ಹೊನ್ನಂಬರಿ | ಬಿತ್ತಿದ ಬೀಜಾ ಹೂವ್ವಾಕ್ಕೇತಿ, ಬಾಳೇನೂ; ಲಕ್ಷ್ಮವ್ವನ ನೇಗಿಲ ಗೆರಿ ಮಾತು

ಜಾಗತೀಕರಣ ಬಿತ್ತುತ್ತಿರುವ ಹುಸಿ ಭರವಸೆಗಳಿಗೆ ಸದ್ಯ ಜಗತ್ತು ಮರುಳು. ಪರಿಣಾಮ, ಕೃಷಿಗೆ ಅನುತ್ಪಾದಕ ಕ್ಷೇತ್ರದ ಹಣೆಪಟ್ಟಿ ಕಟ್ಟಿಯಾಗಿದೆ. ಆದರೆ ಲಕ್ಷ್ಮವ್ವನವರಂಥ ರೈತರ ಮುಂದೆ ಅಂಥ ಸಮಸ್ಯೆಗಳೆಲ್ಲ ಝೀರೊ. ಹಾಗಾಗಿಯೇ ಶಾಲೆ ಕಲಿಯದಿದ್ದರೂ ಈಕಿ ಕೃಷಿಕರಿಗೆ ಮಾದರಿ ಎನಿಸಿದ ವನಿತೆ.

ಕೃಷಿ ಬಗ್ಗೆ, ಹಳ್ಳಿ ಬಾಳೆ ಬಗ್ಗೆ ಆ ಮಹಿಳೆಗೆ ಅಪಾರ ಕನಸು. ತಾನು ಕೃಷಿಯಲ್ಲೇ ಮಾದರಿಯಾಗಬೇಕೆಂಬ ಜಿದ್ದು ಸದಾ ಜೋಪಾನವಾಗಿತ್ತು. ಲಗ್ನ ನಿರಾಕರಿಸಿ ಒಕ್ಕಲುತನಕ್ಕೆ ನಿಂತಾಗಲೂ ಅಷ್ಟೆ, ಕೃಷಿಪ್ರೀತಿಯೇ ಜೀವನಪ್ರೀತಿಯಾಯಿತು. ‘ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೇ ಇಲ್ಲ’ ಎಂಬ ರೈತಗೀತೆಯ ಸಾಲು ಲಕ್ಷ್ಮವ್ವ ಹಡಪದರಿಗೆ ಹೇಳಿ ಮಾಡಿಸಿದ ಮಾತು.

ಧಾರವಾಡ ಜಿಲ್ಲಾ ಕೇಂದ್ರದಿಂದ 12 ಕಿಲೋಮೀಟರಿಗೆ ಮಂಡಿಹಾಳ ಅನ್ನೋ ಊರಿದೆ. ಲಕ್ಷ್ಮವ್ವ ಹಡಪದ ಹುಟ್ಟಿ ಬೆಳೆದದ್ದು ಇಲ್ಲೇ. ಶಾಲೆ ಕಲಿಯದ ಲಕ್ಷ್ಮವ್ವ ಈಗ ಇಡೀ ಊರಿಗೆ ಮಾದರಿ. ಜಾಗತೀಕರಣ ಬಿತ್ತುತ್ತಿರುವ ಹುಸಿ ಭರವಸೆಗಳಿಗೆ ಜಗತ್ತು ಮರುಳು. ಪರಿಣಾಮ, ಕೃಷಿಗೆ ಅನುತ್ಪಾದಕ ಕ್ಷೇತ್ರದ ಹಣೆಪಟ್ಟಿ. ಪ್ರತಿಕೂಲ ವಾತಾವರಣದಲ್ಲಿ ತ್ಯಾಗಗಳ ಮಗ್ಗಲುಗಳು ಬಹಳಷ್ಟಿದ್ದರೂ ಲಕ್ಷ್ಮವ್ವನವರಂಥ ಅದೆಷ್ಟೋ ರೈತರ ಮುಂದೆ ಅವೆಲ್ಲ ಝೀರೊ. ಹಿತಾಸಕ್ತಿಗಳನ್ನು ಬದಿಗೆ ಸರಿಸಿ ಕೃಷಿಗಾಗಿಯೇ ಬದುಕುವುದು ಹಾ ಹುಜೂರ್ ಎಂದಂತಲ್ಲ.

