ಐಎಎಸ್‌ ಅಧಿಕಾರಿ ಮಗುವಿಗೆ ನಿಷೇಧಿತ ಪೊಲಿಯೋ ಲಸಿಕೆ ಆರೋಪ; ಇಬ್ಬರ ವಿರುದ್ಧ ಎಫ್‌ಐಆರ್‌

ಇತ್ತೀಚೆಗೆ ದೇಶದ ಕೆಲವು ಭಾಗಗಳಲ್ಲಿ ಮಕ್ಕಳಿಗೆ ನೀಡಲಾದ ಪೋಲಿಯೊ ಲಸಿಕೆಗಳಲ್ಲಿ ನಿರ್ದಿಷ್ಟ ಕಂಪನಿಯೊಂದು ತಯಾರಿಸಿದ್ದ ಲಸಿಕೆಯು ಟೈಪ್ 2 ಪೋಲಿಯೊ ವೈರಸ್‌ನಿಂದ ಕಲುಷಿತಗೊಂಡಿತ್ತು ಎಂಬ ಸುದ್ದಿ ಆತಂಕ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಬೆಳಕಿಗೆ ಬಂದಿರುವ ಈ ಘಟನೆ ಆತಂಕವನ್ನು ಹೆಚ್ಚಿಸಿದೆ

ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಅವರ ನವಜಾತ ಶಿಶುವಿಗೆ ಇಂದಿರಾ ನಗರದ ಸಿಎಂಎಚ್ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಅವಧಿ ಮೀರಿದ ಮತ್ತು ನಿಷೇಧಿತ ಪೊಲಿಯೋ ಲಸಿಕೆ ಹಾಕಿರುವ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಸಂಬಂಧ, ವೈದ್ಯ ಸುರೇಶ್ ಮತ್ತು ಹಿರಿಯ ದಾದಿ ಕೃಷ್ಣಮ್ಮ ಎಂಬುವರ ವಿರುದ್ಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದರ ಪ್ರತಿ 'ದಿ ಸ್ಟೇಟ್‌'ಗೆ ಲಭ್ಯವಾಗಿದೆ.

ಪಲ್ಲವಿ ಅಕುರಾತಿ ಅವರ ಶಿಶುವಿಗೆ ಚಿಕಿತ್ಸೆ ಮತ್ತು ಆರೈಕೆ ವಿಚಾರದಲ್ಲಿ ಇಂದಿರಾ ನಗರದ ಖಾಸಗಿ ಆಸ್ಪತ್ರೆ ಎಸಗಿದ್ದ ಗಂಭೀರ ಲೋಪ ಕುರಿತು ತನಿಖಾ ತಂಡ ವಸ್ತು ನಿಷ್ಠ ವರದಿ ನೀಡುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.

ಮಗುವಿನ ಬಾಯಿಗೆ ಹಾಕುವ ಪೊಲಿಯೋ ಲಸಿಕೆ ಆಸ್ಪತ್ರೆಗಳಲ್ಲಿಯೇ ಇರಬೇಕಲ್ಲದೆ, ಪೋಷಕರು ಪ್ರತ್ಯೇಕವಾಗಿ ತರುವ ಅಗತ್ಯವಿಲ್ಲ. ಆದರೆ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಆಸ್ಪತ್ರೆಗಳು ಅವಧಿ ಮೀರಿದ ಮತ್ತು ನಿಷೇಧಿತ ಪೊಲೀಯೋ ಲಸಿಕೆಯನ್ನು ಪೋಷಕರಿಂದಲೇ ಪ್ರತ್ಯೇಕವಾಗಿ ತರಿಸುತ್ತಿದ್ದಾರೆ ಎಂಬ ಆತಂಕದ ಸಂಗತಿ ಈ ಪಲ್ಲವಿ ಅಕುರಾತಿ ಅವರು ನೀಡಿರುವ ದೂರಿನಿಂದ ಬಹಿರಂಗವಾಗಿದೆ.

