ನಿರಚನ | ಬಿಂಬವ್ಯೂಹದಲ್ಲಿ ಮೋದಿ ಬಂದಿ; ತಿರುಗುಬಾಣವಾಗಲಿದೆಯೇ ಬಿಜೆಪಿ ತಂತ್ರ?

ಡಿಜಿಟಲ್ ಜಗತ್ತಿನ ಪ್ರಚಾರ ತಂತ್ರದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ ನಿಜ. ಆದರೆ ತನ್ನ ತಂತ್ರದ ವ್ಯೂಹದೊಳಗೆ ತಾನೇ ಬಂದಿಯಾಗುತ್ತಿದೆ. ‘ಬ್ರ್ಯಾಂಡ್ ಮೋದಿ’ ಎಂಬ ಪ್ರಚಾರ ತಂತ್ರವು ಪ್ರಧಾನಿ ನರೇಂದ್ರ ಮೋದಿ ಅವರಿಗಿಂತಲೂ ಬೃಹತ್ತಾಗಿ ಬೆಳೆದಿರುವುದರ ಪರಿಣಾಮವಿದು. ಮುಂದೇನಾಗಬಹುದು?

ಭಾರತದ ಚುನಾವಣಾ ರಾಜಕಾರಣ ಏಕಕಾಲಕ್ಕೆ ಆಸಕ್ತಿಕರವೂ, ಸಂಕೀರ್ಣವೂ ಆದಂಥ ಹೊಸ ಸವಾಲುಗಳಿಗೆ ತನ್ನನ್ನು ಇಂದು ಒಡ್ಡಿಕೊಂಡಿದೆ. 2014ರ ಲೋಕಸಭಾ ಚುನಾವಣೆಯನ್ನು ಪ್ರಚಾರ ಹಾಗೂ ತಂತ್ರಗಾರಿಕೆಯ ದೃಷ್ಟಿಯಿಂದ ಹೊಸದೊಂದು ಅಧ್ಯಾಯಕ್ಕೆ ಕಾರಣವಾದ ಚುನಾವಣೆ ಎಂದೇ ಪರಿಗಣಿಸಲಾಗುತ್ತದೆ. ತಂತ್ರಜ್ಞಾನ ಆಧಾರಿತ ಚುನಾವಣಾ ಪ್ರಚಾರ, ಸಾಮಾಜಿಕ ಮಾಧ್ಯಮಗಳನ್ನು ಪರ-ವಿರುದ್ಧದ ಅಭಿಪ್ರಾಯಗಳನ್ನು ರೂಪಿಸಲು, ಕಟ್ಟಲು ವ್ಯವಸ್ಥಿತವಾಗಿ, ವ್ಯಾಪಕವಾಗಿ ಬಳಸಿಕೊಂಡ ಪರಿ, ಚುನಾವಣಾ ಪ್ರಚಾರಗಳನ್ನು ನೇರವಾಗಿ “ಬ್ರ್ಯಾಂಡ್ ಎಕ್ಸರ್ಸೈಸ್” ಮಾದರಿಯಲ್ಲಿ ಕಾರ್ಪೊರೆಟೀಕರಣಗೊಳಿಸಿದ್ದು, ಅಲ್ಲದೆ ಪಕ್ಷ ಅಥವಾ ವ್ಯಕ್ತಿಯ ಇಮೇಜ್ ರೂಪಿಸಲು, ಕೆಡವಲು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಾಲ್ ಸೈನ್ಯವನ್ನು ವ್ಯಾಪಕವಾಗಿ ಬಳಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಬಗೆಯ ಪ್ರಚಾರ ಮಾದರಿ ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೊಸದಲ್ಲವಾದರೂ ಭಾರತದ ಮಟ್ಟಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ವ್ಯಾಪಕವಾಗಿ ಅನಾವರಣಗೊಂಡಿತು. ಆ ಮೂಲಕ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ತನ್ನನ್ನು ವ್ಯವಸ್ಥಿತವಾದ ಚುನಾವಣಾ ಮಾರುಕಟ್ಟೆಗೆ ಒಡ್ಡಿಕೊಂಡಿತು. ಈ ಪ್ರಕ್ರಿಯೆಯಲ್ಲಿ ಬೇರಾವುದೇ ರಾಜಕೀಯ ಪಕ್ಷಗಳಿಗಿಂತ ಹೆಚ್ಚು ತೀವ್ರವಾಗಿ ತನ್ನನ್ನು ಒಡ್ಡಿಕೊಂಡ ರಾಜಕೀಯ ಪಕ್ಷ ಬಿಜೆಪಿ. 2014ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್ ಹಾಗೂ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಈ ಪ್ರಚಾರ ತಂತ್ರಗಳು ದೊಡ್ಡ ಪಾತ್ರ ವಹಿಸಿದ್ದವಾದರೂ ಅದಕ್ಕೊಂದು ವ್ಯಾಪಕತೆ ದೊರೆತದ್ದು 2014ರ ಚುನಾವಣೆಯಲ್ಲಿಯೇ. ನಂತರದ ದಿನಗಳಲ್ಲಿ ಈ ನವ ಚುನಾವಣಾ ಪ್ರಚಾರತಂತ್ರದ ವೈಖರಿ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮೂಲಕ ಹೆಚ್ಚು ವ್ಯಾಪಕಗೊಳ್ಳುತ್ತ, ಬೇರುಮಟ್ಟಕ್ಕೂ ವಿಸ್ತರಿಸುತ್ತ ಹೋಯಿತು.

ಈ ಮೇಲಿನ ಅಂಶಗಳನ್ನು ನಾವು ಸಂವಹನ ತಂತ್ರಜ್ಞಾನದಲ್ಲಿ ಉಂಟಾದ ಕ್ಷಿಪ್ರ ಬದಲಾವಣೆಗಳಿಗೆ ಸಮಾನಾಂತರವಾಗಿಯೂ ನೋಡಬೇಕಾಗುತ್ತದೆ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಆಗಿರುವ ‘ಕ್ರಾಂತಿಕಾರಕ’ ಬದಲಾವಣೆಗಳಿಂದಾಗಿ ಹೇಗೆ ಭಾರತೀಯರು ಅತ್ಯಲ್ಪ ಅವಧಿಯಲ್ಲಿಯೇ ಅತಿ ಕ್ಷಿಪ್ರವಾಗಿ ಡಿಜಿಟಲ್ ಜಗತ್ತಿನ ಕ್ರಿಯಾಶೀಲ ಭಾಗವಾದರು ಎನ್ನುವುದು ಇಲ್ಲಿ ಗಮನಾರ್ಹ. ಅದೇ ರೀತಿ, ಕೆಲ ವರ್ಷಗಳ ಹಿಂದೆಯಷ್ಟೇ ಅಂತಸ್ತಿನ ಸಂಕೇತವಾಗಿದ್ದ ಸ್ಮಾರ್ಟ್’ಫೋನ್’ಗಳು ಜನಸಾಮಾನ್ಯರ ದೈನಂದಿನ ಬದುಕಿಗೆ ಹೇಗೆ ಕ್ಷಿಪ್ರವಾಗಿ ಲಗ್ಗೆ ಇಟ್ಟವು, ಸ್ಮಾರ್ಟ್’ಫೋನ್ ಬಳಕೆ ಕೇವಲ ತಂತ್ರಜ್ಞಾನಪ್ರಿಯರಿಗೆ ಮಾತ್ರವೇ ಸೀಮಿತ ಎನ್ನುವ ಕಲ್ಪನೆ ಸರಿದು ಸಾಮಾನ್ಯ ಜನರು ತಮ್ಮ ದೈನಂದಿನ ವ್ಯವಹಾರಗಳಲ್ಲಿಯೂ ಅದನ್ನು ಹೇಗೆ ಸಮರ್ಥವಾಗಿ ಬಳಸಲು ಸಾಧ್ಯವಾಯಿತು, ಕಿರಿಯ ವಯಸ್ಸಿನ ಮತದಾರರ ಕೈಯಲ್ಲಿ ಸ್ಮಾರ್ಟ್’ಫೋನ್ ಹೇಗೆ ವಿಜೃಂಭಿಸತೊಡಗಿದವು ಎನ್ನುವ ಅಂಶಗಳು ಇಲ್ಲಿ ಮಹತ್ವ ಪಡೆಯುತ್ತವೆ. ಇದರೊಟ್ಟಿಗೆ ರಾಜಕೀಯ ಪಕ್ಷಗಳಿಗೆ ತಾವು ಹೇಳಬೇಕಾದ್ದನ್ನು, ತಿಳಿಸಬೇಕಾದ್ದನ್ನು ಪತ್ರಿಕೆ, ಎಲೆಕ್ಟ್ರಾನಿಕ್ ಮಾಧ್ಯಮಗಳ ಅಗತ್ಯವಿಲ್ಲದೆ ಹೆಚ್ಚು ವೈಯಕ್ತಿಕವಾಗಿ, ನೇರವಾಗಿ ಮತದಾರರಿಗೆ ತಲುಪಿಸಲು ಸಾಧ್ಯವಾಗಿರುವ ಅಂಶವೂ ಪ್ರಾಮುಖ್ಯ ಪಡೆಯುತ್ತದೆ. ಇದೇ ಉಸಿರಿನಲ್ಲಿಯೇ ಗಮನಿಸಬೇಕಾದ ಮತ್ತೊಂದು ಅಂಶ, ಭಾಷಣಗಳಿಗೆ ಇಲ್ಲದ ರೋಚಕತೆ ಹಾಗೂ ಮತಗಳನ್ನಾಗಿ ಪರಿವರ್ತಿಸುವ ಶಕ್ತಿ ಗಾಸಿಪ್’ಳಿಗೆ, ಪ್ರಚೋದನಕಾರಿ ಮಾತುಗಳಿಗೆ ಇರುತ್ತದೆ ಹಾಗೂ ಇಂಥದ್ದನ್ನೆಲ್ಲ ಹಬ್ಬಿಸಲು ಈ ನವಮಾಧ್ಯಮಗಳು ಹೇಳಿಮಾಡಿಸಿರುವಂಥದ್ದು ಎನ್ನುವುದು. ಮೇಲೆ ಹೇಳಿದ ಈ ಎಲ್ಲ ಅಂಶಗಳು ಇದಾಗಲೇ ಸಾಕಷ್ಟು ಸಾಮಾಜಿಕ, ರಾಜಕೀಯ ವಿಶ್ಲೇಷಣೆಗಳಿಗೆ ಒಳಪಟ್ಟಿರುವಂಥವಾಗಿದ್ದು, ಮುಂದಿನ ದಿನಗಳಲ್ಲಿ ಈ ಚರ್ಚೆ ಮತ್ತೂ ವ್ಯಾಪಕಗೊಳ್ಳಲಿದೆ.

