ಹೊನ್ನಂಬರಿ | ಕೆಲ ಸಂಗತಿಗಳು ಕಲಹ ಸೃಷ್ಟಿಸಲೆಂದೇ ಅಷ್ಟೊಂದು ಇಷ್ಟವಾಗುತ್ತವಾ?

ಸಂಪ್ರದಾಯಸ್ಥ ಆಚಾರಿಗಳ ಮುದ್ದು ಮಗಳಿಗೆ ಚಿಕ್ಲಿಟ್ ಸಾಹಿತ್ಯ ಅಂದ್ರೆ ಪಂಚಪ್ರಾಣ. ಸ್ವಚ್ಛಂದವಾಗಿ ವಿಹರಿಸುವ ಕ್ರಿಶ್ಚಿಯನ್ನರ ಹುಡುಗಿ ಸ್ಟೆಲ್ಲಾಗೆ ಭಗವದ್ಗೀತೆ ಅಂದರೆ ಹೆಚ್ಚೇ ಅನಿಸುವಷ್ಟು ನಂಬಿಕೆ. ನಾವೇನೇ ಇರಬಹುದು, ಇನ್ನೊಬ್ಬರ ಇಷ್ಟಗಳು ನಮ್ಮೊಳಗೆ ಯಾಕೆ ತಳಮಳ ಸೃಷ್ಟಿಸಬೇಕು?

ಮುಂಜೇಲೆ ಎದ್ದ ಕೂಡಲೇ ಕಿವಿಗೆ ಬಿದ್ದದ್ದು ಬೀದಿಯಲ್ಲಿನ ವಾಹನಗಳ ಓಡಾಟದ ಸದ್ದು. ಯಾವನೋ ಉಢಾಳನಿರಬೇಕು! ಕಿವಿ ಹರಿಯುವಂತೆ ಬೈಕನ್ನು ಕೊಂಯ್ ಅನಿಸುತ್ತಿದ್ದ. ಅಸಲಿಗೆ ನಮ್ಮ ಓಣಿ ಅನುಗಾಲದಲ್ಲೂ ಸದಾ ಶಾಂತ. ಗದ್ದಲವಿಲ್ಲದ ಓಣಿಯ ಮಂದಿಗೆ ಕಿರಿಕಿರಿ ಉಂಟುಮಾಡುವುದರಲ್ಲಿ ಅವನ ಖುಷಿಯಿರಬೇಕು. ಮೆಲ್ಲಕ ಹಿತವಾಗಿ ಕೇಳಿಬರತೊಡಗಿದ್ದ ‘ಏ ಮೇರೆ ವತನೇ ಕೆ ಲೋಗೊ’ ಹಾಡಿಗೆ ಫಟಫಟಿಯ ಶಬ್ದ ಕಿರಿಕಿರಿ ಉಂಟುಮಾಡತೊಡಗಿತ್ತು. ಎದ್ದು ಟಿವಿ ಮುಂದೆ ಕೂತಿದ್ದ ದೋಸ್ತ ಯಾವುದೋ ರಿಯಾಲಿಟಿ ಶೋ ಕಾರ್ಯಕ್ರಮದ ಮರುಪ್ರಸಾರ ನೋಡುವುದರಲ್ಲಿ ತಲ್ಲೀನನಾಗಿದ್ದ. ಅವನ ಕೈಯ್ಯಲ್ಲಿದ್ದ ಗಾಜಿನ ವಾಟೆಯಿಂದ ಬಿಸಿಹಬೆ ಗಾಳಿಯೊಳಗೆ ಕೂಡಿಕೊಳ್ಳತೊಡಗಿತ್ತು.

