ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?

ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲಿ ಅವರ ರಾಜೀನಾಮೆ ಟ್ರಂಪ್ ಹೊರತುಪಡಿಸಿ ಶ್ವೇತಭವನದ ಮಿಕ್ಕೆಲ್ಲರಿಗೆ ಆಶ್ಚರ್ಯವನ್ನು ಉಂಟುಮಾಡಿದೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಉನ್ನತ ಸ್ಥಾನಗಳಿಗೆ ನೇಮಕಗೊಂಡು ಕ್ರಮೇಣ ನಂತರದ ದಿನಗಳಲ್ಲಿ ರಾಜೀನಾಮೆ ನೀಡಿದವರ ಪಟ್ಟಿ ದೊಡ್ಡದಿದೆ. ಈ ಪಟ್ಟಿಗೆ ಈಗ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಭಾರತ ಮೂಲದ ನಿಮ್ರತಾ ನಿಕ್ಕಿ ರಾಂಧಾವಾ ಹೊಸ ಸೇರ್ಪಡೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನಿಕ್ಕಿ ಈ ವಿಷಯವನ್ನು ಮಂಗಳವಾರ ಪ್ರಕಟಿಸಿದಾಗ ಶ್ವೇತಭವನ ಕ್ಷಣಕಾಲ ಅಚ್ಚರಿಯಲ್ಲಿ ಮುಳುಗಿತು. ಆರು ತಿಂಗಳ ಹಿಂದೆಯೇ ಈ ವಿಷಯವನ್ನು ತಮ್ಮ ಜೊತೆ ನಿಕ್ಕಿ ಪ್ರಸ್ತಾಪಿಸಿದ್ದರು ಮತ್ತು ವಾರದ ಹಿಂದೆ ರಾಜೀನಾಮೆ ಪತ್ರ ಕೊಟ್ಟಿದ್ದರು ಎಂದು ಟ್ರಂಪ್ ಪ್ರಕಟಿಸಿದಾಗ ಈ ವಿಷಯ ಸ್ವಲ್ಪವೂ ಸೋರಿಕೆಯಾಗದೆ ಇದ್ದದ್ದು ಹೇಗೆ ಎನ್ನುವ ಪ್ರಶ್ನೆ ಮಾಧ್ಯಮವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

ಜವಾಬ್ದಾರಿಯಿಂದ ಸ್ವಲ್ಪ ಕಾಲ ಬಿಡುವು ಬೇಕೆಂದು ಮೊದಲೇ ನಿಕ್ಕಿ ತಿಳಿಸಿದ್ದರು ಎಂದು ಟ್ರಂಪ್ ಹೇಳಿದರೆ ಅದಕ್ಕೆ ಅವರು ಹೌದೆಂದರು. ಈ ವರ್ಷಾಂತ್ಯಕ್ಕೆ ಸ್ಥಾನ ತ್ಯಜಿಸುವುದಾಗಿ ಹೇಳಿರುವ ನಿಕ್ಕಿ ಅದಕ್ಕೆ ಬೇರೇನೂ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಉದ್ದೇಶದಿಂದ ಸಿದ್ಧತೆಗಾಗಿ ಈ ರಾಜೀನಾಮೆಯೇ ಎಂಬ ಪ್ರಶ್ನೆಗೆ ಅವರು ಇಲ್ಲವೆಂದೇ ಹೇಳಿದ್ದಾರೆ. ಮುಂಬರುವ ಅಧ್ಯಕ್ಷ ಚುನಾವಣೆಗಳಲ್ಲಿ ಟ್ರಂಪ್ ಪರ ಪ್ರಚಾರಮಾಡುವುದಾಗಿ ಪ್ರಕಟಿಸಿ ಅವರ ಜೊತೆ ಮನಸ್ಥಾಪವೇನಿಲ್ಲ ಎಂದಿದ್ದಾರೆ.

