ನ್ಯಾಯಮೂರ್ತಿ ಕ್ಯಾವನಾವ್ ಪ್ರಕರಣ: ಎಫ್‍ಬಿಐ ತನಿಖೆಗೆ ಒಪ್ಪಿದ ಟ್ರಂಪ್

ಖಾಲಿಯಾಗಲಿರುವ ಅಮೆರಿಕದ ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಯ ಒಂದು ಸ್ಥಾನಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೂಚಿಸಿರುವ ಬ್ರೆಟ್ ಕ್ಯಾವನಾವ್ ಅವರ ವಿರುದ್ಧ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪವನ್ನು ಇದೀಗ ಎಫ್‍ಬಿಐ ತನಿಖೆಗೆ ಒಪ್ಪಿಸಲಾಗಿದೆ

ಕ್ಯಾವನಾವ್ ವಿರುದ್ಧದ ಆರೋಪ ಪರಿಶೀಲನೆಗೆ ಶುಕ್ರವಾರ ಸೇರಿದ್ದ ಸೆನೆಟ್‍ನ ಜುಡಿಷಿಯಲ್ ಕಮಿಟಿ ಸಭೆ ಹಿಂದೆಂದೂ ಕಂಡುಬರದೆ ಇದ್ದಂಥ ಭಾವೋದ್ರೇಕದ ವಾತಾವರಣಕ್ಕೆ ಕಾರಣವಾಯಿತು.

ಮೊದಲು ಸೆನೆಟ್ ವಿಚಾರಣೆಗೆ ಒಳಗಾದವರು ಕ್ಯಾವನಾವ್ ವಿರುದ್ಧ ಲೈಂಗಿಕ ಆರೋಪ ಮಾಡಿರುವ ಪ್ರೊ.ಕ್ರಿಸ್ಟೀನ್ ಬ್ಲಾಸೆ ಫೋರ್ಡ್. ಮುಜುಗರ ಉಂಟುಮಾಡುವಂಥ ಪ್ರಶ್ನೆಗಳಿಗೂ ಅವರು ಸಮಾಧಾನದಿಂದ ಉತ್ತರ ನೀಡಿದರು. 36 ವರ್ಷಗಳ ಹಿಂದೆ ತಾವು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಒಂದು ಸಂಜೆ ನಡೆದ ಘಟನೆ ಅದು ಎಂದು ವಿವರಿಸಿದರು. “ಬಿಯರ್ ಪಾರ್ಟಿಯಿಂದ ಪಾನಮತ್ತರಾದ ಕ್ಯಾವನಾವ್, ನನ್ನನ್ನು ಹತ್ತಿರ ರೂಮಿಗೆ ಎಳೆದೊಯ್ದರು. ಬಟ್ಟೆಯನ್ನು ಮೇಲಕ್ಕೆ ಸರಿಸಿ ದೌರ್ಜನ್ಯಕ್ಕೆ ಮುಂದಾದರು. ಕಿರುಚಲು ಬಾಯಿ ತೆಗೆದಾಗ ಬಾಯನ್ನು ಕೈಗಳಿಂದ ಮುಚ್ಚಿದರು. ನಾನು ಪ್ರತಿರೋಧ ಒಡ್ಡಿದೆ. ಇನ್ನೇನು ನನ್ನ ಕೊಲೆ ಮಾಡಬಹುದೇನೋ ಎಂದೆನ್ನಿಸಿತು. ಹೇಗೋ ಬಿಡಿಸಿಕೊಂಡು ರೂಮಿನಿಂದ ಹೊರಗೆ ಓಡಿಹೋದೆ,” ಎಂದು ಫೋರ್ಡ್ ಹೇಳಿದಾಗ ಸಮಿತಿ ಸದಸ್ಯರು ಆಘಾತಗೊಂಡರು. ಒಮ್ಮೆ ಅವರ ಕಣ್ಣುಗಳು ಒದ್ದೆಯಾದವು ಕೂಡ. ಅವರ ಮಾತಿನ ಬಗ್ಗೆ ಸದಸ್ಯರಲ್ಲಿ ವಿಶ್ವಾಸ ಮೂಡಿತು.

"ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರು ಬೇರೆ ಯಾರೂ ಅಲ್ಲ, ಕ್ಯಾವಲಾವ್. ಇದು ಶೇಕಡ ನೂರರಷ್ಟು ಸತ್ಯ. ಬೇರೆ ಯಾರೂ ಅಲ್ಲ, ಅದೇ ವ್ಯಕ್ತಿ. ಅತ್ಯಾಚಾರ ಮಾಡಲಿಲ್ಲ ಎನ್ನುವುದು ಬಿಟ್ಟರೆ ಪರಿಣಾಮ ಅಷ್ಟೇ ಭಯಾನಕವಾಗಿತ್ತು. ಯಾರ ಜೊತೆ ನಾನು ನೋವು, ಅವಮಾನವನ್ನು ಹೇಳಿಕೊಳ್ಳುವುದು? ನೋವನ್ನು ನುಂಗಿಕೊಂಡೇ ಬದುಕು ಕಟ್ಟಿಕೊಂಡಿದ್ದೇನೆ. ಕ್ಯಾವನಾವ್ ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿ ಸ್ಥಾನಕ್ಕೆ ಏರುತ್ತಾರೆ ಎಂದು ತಿಳಿದಾಗ ತಮ್ಮ ಸಾಕ್ಷಿ ಪ್ರಜ್ಞೆ ಸುಮ್ಮನಿರಲಿಲ್ಲ. ಅವರೆಂಥವರು ಎಂಬುದನ್ನು ಸಾರ್ವಜನಿಕರ ಮುಂದೆ ಹೇಳಲೇಬೇಕು, ಅದು ನನ್ನ ಕರ್ತವ್ಯ ಎಂದು ಭಾವಿಸಿ ಆ ವಿಚಾರ ಬಹಿರಂಗ ಮಾಡಿದ್ದೇನೆ. ನನಗೆ ಅದರಿಂದ ಲಾಭವೇನೂ ಇಲ್ಲ. ಆದರೆ, ಸತ್ಯ ಜನರಿಗೆ ತಿಳಿಯಬೇಕು ಎಂಬ ಒಂದೇ ಉದ್ದೇಶ ನನ್ನದು,” ಎಂದು ಕ್ಯಾಲಿಫೋರ್ನಿಯಾದ ಕಾಲೇಜೊಂದರಲ್ಲಿ ಮನೋವಿಜ್ಞಾನದ ಪ್ರೊಫೆಸರ್ ಆಗಿರುವ ಫೋರ್ಡ್ ಹೇಳಿದಾಗ ಅವರ ನಡೆಯನ್ನು ಪಕ್ಷಾತೀತವಾಗಿ ಸೆನೆಟ್‍ನ ಜುಡಿಷಿಯಲ್ ಕಮಿಟಿ ಸದಸ್ಯರು ಮೆಚ್ಚಿದರು. ಆರೋಪವೇನೋ ಸರಿ, ಆದರೆ ಅದನ್ನು ಸಾಬೀತು ಮಾಡುವ ಸಾಕ್ಷ್ಯಾಧಾರಗಳು ಎಲ್ಲಿವೆ ಎಂಬ ಪ್ರಶ್ನೆಯನ್ನು ಸದಸ್ಯರು ಕೇಳಿದರು. “ರಹಸ್ಯವಾಗಿ ನಡೆದ ಈ ಘಟನೆಗೆ ಸಾಕ್ಷ್ಯಾಧಾರ ಎಲ್ಲಿಂದ ತರಲು ಸಾಧ್ಯ?” ಎನ್ನುವ ಅವರ ಪ್ರಶ್ನೆಗೆ ಸದಸ್ಯರ ಬಳಿ ಉತ್ತರ ಇರಲಿಲ್ಲ. ಆದರೆ, ಸಾಕ್ಷ್ಯಧಾರ ಇಲ್ಲದೆ ಆರೋಪ ಸಾಬೀತಾಗುವುದಾದರೂ ಹೇಗೆ?

