ಶತಪಥ | ಕೆಂಪು ಗುಲಾಬಿಯ ಕುರಿತು ಕಾವ್ಯ ಬರೆಯಲು ಹೋಗಿ...

“ರಕ್ತ ನೋಡಿ ಗ್ರೂಪು ಹೇಳಲು ಆಗದು. ಎಲ್ಲ ರಕ್ತಗಳೂ ಒಂದೇ ಬಣ್ಣವಿದ್ದು ಮೋಸವಾಯಿತು, ಬಗೆಬಗೆಯ ರಕ್ತ ಇದ್ದಿದ್ದರೆ ಕೆಲಸ ಸುಲಭವಾಗುತಿತ್ತು,” ಎಂದರು. ಯಾರೆಂತ ತಿಳಿಯಲಿಲ್ಲ. ಆಗಲೇ ಗ್ರೂಪು ಶಬ್ದದ ಇನ್ನೊಂದರ್ಥ ಅರಿವಾಗಿದ್ದು! ಹೆಪ್ಪುಗಟ್ಟಿದ ರಕ್ತದ ಸುತ್ತ ಈ ದಪ್ಪ ಜನ ನೆರೆದಿತ್ತು

“ಜೋಪಾನ... ಕೀಟಗಳು, ಹುಳಗಳು ದಾಳಿ ಮಾಡುತ್ತವೆ. ಆಗಾಗ ಸ್ಪ್ರೇ ಮಾಡು,” ಇತ್ಯಾದಿ ಜಾಗ್ರತೆ ಹೇಳುತ್ತ ಗೆಳತಿಯೊಬ್ಬಳು ಕೊಟ್ಟ ಗುಲಾಬಿ ಗಿಡದಲ್ಲಿ ಕೆಂಪು ಅರಳಿದೆ. ಹಿಗ್ಗಿನಿಂದ ಆ ಕುರಿತು ಬರೆಯಹೋದೆ, ಬರೆಯದಾದೆ. ಈಗ ಅರಳಿದ ಹೂವಿನಂಥ ಹುಡುಗಿಯ ಚಿತ್ರ ಕಣ್ಮುಂದೆ ಕಟ್ಟುತ್ತಿದೆ. ಬರೆಯಲಿ ಹೇಗೆ?

ಕೆಂಪು ಗುಲಾಬಿ- ಗುಲಾಬಿಯ ಪರಿಮಳವನ್ನಲ್ಲ, ರಕ್ತದ ವಾಸನೆ ಹೊಮ್ಮಿಸಿದಂತೆ ಭಾಸವಾಗುತ್ತಿದೆ.

ಹೊಟ್ಟೆ ತೊಳಸುತ್ತಿದೆ.

***

ರಕ್ತ, ರಸ್ತೆಯ ಮೇಲೆ ರಕ್ತ, ಹರಿಯುತ್ತಿರಲಿಲ್ಲ, ಸ್ತಬ್ದವಿತ್ತು, ಸಾವಿನಂತೆ.

“ಅದು ಯಾವ ಗ್ರೂಪಿನ ರಕ್ತ?” ಕೇಳಿದರು ಯಾರೋ; ಎ ಬಿ ಸಿ ಡಿ ಪಾಸಿಟಿವ್ ನೆಗೆಟಿವ್, ಓ ನೆಗೆಟಿವ್ ಎಲ್ಲ ನೆನಪಾಗುವುದರಲ್ಲಿ...

“ರಕ್ತ ನೋಡಿ ಗ್ರೂಪು ಹೇಳಲು ಆಗದು. ಎಲ್ಲ ರಕ್ತಗಳೂ ಒಂದೇ ಬಣ್ಣವಿದ್ದು ಮೋಸವಾಯಿತು, ಬಗೆಬಗೆಯ ರಕ್ತ ಇದ್ದಿದ್ದರೆ ಕೆಲಸ ಸುಲಭವಾಗುತಿತ್ತು,” ಎಂದರು. ಯಾರೆಂತ ತಿಳಿಯಲಿಲ್ಲ. ಆಗಲೇ ಗ್ರೂಪು ಶಬ್ದದ ಇನ್ನೊಂದರ್ಥ ಅರಿವಾಗಿದ್ದು! ಹೆಪ್ಪುಗಟ್ಟಿದ ರಕ್ತದ ಸುತ್ತ ಈ ದಪ್ಪ ಜನ ನೆರೆದಿತ್ತು, ಬೆಪ್ಪುಗಟ್ಟಿ ತದೇಕ ನೋಡುತ್ತ, ರಕ್ತವನ್ನೇ. “ಅಯ್ಯೋ, ಯಾರೋ ಕಣ್ಣಲ್ಲಿ ರಕ್ತವಿಲ್ಲದವರ ಕೆಲಸ,” ಆಕ್ರೋಶ ಧ್ವನಿಯೂ ಕೇಳುತಿತ್ತು. ‘ಆಗಿ’ ತುಸು ಹೊತ್ತು ಆಗಿರಬೇಕು. ಲಾಂಗು, ಮಚ್ಚು ಠಳಾಯಿಸಿ ಯಾರಿಂದ ಯಾರಿಗೆ ಎಂದೇ ತಿಳಿಯದಂತೆ ಕರ್ತರುಗಳೆಲ್ಲ ಹಾರಿ ಹೋಗಿ, ಸಾವಿಗೀಡಾದವರನ್ನೂ ಇನ್ನೂ ಸಾಯದ ಜೀವರನ್ನೂ ಆಸ್ಪತ್ರೆಗೆ ಒಯ್ದಿದ್ದರು. ಅದೇ, ಹೇಳಿದೆನಲ್ಲ, ಹೆಪ್ಪುಗಟ್ಟುತಿದ್ದ ರಕ್ತ, ಮಾತೂ ಹೆಪ್ಪುಗಟ್ಟಿದಂತೆ ಎಲ್ಲ ನೋಡುತ್ತಲೇ ಇದ್ದರು.