ಈಗ ಇಡೀ ವಿಷಯದ ಕೇಂದ್ರಕ್ಕೆ ಬರೋಣ. ನವಮಾಧ್ಯಮಗಳ, ಡಿಜಿಟಲ್ ಜಗತ್ತಿನ ಪ್ರಚಾರ ತಂತ್ರದಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿ ಇಂದು ತನ್ನದೇ ವ್ಯೂಹದೊಳಗೆ ಬಂದಿಯಾಗುತ್ತಿದೆ. ಮತ್ತೂ ನಿಖರವಾಗಿ ಹೇಳಬೇಕೆಂದದರೆ, ತನ್ನದೇ ಪ್ರತಿಫಲನಗಳು ತನ್ನನ್ನೇ ದಿಕ್ಕುತಪ್ಪಿಸುವ ಬಿಂಬವ್ಯೂಹದೊಳಗೆ ಬಿಜೆಪಿಯ ‘ಬ್ರ್ಯಾಂಡ್ ಮೋದಿ’ ಎನ್ನುವ ಮೇರುಬಿಂಬ ಸಿಲುಕಿದೆ. ಬ್ರ್ಯಾಂಡ್ ಮೋದಿ ಪ್ರಧಾನಿ ಮೋದಿಯವರಿಗಿಂತಲೂ ಬೃಹತ್ತಾಗಿ ಬೆಳೆದಿರುವ ಸರ್ವಶಕ್ತ, ಸರ್ವವ್ಯಾಪಿ, ಸರ್ವಜ್ಞ ಬಿಂಬ! ಡಿಜಿಟಲ್ ಜಗತ್ತಿನ ಪ್ರಚಂಡ ಶಕ್ತಿ! ಇತ್ತೀಚಿನ ವರ್ಷಗಳಲ್ಲಿ ಭಾರತದ ಮಟ್ಟಿಗಂತೂ ಡಿಜಿಟಲ್, ಎಲೆಕ್ಟ್ರಾನಿಕ್, ಪ್ರಿಂಟ್ ಸಹಿತ ಯಾವುದೇ ಪ್ರಚಾರ ಮಾಧ್ಯಮಗಳಲ್ಲಿ ಹೊರಹೊಮ್ಮಿರುವ ಬೃಹತ್ ಬ್ರ್ಯಾಂಡ್ ಯಾವುದಾದರೂ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ಬ್ರ್ಯಾಂಡಿಂಗ್ ಮತ್ತು ಪಿಆರ್ ಈ ಎರಡರ ಮುಖೇನ ಏಕಮೇವಾದ್ವಿತೀಯವಾಗಿ ಮೋದಿಯವರ ಬಿಂಬವನ್ನು ನಿರ್ಮಿಸಲಾಗಿದೆ. ಹೀಗೆ ಅಮಿತೋತ್ಸಾಹದಲ್ಲಿ ಮೋದಿಯವರ ಬಿಂಬಗಳನ್ನು ಆಕಾಶದೆತ್ತರಕ್ಕೆ ಏರಿಸಿರುವುದೇ ಈಗ ಪ್ರಧಾನಿ ಮೋದಿಯವರಿಗೆ ತೊಡರಗಾಲಾಗುತ್ತಿರುವಂತಿದೆ. ಮೋದಿಯವರು ಆಡಳಿತಾತ್ಮಕವಾಗಿ ಸಾಧಿಸಿರುವುದು ಹಾಗೂ ಅವರನ್ನು ಬಿಂಬಿಸಲಾಗಿರುವುದರ ನಡುವೆ ದೊಡ್ಡ ಕಂದರವಿದೆ. ನೈಜ ಜೀವನದಲ್ಲಿ ಮೋದಿಯವರ ಆಡಳಿತ ತಂದಿರುವ ಬದಲಾವಣೆಗಳಿಗೂ ಡಿಜಿಟಲ್ ಲೋಕದಲ್ಲಿನ ತಂಗಾಳಿಗೂ ಸಂಬಂಧವೇ ಇಲ್ಲದಂತಾಗಿದೆ. ಜನರಿಗೆ ದಿನಗಳೆದಂತೆ ಮೋದಿಯವರ ಬಿಂಬ ಹಾಗೂ ಪ್ರಧಾನಿಯಾಗಿ ಅವರ ಆಡಳಿತಾತ್ಮಕ ನಿರ್ವಹಣೆಯ ನಡುವೆ ಇರುವ ಅಂತರ ಗೊತ್ತಾಗುತ್ತಿದೆ. ಸಮಸ್ಯೆ ಉದ್ಭವಿಸುತ್ತಿರುವುದು ಇಲ್ಲಿಯೇ, ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ, ಡಿಜಿಟಲ್ ಜಗತ್ತಿನಲ್ಲಿ ಪ್ರಶ್ನೆಗಳು ಏಳತೊಡಗಿದ ಕೂಡಲೇ ಪ್ರಶ್ನಿಸಿದವರನ್ನು ಟ್ರಾಲ್’ಗಳ ಮೂಲಕ ಹೈರಾಣಾಗಿಸುವ ಕೆಲಸ ಒಂದೆಡೆ ನಡೆದರೆ, ಮತ್ತೊಂದೆಡೆ ಮೋದಿಯವರ ಬಿಂಬಗಳಿಗೆ ಮತ್ತಷ್ಟು ಶಕ್ತಿ ತುಂಬುವ ಭಾಗವಾಗಿ ಏನೆಲ್ಲವನ್ನೂ ಹೇಳುವ ಪ್ರವೃತ್ತಿ ಹೆಚ್ಚಿದೆ. ಇದು ಪ್ರಸಕ್ತ ಸನ್ನಿವೇಶವನ್ನು ಮತ್ತಷ್ಟು ಜಟಿಲವಾಗಿಸಿದೆ.

