ಸ್ಥಿತಿಗತಿ | ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ ತಂದಿದ್ದು ಯಾರಿಗಾಗಿ?

ಉನ್ನತ ಶಿಕ್ಷಣ ಇಲಾಖೆ ತರಲಿಚ್ಛಿಸಿರುವ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕದಿಂದ ಸದ್ಯದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಏಕೆಂದರೆ, ವಿಶ್ವವಿದ್ಯಾಲಯಗಳಲ್ಲಿ ಇದೆ ಎನ್ನಲಾದ ಅಕ್ರಮಗಳಿಗೆ ವಿವಿಗಳು ಎಷ್ಟು ಕಾರಣವೋ ಅಷ್ಟೇ ಪ್ರಮಾಣದಲ್ಲಿ ಉನ್ನತ ಶಿಕ್ಷಣ ಇಲಾಖೆಯೂ ಕಾರಣ

ಹಿಂದಿನ ವರ್ಷ ಅಧ್ಯಾಪಕರ ನೇಮಕಾತಿ, ಖರೀದಿ, ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳು, ಅಧ್ಯಾಪಕರ ಲೈಂಗಿಕ ದೌರ್ಜನ್ಯಗಳು ಮಾಧ್ಯಮಗಳಲ್ಲಿ ಸತತ ಚರ್ಚೆಯಲ್ಲಿದ್ದವು. ವಿಶ್ವವಿದ್ಯಾಲಯದ ಖಾಸಗಿ ಲೋಕಕ್ಕೆ ಸೀಮಿತವಾದ ಸಂಗತಿಗಳು ಸಾರ್ವಜನಿಕಗೊಂಡವು. ಇವೆಲ್ಲವೂ ಕೆಟ್ಟಿರುವ ವಿಶ್ವವಿದ್ಯಾಲಯಗಳನ್ನು ಸರಿಪಡಿಸುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಿಸಿದವು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯು, ಜಾರಿಯಲ್ಲಿದ್ದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆಯನ್ನು (2000) ತಿದ್ದಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ 2017ನ್ನು ತಂದಿದೆ.

2017ರ ಈ ವಿಧೇಯಕ ಈ ಕೆಳಗಿನ ಮುಖ್ಯ ಬದಲಾವಣೆಗಳನ್ನು ಒಳಗೊಂಡಿದೆ: ಅಧ್ಯಾಪಕರನ್ನು ನೇಮಕ ಮಾಡುವ ಕುಲಪತಿಗಳ ಅಧಿಕಾರವನ್ನು ಉನ್ನತ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ. ಸಾಮಗ್ರಿಗಳ ಖರೀದಿ, ರಸ್ತೆ, ಕಟ್ಟಡ, ಮೂಲಸೌಕರ್ಯಗಳ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ನಡೆಸುವ ಕುಲಪತಿಗಳ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಒಂದು ಕೋಟಿಗಿಂತ ಹೆಚ್ಚಿನ ಮೊತ್ತದ ಎಲ್ಲ ಖರ್ಚುವೆಚ್ಚಗಳನ್ನು ನಿರ್ಣಯಿಸುವ ಅಧಿಕಾರವನ್ನು ಉನ್ನತ ಶಿಕ್ಷಣ ಇಲಾಖೆಗೆ ನೀಡಲಾಗಿದೆ. ತಿದ್ದುಪಡಿ ವಿಧೇಯಕದಲ್ಲಿ ಪ್ರಾಧ್ಯಾಪಕರು ಕುಲಸಚಿವರಾಗಲು ಯೋಗ್ಯರಲ್ಲ, ಕೇವಲ ಐಎಎಸ್/ಕೆಎಎಸ್ ಅಧಿಕಾರಿಗಳು ಮಾತ್ರ ಕುಲಸಚಿವರಾಗಬಹುದೆನ್ನುವ ತೀರ್ಮಾನವಿದೆ. ಅಷ್ಟು ಮಾತ್ರವಲ್ಲ, ಮೌಲ್ಯಮಾಪನ ಕುಲಸಚಿವರು ಅಧ್ಯಾಪಕರೇ ಆಗಬೇಕೆಂದು ತಿದ್ದುಪಡಿ ವಿಧೇಯಕ ಸೂಚಿಸುವ ಮೂಲಕ ಪಾಠ ಪ್ರವಚನ, ಪರೀಕ್ಷೆ, ಮೌಲ್ಯಮಾಪನ ಇತ್ಯಾದಿಗಳನ್ನು ನಡೆಸಲು ಮಾತ್ರ ಅಧ್ಯಾಪಕರು ಯೋಗ್ಯ ಎನ್ನುವ ಪರೋಕ್ಷ ತೀರ್ಮಾನ ಕೂಡ ಮಾಡಿದಂತಿದೆ. ಇನ್ನು, ತಿದ್ದುಪಡಿ ವಿಧೇಯಕದ ಪ್ರಕಾರ ಐಎಎಸ್/ಕೆಎಎಸ್ ಅಧಿಕಾರಿಗಳು ಕುಲಸಚಿವರಾಗುವುದು ಮಾತ್ರವಲ್ಲ, ಅವರು ಪದನಿಮಿತ್ತ ಸಿಂಡಿಕೇಟ್ ಸದಸ್ಯರೂ ಆಗುತ್ತಾರೆ. ಆದರೆ ಮೌಲ್ಯಮಾಪನ ಕುಲಸಚಿವರಾಗುವ ಪ್ರಾಧ್ಯಾಪಕರು ಪದನಿಮಿತ್ತ ಸಿಂಡಿಕೇಟ್ ಸದಸ್ಯರಾಗುವುದಿಲ್ಲ.

