ಲೋಕದೃಷ್ಟಿ | ಆಸಿಯಾನ್ ಜೊತೆ ಬಾಂಧವ್ಯ ಸುಧಾರಣೆ ಭಾರತಕ್ಕೆ ಅನಿವಾರ್ಯ

ಏಷ್ಯಾದ ಪ್ರಬಲ ಶಕ್ತಿಯಾಗಿ ಚೀನಾ ಬೆಳೆದಿದೆ. ಅಷ್ಟೇ ಅಲ್ಲ, ಭಾರತದ ಸುತ್ತಲ ದೇಶಗಳ ಜೊತೆ ಬಾಂಧವ್ಯ ಉತ್ತಮಗೊಳಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ಆಗ್ನೇಯ ಏಷ್ಯಾ ವಲಯದ ಹತ್ತು ದೇಶಗಳ (ಆಸಿಯಾನ್) ಶೃಂಗಸಭೆ ಭಾರತಕ್ಕೆ ಮಹತ್ವದ್ದು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಿಟ್ಜರ್ಲೆಂಡಿನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಭಾಗವಹಿಸಿ ಭಾರತದ ವರ್ಚಸ್ಸನ್ನು ಹೆಚ್ಚಿಸುವ ಮತ್ತು ಆ ಮೂಲಕ ಹೆಚ್ಚು ಬಂಡವಾಳ ಆಕರ್ಷಿಸುವ ಪ್ರಯತ್ನವನ್ನು ಇತ್ತೀಚೆಗೆ ತಾನೇ ನಡೆಸಿದರು. ಅದರಿಂದ ಭಾರತಕ್ಕೆ ಎಷ್ಟು ಬಂಡವಾಳ ಹರಿದುಬರುತ್ತದೋ ಈಗಲೇ ಊಹಿಸುವುದು ಸಾಧ್ಯವಿಲ್ಲ. ಹಿಂದಿನ ಅನುಭವದಿಂದ ಹೇಳುವುದಾದರೆ, ಭಾರತಕ್ಕೆ ಅಷ್ಟೇನೂ ಅನುಕೂಲವಾಗದು. ಏಕೆಂದರೆ, ಭಾರತದ ಆರ್ಥಿಕ, ಸಾಮಾಜಿಕ ಮತ್ತು ಆಡಳಿತದ ಬಗ್ಗೆ ಮುಂದುವರಿದ ದೇಶಗಳಲ್ಲಿ ಸದಭಿಪ್ರಾಯಗಳಿಲ್ಲ. ಭಾರತದಲ್ಲಿ ಸುಗಮವಾಗಿ ವ್ಯವಹಾರ ಮಾಡಬಹುದು ಎಂದು ಬಹುಪಾಲು ಶ್ರೀಮಂತ ದೇಶಗಳು ತಿಳಿದಿಲ್ಲ. ಇಲ್ಲಿ ಇನ್ನೂ ನೂರಾರು ಅಡ್ಡಿಗಳಿವೆ ಎಂದು ಹೊರಗಿನ ಹೂಡಿಕೆದಾರರು ಈಗಲೂ ಭಾವಿಸುತ್ತಾರೆ. ಹೀಗಾಗಿ ಭಾರತಕ್ಕೆ ದಾವೋಸ್ ಮಾತುಕತೆಗಿಂತಲೂ ದೆಹಲಿಯಲ್ಲಿ ಆಸಿಯಾನ್ ದೇಶಗಳ ನಾಯಕರ ಶೃಂಗಸಭೆ ಬಹಳ ಮುಖ್ಯವಾದುದು. ಪೂರ್ವದತ್ತ ಗಮನ ಕೊಡುವ ಭಾರತದ ಹಿಂದಿನ ನೀತಿಯ ಮುಂದುವರಿದ ಭಾಗವಾಗಿ ಮಲೇಷ್ಯಾ, ಫಿಲಿಪ್ಪೀನ್ಸ್, ಥಾಯ್ಲೆಂಡ್, ಸಿಂಗಪುರ, ವಿಯಟ್ನಾಂ, ಲಾವೋಸ್, ಮ್ಯಾನ್ಮಾರ್, ಬ್ರೂನೈ, ಕಾಂಬೋಡಿಯಾ ಸದಸ್ಯ ದೇಶಗಳಾಗಿರುವ ಆಸಿಯಾನ್ ಶೃಂಗಸಭೆ ನಡೆದಿದೆ.

