳವಾರ ಹೊರನಡೆದಿದ್ದಾರೆ. ಮಾಹಿತಿ ಸೋರಿಕೆ ವಿಷಯದಲ್ಲಿ ನಂಬಿಕೆ ಕಳೆದುಕೊಂಡ ಫೇಸ್‌ಬುಕ್ ಸಂಸ್ಥೆಗೆ ರಾಜಿನಾಮೆ ನೀಡಿ, ಮಾರ್ಕ್ ಅವರ ಬಗೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. "ನಾವು ಈಗ ನಮ್ಮ ಮುಂದಿನ ಅಧ್ಯಾಯಕ್ಕೆ ಸಿದ್ಧರಾಗಿದ್ದೇವೆ. ನಮ್ಮ ಕುತೂಹಲ ಮತ್ತು ಸೃಜನಶೀಲತೆ ಪರೀಕ್ಷಿಸಿಕೊಳ್ಳಲು ನಾವು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇವೆ," ಎಂದು ಸಿಇಒ ಸಿಸ್ಟ್ರೋಮ್ ಹೇಳಿದ್ದಾರೆ.

ರಾಜ್ಯದ 86 ತಾಲೂಕುಗಳು ಬರಪೀಡಿತ; ಸರ್ಕಾರ ಘೋಷಣೆ

ತಕ್ಷಣದಿಂದ ಜಾರಿಯಾಗುವಂತೆ ಕರ್ನಾಟಕದ 86 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಿದೆ. ಶೇಕಡ 60ರಷ್ಟು ಮಳೆ ಕೊರತೆ ಅಥವಾ ಸತತ 3 ವಾರ ಅಥವಾ ಅಧಿಕ ಶುಷ್ಕ ವಾತಾವರಣ ಹಾಗೂ ತತ್ಪರಿಣಾಮ ಸೂಚ್ಯಂಕಗಳನ್ನು ಪರಿಗಣಿಸಿ ರಾಜ್ಯದ 176 ತಾಲೂಕುಗಳ ಪೈಕಿ 86 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಸಚಿವ ಸಂಪುಟದ ಉಪ ಸಮಿತಿ ಸಭೆ ನಿರ್ಣಯಿಸಿದೆ. ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವ ತಾಲೂಕುಗಳಲ್ಲಿ ಭೂರಹಿತ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸಲು ಕ್ರಮ, ಕುಡಿಯುವ ನೀರು ಸರಬರಾಜು, ಮೇವು ಮತ್ತು ಜಾನುವಾರು ಸಂರಕ್ಷಣೆ ಹಾಗೂ ಬರನಿವಾರಣೆ ಕಾರ್ಯಗಳನ್ನು ಕೈಗೊಳ್ಳಲು ಕಂದಾಯ ಇಲಾಖೆ ಆಯಾ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದೆ.

‘ಅರ್ಜುನ್‌ ರೆಡ್ಡಿ’ ಹಿಂದಿ ರಿಮೇಕ್‌ನಲ್ಲಿ ಶಾಹಿದ್‌ಗೆ ಜೋಡಿಯಾಗಿ ಕೀರಾ

ಬ್ಲಾಕ್‌ಬಸ್ಟರ್ ತೆಲುಗು ಸಿನಿಮಾ ‘ಅರ್ಜುನ್‌ ರೆಡ್ಡಿ’ ಹಿಂದಿ ರಿಮೇಕ್‌ನಲ್ಲಿ ಶಾಹಿದ್‌ ಕಪೂರ್ ಗೆ ಜೋಡಿಯಾಗಿ ಕೀರಾ ಅಡ್ವಾನಿ ಆಯ್ಕೆಯಾಗಿದ್ದಾರೆ. ನಟಿ ಕೀರಾ ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆದ ‘ಲಸ್ಟ್‌ ಸ್ಟೋರೀಸ್‌’ ವೆಬ್‌ ಸರಣಿಯಲ್ಲಿ ನಟಿಸಿದ್ದರು. ಮೂಲ ತೆಲುಗು ಸಿನಿಮಾ ನಿರ್ದೇಶಿಸಿದ್ದ ಸಂದೀಪ್ ರೆಡ್ಡಿ ವಂಗಾ ಹಿಂದಿ ಅವತರಣಿಕೆಯನ್ನೂ ನಿರ್ದೇಶಿಸಲಿದ್ದಾರೆ. ಮೂಲ ತೆಲುಗು ಚಿತ್ರದಲ್ಲಿ ವಿಜಯ್‌ ದೇವರಕೊಂಡ ಮತ್ತು ಶಾಲಿನಿ ಪಾಂಡೆ ನಟಿಸಿದ್ದರು. ಹಿಂದಿ ಅವತರಣಿಕೆಯನ್ನು ಟಿ ಸೀರೀಸ್‌ ಮತ್ತು ಸಿನೆ ಒನ್‌ ಸ್ಟುಡಿಯೋ ನಿರ್ಮಿಸುತ್ತಿವೆ. ‘ಫಗ್ಲೀ’ (2014) ಹಿಂದಿ ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ್ದ ಕೀರಾ, ‘ಎಂ ಎಸ್ ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ (2016) ಚಿತ್ರದಲ್ಲಿ ಗುರುತಿಸಿಕೊಂಡಿದ್ದರು. ‘ಲಸ್ಟ್‌ ಸ್ಟೋರೀಸ್‌’ ವೆಬ್ ಸರಣಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು.

