ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್

ಪತ್ರಕರ್ತ ಜಮಾಲ್ ಕಸೋಜಿ ಅವರ ಸಾವನ್ನು ಆಕಸ್ಮಿಕ ಎಂದು ಹೇಳುವ ಮೂಲಕ, ಕೊಲೆಯ ಜವಾಬ್ದಾರಿಯಿಂದ ನುಸುಳಿಕೊಳ್ಳಲು ಸೌದಿ ಅರೇಬಿಯಾ ನಿರಂತರವಾಗಿ ನಾನಾ ಬಗೆಯಲ್ಲಿ ಪ್ರಯತ್ನಿಸುತ್ತಿದೆ. ಆದರೆ, ಈ ಯತ್ನವನ್ನು ಟರ್ಕಿ ಅಧ್ಯಕ್ಷ ಎರ್ಡೋಗನ್ ನಿಷ್ಫಲಗೊಳಿಸಲು ನಿರ್ಧರಿಸಿದ್ದಾರೆ

ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ತನ್ನ ರಾಯಭಾರ ಉಪ ಕಚೇರಿಯಲ್ಲಿ (ಕಾನ್ಸುಲೇಟ್) ಅ.2ರಂದು ಭಿನ್ನಮತೀಯ ಪತ್ರಕರ್ತ ಜಮಾಲ್ ಕಸೋಜಿ ಹತ್ಯೆಯಾಗಿರುವುದನ್ನು ಕೊನೆಗೂ ಒಪ್ಪಿಕೊಂಡಿರುವ ಸೌದಿ ಅರೇಬಿಯಾ, ಈಗ ಅದರ ಹೊಣೆಗಾರಿಕೆಯಿಂದ ನುಣಿಚಿಕೊಳ್ಳಲು ಯತ್ನಿಸುತ್ತಿದೆ. ಕಸೋಜಿ ಅವರ ಹತ್ಯೆ ಒಂದು ಆಕಸ್ಮಿಕ ಎಂದು ಸೌದಿ ಸರ್ಕಾರ ಈಗ ಸ್ಪಷ್ಟನೆ ನೀಡುತ್ತಿದೆ. ಅಷ್ಟೇ ಅಲ್ಲ, “ಅವರನ್ನು ಕೆಲವು ದುರುಳರು ಕೊಂದಿದ್ದಾರೆ. ಮಾತು ಮಾತಿಗೆ ಬೆಳೆದು ಸಂಘರ್ಷ ಆಗಿದೆ. ಅದರಲ್ಲಿ ಆಕಸ್ಮಿಕವಾಗಿ ಕಸೋಜಿ ಸತ್ತಿದ್ದಾರೆ,” ಎಂದು ಸೌದಿ ಸರ್ಕಾರ ಹೇಳುತ್ತಿದೆ.

ಆದರೆ, ಇದನ್ನು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಪ್ ಎರ್ಡೋಗನ್ ಸತ್ಯಕ್ಕೆ ದೂರವಾದುದು ಎಂದು ಹೇಳುತ್ತಿದ್ದಾರೆ. ಮಂಗಳವಾರ ಇದೇ ಮೊದಲ ಬಾರಿಗೆ ಜನಪ್ರತಿನಿಧಿಗಳ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎರ್ಡೋಗನ್ ಅವರು, “ಕಸೋಜಿ ಹತ್ಯೆ ಪೂರ್ವಯೋಜಿತ ಎಂಬುದು ಈವರೆಗೆ ನಡೆದ ತನಿಖೆಯಿಂದ ಖಚಿತವಾಗಿದೆ,” ಎಂದು ಹೇಳಿದ್ದಾರೆ.