ದಂತಕತೆಗಳಿಗೆ ಮೆರುಗು ಬರಬೇಕೆಂದರೆ ಒಂದೋ ಅವುಗಳ ಕಥಾನಾಯಕನ ಕೃತಿಗಳಲ್ಲಿ ಹೆಚ್ಚು ಸತ್ವವಿರಬೇಕು, ಇಲ್ಲವೇ ಆ ವ್ಯಕ್ತಿಯ ಬಗ್ಗೆ ಜನಸಾಮಾನ್ಯರಿಗೆ ಅತ್ಯಲ್ಪ ತಿಳಿದಿರಬೇಕು. ಮೋದಿಯವರ ವಿಷಯದಲ್ಲಿ ಇದೆಲ್ಲವೂ ತಿರುಗುಮುರುಗಾಗಿದೆ. ಮೋದಿಯವರನ್ನು ಏಕಕಾಲಕ್ಕೆ ದಂತಕತೆಯಾಗಿ, ಸಶಕ್ತ ಬ್ರ್ಯಾಂಡ್ ಆಗಿ ಹೀಗೆ ಎಲ್ಲ ದಿಕ್ಕುಗಳಿಗೂ ವಿಸ್ತರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದೆಲ್ಲದರ ಪರಿಣಾಮ ಮುಂಬರುವ ಚುನಾವಣೆಗಳಲ್ಲಿ, ಅದರಲ್ಲಿಯೂ 2019ರ ಲೋಕಸಭಾ ಚುನಾವಣೆ ವೇಳೆಗೆ ‘ಮೋದಿ ಬ್ರ್ಯಾಂಡ್’ ಅನ್ನು ರಿಲಾಂಚ್ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಇಂತಹ ರಿಬ್ರ್ಯಾಂಡಿಂಗ್, ರಿಪೊಸಿಷನಿಂಗ್ ಕೆಲಸಗಳಲ್ಲಿಯೇ ಪರಿಣತವಾಗಿರುವ ನೂರಾರು ಖಾಸಗಿ ಬ್ರ್ಯಾಂಡಿಂಗ್ ಕಂಪನಿಗಳು ಇದಕ್ಕೆಂದೇ ಕ್ಯೂ ನಿಲ್ಲಬಹುದು. ಆದರೆ ಹಾಗೆ ಮಾಡಲು ಹೊಸದೊಂದು ಕಥನ, ರೂಪುರೇಷೆ ಬೇಕಾಗುತ್ತದೆ, ಒಂದಷ್ಟು ಹೊಸ ಸ್ಕ್ರಿಪ್ಟ್’ಗಳು ಕೂಡ. ಇವೆಲ್ಲಕ್ಕೆ ಪೂರಕವಾಗಿ ಈವೆಂಟ್’ಗಳನ್ನೂ ಆಯೋಜಿಸಬೇಕಾಗುತ್ತದೆ. ಇದರರ್ಥ, ಪ್ರಧಾನಿಯವರು ಮತ್ತಷ್ಟು, ಮತ್ತಷ್ಟು ಮಾತನಾಡಬೇಕು, ಜನ ಮಗದಷ್ಟು, ಮಗದಷ್ಟು ಕೇಳಬೇಕು! ಇದೆಲ್ಲವೂ ಬೇಸರವಾಗದ ರಿಯಾಲಿಟಿ ಶೋ ಮಾದರಿಯಲ್ಲಿ ಇರಬೇಕು!

