ಇಲಾಜು | ಎನ್‌ಎಂಸಿ ಆರಂಭವಾದರೆ ಬಹುಶಃ ವೈದ್ಯರು ವೈದ್ಯರಾಗಿ ಉಳಿಯುವುದಿಲ್ಲ!

ಆಳುವವರ ಕೈಗೊಂಬೆಗಳಿಂದ ತುಂಬಿದ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪಿಸಲು ಪಕ್ಷಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಲಂಚ ಪಡೆದವರಿಗೆ, ಲಂಚ ಕೊಟ್ಟವರಿಗೆ ಯಾವ ಶಿಕ್ಷೆಯೂ ಇಲ್ಲ. ಆದರೆ, ಅವರ ಲಂಚದಾಟದಲ್ಲಿ ಮುಳುಗಿ ಕೆಟ್ಟ ಎಂಸಿಐಗೆ ಈಗ ಮರಣದಂಡನೆ!

ನಮ್ಮ ದೇಶದ ವ್ಯವಸ್ಥೆ ಹೇಗಾಗಿದೆ ಎಂದರೆ, ಎಲ್ಲೆಡೆ ಭ್ರಷ್ಟರನ್ನು ನುಗ್ಗಿಸಿ ಸೂರೆಗೈದವರು ಇನ್ನಷ್ಟು ಭ್ರಷ್ಟವಾದ ಕುಟಿಲ ಯೋಜನೆಗಳನ್ನು ಹಾಕಿಕೊಳ್ಳಬಹುದು. ಅವಕ್ಕೆ ಭ್ರಷ್ಟಾಚಾರವನ್ನು ನಿಗ್ರಹಿಸುವ ನೆಪವನ್ನೂ, ದೇಶಪ್ರೇಮದ ಲೇಪವನ್ನೂ ಕೊಟ್ಟುಬಿಟ್ಟರೆ ಚಳವಳಿಗಾರರಿಂದ ಹಿಡಿದು ವಿದ್ಯಾವಂತರೆನಿಸಿಕೊಳ್ಳುವ ವೈದ್ಯರವರೆಗೆ ಎಲ್ಲರನ್ನೂ ಮರುಳು ಮಾಡಬಹುದು, ಈ ಕುಟಿಲತೆಯನ್ನು ತೆರೆದಿಟ್ಟವರನ್ನು ದೇಶದ್ರೋಹಿಗಳೆಂದೂ ಬಿಂಬಿಸಬಹುದು.

ದೇಶದಲ್ಲಿಂದು ಹಳೆಯ ಸೋಂಕುಗಳು ಮರಳುತ್ತಿವೆ. ಹೊಸ ರೋಗಗಳು ಹೆಚ್ಚುತ್ತಿವೆ. ಒಳ್ಳೆಯ ವೈದ್ಯರ ಕೊರತೆ ಇದೆ. ಡಾಂಬರು-ಕಾಂಕ್ರೀಟಿಗೆ ಲಕ್ಷಗಟ್ಟಲೆ ಕೋಟಿ ಸುರಿಯುವ ಸರಕಾರಕ್ಕೆ ಜನರ ಆರೋಗ್ಯ ರಕ್ಷಣೆ ಬೇಡವಾಗಿದೆ. ಆಧುನಿಕ ತಂತ್ರಜ್ಞಾನ ಅತಿ ದುಬಾರಿಯಾಗಿದೆ, ಅವನ್ನು ಅಳವಡಿಸುವ ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ದೊಡ್ಡ ಲಾಭವೂ ಬೇಕಾಗಿದೆ. ಈ ಎಲ್ಲ ಕಾರಣಗಳಿಂದಾಗಿ, ಅಲ್ಪ ಸಂಬಳಕ್ಕೆ ದುಡಿಯಬಲ್ಲ ವೈದ್ಯರಿಗೆ ವಿಪರೀತ ಬೇಡಿಕೆ ಉಂಟಾಗಿದೆ.