ಆಸಿಯಾನ್ ಜೊತೆ ಭಾರತದ ಸಹಭಾಗಿತ್ವ 25 ವರ್ಷಗಳಷ್ಟು ಹಳೆಯದಾದರೂ ಆಗಿರುವ ಪ್ರಗತಿ ಮಾತ್ರ ಅತ್ಯಲ್ಪ. ವಾಣಿಜ್ಯ ವಹಿವಾಟು , ವಿಮಾನ ಸಂಪರ್ಕ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಹಕಾರ, ಸಾಗರ ಸಂಪತ್ತಿನ ಸಂರಕ್ಷಣೆ, ಭಾರತ ಮತ್ತು ಆಸಿಯಾನ್ ದೇಶಗಳ ನಡುವೆ ರಸ್ತೆ ಸಂಪರ್ಕ ಮುಂತಾದ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಎಷ್ಟೋ ವರ್ಷಗಳಾಗಿವೆ. ಯಾವ ಯೋಜನೆಗಳೂ ವೇಗವಾಗಿ ಜಾರಿಗೊಳ್ಳುತ್ತಿಲ್ಲ. ಹೀಗಾಗಿಯೇ ಈ ಶೃಂಗಸಭೆಯಲ್ಲಿ ಮತ್ತೊಮ್ಮೆ ಆ ಬಗ್ಗೆ ಒತ್ತು ನೀಡಲಾಗಿದೆ. ಬಾಂಧವ್ಯ ವೃದ್ಧಿ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿರುವುದಕ್ಕೆ ಕಾರಣವಿದೆ.

ಚೀನಾ ದೇಶ ಏಷ್ಯಾ ವಲಯದಲ್ಲಿ ಬೃಹತ್ ಶಕ್ತಿಯಾಗಿ ಬೆಳೆದಿದೆ. ಏಷ್ಯಾ ವಲಯದ ದೇಶಗಳಲ್ಲಿ ಅಷ್ಟೇ ಅಲ್ಲ, ವಿಶ್ವದ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳಲ್ಲಿಯೂ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ. ಭಾರತ ಮತ್ತು ಇತರ ನೆರೆಹೊರೆಯ ದೇಶಗಳು ಸಮಾನವಾಗಿ ಅಭಿವೃದ್ಧಿ ಹೊಂದದೆಹೋದರೆ, ಚೀನಾದ ಅಡಿಯಾಳಾದ ದೇಶಗಳಾಗಿ ಉಳಿಯಬೇಕಾಗುತ್ತದೆ. ಒಂದು ಕಡೆ, ಅಮೆರಿಕವು ಈ ವಲಯದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಚೀನಾ ನಾನಾ ರೀತಿಯಲ್ಲಿ ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಈ ಪೈಪೋಟಿಯಲ್ಲಿ ಸಣ್ಣಪುಟ್ಟ ದೇಶಗಳು ನಲುಗಿಹೋಗುವ ಸಾಧ್ಯತೆಯೇ ಹೆಚ್ಚು. ಈ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವುದು ಸುಲಭವಲ್ಲ.

ಏಷ್ಯಾ ವಲಯದಲ್ಲಿ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮತ್ತೊಂದು ದೇಶ ಭಾರತ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕ ಮತ್ತು ಚೀನಾದ ಪೈಪೋಟಿಯನ್ನು ಎದುರಿಸಿ, ಒಂದು ರೀತಿಯ ಸಮತೋಲನವನ್ನು ಈ ವಲಯದಲ್ಲಿ ಸ್ಥಾಪಿಸಲು ಸಾಧ್ಯವಿರುವುದು ಭಾರತಕ್ಕೆ ಮಾತ್ರ ಸಾಧ್ಯ. ಆದರೆ, ಆ ದಿಕ್ಕಿನಲ್ಲಿ ಪ್ರಯತ್ನಗಳು ಸಾಲವು. ಇಚ್ಛಾಶಕ್ತಿಯೂ ಆಸಿಯಾನ್‌ನಲ್ಲಿ ಕಾಣುತ್ತಿಲ್ಲ.