ಮಂಡಿಹಾಳ ಹಿಂದುಳಿದ ಹಳ್ಳಿ. ಅನಕ್ಷರಸ್ಥರ ಸಂಖ್ಯೆ ಹೆಚ್ಚು. ಸಮಸ್ಯೆಗಳಿಂದಾಗಿ ಪುರುಷರು ಒಕ್ಕಲುತನ ಮಾಡಲು ಹೈರಾಣಾಗುತ್ತಲೇ ಇದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ವರದಿಗಳು ಬಂದಾಗ ಮಂಡಿಹಾಳದ ಮಹಿಳೆಯರು ತಲ್ಲಣಿಸಿದ್ದಾರೆ. ತಳಮಳದ ಎಳೆಹೊತ್ತು ಗಂಡಂದಿರ ದೇಖರಾಕಿ ಮಾಡಿದ್ದಾರೆ. ಹಲವಾರು ಸಲ ಬೀಳದ ಮಳೆ ಗಣ್ಮಕ್ಕಳನ್ನು ಕೈಚೆಲ್ಲಿ ಕೂರುವ ಪರಿಸ್ಥಿತಿಗೆ ಎಳೆತಂದಿದೆ. ವ್ಯಂಗ್ಯ ಅಂದರೆ, ಜೋಡೆತ್ತಿನ ಕಮತವನ್ನು ಲಕ್ಷ್ಮವ್ವ ಒಬ್ಬಂಟಿಗರಾಗಿ ಅದೇ ಕಾಲದಿಂದ ಈಗಲೂ ನೀಗಿಸುತ್ತಿದ್ದಾರೆ.

ಲಕ್ಷ್ಮವ್ವರಿಗೀಗ 46 ವರ್ಷ. ಕೃಷಿಪ್ರೀತಿಯ ಮುಂದೆ ವಯಸ್ಸಿನ ದಣಿವಿಲ್ಲ. ಉತ್ತಿ ಬಿತ್ತುವುದೆಲ್ಲವೂ ಕರಗತ. ದಿನಾಲೂ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಹೊಲದಲ್ಲೇ ಠಿಕಾಣಿ. ಈಗ ಹೀಗಿರುವ ಲಕ್ಷ್ಮಿಯವರ ಮನಸ್ಥಿತಿ ಇಪ್ಪತ್ತು ವರ್ಷಗಳ ಹಿಂದೆ ಸಂಪೂರ್ಣ ಭಿನ್ನ. ಅಪ್ಪಾವ್ವ ಮದುವೆ ಮಾಡಲು ಮುಂದಾದಾಗ ಇವರ ಮನಸ್ಸಿನಲ್ಲೂ ಉತ್ಸುಕತೆ, ನೂರೆಂಟು ಕನಸು. ಸೊಸೆಯಾಗುವ ಮನೆಯನ್ನು ಬೆಳಗುವ ಹುಕಿ. ಅಕ್ಕ ಲಕ್ಷ್ಮಿಯ ಮದುವೆಯ ಸುದ್ದಿ ತಮ್ಮ ಶಿವಾನಂದನಿಗೆ ತಿಳಿದಾಗ ಆದದ್ದೆ ಬೇರೆ. ಅಕ್ಕನನ್ನ ಜೀವಕ್ಕಿಂತ ಹೆಚ್ಚು ಹಚ್ಚಿಕೊಂಡಿದ್ದನೀತ. ಮದುವೆಯಾದರೆ ಅಕ್ಕ ಗಂಡನ ಮನೆಗೆ ಹೋಗುತ್ತಾಳೆ, ಬಿಟ್ಟಿರಲು ಆಗೋಲ್ಲ ಅಂತ ಹಠಹಿಡಿದ. ಸದಾ ಅಕ್ಕನೊಟ್ಟಿಗಿರ್ತಿದ್ದ ಶಿವಾನಂದನ ಹಠ ಅವರಪ್ಪಾವ್ವರಿಗೆ ಚಿಂತೆಯಾಯಿತು. ಶಿವಾನಂದ ಅಕ್ಕನನ್ನು ಬಿಟ್ಟಿರಲು ಸುತಾರಾಂ ಸಿದ್ಧನಿರಲಿಲ್ಲ. ಆತನ ಹಠಕ್ಕೆ ತಂದೆ, ತಾಯಿ ಸೋಲಲೆಬೇಕಾಯಿತು. ತಮ್ಮನನ್ನು ಬಿಟ್ಟುಹೋಗುವ ವಿಚಾರ ಅಕ್ಕನಿಗೂ ಬರಲಿಲ್ಲ. ನೂರಾರು ಜನರಿಗೆ ಮಾದರಿಯಾಗುವ ಬದುಕೊಂದು ಆಗಿನ್ನೂ ಹೂವಾಗಿತ್ತು.