ವೈದ್ಯರ ಮತ್ತು ವೈದ್ಯಕೀಯ ಶಿಕ್ಷಣದ ನಿಯಂತ್ರಣವನ್ನು ವಶಪಡಿಸಿಕೊಂಡರೆ ಇದನ್ನು ಸಾಧಿಸುವುದು ಸುಲಭವಾಗುತ್ತದೆ. ಆದ್ದರಿಂದಲೇ, ಸ್ವಾಯತ್ತವಾಗಿದ್ದ ಭಾರತೀಯ ವೈದ್ಯಕೀಯ ಪರಿಷತ್ತನ್ನು (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ – ಎಂಸಿಐ) ನಿರ್ನಾಮ ಮಾಡಿ, ಆಳುವವರ ಕೈಗೊಂಬೆಗಳಿಂದ ತುಂಬಿದ ರಾಷ್ಟ್ರೀಯ ವೈದ್ಯಕೀಯ ಆಯೋಗ (ನ್ಯಾಷನಲ್ ಮೆಡಿಕಲ್ ಕಮಿಶನ್ – ಎನ್‌ಎಂಸಿ) ಸ್ಥಾಪಿಸಲು ಪಕ್ಷಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಲಂಚ ಪಡೆದವರಿಗೆ, ಲಂಚ ಕೊಟ್ಟವರಿಗೆ ಯಾವ ಶಿಕ್ಷೆಯೂ ಇಲ್ಲ, ಅವರ ಲಂಚದಾಟದಲ್ಲಿ ಕೆಟ್ಟ ಎಂಸಿಐಗೇ ಮರಣದಂಡನೆ! ಎಂಸಿಐ ಭ್ರಷ್ಟವಾಗಿದೆ ಎಂದ ಸಂಸತ್ತಿನ ಸ್ಥಾಯಿ ಸಮಿತಿ ಮತ್ತು ಸರ್ವೋಚ್ಚ ನ್ಯಾಯಾಲಯ ಕೂಡ ಭ್ರಷ್ಟರ ಬಗ್ಗೆ ಮೌನ ತಾಳಿ, ಎಂಸಿಐಯನ್ನೇ ಕಿತ್ತೊಗೆಯಬೇಕು ಎಂದಿರುವುದು ವಿಶೇಷವಲ್ಲವೇ?

ಎಂಸಿಐ ಸ್ಥಾಪನೆಯಾದದ್ದು ಬ್ರಿಟಿಷರ ಆಳ್ವಿಕೆಯಲ್ಲಿ, 1934ರಲ್ಲಿ. ವೈದ್ಯರಿಂದಲೇ ಆಯ್ಕೆಯಾಗುವ ಈ ಸ್ವಾಯತ್ತ, ಸಾಂವಿಧಾನಿಕ ಸಂಸ್ಥೆಯ ಮೂಲ ಉದ್ದೇಶ ಆಧುನಿಕ ವೈದ್ಯವಿಜ್ಞಾನದಲ್ಲಿ ತರಬೇತಾದ ವೈದ್ಯರನ್ನು ನೋಂದಾಯಿಸಿ ಸರಕಾರದ ಮನ್ನಣೆ ನೀಡುವುದು, ಎಲ್ಲ ವೈದ್ಯರೂ ವೃತ್ತಿಸಂಹಿತೆಯನ್ನು ಪಾಲಿಸುವಂತೆ ನಿಗಾ ವಹಿಸುವುದು, ಮತ್ತು ತಪ್ಪಿತಸ್ಥರನ್ನು ಎಚ್ಚರಿಸುವುದು ಅಥವಾ ವೃತ್ತಿಯಿಂದಲೇ ತೆಗೆದುಹಾಕುವುದು. ವಿಶ್ವದೆಲ್ಲೆಡೆ, ವೈದ್ಯವೃತ್ತಿಯಷ್ಟೇ ಅಲ್ಲ, ಅತಿ ಸಂಕೀರ್ಣವಾದ ವಕೀಲ, ಲೆಕ್ಕಪಾಲ ಮತ್ತಿತರ ವೃತ್ತಿಗಳೆಲ್ಲವೂ ಇಂತಹ ಸ್ವ-ನಿಯಂತ್ರಣದ ವ್ಯವಸ್ಥೆಯನ್ನೇ ಹೊಂದಿವೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲಿ ವೈದ್ಯರಲ್ಲದವರಿಗೂ ಇಂತಹ ಸಂಸ್ಥೆಗಳಲ್ಲಿ ಸದಸ್ಯತನವಿದ್ದರೂ, ಶೇ. 70-90ರಷ್ಟು ಸದಸ್ಯರು ವೈದ್ಯರೇ ಆಗಿರುತ್ತಾರೆ. ಎಂಸಿಐಯಲ್ಲೀಗ 104 ವೈದ್ಯರು ಸದಸ್ಯರಾಗಿದ್ದು, ಅವರಲ್ಲಿ 71 ಸದಸ್ಯರು ಎಲ್ಲ ರಾಜ್ಯಗಳಿಂದ ಚುನಾಯಿತರಾದವರು. ಇನ್ನು, ಬರಲಿರುವ ಎನ್‌ಎಂಸಿಯಲ್ಲಿ 20 ಸದಸ್ಯರಿರಲಿದ್ದು, ಕೇವಲ 5 ವೈದ್ಯರಷ್ಟೇ ಚುನಾಯಿತರಾಗಲಿದ್ದಾರೆ. ಸ್ವಾಯತ್ತತೆ, ಸ್ವ-ನಿಯಂತ್ರಣಗಳೆರಡೂ ನಾಶವಾಗಿ, ವೈದ್ಯವೃತ್ತಿಯ ಸಕಲ ನಿಯಂತ್ರಣವೂ ಸರಕಾರದ ಕೈಗೊಂಬೆಗಳ ಪಾಲಾಗಲಿದೆ.