"೨೧೦೮ರ ಅಕ್ಟೋಬರ್‌ ೩ರಂದು ಐಎಎಸ್‌ ಅಧಿಕಾರಿ ಪಲ್ಲವಿ ಅಕುರಾತಿ ಅವರು ತಮ್ಮ ೧೦ ವಾರದ ಮಗುವಿಗೆ ಸಿಎಂಎಚ್‌ ಆಸ್ಪತ್ರೆಯಲ್ಲಿ ಲಸಿಕೆ ಹಾಕಲು ತೆರಳಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಸುರೇಶ್‌ ಮತ್ತು ಹಿರಿಯ ದಾದಿ ಕೃಷ್ಣಮ್ಮ ಅವರು ನಿರ್ಲಕ್ಷ್ಯ ವಹಿಸಿ, ಅವಧಿ ಮೀರಿದ ಲಸಿಕೆಗಳನ್ನು ಮಗುವಿಗೆ ನೀಡಿದ್ದಾರೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ, ಅವರ ವಿರುದ್ಧ ಐಪಿಸಿ ೨೬೯, ೨೭೦ ಮತ್ತು ೨೭೬ ಅಡಿಯಲ್ಲಿ ಕಾನೂನು ಕ್ರಮ ಮತ್ತು ವೈದ್ಯಕೀಯ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು," ಎಂದು ಪಲ್ಲವಿ ಅಕುರಾತಿ ಅವರು ದೂರಿನಲ್ಲಿ ಒತ್ತಾಯಿಸಿದ್ದರು. ಈ ದೂರು ಆಧರಿಸಿ ಎಫ್‌ಐಆರ್‌ ದಾಖಲಾಗಿದೆ.

ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವ ಮುನ್ನ ಬೆಂಗಳೂರು ನಗರ ಆರೋಗ್ಯ ಜಿಲ್ಲಾಧಿಕಾರಿ ಮತ್ತು ಔಷಧ ನಿಯಂತ್ರಕರಿಗೆ ದೂರು ಸಲ್ಲಿಸಲಾಗಿತ್ತು. ಆದರೆ, ಅವರು ನಿರ್ಲಕ್ಷ್ಯ ವಹಿಸಿದ್ದ ವೈದ್ಯರ ವಿರುದ್ಧ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆ ಮೊರೆ ಹೊಕ್ಕಿರುವುದು ದೂರಿನಿಂದ ತಿಳಿದುಬಂದಿದೆ.

ದೂರಿನ ಪ್ರತಿ
ಇದನ್ನೂ ಓದಿ : ಎಪಿಪಿ ನೇಮಕ ಹಗರಣ; ಆರೋಪಗಳಿಂದ ನುಣುಚಿಕೊಳ್ಳಲು ಪ್ರಮುಖ ಆರೋಪಿಗಳ ಯತ್ನ?

