ಇಲಾಜು | ನಿಮ್ಮ ಆಸ್ಪತ್ರೆ ಖರ್ಚು ಹಲವು ಪಟ್ಟು ಹೆಚ್ಚುತ್ತಿರುವುದೇಕೆ ಗೊತ್ತೇ?

ಆಸ್ಪತ್ರೆಗಳು ದಿನವೊಂದಕ್ಕೆ ಲಕ್ಷಗಟ್ಟಲೆ ಶುಲ್ಕ ವಿಧಿಸುವಂತೆ ಮಾಡಿದ ಆ ಶಿಷ್ಟಾಚಾರಗಳೇನು? ಅವನ್ನು ಮಾಡಿದವರಾರು? ಹೇರುತ್ತಿರುವವರಾರು? ಅವುಗಳ ಸಾಧಕ-ಬಾಧಕಗಳೇನು? ಆಸ್ಪತ್ರೆಗಳ ಮಹಾ ‘ಬಿಲ್ಲು’ಗಳ ಬಗೆಗಿನ ಚರ್ಚೆಯಲ್ಲಿ ಈ ಪ್ರಶ್ನೆಗಳನ್ನು ಯಾರೂ ಕೇಳುತ್ತಲೇ ಇಲ್ಲವಲ್ಲ!

ಮೊನ್ನೆ ದಿಲ್ಲಿಯಲ್ಲಿ ಎರಡು ಮಹಾ ಆಸ್ಪತ್ರೆಗಳಲ್ಲಿ ಇಬ್ಬರು ಡೆಂಗಿ ಪೀಡಿತರಿಗೆ 2-3 ವಾರಗಳ ಚಿಕಿತ್ಸೆಗೆ ತಲಾ 15-16 ಲಕ್ಷ ರು. ವಿಧಿಸಿದ್ದು ದೇಶವಿಡೀ ಸುದ್ದಿಯಾಗಿತ್ತು. ತಮ್ಮ ಶಿಷ್ಟಾಚಾರಗಳಿಗೆ ಅನುಗುಣವಾಗಿ, ಯಾವುದೇ ಲೋಪಗಳಿಲ್ಲದೆ ಅತ್ಯುತ್ತಮ ಚಿಕಿತ್ಸೆ ನೀಡಿದ್ದೇವೆ, ವಿಧಿಸಿದ ದರಗಳಿಗೆ ಸವಿವರವಾದ ಪಟ್ಟಿಯನ್ನೂ ಕೊಟ್ಟಿದ್ದೇವೆ ಎಂದು ಈ ಆಸ್ಪತ್ರೆಗಳು ಸಮರ್ಥಿಸಿಕೊಂಡವು. ಭಾರತೀಯ ವೈದ್ಯಕೀಯ ಸಂಘವೂ ಆಸ್ಪತ್ರೆಗಳ ಬೆನ್ನಿಗೆ ನಿಂತಿತು. ಎರಡು ವಾರಗಳ ಚಿಕಿತ್ಸೆಗೆ 660 ಸಿರಿಂಜುಗಳು ಹಾಗೂ 2,700 ಕೈಗವಸುಗಳನ್ನು ಬಳಸಲಾಗಿತ್ತೆಂದು ಆ ಪಟ್ಟಿಯಲ್ಲೇ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಸಿರಿಂಜುಗಳಿಗೆ 17 ಪಟ್ಟು, ಕೈಗವಸುಗಳಿಗೆ 3 ಪಟ್ಟು, ಔಷಧಗಳಿಗೆ 9 ಪಟ್ಟು ಹೆಚ್ಚಿನ ದರವನ್ನು ವಿಧಿಸಲಾಗಿತ್ತೆನ್ನುವುದು ತನಿಖೆಯಲ್ಲಿ ಹೊರಬಂತು.

