ರಾವಿ ತೀರ | ಕಾಲುನೋವೆಂದು ಸುಳ್ಳು ಹೇಳಿ ಬ್ಯಾಡ್ಮಿಂಟನ್‌ ಆಡಿದರೇ ಅಮರಿಂದರ್?

ಅಧಿಕಾರಕ್ಕೆ ಬಂದ ತಿಂಗಳಲ್ಲೇ ಪಂಜಾಬನ್ನು ಮಾದಕದ್ರವ್ಯ ಮುಕ್ತವಾಗಿಸುವ ಭರವಸೆಯನ್ನು ಸಿಎಂ ಅಮರಿಂದರ್ ಸಿಂಗ್ ನೀಡಿದಾಗ ಕೆಲವರು ಖಂಡಿತ ಅವರನ್ನು ನಂಬಿದ್ದರು. ಕನಿಷ್ಠಪಕ್ಷ ಎಲ್ಲ ರೈತರ ಸಾಲ ಮನ್ನಾ ಮಾಡುತ್ತಾರೆ ಎಂದೂ ಜನ ಭಾವಿಸಿದ್ದರು. ಆದರೆ ಈಗ ಆಗುತ್ತಿರುವುದೇ ಬೇರೆ!

ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬ್ ವಿಧಾನಸಭೆ ಚುನಾವಣೆ ಗೆದ್ದು ಮುಖ್ಯಮಂತ್ರಿ ಗಾದಿ ಏರಿ ವರ್ಷವೂ ಆಗಿಲ್ಲ. ಆಗಲೇ ಮತದಾರರಿಗೆ ಕೊಟ್ಟ ಬಹುಮುಖ್ಯ ಆಶ್ವಾಸನೆಗಳಲ್ಲಿ ಒಂದನ್ನು ಮುರಿಯಲು ಹೊರಟಿದ್ದಾರೆ. 2017ರ ಆದಿಯಲ್ಲಿ ಜನರ ಗಮನ ಸೆಳೆದಿದ್ದ ಈ ಆಶ್ವಾಸನೆಯು ಹುಸಿಯಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಕ್ಯಾಪ್ಟನ್ ಅಮರಿಂದರ್ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಒಂದು ವೇಳೆ ಈ ಬಾರಿ ಗೆದ್ದರೆ ತಮ್ಮ ಉತ್ತರಾಧಿಕಾರಿಯನ್ನು ತಯಾರು ಮಾಡುತ್ತಾರೆ ಎಂದು ಜನ ಊಹಿಸಿಕೊಂಡಿದ್ದರು. 2022ರ ಚುನಾವಣೆಗಳಿಗೆ ಅಣಿಗೊಳ್ಳುವುದಕ್ಕೆ ಇವರು ತಮ್ಮ ಅಧಿಕಾರಾವಧಿ ಬಳಸುವ ಒತ್ತಡಕ್ಕೆ ಖಂಡಿತ ಒಳಗಾಗುವುದಿಲ್ಲ; ಆದಕಾರಣ, ಅವರು ಉತ್ತಮ ಆಡಳಿತ ಶಕೆಯ ಹೆಜ್ಜೆ ಗುರುತು ಮೂಡಿಸಲು ತಮ್ಮನ್ನು ಮುಡಿಪಾಗಿಡುತ್ತಾರೆ ಎಂಬ ಭಾವನೆ ಜನಮಾನಸದಲ್ಲಿತ್ತು. ಆದರೆ ಆಗುತ್ತಿರುವುದೇ ಬೇರೆ.

ಅಧಿಕಾರಕ್ಕೆ ಬಂದ ತಿಂಗಳೊಪ್ಪತ್ತಿನಲ್ಲಿಯೇ ಅವರು ಪಂಜಾಬನ್ನು ಮಾದಕದ್ರವ್ಯ ಮುಕ್ತವಾಗಿಸುವ ಭರವಸೆಯನ್ನು ನೀಡಿದಾಗ ಖಂಡಿತವಾಗಿಯೂ ಕೆಲವರು ಅವರನ್ನು ನಂಬಿದ್ದರು ಅಥವಾ ಅವರು ಎಲ್ಲ ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ಭಾವಿಸಿದ್ದರು. ಇದು ತಮ್ಮ ಕೊನೆಯ ಇನ್ನಿಂಗ್ಸ್ ಎಂದು ಹೇಳಿಕೊಂಡಾಗ ಕೂಡ ಎಲ್ಲರೂ ಅವರನ್ನು ನಂಬಿದ್ದರು. ಇದು ತಮ್ಮ ರಾಜಕೀಯ ಬದುಕಿನಲ್ಲಿ ಕೊನೆಯ ಪ್ರಚಾರ ಎಂದು ಭಾವನಾತ್ಮಕವಾಗಿ ಮನವಿ ಮಾಡಿಕೊಂಡೇ ಕ್ಯಾಪ್ಟನ್ ಜನರ ಮನ ತಟ್ಟಿದ್ದರು.