ಭಾರತ ಮತ್ತು ಆಸಿಯಾನ್ ನಡುವಣ ವಾಣಿಜ್ಯ ವಹಿವಾಟಿನ ಮೊತ್ತ 2014-15ರಲ್ಲಿ ಇದ್ದದ್ದು ಕೇವಲ 76 ಬಿಲಿಯನ್ ಡಾಲರ್. ಆದರೆ, 2016ರಲ್ಲಿ ಚೀನಾ ಮತ್ತು ಆಸಿಯಾನ್ ನಡುವಣ ವಾಣಿಜ್ಯ ವಹಿವಾಟು 450 ಬಿಲಿಯನ್ ಡಾಲರ್. 2016ರಲ್ಲಿ ಭಾರತ ಆಸಿಯಾನ್ ವಲಯದಲ್ಲಿ ಮಾಡಿದ ಹೂಡಿಕೆ 220 ಮಿಲಿಯನ್ ಡಾಲರ್. ಆದರೆ, ಚೀನಾ ಇದೇ ವರ್ಷ ಆಸಿಯಾನ್ ದೇಶಗಳಲ್ಲಿ ಹೂಡಿದ ಹೂಡಿಕೆ ಪ್ರಮಾಣ ಮೂರು ಬಿಲಿಯನ್ ಡಾಲರ್. ಚೀನಾ ಹೇಗೆ ಬಂಡವಾಳ ಹೂಡಿಕೆ ಮೂಲಕ ತನ್ನ ಪ್ರಭಾವ ಹೆಚ್ಚಿಸಿಕೊಳ್ಳತ್ತದೆ ಎನ್ನುವುದನ್ನು ಈ ಅಂಕಿ-ಅಂಶಗಳೇ ಹೇಳುತ್ತವೆ. ಭಾರತ ಮತ್ತು ಆಸಿಯಾನ್ ದೇಶಗಳ ನಡುವೆ ಬಾಂಧವ್ಯ ಸುಗಮವಾಗಿ ಸಾಗದಿರಲು ಚೀನಾ, ದಕ್ಷಿಣ ಚೀನಾ ಸಾಗರದ ಮೇಲೆ ಸಾಧಿಸುತ್ತಿರುವ ಹಿಡಿತವೂ ಕಾರಣವಾಗಿದೆ. ಈ ವಲಯದ ಸಾಗರ ಸಂಪತ್ತು ಮತ್ತು ಇಡೀ ಸಾಗರ ವಲಯ ತನಗೆ ಸೇರಿದ್ದೆಂದು ಚೀನಾ ವಾದಿಸುತ್ತಿದೆ. ಇದರಿಂದಾಗಿ ವಾಣಿಜ್ಯ ಉದ್ದೇಶದ ಹಡಗುಗಳು ಚಲಿಸುವುದು ಕಷ್ಟವಾಗುತ್ತಿದೆ. ಅಮೆರಿಕವೂ ಚೀನಾದ ವಾದವನ್ನು ತಿರಸ್ಕರಿಸಿ, ಅದು ಅಂತಾರಾಷ್ಟ್ರೀಯ ಸಾಗರ ಪ್ರದೇಶ ಎಂದು ಹೇಳುತ್ತಿದೆ. ಈ ವಿಚಾರದಲ್ಲಿ ಆ ಎರಡೂ ದೇಶಗಳ ನಡುವೆ ಬಿಕ್ಕಟ್ಟು ಉದ್ಭವಿಸಿದ್ದೂ ಇದೆ. ಈ ವಲಯದಲ್ಲಿರುವ ಸಣ್ಣಪುಟ್ಟ ದೇಶಗಳು ಸಾಗರ ಮಾರ್ಗಗಳ ಮತ್ತು ಸಂಪತ್ತಿನ ಹಕ್ಕು ಇಲ್ಲದೆ ಅಭಿವೃದ್ಧಿ ಹೊಂದಲು ಪರದಾಡುತ್ತಿವೆ. ಹೀಗಾಗಿಯೇ ಆ ದೇಶಗಳು ಭಾರತದ ಸಖ್ಯವನ್ನು ಬಯಸುತ್ತಿವೆ.