ಮದುವೆ ನಿರಾಕರಿಸಿದ ಕೆಲ ದಿನಗಳಲ್ಲೇ ಅಕ್ಕನ ಬಳಿ ಶಿವಾನಂದ್ ಮತ್ತೊಂದು ಅಹವಾಲಿಟ್ಟ. “ನಂಗ ಒಬ್ಬಾವಂಗ ಐದೆಕೆರೆ ಹೊಲದ ಉಸಾಬರಿ ಕಷ್ಟ ಅನ್ಸಾತೇತಿ. ಕಮತದ ಕಡೆ ಚಿತ್ತ ಕೊಡಲ,” ಎಂದು ಅಳಲು ತೋಡಿಕೊಂಡ. ಅಕಾಲಿಕ ಮಳೆ, ಆಳುಗಳ ಕೊರತೆ, ಬೀಜ, ಗೊಬ್ಬರಗಳ ಸಮಸ್ಯೆ ನಡುವೆ ಒಬ್ಬನಿಗೇ ಐದೆಕೆರೆ ಹೊಲದ ದೇಖರೇಕಿ ದುಸ್ತರವಾಗಿತ್ತು. ಅಳಲಿಗೆ ಕಿವಿಗೊಟ್ಟ ಲಕ್ಷ್ಮಿ, ಸಮಸ್ಯೆಗಳನ್ನು ಗಮನಿಸಿದರು. ಕೃಷಿ ನನಗಾಗಿಯೇ ಇದೆ ಅಂತನ್ನಿಸಿದ್ದೇ ತಡ, ಶಾಶ್ವತವಾಗಿ ಮದುವೆ ಕನಸನ್ನೇ ಮರೆತರು. ಕೃಷಿಯೇ ಬದುಕಾಯಿತು. ಮದುವೆಯಾದರೆ ಗಂಡ, ಮಕ್ಕಳು ಮತ್ತು ಸಂಸಾರದ ಹೊಣೆಗಳ ಗೋಜಲು ಕಮತಕ್ಕೆ ಅಡ್ಡಿ. ಅವತ್ತಿಂದ ಮೂರು ದಶಕಗಳ ಸಮೀಪ ಒಕ್ಕಲುತನ ಮಾಡುತ್ತಲೇ ಬಂದಿದ್ದಾರೆ.

