ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?

ಹಿರಿಯ ಪತ್ರಕರ್ತ ಜಮಾಲ್ ಅಹಮದ್ ಕಸೋಜಿ ನಾಪತ್ತೆ ಪ್ರಕರಣದ ಹಿಂದೆ ಸೌದಿ ಅರೇಬಿಯಾ ಇದೆ ಎಂಬುದು ಇದೀಗ ಬಹುಪಾಲು ಖಚಿತವಾಗಿದೆ. ಕಸೋಜಿ ಅವರನ್ನು ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವುದಕ್ಕೆ ತನ್ನ ಬಳಿ ಪುರಾವೆ ಇದೆ ಎಂದು ಟರ್ಕಿಯ ಗೂಢಚರ್ಯ ಮೂಲಗಳು ಹೇಳಿವೆ

ಹಿರಿಯ ಪತ್ರಕರ್ತ ಜಮಾಲ್ ಅಹಮದ್ ಕಸೋಜಿ ಅವರ ನಾಪತ್ತೆ ಪ್ರಕರಣ ಸೌದಿ ಅರೇಬಿಯಾದ ದೊರೆ ಕುಟುಂಬವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಟರ್ಕಿಯ ಇಸ್ತಾಂಬುಲ್ ನಗರದ ಸೌದಿ ಅರೇಬಿಯಾ ರಾಯಭಾರ ಉಪಕಚೇರಿಗೆ (ಕಾನ್ಸುಲೇಟ್) ಅಕ್ಟೋಬರ್ ಎರಡರಂದು ಹೋದ ಕಸೋಜಿ, ಅಲ್ಲಿಂದ ವಾಪಸ್ ಬರಲೇ ಇಲ್ಲ. ಸಿಸಿಟಿವಿಯಲ್ಲಿ ಕಚೇರಿ ಒಳಗೆ ಹೋದ ಚಿತ್ರಗಳು ಮಾತ್ರ ಲಭ್ಯವಿವೆ. ಹೊರಬಂದ ಸಿಸಿಟಿವಿ ಚಿತ್ರಗಳು ಲಭ್ಯವಿಲ್ಲ. ಅಂದರೆ, ಅವರ ಹತ್ಯೆ ಒಳಗೇ ಆಗಿದೆ ಎಂದು ಟರ್ಕಿ ಸಂಶಯ ವ್ಯಕ್ತಮಾಡಿದೆ. ಜೊತೆಗೆ, ಆ ಕಚೇರಿಗೆ 15 ಮಂದಿ ತಂಡವೊಂದು ಹೋದ ಬಗ್ಗೆಯೂ ಮಾಹಿತಿ ಇದೆ. ಬಹುಶಃ ಅವರನ್ನು ಕೊಲ್ಲಲಿಕ್ಕಾಗಿಯೇ ಕಳುಹಿಸಲಾಗಿರಬಹುದು ಎಂದೂ ಟರ್ಕಿ ಮೂಲಗಳು ತಿಳಿಸಿವೆ. ಕಸೋಜಿ ಅವರನ್ನು ಒಳಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವುದಕ್ಕೆ ತನ್ನ ಬಳಿ ಧ್ವನಿಸುರಳಿಯ ಪುರಾವೆ ಇದೆ ಎಂದು ಟರ್ಕಿಯ ಗೂಢಚರ್ಯ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ, ಈ ಹತ್ಯೆಯ ಹಿಂದೆ ಸೌದಿ ದೊರೆ ಕುಟುಂಬವೇ ಇದೆ ಎನ್ನುವ ಆಪಾದನೆಗೆ ಮಹತ್ವ ಬಂದಿದೆ.