ಆದರೆ, ಚೀನಾ ಮತ್ತು ಅಮೆರಿಕದ ನಡುವೆ ಬಿಕ್ಕಟ್ಟು ಇರುವುದರಿಂದಾಗಿ ಭಾರತ ಅಲ್ಲಿ ತಲೆಹಾಕಲು ಬಯಸುತ್ತಿಲ್ಲ. ಭಾರತ ತನ್ನ ನೆರೆಯ ದೇಶಗಳೊಡನೆ ಸಂಬಂಧ ಸುಧಾರಿಸಿದರೆ ಬಹುಶಃ ಸಾಂಘಿಕವಾಗಿ ಚೀನಾ ಮತ್ತು ಅಮೆರಿಕದ ಎದುರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಾಧ್ಯ. ಇದೀಗ ಆಸಿಯಾನ್ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಮುಂದೇನಾಗುತ್ತದೆ ಎನ್ನುವುದನ್ನು ಕಾದುನೋಡಬೇಕು. ಇದೇನೇ ಇದ್ದರೂ, ಒಂದಂತೂ ನಿಜ; ಮುನ್ನುಗ್ಗದಿದ್ದರೆ ಭಾರತ ಹಿಂದೆ ಬೀಳಬೇಕಾಗುತ್ತದೆ.

ವಿಶ್ವ ವಿದ್ಯಮಾನಗಳಲ್ಲಿ ಭಾರತ ಪ್ರಭಾವಶಾಲಿ ಆಗುವುದು ಸದ್ಯಕ್ಕೆ ಕನಸಿನ ಮಾತಂತೆ ಕಾಣುತ್ತದೆ. ದೇಶ ಆಂತರಿಕವಾಗಿ ಮೊದಲು ಬಲಾಢ್ಯ ದೇಶವಾಗಬೇಕು. ಅಂದರೆ, ಆರ್ಥಿಕವಾಗಿ ಬೆಳೆಯಬೇಕು. ಅದಕ್ಕೆ ಹೆಚ್ಚು ಬಂಡವಾಳ ಹೂಡಿಕೆಯಾಗಬೇಕು. ಬಂಡವಾಳ ಹೂಡಿಕೆ ಸಮಸ್ಯೆಯ ಒಂದು ಮುಖ ಅಷ್ಟೆ. ದೇಶದಲ್ಲಿ ಹೂಡಿದ ಬಂಡವಾಳ ಸದುಪಯೋಗವಾಗುವುದೇ ಕಡಿಮೆ. ಅದು ಸರ್ಕಾರಿ ಬಂಡವಾಳವಾಗಿರಬಹುದು ಅಥವಾ ಖಾಸಗಿ ಬಂಡವಾಳವಾಗಿರಬಹುದು. ದೇಶದಲ್ಲಿ ಒಂದು ಸ್ಥಿರತೆಯ ವಾತಾವರಣ ನಿರ್ಮಾಣ ಆಗಬೇಕು. ಅಭಿವೃದ್ಧಿ ಸಾಧಿಸುವುದು ಆಗಲೇ. ಯಾರೂ ಸುಮ್ಮಸುಮ್ಮನೆ ದೊಡ್ಡವರಾಗಲು ಸಾಧ್ಯವಿಲ್ಲ. ಭಾರತ ಆಂತರಿಕವಾಗಿ ಸ್ಥಿರತೆಯ ಸಮಸ್ಯೆಯನ್ನು ಎದುರಿಸುತ್ತಿರುವಂತೆಯೇ ಹೊರಗಿನಿಂದಲೂ ಸಮಸ್ಯೆ ಎದುರಿಸುತ್ತಿದೆ. ನೆರೆಯ ದೇಶಗಳ ಜೊತೆಯೇ ಭಾರತದ ಸಂಬಂಧ ಉತ್ತಮವಾಗಿಲ್ಲ.

ಇದನ್ನೂ ಓದಿ : ಆಸಿಯಾನ್‌ ನಾಯಕರ ಭಾರತ ಭೇಟಿ ಸಂವಿಧಾನದ ಮಹತ್ವ ಎತ್ತಿ ಹಿಡಿಯಬಲ್ಲದೇ?