ಲಕ್ಷ್ಮಿ  ರೈತರ ಆತ್ಮಹತ್ಯೆ ಬಗ್ಗೆ ಸೂಚ್ಯವಾಗಿ ಮರುಗುತ್ತಾರೆ: “ಸತ್ರ ಹುಟ್ಟಿ ಬರಾಕ ಇದೇನ ಹುಲಜನ್ಮ ಅನ್ರಿ. ಅನ್ನ ಬೆಳಿಯಾದು ಎಲ್ಲಾರ್ಗೂ ಆಗಂಗಿಲ್ಲ. ಬಿತ್ತಿದ ಬೀಜಾ ಹೂವ್ವಾಕ್ಕೇತಿ, ಬಾಳೇನೂ ಅಷ್ಟ, ಬಿತ್ತಬೇಕು.” ಅಕ್ಕ-ತಮ್ಮನ ಕೃಷಿ ದಗದ ಕೆಲ ವರ್ಷಗಳ ತನಕ ನಡೀತು. ಸಂಸಾರದಿಂದ ದೂರ ಉಳಿದ ಲಕ್ಷ್ಮಿ, ತಮ್ಮನಿಗೆ ಮದುವೆ ಮಾಡುವದರಿಂದ ಹಿಂದೆ ಸರಿಯಲಿಲ್ಲ. ಶಿವಾನಂದ್ ಮದುವೆ ಲಕ್ಷ್ಮಿ ಸಾರಥ್ಯದಲ್ಲೇ ನಡೆಯಿತು. ಶಿವಾನಂದ್’ಗೆ ಎರಡು ಮಕ್ಕಳಾದವು. ಸಮಸ್ಯೆಗಳ ಮಧ್ಯೆ ಮನೆ ವಾತಾವರಣ ಅಡ್ಡಿ ಇಲ್ಲ ಎನ್ನುವಂತಿತ್ತು. ಆಗಲೇ ದುರಂತವೊಂದು ಘಟಿಸಿತು. ಶಿವಾನಂದ್ ತಮ್ಮೆರಡು ಮಕ್ಕಳ ಜವಾಬ್ದಾರಿ ಜೊತೆಗೆ ಹೆಂಡತಿ, ತಾಯಿಯ ಜವಾಬ್ದಾರಿಯನ್ನು ಶಾಶ್ವತವಾಗಿ ಅಕ್ಕನಿಗೆ ವಹಿಸುವಂತಾಯ್ತು. ಕಾಯಿಲೆ ಅಂತ ಮಲಗಿದಾತ ಮೇಲೇಳಲೇ ಇಲ್ಲ.

ತಮ್ಮನ ಅಗಲಿಕೆ ದಿಕ್ಕೆಡಿಸಿದರೂ ಲಕ್ಷ್ಮಿ ಜಗ್ಗಲಿಲ್ಲ. ತಮ್ಮನ ಹೆಂಡತಿ, ಮಕ್ಕಳಿಗೆ ಧೈರ್ಯ ಹೇಳಬೇಕಿರುವವಳು ಅಳುತ್ತಾ ಕೂತರೆ ಹೇಗೆ? ಎಂದುಕೊಂಡು ನೋವು ಮರೆಯಲು ಕೃಷಿಯಲ್ಲಿ ಮೊದಲಿಗಿಂತ ಹೆಚ್ಚು ಸಕ್ರಿಯರಾದರು. ಆರು ಜನರ ಸಲಹುವ ಜವಾಬ್ದಾರಿ ಹೆಗಲೇರಿತ್ತು. ಕುಟುಂಬದ ಖರ್ಚು ಹೆಚ್ಚಾದಂತೆ ಕೃಷಿಯಲ್ಲಿ ಪ್ರಯೋಗಗಳು ಜಾಸ್ತಿಯಾದವು. ಒಣ ಬೇಸಾಯದ ಹೊಲದಲ್ಲಿ ಬದುವಿನಗುಂಟ ಕಾಡುಮರಗಳನ್ನು ಹಚ್ಚಿದರು. ಅಡ್ಡಾಡಿ, ಮಾಹಿತಿ ಕಲೆಹಾಕಿ, ಮಿಶ್ರಧಾನ್ಯ ಬೆಳೆದರು. ಮನೆಗೆ ಬೇಕಾದ ಕಾಳು-ಕಡ್ಡಿ ಸಿಕ್ಕವು. ಹೊಲದಂಚಿಗೆ ಬೆಳೆದ ಕಾಯಿಪಲ್ಲೆ ಮನೆ ಜವಾಬ್ದಾರಿಯ ವಜನನ್ನು ಹಗುರಗೊಳಿಸಿದವು. ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಸರತ್ತು ಮಾಡಲೆಬೇಕಿತ್ತು. ನುರಿತವರನ್ನು ಸಂಪರ್ಕಿಸಿ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದರು. ಹಣ್ಣಿನ ಮರಗಳನ್ನು ಬೆಳೆಸಿದರು. ಹೊಲದಲ್ಲಿ ಭತ್ತ, ಮೆಕ್ಕೆಜೋಳ, ಜೋಳ, ಗೋಧಿ ತೆನೆ ನಗತೊಡಗಿದವು. ಫಸಲಿಗೆ ಮಾರುಕಟ್ಟೆಯ ಬೆಲೆ ನಂಬಿ ಕೂರುವಂತಿರಲಿಲ್ಲ. ಇದು ಅನುಭವಕ್ಕೆ ದಕ್ಕಿದ್ದರಿಂದ ಬೆಳೆದದ್ದನ್ನು ತಾವೇ ಮಾರುವುದಕ್ಕೂ ಸಜ್ಜಾದರು. ಹೊಲದಲ್ಲಿ ಎಮ್ಮೆಗಳನ್ನು ಕಟ್ಟಿದರು. ಹೈನುಗಾರಿಕೆ ಶುರುವಾಯಿತು. ಮನೆಯ ಖರ್ಚೆಲ್ಲ ಸರಳವಾಗಿ ನಿಭಾಯಿಸಿದ ಲಕ್ಷ್ಮಿಯವರದೀಗ ಒಂದು ಲೆಕ್ಕಕ್ಕೆ ಹದವಾದ ಬದುಕು. ಅದಿಲ್ಲ, ಇದಿಲ್ಲ ಎನ್ನುತ್ತ ಉದ್ದದ ಪಟ್ಟಿ ಹೇಳುವ ರೈತರ ನಡುವೆ ಲಕ್ಷ್ಮವ್ವ ದೊಡ್ಡ ಮಾದರಿ.