ದಾಟಿ ಹೋಗಲು ಸಾಧ್ಯವಿಲ್ಲದಂತೆ ಅಡ್ಡನಿಂತ ರಕ್ತದ ಹೊಳೆ.

ಪೋಲೀಸರು, ಪೊಲಿಟಿಕರು, ಪೇಪರಿನವರು, ಇಪ್ಪತ್ನಾಲ್ಕು ಗುಣಿಸು ಏಳಿನವರು ಬರುತಿದ್ದಾರೆ. ದಾರಿ ಬಿಡೀ ದಾರಿ ಬಿಡೀ.

ದಾರಿ ಬಿಡುತ್ತಿದೆ ಜನ. ಹಿಡಿದರೇ, ಸಿಕ್ಕಿದರೇ, ತಪ್ಪಿದರೇ? ಯಾರಂತೆ, ಯಾವ ಗ್ರೂಪಿನವರಂತೆ?

ತನಿಖೆ ನಡೆಯುತ್ತಿದೆ, ಫೋಟೋ, ನೆರೆದವರ ಬಳಿ ಮೈಕ್ ಚಲಿಸುತ್ತಿದೆ. ಮಾತಾಡುವ ಉತ್ಸಾಹದ ಮಂದಿ ತಳ್ಳಿಕೊಂಡು ಮುಂದೆ ಬರುತಿದ್ದಾರೆ.

ಇನ್ನು, ಇಲ್ಲಿಂದ ಮುಂದೆ ಹೋಗಲಂತೂ ಸದ್ಯಕ್ಕೆ ಸಾಧ್ಯವೇ ಇಲ್ಲ. ತುರ್ತು ಪರಿಸ್ಥಿತಿ, ಹೋಗಲೇಬೇಕು ಅಂತ ಹೇಳಿದರೆ ಕೇಳುವವರಿಲ್ಲ.

ರಕ್ತ ನಡುರಸ್ತೆ ಮಾತ್ರವಲ್ಲ, ಆಚೆಯಂಚಿನಿಂದ ಈಚೆ ಅಂಚಿನವರೆಗೂ ಹರಡಿಕೊಂಡಿದೆ. ದಾಟುವುದಾದರೂ ಹೇಗೆ? ಮುಂದರಿಯದೆ, ಅಲ್ಲಿಂದಲೇ ಹಿಂದೆ ಬರುತಿದ್ದೇನೆ...

ಜಾಥಾ ಹೊರಟಿತ್ತು. ಶೌಚಕ್ಕೆ ಹೋದ ಹೆಣ್ಣುಮಗಳನ್ನು ಎಳೆದು... ಅಬ್ಬ, ಹೇಳಲೂ ಹೇವರಿಸುವ ಒಡಲು ನಡುಗಿಸುವ ಘಟನೆಗೆ ಪ್ರತಿಭಟನೆ ಜಾಥಾ.

ಮುಂದೆ ಬರುತ್ತಲಿತ್ತು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ.

“ಒಂದೆಡೆ ಪುಂಡ ಪೋಕರಿಗಳು. ಇನ್ನೊಂದೆಡೆ ಸಾಂಸ್ಕೃತಿಕ ಗುತ್ತೇದಾರರು. ತಾಯಿ ಎನ್ನುವರು, ದೇವಿ ಎನ್ನುವರು, ಶಕ್ತಿ ಎನ್ನುವರು, ಮತ್ತು ಹಾಗೆ ಎನ್ನುತ್ತಲೇ...”