ಇಲ್ಲಿ ಇನ್ನೊಂದು ಮುಖ್ಯ ವಿಷಯವಿದೆ, ಅದು ಮೋದಿಯವರ ಬಿಂಬಗಳ ಡಿಜಿಟಲ್ ಫುಟ್ ಪ್ರಿಂಟ್ ಅಥವಾ ಡಿಜಿಟಲ್ ಹೆಗ್ಗುರುತುಗಳದ್ದು. ಮೋದಿಯವರ ಡಿಜಿಟಲ್ ಫುಟ್ ಪ್ರಿಂಟ್’ಗಳು ಸಾಗರ ಸದೃಶವಾಗಿವೆ. ಡಿಜಿಟಲ್ ಮೂಲಕ ಇತಿಹಾಸಕ್ಕೇನಾದರೂ ನೀವು ಕಣ್ಣು ಹಾಯಿಸಿದರೆ ಅಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಎಲ್ಲ ಸಾಧನೆಗಳ ಹಿಂದೆ ಮೋದಿಯವರ ನಾಯಕತ್ವವೇ ಗೋಚರಿಸಬಹುದು! ಹಿಂದೆಲ್ಲ ಓರ್ವ ವ್ಯಕ್ತಿ, ಸಂಸ್ಥೆಯ ಇತಿಹಾಸ ಎನ್ನುವುದು ಕಾಲಚಕ್ರದ ಸಹಜ ಚಲನೆಯ ಭಾಗವಾಗಿ ರೂಪುಗೊಳ್ಳುತ್ತಿತ್ತು. ಆದರೆ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಇತಿಹಾಸ ನಿರ್ಮಿಸುವುದು ಸುಲಭ ಎನಿಸತೊಡಗಿದೆ! ಬಹುಶಃ ಗಾಂಧಿ, ಅಂಬೇಡ್ಕರ್, ನೆಹರು ಸೇರಿದಂತೆ ಈ ದೇಶದ ಸ್ವಾತಂತ್ರ್ಯಪೂರ್ವದ ನೇತಾರರೇನಿದ್ದಾರೆ, ಅವರ ಇಡೀ ಜೀವನಚಿತ್ರದ ಕುರಿತಾದ ಸಾಹಿತ್ಯ, ಪಠ್ಯಗಳಿಗಿಂತಲೂ ಹೆಚ್ಚಿನ ಪಠ್ಯ ಮೋದಿಯವರ ಮೂರೂವರೆ ವರ್ಷದ ಆಡಳಿತದ ಬಗ್ಗೆ ಇಂದು ಸಿಗುತ್ತದೆ! ಅಷ್ಟೇ ಅಲ್ಲದೆ, ಇತಿಹಾಸವನ್ನು ಒತ್ತರಿಸುವ ಸಲುವಾಗಿಯೇ ರೂಪಿಸಿರಬಹುದೇನೋ ಎನಿಸುವಂಥ ಮೋದಿಯವರ ಕೆಲ ಬಿಂಬಗಳೇನಿವೆ- ಚರಕದ ಹಿಂದಿನ ಮೋದಿ, ಗಾಂಧಿ ಜಯಂತಿಯಂದು ಸ್ವಚ್ಛ ಭಾರತದ ಹೆಸರಿನಲ್ಲಿ ಪೊರಕೆ ಹಿಡಿದ ಮೋದಿ- ಅವು ಹೊಸದೊಂದು ಇತಿಹಾಸವನ್ನೇ ದೊಡ್ಡದನಿಯಲ್ಲಿ ಹೇಳುವಂತೆ ತೋರುತ್ತವೆ. ಸಮಸ್ಯೆ ಎಂದರೆ, ಹೀಗೆ ವ್ಯಕ್ತಿಯೊಬ್ಬರನ್ನು