ಜೊತೆಗೆ, ಪ್ರಸ್ತುತ ವಿಧೇಯಕದಲ್ಲಿ ಕುಲಪತಿಗಳಿಗೆ ವಿವಿಧ ಆಡಳಿತ ಸಮಿತಿಗಳಲ್ಲಿ ಚರ್ಚಿಸಬೇಕಾದ ವಿಷಯಗಳನ್ನು (ಅಜೆಂಡಾಗಳನ್ನು) ತೀರ್ಮಾನಿಸುವ ಅಧಿಕಾರ ಇದೆ. ಆದರೆ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಕುಲಾಧಿಪತಿಯು, ಆದೇಶದ ಮೂಲಕ, ನಿರ್ದಿಷ್ಟಪಡಿಸಬಹುದಾದಂಥ ಪರಿಶೀಲನಾಂಶಗಳನ್ನು ಕುರಿತು ಚರ್ಚಿಸಲು ಕಾರ್ಯನಿರ್ವಾಹಕ ಪರಿಷತ್ತಿನ ಸಭೆಗಳನ್ನು ನಡೆಸಲು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಬಹುದು ಮತ್ತು ಕುಲಪತಿಯು ಅಂತಹ ನಿರ್ದೇಶನಗಳನ್ನು ಪಾಲಿಸತಕ್ಕದ್ದೆಂದು 2017ರ ವಿಧೇಯಕ ತಾಕೀತು ಮಾಡುತ್ತಿದೆ. ಅಧ್ಯಾಪಕೇತರ ನಾಮನಿರ್ದೇಶಿತರು ಮೂರು ವರ್ಷ ಕಾಲ ಸಿಂಡಿಕೇಟ್ ಸದಸ್ಯರಾಗಿರಲು ಅವಕಾಶ ನೀಡುವ ತಿದ್ದುಪಡಿ ಕಾಯಿದೆಯು, ಅಧ್ಯಾಪಕರ ಸಿಂಡಿಕೇಟ್ ಸದಸ್ಯತ್ವದ ಅವಧಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿದೆ. ವಿಶ್ವವಿದ್ಯಾಲಯದ ಯಾವುದೇ ಆದೇಶ, ನಿರ್ಣಯ ಇತ್ಯಾದಿಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಾಶ ಮಾಡುವ ಅಧಿಕಾರವನ್ನು 2017ರ ವಿಧೇಯಕವು ಉನ್ನತ ಶಿಕ್ಷಣ ಇಲಾಖೆಗೆ ನೀಡುತ್ತಿದೆ. ಕುಲಪತಿಗಳ ತಾತ್ಕಾಲಿಕ ಗೈರುಹಾಜರಿ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕರಿಗೆ ಪ್ರಭಾರ ನೀಡುವ ಅವಕಾಶವಿದೆ. ಹಾಗೆಯೇ ಕುಲಸಚಿವರ ಗೈರುಹಾಜರಿಯಲ್ಲಿ ಆ ಹುದ್ದೆಯ ಜವಾಬ್ದಾರಿಯನ್ನು ಮತ್ತೊಬ್ಬ ಪ್ರಾಧ್ಯಾಪಕರಿಗೆ ನೀಡಲು ಅವಕಾಶವಿದೆ. ಆದರೆ 2017ರ ವಿಧೇಯಕವು ಬೇರೆ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪ್ರಭಾರ ನೀಡುವಂತೆ ನಿರ್ಬಂಧಿಸುತ್ತದೆ ಮತ್ತು ಕುಲಸಚಿವರ ಗೈರು ಹಾಜರಿಯಲ್ಲಿ ಪ್ರಭಾರ ನಿರ್ವಹಿಸುವ ಪ್ರಾಧ್ಯಾಪಕರ ಹಕ್ಕನ್ನು ನಿರಾಕರಿಸುತ್ತದೆ.