ಕಸೋಜಿ ಹತ್ಯೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ವಿವರಗಳು ಹೀಗಿವೆ: ಕಸೋಜಿ ಅವರು ಕಾನ್ಸುಲೇಟ್ ಪ್ರವೇಶಿಸುವ ಮೊದಲೇ ಬಾಡಿಗೆ ಹಂತಕರು ಒಳಹೋಗಿದ್ದಾರೆ. ಕನಿಷ್ಠ 15 ಮಂದಿ ಹಂತಕರು ಸೌದಿಯಿಂದ ಬೇರೆ-ಬೇರೆ ವಿಮಾನಗಳಲ್ಲಿ ಬಂದಿದ್ದಾರೆ. ಅವರು ಎಲ್ಲಿಂದ ಬಂದರು, ಹೇಗೆ ಬಂದರು ಎಂಬುದನ್ನು ಗುರುತಿಸಲಾಗಿದೆ. ಹತ್ಯೆ ಮಾಡಿದ ನಂತರ ದೇಹವನ್ನು ತುಂಡು ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿ ಹೊರಸಾಗಿಸಲಾಗಿದೆ. ಹಂತಕರಲ್ಲಿ ಒಬ್ಬರು ಕಸೋಜಿ ಅವರ ಬಟ್ಟೆಯನ್ನು ಹಾಕಿಕೊಂಡು ಹಿಂದಿನ ಬಾಗಿಲಲ್ಲಿ ಹೊರಹೋಗಿದ್ದಾರೆ. ಆ ಮೂಲಕ, ಕಸೋಜಿ ಅವರು ಹೊರಹೋಗಿದ್ದಾರೆ ಎಂಬ ಸುಳ್ಳು ಸಾಕ್ಷ್ಯ ಸೃಷ್ಟಿಸಲಾಗಿದೆ.

ಹೀಗೆ, ಹತ್ತಾರು ಮಾಹಿತಿಗಳು ಈಗ ಹೊರಬಿದ್ದಿವೆ. ಈ ಹತ್ಯೆಯ ಹಿಂದೆ ರಾಜಕುಮಾರ ಸಲ್ಮಾನ್ ಅವರ ಕೈವಾಡ ಇದೆ ಎಂದು ಆರೋಪಿಸಲಾಗಿದೆ. ಆದರೆ, ಹತ್ಯೆ ಮಾಡಲು ಅವರು ಆದೇಶ ನೀಡಿದ್ದಾರೆ ಎನ್ನುವ ಆರೋಪವನ್ನು ಸಾಬೀತು ಮಾಡುವಂಥ ಮಾಹಿತಿ ಇನ್ನು ದೊರಕಿಲ್ಲ. ಈ ಮಧ್ಯೆ, ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 18 ಮಂದಿಯನ್ನು ಬಂಧಿಸಲಾಗಿದೆ ಎಂದು ಸೌದಿ ಸರ್ಕಾರ ಪ್ರಕಟಿಸಿದೆ. ಜೊತೆಗೆ ಆಡಳಿತದ ಉನ್ನತ ಸ್ಥಾನಗಳಲ್ಲಿದ್ದ ಐದು ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಅಷ್ಟೂ ಜನರನ್ನು ತನ್ನ ವಶಕ್ಕೆ ನೀಡಬೇಕೆಂದು ಎರ್ಡೋಗನ್ ಒತ್ತಾಯಿಸಿದ್ದಾರೆ. ತನಿಖೆಗಾಗಿ ಅವರನ್ನು ತಮ್ಮ ದೇಶಕ್ಕೆ ಒಪ್ಪಿಸಿದರೆ ವಾಸ್ತವ ಸಂಗತಿ ಬಯಲಾಗಲಿದೆ ಎಂಬುದು ಅವರ ಅಭಿಪ್ರಾಯ. ಆದರೆ, ಇದಕ್ಕೆ ಸೌದಿ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ, “ಈ ಪ್ರಕರಣದ ಸತ್ಯ ಸಂಗತಿಯನ್ನು ಪತ್ತೆ ಮಾಡೇ ಮಾಡುತ್ತೇವೆ,” ಎಂದು ಎರ್ಡೋಗನ್ ಘೋಷಿಸಿದ್ದಾರೆ.

