ಇಲಾಜು | ನಿಂತ ನೆಲ ಕುಸಿಯುತ್ತಿದರೂ ದನಿ ಎತ್ತದ ವೈದ್ಯಗಡಣ, ಮುಂದೇನು ಕತೆ?

ಅತ್ತ ಕೇಂದ್ರ ಸರ್ಕಾರ ತನ್ನ ಕೈಗೊಂಬೆಗಳೇ ತುಂಬಿರುವ ವೈದ್ಯಕೀಯ ಮಂಡಳಿ ರಚಿಸಲು ಮುಂದಾಗಿದೆ. ಇತ್ತ, ರಾಜ್ಯ ಸರ್ಕಾರ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಪರೋಕ್ಷವಾಗಿ ಇನ್ನಷ್ಟು ಅನುಕೂಲ ಒದಗಿಸಲು ಪ್ರಯತ್ನ ಮಾಡುತ್ತಿದೆ. ಆದರೆ ವೈದ್ಯಗಡಣ ಇದನ್ನೆಲ್ಲ ಸುಮ್ಮನೆ ಪಿಳಿಪಿಳಿ ನೋಡುತ್ತಾ ಕುಳಿತಿದೆ!

ಹಿಂದಿನ 60 ವರ್ಷಗಳಲ್ಲಿ ಸಾಧಿಸದೆ ಬಿಟ್ಟದ್ದನ್ನೆಲ್ಲ 60 ಗಂಟೆಗಳಲ್ಲಿ - ಅಲ್ಲಲ್ಲ, 60 ದಿನಗಳಲ್ಲಿ - ಅಲ್ಲ, 60 ವಾರಗಳಲ್ಲಿ ಮಾಡುತ್ತೇವೆಂದು ವಾಗ್ದಾನವಿತ್ತವರು ಗದ್ದುಗೆಯೇರಿ 180 ವಾರಗಳಾಗಿವೆ. ತನ್ನ ಸಾಧನೆಯ ವರದಿಯನ್ನು ಆಗಾಗ ನೀಡುತ್ತಿರುತ್ತೇನೆ ಎಂದಿದ್ದವರು ಬಾಯಿ ತೆರೆಯದಿರುವಾಗ, ಕಳೆದ ಲೋಕಸಭಾ ಚುನಾವಣೆಗೆ ಮೊದಲು ಪ್ರಕಟಿಸಿದ್ದ ಪ್ರಣಾಳಿಕೆಯನ್ನು ತೆರೆಯುವುದೊಳ್ಳೆಯದು.

ಪ್ರಣಾಳಿಕೆಯ 15ನೇ ಪುಟದಲ್ಲಿ ‘‘ನಮ್ಮದು ಬಡವರ, ಶೋಷಿತರ ಹಾಗೂ ಹಿಂದುಳಿದವರ ಸರ್ಕಾರವಾಗಲಿದೆ; ಅವರ ಕನಸುಗಳೆಲ್ಲವನ್ನೂ ಸಾಕಾರಗೊಳಿಸುವ ಸರ್ಕಾರವಾಗಲಿದೆ; ಅಂತ್ಯೋದಯದಲ್ಲಿ ಸಂಪೂರ್ಣವಾಗಿ ನಂಬಿಕೆಯುಳ್ಳ ನಾವು ಕಡು ಬಡತನ ಹಾಗೂ ಅಪೌಷ್ಟಿಕತೆಯನ್ನು ರಾಷ್ಟ್ರೀಯ ಆದ್ಯತೆಗಳಾಗಿ ಮಾಡಲಿದ್ದೇವೆ ಹಾಗೂ ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ಬಲಪಡಿಸಿ, ಅತ್ಯಂತ ಹಿಂದುಳಿದ 100 ಜಿಲ್ಲೆಗಳನ್ನು ಇತರ ಜಿಲ್ಲೆಗಳ ಮಟ್ಟಕ್ಕೆ ತರಲಿದ್ದೇವೆ; ಸಾರ್ವತ್ರಿಕ ಆಹಾರ ಸುರಕ್ಷತೆಯು ರಾಷ್ಟ್ರೀಯ ಸುರಕ್ಷತೆಯ ಅವಿಭಾಜ್ಯ ಅಂಗವಾಗಿದ್ದು, ಆಹಾರದ ಹಕ್ಕು ಕೇವಲ ಕಾಗದದಲ್ಲಿ ಅಥವಾ ರಾಜಕೀಯ ಘೋಷಣೆಯಾಗಿ ಉಳಿಯದೆ ಎಲ್ಲರಿಗೂ ದೊರೆಯುವಂತೆ ಮಾಡುತ್ತೇವೆ,’’ ಎಂದು ಹೇಳಲಾಗಿದೆ.