ದಿನಕ್ಕೊಂದು ಲಕ್ಷ ವಿಧಿಸುವಂತೆ ಮಾಡಿದ, ಅದನ್ನೆಲ್ಲ ಪಟ್ಟಿ ಮಾಡಿ ಕೊಟ್ಟು ಕೋಪಕ್ಕೆ ತುತ್ತಾಗುವಂತೆಯೂ ಮಾಡಿದ ಆ ಶಿಷ್ಟಾಚಾರಗಳೇನು? ಅವನ್ನು ಮಾಡಿದವರಾರು, ಹೇರುತ್ತಿರುವವರಾರು, ಅವುಗಳ ಸಾಧಕ-ಬಾಧಕಗಳೇನು? ಆ ಮಹಾ ಆಸ್ಪತ್ರೆಗಳ ಮಹಾ ‘ಬಿಲ್ಲು’ಗಳ ಮಹಾ ಚರ್ಚೆಗಳಲ್ಲಿ ಈ ಪ್ರಶ್ನೆಗಳನ್ನು ಯಾರೂ ಕೇಳಲೇ ಇಲ್ಲ.

ವೈದ್ಯರು ಮತ್ತು ಆಸ್ಪತ್ರೆಗಳು ಅನುಸರಿಸುವ ಶಿಷ್ಟಾಚಾರಗಳು ಹಲವಿವೆ: ಕಡ್ಡಾಯವಾಗಿ ಪಾಲಿಸಬೇಕಾದ ವೃತ್ತಿ ಸಂಹಿತೆಗಳಿವೆ, ನ್ಯಾಯಿಕ ನಿಯಂತ್ರಣಗಳೂ ಇವೆ, ಚಿಕಿತ್ಸೆ ಮತ್ತು ಸುರಕ್ಷತೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ದೇಶ-ವಿದೇಶಗಳ ಹಲವಾರು ಸಂಸ್ಥೆಗಳು ಆಗಿಂದಾಗ ಹೊರಡಿಸುವ ಸಲಹಾವಳಿಗಳೂ ಇವೆ. ಇವು ಎಲ್ಲ ವೈದ್ಯರಿಗೆ, ಎಲ್ಲ ಆಸ್ಪತ್ರೆಗಳಿಗೆ ಒಂದೇ ತೆರನಾಗಿರುತ್ತವೆ. ಇಂಥ ಸಾಮಾನ್ಯ ಶಿಷ್ಟಾಚಾರಗಳು ಲಕ್ಷಗಟ್ಟಲೆ ಖರ್ಚಿಗೆ ಕಾರಣವಾಗುತ್ತವೆಯೇ? ಅಥವಾ ಈ ಕಾನೂನು-ಸಂಹಿತೆಗಳಿಗೆ ಹೊರತಾದ, ಚಿಕಿತ್ಸೆಗೆ ಅತ್ಯಗತ್ಯವೂ ಅಲ್ಲದ, ಯಾವುದೋ ವಿಶಿಷ್ಟ ಮಾನ್ಯತೆಗಳ ಶಿಷ್ಟಾಚಾರಗಳನ್ನು ಅಳವಡಿಸಿಕೊಳ್ಳುತ್ತಿರುವುದು ಕಾರಣವಾಗುತ್ತಿದೆಯೇ? ರೋಗಗಳನ್ನು ಹುಟ್ಟಿಸುವುದು, ಪತ್ತೆಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಎಲ್ಲವೂ ವ್ಯಾಪಾರವೇ ಆಗಿರುವಾಗ, ಆಸ್ಪತ್ರೆಗಳ ಮಾನ್ಯತೆಯೂ ವ್ಯಾಪಾರವಾಗುತ್ತಿದೆಯೇ?