ಮೊದಮೊದಲು ಕಸೋಜಿ ಹತ್ಯೆಯಾಗಿರುವುದನ್ನೇ ಸೌದಿ ಸರ್ಕಾರ ಅಲ್ಲಗಳೆಯುತ್ತಿತ್ತು. ಅದೊಂದು ಕೊಲೆ ಎಂಬುದನ್ನು ಸಾಬೀತು ಮಾಡುವಂಥ ಮಾಹಿತಿಯನ್ನು ಟರ್ಕಿ ಸ್ವಲ್ಪಸ್ವಲ್ಪವಾಗಿ ಬಹಿರಂಗ ಮಾಡುತ್ತ ಬಂತು. ಹೀಗಾಗಿ, ಈ ವಿಚಾರದಲ್ಲಿ ಸೌದಿ ದೊರೆಗಳ ಮೇಲೆ ಅಂತಾರಾಷ್ಟ್ರೀಯ ಒತ್ತಡ ಬರಲಾರಂಭಿಸಿತು. ಈ ಹತ್ಯೆಯ ಹಿಂದೆ ಸೌದಿಯ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಇರಬಹುದಾದ ಸಾಧ್ಯತೆಗಳ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಲೇಖನಗಳನ್ನು ಬರೆಯಲಾರಂಭಿಸಿದವು.

ಕಸೋಜಿ ಅವರ ಕುಟುಂಬ ಮೊದಲಿನಿಂದಲೂ ರಾಜಮನತನಕ್ಕೆ ಹತ್ತಿರವಿತ್ತು. ಅಮೆರಿಕದ ಒತ್ತಾಯದ ಮೇರೆಗೆ ರಾಜಮನೆತನದ ಪರವಾಗಿ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಜೊತೆ ಸಂಧಾನ ನಡೆಸಲು ಪತ್ರಕರ್ತ ಕಸೋಜಿ ಅವರನ್ನು ಕಳುಹಿಸಲಾಗಿತ್ತೆನ್ನುವ ಮಾಹಿತಿಯೂ ಇದೆ. ಅವರು ದೊರೆ ಕುಟುಂಬಕ್ಕೆ ಎಷ್ಟು ಹತ್ತಿರದವರಾಗಿದ್ದರು ಎನ್ನುವುದಕ್ಕೆ ಮಾಧ್ಯಮಗಳು ಕೊಡುವ ನಿದರ್ಶನ ಇದು. ಹಾಗೆ ನೋಡಿದರೆ, ಇದೇ ಕಾರಣಕ್ಕೆ 9/11 ದುರಂತದ ನಂತರ ವಿಶ್ವದ ಬಹುಪಾಲು ಮಾಧ್ಯಮಗಳಿಗೆ ಲಾಡೆನ್ ಮತ್ತು ಅಲ್‍ಖೈದಾ ಬಗ್ಗೆ ಮಾಹಿತಿ ಒದಗಿಸಿದವರು ಕಸೋಜಿ ಅವರು. ಇದೇ ಕಾರಣಕ್ಕೆ ಅವರು ಪಶ್ಚಿಮದ ದೇಶಗಳಿಗೆ ಹತ್ತಿರವಾದರು.