ಈಗ ಏಕಾಏಕಿ, ತಿಂಗಳ ಹಿಂದೆ ಅವರ ಆಂತರಿಕ ವಲಯದಿಂದ ಅನಿರೀಕ್ಷಿತವಾಗಿ ಬೆರೆಯದೇ ಧ್ವನಿ ಕೇಳಿಬರುತ್ತಿದೆ. “ಪಂಜಾಬ್ ಎಷ್ಟು ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದರೆ, ಕ್ಯಾಪ್ಟನ್ ಅಮರಿಂದರ್ 'ರಾಜ್ಯದ ಹಿತದೃಷ್ಟಿಯಿಂದ' ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಬೇಕಾಗಿ ಬರಬಹುದು,” ಎನ್ನುವ ಮಾತುಗಳು ಹೊರಬರುತ್ತಿವೆ! ಪಂಜಾಬಿನ ಹಳ್ಳಿಗಳಲ್ಲಿ ಪ್ರಯಾಣ ಮಾಡಿ ಜನರನ್ನು ಭೇಟಿಯಾಗುವುದಕ್ಕೆ ತಮ್ಮ ಪಾದದ ಗಾಯ ಅಡ್ಡಿಯಾಗುತ್ತಿದೆ ಎಂಬ ಕಾರಣ ಕೊಟ್ಟ ಹೊತ್ತಿನಲ್ಲಿಯೇ ಇತ್ತ ಅವರು ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಆಡುತ್ತಿರುವ ಫೋಟೊಗಳು ಕಾಣಿಸಿಕೊಂಡಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ವಯೋವೃದ್ಧ ಮಾಜಿ ಮಹಾರಾಜ ತಮ್ಮ ಈ ಅವಧಿಯಲ್ಲಿ ಅಂಥದ್ದೇನೂ ಆಸಕ್ತಿದಾಯಕ ಹೆಜ್ಜೆ ಗುರುತು ಮೂಡಿಸದೆ, ಸುಮ್ಮನೆ ಅಧಿಕಾರ ಫಲದ ರುಚಿ ಸವಿದು ತೆರೆಮರೆಗೆ ಸರಿಯುತ್ತಾರೆ ಎಂದು ಎಲ್ಲರೂ ಊಹಿಸಿಕೊಂಡಿದ್ದರು. ಆದರೆ ಈಗ, ಅವರು ಜನರೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಮುರಿಯಲು ಅಣಿಯಾಗಿದ್ದಾರೆ. 75 ವರ್ಷ ಮೇಲ್ಪಟ್ಟ ವಯೋಮಾನದದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರುವಂತೆ ಬಿಂಬಿಸಿಕೊಳ್ಳುವುದು ಕಷ್ಟವಾದರೂ ಅದು ಮಹತ್ವದ್ದಾಗುತ್ತದೆ. ಜನ ಹಾಗೂ ಸಹೋದ್ಯೋಗಿಗಳ ಸಂಪರ್ಕದಿಂದ ದೂರ ಇದ್ದುಕೊಂಡು ಅನಾರೋಗ್ಯದದೊಂದಿಗೆ ಹೆಣಗಾಡುವುದರಲ್ಲಿಯೇ ಅವರ ಈವರೆಗಿನ ಅವಧಿ ಕಳೆದುಹೋಗಿದ್ದಲ್ಲಿ ಅದೇನೂ ದೊಡ್ಡ ವಿಷಯವಾಗುವುದಿಲ್ಲ.

ಒಬ್ಬ ನಾಯಕ ತಾನು ಸದ್ಯವೇ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದರೆ, ಆಕಾಂಕ್ಷಿಗಳು ಆತನ ಉತ್ತರಾಧಿಕಾರಿ ಪಟ್ಟಕ್ಕೆ ಹೊಂಚು ಹಾಕುತ್ತಾರೆ ಮತ್ತು ಆ ನಾಯಕನನ್ನು ಕೆಳಗಿಳಿಸುವುದಕ್ಕೆ ಯತ್ನಿಸುತ್ತಾರೆ ಎನ್ನುವುದು ಯಾವುದೇ ಪ್ರಜಾತಂತ್ರದಲ್ಲಿ ಸ್ಪಷ್ಟ ರಾಜಕೀಯ ಭಾವನೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸದ್ಯದ ಅಮರಿಂದರ್ ನಡೆಗಳು ಸ್ವಲ್ಪ ವಿಚಿತ್ರವಾಗಿ ಕಾಣುತ್ತಿವೆ.