ತಿದ್ದುಪಡಿ ವಿಧೇಯಕ ಒಳಗೊಂಡಿರುವ ಮುಖ್ಯ ಬದಲಾವಣೆಗಳನ್ನು ಚರ್ಚಿಸುವ ಮುನ್ನ ತಿದ್ದುಪಡಿ ವಿಧೇಯಕವನ್ನು ರೂಪಿಸಿದ ವಿಧಾನ ಕುರಿತು ಕೆಲವು ಮಾತುಗಳನ್ನು ಹೇಳಲೇಬೇಕು. ಕಾಯಿದೆ ತಿದ್ದುಪಡಿಗೆ ಹಲವು ಕ್ಷೇತ್ರಗಳ ತಜ್ಞರನ್ನು ಸೇರಿಸಿ ಚರ್ಚಿಸಿದ ಉಲ್ಲೇಖಗಳು ಕಾಣವುದಿಲ್ಲ. ಅಷ್ಟು ಮಾತ್ರವಲ್ಲ, ತಿದ್ದುಪಡಿ ವಿಧೇಯಕ ಸಿದ್ಧಗೊಂಡ ನಂತರ ಅದನ್ನು ವಿಸ್ತೃತ ಸಾರ್ವಜನಿಕ ಚರ್ಚೆಗೆ ಒಳಪಡಿಸಿರುವುದು ಕೂಡ ಕಂಡುಬರುವುದಿಲ್ಲ. ಸಾರ್ವಜನಿಕ ಚರ್ಚೆಯ ಕೊರತೆ ಮಾತ್ರ ಈ ವಿಧೇಯಕವನ್ನು ಕಾಡುವುದಲ್ಲ; ವಿಧಾನಸಭೆಯಲ್ಲೂ ವಿಶೇಷ ಚರ್ಚೆ ನಡೆಯದೆ ಕೊನೇ ದಿನ ತಿದ್ದುಪಡಿ ವಿಧೇಯಕ ಪಾಸಾಗಿದೆ. ವಿಶೇಷ ಕಾಯಿದೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹಲವು ವಿಶ್ವವಿದ್ಯಾಲಯಗಳನ್ನು (ಕನ್ನಡ ವಿಶ್ವವಿದ್ಯಾಲಯ, ಸಂಸ್ಕೃತ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ, ಸಂಗೀತ ವಿಶ್ವವಿದ್ಯಾಲಯ) ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಗಮನಕ್ಕೆ ತರದೆ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕದೊಳಗೆ ತರಲಾಗಿದೆ.

