ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ

ಶ್ರೀಲಂಕಾ ಹಠಾತ್ತನೆ ರಾಜಕೀಯ ಬಿಕ್ಕಟ್ಟಿಗೆ ಒಳಗಾಗಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಶುಕ್ರವಾರ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರನ್ನು ವಜಾಮಾಡಿ ಹಿಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಅವರನ್ನು ಹೊಸ ಪ್ರಧಾನಿಯಾಗಿ ನೇಮಿಸಿದ್ದೇ ಪ್ರಸ್ತುತ ಬಿಕ್ಕಟಿಗೆ ಕಾರಣ. ರಾಜಪಕ್ಸೆ ಅವರು ಮತ್ತೆ ಪ್ರಧಾನಿ ಆದುದು ಭಾರತಕ್ಕೆ ದೊಡ್ಡ ಆಘಾತ

ಶ್ರೀಲಂಕಾದಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ ನಡೆದಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಶುಕ್ರವಾರ ರಾತ್ರಿ ಹಠಾತ್ತನೆ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರನ್ನು ವಜಾ ಮಾಡಿ ಅವರ ಸ್ಥಾನಕ್ಕೆ ಹಿಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ನೇಮಿಸಿದ್ದಾರೆ. ಈ ಮೊದಲು ರನಿಲ್ ಅವರಿಗೆ ನೀಡಿದ್ದ ಬೆಂಬಲವನ್ನು ಸಿರಿಸೇನಾ ನೇತೃತ್ವದ ಪಕ್ಷ ಹಿಂತೆಗೆದುಕೊಂಡಿದೆ. ಅದರ ಬೆನ್ನಲ್ಲೇ ವಿಕ್ರಮ ಸಿಂಘೆ ಅವರನ್ನು ಪ್ರಧಾನಿ ಸ್ಥಾನದಿಂದ ತೆಗೆಯಲಾಗಿದೆ. ರಾಜಕೀಯ ಬಿಕ್ಕಟ್ಟು ಆರಂಭ ಇಲ್ಲಿಂದಲೇ. ಮಹಿಂದಾ ರಾಜಪಕ್ಸೆ ಅವರು ರಾತ್ರೋ ರಾತ್ರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡದ್ದೂ ಆಗಿದೆ.

ಆದರೆ ವಿಕ್ರಮ ಸಿಂಘೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದರು. ಸಂಸತ್ತಿನಲ್ಲಿ ತಮಗೆ ಬಹುಮತ ಇದೆ. ಅದನ್ನು ಸಾಬೀತು ಮಾಡುವುದಾಗಿ ಘೋಷಿಸಿದರಲ್ಲದೆ ಸಿರಿಸೇನಾ ಅವರ ಕ್ರಮ ಸಂವಿಧಾನ ಬಾಹಿರ ಎಂದು ಹೇಳಿ ರಾಜಕೀಯ ಬಿಕ್ಕಟ್ಟಿಗೆ ತೀವ್ರತೆ ತಂದುಕೊಟ್ಟರು. ಸಂವಿಧಾನದ ಪ್ರಕಾರ ಬಹುಮತ ಇರುವ ಯಾವುದೇ ಸರ್ಕಾರವನ್ನು ಮತ್ತು ಪ್ರಧಾನಿಯನ್ನು ವಜಾ ಮಾಡುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ ಎಂದು ರನಿಲ್ ಸ್ಪಷ್ಟಪಡಿಸಿದರು. ಬಹುಮತ ಸಾಬೀತಿಗೆ ಸಂಸತ್ ಅಧಿವೇಶನ ಕರೆಯಬೇಕೆಂದು ಸ್ಪೀಕರ್ ಅವರಿಗೆ ಒತ್ತಾಯಿಸಿದರು. ಈ ಒತ್ತಾಯ ಬರುತ್ತಿದ್ದಂತೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಬಹುಮತ ಸಾಬೀತಿಗೆ ಅವಕಾಶವೇ ಆಗದಂತೆ ಶನಿವಾರ ಬೆಳಗ್ಗೆ ಸಂಸತ್ತನ್ನೇ ಮುಂದಿನ ನವೆಂಬರ್ 16ರ ವರೆಗೆ ಸಸ್ಪೆಂಡ್ ಮಾಡಿದ್ದಾರೆ. ಅಲ್ಲಿಗೆ ರಾಜಕೀಯ ಬಿಕ್ಕಟ್ಟು ಒಂದೇ ದಿನದಲ್ಲಿ ಮತ್ತಷ್ಟು ಸಂಕೀರ್ಣಗೊಂಡಂತಾಗಿದೆ.