ಆರೋಗ್ಯ ಸೇವೆಗಳಿಗೆ ವಿಶಿಷ್ಟ ಮಾನ್ಯತೆಗಳನ್ನು ನೀಡುವ ವ್ಯವಸ್ಥಿತ ಯೋಜನೆಗಳು ಈಗೊಂದು ದಶಕದಿಂದ ಬೆಳೆಯುತ್ತಿವೆ. ಅಂತರರಾಷ್ಟ್ರೀಯ ಜಂಟಿ ಆಯೋಗ (ಜೆಸಿಐ), ರಾಷ್ಟ್ರೀಯ ಆಸ್ಪತ್ರೆಗಳ ಮಾನ್ಯತಾ ಮಂಡಳಿ (ಎನ್‌ಎಬಿಎಚ್), ಆಸ್ಟ್ರೇಲಿಯಾದ ಆರೋಗ್ಯ ಸೇವಾ ಸಂಸ್ಥೆಗಳ ಮಾನದಂಡಗಳ ಪರಿಷತ್ತು, ಅಮೆರಿಕದ ರೋಗನಿದಾನ ಹಾಗೂ ಪ್ರಯೋಗಾಲಯಗಳ ಮಾನ್ಯತಾ ಪರಿಷತ್ತು ಮುಂತಾದ ಖಾಸಗಿ ಮಾನ್ಯತಾ ಸಂಸ್ಥೆಗಳು ರೂಪುಗೊಂಡಿದ್ದು, ಅವುಗಳಿಂದ ಮಾನ್ಯತೆಯನ್ನು ಪಡೆಯುವಂತೆ ಆಸ್ಪತ್ರೆಗಳನ್ನೂ, ವೈದ್ಯಕೀಯ ಸಂಸ್ಥೆಗಳನ್ನೂ ಉತ್ತೇಜಿಸಲಾಗುತ್ತಿದೆ. ಕಳೆದೊಂದು ದಶಕದಲ್ಲಿ ದೇಶದಲ್ಲಿರುವ ಸುಮಾರು 50,000 ಆಸ್ಪತ್ರೆಗಳ ಪೈಕಿ 800ರಷ್ಟು ಆಸ್ಪತ್ರೆಗಳು ಎನ್‌ಎಬಿಎಚ್ ಮಾನ್ಯತೆಯನ್ನು, 32 ಆಸ್ಪತ್ರೆಗಳು ಜೆಸಿಐ ಮಾನ್ಯತೆಯನ್ನು ಪಡೆದುಕೊಂಡಿವೆ. ರಾಜ್ಯದಲ್ಲಿರುವ ಸುಮಾರು 5,000 ಆಸ್ಪತ್ರೆಗಳಲ್ಲಿ 37 ಆಸ್ಪತ್ರೆಗಳು (ಬೆಂಗಳೂರಿನ 30 ) ಎನ್‌ಎಬಿಎಚ್ ಹಾಗೂ 4 ಆಸ್ಪತ್ರೆಗಳು (ಎಲ್ಲ ಬೆಂಗಳೂರಲ್ಲಿ) ಜೆಸಿಐ ಮಾನ್ಯತೆಯನ್ನು ಪಡೆದುಕೊಂಡಿವೆ. ಅಂದರೆ, ಶೇ.98ರಷ್ಟು ಆಸ್ಪತ್ರೆಗಳು ಈ ಖಾಸಗಿ ಮಾನ್ಯತೆಗಳನ್ನು ಪಡೆಯುವ ಗೋಜಿಗೇ ಹೋಗಿಲ್ಲವೆಂದಾಯಿತು.

ಈ ಮಾನ್ಯತೆಯನ್ನು ಪಡೆಯಬೇಕಾದರೆ ಆಸ್ಪತ್ರೆಗಳು ಶುಲ್ಕವನ್ನು ತೆರಬೇಕು ಮಾತ್ರವಲ್ಲ, ಹಲವು ಥರದ ಬದಲಾವಣೆಗಳನ್ನೂ ಮಾಡಿಕೊಳ್ಳಬೇಕು. ಆಸ್ಪತ್ರೆ ಕೊಠಡಿಗಳ ಅಳತೆ-ವಿನ್ಯಾಸಗಳು, ಉಪಕರಣಗಳು ಮತ್ತಿತರ ಸೌಲಭ್ಯಗಳು, ವೈದ್ಯಕೀಯ ಹಾಗೂ ಇತರ ಸಿಬಂದಿ ವರ್ಗ, ಸ್ವಾಗತಿಸುವಲ್ಲಿಂದ ಬಿಡುಗಡೆಯವರೆಗಿನ ಸಭ್ಯತೆಗಳು ಮತ್ತು ಉಪಚಾರಗಳು, ರೋಗಿಯ ಬಗೆಗಿನ ಎಲ್ಲ ವಿವರಗಳನ್ನು ದಾಖಲಿಸುವುದು ಇತ್ಯಾದಿ ನೂರಕ್ಕೂ ಹೆಚ್ಚು ‘ಶಿಷ್ಟಾಚಾರಗಳನ್ನು’ ಈ ಖಾಸಗಿ ಮಾನ್ಯತಾ ಸಂಸ್ಥೆಗಳು ವಿಧಿಸುತ್ತವೆ. ಇವನ್ನು ಅಳವಡಿಸಿ ಪೂರ್ಣ ಪ್ರಮಾಣದ ಮಾನ್ಯತೆಯನ್ನು ಪಡೆಯಬೇಕಾದರೆ ಹಲವು ಲಕ್ಷಗಳನ್ನು ವ್ಯಯಿಸಬೇಕಾಗುತ್ತದೆ ಮತ್ತು ಅದನ್ನು ಊರ್ಜಿತದಲ್ಲಿಡಲು ಇನ್ನಷ್ಟು ಲಕ್ಷಗಳು ಬೇಕಾಗುತ್ತವೆ.

ಉದಾಹರಣೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈ ಖಾಸಗಿ ಮಾನ್ಯತೆಗಾಗಿ 620 ಚದರ ಮೀಟರ್ ಕಟ್ಟಡವಿರಬೇಕು, 23 ಸಿಬ್ಬಂದಿ ಇರಬೇಕು. ಆದರೆ, ಸರಕಾರದ ಸಾರ್ವಜನಿಕ ಆರೋಗ್ಯ ಮಾನದಂಡಗಳನುಸಾರ (ಐಪಿಎಚ್‌ಎಸ್) 385 ಚದರ ಮೀಟರ್ ಕಟ್ಟಡ ಹಾಗೂ 13-18 ಸಿಬ್ಬಂದಿ ಇದ್ದರೆ ಸಾಕು. ಖಾಸಗಿ ಮಾನ್ಯತೆಗಾಗಿ ಉಪಕರಣಗಳು ಮತ್ತಿತರ ಸೌಲಭ್ಯಗಳೂ ಹೆಚ್ಚಿನ ಪ್ರಮಾಣದಲ್ಲಿರಬೇಕು. ಆಸ್ಪತ್ರೆಯ ಮಟ್ಟವು ಮೇಲೇರಿದಂತೆ ಈ ಪಟ್ಟಿಯೂ ಹಿರಿದಾಗುತ್ತದೆ. ರೋಗಿಯನ್ನು ಮುಟ್ಟುವುದಕ್ಕೆ ಕೈಗವಸುಗಳನ್ನು ಧರಿಸುವುದು, ಪ್ರತಿಯೊಂದು ಶಸ್ತ್ರಕ್ರಿಯೆಯಲ್ಲೂ ಮರುಬಳಕೆಯಿಲ್ಲದ ಸಾಧನಗಳನ್ನೇ ಬಳಸುವುದು ಇತ್ಯಾದಿ ನಿರ್ಬಂಧಗಳನ್ನೂ ಈ ಖಾಸಗಿ ಮಾನ್ಯತೆಗಳು ಹೇರುತ್ತವೆ. ಈ ಅನಗತ್ಯವಾದ ಸವಲತ್ತುಗಳು, ಸಾಧನಗಳು ಮತ್ತು ಕ್ರಮಗಳಿಗೆ ಮಾಡುವ ವೆಚ್ಚಗಳಿಂದಾಗಿ ಮತ್ತು ಅವೆಲ್ಲಕ್ಕೂ ಸೇರಿಸುವ ಲಾಭಾಂಶಗಳಿಂದಾಗಿ ಈ ಖಾಸಗಿ ಮಾನ್ಯತೆಗೆ ಒಳಪಟ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವಿಧಿಸಲಾಗುವ ದರವೂ ಹಲವು ಪಟ್ಟು ಹೆಚ್ಚಾಗುತ್ತದೆ.

