ಕಾಶ್ಮೀರದಿಂದ | ಇಮ್ರಾನ್ ಖಾನ್ ಮೂರನೇ ಮದುವೆ ಮತ್ತು ಪ್ರಧಾನಿ ಪಟ್ಟದ ಕನಸು

ಪಾಕಿಸ್ತಾನದ ರಾಜಕಾರಣಿ ಇಮ್ರಾನ್ ಖಾನ್ ಕುರಿತ ಇತ್ತೀಚಿನ ಸುದ್ದಿ ಎಂದರೆ, ಅವರು ಆಗಿದ್ದಾರೆನ್ನಲಾದ ಮತ್ತೊಂದು ಮದುವೆ. ಈ ವಿಷಯ ಯಾವ ರೀತಿ ಸದ್ದು ಮಾಡಿದೆ ಎಂದರೆ, ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳಿಂದ ನೆರವು ಕಡಿತಗೊಳ್ಳುತ್ತಿರುವುದನ್ನೇ ಪಾಕಿಸ್ತಾನಿಗಳು ಮರೆತಿರುವಂತೆ ಕಾಣುತ್ತದೆ!

ಪಾಕಿಸ್ತಾನದ ಪ್ರಮುಖ ರಾಜಕಾರಣಿ ಎನಿಸಿಕೊಂಡಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ದಿನಪತ್ರಿಕೆಗಳ ಹೆಡ್ಡಿಂಗ್‌ಗಳಲ್ಲಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ, ಆಯಾ ಮಾಧ್ಯಮ ಸಂಸ್ಥೆಯ ಚರ್ಚೆಯ ಆದ್ಯತೆಗಳನ್ನು ಆಧರಿಸಿ, ತಮ್ಮ ಒಳ್ಳೆಯತನ ಅಥವಾ ಖಳನಾಯಕತನದ ಸಮಾನ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅದೇನೂ ವಿಶೇಷವಲ್ಲ, ಹೊಸತೂ ಅಲ್ಲ.

ಅವರ ವಿಶೇಷತೆ ಏನೆಂದರೆ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಕರ್ಷಕ ಅಥವಾ ಅಸಹ್ಯಕರ ಎನಿಸುವಂಥ ಸುದ್ದಿಗಳನ್ನು ಬಹುಶಃ ಸಮಾನ ಪ್ರಮಾಣದಲ್ಲಿ ಸೃಷ್ಟಿಸುತ್ತಲೇ ಇರುವುದು! ಅರವತ್ತಾರರ ಈ ಇಳಿಪ್ರಾಯದಲ್ಲಿಯೂ ಅವರ ನೀಳ ಕೇಶರಾಶಿಯ ಜೊತೆಗೆ ಯುವಕನಂತೆ ಕಾಣುವ ನೋಟ ಮತ್ತು ಸದೃಢ ಮೈಕಟ್ಟು ಇದೆಯಲ್ಲ, ಅದು ಧಡೂತಿ ಶರೀರದ ಮತ್ತು ಬೋಳುತಲೆ ಹೊಂದಿರುವ ಅವರ ರಾಜಕೀಯ ವಿರೋಧಿಗಳನ್ನು ತಕ್ಕಮಟ್ಟಿಗಿನ 'ಅಸುರಕ್ಷತೆಯ ಭಾವ’ಕ್ಕೆ ತಳ್ಳಿ, ಆತ್ಮಾವಲೋಕನಕ್ಕೆ ದೂಡಿಬಿಡುತ್ತದೆ. ಅಷ್ಟೇ ಸಮನಾಗಿ, ಇಳಿವಯಸ್ಸಿನಲ್ಲಿಯೂ ಸುಂದರ ತರುಣಿಯರು ಸೇರಿದಂತೆ ಹೆಂಗಳೆಯರ ಗಮನವನ್ನು ಸಲೀಸಾಗಿ ಸೆಳೆಯುವ ಸಾಮರ್ಥ್ಯ ಅವರಿಗೆ ಒಂದು ಬೋನಸ್ ಆಗಿಯೇ ಪರಿಣಮಿಸಿದೆ. ಇಸ್ಲಾಮಾಬಾದ್, ಲಾಹೋರ್ ಮತ್ತು ಲಂಡನ್‌ನಲ್ಲಿ ಅವರ ರ‍್ಯಾಲಿಗಳಿಗೆ ಹಾಜರಾಗಿರುವ ನಾನು, ಇಮ್ರಾನ್‌ರಿಗೆ ಮರುಳಾಗುವ ಹೆಂಗಳೆಯರನ್ನು ಕಣ್ಣಾರೆ ಕಂಡಿದ್ದೇನೆ.