ಮನೆ ಹಿತ್ತಲಲ್ಲಿ ಕೂಗುತ್ತಿದ್ದ ಹಕ್ಕಿಗಳ ಚಿಂವ್ ಚಿಂವ್, ಚಿಟಿಟಿಟಿ ಚಿಟಿಚಿಟ್ ಸಪ್ಪಳ ಕಿವಿಗೆ ಮುತ್ತಿಡುತ್ತಲೇ ಒಂಥರದ ಪ್ರಶಾಂತತೆ. ತುಂಬೆಗಿಡದ ಬಾಜುಕಿದ್ದ ಪೊದೆ ತುಂಬ ದಾಸವಾಳ ಹೂಗಳ ನಗು. “ದಾಸವಾಳದ ಬಾಜು ನೀ ಇರೂ ಕಡೆ ಇದನ ಹಚ್ಚಿರು. ದಿನಾ ಎರಡೆಲೆ ತಿನ್ನ ನನಮಗನ,” ಅಂತ ಅವ್ವ ಕೊಟ್ಟಿದ್ದ ತುಳಸಿ ಗಿಡ. ತಂದಾಗ ಇಷ್ಟಿದ್ದ ಅದು ಈಗ ಅರ್ಧ ದಾಸವಾಳ ಸಸಿ ಎತ್ತರಕ್ಕ ಬೆಳೆದಿತ್ತು. ಮುಖ ತೊಳೆದು ವಾಪಾಸು ಪಡಸಾಲಿಗೆ ಬಂದಾಗ ಕಸಬರಿಗೆ ನಡುಮನೆಯಲ್ಲಿ ಅಂಗಾತ ಬಿದ್ದಿತ್ತು. ಕೋಣೆಯಲ್ಲಿ ಧೂಳಿದ್ದರೂ ಕಸ ಹೊಡೆಯಲು ಮನಸಾಗಲಿಲ್ಲ. ಕಸದಲ್ಲೇ ರೂಂಮೇಟ್ ಹಚ್ಚಿದ್ದ ಊದಿನಕಡ್ಡಿ ವಾಸನೆ ಮನೆ ತುಂಬ ಹರಡಿ ಘಮ್ಮ್ ಅನ್ನುತ್ತಿತ್ತು. ಹೊರಗಡೆ ಮಬ್ಬು ಹಾಕಿದ ವಾತಾವರಣ. ಐತ್ವ್ಯಾರ ಆಗಿದ್ದರಿಂದ ಮನಸ್ಸಿಗೊಂಥರಾ ಹಿತ, ನಿರಾಳ ಭಾವ. ವಾರಗಳಿಂದ ಯಾವ ಫರಕು ಬೀಳದಿದ್ದರೂ ಐತ್ವಾರ ಅಂದ್ರೆ ಸಾಕು, ಮನದಲ್ಲಿ ಅದೆಂತದೋ ಸಮಾಧಾನದ ಗಾಳಿ.

ಭಾನುವಾರಕ್ಕೆ ಧಾರವಾಡದ ಬೆಳಗಿಗೆ ನಶೆ ಹಿಡಿಸುವಷ್ಟು ಶಕ್ತಿ. ಲಕ್ಷಾಂತರ ಮಂದಿಗೆ ಹುಟ್ಟಿದೂರಿಗಿಂತ ಹೆಚ್ಚಿನ ಅಮಲನ್ನ ತಲೆಗೇರಿಸಿದ ಊರಿದು. ತಡೆದು ಬರುವ ಮಳೆ ಹದವಾಗಿ ಜಡಿಯತೊಡಗಿದರೆ ಸೂರ್ಯನದ್ದು ವನವಾಸ. ಅಸಹಾಯಕ ಮಗುವಿನ ಕೊಸರಾಟದಂತಿರುತ್ತದೆ ಅವನ ಪರಿಸ್ಥಿತಿ. ಮಳೆಗೆ ರೊಜ್ಜು ರಾಡಿಯಾಗಿ ಕಿರಿಕಿರಿಯೆನಿಸಿದರೂ ವರುಣ ಕೃಪೆ ತೋರಿದರೇನೆ ಧಾರವಾಡಿಗರಿಗೆ ಖರೇ ಖುಷಿ. ಮಳೆಯ ತಂಪು ಸಮಾಧಾನ ಅಂತನಿಸಿದಾಗೆಲ್ಲ ಗಾಯಗಳ ಸುತ್ತ ತುರಿಸಿದಾಗ ಉಂಟಾಗುವ ಹಿತದಂತಹ ಅನುಭವ. ಬಾಲ್ಯದಲ್ಲಿ ಬಿದ್ದಾಗ ಮಂಡಿ ಮೇಲೆ ಕೆಂಪನೆ ಗಾಯಗಳು ನಗುತ್ತಿದ್ದವು. ಅಂತಹ ಗಾಯಗಳ ಸುತ್ತ ಎಡಗೈಯಿಂದ ಹದವಾಗಿ ನೀವಿದರೆ ಕಣ್ಣಿಗೆ ನಿದ್ದೆ ಹತ್ತಿದಂತಾಗುತ್ತಿತ್ತು. ಚುಟುಚುಟು ಎನ್ನುವ ಗಾಯ ನಿದ್ದೆಗೆ ರಜೆ ಹಾಕಿಸುತ್ತಿತ್ತು. ಮುಖ ಕಿವುಚಿ, ಕೂಳು ತಿನ್ನದೆ ಒದ್ದಾಡಿದಾಗೆಲ್ಲ ಅಜ್ಜಿಯ ಬಲಗೈ ತಲೆ ನೇವರಿಸುತ್ತಿತ್ತು. ಎಡಗೈ ಇಲಾಜು ಮಾಡಿದ್ದ ಗಾಯದ ಸುತ್ತ ಇರುತ್ತಿತ್ತು. ಇಡೀ ಭಾನುವಾರ ಧಾರವಾಡದೊಳಗೆ ತಣ್ಣಗೆ ಕಾಲುಚಾಚಿ ಮಲಗಿಕೊಂಡಿರುವ ಕೆಲವೊಂದಿಷ್ಟು ಓಣಿ, ರಸ್ತೆಗಳ ಒಳಹೊಕ್ಕು ಹರಗ್ಯಾಡಿದರೂ ಅಂತಹದೇ ಅನುಭವ. ಎಲ್ಲೆಲ್ಲಿಂದಲೋ ಬಂದವರು ಧಾರವಾಡವನ್ನ ಅದಕ್ಕೆ ಮುಕ್ಕಾಂ ಮಾಡಿಕೊಂಡಿರಬೇಕು. ಇಷ್ಟವಾಗಿದ್ದಕ್ಕೆ ಮುಕ್ಕಾಂ ಮಾಡಿಕೊಂಡಿರಬೇಕು ಎಂಬ ವಾದಕ್ಕೆ ಸಾಕಷ್ಟು ಕಾರಣಗಳು ಸಿಗುತ್ತಲೇ ಇವೆ.