ಆಡಳಿತ ರಿಪಬ್ಲಿಕನ್ ಪಕ್ಷದಲ್ಲಿ ಸಾಕಷ್ಟು ಹೆಸರುಮಾಡಿದ್ದ ನಿಕ್ಕಿ ಈ ಹಿಂದೆ ಆರು ವರ್ಷಕಾಲ ಸೌತ್ ಕರೋಲಿನಾ ರಾಜ್ಯದ ಗರ್ವನರ್ ಆಗಿದ್ದರು. ಪಕ್ಷದ ಸ್ಟಾರ್ ನಾಯಕರಲ್ಲಿ ಅವರೂ ಒಬ್ಬರಾಗಿದ್ದರು. ಹಿಂದಿನ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಅವರ ಹೆಸರೂ ಕೇಳಿಬಂದಿತ್ತು. ಅವರ ಈ ಹಿನ್ನೆಲೆ ನೋಡಿದರೆ ಮುಂದೊಂದು ದಿನ ಅವರು ರಾಜಕೀಯ ಮುಂಚೂಣಿಗೆ ಬರುವುದು ಖಚಿತ. ಬಹುಶಃ 2020ರ ಚುಣಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ನೋಡಿಕೊಂಡು ಅವರು ತಮ್ಮ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಇದೆ. ಟ್ರಂಪ್ ಬಗ್ಗೆ ದೇಶದ ಮಹಿಳೆಯರಲ್ಲಿ ತೀವ್ರ ಅಸಮಾಧಾನ ಕಂಡುಬರುತ್ತಿದ್ದು ಅದು ಮುಂಬರುವ ಚುನಾವಣೆ ವೇಳೆಗೆ ಹೆಚ್ಚಾದರೆ ಆಗ ರಿಪಬ್ಲಿಕನ್ ಪಕ್ಷ ಜನಪ್ರಿಯ ಮಹಿಳೆಯೊಬ್ಬರನ್ನು ಭವಿಷ್ಯದ ನಾಯಕಿಯಾಗಿ ಬಿಂಬಿಸುವ ಸಾಧ್ಯತೆ ಇದೆ. ಬಹುಶಃ ಈ ಲೆಕ್ಕಾಚಾರದಿಂದಲೇ ನಿಕ್ಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಕೆಲಸಮಾಡಲು ಯೋಚಿಸಿರಬಹುದು ಎಂದೂ ಹೇಳಲಾಗುತ್ತಿದೆ. ಕೆಲವು ಪತ್ರಿಕಾವರದಿಗಳ ಪ್ರಕಾರ ಅವರು ಈಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅದನ್ನು ನಿಭಾಯಿಸಲು ಅವರು ಸಾಕಷ್ಟು ಆದಾಯ ಬರಬಹುದಾದ ಖಾಸಗಿ ಹುದ್ದೆ ಜವಾಬ್ದಾರಿ ಹೊರಲಿದ್ದಾರೆ. ಆ ಬಗ್ಗೆ ತಮ್ಮ ರಾಜೀನಾಮೆ ಪತ್ರದಲ್ಲಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಡೊನಾಲ್ಡ್ ಟ್ರಂಪ್‌ ‘ಫೇಕ್‌ ನ್ಯೂಸ್‌’ ಅವಾರ್ಡ್‌ ನೀಡಿದ್ದಾದರೂ ಏಕೆ ಗೊತ್ತೇ?

ನಿಕ್ಕಿ ಅವರ ತಂದೆ ತಾಯಿ ಮೂಲತಃ ಪಂಜಾಬ್‍ನ ಸಿಖ್ಖರು. ಅಮೆರಿಕಕ್ಕೆ ವಲಸೆ ಬಂದು ಅಲ್ಲಿಯೇ ಬದುಕನ್ನು ಕಟ್ಟಿಕೊಂಡ ಕುಟುಂಬ ನಿಕ್ಕಿ ಅವರದು. ಭಾರತದ ವಲಸಿಗ ಕುಟುಂಬಕ್ಕೆ ಸೇರಿದವರೊಬ್ಬರು ಅದರಲ್ಲಿಯೂ ಮಹಿಳೆಯೊಬ್ಬರು ಅಮೆರಿಕದ ರಿಪಬ್ಲಿಕನ್ ಪಕ್ಷದಲ್ಲಿ ಮುಂಚೂಣಿಗೆ ಬಂದದ್ದು ಚರಿತ್ರಾರ್ಹವಾದದ್ದು. ಹೀಗಾಗಿಯೇ ನಿಕ್ಕಿ ರಾಜೀನಾಮೆ ಅಮೆರಿಕದಲ್ಲಿ ನೆಲೆಸಿರುವ ವಲಸಿಗರಿಗೆ ಆಘಾತಕಾರಿಯಾದ ಸಂಗತಿ.

