ಸಮಾಧಾನ | ಅಂತೂ ಅರ್ಜುನ ಕಾಲೇಜಿಗೆ ಹೋದ! ರಗಳೆ ಆಗುವಂಥದ್ದು ಏನಿತ್ತು?

ಮಕ್ಕಳು ನಿಮ್ಮವರೇ ನಿಜ. ಆದರೆ, ಅವರ ಆಸೆ, ಆಕಾಂಕ್ಷೆ ನಿಮ್ಮವಲ್ಲ. ಅವರ ಬದುಕು ನಿಮ್ಮದಲ್ಲ. ಅವರಿಗಿಷ್ಟದ ಬದುಕನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೇ ಬಿಡಿ. ಅವರ ಓದು, ಅಭಿರುಚಿ, ಹವ್ಯಾಸಗಳನ್ನು ನೀವು ನಿರ್ಧರಿಸುವುದು ಬೇಡ. ಎಚ್ಚರ, ಅರ್ಜುನನಿಗೆ ಆದಂತೆಯೇ ಆಗಬಹುದು!

ನಮ್ಮ ಒಬ್ಬನೇ ಮಗ ಅರ್ಜುನ. ಪ್ರತಿಭಾವಂತ ವಿದ್ಯಾರ್ಥಿ. ಹತ್ತನೇ ತರಗತಿಯಲ್ಲಿ ಶೇ.78 ಅಂಕಗಳನ್ನು ಪಡೆದಿದ್ದಾನೆ. ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯು ಸೈನ್ಸ್ ಕೋರ್ಸ್ಗೆ ಸೇರಿಸಿದ್ದೇವೆ. ಒಂದು ತಿಂಗಳು ಕಾಲೇಜಿಗೆ ಹೋದ. ಆಮೇಲೆ ಸಮಸ್ಯೆ ಶುರುವಾಯಿತು. "ಕಾಲೇಜು ಚೆನ್ನಾಗಿಲ್ಲ. ಟೀಚರ್ಸ್ ಸರಿಯಾಗಿ ಪಾಠ ಮಾಡುವುದಿಲ್ಲ. ತುಂಬಾ ಸ್ಟ್ರಿಕ್ಟು, ರೇಗಾಡುತ್ತಾರೆ. ಮಿಲಿಟರಿಯವರ ತರಾ ವರ್ತಿಸುತ್ತಾರೆ. ಜೊತೆಗೆ ಪಕ್ಷಪಾತ ಮಾಡುತ್ತಾರೆ. ಶ್ರೀಮಂತ, ಪ್ರಭಾವಶಾಲಿಗಳ ಮಕ್ಕಳಿಗೆ ಹೆಚ್ಚು ಗಮನ ಕೊಡುತ್ತಾರೆ. ನಾನು ಆ ಕಾಲೇಜಿಗೆ ಹೋಗಲ್ಲ" ಎಂದ. ನಾವು ಆ ಕಾಲೇಜಿನ ಪ್ರಿನ್ಸಿಪಾಲರು, ಟೀಚರ್ಸ್ ಜೊತೆ ಮಾತಾಡಿದೆವು. "ನಿಮ್ಮ ಮಗನಿಗೆ ಸ್ಟಡೀಸ್ನಲ್ಲಿ ಆಸಕ್ತಿ ಇಲ್ಲ. ಕ್ಲಾಸಿನಲ್ಲಿ ಮಾತಾಡ್ತಿರ್ತಾನೆ. ನೋಟ್ಸ್ ಬರೆದುಕೊಳ್ಳುವುದೇ ಇಲ್ಲ. ಕ್ಲಾಸಿಗೆ ಚಕ್ಕರ್ ಹಾಕ್ತಾನೆ. ಕೇಳಿದ್ರೆ ಟೀಚರ್ಸ್ ಮೇಲೆ ರೇಗಾಡ್ತಾನೆ. ಕ್ಲಾಸಿಗೆ ಅಟೆಂಡ್ ಮಾಡೋದು ಬಿಡೋದು ನನ್ನಿಷ್ಟ ಅಂತ ದಬಾಯಿಸ್ತಾನೆ. ಕಾಲೇಜಿನ ನಿಯಮಗಳನ್ನು ಅನುಸರಿಸೋಲ್ಲ" ಎಂದರು. ಅರ್ಜುನ, "ಇವೆಲ್ಲ ಸುಳ್ಳು, ಬೇಕಂತಲೇ ಈ ಪ್ರಿನ್ಸಿಪಾಲ್, ಟೀಚರ್ಸ್ ನನ್ನ ಮೇಲೆ ಸುಳ್ಳು ಆರೋಪ ಹೊರಿಸ್ತಿದಾರೆ. ನಾನು ಈ ಕಾಲೇಜಿಗೆ ಹೋಗಲ್ಲ. ಏನು ಮಾಡಿಕೊಳ್ತಿರೋ ಮಾಡಿಕೊಳ್ಳಿ" ಎಂದ. ಮನೆ ಬಿಟ್ಟು ಓಡಿ ಹೋದ. ಸ್ನೇಹಿತರ ಮನೆಯಲ್ಲಿದ್ದ ಅವನನ್ನು ಹುಡುಕಿ ಕರೆತಂದೆವು.