ಸಾವಿರಾರು ಫರ್ಲಾಂಗು ನಡೆದರೂ ತಲೆಯಲ್ಲಿ ಏನೇನೋ ವಿಚಾರಗಳು, ಮೈಯಲ್ಲಿ ಕಾಣದ ದಣಿವು. ಮನಸ್ಸಿನಲ್ಲಿ ಗುದ್ದಾಟಗಳಿದ್ದರೂ ನಡುವೆ ಚಾಷ್ಟಿ ಜಾಹೀರಾತಿನಂತೆ ಏನೇನೋ ನೆನಪಾಗಿ ಮುಖವನ್ನ ಪ್ರೀತಿಸುವ ಮುಗುಳ್ನಗು. ಒಳಗೊಳಗಿನ ಈ ಗುದಮುರಗಿ ಆಟ ಹೀಗೆ ಚಾಲೂ ಇದ್ದಾಗೆಲ್ಲ ಆ ಲೇಖಕರು ನೆನಪಾಗಿಬಿಡುತ್ತಿದ್ದರು. ಜೀವನಪ್ರೀತಿಯನ್ನೇ ಹೊದ್ದು ಮಲಗಿದಂಥವರು, ತಮ್ಮ ಪತ್ನಿ ಇಲ್ಲವಾದ ತಿಂಗಳಲ್ಲೇ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಹೌದು! ಧಾರವಾಡವನ್ನ ಹಚ್ಚಿಕೊಂಡಿದ್ದಕ್ಕೆ ನಾನು ಹುಚ್ಚ ಅಂತ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಅದೇ ಲೇಖಕರೇ ಹೇಳಿಕೊಂಡಿದ್ದರು. “ನಮ್ಮಾಕೀನ ನಾನ ಮೊದಲ ಕಂಡಿದ್ದು ಇಲ್ಲೇ ಧಾರವಾಡದಲ್ಲೇ. ಕರ್ನಾಟಕ ಕಾಲೇಜಿನ ಗಣಪತಿ ಗುಡಿ ಐತೆಲ, ಅದ ಸಣ್ಣದಿತ್ತು ಆವಾಗ. ಅದರ ಮುಂದ ನಿಂತಾಗನ ಮೊದಲ ನೋಡಿದ್ದು. ಅವತ್ತಿಂದ ಅವಳಿಷ್ಟ ಎಂಬ ಕಾರಣಕ್ಕ ನನಗೊಂದ ನಮೂನಿ ಹುಚ್ಚ ಹಿಡಿದದ,” ಎನ್ನುತ್ತಲೇ ನಕ್ಕಿದ್ದರು. ಅವರ ಪತ್ನಿ ತೀರಿಕೊಂಡಿದ್ದು ಬಹುತೇಕ ಸಭಿಕರಿಗೆ ಗೊತ್ತಿರಲಿಲ್ಲ. “ಹಾಗಾದರೆ ಪ್ರೇಮ ಹುಚ್ಚಾ ಸಾರ್?” ಕವಿಗೋಷ್ಠಿ ಅಧ್ಯಕ್ಷರಿಗೆ ಪ್ರೇಕ್ಷಕರ ಮಧ್ಯದಲ್ಲಿಂದ ಪ್ರಶ್ನೆಯೊಂದು ತೂರಿಬಂತು. “ನಿಮ್ಮ ಪ್ರಶ್ನೆಯೊಳಗ ಕಳವಳ ಐತಿ. ನೀವ ಕೇಳಿದ ಧಾಟಿ ನೋಡಿದ್ರನ ನಿಮಗೂ ಹುಚ್ಚ ಹಿಡದಂಗೈತಿ,” ಲೇಖಕರು ಉತ್ತರಿಸುತ್ತಲೆ ಇಡೀ ಸಭಾಂಗಣದ ತುಂಬ ನಗು. ಹೀಗಿದ್ದ ಆ ಹಿರಿಯ ಲೇಖಕರ ನಗು ನೆನಪಾದಾಗೆಲ್ಲ ಆಶ್ಚರ್ಯವಾಗುತ್ತಿತ್ತು. ಅಗಲಿಕೆಯ ನೋವನ್ನ ಖುಷಿಯ ಬೆನ್ನ ಹಿಂದೆ ಅಡಗಿಸಿಡುವುದ್ಹೇಗೆ? ಪ್ರಶ್ನೆಗೆ ಅವರಿಂದ ಬಂದ ಉತ್ತರ: “ಬದುಕು ಆಸೆಯಿದ್ದಾಗ ಕೆಲವೊಮ್ಮಿ ತಪ್ಪ ವಿಳಾಸ ಹುಡ್ಕಿ ಬರೂ ನಗು, ನೆನಪು ಸೈತ ಬದುಕನ್ನ ಇನ್ನಿಲ್ಲದಂಗ ಪ್ರೀತಿಸುವಂಗ ಮಾಡ್ತಾವ.” ಉತ್ತರ ಮಜಕೂರ ಎನಿಸಿ, ಹೌದಲ್ಲ ಎನಿಸಿದ್ದಂತು ಖರೇ.