ವಿಶ್ವವಿದ್ಯಾಲಯಗಳ ನೇಮಕಾತಿ, ಖರೀದಿ, ಕಾಮಗಾರಿಗಳಲ್ಲಿ ಅಕ್ರಮಗಳಿವೆ ಎನ್ನುವ ಆರೋಪಗಳನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಹಾಗೆಂದು, ಉನ್ನತ ಶಿಕ್ಷಣ ಇಲಾಖೆ ತರಲಿಚ್ಛಿಸಿರುವ 2017ರ ತಿದ್ದುಪಡಿ ವಿಧೇಯಕ ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಏಕೆಂದರೆ, ವಿಶ್ವವಿದ್ಯಾಲಯಗಳಲ್ಲಿ ಇವೆ ಎನ್ನುವ ಭ್ರಷ್ಟಾಚಾರ, ಅಕ್ರಮಗಳಿಗೆ ವಿಶ್ವವಿದ್ಯಾಲಗಳು ಎಷ್ಟು ಕಾರಣವೋ ಅಷ್ಟೇ ಪ್ರಮಾಣದಲ್ಲಿ ಉನ್ನತ ಶಿಕ್ಷಣ ಇಲಾಖೆ ಕೂಡ ಕಾರಣ. ಕುಲಪತಿ, ಕುಲಸಚಿವರ ನೇಮಕಾತಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ. ಒಂದು ವೇಳೆ ಇದು ನಿಜವಾದರೆ ದೊಡ್ಡ ಮೊತ್ತ ನೀಡಿ ಕುಲಪತಿ, ಕುಲಸಚಿವರಾದವರು ತಾವು ನೀಡಿದ ಮೊತ್ತವನ್ನು ಹಿಂದಕ್ಕೆ ಪಡೆಯಲು ವಿಶ್ವವಿದ್ಯಾಲಯಗಳ ನೇಮಕಾತಿ, ಖರೀದಿ, ಕಟ್ಟಡ ಕೆಲಸಗಳಲ್ಲಿ ಅಕ್ರಮ ನಡೆಸುವುದು ಅನಿವಾರ್ಯವಾಗುತ್ತದೆ. ಆದುದರಿಂದ ವಿಶ್ವವಿದ್ಯಾಲಯಗಳ ಅಕ್ರಮಗಳನ್ನು ತಡೆಯಲು ಎಲ್ಲ ಅಧಿಕಾರವನ್ನು ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೇಂದ್ರೀಕರಿಸುವುದು ಸರಿಯಾದ ಕ್ರಮವಲ್ಲ. ಉನ್ನತ ಶಿಕ್ಷಣ ಇಲಾಖೆಗೆ ವಿಶ್ವವಿದ್ಯಾಲಯಗಳ ಆಡಳಿತವನ್ನು ಸುಧಾರಿಸುವ ನಿಜವಾದ ಕಾಳಜಿ ಇದ್ದರೆ ಅಧಿಕಾರವನ್ನು ಕೇಂದ್ರೀಕರಿಸುವ ಬದಲು ವಿಕೇಂದ್ರೀಕರಿಸುವ ಅಗತ್ಯವಿದೆ. ಜೊತೆಗೆ ವಿಶ್ವವಿದ್ಯಾಲಯದ ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸುವ, ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವಗೊಳಿಸುವ, ಅಧಿಕಾರಸ್ಥರ ಜವಾಬ್ದಾರಿಯನ್ನು ಸರಿಯಾಗಿ ನಿಗದಿ ಮಾಡುವ ಕ್ರಮಗಳ ಅವಶ್ಯಕತೆ ಇದೆ.

ಇಡೀ ತಿದ್ದುಪಡಿ ವಿಧೇಯಕದಲ್ಲಿ ಎದ್ದುಕಾಣುವ ಮತ್ತೊಂದು ದೋಷವಿದೆ. ಅದೇನೆಂದರೆ, ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಶೈಕ್ಷಣಿಕ ಸ್ವಾಯತ್ತತೆ ಮತ್ತು ಆಡಳಿತದ ಸ್ವಾಯತ್ತತೆಯೆಂದು ಪ್ರತ್ಯೇಕಿಸಿ ನೋಡುವುದು. ಇದು ಸರಿಯಾದ ಕ್ರಮವಲ್ಲ. ವಿಶ್ವವಿದ್ಯಾಲಯಗಳು ತಮ್ಮ ಶೈಕ್ಷಣಿಕ ಸ್ವಾಯತ್ತತೆಯನ್ನು ಜಾರಿಗೊಳಿಸಲು ಮಾನವ ಸಂಪನ್ಮೂಲ ಬೇಕು. ಕಟ್ಟಡ, ತರಗತಿ ಕೊಠಡಿಗಳು, ರಸ್ತೆ, ನೀರು ಇತ್ಯಾದಿ ಭೌತಿಕ ಸವಲತ್ತುಗಳೂ ಬೇಕು. ಆದರೆ ತಿದ್ದುಪಡಿಗೊಂಡ ಸಾಮಾನ್ಯ ವಿಶ್ವವಿದ್ಯಾಲಯಗಳ ಕಾಯಿದೆ ಅಧ್ಯಾಪಕರ ನೇಮಕಾತಿ ಮತ್ತು ಒಂದು ಕೋಟಿ ರು. ಮೀರಿದ ಕಾಮಗಾರಿಗಳನ್ನು ಕೈಗೊಳ್ಳುವ ಅಧಿಕಾರವನ್ನು ಉನ್ನತ ಶಿಕ್ಷಣ ಇಲಾಖೆಗೆ ನೀಡಿದೆ. ಇಂದು ಅಧ್ಯಾಪಕರ ತಿಂಗಳ ಸಂಬಳ ಬಿಡುಗಡೆಗೊಳಿಸಲು ವಿಶ್ವವಿದ್ಯಾಲಯಗಳು ಲಂಚ ಕೊಡಬೇಕೆನ್ನುವ ಸುದ್ಧಿ ಇದೆ. ಇಂಥ ಸಂದರ್ಭದಲ್ಲಿ ನೇಮಕಾತಿ ಮತ್ತು ಖರೀದಿಗಳನ್ನು ಕೇಂದ್ರೀಕರಣಗೊಳಿಸಿದರೆ ತುಂಬಾ ಕೆಟ್ಟ ಸ್ಥಿತಿ ನಿರ್ಮಾಣವಾಗಬಹುದು. ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ಕುಲಸಚಿವರು ಉನ್ನತ ಶಿಕ್ಷಣ ಇಲಾಖೆಯ ಕಾರಿಡಾರಲ್ಲಿ ಕಾಮಗಾರಿ ಮತ್ತು ನೇಮಕಾತಿ ಫೈಲ್ ಹಿಡಿದುಕೊಂಡು ದಿನಗಟ್ಟಲೆ ಸುತ್ತಾಡಬೇಕಾಗಬಹುದು ಮತ್ತು ದೊಡ್ಡ ಮೊತ್ತವನ್ನು ಕಡತ ವಿಲೇವಾರಿಗೆ ನೀಡಬೇಕಾಗಬಹುದು.