ಸೌದಿ ದೊರೆ ಸಲ್ಮಾನ್ ಅವರು ಸ್ವಲ್ಪ-ಸ್ವಲ್ಪವೇ ಅಧಿಕಾರವನ್ನು ರಾಜಕುಮಾರ ಸಲ್ಮಾನ್‍ಗೆ ಬಿಟ್ಟುಕೊಡುತ್ತ ಬಂದಂತೆ, ಕಸೋಜಿ ಅವರು ರಾಜಕುಮಾರ ಸಲ್ಮಾನ್ ಅವರ ಸಾಮಾಜಿಕ ಜಾಲತಾಣವನ್ನು ನಿರ್ವಹಿಸುತ್ತಿದ್ದರು. ದೊರೆ ಕುಟುಂಬಕ್ಕೆ ಸಮೀಪವರ್ತಿಯಾಗಿದ್ದ ಕಸೋಜಿ ಅವರಿಗೆ ಕುಟುಂಬದ ಒಳಹೊರಗುಗಳು ಮತ್ತು ದೊರೆ ಹಾಗೂ ರಾಜಕುಮಾರನ ನಡುವಣ ಭಿನ್ನಾಭಿಪ್ರಾಯಗಳು ಚೆನ್ನಾಗಿ ತಿಳಿದಿದ್ದವು. ರಾಜಕುಮಾರ ಸಲ್ಮಾನ್ ಸೌದಿ ಆಡಳಿತದಲ್ಲಿ ಸುಧಾರಣೆ ತರುವಲ್ಲಿ ಕಸೋಜಿ ಅವರ ಪಾತ್ರವೂ ಇತ್ತು. ತಮ್ಮ ಸುಧಾರಣೆಗಳಿಗೆ ದೇಶದಲ್ಲಿ ಮತ್ತು ಅಂತಾರಾಷ್ಟ್ರೀಯವಾಗಿ ಒಳ್ಳೆಯ ಪ್ರತಿಕ್ರಿಯೆ ಕಂಡುಬಂದದ್ದು ರಾಜಕುಮಾರ ಸಲ್ಮಾನ್ ಅವರ ತಲೆತಿರುಗಿಸಿತ್ತು. ಅವರ ಆಡಳಿತವನ್ನು ಟೀಕಿಸುವವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಯೆಮನ್‍ನಲ್ಲಿ ಯುದ್ಧ ತೀವ್ರಗೊಳಿಸಿದರು. ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿತು. ಅವರ ನಡೆಗಳು ಅಮಾನುಷ ಸ್ವರೂಪ ಪಡೆಯಲಾರಂಭಿಸಿದವು. ಇದನ್ನು ಕಸೋಜಿ ವಿರೋಧಿಸಿದರು. ಅವರ ವಿರೋಧ ರಾಜಕುಮಾರ ಸಲ್ಮಾನ್‍ಗೆ ಇಷ್ಟವಾಗಲಿಲ್ಲ. ಬದಲಾಗಬೇಕು ಎಂಬ ಸೂಚನೆ ಕಸೋಜಿ ಅವರಿಗೆ ಮೊದಲು ಬಂತು. ನಂತರ ಬಾಯಿ ಮುಚ್ಚಿಕೊಂಡಿರಬೇಕೆಂದು ಹೇಳಲಾಯಿತು. ಅಲ್ಲಿಗೆ ಕಸೋಜಿ ಮತ್ತು ದೊರೆ ಕುಟುಂಬದ ಸಂಬಂಧ ಕಡಿಯಿತು. ಅವರು ದೇಶ ಬಿಟ್ಟು ಅಮೆರಿಕ, ಟರ್ಕಿಯಲ್ಲಿ ವಾಸಿಸಲಾರಂಭಿಸಿದರು. ‘ವಾಷಿಂಗ್ಟನ್ ಪೋಸ್ಟ್‌’ನಲ್ಲಿ ಸೌದಿ ಆಡಳಿತದ ಹೊರಒಳಗುಗಳ ಬಗ್ಗೆ ಅವರು ಬರೆಯುತ್ತಿದ್ದ ಲೇಖನಗಳು ರಾಜಕುಮಾರ ಸಲ್ಮಾನ್ ಅವರ ವರ್ಚಸ್ಸನ್ನು ಹಾಳುಗೆಡವಿದವು. ತೈಲ ಸಂಪತ್ತಿನಿಂದ ಮೆರೆಯುತ್ತಿರುವ ಸೌದಿ ದೊರೆಗಳ ಸರ್ವಾಧಿಕಾರ ಆಡಳಿತ ಹೇಗೆ ಅಮಾನವೀಯಗೊಳ್ಳುತ್ತಿದೆ ಎಂಬ ಬಗ್ಗೆ ಕಸೋಜಿ ಜಗತ್ತಿಗೆ ಎಚ್ಚರಿಕೆ ನೀಡಿದ್ದರು. ಸಹಜವಾಗಿಯೇ ರಾಜಕುಮಾರ ಸಲ್ಮಾನ್‍ಗೆ ಕಸೋಜಿ ಅವರ ಬರವಣಿಗೆಗಳು ಕೋಪ ತರಿಸಿರಬಹುದು. ಬಹುಶಃ ಈ ಹಿನ್ನೆಲೆಯಲ್ಲಿ ಕಸೋಜಿ ಹತ್ಯ ನಡೆದಿದೆ ಎಂದು ಊಹಿಸಲಾಗಿದೆ.