ಈ ರಾಜಕೀಯ ಬೆಳವಣಿಗೆ ಯಾವ ಸ್ವರೂಪ ಪಡೆಯುತ್ತದೆ ಎನ್ನುವುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಈ ಬೆಳವಣಿಗೆಗಳು ಭಾರತಕ್ಕೆ ಆಘಾತಕಾರಿ ಎನ್ನುವುದರಲ್ಲಿ ಅನುಮಾನವಿಲ್ಲ. ರಾಜಪಕ್ಸೆ ಅವರು ಅಧ್ಯಕ್ಷರಾಗಿದ್ದಾಗಲೇ ತಮಿಳು ಪ್ರತ್ಯೇಕತಾವಾದಿಗಳನ್ನು ನಿರ್ನಾಮ ಮಾಡಿದ್ದು. ಅದಕ್ಕಾಗಿ ಅವರು ಪಾಕಿಸ್ತಾನ ಮತ್ತು ಚೀನಾದ ಮಿಲಿಟರಿ ನೆರವನ್ನು ಪಡೆದುದನ್ನು ಮರೆಯುವಂತಿಲ್ಲ. ಅಷ್ಟೇ ಅಲ್ಲ ಅವರು ಚೀನಾ ಮತ್ತು ಪಾಕಿಸ್ತಾನದ ಸ್ನೇಹಿತರಾದರು. ಚೀನಾ ಅಪಾರ ಪ್ರಮಾಣದಲ್ಲಿ ಶ್ರೀಲಂಕಾದಲ್ಲಿ ಬಂಡವಾಳ ಹೂಡಿದ್ದು, ಮಿಲಿಟರಿ ನೆಲೆ ಸ್ಥಾಪಿಸುವ ದಿಸೆಯಲ್ಲಿ ಗಟ್ಟಿ ಪ್ರಯತ್ನ ಮಾಡಿದ್ದು ಈ ರಾಜಪಕ್ಸೆ ಅವಧಿಯಲ್ಲಿಯೇ. ಭಾರತ ಮತ್ತು ಶ್ರೀಲಂಕಾದ ಬಾಂಧವ್ಯ ತುಂಬಾ ಹಳೆಯದು. ಆದರೂ ಈ ಬಾಂಧವ್ಯ ಹಳಸಿದ್ದು ಮತ್ತು ಭಾರತದ ಮಿತ್ರ ದೇಶವಾಗಿರದ ಚೀನಾದ ಜೊತೆ ಸ್ನೇಹ ಬೆಳೆದದ್ದು ರಾಜಪಕ್ಷೆ ಅವಧಿಯಲ್ಲಿಯೇ. ಭಾರತ ಈವರೆಗೆ ಮತ್ತೆ ಶ್ರೀಲಂಕಾ ಜೊತೆ ಬಾಂಧವ್ಯ ಮರುಸ್ಥಾಪಿಸಲು ಸಾಧ್ಯವಾಗಿಲ್ಲ.

ತಮಿಳು ಪ್ರತ್ಯೇಕತಾವಾದಿಗಳನ್ನು ಬಗ್ಗುಬಡಿದ ನಂತರ ಚುನಾವಣೆಗಳಲ್ಲಿ ರಾಜಪಕ್ಸೆ ಅವರೇ ಗೆಲ್ಲುತ್ತಾರೆಂಬುದು ಸಹಜ ನಿರೀಕ್ಷೆ. ಆದರೆ 2015ರಲ್ಲಿ ನಡೆದ ಸಂಸತ್ ಚುನಾವಣೆಗಳಲ್ಲಿ ರಾಜಪಕ್ಸೆ ಅವರ ಪಕ್ಷ ಬಹುಮತ ಗಳಿಸುವಲ್ಲಿ ವಿಫಲವಾಯಿತು. ಅವರ ಸರ್ಕಾರದಲ್ಲಿ ಆರೋಗ್ಯ ಖಾತೆ ಮಂತ್ರಿಯಾಗಿದ್ದ ಮೈತ್ರಿಪಾಲ ಸಿರಿಸೇನಾ ಅವರು ಸರ್ಕಾರದಿಂದ ಹೊರಬಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದು ಆಶ್ಚರ್ಯಹುಟ್ಟಿಸಿದರು. ಅಷ್ಟೇ ಅಲ್ಲ ಸಂಸತ್ ಚುನಾವಣೆಗಳಲ್ಲಿ ಸಾಕಷ್ಟು ಸ್ಥಾನ ಗಳಿಸಿ, ವಿರೋಧಿ ರನಿಲ್ ವಿಕ್ರಮ ಸಿಂಘೆ ಅವರ ಪಕ್ಷಕ್ಕೆ ಬೆಂಬಲ ಘೋಷಿಸಿದರು. ಇದರ ಪರಿಣಾಮವಾಗಿ ವಿಕ್ರಮ ಸಿಂಘೆ ಪ್ರಧಾನಿಯಾದರು. ರನಿಲ್ ವಿಕ್ರಮ ಸಿಂಘೆ ಮೂಲತಃ ಭಾರತ ಪರವಾದಿ. ಹೀಗಾಗಿ ವಿಕ್ರಮ ಸಿಂಘೆ ಅವರು ಭಾರತದ ಜೊತೆ ಮತ್ತೆ ಮೈತ್ರಿ ಸಾಧಿಸಲಾರಂಭಿಸಿದರು. ಈ ಬೆಳವಣಿಗೆ ಚೀನಾದ ಕೆಂಗಣ್ಣಿಗೆ ಗುರಿಯಾಗಿತ್ತು ಕೂಡಾ. ದೇಶ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ರನಿಲ್ ವಿಕ್ರಮ ಸಿಂಘೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲಿ ತೀವ್ರ ಹಾನಿಗೊಳಗಾದ ತಮಿಳರಿಗೆ ನೆರವು ನೀಡಲು ಮುಂದಾದರು.