ಟ್ರಂಪ್ ಅವರ ರಾಜಕೀಯ ಧೋರಣೆಗಳು ಪರಾಂಪರಗತವಾದುವಲ್ಲ. ಅವರದೇ ಲೆಕ್ಕಾಚಾರ. ಹೀಗಾಗಿಯೇ ಹಿಂದಿನ ಸರ್ಕಾರದ ಕಾಲದ ಬಹುಮುಖ್ಯ ಒಪ್ಪಂದಗಳಿಗೆ ಅವರು ಮುಕ್ತಾಯ ಹಾಡಿದ್ದಾರೆ. ಅದು ಕ್ಯೂಬಾ ಜೊತೆಗಿನ ಒಪ್ಪಂದವಿರಬಹುದು, ಹವಾಮಾನ ವೈಪರೀತ್ಯ ಕುರಿತ ಜಾಗತಿಕ ಒಪ್ಪಂದ ಇರಬಹುದು, ಇರಾನ್ ಜೊತೆಗಿನ ಪರಮಾಣು ಒಪ್ಪಂದ ಇರಬಹುದು, ಇಸ್ರೇಲ್‍ಜೊತೆಗಿನ ಮೈತ್ರಿ ಸೇರಿದಂತೆ ಎಲ್ಲ ವಿಚಾರಗಳಲ್ಲಿ ಅವರ ನಿಲುವು ಭಿನ್ನವಾದುದಾಗಿದೆ. ಟ್ರಂಪ್ ಅವರ ಭಿನ್ನ ನಿಲುವುಗಳನ್ನು ನಿಕ್ಕಿ ವಿಶ್ವಸಂಸ್ಥೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಟ್ರಂಪ್ ಬಗ್ಗೆ ವಿಶ್ವಸಮುದಾಯದಲ್ಲಿ ಸಕಾರಾತ್ಮಕ ಅಭಿಪ್ರಾಯವಿಲ್ಲ. ಹೀಗಾಗಿಯೇ ವಿಶ್ವಸಂಸ್ಥೆಯಲ್ಲಿ ಟ್ರಂಪ್ ತಮ್ಮ ಸಾಧನೆ ಬಗ್ಗೆ ಹೇಳಿಕೊಂಡಾಗ ಸದಸ್ಯರು ಅವರ ಬಗ್ಗೆ ಅಪಹಾಸ್ಯ ಮಾಡಿ ನಕ್ಕಿದ್ದರು. ಬಹುಶಃ ನಿಕ್ಕಿ ಅವರ ವರ್ಚಸ್ಸನ್ನು ಈ ಬೆಳವಣಿಗೆ ಕಡಿಮೆ ಮಾಡಿರಲಾರದು.

ಆದರೆ ಟ್ರಂಪ್ ಅವರ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತ ಹೋದರೆ ವಿಶ್ವನಾಯಕಿಯಾಗಿ ಬೆಳೆಯಲು ಸಾಧ್ಯವಿಲ್ಲ ಎಂಬುದು ನಿಕ್ಕಿ ಅವರಿಗೆ ತಿಳಿಯದಿರುವ ವಿಚಾರವೇನಲ್ಲ. ಇದರಿಂದಾಗಿಯೇ ಟ್ರಂಪ್ ಅವರ ನೀತಿಗಳನ್ನು ಸಮರ್ಥಿಸುವಂಥ ಹೊಣೆಗಾರಿಕೆಯಿಂದ ದೂರಸರಿಯಲು ಅವರು ನಿರ್ಧರಿಸಬಹುದಾದ ಸಾಧ್ಯತೆ ಇದೆ. ಟ್ರಂಪ್ ಮತ್ತು ಅವರ ನಡುವೆ ಇರಬಹುದಾದ ಭಿನ್ನಾಭಿಪ್ರಾಯಗಳೇನು ಎಂಬುದು ನಿಖರವಾಗಿ ಇನ್ನೂ ಬಹಿರಂಗವಾಗಿಲ್ಲ. ಆದರೆ ವಿವಿಧ ಸನ್ನಿವೇಶಗಳಲ್ಲಿ ನಿಕ್ಕಿ ಅವರು ವ್ಯಕ್ತಮಾಡಿರುವ ಅಭಿಪ್ರಾಯಗಳನ್ನು ನೋಡಿದರೆ ಅವರೇನೂ ಟ್ರಂಪ್ ಅವರ ಭಾರಿ ಅಭಿಮಾನಿಯೇನೂ ಅಲ್ಲ ಎನ್ನುವುದು ಗೊತ್ತಾಗುತ್ತದೆ. ಮುಖ್ಯವಾಗಿ ಮಹಿಳೆಯರ ಬಗ್ಗೆ ಟ್ರಂಪ್ ಅವರು ನಡೆದುಕೊಂಡ ರೀತಿ ಅವರಿಗೆ ಸಮಾಧಾನ ತಂದಿಲ್ಲ. ಇತ್ತೀಚೆಗೆ ಕ್ಯಾವನಾವ್ ಅವರನ್ನು ಸುಪ್ರೀಂ ಕೋರ್ಟ್‍ಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆ ವಿಚಾರದಲ್ಲಿ ಟ್ರಂಪ್ ಅವರು ನಡೆದುಕೊಂಡ ರೀತಿ ಬಗ್ಗೆ ನಿಕ್ಕಿ ಸಮಾಧಾನ ಹೊಂದಿರಲಿಲ್ಲ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಇವೇನೇ ಇದ್ದರೂ ಇವೆಲ್ಲಾ ಊಹೆಗಳಷ್ಟೇ. ವಾಸ್ತವ ಸಂಗತಿ ಇಂದಲ್ಲ ನಾಳೆ ಬಹಿರಂಗವಾಗಲಿದೆ. ಇದೇನೇ ಇದ್ದರೂ ಟ್ರಂಪ್ ಆಡಳಿತದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಮತ್ತೆ ಮತ್ತೆ ಬಯಲಾಗುತ್ತಿದೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More