ಬಹುಮುಖಿ | ನಾನು ಬ್ರಾಹ್ಮಣ ವಿರೋಧಿಯೇ? ಇಷ್ಟೆಲ್ಲ ನೆನಪಾಯಿತು!

ಹಣೆಯ ಮೇಲೆ ನಾಮ, ಗಂಧಗಳನ್ನು ಇಟ್ಟುಕೊಂಡವರು ನಮಗೆ ಕರ್ಮಠರಂತೆ, ಹೆಚ್ಚು ಜಾತಿವಾದಿಗಳಂತೆ ಕಾಣಬಹುದು. ಈಚಿನ ಕೆಲ ನಯವಂಚಕರನ್ನು ಕಂಡಾಗ ಇದು ನಿಜ ಕೂಡ ಎನಿಸುವುದುಂಟು. ಆದರೆ, ಹಳೆಯ ತಲೆಮಾರಿನವರನ್ನು ಕಂಡಾಗ ನಿಜಕ್ಕೂ ಸತ್ಯದರ್ಶನವಾಗುತ್ತದೆ

ಈಚೆಗೆ ಗೌರಿ ಹತ್ಯೆ ಕುರಿತು ಸುದ್ದಿವಾಹಿನಿಯೊಂದರಲ್ಲಿ ಮಾತನಾಡುವಾಗ ನಮ್ಮ ಎದುರಿಗೆ ಕುಂತಿದ್ದವರು ನಮ್ಮನ್ನು 'ಜಾತಿವಾದಿಗಳು' ಅಂತ ಕರೆದರು. ಗೌರಿ ಪರವಾಗಿ ಕುಂತಿದ್ದ ನಾವು ಮೂರೂ ಜನ ಬೇರೆಬೇರೆ ಜಾತಿಗೆ ಸೇರಿದವರಾಗಿದ್ದೆವು. ಆದರೆ ನಮ್ಮ ವಿರುದ್ಧ ವಾದಿಸಲು ಬಂದಿದ್ದ, ನಮ್ಮನ್ನು ಜಾತಿವಾದಿಗಳು ಎಂದು ಕರೆದ ಮೂರೂ ಮಂದಿ ಒಂದೇ ಜಾತಿಯವರಾಗಿದ್ದನ್ನು ಕಂಡು ನನಗೆ ಸಹಜವಾಗೇ ಕೋಪ ಬಂತು. "ನೀವು ಮೂರೂ ಮಂದಿ ಒಂದೇ ಜಾತಿಗೆ ಸೇರಿದ ವಟುಗಳು, ನಮ್ಮನ್ನು ಜಾತೀವಾದಿ ಅಂತೀರಲ್ಲ?" ಎಂದೆ. ಈ ವಾದ-ವಿವಾದವನ್ನು ಕಂಡ ನನ್ನ ಗೆಳೆಯರೊಬ್ಬರು ಮಾತಿನ ಮಧ್ಯೆ ತಮಾಷೆ ಮಾಡುತ್ತಲೇ, "ಕಡೆಗೂ ನಿನ್ನ ಬ್ರಾಹ್ಮಣ ವಿರೋಧ ಕಡಿಮೆಯಾಗಲಿಲ್ಲವಲ್ಲ!" ಎಂದರು. ಆತ ಇದನ್ನು ಬಹಳ ಹಗುರವಾಗಿ ಹೇಳಿದ್ದರೂ, "ನಾನು ಬ್ರಾಹ್ಮಣ ವಿರೋಧಿಯೇ? ನನ್ನೊಳಗೆ ಅಪಾರ ಪ್ರೀತಿ, ಗೌರವದಿಂದಿರುವ ಆಪ್ತ ಬ್ರಾಹ್ಮಣರೆಲ್ಲ ಕೆಟ್ಟವರೇ?" ಎಂದು ಮನಸ್ಸು ಮತ್ತೆಮತ್ತೆ ಕೇಳತೊಡಗಿತು. ನನ್ನ ಅರಿವಿನಲ್ಲಿ ಇಲ್ಲದ್ದನ್ನು ನನಗೆ ಆರೋಪಿಸುತಿದ್ದಾರಲ್ಲ, ಹಾಗಾದರೆ ನನ್ನೊಳಗೆ ಇರಬಹುದಾದ ಪೂರ್ವಗ್ರಹಗಳನ್ನು ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ? ಗೊಂದಲಕ್ಕೆ ಬಿದ್ದು ಯೋಚಿಸತೊಡಗಿದೆ.

ಲಂಕೇಶರೊಂದಿಗೆ ಎರಡು ದಶಕ ಕೆಲಸ ಮಾಡಿದ ನನಗೆ ಇಂಥ ಪಟ್ಟವೇ? ಮೇಷ್ಟ್ರು (ಲಂಕೇಶ್) ಬ್ರಾಹ್ಮಣ್ಯವನ್ನು ಅಸ್ತ್ರವಾಗಿ ಬಳಸುವ ಯಾರನ್ನಾದರೂ ಸಹಿಸುತ್ತಿರಲಿಲ್ಲ. ಅಂತೆಯೇ ಅನಗತ್ಯವಾಗಿ ಬ್ರಾಹ್ಮಣರ ಬಗ್ಗೆ ಕೋಪಗೊಂಡಿದ್ದನ್ನೂ ನಾನು ಕಂಡಿಲ್ಲ.

ಆಗ ಯುವಕ, ಪೆರಿಯಾರ್ ಮತ್ತು ದ್ರಾವಿಡ ಚಳವಳಿಗಳನ್ನು ತಲೆಗೆ ತುಂಬಿಕೊಂಡಿದ್ದ ನಾನು, ಅಪ್ಪಟ ಬ್ರಾಹ್ಮಣದ್ವೇಷಿಯಾಗಿದ್ದ ಸಂದರ್ಭ. ಒಮ್ಮೆ ಯಾವುದೋ ಕಾಯಿಲೆಯಿಂದಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೆ. ನನ್ನನ್ನು ನೋಡಲು ಬಂದ ಮೇಷ್ಟ್ರು, ಮಾಸ್ತಿಯವರ ಸಮಗ್ರ ಸಣ್ಣಕತೆಗಳ ಎರಡು ಸಂಪುಟಗಳನ್ನು ನನ್ನ ಕೈಗಿಟ್ಟು, "ಆಸ್ಪತ್ರೆಯಲ್ಲಿ ವೃಥಾಕಾಲ ಕಳೆಯಬೇಡ, ಈ ಕತೆಗಳನ್ನು ಓದು," ಅಂದರು. ಆ ಪುಸ್ತಕಗಳ ಮೇಲಿದ್ದ ಮಾಸ್ತಿಯವರ ನಾಮ ಕಂಡು ನನಗೆ ಅರಿವಿಲ್ಲದೆಯೇ ಮುಖ ಕಿವುಚಿದೆ. ಇದನ್ನು ಕಂಡ ಮೇಷ್ಟ್ರು, "ಫೂಲಿಶ್ ಫೆಲೋ. ಯಾವುದೇ ಪ್ರಿಜುಡೀಸ್ ಇಟ್ಟುಕೊಳ್ಳದೆ ಇವನ್ನು ಓದು. ಮಾಸ್ತಿ ಅದ್ಭುತ ಕತೆಗಾರ ಕಣಯ್ಯ," ಅಂದರು. ಮೇಷ್ಟ್ರು ಹೇಳಿದಾರಲ್ಲ, ಓದಿದೆಯಾ ಅಂತ ಕೇಳಬಹುದು ಅನ್ನುವ ಕಾರಣಕ್ಕೆ ಓದತೊಡಗಿದೆ. ಮೇಷ್ಟ್ರು ಹೇಳಿದಂತೆ ಮಾಸ್ತಿಯವರ ಅದ್ಭುತ ಕಥಾಲೋಕಕ್ಕೆ ನಾನು ತೆರೆದುಕೊಂಡೆ. ಕನ್ನಡ ಸಾಹಿತ್ಯದ ಒಂದು ಮಗ್ಗುಲಿನ ದರ್ಶನ ಪಡೆದ ಅನುಭವವಾಯಿತು. ನನ್ನ ಜಿಲ್ಲೆಯವರೇ ಆಗಿದ್ದ ಮಾಸ್ತಿಯವರನ್ನು ನನ್ನೊಳಗಿನ ಪೂರ್ವಗ್ರಹದಿಂದಾಗಿ ದೂರ ಇಟ್ಟಿದ್ದಕ್ಕೆ ನಾಚಿಕೆಯಾಯಿತು.