ವೈದ್ಯರನ್ನು ನಿಯಂತ್ರಿಸುವುದಷ್ಟೇ ಕೆಲಸವಾಗಿದ್ದ ಎಂಸಿಐ ತನ್ನಿಂತಾನೇ ಭ್ರಷ್ಟಗೊಂಡಿತೇ? ಖಾಸಗೀಕರಣದ ಯುಗ ಆರಂಭಗೊಂಡಾಗ, 1993ರಲ್ಲಿ, ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸುವ ಅಧಿಕಾರವನ್ನು ಎಂಸಿಐಗೆ ನೀಡಲಾಯಿತು. ನಂತರದಲ್ಲಿ, ಚುನಾವಣೆಗಳು ಹೆಸರಲ್ಲಷ್ಟೇ ಆಗಿ, ತಾಳಕ್ಕೆ ಕುಣಿಯುವವರೇ ಎಂಸಿಐಯೊಳಗೆ ತುಂಬಿದರು. ಭ್ರಷ್ಟರೆಂದು ಬಂಧಿಸಲ್ಪಟ್ಟವರು ಎಂಸಿಐಯೊಳಕ್ಕೆ ಮತ್ತೆ ನುಗ್ಗುವುದಕ್ಕೆ ಪ್ರಮುಖ ರಾಜಕೀಯ ಪಕ್ಷಗಳೆರಡೂ ನೆರವಾದವು. ಆ ಬಲದಲ್ಲೇ ರಾಜಕಾರಣಿಗಳು ಮತ್ತು ಹಣವಂತರು ಎಲ್ಲೆಡೆ ವೈದ್ಯಕೀಯ ಕಾಲೇಜುಗಳನ್ನು ತೆರೆದರು. ಮಾನದಂಡಗಳು ಸಡಿಲವಾಗುತ್ತಲೇ ಸಾಗಿದವು. ವೈದ್ಯ ಶಿಕ್ಷಣದ ಗುಣಮಟ್ಟ ಸೊರಗಿತು, ವೈದ್ಯರ ನಿಯಂತ್ರಣವೂ ದುರ್ಬಲವಾಯಿತು.