ದಿಢೀರನೆ ಐತಿಹಾಸಿಕ ಮಹಾಪುರಷರನ್ನಾಗಿಸುವ ಭರದಿಂದ ಡಿಜಿಟಲ್ ಲೋಕದಲ್ಲಿ, ಡಿಜಿಟಲ್ ಪ್ರಿಂಟ್’ಗಳಲ್ಲಿ (ಹೋರ್ಡಿಂಗ್) ರಚಿಸುವ ನವಕಾಲದ ಶಾಸನಗಳೇನಿವೆ ಅವುಗಳು ಶಿಲಾಶಾಸನಗಳ ರೀತಿಯಲ್ಲಿ ಜನಮಾನಸದ ಸ್ಮೃತಿಯಲ್ಲಿ ಇಂಗಲಾರವು, ಪರಂಪರೆಯ ಭಾಗವಾಗಲಾರವು. ಹೋರ್ಡಿಂಗ್’ಗಳು ಮೂವತ್ತು ದಿನಕ್ಕೆಲ್ಲ ಬದಲಾಗುತ್ತವೆ, ಶಿಲಾಶಾಸನಗಳು ಹತ್ತಾರು ತಲೆಮಾರಿನವರೆಗೆ ತಮ್ಮ ಉದ್ದೇಶವನ್ನು ಸಾರುತ್ತಿರುತ್ತವೆ. ಇವೆರಡರ ಆಚೆಗೂ ನೈಜ ಜನಾನುರಾಗಿಗಳು ಜನಪದರ ಸ್ಮೃತಿ ಶಾಸನಗಳಲ್ಲಿ ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಜೀಕುತ್ತಲೇ ಇರುತ್ತಾರೆ.

ಕಣ್ಣು ಹಾಯುವಲ್ಲೆಲ್ಲ ತುಂಬಿಸುವ ‘ಪಾಪ್ಯುಲೇಟ್’ ತಂತ್ರಗಾರಿಕೆ ಅಲ್ಪಾವಧಿಯಲ್ಲಿ ಫಲ ನೀಡಬಲ್ಲದು. ಈ ಪಠ್ಯ ಪ್ರವಾಹ ಅಥವಾ ‘ಕಂಟೆಂಟ್ ಫ್ಲಡಿಂಗ್’ ಎಂದು ಏನು ಕರೆಯುತ್ತೇವೆ, ಅದರಿಂದ ಇತಿಹಾಸ ನಿರ್ಮಾಣ ಆಗುವುದಿಲ್ಲ. ಬದಲಿಗೆ, ಅದು ನೀವು ಬ್ರ್ಯಾಂಡ್ ಮಾಡಲು ಹೊರಟ, ವ್ಯಕ್ತಿ, ಸಂಸ್ಥೆಯ ಮೇಲೆ ಹೊರಲಾರದ ಭಾರ ಹೊರಿಸುತ್ತದೆ. ಇಂಥ ಪ್ರಯತ್ನಗಳು ವ್ಯಕ್ತಿ, ಸಂಸ್ಥೆಗಳನ್ನು ಐತಿಹಾಸಿಕವಾಗಿಸದೆ ಕೇವಲ ‘ಜನಪ್ರಿಯ ಸಂಸ್ಕೃತಿ’ಯ ಭಾಗವಾಗಿಸತೊಡಗುತ್ತವೆ. ನಮ್ಮ ನಾಯಕರು ತಮ್ಮ ಕೃತಿಗಳಿಂದಾಗಿ ಜನಪರ ಇತಿಹಾಸವನ್ನು ನಿರ್ಮಿಸುವವರಾಗಬೇಕೇ ಹೊರತು ತಾವೇ ಜನಪ್ರಿಯ ಇತಿಹಾಸವಾಗಿ ಹೋಗಬಾರದು.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More