ಇದನ್ನೂ ಓದಿ : ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?

ಕಸೋಜಿ ಅವರನ್ನು ಮುಗಿಸಿದರೆ ತಮ್ಮ ವಿರುದ್ಧದ ಅಪಪ್ರಚಾರ ನಿಲ್ಲುತ್ತದೆ ಎನ್ನುವ ರಾಜಕುಮಾರ ಸಲ್ಮಾನ್ ಲೆಕ್ಕಾಚಾರ ತಲೆಕೆಳಗಾಗಿದೆ. ಅವರ ಕೊಲೆ ಸೌದಿ ಅರೇಬಿಯಾ ದೊರೆಗಳಿಗೆ ಮತ್ತಷ್ಟು ಕೆಟ್ಟ ಹೆಸರು ತಂದಿದೆ. ಹೀಗಾಗಿಯೇ, ಮಂಗಳವಾರದಿಂದ ರಿಯಾದ್‍ನಲ್ಲಿ ಆರಂಭವಾದ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ಇರಲಿಲ್ಲ. ವಿಶ್ವದ ಅತಿ ಶ್ರೀಮಂತ ಕಂಪನಿಗಳು, ಉದ್ಯಮಿಗಳು ಈ ಸಮಾವೇಶದಿಂದ ದೂರ ಸರಿದಿವೆ. ಈ ಸಮಾವೇಶದ ವಿಚಾರದಲ್ಲಿಯೂ ಸಾಕಷ್ಟು ರಾಜಕೀಯ ವಿವಾದ ಎದ್ದಿದೆ. ಸೌದಿಯ ಅತಿ ಆಪ್ತ ದೇಶ ಅಮೆರಿಕ ಈ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ. ಆದರೆ, ಹಾಗೆ ತೋರಿಸಿಕೊಳ್ಳುತ್ತಲೂ ಇಲ್ಲ. ಅಮೆರಿಕ ಈ ವಿಚಾರವನ್ನು ಬಹು ಎಚ್ಚರಿಕೆಯಿಂದ ನಿರ್ವಹಿಸುತ್ತಿವೆ. ಕಸೋಜಿ ಅವರ ಹತ್ಯೆಯನ್ನು ಅಮೆರಿಕ ಖಂಡಿಸುತ್ತಲೇ ಆ ಬಗ್ಗೆ ಖಚಿತ ಮಾಹಿತಿ ಬೇಕೆಂದು ಸಬೂಬು ಹೇಳುತ್ತಿದೆ. ಈ ಸಮಾವೇಶವನ್ನು ಬಹಿಷ್ಕರಿಸಬೇಕೆಂದು ಮತ್ತು ಸೌದಿಗೆ ಯಾವುದೇ ಯುದ್ಧಾಸ್ತ್ರ ಮಾರಾಟ ಮಾಡಬಾರದೆಂದು ಜರ್ಮನಿ ಒತ್ತಾಯಿಸುತ್ತಿದೆ. ಆದರೆ, ಅಮೆರಿಕ, ರಷ್ಯಾ, ಚೀನಾ ಸೇರಿದಂತೆ ದೊಡ್ಡ ದೇಶಗಳಾವುವೂ ಅಂಥ ಕಠಿಣ ನಿರ್ಧಾರಕ್ಕೆ ಸಿದ್ಧವಿಲ್ಲ. ಕಾರಣ, ಈ ದೇಶಗಳಿಗಿರುವ ಸ್ವಹಿತಾಸಕ್ತಿ. ಈ ಬಗ್ಗೆ ಅಮೆರಿಕದ ಅಧ್ಯಕ್ಷರ ಪ್ರತಿಕ್ರಿಯೆ ಉತ್ತಮ ಉದಾಹರಣೆ. “ಸೌದಿ ಜೊತೆ 