ಇವೇ ಪಕ್ಷಗಳ ಕೂಡಾಟದಲ್ಲಿ ಭ್ರಷ್ಟರನ್ನು ರಕ್ಷಿಸಿ, ಎಂಸಿಐಯನ್ನು ಶಿಕ್ಷಿಸುವ ಎನ್‌ಎಂಸಿ ಎಂಬ ಕುಟಿಲ ಯೋಜನೆ ಸಿದ್ಧಗೊಂಡಿದೆ. ವೈದ್ಯರ ಕೌಶಲ್ಯ ಹಾಗೂ ನೈತಿಕತೆಗಳನ್ನು ಗೌಣವಾಗಿಸಿ, ಅಲ್ಪ ಸಂಬಳಕ್ಕೆ ದುಡಿಯುವ ವೈದ್ಯರೆಂಬ ಮಾನವ ಯಂತ್ರಗಳನ್ನು ತಯಾರಿಸುವುದೇ ಇದರ ಉದ್ದೇಶವಾಗಿದೆ. ಈಗ ಮರ್ಯಾದೆಗಾದರೂ ಲಾಭರಹಿತ ದತ್ತಿ ಸಂಸ್ಥೆಗಳಷ್ಟೇ ವೈದ್ಯಕೀಯ ಕಾಲೇಜುಗಳನ್ನು ತೆರೆಯಬಹುದೆಂಬ ನಿಯಮವಿದ್ದರೆ, ಎನ್‌ಎಂಸಿ ನಂತರ ಲಾಭಕೋರರಿಗೂ ಅವಕಾಶವೊದಗಲಿದೆ. ಕಾಲೇಜು ತೆರೆಯುವ ಮೊದಲೇ ಸವಲತ್ತುಗಳಿರಬೇಕೆಂಬ ಷರತ್ತುಗಳೂ ಹೋಗಿ, ಕಾಗದದ ಘೋಷಣೆಯಷ್ಟೇ ಸಾಕೆನಿಸಲಿದೆ. ಪೂರ್ವಾನುಮತಿಯಿಲ್ಲದೆಯೇ ಸೀಟುಗಳನ್ನು ಹೆಚ್ಚಿಸಿಕೊಳ್ಳುವುದಕ್ಕೂ ಸಾಧ್ಯವಾಗಲಿದೆ. ಕಾಲೇಜುಗಳ ವಾರ್ಷಿಕ ಪರಿಶೀಲನೆಯೂ ಇಲ್ಲವಾಗಲಿದೆ. ಶುಲ್ಕದ ಮೇಲಿನ ನಿಯಂತ್ರಣವೂ ಹೋಗಿ, ಶೇ.60ರಷ್ಟು ಸೀಟುಗಳಿಗೆ ಲಾಭಕೋರರೇ ಶುಲ್ಕ ನಿರ್ಧರಿಸಿಸುವಂತಾಗಲಿದೆ.

ವೈದ್ಯಕೀಯ ಕಾಲೇಜಿನೊಳಕ್ಕೆ ಹೊಕ್ಕುವುದು, ಮುಗಿಸಿ ಹೊರಹೋಗುವುದು, ಬಳಿಕ ಸ್ನಾತಕೋತ್ತರ ಪ್ರವೇಶ ಎಲ್ಲವೂ ಕೇಂದ್ರ ಸರಕಾರದ ಏಕಕಿಂಡಿಯಿಂದಲೇ ನಡೆಯಲಿವೆ. ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ನಡೆಸುವ ಎಲ್ಲ ಪರೀಕ್ಷೆಗಳೂ ಅಪ್ರಸ್ತುತವಾಗಲಿದ್ದು, ವೈದ್ಯಕೀಯ ಸೀಟುಗಳನ್ನು ಖರೀದಿಸುವವರು, ಮಾರುವವರು, ಪರೀಕ್ಷೆಗಳಲ್ಲಿ ಅನುತ್ತೀರ್ಣರಾದವರು ಎಲ್ಲರೂ ಈ ಕಿಂಡಿಯಲ್ಲೇ ಇಣುಕುವಂತಾಗಲಿದೆ. ಇದೇ ಸರಕಾರದ ನಿಗಾವಣೆಯಲ್ಲಾದ ಸ್ನಾತಕ-ಸ್ನಾತಕೋತ್ತರ ಪ್ರವೇಶ ಪರೀಕ್ಷೆಗಳೆಲ್ಲದರಲ್ಲೂ ಮೋಸ ಹಾಗೂ ಸ್ವಜನ ಪಕ್ಷಪಾತಗಳ ಆರೋಪಗಳೆದ್ದು, ಸಿಬಿಐ ವಿಚಾರಣೆಯೂ, ಉಚ್ಚ ನ್ಯಾಯಾಲಯಗಳಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆಗಳೂ ಆದವು ಎಂದಮೇಲೆ ಈ ಏಕಕಿಂಡಿಯ ವ್ಯವಸ್ಥೆ ಹೇಗಿರಬಹುದೆಂದು ಊಹಿಸಿಕೊಳ್ಳಬಹುದು.