ನಂತರ ಕ್ಯಾವನಾವ್ ಅವರನ್ನು ಸಮಿತಿ ವಿಚಾರಣೆಗೆ ಒಳಪಡಿಸಿತು. “ನನ್ನ ಮೇಲೆ ಮಾಡಿರುವ ಆರೋಪ ಶುದ್ಧ ಸುಳ್ಳು. ನಾನು ಯಾರ ಮೇಲೂ ಲೈಂಗಿಕ ದೌರ್ಜನ್ಯ ಮಾಡಿಲ್ಲ. ಅವರ ಮೇಲೆ ಬೇರೆ ಯಾರೋ ಲೈಂಗಿಕ ದೌರ್ಜನ್ಯ ಮಾಡಿರಬೇಕು. ನನ್ನ ಪೂರ್ವಾಪರಗಳನ್ನು ನೋಡಿ, ನಾನು ಅಂಥವನಲ್ಲ. ಇಂಥ ಆರೋಪಗಳಿಂದಾಗಿ ನನ್ನ ಮತ್ತು ನನ್ನ ಕುಟುಂಬದ ಗೌರವ ಹಾಳಾಗಿದೆ. ಅದನ್ನು ಮತ್ತೆ ಗಳಿಸಿಕೊಳ್ಳುವುದು ಹೇಗೆ?” ಎಂದು ಅವರು ಸದಸ್ಯರನ್ನು ಪ್ರಶ್ನಿಸಿದರು. “ನ್ಯಾಯಮೂರ್ತಿ ಆಯ್ಕೆ ಪ್ರಕ್ರಿಯೆ ರಾಷ್ಟ್ರೀಯ ದುರಂತ,” ಎಂದರು ಕ್ಯಾವನೋವ್. ಹೈಸ್ಕೂಲು ದಿನಗಳಲ್ಲಿ ಅವರಿದ್ದ ಬಿಯರ್ ಕುಡಿಯುವ ಹುಚ್ಚನ್ನು ಸದಸ್ಯರು ಪ್ರಸ್ತಾಪಿಸಿದಾಗ ಕ್ಯಾವನಾವ್ ಸಿಟ್ಟಾದರು. “ಹೈಸ್ಕೂಲಿನ ದಿನಗಳನ್ನು ಆಧರಿಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಯ್ಕೆ ನಡೆಯುತ್ತದೆಯೇ?” ಎಂದು ಅವರು ಪ್ರಶ್ನಿಸಿದರು. “ನನ್ನ ಮೇಲಿನ ಆರೋಪಗಳನ್ನು ಸಾಬೀತು ಮಾಡಲು ಸಾಕ್ಷ್ಯಧಾರಗಳೇ ಇಲ್ಲ,” ಎಂದು ಅವರು ಹೇಳಿದಾಗ ಸಮಿತಿ ಸದಸ್ಯರು ಅದನ್ನು ಒಪ್ಪಿಕೊಂಡರು. “ಎಡಪಂಥೀಯರು ಮತ್ತು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಈ ಆರೋಪಗಳ ಹಿಂದೆ ಇದ್ದಾರೆ,” ಎಂದೂ ಆರೊಪಿಸಿದರು.

ಈ ಎರಡೂ ಕಡೆಯ ವಾದಗಳನ್ನು ಕೇಳಿದ ಸಮಿತಿ ಸದಸ್ಯರು ನಿಜವಾಗಿಯೂ ಗೊಂದಲಕ್ಕೆ ಒಳಗಾದರು. ಇಬ್ಬರೂ ಹೇಳುತ್ತಿರುವುದು ನಿಜ ಎನ್ನುವ ಭಾವನೆ ಅವರಲ್ಲಿ ಬಂದಿತ್ತು. ರಿಪಬ್ಲಿಕನ್ ಪಕ್ಷದ ಸದಸ್ಯರು ಮತದಾನಕ್ಕೆ ಸಿದ್ಧವಾದರು. ಜುಡಿಷಿಯಲ್ ಕಮಿಟಿಯಲ್ಲಿ ರಿಪಬ್ಲಿಕನ್ನರು ಬಹುಸಂಖ್ಯಾತರು (11). ಡೆಮಾಕ್ರಟಿಕ್ ಸದಸ್ಯರ ಸಂಖ್ಯೆ 9. ಅಂತಿಮವಾಗಿ ಆಯ್ಕೆ ಪ್ರಶ್ನೆ ಬಂದಾಗ ಸದಸ್ಯರು ಪಕ್ಷದ ಆಧಾರದ ಮೇಲೆ ಬೇರೆಬೇರೆಯಾದರು. ಆದರೆ, ರಿಪಬ್ಲಿಕನ್ ಪಕ್ಷದ ಜೋಲ್ಫ್ ಫ್ಲೇಕ್ ತಮ್ಮ ಮತ ಯಾರಿಗೆ ಎನ್ನುವುದನ್ನು ನಿನ್ನೆಯವರೆಗೆ ಹೇಳಿರಲಿಲ್ಲ. ಇಂದು ಸಮಿತಿ ಸಭೆಗೆ ಹೋಗುವ ಮೊದಲು ತಮ್ಮ ಮತ ಕ್ಯಾವನಾವ್‍ಗೆ ಎಂದು ಪ್ರಕಟಿಸಿದರು. ಇದರಿಂದಾಗಿ ರಿಪಬ್ಲಿಕನ್ನರು ಗೆಲುವಿನ ನಗೆ ಬೀರಿದರು.