ಉಗ್ರ ಶಿಕ್ಷೆ ಕೊಡಿ, ಜೀವಾವಧಿ ಶಿಕ್ಷೆ...

ಕೂಗು ನಾಲ್ದೆಸೆಗಳನ್ನು ತಿವಿಯುವಂತಿತ್ತು. ಹುಡುಗಿಯ ಚಿತ್ರ ಹಿಡಿದಿದ್ದರು, ಮುಗ್ಧ, ಈಗಷ್ಟೇ ಕಣ್ಣೊಡೆದ ಪುಟಾಣಿ. ಎರಡು ಜಡೆ ತೊಟ್ಟು ಚಿತ್ರದೊಳಗಿಂದ ಜಗತ್ತಿನೆಡೆಗೆ ನೋಡುತ್ತ ಇದ್ದಳು. ಆ ಕಂಗಳಲ್ಲಿ ಎಂತಹ ಹರ್ಷವಿತ್ತು, ತುಂಟತನವಿತ್ತು. ನಸುನೀಲಿ ಅಂಗಿ ತೊಟ್ಟು, ಬಾ ಎಂದೊಡನೆ ಪುಟಿಪುಟಿದು ಓಡಿಬರುವ ಚಿಗರೆಯಂತಿದ್ದಳು. ಅಯ್ಯೋ ಮಗುವೇ! ತಾಯ ಕರುಳೇ!

ಕತ್ತೆ ಕಿರುಬಗಳು ಹೊತ್ತುಕೊಂಡು ಹೋಗಬಹುದಾದ ಕೊಳ್ಳೆಯಾದರೇ ಹೆಣ್ಣುಮಕ್ಕಳು? ಇದು ಏನು? ಯಾಕೆ? ಯಾರೊಡನೆ ಕೇಳಲಿ?

ಕಾಮಾಂಧ ಹುಳಗಳು, ಇಂಥ ಹುಳಗಳಿಗೆ ಯಾವ ಸ್ಪ್ರೇ? ಹೇಳು ಗೆಳತೀ.

ಲಿಂಗ ಮಾತ್ರದ ಪ್ರಪಂಚವಾಯಿತೇ? ಶೌಚಕ್ಕೆ ಹೋಗುವುದೂ ಜೀವನ್ಮರಣದ ಪ್ರಶ್ನೆಯಾಯಿತೇ, ನಮ್ಮದು?

ಸಮಯ ನೋಡಿ ಸುಡುಬೆಂಕಿ ಹೊಮ್ಮುವ ಸ್ವರಕ್ಷಣೆಯ ಉಪಕರಣವನ್ನಾದರೂ ಹೆಣ್ಣು ಶರೀರದಲ್ಲಿ ಹೊಂದಿಸಿಡು ಓ ಪ್ರಕೃತಿಮಾತೆಯೇ!

* * *

ವರ್ಷ ಕಳೆಯಿತು, ವರ್ಷ ಬಂದಿತು. ಹರ್ಷ ಮಾತ್ರ ಬರಲಿಲ್ಲ.

ಶುಭಾಶಯಗಳ ರಾಶಿ, ಕಂಠ ಬಿಗಿದಿದೆ, ಕಕ್ಕಾಬಿಕ್ಕಿ ನೋಡುತ್ತಿವೆ.

ಇನ್ನೆಷ್ಟು ಹೆಣ ಬೀಳಲಿದೆ?

ಇನ್ನೆಷ್ಟು ಗ್ರೂಪಿನ ರಕ್ತ ಚೆಲ್ಲಲಿದೆ?

ಇನ್ನೆಷ್ಟು ಕಾಲ ಹೀಗೆ?

ಅಂತ್ಯವೆಂಬುದು ಇದೆಯೇ?

ಇದೆಯೆನ್ನುದರಲಿ ನಿಜ ಇದೆಯೇ?

* * *

ರಸ್ತೆಯಲ್ಲಿ ರಕ್ತ ಚೆಲ್ಲಿದೆ.

ನದಿಯ ಜುಳುಜುಳು ಬರೆಯ ಹೋದೆ,

ನದಿ ನೀರು ರಕ್ತಗೆಂಪಾಗಿದೆ

ಮಲಯ ಮಾರುತವ ಬರೆಯ ಹೋದೆ

ಮಾರುತವು ಒಣರಕ್ತ ವಾಸನೆ ಹರಡಿದೆ

ಇದನ್ನೂ ಓದಿ : ಶತಪಥ | ಆ ಬಣ್ಣ ಈ ಬಣ್ಣ ಸು-ಬಣ್ಣ ಕ-ಬಣ್ಣ ಬಣ್ಣದೊಳಗಣ ಬಣ್ಣ ಯಾವುದು?
ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More