ಆಧುನಿಕ ರೋಗಗಳ ಪತ್ತೆ ಹಾಗೂ ಚಿಕಿತ್ಸೆಗೆ ಅನೇಕ ಹೊಸ ತಂತ್ರಜ್ಞಾನಗಳು ಲಭ್ಯವಾಗಿದ್ದರೂ ಅವನ್ನು ಬಳಸಬಲ್ಲ ವೈದ್ಯರ ಸಂಖ್ಯೆ ಹೆಚ್ಚಿಲ್ಲದಿರುವುದು ಹಣ ಹೂಡಿದ ಖಾಸಗಿ ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ, ಎಂಬಿಬಿಎಸ್ ಬಳಿಕ ಸ್ನಾತಕೋತ್ತರ ವ್ಯಾಸಂಗವಿಲ್ಲದೆಯೇ ನೇರವಾಗಿ ಕ್ಷಿಪ್ರ ತರಬೇತಿ ನೀಡುವುದು, ಜಿಲ್ಲಾಸ್ಪತ್ರೆಗಳಲ್ಲಿ ಡಿಎನ್‍ಬಿ ವ್ಯಾಸಂಗದ ಹೆಸರಲ್ಲಿ ಅರೆಬೆಂದ ತಜ್ಞರನ್ನು ತಯಾರಿಸುವುದು ಈ ಮಹಾ ಯೋಜನೆಯಲ್ಲಿವೆ. ನೀಟ್ ಪರೀಕ್ಷೆಯನ್ನು ವರ್ಷಕ್ಕೆರಡು ಬಾರಿ ನಡೆಸಿ, ವೈದ್ಯಕೀಯ ಪ್ರವೇಶವನ್ನೂ ದುಪ್ಪಟ್ಟಾಗಿಸುವ ಯೋಜನೆಯಿದೆಯೇ ಎಂದು ಕಾದುನೋಡಬೇಕಷ್ಟೇ.

ಈಗ ಕಟ್ಟುನಿಟ್ಟಿನ ಎಂಬಿಬಿಎಸ್ ವ್ಯಾಸಂಗವನ್ನು ಪೂರೈಸಿದವರಷ್ಟೇ ಆಧುನಿಕ ವೈದ್ಯವೃತ್ತಿಯಲ್ಲಿ ತೊಡಗಬಹುದಾಗಿದ್ದು, ಎನ್‌ಎಂಸಿ ಅಡಿಯಲ್ಲಿ ಹೊಸದೊಂದು ಅನುಬಂಧವನ್ನು ಸೇರಿಸಿ, ಆಯುರ್ವೇದ, ಹೋಮಿಯೋಪತಿ ಮುಂತಾದ ಪದ್ಧತಿಗಳವರಿಗೂ ಆಧುನಿಕ ವೈದ್ಯರಾಗಿ ಮನ್ನಣೆ ನೀಡಲಾಗುತ್ತದೆ ಎನ್ನಲಾಗಿದೆ. ಹೃದಯದಿಂದ ರಕ್ತ ಚಲನೆಯಾಗುತ್ತದೆ ಎನ್ನುವುದನ್ನೇ ಒಪ್ಪದ ಆಯುರ್ವೇದವನ್ನು ಕಲಿತವರು ಮುಂದಿನ ದಿನಗಳಲ್ಲಿ ಹೃದ್ರೋಗಗಳ ಚಿಕಿತ್ಸೆಗೆ ಅತ್ಯಾಧುನಿಕ ಉಪಕರಣಗಳನ್ನು ಬಳಸತೊಡಗಿದರೆ ಅಚ್ಚರಿ ಇಲ್ಲ. ದೇಶಪ್ರೇಮಕ್ಕಾಗಿ ಅಷ್ಟನ್ನಾದರೂ ಮಾಡಬೇಡವೇ?