ಇಂಥದ್ದೇ ಕೆಲವು ಅನುಭವಗಳನ್ನು ನನ್ನನ್ನು ಸ್ಪಷ್ಟಪಡಿಸಬಹುದೆಂಬ ಕಾರಣಕ್ಕೆ ಇಲ್ಲಿ ಹೇಳಬೇಕಾಗಿದೆ. ಎಲ್ಲ ಜಾತಿಗಳಲ್ಲೂ ಇರುವಂತೆ ಬ್ರಾಹ್ಮಣರಲ್ಲೂ ಕೆಟ್ಟವರು ಮತ್ತು ಒಳ್ಳೆಯವರು ಇದ್ದಾರೆ. ನಾನು ಕಂಡ ಒಳ್ಳೆಯವರ ಅಸಂಖ್ಯಾತ ಉದಾಹರಣೆಗಳಿವೆ.

ಕೆಲ ವರ್ಷಗಳ ಹಿಂದೆ ಬನಶಂಕರಿಯ ವೆಂಕಟೇಶ್ವರ ದೇವಾಲಯದ ಆವರಣದೊಳಗಿನ ಮದುವೆ ಛತ್ರಕ್ಕೆ ನನ್ನ ಶ್ರೀಮತಿಯೊಂದಿಗೆ ಹೋಗಿದ್ದೆ. ಅದು ಅತ್ಯಂತ ದೊಡ್ಡ ವೆಂಕಟೇಶ್ವರ ವಿಗ್ರಹವಿರುವ ದೇವಾಲಯ. ಏಕಾದಶಿಯೋ ಏನೋ ಅಂದು ವಿಪರೀತ ಜನಸಂದಣಿ. ನಾವು ಬೇಗ ಬಂದು ಮದುವೆ ತಡವಾದ್ದರಿಂದ ಆ ಜನಸಂದಣಿಯನ್ನು ನೋಡುತ್ತ ದೇವಸ್ಥಾನದ ಎದುರು ನಿಂತೆವು. ನನ್ನ ಪತ್ನಿಗೆ, ಒಳಕ್ಕೆ ಹೋಗಿ ದೇವರ ದರ್ಶನ ಮಾಡಬೇಕೆಂಬ ಆಸೆ ಇದ್ದರೂ ಜನಸಂದಣಿ ನೋಡಿ ಹೊರಗೇ ನನ್ನೊಂದಿಗೆ ಉಳಿದಳು. ಇದ್ದಕ್ಕಿದ್ದಂತೆ ಗರ್ಭಗುಡಿಯಿಂದ ಓಡಿಬಂದ ವಯಸ್ಸಾದ ಅರ್ಚಕರೊಬ್ಬರು, "ದ್ವಾರಕಾನಾಥ್ ಅವರೇ, ನಿಮ್ಮನ್ನು ಆ ಪರಮಾತ್ಮನೇ ಇಲ್ಲಿಗೆ ಕರೆಸಿಕೊಂಡಿದ್ದಾನೆ. ದಯವಿಟ್ಟು ಒಳಗೆ ಬನ್ನಿ," ಎಂದು ಒತ್ತಾಯಿಸಿದರು! ನನಗೆ ಆಶ್ಚರ್ಯ, ಅನುಮಾನ, ಮುಜುಗರ ಎಲ್ಲವೂ ಒಟ್ಟಿಗೇ ಆಗತೊಡಗಿದವು. "ಇಲ್ಲ ಸ್ವಾಮಿಗಳೇ, ನನಗೆ ದೇವರು ದಿಂಡರಲ್ಲಿ ಅಷ್ಟೇನೂ ನಂಬಿಕೆ ಇಲ್ಲ. ಇವರನ್ನು ಕರೆದುಕೊಂಡು ಹೋಗಿ," ಎಂದು ನನ್ನ ಪತ್ನಿಯನ್ನು ಕಳಿಸಿ, ನಾನು ಹೊರಗುಳಿಯಲು ಪುಸಲಾಯಿಸಿದೆ. ಅರ್ಚಕರು ಒಪ್ಪಲಿಲ್ಲ. "ನಿಮ್ಮ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನೀವು ದೈವ ವಿರೋಧಿಗಳು, ಬ್ರಾಹ್ಮಣ ವಿರೋಧಿಗಳು. ಟಿವಿಯಲ್ಲಿ ನಿಮ್ಮ ಕಾರ್ಯಕ್ರಮ ತಪ್ಪದೆ ನೋಡುತ್ತೇನೆ. ನಿಮ್ಮ ವಿಚಾರ, ವಾದ ನನಗೆ ಇಷ್ಟವಾಗುತ್ತದೆ. ಆದರೂ ಚಿಂತಿಸಬೇಡಿ. ನಿಮಗೆ ದೇವರು ಬೇಡದಿದ್ದರೂ ದೇವರಿಗೆ ನೀವು ಬೇಕು. ಅದಕ್ಕೇ ನಿಮ್ಮನ್ನು ಆ ಪರಮಾತ್ಮನೇ ಇಲ್ಲಿಗೆ ಕರೆಸಿಕೊಂಡಿದ್ದಾನೆ," ಎಂದು ಒತ್ತಾಯಿಸಿದರು. ಇದನ್ನೆಲ್ಲ ಅಲ್ಲಿನ ಭಕ್ತಾದಿಗಳು ನೋಡತೊಡಗಿದರು. ಈ ಮುಜುಗರ ತಪ್ಪಿಸಿಕೊಳ್ಳಲು ದೇವಾಲಯದೊಳಕ್ಕೆ ಹೋದೆ. ಸೀದಾ ಗರ್ಭಗುಡಿಯ ಬಳಿ ಕರೆದೊಯ್ದವರು, ನಮ್ಮ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಿ, ದೇವರ ಮೇಲಿದ್ದ ಒಂದು ದೊಡ್ಡ ಹೂಹಾರ ತೆಗೆದು ನನ್ನ ಕೊರಳಿಗೆ ಹಾಕಿ, ಬುಟ್ಟಿ ತುಂಬ ಹಣ್ಣು ಕೊಟ್ಟು, ಅದನ್ನು ಯಾರ ಕೈಯಲ್ಲೋ ಎತ್ತಿಸಿಕೊಂಡು ಬಂದು ನನ್ನ ಕಾರಲ್ಲಿಡಿಸಿದರು! "ನೀವು ಹೀಗೇ ಟಿವಿಯಲ್ಲಿ ಮಾತಾಡ್ತಾ ಇರಿ, ನಮ್ಮಲ್ಲಿರುವ ಮೂಳರಿಗೆ ಹಾಗಾದರೂ ಬುದ್ದಿ ಬರಲಿ," ಎಂದು ಹರಸಿ ಕಳಿಸಿಕೊಟ್ಟರು. ಅವರಿಗೆ ನನ್ನ ಮೇಲಿನ ಪ್ರೀತಿಯ ಹೊರತಾಗಿ ಈ ಘಟನೆಯನ್ನು ಏನೆಂದು ವಿಶ್ಲೇಷಿಸಲಿ?