ಇಮ್ರಾನ್ ಖಾನ್ ಅವರ ಇತ್ತೀಚಿನ ಸುದ್ದಿ ಎಂದರೆ, ಅವರು ಆಗಿದ್ದಾರೆನ್ನಲಾದ ಮತ್ತೊಂದು ಮದುವೆ. ಇದು ನಿಜವೇ ಆಗಿದ್ದರೆ ಈ ಮದುವೆ ಮೂರನೆಯದು. ಈ ವಿಷಯ ಯಾವ ರೀತಿ ಸದ್ದು ಮಾಡಿದೆ ಎಂದರೆ, ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳಿಂದ ನೆರವು ಕಡಿತಗೊಳ್ಳುತ್ತಿರುವುದನ್ನೇ ಪಾಕಿಸ್ತಾನಿಗಳು ಮರೆತಿರುವಂತೆ ಕಾಣುತ್ತದೆ! ಪಾಕಿಸ್ತಾನಿಗಳು ಇಮ್ರಾನ್ ಖಾನ್ ಅವರ ಮೂರನೆಯ ಪತ್ನಿ ಎನ್ನಲಾದ ಬುಶ್ರಾ ಮೇನಕಾ ಅಲಿಯಾಸ್ ಬುಶ್ರಾ ಬೀಬಿ ಬಗ್ಗೆ ಅತೀವ ಕುತೂಹಲ ಹೊಂದಿದ್ದಾರೆ ಮತ್ತು ಪ್ರತಿದಿನ ಮಾಧ್ಯಮಗಳ ಸುದ್ದಿಯ ಬಹುಭಾಗ ಈ ವಿಷಯಕ್ಕೇ ಮೀಸಲಾಗಿಬಿಟ್ಟಿದೆ.

ಈ ಶಂಕಿತ ಮದುವೆ ಅನೇಕ ಆಸಕ್ತಿಕರ ಆಯಾಮಗಳನ್ನು ಹೊಂದಿದೆ. ಮೊದಲನೆಯದು, ಇಮ್ರಾನ್ ಖಾನ್ ಅವರು ಈ ಮದುವೆಯನ್ನೂ, ಟೆಲಿವಿಜನ್ ನಿರೂಪಕಿ ರೆಹಾಂ ಖಾನ್ ಜೊತೆ ಮಾಡಿಕೊಂಡಿದ್ದ ತಮ್ಮ ಎರಡನೆಯ ಮದುವೆಯಂತೆ ಗುಟ್ಟಾಗಿಯೇ ಮಾಡಿಕೊಂಡಿದ್ದಾರೆ. ಇದೇ ವೇಳೆ, ನಂತರದಲ್ಲಿ ಖಚಿತಪಡಿಸುವ ಇರಾದೆಯಿಂದಲೇ ಸದ್ಯಕ್ಕೆ ಈ ಮದುವೆಯ ಕುರಿತಾದ ವರದಿಗಳನ್ನು ತಳ್ಳಿಹಾಕಿದ್ದಾರೆ. ಎರಡನೆಯದು, ಇಮ್ರಾನ್ ಅವರ ಹೊಸ ಸಂಗಾತಿ ಎನ್ನಲಾದ ಮಹಿಳೆ ಕಳೆದ ಕೆಲ ವರ್ಷಗಳಿಂದ ಅವರ ಆಧ್ಯಾತ್ಮಿಕ ಗುರು ಆಗಿದ್ದಾರೆ ಮತ್ತು ಐದು ವಯಸ್ಕ ಮಕ್ಕಳ ತಾಯಿ ಆಗಿರುವುದಲ್ಲದೆ, ತಮ್ಮ ಮೂವತ್ತು ವರ್ಷಗಳ ವೈವಾಹಿಕ ಜೀವನಕ್ಕೆ ಕೇವಲ ಮೂರು ತಿಂಗಳ ಹಿಂದೆ ವಿಚ್ಛೇದನ ನೀಡಿದ್ದಾರೆ.