ಒತ್ತರಿಸಿ ಬರುವ ನೆನಪುಗಳಿಗ್ಯಾವ ಮುಲಾಜು? ಬದುಕಿನ ಸೀಮೆಯ ದಾಖಲಾತಿಗಳು ನೆನಪಿನ ವಕ್ತಾರಿಕೆಯ ಕುರುಹುಗಳೇ. ಅಲ್ವೇ ಮತ್ತೆ? ಇಲ್ಲವಾದರೆ, ಕಾಡಿ ಸುಮ್ಮಾಗಬೇಕಿದ್ದ ನೆನಪುಗಳು ನಿಟ್ಟುಸಿರು ಅಥವಾ ವ್ಯಂಗ್ಯಮಿಶ್ರಿತ ನಗುವಿಗ್ಯಾಕೆ ಕಾರಣವಾಗುತ್ತವೆ? ಒಮ್ಮೊಮ್ಮೆ ಸಹ್ಯ, ಕೆಲವೊಮ್ಮೆ ಭಾನಗಡಿ. ವಿರೋಧಾಭಾಸಗಳು ಮನುಷ್ಯನ ಹುಟ್ಟುಗುಣವಾ? ಉತ್ತರಗಳಿಗೆ ಸ್ಪಷ್ಟತೆ ಇಲ್ಲ. ತೊಳಲಾಟದ ಜಗದ ನಡುವೆ ಸಂಬಂಧಗಳು ಬದುಕನ್ನು ಸಮಾಧಾನಿಸುತ್ತವೆ, ಕೆಲವೊಮ್ಮೆ ಮನಸ್ಸನ್ನು ದುಃಖಕ್ಕೆಳೆದು ಹಾಕುತ್ತವೆ. ಸಂಬಂಧಗಳು ಇನ್ನಿಲ್ಲವಾ? ಅನಿಸಿದಾಗಲೇ ಅದೆಷ್ಟೋ ಸಂಗತಿಗಳು ಅರಿವಾಗುತ್ತವೆ ಎನಿಸುತ್ತದೆ. ಹಾಳೆ-ಪದಗಳಂತಹ ಕೂಡುವಿಕೆ ಮನುಷ್ಯನಲ್ಲಿ ಸಾಧ್ಯವಾಗುವುದಿಲ್ಲವೇಕೆ? ದುಃಖವನ್ನು ಹೇಳಿಕೊಳ್ಳಲು ಹಿಂಜರಿಕೆಯ ಕಾಲವಿದು. ನಮ್ಮ ದುಗುಡ ಪರರ ಮಾತಿನ ಬೇಧಿಯ ಸರಕಾದೀತು ಎಂಬ ಹೆದರಿಕೆ. ನಂಬಿಕೆಯೂ ಅಷ್ಟು ದುಬಾರಿಯಾ? ಮತ್ತೆ ಮತ್ತೆ ಕೇಳಿಕೊಂಡಾಗ ಅದೇ ತೊಳಲಾಟ. ಬದುಕು ಅಂದರೆ ನಂಬಿಕೆ. ಹೌದು ನಿಜ, ಒಪ್ಪುವ ಮಾತೇ. ಆದರೆ ಘಾತದ ಮುಂದೆ ಅದು ಅರ್ಥ ಕಳೆದುಕೊಂಡುಬಿಡುತ್ತದಲ್ಲ? ಬಾಳನ್ನು ಸಹ್ಯಗೊಳಿಸುವ ಸಂಗತಿಗಳಿಗೂ ಕಟ್ಟುಪಾಡು ಹೇರುವುದು ಮೋಸವೇ?