ಅಂಬೇಡ್ಕರ್ ಅವರನ್ನು ಕೂಡ ಬ್ರಾಹ್ಮಣ ವಿರೋಧಿ ಎಂದು ಕೆಲವರು ವಿಶ್ಲೇಷಿಸುತ್ತಾರೆ. ಅವರ ಎಲ್ಲ ಬರಹ ಮತ್ತು ಭಾಷಣಗಳನ್ನು ಓದಿದವರಿಗೆ ಹೀಗೆ ಅನ್ನಿಸಲು ಸಾಧ್ಯವೇ ಇಲ್ಲ. ತನಗೆ ವಿದ್ಯೆ ಕಲಿಸಿದ ಗುರುಗಳ ಹೆಸರನ್ನೇ ಈ ಭೀಮ 'ಅಂಬೇಡ್ಕರ್' ಎಂದು ತನ್ನ ಹೆಸರಿಗೆ ಅಂಟಿಸಿಕೊಳ್ಳಲಿಲ್ಲವೇ?

ಹಣೆಯ ಮೇಲೆ ನಾಮ, ಗಂಧಗಳನ್ನು ಇಟ್ಟುಕೊಂಡವರು ನಮಗೆ ಕರ್ಮಠರಂತೆ, ಹೆಚ್ಚು ಜಾತಿವಾದಿಗಳಂತೆ ಕಾಣುತ್ತಾರೆ. ಈಚಿನ ಕೆಲ ನಯವಂಚಕರನ್ನು ಕಂಡಾಗ ಇದು ನಿಜ ಕೂಡ ಎನಿಸುತ್ತದೆ. ಆದರೆ ಹಳೆಯ ತಲೆಮಾರಿನವರನ್ನು ಕಂಡಾಗ ನಿಜಕ್ಕೂ ಸತ್ಯದರ್ಶನವಾಗುತ್ತದೆ.

ನನ್ನೊಂದಿಗೆ ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆಯುತ್ತಿದ್ದ ಸತ್ಯಮೂರ್ತಿ ಆನಂದೂರು ಹೇಳಿದ ಘಟನೆ ಇದು. ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭ. ಕನ್ನಡ ಸಾರಸ್ವತ ಲೋಕದಲ್ಲೂ ಪರ-ವಿರೋಧಿಗಳಾಗಿ ಸಾಹಿತಿಗಳು ವಿಂಗಡವಾಗಿದ್ದರು. ಕಲಾಕ್ಷೇತ್ರದ ಒಂದು ಪಕ್ಕ ಪ್ರಗತಿಪರ ಸಾಹಿತಿಗಳು ಬಾಬರಿ ಮಸೀದಿಯನ್ನು ಕೆಡವಿದ್ದನ್ನು ವಿರೋಧಿಸಿ ಧರಣಿ ಕುಂತರೆ, ಮತ್ತೊಂದು ಕಡೆ ಸಂಪ್ರದಾಯವಾದಿ ಬಲಪಂಥೀಯ ಸಾಹಿತಿಗಳು ಅದನ್ನು ಸಮರ್ಥಿಸುವ ಯಾವುದೋ ಕಾರಣ ನೀಡಿ ಧರಣಿ ಕುಂತಿದ್ದರಂತೆ. ಶಿಶು‌ನಾಳ ಷರೀಫರ ಪದ್ಯಗಳನ್ನು ಹಾಡಿ ಪ್ರಚಾರಕ್ಕೆ ಬಂದ ಸಿ ಅಶ್ವಥ್ ಕೂಡ ಬಲಪಂಥೀಯರೊಂದಿಗೆ ಕುಂತಿದ್ದರು! ಈ ಮಧ್ಯೆ, ಆಟೋದಲ್ಲಿ ಅಲ್ಲಿಗೆ ಬಂದ ಇಳಿವಯಸ್ಸಿನ ಪುತಿನ ಅವರು, ಅತ್ತ-ಇತ್ತ ನೋಡುತಿದ್ದಾಗ, ಅವರ ಹಣೆಯ ಮೇಲಿನ ನಾಮ ಕಂಡ ಹಲವು ಮಂದಿ ಪ್ರಗತಿಪರರು, "ಸರ್ ನೀವು ಅಲ್ಲಿಗೆ ಹೋಗಿ," ಎಂದಾಗ, ಅವರು ನಿಧಾನವಾಗಿ ಇತ್ತ ಹೆಜ್ಜೆ ಹಾಕುತ್ತ, "ನಾನು ಇಲ್ಲಿನವನಪ್ಪ," ಎಂದು ಬಾಬರಿ ಮಸೀದಿಯನ್ನು ಕೆಡವಿದವರ ವಿರುದ್ಧ, ಪ್ರಗತಿಪರರ ಜೊತೆ ಬಂದು ಕುಂತರಂತೆ. ಇಂಥ ಸ್ಫಟಿಕದಷ್ಟು ಶುದ್ಧವಾದ ಜಾತ್ಯತೀತತೆಗೆ, ಮತಾತೀತತೆಗೆ ಬೆಲೆ ಕಟ್ಟಲು ಸಾಧ್ಯವೇ?