ಇಷ್ಟೆಲ್ಲ ವಿಶೇಷತೆಗಳಿಂದ ರೋಗಿಗಳಿಗೆ ಒಳಿತಾಗುತ್ತದೆಯೇ? ಸುರಕ್ಷತೆ ಹೆಚ್ಚುತ್ತದೆಯೇ? ಚಿಕಿತ್ಸೆಯ ಫಲಿತಾಂಶ ಸುಧಾರಿಸುತ್ತದೆಯೇ? ಹೌದೆನ್ನುವುದಕ್ಕೆ ಆಧಾರಗಳಿಲ್ಲ. ಇಂಥ ಮಾನ್ಯತಾ ಪ್ರಕ್ರಿಯೆಗಳ ಬಗ್ಗೆ ನಡೆಸಲಾಗಿರುವ 122 ಅಧ್ಯಯನಗಳ ವಿಮರ್ಶೆಯೊಂದು, ಅವುಗಳಿಂದ ಹೆಚ್ಚಿನ ಪ್ರಯೋಜನಗಳಿಲ್ಲ ಎಂದಿದೆ. ಆಗಬಹುದಾದ ಪ್ರಯೋಜನಗಳು ಅದಕ್ಕಾಗುವ ವೆಚ್ಚವನ್ನು ಸರಿದೂಗುವುದಿಲ್ಲ ಎಂದು ಇನ್ನೊಂದು ಅಧ್ಯಯನ ಹೇಳಿದೆ. ಈ ಶಿಷ್ಟಾಚಾರಗಳ ಪಾಲನೆಗಾಗಿ ವೈದ್ಯರೂ, ದಾದಿಯರೂ ಮತ್ತಿತರ ಸಿಬ್ಬಂದಿಯೂ ರೋಗಿಗಳ ವಿವರಗಳನ್ನು ದಾಖಲಿಸುವ ಕೆಲಸದಲ್ಲೇ ಮುಳುಗಿ, ರೋಗಿಯ ಆರೈಕೆಗೆ ಹಿನ್ನಡೆಯಾಗುತ್ತದೆ ಎಂದು ಹಲವು ವರದಿಗಳು ಹೇಳಿವೆ. ಅಮೆರಿಕದಲ್ಲಿ ಇಂತಹ ಹಲವು ನಿಬಂಧನೆಗಳಿಂದಾಗಿ ಪ್ರತಿ ರೋಗಿಗೆ ಸೇವೆಯೊದಗಿಸುವಲ್ಲಿ 30-60 ನಿಮಿಷಗಳಷ್ಟು ವಿಳಂಬವಾಗುತ್ತಿದೆ, ರೋಗಿಗಿಂತ ರೋಗಿಯ ದಾಖಲೆಗಳೇ ದೊಡ್ಡವೆಂಬ ಸ್ಥಿತಿಯುಂಟಾಗಿದೆ. ಇದೇ ಕಾರಣಕ್ಕೆ, ದಾಖಲೀಕರಣದ ಪ್ರಕ್ರಿಯೆಯನ್ನು ತೀರಾ ಸರಳಗೊಳಿಸುವ ಬಗ್ಗೆ ಚಿಂತನೆ ಆರಂಭಗೊಂಡಿದೆ. ಇಂತಹ ಶಿಷ್ಟಾಚಾರಗಳು ಸಾಮಾನ್ಯವಾಗಿರುವ ಅಮೆರಿಕದಲ್ಲಿ ವರ್ಷಕ್ಕೆ ಒಂದು ಲಕ್ಷದಷ್ಟು ರೋಗಿಗಳು ವೈದ್ಯಕೀಯ ತಪ್ಪುಗಳಿಂದ ಸಾಯುತ್ತಾರೆ, ಮಾನ್ಯತೆಯನ್ನು ಪಡೆದಿದ್ದ ಕೊಲ್ಕೊತಾದ ಆಸ್ಪತ್ರೆಯೊಂದರಲ್ಲಿ ಬೆಂಕಿ ಹೊತ್ತಿ, ನೂರಕ್ಕೂ ಹೆಚ್ಚು ಸಾವುಗಳಾಗಿವೆ ಎನ್ನುವುದನ್ನು ಪರಿಗಣಿಸಿದರೆ, ಈ ‘ಶಿಷ್ಟಾಚಾರಗಳಿಂದ’ ಸುರಕ್ಷತೆ ಹೆಚ್ಚುತ್ತದೆ ಎನ್ನುವುದು ಸಂಶಯಾಸ್ಪದವಾಗುತ್ತದೆ.

ಇದನ್ನೂ ಓದಿ : ಇಲಾಜು | ಎನ್‌ಎಂಸಿ ಆರಂಭವಾದರೆ ಬಹುಶಃ ವೈದ್ಯರು ವೈದ್ಯರಾಗಿ ಉಳಿಯುವುದಿಲ್ಲ!