ಕಡಿಮೆ ದರದಲ್ಲಿ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಸುಲಭದಲ್ಲಿ ಲಭ್ಯವಾಗುವಂತೆ ಮಾಡುವ ಆಶ್ವಾಸನೆಯು ಪ್ರಣಾಳಿಕೆಯ 25ನೇ ಪುಟದಲ್ಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನವನ್ನು ಆಮೂಲಾಗ್ರವಾಗಿ ಪರಿಷ್ಕರಿಸಿ, ರಾಷ್ಟ್ರೀಯ ಆರೋಗ್ಯ ಖಾತರಿ ಅಭಿಯಾನವನ್ನು ಆರಂಭಿಸುವುದು; ಹೊಸ ಸಮಗ್ರ ಆರೋಗ್ಯ ನೀತಿಯನ್ನು ತರುವುದು; ಸರಕಾರಿ ಆಸ್ಪತ್ರೆಗಳನ್ನು ಆಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳೊಂದಿಗೆ ಸುಸಜ್ಜಿತಗೊಳಿಸುವುದು; ಮಕ್ಕಳ ಆರೋಗ್ಯ ಹಾಗೂ ಪೋಷಣೆಗೆ ಒತ್ತು ನೀಡುವುದು; ತುರ್ತು ಚಿಕಿತ್ಸೆಯ 108 ಸೇವೆಯನ್ನು ಎಲ್ಲೆಡೆಗೂ ವಿಸ್ತರಿಸುವುದು; ವೈದ್ಯ ವೃತ್ತಿಯ ನಿಯಂತ್ರಣಕ್ಕೆ ಸಣ್ಣ ಗಾತ್ರದ ಸಂಸ್ಥೆಯನ್ನು ರಚಿಸುವುದು ಇತ್ಯಾದಿ ಹಲವಾರು ಭರವಸೆಗಳನ್ನು ಅದರಲ್ಲಿ ನೀಡಲಾಗಿದೆ.

ಕಳೆದ 180 ವಾರಗಳಲ್ಲಿ ಈ ಪ್ರಣಾಳಿಕೆಯಲ್ಲಿ ಹೇಳಿರದ ಹಲವು ಕೆಲಸಗಳನ್ನು ಮಾಡಲಾಗಿದೆ, ಹೇಳಿರುವ ಹಲವು ಆಗದೇ ಉಳಿದಿವೆ. ರಾತೋರಾತ್ರಿ ನೋಟುಗಳೆರಡು ರದ್ದಾದವು, 85% ಹಣವು ಜನರ ಕೈತಪ್ಪಿ, ವಾರಗಟ್ಟಲೆ ಸಿಗದೆ ಅರ್ಥ ವ್ಯವಸ್ಥೆಯೇ ನೆಲ ಕಚ್ಚಿತು. ಮೊದಲು ಬೇಡವಾಗಿದ್ದ ಸರಕು ಹಾಗೂ ಸೇವಾ ತೆರಿಗೆಯು ನಡುರಾತ್ರಿಯಲ್ಲಿ ಹೇರಲ್ಪಟ್ಟಿತು; ಆಧಾರ್ ಚೀಟಿ ಎಲ್ಲದಕ್ಕೂ ಬೇಕೆಂದಾಯಿತು, ಅದಿಲ್ಲದೆ ಪಡಿತರವಿಲ್ಲ, ಶಾಲೆಯಿಲ್ಲ, ಆಸ್ಪತ್ರೆಯಿಲ್ಲ, ಹೆರಿಗೆಯಿಲ್ಲ, ವ್ಯಾಪಾರ-ವಹಿವಾಟಿಲ್ಲ, ಫೋನೂ ಇಲ್ಲ, ಏನೂ ಇಲ್ಲ ಎಂದಾಯಿತು. ಈ ಗದ್ದಲದಲ್ಲಿ ವಹಿವಾಟು ಶೇ. 45-80 ರಷ್ಟು ಕುಸಿಯಿತು, ಲಕ್ಷಗಟ್ಟಲೆ ಉತ್ಪಾದನಾ ಘಟಕಗಳು ಮುಚ್ಚಿಹೋದವು, ಶೇ.60ರಷ್ಟು ಉದ್ಯೋಗಗಳು ನಶಿಸಿ, ಲಕ್ಷಗಟ್ಟಲೆ ಕಾರ್ಮಿಕರು ಬೀದಿಪಾಲಾದರು, ರಾಷ್ಟ್ರೀಯ ಉತ್ಪನ್ನವು ಶೇ.2.2 ಕುಸಿಯಿತು, ಬ್ಯಾಂಕುಗಳಲ್ಲಿ ಮರಳಿ ಬಾರದ ಸಾಲಗಳು ಬೆಟ್ಟದೆತ್ತರವಾದವು.