ಮುಂಬೈ ಸರಣಿ ಸ್ಫೋಟದ ವಿರುದ್ಧ ನ್ಯಾಯಾಂಗ ತನಿಖೆಗೆ ನ್ಯಾಯಮೂರ್ತಿ ಶ್ರೀಕೃಷ್ಣ ಆಯೋಗವನ್ನು ನೇಮಿಸಿದಾಗ, ಶ್ರೀಕೃಷ್ಣ ಅವರ ಹಣೆಯ ಮೇಲಿದ್ದ ದೊಡ್ಡ ನಾಮಗಳನ್ನು ಕಂಡು ನಾವೆಲ್ಲ, "ಇನ್ನು ಮುಗಿಯಿತು," ಎಂದು ತೀರ್ಮಾನಿಸಿಬಿಟ್ಟಿದ್ದೆವು. ಆದರೆ ಶ್ರೀಕೃಷ್ಣ ಅವರ ವರದಿ ಅತ್ಯಂತ ನಿಷ್ಠುರತೆಯಿಂದ ಕೂಡಿದ್ದು, ಸಂಘಪರಿವಾರದವರನ್ನು ಬೊಟ್ಟು ಮಾಡಿ ತೋರಿದಾಗ ನಾವು ಬೆಕ್ಕಸಬೆರಗಾಗಿ ತಲೆ ತಗ್ಗಿಸಿದ್ದೆವು!

ಕೆಲ ವರ್ಷಗಳ ಹಿಂದೆ ಶಾಂತವೇರಿ ಗೋಪಾಲಗೌಡರ ಕಾರ್ಯಕ್ರಮವೊಂದಕ್ಕೆ ತೀರ್ಥಹಳ್ಳಿಗೆ ಹೋದಾಗ, ಅನೇಕ ಮಂದಿ ಶಾಂತವೇರಿ ಅವರೊಂದಿಗೆ ಹೋರಾಟದಲ್ಲಿದ್ದ ಹಿರಿಯರು ಬಂದಿದ್ದರು, ಅವರಲ್ಲಿ ಅನೇಕರು ಬ್ರಾಹ್ಮಣರು ಎಂಬುದು ಗಮನಾರ್ಹ! ಅಂತೆಯೇ, ಕುವೆಂಪುರವರು ಸದಾ ನಮ್ರತೆಯಿಂದ ನೆನೆಯುವ ಅವರ ಗುರುಗಳಾದ ಟಿ ಎಸ್ ವೆಂಕಣ್ಣಯ್ಯನವರು ಬ್ರಾಹ್ಮಣರಲ್ಲವೇ?