ಕಸೋಜಿ ನಾಪತ್ತೆ ಪ್ರಕರಣದ ಹಿಂದೆ ತನ್ನ ಕೈವಾಡ ಇದೆ ಎಂಬ ಆಪಾದನೆಯನ್ನು ಸೌದಿ ಸರ್ಕಾರ ಅಲ್ಲಗಳೆದಿದೆಯಾದರೂ ಸಂಶಯ ಮಾತ್ರ ಉಳಿದೇ ಇದೆ. ಈ ಪ್ರಕರಣದಿಂದಾಗಿ ಸೌದಿ ದೊರೆ ಕುಟುಂಬದ ಬಗೆಗಿನ ಅಂತಾರಾಷ್ಟ್ರೀಯ ಅಭಿಪ್ರಾಯವೇ ಬದಲಾಗಿದೆ. ಈ ತಿಂಗಳಾಂತ್ಯಕ್ಕೆ ದೇಶದಲ್ಲಿ ನಡೆಯಬೇಕಿದ್ದ ಬಂಡವಾಳ ಹೂಡಿಕೆ ಸಮಾವೇಶವನ್ನು ಅನೇಕರು ಬಹಿಷ್ಕರಿಸುವುದಾಗಿ ಪ್ರಕಟಿಸಿದ್ದಾರೆ. ಸೌದಿ ಅರೇಬಿಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಬೇಕೆಂಬ ಒತ್ತಾಯವೂ ಬಂದಿದೆ. ನಿರ್ಬಂಧಗಳನ್ನು ಹೇರುವ ಅಮೆರಿಕದ ಬೆದರಿಕೆಗೆ ಪ್ರತೀಕಾರ ಕ್ರಮ ತೆಗೆದುಕೊಳ್ಳುವುದಾಗಿ ಸೌದಿ ಅರೇಬಿಯಾ ಮರುಬೆದರಿಕೆ ಹಾಕಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೌದಿಯ ದೊರೆ ಸಲ್ಮಾನ್ ಜೊತೆ ಟೆಲಿಫೋನಿನಲ್ಲಿ ಮಾತುಕತೆ ನಡೆಸಿದ್ದಾರೆ. ಕಸೋಜಿ ನಾಪತ್ತೆಗೂ ತಮ್ಮ ಸರ್ಕಾರಕ್ಕೂ ಏನೂ ಸಂಬಂಧವಿಲ್ಲ ಎಂದು ಸಲ್ಮಾನ್ ತಿಳಿಸಿದರೆಂದು ಟ್ರಂಪ್ ಹೇಳಿದ್ದಾರೆ. ಯಾರೋ ದುಷ್ಟರು ಹತ್ಯೆ ಮಾಡಿದಂತಿದೆ ಎಂಬುದು ಅವರ ಅಭಿಪ್ರಾಯ. ಇದೇನೇ ಇದ್ದರೂ, ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರನ್ನು ದೊರೆ ಸಲ್ಮಾನ್ ಜೊತೆ ಚರ್ಚಿಸಲು ಕಳುಹಿಸಿದ್ದಾರೆ. ಅವರು ಈಗಾಗಲೇ ಅವರ ಜೊತೆ ಚರ್ಚಿಸಿದ್ದು, ಹೊಸ ಅಂಶಗಳೇನೂ ಬಹಿರಂಗವಾಗಿಲ್ಲ.