ಮತದಾನಕ್ಕೆ ಮೊದಲು ಸಭಾಭವನದ ಹೊರಗೆ ಇಬ್ಬರು ಮಹಿಳೆಯರು ಫ್ಲೇಕ್ ಅವರನ್ನು ಅಡ್ಡಗಟ್ಟಿ, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ; ಆದರೆ ಅದನ್ನು ಹೇಳಿದರೆ ಯಾರೂ ನಂಬುತ್ತಿಲ್ಲ, ನಿಮಗೂ ಹೆಣ್ಣುಮಕ್ಕಳಿದ್ದಾರೆ, ಅವರ ಪರಿಸ್ಥಿತಿ ಯೋಚಿಸಿ ಎಂದು ಕಣ್ಣೀರಿಟ್ಟರು. ಮತದಾನಕ್ಕೆ ಬಂದ ಫ್ಲೇಕ್, ಒಂದಿಬ್ಬರು ಸದಸ್ಯರ ಜೊತೆ ಚರ್ಚಿಸಿದರು. ಯಾರಿಗೂ ಏನು ನಡೆಯುತ್ತಿದೆ ಎನ್ನುವುದು ತಿಳಿಯದ ಸ್ಥಿತಿ. ಮತದಾನ ಪ್ರಕ್ರಿಯೆಗೆ ಮೊದಲು ಕೆಲ ನಿಮಿಷ ಮಾತನಾಡಿದ ಫ್ಲೇಕ್, “ಸದಸ್ಯರು ನಿಜವಾಗಿಯೂ ಗೊಂದಲದಲ್ಲಿದ್ದಾರೆ. ಯಾರನ್ನು ನಂಬುವುದು, ಯಾರನ್ನು ಬಿಡುವುದು? ನಾನು ಕ್ಯಾವನಾವ್‍ಗೆ ಮತ ನೀಡುತ್ತೇನೆ. ಆದರೆ, ಒಂದು ಷರತ್ತು; ಅವರ ಹಿನ್ನೆಲೆ ಬಗ್ಗೆ ಎಫ್‍ಬಿಐ ತನಿಖೆ ನಡೆಯಬೇಕು,” ಎಂದು ಹೇಳಿ ಸಭೆಯಲ್ಲಿ ಕೋಲಾಹಲ ಎಬ್ಬಿಸಿದರು. ಅವರಿಗೆ ಬೆಂಬಲವಾಗಿ ಕೆಲವು ಡೆಮಾಕ್ರಟಿಕ್ ಸದಸ್ಯರು ಮಾತನಾಡಿದರು. “ಒಂದೇ ಒಂದು ವಾರ ಕಾಲ ನಿರ್ಧಾರವನ್ನು ಮುಂದಕ್ಕೆ ಹಾಕೋಣ. ಅಷ್ಟರಲ್ಲಿ ಎಫ್‍ಬಿಐ ತನಿಖೆಯ ವರದಿ ಕೊಡಲಿ. ಅದರ ಆಧಾರದ ಮೇಲೆ ಸೆನೆಟ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿ,” ಎಂದು ಆಗ್ರಹ ಮಾಡಿದರು. ಅಂತಿಮವಾಗಿ ಎಲ್ಲರೂ ಆ ಸಲಹೆಗೆ ಒಪ್ಪಿ, ಕ್ಯಾವನಾವ್‍ಗೆ ಸಮ್ಮತಿ ಕೊಡುವ ವಿಚಾರವನ್ನು ಪೂರ್ಣಪ್ರಮಾಣದ ಸೆನೆಟ್‍ಗೆ ಒಪ್ಪಿಸಿದರು.