ಈ ಖಾಸಗಿ ಮಾನ್ಯತೆಗಳನ್ನು ಪಡೆಯಲು ಹೆಚ್ಚಿನ ಆಸ್ಪತ್ರೆಗಳು ಒಲವು ತೋರದಿರುವುದರಿಂದ ಬಗೆಬಗೆಯ ಯೋಜನೆಗಳನ್ನು ಹೂಡಲಾಗುತ್ತಿದೆ. ಹಲವು ಲಕ್ಷಗಳ ಅಗತ್ಯವಿರುವ ಪೂರ್ಣ ಮಾನ್ಯತೆಯ ಬದಲಿಗೆ ಪ್ರವೇಶ ಮಟ್ಟದ ಮಾನ್ಯತೆ, ವಿಭಾಗೀಯ ಮಾನ್ಯತೆ ಇತ್ಯಾದಿಗಳನ್ನು ಈಗ ಆರಂಭಿಸಲಾಗಿದೆ. ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಷ್ಟೇ ನಗದುರಹಿತ ಆರೋಗ್ಯ ವಿಮಾ ಸೌಲಭ್ಯವಿರುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ವಿಕಾಸ ಪ್ರಾಧಿಕಾರದ ನಿಯಮಗಳನ್ನು 2016ರ ಜುಲೈನಲ್ಲಿ ತಿದ್ದುವ ಮೂಲಕ ಎಲ್ಲ ಆಸ್ಪತ್ರೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕರ್ನಾಟಕ ಜ್ಞಾನ ಆಯೋಗದ ಆರೋಗ್ಯ ನೀತಿಯ ಉಪಸಮಿತಿಯ ವರದಿಯಲ್ಲೂ ಎನ್‌ಎಬಿಎಚ್ ಮಾನದಂಡಗಳನ್ನು ಅಳವಡಿಸಬೇಕೆಂಬ ಸಲಹೆಗಳನ್ನು ಹಲವೆಡೆ ಸೇರಿಸಲಾಗಿದೆ. ವಿವಿಧ ಆರೋಗ್ಯ ಖಾತರಿ ಯೋಜನೆಗಳಲ್ಲಿ ಈ ಖಾಸಗಿ ಮಾನ್ಯತೆಗಳನ್ನು ಪಡೆದ ಆಸ್ಪತ್ರೆಗಳಿಗೆ ಹೆಚ್ಚು ಹಣವು ಸಂದಾಯವಾಗುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಆಸ್ಪತ್ರೆಗಳಿಗೆ ನೇರವಾಗಿ ಮಾನ್ಯತೆ ನೀಡಬೇಕೆಂಬ ಪ್ರಸ್ತಾಪವು ಕೆಪಿಎಂಇ ಸಮಿತಿ ಎದುರು ಬಂದಿತ್ತಾದರೂ, ವಿರೋಧದಿಂದಾಗಿ ಅಲ್ಲಿಗೇ ನಿಂತಿತ್ತು. ಹಾಗಿದ್ದರೂ, ಅದರ ಸನ್ನದೊಂದನ್ನು ಕಾಯಿದೆಯೊಳಗೆ ಸೇರಿಸಿ, ಇನ್ನೆಲ್ಲೂ ಇಲ್ಲದ ಮನ್ನಣೆಯನ್ನು ನೀಡಲಾಗಿದೆ.

ಖಾಸಗಿ ಮಾನ್ಯತೆಯನ್ನು ಹಾಗೋ ಹೀಗೋ ಹೇರಿ, ಆರೋಗ್ಯ ಸೇವೆಗಳನ್ನು ದುಬಾರಿಯಾಗಿಸಿ, ವೈದ್ಯರ ಕೆಲಸಗಳನ್ನು ಕ್ಲಿಷ್ಟಗೊಳಿಸಿ, ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳನ್ನು ಹೊರಗುಳಿಸಿ ಮುಚ್ಚಿಸುವ ಈ ತಂತ್ರಗಳೆಲ್ಲ ಅರ್ಥವಾಗದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ತೊಂದರೆಗಳಾಗುವುದು ನಿಶ್ಚಿತ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More