ಇದನ್ನೂ ಓದಿ : ಇಲಾಜು | ಆರೋಗ್ಯ ಸೇವೆ ಬಲಪಡಿಸಲು ವೈದ್ಯರಿಗೆ ಬೇಕಿದೆ ಜನಬೆಂಬಲ

ಭ್ರಷ್ಟಾಚಾರಕ್ಕೆ ಏಕಕಿಂಡಿ, ದೇಶಪ್ರೇಮಕ್ಕೆ ಆಯುರ್ವೇದ ಹೃದಯತಜ್ಞರು ಎಂದಾದ ಬಳಿಕ, ವೈದ್ಯರನ್ನು ನಿಯಂತ್ರಿಸುವುದಕ್ಕೆ ವೈದ್ಯರಲ್ಲದವರಿಗೂ ಅವಕಾಶವಿರಬೇಡವೇ? ಹೊಸ ಎನ್‌ಎಂಸಿಯಲ್ಲಿ ಸರಕಾರಿ ಅಧಿಕಾರಿಗಳೂ ವೈದ್ಯರಲ್ಲದವರೂ ಬಹುಮತದ ಸದಸ್ಯರಾಗಿರಲಿದ್ದು, ವೈದ್ಯರು ಅವರ ಭಯದಡಿಯಲ್ಲೇ ವೃತ್ತಿ ನಿರ್ವಹಿಸಬೇಕಾಗಲಿದೆ. ಹಾಗಾದಾಗ, ವೈದ್ಯರನ್ನು ಅಲ್ಪ ಸಂಬಳದಲ್ಲಿ ಕುಣಿಸುವುದು ಸುಲಭವಾಗಲಿದೆ. ಈಗಿನ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯದಲ್ಲೂ ಇರುವ ಚುನಾಯಿತ ವೈದ್ಯಕೀಯ ಪರಿಷತ್ತುಗಳು ವೈದ್ಯರ ವಿಚಾರಣೆ ನಡೆಸುತ್ತವೆ. ಎನ್‌ಎಂಸಿಯಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯವಿಲ್ಲ ಮಾತ್ರವಲ್ಲ, ರಾಜ್ಯದಲ್ಲೂ ಕೈಗೊಂಬೆ ಆಯೋಗಗಳಾಗಿ, ಅವೆಲ್ಲವೂ ಎನ್‌ಎಂಸಿಗೇ ಅಧೀನವಾಗಲಿವೆ. ವಿಚಿತ್ರವೆಂದರೆ, 2012ರಲ್ಲಿ ತಂದಿದ್ದ ಆರೋಗ್ಯ ಸಂಪನ್ಮೂಲಗಳ ಆಯೋಗದ ಮಸೂದೆಯನ್ನು ರಾಜ್ಯಗಳಿಗೆ ಪ್ರಾತಿನಿಧ್ಯವಿಲ್ಲ ಎನ್ನುವ ಕಾರಣಕ್ಕೆ ಸಂಸತ್ತಿನ ಸ್ಥಾಯಿ ಸಮಿತಿಯು ತಿರಸ್ಕರಿಸಿತ್ತು, ಈಗ ಅದೇ ಸ್ಥಾಯಿ ಸಮಿತಿಯು ಅದನ್ನೇ ಒಪ್ಪಿಕೊಂಡಿದೆ!

ಎನ್‌ಎಂಸಿ ಬಂದ ಬಳಿಕ ದೇಶದ ಆರೋಗ್ಯ ಸೇವೆ ಬಹುಶಃ ಹೀಗಿರಬಹುದು: ವೈದ್ಯಕೀಯ ಅರ್ಹತೆ ಏನೆಂದು ನಿರ್ಧರಿಸುವುದು ಸರಕಾರಿ ಅಧಿಕಾರಿಗಳು. ಯಾವ ಆಸ್ಪತ್ರೆಗೆ ಹೋಗಬೇಕೆಂದು ನಿರ್ಧರಿಸುವುದು ವಿಮಾ ಕಂಪನಿಗಳು. ಯಾವ ಚಿಕಿತ್ಸೆ ಎಂದು ನಿರ್ಧರಿಸುವುದು ಖಾಸಗಿ ಆಸ್ಪತ್ರೆಗಳ ವ್ಯವಹಾರಾಧಿಕಾರಿಗಳು. ಚಿಕಿತ್ಸೆ ಹಾಗೂ ದರದ ಸರಿ-ತಪ್ಪುಗಳನ್ನು ನಿರ್ಣಯಿಸುವುದು ಚಳವಳಿಗಾರರು. ಇವನ್ನೆಲ್ಲ ಪಾಲಿಸಿ ರೋಗಿಗಳಿಗೆ ತೊಂದರೆಯಾದರೆ ಏಟು ತಿಂದು, ವೈದ್ಯರಲ್ಲದವರಿಂದ ವಿಚಾರಣೆಗೊಳಗಾಗುವ ಪಾಡು ವೈದ್ಯರದ್ದು. ಈ ‘ಒಳ್ಳೆಯ ದಿನ’ಗಳಿಗಾಗಿ ಚಳವಳಿಗಾರರೂ, ಖಾಸಗಿ ಆಸ್ಪತ್ರೆಗಳ ಮಾಲೀಕರೂ ಒಟ್ಟಾಗಿ ಎದುರು ನೋಡುತ್ತಿದ್ದಾರೆ!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More