"ನಾನು ಈ ವರ್ಷ ಕಾಲೇಜಿಗೆ ಹೋಗೋ ಮೂಡ್ನಲ್ಲಿಲ್ಲ, ಬಲವಂತ ಮಾಡ್ಬೇಡಿ. ನನ್ನ ತಲೆ ಬಿಸಿಯಾಗಿದೆ. ಕ್ಲಾಸಿನಲ್ಲಿ ಕೂತರೆ ತಲೆನೋವು ಬರುತ್ತೆ. ಚಡಪಡಿಸುವ ಹಾಗೇ ಆಗುತ್ತೆ" ಎಂದ. ನ್ಯೂರಾಲಜಿ ಡಾಕ್ಟರ್ಗೆ ತೋರಿಸಿದೆವು. ಅವರು ಸ್ಕ್ಯಾನಿಂಗ್-ಎಂ.ಆರ್.ಪಿ ಮಾಡಿಸಿ ತಲೆಯೊಳಗೆ ಏನೂ ತೊಂದರೆ ಇಲ್ಲ, ಮನೋವೈದ್ಯರಿಗೆ ತೋರಿಸಿ, ಇದು ಟೆನ್ಶನ್ ತಲೆನೋವು ಎಂದರು. ಇವನು ಮನೋವೈದ್ಯರನ್ನು ಕಾಣಲು ನಿರಾಕರಿಸಿದ. ಮತ್ತೆ ಮನೆ ಬಿಟ್ಟು ಹೋದ. ಮೂರ್ನಾಲ್ಕು ದಿವಸ ಬರ್ಲೇ ಇಲ್ಲ. ಮಂಡ್ಯದಲ್ಲಿ ನಮ್ಮ ದೂರದ ನೆಂಟರ ಮನೆಯಲ್ಲಿದ್ದ. ನನ್ನ ಅಪ್ಪ ಅಮ್ಮ ಸರಿ ಇಲ್ಲ. ಜಗಳ ಆಡ್ತಾರೆ. ಅವರ ಜೊತೆಯಲ್ಲಿ ಇರೋದಿಲ್ಲ. ನನಗೆ ನೀವು ಆಶ್ರಯ ಕೊಡಿ ಅಂತ ಕೇಳಿದ್ದಾನೆ. ನಾವು ಅಲ್ಲಿಗೆ ಹೋಗಿ ಅವನನ್ನು ಕರೆತಂದೆವು.