ಲಕ್ಷ್ಮಿಯವರಿಗಿಂತ ಹೆಚ್ಚು ಜಮೀನಿರುವ ಅವರ ಊರಿನವರೇ ಕೆಲಸಕ್ಕೆ ನಗರದತ್ತ ಬರುತ್ತಾರೆ. ಕೃಷಿಯಲ್ಲಿ ಲಾಭವುಂಟೆಂದು ಗೊತ್ತಿದ್ದರೂ, ‘ಯಾರಿಗೆ ಬೇಕ್ರಿ ಪೇಚಾಟ? ಕಂಪನ್ಯಾಗ ಹನ್ನೆರಡು ಸಾವಿರ ಕೊಡತಾರ. ಬದಕ ನಡಸಾಕ ಅಷ್ಟ ಸಾಕು’ ಎಂಬ ಮನೋಭಾವ. ಜಾಗತೀಕರಣ ಹುಸಿ ಭರವಸೆಗಳನ್ನ ಆಳವಾಗಿ ಬಿತ್ತಿದೆ. ಉಳುಮೆ ಎಂದರೇ ಕೀಳರಿಮೆ ಎನ್ನುವಂತಾಗಿದೆ. ವರ್ತಮಾನ ಹೀಗೆ ಜಡ್ಡಿಗೆ ಬಿದ್ದಾಗ ಲಕ್ಷ್ಮಿಯವರಂಥ ಆಶಾಕಿರಣಗಳು ಇವೆ. ಉತ್ತರಗಳು ಗುಂಪಾಗಿ ಬೇಕಿಲ್ಲ. ಒಬ್ಬಂಟಿಯಾಗಿಯೂ ನೀಡಬಹುದು ಎಂಬುದಕ್ಕೆ ನಿದರ್ಶನ ಲಕ್ಷ್ಮವ್ವ ಹಡಪದ.

“ಕಸರತ್ತರೀ ಆ ಹೆಣಮಗಳದು. ಒಬ್ಬಂಟಿಯಾಗಿ ಉಳಮಿ ಮಾಡಾದ ಗಂಡ್ಮಕ್ಳಿಗೆ ಆಗಾತ್ತಿಲ್ಲ. ಒಬ್ಬ ಹೆಣ್ಮಗಳು ಅಜಮಾಸು ಮೂವತ್ತ ವರ್ಷ ಮಟ ಉಳಮಿ ಮಾಡೂದ ಮಷ್ಕೀರಿ ಅಲ್ಲ,” ಮುಗುಳ್ನಗೆ ತುಂಬಿಕೊಂಡೇ ಮಾತಾಡಿದ ಮಂಡಿಹಾಳ ಗ್ರಾಮಸ್ಥನೊಬ್ಬ. ರೈತರ ಆತ್ಮಹತ್ಯೆಯಂಥ ಸಮಸ್ಯೆಗಳ ಜೊತೆಗೆ ಅನಾರೋಗ್ಯಕರ ಸಮಾಜಕ್ಕೂ ಲಕ್ಮವ್ವರಂತಹ ವ್ಯಕ್ತಿತ್ವಗಳೇ ಮುಲಾಮು.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More