ಇದನ್ನೂ ಓದಿ : ಸ್ಟೇಟ್ ಆಫ್ ದಿ ನೇಶನ್ | ಬಿಜೆಪಿಯ ಬೋಫೋರ್ಸ್ ಆಗಲಿದೆಯೇ ರಾಫೇಲ್?

ಆಡಳಿತ ನಿರ್ವಹಣೆ ಸುಧಾರಣೆಯ ಉದ್ದೇಶದಿಂದ ಆರಂಭಗೊಳ್ಳುವ ತಿದ್ದುಪಡಿ ವಿಧೇಯಕದಲ್ಲಿ ಎಲ್ಲೂ ತಿದ್ದುಪಡಿಯನ್ನು ಒತ್ತಾಯಿಸುವ ತಾತ್ವಿಕ ಚರ್ಚೆ ಇಲ್ಲ. ನಮ್ಮ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಅಸಮಾನತೆ ಇದೆ. ಅಷ್ಟೇ ಪ್ರಮಾಣದಲ್ಲಿ ಅಸಹನೆ ಕೂಡ ಇದೆ. ಹಲವು ದಶಕಗಳ ಆಧುನಿಕ ಶಿಕ್ಷಣದ ನಂತರವೂ ನಮ್ಮ ಸಮಾಜದ ಬಹುತೇಕರು ಇಂದು ಕೂಡ ತಮ್ಮ ಪರಂಪರೆಯಿಂದ ಬಂದ ಜ್ಞಾನವನ್ನು ಬಳಸಿಕೊಂಡು ಬದುಕುತ್ತಿದ್ದಾರೆ. ಇವರ ಸಮಾಜ, ಅರ್ಥ, ರಾಜಕೀಯ, ಸಂಸ್ಕೃತಿಗಳು ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಜಾಗ ಪಡೆದಿಲ್ಲ. ಇದರಿಂದಾಗಿಯೇ ನಮ್ಮ ಸಮಾಜದ ಬಹುತೇಕರು ನಮ್ಮೊಂದಿಗಿದ್ದೂ ಇಲ್ಲವಾಗಿದ್ದಾರೆ. ಇವೆಲ್ಲವನ್ನೂ ಒಳಗೊಳ್ಳುವ ಚರ್ಚೆ ತಿದ್ದುಪಡಿಗೆ ತಾತ್ವಿಕ ಚೌಕಟ್ಟು ಒದಗಿಸಬಹುದಿತ್ತು. ಆದರೆ ಆ ರೀತಿ ಆಗಿಲ್ಲ. ಇದರಿಂದ ಅಧಿಕಾರ ಕೇಂದ್ರೀಕರಣದ ಏಕಮಾತ್ರ ಉದ್ದೇಶದಿಂದ 2017ರ ತಿದ್ದುಪಡಿ ನಡೆದಿದೆ ಎನ್ನುವ ತೀರ್ಮಾನ ಸಾಧ್ಯ. ಇದು ನಿಜವಾದರೆ, ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಇದೊಂದು ಆಪಾಯಕಾರಿ ತಿದ್ದುಪಡಿಯಾಗುತ್ತದೆ. ಏಕೆಂದರೆ, ತಳಸ್ತರದ ಜನರು ಇತ್ತೀಚೆಗಷ್ಟೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸ್ವಲ್ಪ ಅಧಿಕಾರ ಪಡೆಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳ ಅಧಿಕಾರ ಕಿತ್ತುಕೊಂಡರೆ ತಳಸ್ತರದ ಜನರು ನಾಮಕಾವಸ್ಥೆ ಅಧಿಕಾರಿಗಳಾಗಬಹುದಷ್ಟೇ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More