ಕೆಲವು ದಿನಪತ್ರಿಕೆಗಳ ಪ್ರಕಾರ, ವರ್ಣರಂಜಿತ ಮತ್ತು ರಸಿಕತನದ ಇತಿಹಾಸ ಹೊಂದಿರುವ ಖಾನ್, ಅದ್ಹೇಗೋ ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಕಿಯ ವೈವಾಹಿಕ ಜೀವನವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಬುಶ್ರಾ ಬೀಬಿ ಅವರ ಮಾಜಿ ಪತಿ ಖಾವರ್ ಫರೀದ್ ಮೇನಕಾ ಅವರಿಗೆ ಗೊತ್ತಾದಾಗ ಅವರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ತಮ್ಮ ನಿಷ್ಕಳಂಕ ವ್ಯಕ್ತಿತ್ವದ ಮಾಜಿ ಪತ್ನಿಯನ್ನು ಸಂಪರ್ಕಿಸಿ, ಖಾನ್ ಅವರ ಷಡ್ಯಂತ್ರದ ಕುರಿತು ತಿಳಿಸಲು ಯತ್ನಿಸಿದರು. ಆದರೆ ಆಕೆ, ಇಮ್ರಾನ್ ಖಾನ್ ಅವರ ಶ್ರೇಷ್ಠತೆ ಮತ್ತು ಪ್ರಾಮಾಣಿಕತೆಯನ್ನು ಯದ್ವಾತದ್ವಾ ಹೊಗಳಿದ್ದಲ್ಲದೆ, ಇಮ್ರಾನ್ ಅವರ ಕ್ಷೇಮಕ್ಕಾಗಿ ಪ್ರಾರ್ಥಿಸಿದರಂತೆ. ಒಬ್ಬ ಸರಕಾರಿ ಹಿರಿಯ ಅಧಿಕಾರಿ ಆಗಿರುವ ಮಿಸ್ಟರ್ ಮನೇಕಾ, ತಾವು ಪತ್ನಿಯಿಂದ ದೂರವಾಗಿರುವ ಬಗೆಯನ್ನು ವಿವರಿಸಿದರಾದರೂ ಹೆಚ್ಚಿನ ಮಾಹಿತಿ ನೀಡಿಲ್ಲ. ನನ್ನ ಪ್ರಕಾರ, ಖಾನ್ ಅವರ ಈ ಒಳಸಂಚಿನಿಂದಾಗಿಯೇ ಇಡೀ ಪ್ರಕರಣ ಮತ್ತಷ್ಟು ಜಟಿಲವಾಗಿದೆ.