ನೀವು ಕಾಲೇಜಿಗೆ ಹೋಗು ಅಂತ ಬಲವಂತ ಮಾಡಿದರೆ, ನಾನು ಮನೆ ಬಿಟ್ಟು ಪರ್ಮನೆಂಟಾಗಿ ಹೋಗಿ ಬಿಡ್ತಿನಿ. ಆತ್ಮಹತ್ಯೆ ಮಾಡಿಕೊಳ್ತೇನೆ ಅಂತ ಹೆದರಿಸಿದ. ನಾವು ಹತ್ತಾರು ಜನರಿಂದ ಅವನಿಗೆ ಬುದ್ಧಿ ಹೇಳಿಸಿದೆವು. ತಪ್ಪು ಮಾಡಿದೆವು ಅನ್ಸುತ್ತೆ. ಕಾಲೇಜು ಎಜುಕೇಶನ್ ಅಂದ್ರೆ ಈಗ ಸಿಟ್ಟಾಗ್ತಾನೆ. ನಿನ್ನೆ ಅಮ್ಮನ್ನ ಹೊಡೆದಿದ್ದಾನೆ. ಅವಳ ಮೊಬೈಲನ್ನು ನೀರಿಗೆ ಹಾಕಿದ್ದಾನೆ. ನಿನ್ನೆಯಿಂದ ಊಟ ತಿಂಡಿ ತಿನ್ನದೇ ಸತ್ಯಾಗ್ರಹ ಮಾಡ್ತಿದ್ದಾನೆ. ನಮಗೆ ಏನು ಮಾಡಬೇಕೋ ತೋಚುತ್ತಿಲ್ಲ... ಹೀಗೆ ಅರ್ಜುನನ ತಂದೆ ಮಹದೇವಪ್ಪ ತಮ್ಮ ಅಸಹಾಯಕತೆ ತೋಡಿಕೊಂಡರು.

“ಅರ್ಜುನ ಏನಾಗ್ತಿದೆ. ಏಕೆ ಇಷ್ಟೊಂದು ಕೋಪ. ಏಕೆ ಕಾಲೇಜಿಗೆ ಹೋಗ್ತಾ ಇಲ್ಲ. ಮತ್ತೇನು ಮಾಡ್ಬೇಕು ಅಂತ ಇದ್ದೀಯಾ? ನಿನಗೆ ಸಹಾಯ ಮಾಡಲು ನಮ್ಮ ಸೆಂಟರ್ ಪ್ರಯತ್ನ ಪಡುತ್ತದೆ. ನಿಸ್ಸಂಕೋಚವಾಗಿ ಮಾತನಾಡು" ಎಂದೆವು.

"ನನಗೆ ಕಾಲೇಜಿಗೆ ಹೋಗಲು ಇಷ್ಟವಿಲ್ಲ. ಸೈನ್ಸ್ ಇಷ್ಟವಿಲ್ಲ. ಕಾಮರ್ಸ್ ಕೊಡಿಸಿ ಅಂದ್ರೆ ಅಪ್ಪ ಅಮ್ಮ ಬಿಡಲಿಲ್ಲ. ಅದ್ರಲ್ಲೂ ನಮ್ಮಮ್ಮ ನೀನು ಸೈನ್ಸ್ ಕೋರ್ಸ್ಗೆ ಸೇರಬೇಕು. ನನ್ನ ಅಕ್ಕಂದಿರ ಮಕ್ಕಳೆಲ್ಲ ಇಂಜಿನಿಯರ್, ಡಾಕ್ಟರುಗಳಾಗಿದ್ದಾರೆ ಅಂತ ತಲೆ ತಿಂತಿರ್ತಾಳೆ, ಅದಕ್ಕೆ ನಮ್ಮಪ್ಪನೂ ಕೋಲೆ ಬಸವನ ತರಾ ಆಡ್ತಾರೆ. ಅವರಿಬ್ಬರನ್ನೂ ನಾನು ದ್ವೇಷಿಸುತ್ತೇನೆ. ಅವರಿಬ್ಬರೂ ಸರಿ ಇಲ್ಲ ಸರ್" ಎಂದ ಅರ್ಜುನ.