ಈ ಆಪಾದನೆಯಿಂದ ಸೌದಿ ಅರೇಬಿಯಾ ದೊರೆಗಳು ತಲ್ಲಣಗೊಂಡಿದ್ದಾರೆ. ಕಾನ್ಸುಲೇಟ್ ಕಚೇರಿ ತಪಾಸಣೆಗೆ ನಿರಾಕರಿಸುತ್ತ ಬಂದಿದ್ದ ಸೌದಿ ಸರ್ಕಾರ, ಇದೀಗ ತನಿಖೆ ನಡೆಸಲು ಟರ್ಕಿ ಸರ್ಕಾರಕ್ಕೆ ಒಪ್ಪಿಗೆ ನೀಡಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಟರ್ಕಿಯ ತನಿಖಾ ತಂಡ ಕಾನ್ಸುಲೇಟ್ ಕಚೇರಿ ಪ್ರವೇಶಿಸಿ ಸಾಕಷ್ಟು ತಪಾಸಣೆ ನಡೆಸಿದೆ. ಈ ತನಿಖೆಯ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಈ ಮಧ್ಯೆ, ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಸೌದಿ ಅರೇಬಿಯಾ ಸ್ವಲ್ಪ ಬಾಗಿದಂತಿದೆ. ಕಸೋಜಿ ಅವರನ್ನು ವಿಚಾರಣೆಗೆ ಒಳಪಡಿಸುವ ಮತ್ತು ಸೌದಿಯಲ್ಲಿಯೇ ಉಳಿಯುವಂತೆ ಮನವೊಲಿಸಲು ಅಧಿಕಾರಿಗಳು ಅಂದು ಕಾನ್ಸುಲೇಟ್ ಕಚೇರಿಗೆ ಹೋಗಿದ್ದಾಗ ಏನೋ ಅವಗಢವಾದಂತಿದೆ. ಆಕಸ್ಮಿಕವಾಗಿ ಕಸೋಜಿ ಸತ್ತಿರುವ ಸಾಧ್ಯತೆ ಇದೆ. ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ವಿವರಣೆ ಕೊಡಲು ಸೌದಿ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮಾಹಿತಿ ಖಚಿತವಾಗಿಲ್ಲ. ಆದರೆ, ಕಸೋಜಿ ಹತ್ಯೆಯ ಆರೋಪದಿಂದ ಸೌದಿ ಹೊರಬರಲು ಸಾಧ್ಯವಾಗದಂತಾಗಿದೆ. ಈ ಮಧ್ಯೆ, ವಿಶ್ವಸಂಸ್ಥೆಯ ಮಾನವ ಹಕ್ಕು ರಕ್ಷಣಾ ಸಂಸ್ಥೆ ಸೌದಿ ಅರೇಬಿಯಾ ವಿರುದ್ಧ ಕಟುವಾಗಿ ಟೀಕೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಒತ್ತಾಯಿಸಿದೆ.

ಇದನ್ನೂ ಓದಿ : ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?