ದೂರಿನಲ್ಲೇನಿದೆ?: ಪಲ್ಲವಿ ಅಕುರಾತಿ ಅವರು ತಮ್ಮ ಮಗುವಿಗೆ (೧೦ ವಾರದ ಮಗು) ಇಂದಿರಾ ನಗರದ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ಪೊಲಿಯೋ ಲಸಿಕೆ ಹಾಕಿಸಲು ತೆರಳಿದ್ದರು. ಬೆಂಗಳೂರು ನಗರ ಜಿಲ್ಲೆಯ ಉಪ ಔಷಧ ನಿಯಂತ್ರಕ ಮಲ್ಲಿಕಾರ್ಜುನ ನಾಗೂರ ಅವರು, ಸಿ ವಿ ರಾಮನ್ ಆಸ್ಪತ್ರೆ ಸಮೀಪ ಇರುವ ಔಷಧಾಲಯಗಳಲ್ಲಿ ಲಸಿಕೆ ಲಭ್ಯ ಇರುತ್ತದೆ ಎಂದು ಸಲಹೆ ನೀಡಿದ್ದರು. ಅಲ್ಲದೆ, ಸಿಎಂಎಚ್‌ ಆಸ್ಪತ್ರೆಯ ಔಷಧಾಲಯದಿಂದಲೇ ಲಸಿಕೆ ತಂದಲ್ಲಿ ಉತ್ತಮ ಎಂದಿದ್ದರು. ಈ ಸಂಬಂಧ ನೆರವು ನೀಡಲು ಹಿರಿಯ ಫಾರ್ಮಾಸಿಸ್ಟ್‌ ನಾಗರಾಜು ಅವರಿಗೆ ಸೂಚಿಸಿದ್ದರು. ಅಂತೆಯೇ, ಆಸ್ಪತ್ರೆ ಸಮೀಪಿಸುತ್ತಿದ್ದಂತೆ ಪಲ್ಲವಿ ಅಕುರಾತಿ ಅವರು ನಾಗರಾಜು ಅವರಿಗೆ ಕರೆ ಮಾಡಿದ್ದರು. ಆಗ ನಾಗರಾಜು ಅವರು ನೇರವಾಗಿ ಸಿಎಂಎಚ್‌ ಆಸ್ಪತ್ರೆಯ ವೈದ್ಯ ಸುರೇಶ್‌ ಅವರ ಬಳಿ ಕರೆದೊಯ್ದಿದ್ದರು. ಆಗ ಮಕ್ಕಳ ತಜ್ಞ ಸುರೇಶ್‌ ಅವರು ೪ ಮಾದರಿಯ ಲಸಿಕೆ ತರಲು ಚೀಟಿ ಬರೆದುಕೊಟ್ಟಿದ್ದರು. ಅದರಲ್ಲಿ ಬಾಯೊಳಗೆ ಹಾಕುವ ಲಸಿಕೆ (ಒಪಿವಿ) ಕೂಡ ಸೇರಿತ್ತು. ಈ ಪೈಕಿ ಒಪಿವಿ ಹೊರತುಪಡಿಸಿ ೩ ಲಸಿಕೆಗಳನ್ನು ಪಲ್ಲವಿ ಅವರು ತಂದಿದ್ದರು. ಒಪಿವಿ ಲಸಿಕೆ ಆಸ್ಪತ್ರೆಯಲ್ಲಿಯೇ ಲಭ್ಯ ಇರುವ ಕಾರಣ ಔಷಧಾಲಯದಿಂದ ತಂದಿರಲಿಲ್ಲ.

ಹಿರಿಯ ದಾದಿ ಕೃಷ್ಣಮ್ಮ ಅವರು ೩ ಲಸಿಕೆಗಳನ್ನು ಮಗುವಿಗೆ ಹಾಕಿದರಲ್ಲದೆ, ಗುಲಾಬಿ ಬಣ್ಣದ ಲಸಿಕೆಯೊಂದನ್ನು ಮಗುವಿನ ಬಾಯಿಗೆ ೨-೩ ಡ್ರಾಪ್ ಹಾಕಿದ್ದರು. ಆದರೆ, ಇದು ಅವಧಿ ಮೀರಿತ್ತಲ್ಲದೆ, ಇದರ ಉತ್ಪಾದನೆಯನ್ನು ನಿಷೇಧಿಸಲಾಗಿತ್ತು. ಈ ಬಗ್ಗೆ ಕೇಳಿದ್ದಕ್ಕೆ, “ವೈದ್ಯರ ಸೂಚನೆಯಂತೆ ಲಸಿಕೆಯನ್ನು ಹಾಕಲಾಗಿದೆ,” ಎಂದು ಹಿರಿಯ ದಾದಿ ಉತ್ತರಿಸಿದ್ದರು. ಅಲ್ಲದೆ, ಲಸಿಕೆ ಹಾಕುವ ಮುನ್ನ ವೈದ್ಯಕೀಯ ಸೂಚನೆಗಳನ್ನು ಪಾಲಿಸಿರಲಿಲ್ಲ. ಮಗುವಿಗೆ ಚುಚ್ಚುಮದ್ದು ಹಾಕುವಲ್ಲಿಯೂ ದಾದಿ ನಿರ್ಲಕ್ಷ್ಯ ವಹಿಸಿದ್ದರು ಎಂಬ ಅಂಶವನ್ನು ದೂರಿನಲ್ಲಿ ವಿವರಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಎಪಿಪಿ ನೇಮಕ ಹಗರಣ; ಆರೋಪಗಳಿಂದ ನುಣುಚಿಕೊಳ್ಳಲು ಪ್ರಮುಖ ಆರೋಪಿಗಳ ಯತ್ನ?
ಪೀಠೋಪಕರಣ ಖರೀದಿ ಅಕ್ರಮ; ಸಂಸದ ಮುನಿಯಪ್ಪ ಅಳಿಯನ ವಿರುದ್ಧ ಚಾರ್ಜ್‌ಶೀಟ್
Editor’s Pick More