ವರ್ಷಕ್ಕೆ 45 ಲಕ್ಷ ಜನರು ಬಗೆಬಗೆಯಿಂದ ವಂಚಿತರಾಗಿ ಅನ್ಯಾಯವಾಗಿ ಸಾವನ್ನಪ್ಪುತ್ತಿರುವಲ್ಲಿ ಕೈಯಲ್ಲಿದ್ದ ಚೂರುಪಾರು ಹಣವೂ, ಜೀವನಾಧಾರವಾಗಿದ್ದ ಸಣ್ಣ ಕೆಲಸವೂ ಕಿತ್ತುಕೊಳ್ಳಲ್ಪಟ್ಟಿದ್ದರಿಂದ ಎಲ್ಲರ ಹಸಿವನ್ನು ನಿವಾರಿಸುತ್ತೇವೆ ಎಂಬ ಭರವಸೆಗೆ 180 ವಾರಗಳಾದಾಗ ಹಸಿವು-ಬಡತನ-ನಿರುದ್ಯೋಗಗಳು ಮತ್ತಷ್ಟು ಹೆಚ್ಚಿದವು, ಆಧಾರ್ ಇಲ್ಲದೆ ಪಡಿತರ ತಪ್ಪಿ ಕೆಲವರು ಸತ್ತರೆಂಬ ವರದಿಗಳೂ ಬಂದವು. ಆದರೆ ದೇಶದ ಅತ್ಯಂತ ಶ್ರೀಮಂತನ ಆಸ್ತಿಯು ಕಳೆದ ಒಂದೇ ವರ್ಷದಲ್ಲಿ ಶೇ. 67ರಷ್ಟು, 2.5 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಿತು; ಅತಿ ಶ್ರೀಮಂತರ ಒಟ್ಟು ಆಸ್ತಿಯು ಶೇ. 26ರಷ್ಟು, 31 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಿತು.

ಶೇ. 38ರಷ್ಟು ಮಕ್ಕಳು ಕುಂಠಿತರಾಗಿ, ಪ್ರತಿ ಗಂಟೆಗೆ ಐದು ವರ್ಷದೊಳಗಿನ 100 ಮಕ್ಕಳು ಸಾಯುತ್ತಿರುವಾಗ, ಈ ಸರ್ಕಾರ ಅಧಿಕಾರಕ್ಕೇರಿದ ಬಳಿಕ ತನ್ನ ಮೊದಲ ಆಯವ್ಯಯ ಪತ್ರದಲ್ಲೇ ಮಕ್ಕಳ ಶಿಕ್ಷಣ, ಬೆಳವಣಿಗೆ ಹಾಗೂ ಆರೋಗ್ಯ ಕಾರ್ಯಕ್ರಮಗಳ ಅನುದಾನವನ್ನು 81,000 ಕೋಟಿಯಿಂದ 58,000 ಕೋಟಿಗೆ ಇಳಿಸಿತು. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಅನುದಾನವನ್ನು ಹೆಚ್ಚಿಸಲು ಹಣವಿಲ್ಲದಿದ್ದರೂ, ಉಳ್ಳವರಿಗೆ ಆರು ಲಕ್ಷ ಕೋಟಿಯಷ್ಟು ತೆರಿಗೆ ವಿನಾಯಿತಿ ನೀಡಿತು. ಹಸಿವನ್ನು ನಿವಾರಿಸುವ ಭರವಸೆಯು ಹುಸಿಯಾಗಿ, 2017ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನವು ಇನ್ನಷ್ಟು ಕೆಳಗಿಳಿದು 119ರಲ್ಲಿ 100ಕ್ಕಿಳಿಯಿತು. ಈ ಪಟ್ಟಿಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್‌ಗಳು ಭಾರತಕ್ಕಿಂತ ಮೇಲೆ, ಕ್ರಮವಾಗಿ 90, 85, 75 ಹಾಗೂ 72ನೇ ಸ್ಥಾನಗಳಲ್ಲಿದ್ದರೆ, ಬ್ರಿಕ್ಸ್ ಗುಂಪಿನ ದಕ್ಷಿಣ ಆಫ್ರಿಕಾ, ಚೀನಾ, ರಷ್ಯಾ, ಬ್ರೆಜಿಲ್ ಗಳು ಇನ್ನೂ ಮೇಲೆ, ಕ್ರಮವಾಗಿ 55, 29, 22 ಮತ್ತು 18ನೇ ಸ್ಥಾನಗಳಲ್ಲಿವೆ. ಚೀನಾವು 2007ರಲ್ಲಿ 47ನೇ ಸ್ಥಾನದಲ್ಲಿದ್ದು, ಈಗ 29ಕ್ಕೇರಿದರೆ, ಭಾರತವು ಅದೇ ಸಮಯದಲ್ಲಿ 94ರಿಂದ 100ಕ್ಕಿಳಿದಿದೆ.

ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಿ, ಸುಧಾರಿಸುವ ಭರವಸೆಯೂ ಅಲ್ಲಿಯೇ ಉಳಿದಿದೆ. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಆರೋಗ್ಯ ಸೇವೆಗಳ ಅನುದಾನದಲ್ಲಿ 6,000 ಕೋಟಿ ಕತ್ತರಿಸಿದ ಸರ್ಕಾರವು, ಮುಂದಿನ ವರ್ಷಗಳಲ್ಲಿ ಯಾವ ವಿಶೇಷ ಏರಿಕೆಯನ್ನೂ ಮಾಡದೆ, ಆರೋಗ್ಯ ಖಾತರಿ ಅಭಿಯಾನವನ್ನು ಕಾಗದದಲ್ಲಷ್ಟೇ ಉಳಿಸಿತು. ಪ್ರಣಾಳಿಕೆಯಲ್ಲಿ ಘೋಷಿಸಿದ್ದ ರಾಷ್ಟ್ರೀಯ ಆರೋಗ್ಯ ನೀತಿಯ ಕರಡನ್ನು ಅತ್ಯುತ್ಸಾಹದಿಂದ 2014ರ ಡಿಸೆಂಬರ್ 31 ರಂದು ಪ್ರಕಟಿಸಲಾಯಿತಾದರೂ, ಅದು ಜಾರಿಗೊಳ್ಳಲು 2017ರ ಮಾರ್ಚ್‌ವರೆಗೆ ಕಾಯಬೇಕಾಯಿತು. ಅಷ್ಟು ಕಾದರೂ, ಪ್ರಣಾಳಿಕೆಯಲ್ಲಿ ಹೇಳಲಾಗಿದ್ದ ಸುಧಾರಣಾ ಕ್ರಮಗಳಾವುವೂ ಈ ನೀತಿಯೊಳಗೆ ಕಾಣುವುದಿಲ್ಲ. ನಾವೀಗ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಅತ್ಯಂತ ಕಡಿಮೆ, ರಾಷ್ಟ್ರೀಯ ಉತ್ಪನ್ನದ ಶೇ.1.2ನ್ನು ವ್ಯಯಿಸುತ್ತಿದ್ದು, 2022ರ ವೇಳೆಗೆ ಅದನ್ನು ಕನಿಷ್ಠ ಶೇ.3ಕ್ಕೆ ಹೆಚ್ಚಿಸಬೇಕೆಂದೂ, ಸಾರ್ವತ್ರಿಕ ಆರೋಗ್ಯ ಖಾತರಿ ಯೋಜನೆಯನ್ನು ತರುವುದಾದರೆ ಇನ್ನೂ ಶೇ. 2ರಷ್ಟು ಹೆಚ್ಚಿನ ಅನುದಾನವು ಅಗತ್ಯವೆಂದೂ ತಜ್ಞರ ಸಮಿತಿಯು ಅಭಿಪ್ರಾಯಪಟ್ಟಿದೆ. ಆದರೆ ಈ ಹೊಸ ನೀತಿಯಲ್ಲಿ 2025ರ ವೇಳೆಗೆ ಕೇವಲ ಶೇ. 2.5ರಷ್ಟನ್ನು ಒದಗಿಸುವುದಾಗಿ ಹೇಳಲಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸುವ ಬಗ್ಗೆ ಯಾವುದೇ ಖಚಿತ ಭರವಸೆಗಳು ಈ ಆರೋಗ್ಯ ನೀತಿಯಲ್ಲಿ ಕಾಣಸಿಗುವುದಿಲ್ಲ. ಬದಲಿಗೆ, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಹಣವನ್ನು ಕೊಟ್ಟು ಸೇವೆಗಳನ್ನು ಪಡೆಯಲಾಗುವುದೆಂದು ಹೇಳಲಾಗಿದೆ.