ಇದನ್ನೂ ಓದಿ : ಹೊನ್ನಂಬರಿ | ಬಿತ್ತಿದ ಬೀಜಾ ಹೂವ್ವಾಕ್ಕೇತಿ, ಬಾಳೇನೂ; ಲಕ್ಷ್ಮವ್ವನ ನೇಗಿಲ ಗೆರಿ ಮಾತು

ಸಂಪ್ರದಾಯಸ್ಥ ಆಚಾರಿಗಳ ಮುದ್ದು ಮಗಳಿಗೆ ಚಿಕ್ಲಿಟ್ ಸಾಹಿತ್ಯ ಅಂದ್ರೆ ಪಂಚಪ್ರಾಣ. ಸ್ವಚ್ಛಂದವಾಗಿ ವಿಹರಿಸುವ ಕ್ರಿಶ್ಚಿಯನ್ನರ ಹುಡುಗಿ ಸ್ಟೆಲ್ಲಾಗೆ ಭಗವದ್ಗೀತೆ ಅಂದರೆ ತುಸು ಹೆಚ್ಚೇ ಅನಿಸುವಷ್ಟು ನಂಬಿಕೆ. ನಾವೇನೇ ಇರಬಹುದು, ಇನ್ನೊಬ್ಬರ ಇಷ್ಟಗಳು ನಮ್ಮೊಳಗೆ ಯಾಕೆ ತಳಮಳ ಸೃಷ್ಟಿಸಬೇಕು? ಕಲಹ ಸೃಷ್ಟಿಸಲಿಕ್ಕಾಗಿಯೇ ಕೆಲವೊಂದು ಸಂಗತಿಗಳು ಅಷ್ಟು ಇಷ್ಟವಾಗುತ್ತವೆಯಾ? ಓಡುವ ಜಗತ್ತಿನಲ್ಲಿ ಒಳಗೊಳಗೆ ಸ್ಪರ್ಧೆಗೆ ಬಿದ್ದಂತೆ ಆಡುತ್ತೇವೆ. ಸೋಲೋ ಗೆಲುವೋ ಒತ್ತಟ್ಟಿಗಿರಲಿ. ಸಣ್ಣಪುಟ್ಟ ಖುಷಿಯನ್ನು ಕಿತ್ತಕೊಳ್ಳುವ ಜಂಜಾಟ ಯಾತಕ್ಕಾಗಿ ಎಂಬುದನ್ನು ಕೇಳಿಕೊಳ್ಳುವುದೇ ಇಲ್ಲ.

ನಂಬಿಕೆಯ ಜೊತೆಗೆ ನಮ್ಮ-ನಮ್ಮ ಇಷ್ಟಗಳು ನಮ್ಮಿಂದ ತೆರಿಗೆ ಬಯಸುತ್ತಿರುತ್ತವೆ. ಆ ತೆರಿಗೆ ಜೀವನವನ್ನು, ಅದರೊಳಗಿನ ಸಣ್ಣಪುಟ್ಟ ಸಂಗತಿಗಳನ್ನು ಸದಾ ಇಷ್ಟಪಡಬೇಕು ಎಂಬುದು. ಆಗಾಗ ನಾವು ತೆರಿಗೆ ಬಾಕಿದಾರರು ಎಂಬುದು ದ್ಯಾಸದಲ್ಲಿರುವುದಿಲ್ಲ. ಹೊರಳಿ ನೋಡಿದರೆ ರೂಢಿಯಂತೆ ಸುಧಾರಿಸಿಕೊಳ್ಳುವ ತವಕದಲ್ಲಿರುವಾಗಲೇ ಮತ್ತೆ ಮಂಡಿ ಮೇಲೊಂದು ಸಣ್ಣ ಗಾಯ. ಸುತ್ತ ಮತ್ತೊಂದು ಮಳೆಮಿಶ್ರಿತ ಮುಂಜಾನೆ. ನೀನೊಲಿದಂತೆ ಹಾಡುವೆ ಎನಲೇಬೇಕು. ಚಳಿಗಾಲವಾದರೇನು, ಮಳೆ ಇಷ್ಟವಿಲ್ಲ ಅಂತ ದೂರುವಂತೆಯೇ ಇಲ್ಲ!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More