ಇದನ್ನೂ ಓದಿ : ಕಾಶ್ಮೀರದಿಂದ | ಶೇಖ್ ಅಬ್ದುಲ್ಲಾ ಸಮಾಧಿಗೆ ಈಗಲೂ ಕಾವಲೇಕಿದೆ? ಇಲ್ಲಿದೆ ರಹಸ್ಯ

ಉತ್ಸಾಹಿ ಕ್ರಿಕೆಟಿಗ, ಟಿವಿ ಕಾರ್ಯಕ್ರಮಗಳ ನಿರೂಪಕ, ಸಂಪುಟದಲ್ಲಿ ಮೂರನೇ ಸ್ಥಾನದಲ್ಲಿರುವ ನವಜೋತ್ ಸಿಂಗ್ ಸಿಧು, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಕ್ಷಣದಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಲ್ಲಿ ಅಭದ್ರತೆ ಶುರುವಾಗಿದೆ. ಅಕಾಲಿ ದಳದ ವರಿಷ್ಠ ಪ್ರಕಾಶ್ ಸಿಂಗ್ ಬಾದಲ್ ಕುಟುಂಬವನ್ನು ಹೊರಗಿಡುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿರುವುದು ಸೇರಿದಂತೆ ಅಮರಿಂದರ್ ತೆಗೆದುಕೊಂಡ ಹಲವು ನಿರ್ಧಾರಗಳನ್ನು ತಾವು ಒಪ್ಪಿಲ್ಲ ಎನ್ನುವುದನ್ನು ಗೊತ್ತುಪಡಿಸುವ ಅವಕಾಶವನ್ನು ಸಿಧು ಕಳೆದುಕೊಳ್ಳಲು ತಯಾರಿಲ್ಲ. ಆಮ್ ಆದ್ಮಿ ಪಕ್ಷದೊಂದಿಗೆ ಉನ್ನತ ಸ್ಥಾನಕ್ಕಾಗಿ ಸಿಧು ಚೌಕಾಸಿ ಮಾಡಿದ್ದರು. ಆದಕಾರಣ ಅವರಿಗೆ ಮುಖ್ಯಮಂತ್ರಿ ಆಗುವ ಆಸೆ ಇದೆ ಎನ್ನುವುದು ಕೂಡ ಚೆನ್ನಾಗಿ ಗೊತ್ತಿರುವ ವಿಷಯ. ಸಾಲದ್ದಕ್ಕೆ, ಕಾಂಗ್ರೆಸ್ ಸೇರಿದಾಗಿನಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಅನೇಕ ಆತಂಕದ ಕ್ಷಣಗಳನ್ನು ಅವರು ತಂದೊಡ್ಡಿದರು. ಹೊಸದಾಗಿ ಪಕ್ಷ ಸೇರಿದ ಈ ವ್ಯಕ್ತಿ ಎಲ್ಲಿ ತನ್ನ ಮಹತ್ವ ಕಡಿಮೆ ಮಾಡಿಬಿಡುತ್ತಾನೋ ಎನ್ನುವ ಭಯ ಅಮರಿಂದರ್ ಅವರನ್ನು ಕಾಡಿತ್ತು. ಇದರ ಜೊತೆಗೆ, ತಾವು ಅಷ್ಟೇನೂ ಉತ್ತಮ ಬಾಂಧವ್ಯ ಹೊಂದಿರದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬಡ್ತಿ ಪಡೆದದ್ದು ಕೂಡ ಕ್ಯಾಪ್ಟನ್ ಆತಂಕಕ್ಕೆ ಕಾರಣವಾಗಿತ್ತು.

ಕ್ಯಾಪ್ಟನ್ ಜನಸಂಪರ್ಕದಿಂದ ದೂರ ಇರುವಾಗಲೇ, ಯುವ ನಾಯಕ ಸಿಧು ಸಾರ್ವಜನಿಕವಾಗಿ ಹೆಚ್ಚು ಬೆರೆಯುತ್ತಿದ್ದಾರೆ. ರಾಜ್ಯಾದ್ಯಂತ ಓಡಾಡುತ್ತ, ವಿಷಯಗಳನ್ನು ಪ್ರಸ್ತಾಪಿಸುತ್ತ, ತಮ್ಮ ಸಚಿವಾಲಯದ ಮೇಲೆ ಬಿಗಿಹಿಡಿತ ಸಾಧಿಸುತ್ತಿದ್ದಾರೆ. ಈ ಬೆಳವಣಿಗೆಗಳು ಕ್ಯಾಪ್ಟನ್ ಪಾಳಯದಲ್ಲಿ ಅಭದ್ರತೆ ಹೆಚ್ಚಿಸುತ್ತಿದೆ. ತಮ್ಮ ಯೌವನದ ದಿನಗಳಲ್ಲಿ ಕುದುರೆ ಸವಾರಿ ಹಾಗೂ ಪೋಲೋ ಆಟಗಾರನಾಗಿ ಚಿರಪರಿಚಿತರಾಗಿದ್ದ ಮಾಜಿ ಮಹಾರಾಜನಿಗೆ ಬ್ಯಾಡ್ಮಿಂಟನ್ ಆಟ ತೀರಾ ಸಾಮಾನ್ಯವಾಗಿ ಕಂಡಿರಲಿಕ್ಕೂ ಸಾಕು!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More