ಇದರ ಬೆನ್ನಿಗೇ, ಜಿಲ್ಲಾಸ್ಪತ್ರೆಗಳನ್ನು 30 ವರ್ಷಗಳಿಗೆ ಖಾಸಗಿ ಗುತ್ತಿಗೆಗೆ ಒಪ್ಪಿಸುವ ಯೋಜನೆಯನ್ನು ನೀತಿ ಆಯೋಗವು ಪ್ರಕಟಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳಿಲ್ಲದೆ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ನೂರಾರು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಕರ್ನಾಟಕದಲ್ಲೂ ಗರ್ಭಿಣಿಯರು ದಾರಿ ಬದಿಗಳಲ್ಲಿ ಹೆರಬೇಕಾದಂತಹ ದುಸ್ಥಿತಿಯೊದಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸುವ ಬದಲಿಗೆ ವೈದ್ಯರನ್ನೇ ಈ ಲೋಪಗಳಿಗೆ ಹೊಣೆಯಾಗಿಸಿ ಹೀಯಾಳಿಸಲಾಗುತ್ತಿದೆ, ಸುಳ್ಳು ದೂರುಗಳಡಿ ಜೈಲಿಗೂ ತಳ್ಳಲಾಗುತ್ತಿದೆ. ಜನಾರೋಗ್ಯಕ್ಕೆ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವ ಸರ್ಕಾರಗಳು ಜನರ ಆರೋಗ್ಯ ರಕ್ಷಣೆಗೆ ಹಗಲಿರುಳೂ ಶ್ರಮಿಸುತ್ತಿರುವ ವೈದ್ಯರ ಕತ್ತು ಹಿಸುಕುವ ಕಾನೂನುಗಳನ್ನೂ ತರುತ್ತಿವೆ. ವೈದ್ಯಕೀಯ ಪರಿಷತ್ತು ಭ್ರಷ್ಟವಾಗಿದೆಯೆಂದು ಆರೋಪಿಸಿ, ಅದನ್ನು ತನಿಖೆಗೊಳಪಡಿಸುವ ಬದಲು ಸರ್ಕಾರಿ ಅಧಿಕಾರಿಗಳು ಹಾಗೂ ತನ್ನ ಕೈಗೊಂಬೆಗಳಿರುವ ವೈದ್ಯಕೀಯ ಮಂಡಳಿಯನ್ನು ರಚಿಸಲು ಕೇಂದ್ರವು ಮುಂದಾಗಿದೆ; ವೈದ್ಯಶಿಕ್ಷಣದಲ್ಲಿ ಲಾಭಕೋರ ಸಂಸ್ಥೆಗಳಿಗೆ ಅವಕಾಶ ಒದಗಿಸುವುದಕ್ಕೂ, ವೈದ್ಯರನ್ನು ತನ್ನ ಮುಷ್ಠಿಯೊಳಗೆ ಇರಿಸುವುದಕ್ಕೂ ಇದರಿಂದ ಸಾಧ್ಯವಾಗಲಿದೆ. ಕರ್ನಾಟಕದಲ್ಲೂ ತನ್ನ ಆಸ್ಪತ್ರೆಗಳನ್ನು ಪಾಳುಬಿಟ್ಟಿರುವ ಸರ್ಕಾ ರವು, ಖಾಸಗಿ ವೈದ್ಯರನ್ನು ಪೀಡಿಸಿ ಮಣಿಸಲೆಂದು ಕಾನೂನನ್ನು ತರಲು ಹೊರಟಿದೆ. ಕಾರ್ಪೊರೇಟ್ ಆಸ್ಪತ್ರೆಗಳ ಲಾಭಕೋರತನವನ್ನು ನಿಯಂತ್ರಿಸುವ ಹೆಸರಲ್ಲಿ, ಸಣ್ಣ ಹಾಗೂ ಮಧ್ಯಮ ಗಾತ್ರದ ಆಸ್ಪತ್ರೆಗಳನ್ನು ಮುಚ್ಚಿಸಿ, ಅವೇ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಇನ್ನಷ್ಟು ಅನುಕೂಲ ಒದಗಿಸಲು ಮುಂದಾಗಿದೆ. ಸರ್ಕಾರಗಳನ್ನು ವಿರೋಧಿಸುವ ಧೈರ್ಯವಿಲ್ಲದ ವೈದ್ಯಗಡಣವು ಪಿಳಿಪಿಳಿ ನೋಡುತ್ತಾ ಕುಳಿತಿದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More