ಕಸೋಜಿ ನಾಪತ್ತೆ ಪ್ರಕರಣ ಅಂತಾರಾಷ್ಟ್ರೀಯ ಚರ್ಚೆಯ ವಿಷಯವಾಗಲು ಕಾರಣವೂ ಇದೆ. 60 ವರ್ಷ ವಯಸ್ಸಿನ ಕಸೋಜಿ ಸೌದಿ ಅರೇಬಿಯಾದ ಪ್ರಸಿದ್ಧ ವ್ಯಕ್ತಿ. ಅವರ ತಂದೆ ಆಧುನಿಕ ಸೌದಿ ಅರೇಬಿಯಾದ ಸಂಸ್ಥಾಪಕರೆಂದೇ ಖ್ಯಾತರಾದ ಅಬ್ದುಲ್ಲಾ ಅಜೀಜ್ ಅವರ ಕುಟುಂಬದ ವೈದ್ಯರಾಗಿದ್ದವರು. ಜಗತ್ತಿನ ಅತಿ ದೊಡ್ಡ ಶ್ರೀಮಂತ ಎಂದೇ ಹೆಸರಾಗಿದ್ದ ಶಸ್ತ್ರಾಸ್ತ್ರಗಳ ಕುಖ್ಯಾತ ಮಾರಾಟಗಾರ ಅದ್ನಾನ್ ಕುಸೋಜಿ ಅವರ ಹತ್ತಿರದ ಸಂಬಂಧಿ ಈ ಕುಸೋಜಿ. ಜಮಾಲ್ ಕುಸೋಜಿ ಪತ್ರಕರ್ತರಾಗಿದ್ದರಷ್ಟೇ ಅಲ್ಲ, ದೊರೆಗಳಿಗೆ ವಿಶೇಷ ಸಲಹೆಗಾರರಾಗಿದ್ದವರು. ಸ್ವಲ್ಪ ಅವರ ಹಿನ್ನೆಲೆ ಗಮನಿಸಿದರೆ, ಅವರ ಪ್ರಾಮುಖ್ಯ ಅರ್ಥವಾಗಬಹುದು. ಅವರು ದೇಶದಲ್ಲಿ ಇದ್ದಾಗಲೇ ಸ್ವಲ್ಪ ಇಸ್ಲಾಂವಾದಿಯಾಗಿದ್ದರು. ಮುಸ್ಲಿಂ ಬ್ರದರ್ ಹುಡ್‌ನ ಸದಸ್ಯರಾಗಿ ಕೆಲಸ ಮಾಡಿದ್ದರು. ಆದರೆ, ಅವರು ಮುಸ್ಲಿಂ ಮೂಲಭೂತವಾದಿಯಾಗಿರಲಿಲ್ಲ. ಅವರು ಪ್ರಜಾತಂತ್ರ ಮತ್ತು ವಾಕ್ ಸ್ವಾತಂತ್ರ್ಯದ ಪ್ರತಿಪಾದಕರಾಗಿ ಬೆಳೆದರು. ಪತ್ರಕರ್ತರಾಗಿ ಆಫ್ಘಾನಿಸ್ತಾನ ಯುದ್ಧ ವರದಿ ಮಾಡಿದ ಸಂದರ್ಭದಲ್ಲಿ ಅವರು ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅವರನ್ನು ಹಲವು ಬಾರಿ ಸಂದರ್ಶನ ಮಾಡಿದ್ದರು. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಮಾಧ್ಯಮಗಳಿಗೆ ಮಾಹಿತಿ ಮೂಲವಾಗಿದ್ದರು. ಸೌದಿಯಲ್ಲಿ ಹಲವು ಪತ್ರಿಕೆಗಳ ಸಂಪಾದಕರಾಗಿದ್ದರು. ಭಯೋತ್ಪಾದನೆ ಮತ್ತು ಧಾರ್ಮಿಕ ಮೌಲ್ಯಗಳ ಆಧಾರದ ಮೇಲೆ ಆಡಳಿತ ನಡೆಸುವುದನ್ನು ಬಲವಾಗಿ ಟೀಕಿಸುತ್ತಿದ್ದ ಅವರನ್ನು ಎರಡು ಬಾರಿ ‘ಅಲ್ ವತನ್’ ಪತ್ರಿಕೆಯ ಮುಖ್ಯ ಸಂಪಾದಕ ಸ್ಥಾನದಿಂದ ವಜಾ ಮಾಡಲಾಗಿತ್ತು. ಸೌದಿ ದೊರೆ ಕುಟುಂಬಕ್ಕೆ ಹತ್ತಿರವಾಗಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ದೊರೆಯ ಆಡಳಿತದ ಕಟು ಟೀಕಾಕಾರರಾಗಿದ್ದರು. ದೇಶದಲ್ಲಿ ವಾಕ್ ಸ್ವಾತಂತ್ರ್ಯ ದಮನವನ್ನು ಟೀಕಿಸುತ್ತಿದ್ದ ಅವರು, ದೊರೆ ಆಡಳಿತದ ಭಿನ್ನಮತೀಯರಲ್ಲಿ ಪ್ರಮುಖರು ಎಂದೇ ಪರಿಗಣಿಸಲಾಗಿತ್ತು. ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಅವರು ದೇಶದಲ್ಲಿ ಸುಧಾರಣೆ ತರುವ ನೆಪದಲ್ಲಿ ಭಿನ್ನಮತೀಯರನ್ನೆಲ್ಲ ಜೈಲಿಗೆ ಕಳುಹಿಸುತ್ತಿದ್ದಾಗ ತಮಗೂ ಅದೇ ಗತಿ ಬರಬಹುದೆಂದು ಅಮೆರಿಕದಲ್ಲಿ ನೆಲೆಸಿದ್ದರು. ‘ವಾಷಿಂಗ್ಟನ್ ಪೋಸ್ಟ್‌'ಗೆ ಸೌದಿ ಅರೇಬಿಯಾ ಕುರಿತಂತೆ ಅವರು ಲೇಖನಗಳನ್ನು ಬರೆಯುತ್ತಿದ್ದರು. ದೊರೆ ಆಡಳಿತವನ್ನು ಟೀಕಿಸಿ ಅವರು ಬರೆಯುತ್ತಿದ್ದ ಲೇಖನಗಳಿಂದ ಕೆರಳಿದ ದೊರೆ ಕುಟುಂಬದ ಸದಸ್ಯರು ಮೊದಲು ಅವರ ಮನವೊಲಿಸಲು ಪ್ರಯತ್ನಿಸಿದ್ದರು. ಸೌದಿಗೆ ವಾಪಸ್ ಬರಬೇಕೆಂದು ಕೇಳಿಕೊಂಡಿದ್ದರು. ಆದರೆ, ಕಸೋಜಿ ಅದಕ್ಕೆ ಒಪ್ಪಿರಲಿಲ್ಲ. ಟರ್ಕಿಯ ಹಾತಿಸ್ ಲಿಂಗೆಜ್ ಅವರನ್ನು ಪ್ರೀತಿಸಿದ್ದ ಅವರು ಅಲ್ಲಿ ವಾಸಿಸಲು ನಿರ್ಧರಿಸಿದ್ದರೆಂದು ಅವರ ಸ್ನೇಹಿತರು ಹೇಳಿದ್ದಾರೆ. ಮದುವೆಗೆ ಸಂಬಂಧಿಸಿದಂತೆ ಅಗತ್ಯವಾಗಿದ್ದ ಕಾಗದಪತ್ರಗಳನ್ನು ಸಿದ್ಧ ಮಾಡಲು ಅವರು ಅಕ್ಟೋಬರ್ 2ರಂದು ಟರ್ಕಿಯ ಸೌದಿ ಕಾನ್ಸುಲೇಟ್ ಕಚೇರಿಗೆ ಹೋಗಿದ್ದರು. ಹೊರಗೆ ಅವರ ಭಾವಿ ಪತ್ನಿ ಕಾಯುತ್ತಲೇ ಇದ್ದರು. ಕಸೋಜಿ ವಾಪಸ್ ಬರಲೇ ಇಲ್ಲ.

ಈ ಪ್ರಕರಣ ಸೌದಿಯಲ್ಲಿ ದೊರೆ ಆಡಳಿತ ಎಷ್ಟು ಅಮಾನುಷವಾಗಿದೆ ಎಂಬುದಕ್ಕೆ ಒಂದು ಉದಾಹರಣೆ ಎಂದೇ ಬಿಂಬಿತವಾಗಿದೆ. ಭಿನ್ನಮತೀಯರನ್ನು ಜೈಲಿಗಟ್ಟುತ್ತಿರುವುದು ಮತ್ತು ಮಾನವ ಹಕ್ಕುಗಳ ದಮನ ಹೆಚ್ಚುತ್ತಿರುವುದು ಈಗ ಅಂತಾರಾಷ್ಟ್ರೀಯ ಸಮುದಾಯದ ದೃಷ್ಟಿಗೆ ಬಿದ್ದಿದೆ. ತುಂಬಿ ತುಳುಕುತ್ತಿರುವ ತೈಲಸಂಪತ್ತೇ ದೊರೆಗಳಿಗೆ ಬಂಡವಾಳ. ಇಡೀ ವಿಶ್ವವನ್ನು ಅದರಿಂದಲೇ ನಿಯಂತ್ರಿಸುತ್ತಿರುವ ಸೌದಿ ದೊರೆಗಳ ಅಮಾನುಷ ಮುಖ ಕಾಣದಂತಾಗಿದೆ. ಈ ಕಾಣುತ್ತಿರುವ ಅಂತಾರಾಷ್ಟ್ರೀಯ ಒತ್ತಡದಿಂದ ಸೌದಿ ಬದಲಾಗುತ್ತದೋ ಅಥವಾ ಮತ್ತಷ್ಟು ಜಡವಾಗುತ್ತದೋ ಕಾದುನೋಡಬೇಕು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
Editor’s Pick More