೨೦೦ನೇ ಪಂದ್ಯದ ನಾಯಕತ್ವ ವಹಿಸಿದ ಧೋನಿ

ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಆಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ರೋಹಿತ್ ಶರ್ಮಾ ವಿಶ್ರಾಂತಿ ಪಡೆದ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ತಂಡದ ಸಾರಥ್ಯ ಹೊತ್ತರು. ೨೦೦ನೇ ಪಂದ್ಯದಲ್ಲಿ ನಾಯಕತ್ವ ವಹಿಸಿದ ಗರಿಮೆಗೆ ಭಾಜನವಾದ ಧೋನಿ, ಆ ಮೂಲಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ನ್ಯೂಜಿಲೆಂಡ್‌ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಬಳಿಕ ಈ ಸಾಧನೆ ಮಾಡಿದ ಸಾಧಕ ಎನಿಸಿದರು. ಅಕ್ಟೋಬರ್ ೨೯, ೨೦೧೬ರಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಕೊನೆಯ ಬಾರಿಗೆ ತಂಡವನ್ನು ಮುನ್ನಡೆಸಿದ್ದ ಧೋನಿ, ೧೯೦ ರನ್ ಗೆಲುವು ತಂದಿತ್ತಿದ್ದರು.

ಪ್ರಧಾನ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾದ ಅಜಯ್ ಜಯರಾಂ

ಸಿಯೋಲ್‌ನಲ್ಲಿ ಇಂದಿನಿಂದ ಶುರುವಾದ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಧಾನ ಘಟ್ಟಕ್ಕೆ ತಲುಪಲು ಭಾರತದ ಸಿಂಗಲ್ಸ್ ಆಟಗಾರ ಅಜಯ್ ಜಯರಾಂ ವಿಫಲವಾದರು. ೬೦೦,೦೦೦ ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿಂದು ಅವರು, ಚೀನಾ ಆಟಗಾರ ಝಾವೊ ಜುನ್‌ಪೆಂಗ್ ವಿರುದ್ಧ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ೨೪-೨೬, ೧೮-೨೧ರಿಂದ ಸೋಲನುಭವಿಸಿದರು. ಇನ್ನು, ಯುವ ಆಟಗಾರ್ತಿ ವೈದೇಹಿ ಚೌಧರಿ ಸ್ಥಳೀಯ ಆಟಗಾರ್ತಿ ಕಿಮ್ ಗಾ ಯುನ್ ಎದುರು ಯಾವುದೇ ಹೋರಾಟ ನಡೆಸದೆ ೮-೨೧, ೮-೨೧ರ ಎರಡು ನೇರ ಗೇಮ್‌ಗಳಲ್ಲಿ ಸೋಲನುಭವಿಸಿದರು. ಬುಧವಾರ ನಡೆಯಲಿರುವ ಪ್ರಧಾನ ಸುತ್ತಿನಲ್ಲಿ ಸೈನಾ ನೆಹ್ವಾಲ್ ಮತ್ತು ಸಮೀರ್ ವರ್ಮಾ ಕಣಕ್ಕಿಳಿಯಲಿದ್ದಾರೆ.

ಆಫ್ಘಾನಿಸ್ತಾನಕ್ಕೆ ಶೆಹಜಾದ್ ಶತಕದ ಆಸರೆ

ಅನುಭವಿ ಆಟಗಾರ ಹಾಗೂ ಆರಂಭಿಕ ಮೊಹಮದ್ ಶೆಹಜಾದ್ ದಾಖಲಿಸಿದ ೫ನೇ ಏಕದಿನ ಶತಕ ಕುಸಿದ ಆಫ್ಘಾನಿಸ್ತಾನಕ್ಕೆ ಆಸರೆಯಾಯಿತು. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿಂದು ನಡೆದ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಫ್ಘಾನಿಸ್ತಾನ, ಉತ್ತಮ ಆರಂಭ ಕಂಡರೂ, ಕ್ರಮೇಣ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ೬೫ ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆಫ್ಘಾನಿಸ್ತಾನ, ೮೨ ರನ್ ಗಳಿಸುವಷ್ಟರಲ್ಲಿ ಇನ್ನೂ ನಾಲ್ಕು ವಿಕೆಟ್ ಕಳೆದುಕೊಂಡು ತತ್ತರಿಸಿತು. ಶೆಹಜಾದ್ ಮನೋಜ್ಞ ಬ್ಯಾಟಿಂಗ್‌ನಿಂದ ತಂಡಕ್ಕೆ ಆಸರೆಯಾದರು. ೩೫ ಓವರ್‌ಗಳಾದಾಗ ಆಫ್ಘಾನಿಸ್ತಾನ ಆಫ್ಘಾನಿಸ್ತಾನ ೫ ವಿಕೆಟ್ ನಷ್ಟಕ್ಕೆ ೧೬೩ ರನ್ ಗಳಿಸಿತ್ತು. ಶೆಹಜಾದ್ ಮತ್ತು ಮೊಹಮದ್ ನಬಿ ಕ್ರಮವಾಗಿ ೧೧೬ ಮತ್ತು ೧೭ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

‘ಕಾಂಪೀಟ್ ವಿತ್‌ ಚೈನಾ’ ಯೋಜನೆಗೆ ೫೦೦ ಕೋಟಿ ರುಪಾಯಿ: ಸಿಎಂ ಎಚ್‌ಡಿಕೆ‌

ಕಾಂಪೀಟ್‌ ವಿತ್ ಚೈನಾ ಯೋಜನೆಯಡಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ವಲಯಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ ರಾಜ್ಯ ಸರ್ಕಾರವು ೫೦೦ ಕೋಟಿ ರುಪಾಯಿ ಮೀಸಲಿಟ್ಟಿದೆ. ಮುಂದಿನ ವರ್ಷ ೨ ಸಾವಿರ ಕೋಟಿ ರುಪಾಯಿ ಒದಗಿಸಲಿದೆ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸ್ಥಳೀಯ ಸಂಪನ್ಮೂಲದ ಬಳಕೆ ಮತ್ತು ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎನ್ನಲಾಗಿದೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More