“ಹೇಗೆ?”

"ಹಾವು ಮುಂಗಸಿ, ನಾಯಿ ಬೆಕ್ಕಿನ ತರಾ ಯಾವಾಗಲೂ ಕಚ್ಚಾಡ್ತಾರೆ. ನಮ್ಮಪ್ಪನ ಗುಣ ಚೆನ್ನಾಗಿಲ್ವಂತೆ. ಬೇರೆ ಹೆಂಗಸರ ಸಹವಾಸ ಮಾಡ್ತಾರಂತೆ. ಈ ವಿಚಾರವಾಗಿ ಅಪ್ಪ ಅಮ್ಮ ಯಾವಾಗಲೂ ಜಗಳ ಆಡ್ತಾರೆ. ಅಪ್ಪ ಅಮ್ಮನ್ನ ಹೊಡೆದದ್ದೂ ಇದೆ. ಅಮ್ಮ ಅಪ್ಪನನ್ನು ಬಾಯಿಗೆ ಬಂದಂತೆ ಬೈತಾಳೆ. ಕೇಳೀ ಕೇಳಿ ಸಾಕಾಗಿಹೋಗಿದೆ. ಎಲ್ಲಾದರೂ ಹೋಗಿ ಬಿಡೋಣ ಅನ್ಸುತ್ತೆ"

"ಅವರೇನಾದ್ರೂ ಮಾಡಿಕೊಳ್ಳಲಿ, ನೀನು ಹಾಸ್ಟೆಲ್ನಲ್ಲಿ ಇದ್ದುಕೊಂಡು ಓದು ಅಥವಾ ನಿನಗಿಷ್ಟವಾದವರ ಮನೆಯಲ್ಲಿದ್ದುಕೊಂಡು ಓದು. ಈಗಿನ ಕಾಲದಲ್ಲಿ ಎಲ್ಲರೂ ಓದಿ ವಿದ್ಯಾವಂತರಾಗ್ಬೇಕಲ್ವ?”

"ಓದುತ್ತೇನೆ ನನಗೆ ಕಾಮರ್ಸ್ ಕೋರ್ಸ್ ಬೇಕು. ಜೊತೆಗೆ ಸಂಗೀತ ನನಗೆ ಬಹಳ ಇಷ್ಟ. ಕ್ಲಾಸಿಕಲ್ ಮ್ಯೂಸಿಕ್ ಕಲೀಬೇಕು. ಐದನೇ ಕ್ಲಾಸಿನಿಂದ ಒಂಬತ್ತನೇ ಕ್ಲಾಸಿನವರೆಗೆ ಸಂಗೀತ ಕೋರ್ಸ್ಗೆ ಹೋದೆ. ಹತ್ತನೇ ತರಗತಿಗೆ ಬಿಡಿಸಿಬಿಟ್ರು. ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ ಓದ್ಕೋ ಅಂದ್ರು. ನನ್ನ ಸಂಗೀತದ ಟೀಚರು ಬೇಜಾರು ಮಾಡಿಕೊಂಡರು. ನಿನಗೆ ಸಂಗೀತ ಕಲೀಯೋದಕ್ಕೆ ಇಷ್ಟವಿದೆ. ಜೊತೆಗೆ ಸಂಸ್ಕಾರವೂ ಇದೆ. ಆಮೇಲೆ ಮುಂದುವರೆಸು. ದಿನಾ ಸ್ವಲ್ಪ ಹೊತ್ತು ಹಾಡಿಕೋ ಎಂದರು. ನಮ್ಮಮ್ಮ ನನ್ನ ಹಾಡೋಕೆ ಬಿಡಲ್ಲ ಸರ್. ಹಾಸ್ಟೆಲ್ ಸೇರ್ತಿನಿ ಅಂದ್ರೆ ಅಪ್ಪ ಬಿಡೋಲ್ಲ. ಅಜ್ಜಿ ಮನೇಲಿದ್ದುಕೊಂಡು ಓದ್ತಿನಿ ಅಂದ್ರೆ ಅಮ್ಮ ಬಿಡಲ್ಲ. ಅಪ್ಪ ಅಮ್ಮನಿಗೆ ನನ್ನ ಇಷ್ಟನಿಷ್ಟಗಳಿಗಿಂತ ಅವರ ಇಷ್ಟ ನಿಷ್ಟಗಳೇ ಮುಖ್ಯ. ಎಷ್ಟು ಸಿಟ್ಟು ಬರ್ತದೆ ಅಂದ್ರೆ ಇಬ್ಬರನ್ನೂ ಬಡಿದು ಸಾಯಿಸಬಿಡಬೇಕೆನ್ನಿಸುತ್ತದೆ.”