ಈ ಮಧ್ಯೆ ಈ ವರ್ಷದ ಮೊದಲ ಭಾಗದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ರಾಜಪಕ್ಷೆ ನೇತೃತ್ವದ ಪಕ್ಷ ಹೆಚ್ಚು ಸ್ಥಾನಗಳಿಸಿತು. ಈ ಫಲಿತಾಂಶವನ್ನೇ ಮುಂದಿಟ್ಟುಕೊಂಡು ವಿಕ್ರಮ ಸಿಂಘೆ ಅವರು ಜನಪ್ರಿಯತೆ ಕಳೆದುಕೊಂಡಿದ್ದಾರೆ ಎಂದು ಹೇಳಿ ಅವರ ರಾಜೀನಾಮೆಗೆ ಒತ್ತಾಯಿಸಲಾಯಿತು. ರಾಜಪಕ್ಸೆ ಅವರು ಸಿಂಹಳೀಯರ ಜನಪ್ರಿಯ ನಾಯಕ. ದೇಶದಲ್ಲಿ ಸಿಂಹಳೀಯರೇ ಬಹುಸಂಖ್ಯಾತರಾದ್ದರಿಂದ ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಬಂತು. ಈ ಮಧ್ಯೆ ಸಿರಿಸೇನಾ ಹತ್ಯೆಗೆ ಸಂಚು ನಡೆದಿದೆ ಎಂಬ ಕೂಗು ಎದ್ದಿತು. ಈ ಸಂಚಿನ ಹಿಂದೆ ಭಾರತದ ಗೂಢಚರ್ಯೆಸಂಸ್ಥೆ ಇದೆ ಎಂದೂ ಹೇಳಲಾಯಿತು. ಈ ಕೂಗು ಎಷ್ಟು ವ್ಯಾಪಕವಾಗಿ ಕೇಳಿಬಂತೆಂದರೆ ಭಾರತ ಅಧಿಕೃತವಾಗಿ ಅದನ್ನು ಬಹಿರಂಗವಾಗಿ ಅಲ್ಲಗಳೆಯಬೇಕಾಯಿತು. ಈ ಸಂಚಿನ ಹಿಂದೆ ವಿಕ್ರಮ ಸಿಂಘೆ ಅವರ ಬೆಂಬಲಗರು ಇದ್ದಾರೆನ್ನುವ ವದಂತಿಗಳು ಸಿರಿಸೇನಾ ಅವರನ್ನು ಭೀತಿಗೆ ಒಳಗು ಮಾಡಿತು. ಬಹುಶಃ ಇದೇ ಕಾರಣವಾಗಿ ಪ್ರಧಾನಿ ಸ್ಥಾನದಿಂದ ಅವರನ್ನು ವಜಾ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್

ದೇಶ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಸಾಲದ ಪ್ರಮಾಣ 65 ಬಿಲಿಯನ್ ಡಾಲರ್‍ಗೂ ಹೆಚ್ಚು ಎನ್ನಲಾಗಿದೆ. ದೇಶದ ಆದಾಯ ಸಾಲದ ಬಡ್ಡಿ ಮರುಪಾವತಿ ಮತ್ತು ನೌಕರರ ವೇತನಕ್ಕೇ ಸಾಕಾಗುತ್ತದೆ. ಹೀಗಾಗಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳದಂಥ ಸ್ಥಿತಿಗೆ ಶ್ರೀಲಂಕಾ ತಲುಪಿದೆ. ಆರ್ಥಿಕ ಸ್ಥಿತಿ ಸುಧಾರಣೆ ಆಗದಿದ್ದರೆ ದೇಶ ಅರಾಜಕತೆಯತ್ತ ಹೊರಳಬಹುದೆಂಬ ಭೀತಿ ಎಲ್ಲ ಕಡೆ ಇದೆ. ಈ ಬಿಕ್ಕಟಿನಿಂದ ಹೊರಬರಲು ಸಿರಿಸೇನಾ ಅವರು ಪ್ರಧಾನಿಯವರನ್ನು ಬದಲಾಯಿಸಿದ್ದಾರೆ ಎಂದು ಅವರ ಬೆಂಬಲಿಗರು ವಾದಿಸುತ್ತಿದ್ದಾರೆ. ಯಾವುದೇ ಊಹೆ ನಿಜವಿರಬಹುದು. ಅದನ್ನು ದೇಶದ ಜನಪ್ರತಿನಿಧಿಗಳು ಹೇಗೆ ನಿಭಾಯಿಸುತ್ತಾರೆ ಎನ್ನವುದನ್ನು ಕಾದು ನೋಡಬೇಕು. ಭಾರತ ಈ ಸಂದರ್ಭದಲ್ಲಿ ಬಹು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.

ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
Editor’s Pick More