550 ಬಿಲಿಯನ್ ಡಾಲರ್ ಮಿಲಿಟರಿ ಶಸ್ತ್ರಾಸ್ತ್ರ ಪೂರೈಕೆ ಒಪ್ಪಂದವಾಗಿದೆ. ಸೌದಿ ಜೊತೆ ಮೈತ್ರಿ ಕಡಿದುಕೊಂಡರೆ ಅದರಿಂದ ಅಮೆರಿಕಕ್ಕೇ ನಷ್ಟ. ನಾವು ಬಹಿಷ್ಕಾರ ಹಾಕಿದರೆ ಸೌದಿ ಸರ್ಕಾರ ರಷ್ಯಾ ಜೊತೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುತ್ತದೆ. ಆಗ ಅಮೆರಿಕಕ್ಕೆ ಬರಬೇಕಿರುವ 550 ಬಿಲಿಯನ್ ಡಾಲರ್ ವಹಿವಾಟು ರಷ್ಯಾಕ್ಕೆ ಹೋಗುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕಿದೆ,” ಎಂದು ಟ್ರಂಪ್ ಬಹಿರಂಗವಾಗಿ ಹೇಳಿದ್ದಾರೆ. ಅಮೆರಿಕದಂಥ ದೇಶ ಹೇಗೆ ಲಾಭದ ಕಡೆಗೇ ಕಣ್ಣಿಟ್ಟಿರುತ್ತದೆ ಎನ್ನವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇರೊಂದಿಲ್ಲ. ಸೌದಿ ಅರೇಬಿಯಾವನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಇರಾನ್ ಮೇಲೇಳುತ್ತದೆ. ಇಸ್ಲಾಮಿಕ್ ದೇಶಗಳ ಮಧ್ಯೆ ಶಕ್ತಿ ಸಮತೋಲನಕ್ಕೆ ಸೌದಿ ಬೇಕೇ ಬೇಕು ಎನ್ನುವುದು ಅಮೆರಿಕದ ವಾದ. ಅಮೆರಿಕ ಅಷ್ಟೇ ಅಲ್ಲ, ರಷ್ಯಾ, ಚೀನಾ ಕೂಡ ಇಂಥದ್ದೇ ವ್ಯಾಪಾರಿ ಧೋರಣೆ ಇರುವಂಥ ದೇಶಗಳೇ ಆಗಿವೆ. ಕಸೋಜಿ ಪ್ರಕರಣ ಕಣ್ಣಮುಂದೆ ಇದ್ದರೂ ರಷ್ಯಾ ಮತ್ತು ಚೀನಾ ದೇಶದ ಪ್ರತಿನಿಧಿಗಳು ರಿಯಾದ್ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ವ್ಯಾಪಾರ, ಲಾಭವೇ ಮುಖ್ಯ, ಅದರ ಮುಂದೆ ಮಾನವೀಯತೆ, ಮಾನವ ಹಕ್ಕುಗಳು ಲೆಕ್ಕಕ್ಕಿಲ್ಲ!

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
Editor’s Pick More