ನಾನು ಪ್ರತಿವಾರ ಬರೆಯುವ, ಪಾಕಿಸ್ತಾನದ ಅತ್ಯಧಿಕ ಪ್ರಸಾರವುಳ್ಳ ಪತ್ರಿಕೆಗಳಾದ ‘ದಿ ನ್ಯೂಸ್’ (ಇಂಗ್ಲಿಷ್) ಹಾಗೂ 'ಜಂಗ್’ (ಉರ್ದು) ಪತ್ರಿಕೆಗಳಲ್ಲಿ ತನಿಖಾ ವರದಿಗಾರರಾಗಿರುವ ಉಮರ್ ಚೀಮಾ ಅವರು, ಈ ಮದುವೆ 2018ರ ಜ.1ರಂದೇ ನಡೆದಿದೆ ಎಂಬ ತಮ್ಮ ವರದಿಗೆ ಇಂದಿಗೂ ಬದ್ಧರಾಗಿಯೇ ಇದ್ದಾರೆ. ಸಂಪ್ರದಾಯವಾದಿಗಳ ಪರ ನಿಲುವು ಹೊಂದಿರುವ ಉರ್ದು ಪತ್ರಿಕೆಯೊಂದರ ಪ್ರಕಾರ, ಹೊಸ ವರ್ಷದ ಮೊದಲ ದಿನದಂದೇ ಮದುವೆಯಾದರೆ ಇಮ್ರಾನ್ ಖಾನ್ ದೇಶದ ಪ್ರಧಾನಮಂತ್ರಿ ಆಗುತ್ತಾರೆ ಎಂದು ಬುಶ್ರಾ ಅವರು ನುಡಿದರೆನ್ನಲಾದ ಭವಿಷ್ಯದ ಫಲವಾಗಿ ಇಮ್ರಾನ್-ಬುಶ್ರಾ ಮದುವೆ ನಡೆದಿದೆ! ನಾನು ಇತ್ತೀಚೆಗೆ ಈ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು, ಇಮ್ರಾನ್ ಅವರ ಕುಟುಂಬಕ್ಕೆ ಆತ್ಮೀಯರಾಗಿರುವ ಮತ್ತು ಈ ಹಿಂದೆ ಅವರ ಸಹವರ್ತಿಯಾಗಿದ್ದ ಸ್ನೇಹಿತರೊಬ್ಬರಿಗೆ ಕರೆ ಮಾಡಿದಾಗ, ಅವರು ಕೂಡ ಯಾವುದೇ ಸಾಕ್ಷ್ಯಗಳು ಎಲ್ಲಿಯೂ ಉಳಿಯದಂತೆ ಈ ಮದುವೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ : ಕಾಶ್ಮೀರದಿಂದ | ಪಾಕಿಸ್ತಾನದಲ್ಲಿನ ಕೊಲೆಯೊಂದರ ಬಗ್ಗೆ ನಿಮಗೆ ಹೇಳಲೇಬೇಕು

ಆದರೆ ಈ ಶಂಕಿತ ಮದುವೆಯನ್ನು ಪ್ರಶ್ನಿಸಿ ಬುಶ್ರಾ ಬೀಬಿಯ ಮಕ್ಕಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವ ಇಮ್ರಾನ್, ತಮ್ಮ ಪಕ್ಷದಿಂದ ಮಾತ್ರ ಪ್ರತಿಕ್ರಿಯೆ ಹೊರಬೀಳುವಂತೆ ನೋಡಿಕೊಂಡಿದ್ದಾರೆ. “ಖಾನ್ ಅವರು ತಮ್ಮ ಆಧ್ಯಾತ್ಮಿಕ ಗುರುವಿಗೆ ಮದುವೆಯ ಪ್ರಸ್ತಾಪ ಇಟ್ಟಿದ್ದಾರೆ. ಆದರೆ ಆ ಗುರು, ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಮಕ್ಕಳೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ,” ಎಂಬ ಪ್ರಕಟಣೆ ಇಮ್ರಾನ್ ಖಾನ್ ಅವರ ಪಕ್ಷದಿಂದ ಹೊರಬಿದ್ದಿದೆ.

ಈ ಚರ್ಚೆ ಇಲ್ಲಿಗೇ ಮುಕ್ತಾಯವಾಗಬೇಕಿತ್ತು, ಆದರೆ ಹಾಗೆ ಮುಕ್ತಾಯ ಆಗಲಾರದು. ಏಕೆಂದರೆ, ಇಮ್ರಾನ್ ಅವರಲ್ಲಿ 66ರ ಇಳಿಪ್ರಾಯದಲ್ಲಿಯೂ ಆ ಚುಂಬಕ ವ್ಯಕ್ತಿತ್ವ ನಿಶ್ಚಿತವಾಗಿಯೂ ಇದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More