ಇದನ್ನೂ ಓದಿ : ಟ್ರಂಪ್ ಸೂಚಿಸಿದ ಸುಪ್ರೀಂ ನ್ಯಾಯಮೂರ್ತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ಕಡೇ ಗಳಿಗೆಯಲ್ಲಿ ಆದ ಈ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಉಂಟುಮಾಡಿವೆ. ವಿಚಿತ್ರ ಎಂದರೆ, ಕ್ಯಾವನಾವ್ ಅವರನ್ನು ನಿನ್ನೆಯವರೆಗೆ ಸಮರ್ಥಿಸಿಕೊಳ್ಳುತ್ತ ಬಂದ ಟ್ರಂಪ್, ಹೊಸ ಸಲಹೆಗೆ ಒಪ್ಪಿರುವುದು ಈಗ ಮುಂದಿನ ವಾರ ಪೂರ್ಣ ಪ್ರಮಾಣದ ಸೆನೆಟ್ ಸಭೆ ನಡೆಯಲಿದೆ. ಕ್ಯಾವನಾವ್ ಅವರ ಭವಿಷ್ಯ ನಿರ್ದಾರ ಆಗಲಿದೆ. ಈ ಮಧ್ಯೆ, ಕ್ರಿಸ್ಟೀನ್ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಸಂದರ್ಭದಲ್ಲಿ ಕ್ಯಾವನಾವ್ ಜೊತೆಗಿದ್ದರೆನ್ನಲಾದ ಅವರ ಸ್ನೇಹಿತರೊಬ್ಬರು ವಿಚಾರಣೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ಮೊದಲು ಅವರು ಆ ಘಟನೆ ನೆನಪಿಲ್ಲ ಎಂದು ಹೇಳಿದ್ದರು. ವಿಚಾರಣೆ ಆರಂಭವಾದ ನಂತರ ಪುರಾವೆಗಳು ಸಿಗಬಹುದು ಎನ್ನುವ ಆಶಾಭಾವನೆ ಕ್ರಿಸ್ಟೀನ್ ಬೆಂಬಲಿಗರದ್ದು. ಪುರಾವೆ ಸಿಗಲಿ, ಬಿಡಲಿ ಅವರ ಮಾತಿನಲ್ಲಿ ಜನರಿಗೆ ನಂಬಿಕೆ ಇದೆ. ಹೀಗಾಗಿಯೇ ವಿಚಾರಣೆ ಸಂದರ್ಭದಲ್ಲಿ ಹೊರಗೆ ಕ್ರಿಸ್ಟೀನ್ ಪರವಾಗಿ ಪ್ರದರ್ಶನಗಳು ನಡೆದಿವೆ. ದೇಶದಲ್ಲಿ ಲಕ್ಷಾಂತರ ಯುವತಿಯರು, ಮಹಿಳೆಯರು ಇಂಥ ದೌರ್ಜನ್ಯ ಒಳಗಾಗಿದ್ದಾರೆ. ಅವರೆಲ್ಲ ಮೌನವಾಗಿ ನೋವನ್ನು ನುಂಗಿಕೊಂಡು ಬದುಕುತ್ತಿದ್ದಾರೆ. ಅವರಿಗೆಲ್ಲ ಕ್ರಿಸ್ಟೀನ್ ಧ್ವನಿ ನೀಡಿದಂತಾಗಿದೆ. ಲೈಂಗಿಕ ದೌರ್ಜನ್ಯ ನಡೆಸಿದವರು ಉನ್ನತ ಸ್ಥಾನಗಳನ್ನು ಏರದಂತೆ ತಡೆಯಬೇಕೆಂಬುದೇ ಈ ಬೆಳವಣಿಗಗಳ ಸುಪ್ತ ಉದ್ದೇಶ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More