ಇದನ್ನೂ ಓದಿ : ಬಹುಮುಖಿ | ಪಂಜಾಬಿನ ಸಿಖ್ಖರು ಕರ್ನಾಟಕದಲ್ಲಿ ಸಿಕ್ಲಿಗರಾದ ಸೋಜಿಗ

ಈಚೆಗೆ ಸುಡುಗಾಡುಸಿದ್ದರ ಸಂಘದ ರಾಜ್ಯಾದ್ಯಕ್ಷರಾದ ಲೋಹಿತಾಶ್ವ ಅವರ ಜೊತೆ ಅಲೆಮಾರಿ ಸಮುದಾಯಗಳನ್ನು ತಲುಪಲೆಂದು ದಾವಣಗೆರೆ ಕಡೆ ಹೊರಟಿದ್ದೆವು, ದಾರಿ ಮಧ್ಯೆ ಕಾಫಿ ಕುಡಿಯಲು ಒಂದು ಸಣ್ಣ ಹೋಟೆಲ್ ಬಳಿ ವಾಹನ ನಿಲ್ಲಿಸಿದೆವು. ನನ್ನನ್ನು ನೋಡಿ ಒಳಗಿಂದಲೇ ಓಡೋಡಿ ಬಂದ ವೃದ್ಧರು, "ಬನ್ನಿ ಬನ್ನಿ ದ್ವಾರಕಾನಾಥರು, ಶ್ರೀಕೃಷ್ಣ ಪರಮಾತ್ಮರು, ಈ ಕುಚೇಲನ ಆತಿಥ್ಯಕ್ಕಾಗೇ ಬಂದಿದ್ದೀರಿ," ಎಂದು ಬರಮಾಡಿಕೊಂಡರು. ನಾನು ಬೇಡಬೇಡವೆಂದರೂ ಕೇಳದೆ, ತಮ್ಮ ಹೋಟೆಲ್ಲಿನಲ್ಲಿರುವ ಎಲ್ಲ ತಿನಿಸುಗಳನ್ನೂ ಇಷ್ಟಿಷ್ಟಾಗಿ ಒಂದು ದೊಡ್ಡ ತಟ್ಟೆಯಲ್ಲಿ ತಂದಿಟ್ಟು, ಎಲ್ಲವನ್ನೂ ರುಚಿ ನೋಡುವವರೆಗೂ ಬಿಡಲೇ ಇಲ್ಲ! ನನ್ನ ಟಿವಿ ಡಿಬೇಟ್‌ಗಳು, ನನ್ನ ಬರಹ ಎಲ್ಲದರ ಬಗ್ಗೆ ಮಾತನಾಡುತ್ತ, "ನಮ್ಮ ಬ್ರಾಹ್ಮಣರಿಗೆ ಸರಿಯಾಗಿ ಬುದ್ಧಿ ಹೇಳುತ್ತೀರಿ. ಅವರಿಗೆ ಬುದ್ಧಿ ಬರಲ್ಲ ಬಿಡಿ. ನೀವೆಂದರೆ ನನಗೆ ಅದಕ್ಕೇ ಇಷ್ಟ," ಎಂದು ಎದೆತುಂಬಿ ಮಾತಾಡುತ್ತ ಪ್ರೀತಿ ತೋರಿದರು. ನಾನು ಎಷ್ಟೇ ಒತ್ತಾಯಿಸಿದರೂ ನನ್ನಿಂದ ಬಿಡಿಗಾಸೂ ಪಡೆಯಲಿಲ್ಲ! ಅವರು ತೋರಿದ ಪ್ರೀತಿಗೆ ನಾನು ಮೂಖನಾಗಿದ್ದೆ, ಭಾವುಕನಾಗಿದ್ದೆ. ಆ ಹಿರಿಯರ ಕಾಲು ಮುಟ್ಟಿ ನಮಸ್ಕರಿಸಿ, ಕಣ್ತುಂಬಿಕೊಂಡು ಅಲ್ಲಿಂದ ಹೊರಟೆ.

ಯುವ ವಕೀಲನಾಗಿದ್ದಾಗ ನಂಬೂದಿರಿಪಾಡ್ ಅವರ ಊರುಗೋಲಾಗಿ ಕೈಹಿಡಿದು ನಡೆದಾಗ, ಅದಾಗ ತಾನೇ ಉದಯೋನ್ಮುಖ ಕ್ರಾಂತಿಕಾರಿಯಾಗಿದ್ದವನು ಮಹಾಕವಿ ಶ್ರೀಶ್ರೀ ಅವರನ್ನು ಆಟೋದಲ್ಲಿ ಕೈಹಿಡಿದು ಕರೆತಂದಾಗ, ಗೊರೂರರನ್ನು ಕೈಹಿಡಿದು ಬಹಿರ್ದೆಸೆಗೆ ಕರೆದೊಯ್ದಾಗ ಬ್ರಾಹ್ಮಣ ವಿರೋಧಿ ಎನಿಸಲಿಲ್ಲ. ನನ್ನ ಆಪ್ತಮಿತ್ರ ಸಾಕೇತ್ ರಾಜನ್‌ನನ್ನೂ ಒಳಗೊಂಡಂತೆ ದಿನನಿತ್ಯ ಇಂದೂ ನನ್ನೊಂದಿಗೆ ಹೃದಯಕ್ಕೆ ಹೃದಯವಾಗಿರುವ ಅಸಂಖ್ಯಾತ ಪ್ರಗತಿಪರ ಸಂಗಾತಿಗಳನ್ನು ಅವರು ಹುಟ್ಟಿದ ಜಾತಿ ಕಾರಣಕ್ಕೇ ಹೇಗೆ ದೂರ ಮಾಡಲಿ, ಬೇರ್ಪಡಿಸಲಿ? ಇಂಥವರನ್ನು ನಾನು ಬ್ರಾಹ್ಮಣರೆಂದು ಅನುಮಾನಿಸಿದರೆ ಅದು ನನಗಾಗುವ ಅವಮಾನವಲ್ಲವೇ?

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More