"ಈಗ ಏನು ಮಾಡಬೇಕು ಅಂತೀದಿಯಾ?”

"ಇಲ್ಲ ಸರ್ ಇವರು ನನ್ನ ನಿರ್ಧಾರದಂತೆ ನಾನು ನಡೆಯಲು ಬಿಡುವುದಿಲ್ಲ. ಮಹಾ ಮೊಂಡರು. ಅವರ ಆಸೆಯಂತೆ ನಾನು ನಡೆಯಬೇಕು. ನೀವು ಅವರಿಗೆ ಹೇಳಿ. ನಾನು ಅವರ ಜೊತೆಯಲ್ಲಿರೋಲ್ಲ. ಹಾಸ್ಟೆಲ್ ಅಥವಾ ಅಜ್ಜಿ ಮನೆಯಲ್ಲಿರಲು ಅವರು ಒಪ್ಪಬೇಕು. ಬಿಕಾಂ ಮಾಡಬೇಕು, ಸಂಗೀತಗಾರನಾಗಬೇಕು. ಇದಕ್ಕೆ ಅವರು ಅಡ್ಡಿ ಬರಬಾರದು. ಅಡ್ಡಿ ಮಾಡಿದರೆ ನಾನು ಇವರಿಂದ ತಪ್ಪಿಸಿಕೊಂಡು ದೂರ ಹೋಗಿಬಿಡುತ್ತೇನೆ. ಅವರ ಕೈಗೆ ಸಿಗುವುದಿಲ್ಲ.” ಎಂದ.

ಫ್ಯಾಮಿಲಿ ಥೆರಪಿಯಲ್ಲಿ ಅರ್ಜುನ ಅವನ ಅಪ್ಪ, ಅಮ್ಮ, ಅಜ್ಜಿಯರನ್ನು ಸೇರಿಸಿ ಚರ್ಚೆ ಮಾಡಲಾಯಿತು. ಅಪ್ಪ ಅಮ್ಮನನ್ನು ಪ್ರತ್ಯೇಕವಾಗಿ ಬರಲು ಸೂಚಿಸಲಾಯಿತು. ಅವರ ನಡುವೆ ಸಾಮರಸ್ಯ ಹೆಚ್ಚಲು ಕ್ರಮವನ್ನು ಕೈಗೊಳ್ಳಲಾಯಿತು. ಕುಟುಂಬ ಒಟ್ಟಿಗೆ ಕುಳಿತು ಅರ್ಜುನ ಎಲ್ಲಿರಬೇಕೆಂದು ನಿರ್ಧರಿಸಿ ಎಂದು ತೀರ್ಮಾನವನ್ನು ಅವರಿಗೆ ಬಿಡಲಾಯಿತು. ಅಂತಿಮವಾಗಿ ಕಾಮರ್ಸ್ ಕೋರ್ಸ್, ಹಾಸ್ಟೆಲ್ ವಾಸ ಎಂದು ಅವರೇ ನಿರ್ಧರಿಸಿದರು.

ಲೇಖಕರು, ಖ್ಯಾತ ಮನೋವೈದ್ಯರು

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More