ಭಾರತದ ಸುತ್ತ ಇರುವ ದೇಶಗಳು ಆರ್ಥಿಕವಾಗಿ ಬೆಳೆಯಲು ಪ್ರಯತ್ನಿಸುತ್ತಿವೆ. ಇಂಥ ಸಂದರ್ಭದಲ್ಲಿ ನೆರೆಯ ದೇಶಗಳು ಭಾರತಕ್ಕೆ ಉತ್ತಮ ಮಾರುಕಟ್ಟೆ ಒದಗಿಸಬಲ್ಲವು. ಆದರೆ, ಭಾರತದ ಸಂಬಂಧವೂ ಉತ್ತಮವಾಗಿಲ್ಲ ಮತ್ತು ಆ ದೇಶಗಳ ಜೊತೆ ವಾಣಿಜ್ಯ ವಹಿವಾಟು ಮಾಡಬಹುದಾದಂಥ ಉತ್ಪನ್ನಗಳೂ ಇಲ್ಲ. ಇದೇ ಕಾರಣಕ್ಕೆ ಚೀನಾ, ಭಾರತದ ನೆರೆಯ ದೇಶಗಳ ಮಾರುಕಟ್ಟೆ ವ್ಯಾಪಿಸಿಕೊಳ್ಳುತ್ತಿದೆ. ಅದರ ಬಳಿ ಹೂಡಲು ಬಂಡವಾಳವೂ ಇದೆ, ಮಾರಾಟ ಮಾಡುವ ವಸ್ತುಗಳೂ ಇವೆ. ಪಾಕಿಸ್ತಾನ, ಮ್ಯಾನ್ಮಾರ್, ಶ್ರ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್, ನೇಪಾಳ ಹೀಗೆ ಭಾರತದ ನೆರೆಯ ಎಲ್ಲ ದೇಶಗಳಲ್ಲಿ ಅಪಾರ ಬಂಡವಾಳ ಹೂಡಿದೆ, ಅಷ್ಟೇ ಅಲ್ಲ ತನ್ನ ವಸ್ತಗಳಿಗೆ ಮಾರುಕಟ್ಟೆಯನ್ನೂ ನಿರ್ಮಿಸಿಕೊಂಡಿದೆ.

ಚೀನಾ ಭಾರತವನ್ನು ಸುತ್ತುವರಿದಿದೆ. ಈ ವ್ಯೂಹದಿಂದ ಹೊರಬರಬೇಕಾದ ದಾರಿಗಳನ್ನು ಭಾರತ ಹುಡಕಲೇಬೇಕಿದೆ. ಮೊದಲು, ಪಾಕಿಸ್ತಾನವೂ ಸೇರಿದಂತೆ ನೆರೆಯ ಎಲ್ಲ ದೇಶಗಳ ಜೊತೆ ಬಾಂಧವ್ಯ ಉತ್ತಮಪಡಿಸಿಕೊಳ್ಳಬೇಕಾದುದು ಬಹಳ ಮುಖ್ಯ. ಪಾಕಿಸ್ತಾನ ದೊಡ್ಡ ಸಮಸ್ಯೆ ಎನ್ನುವುದು ನಿಜ. ಹಾಗೆಂದು, ಆ ದೇಶದ ಸಮಸ್ಯೆ ಭಾರತೀಯರ ದಿನನಿತ್ಯದ ಬದುಕಿನ ಭಾಗವಾಗಬಾರದು. ಅಮೆರಿಕದ ಆಡಳಿತಗಾರರು ಪಾಕಿಸ್ತಾನಕ್ಕೆ ನೆರವು ಕಡಿಮೆ ಮಾಡುತ್ತಿದ್ದಂತೆ ಚೀನಾ ಆ ದೇಶದ ನೆರವಿಗೆ ನಿಂತಿದೆ. ಇಂಥ ಹೊಂದಾಣಿಕೆ ಆಗದಂತೆ ನೋಡಿಕೊಳ್ಳಬೇಕು. ಅಂತಾರಾಷ್ಟ್ರೀಯವಾಗಿ ಪಾಕಿಸ್ತಾನವನ್ನು ಒಂಟಿಯನ್ನಾಗಿ ಮಾಡುವಲ್ಲಿ ಭಾರತ ಸಫಲವಾಗಿದ್ದರೂ ಅದರ ಲಾಭ ಭಾರತಕ್ಕೆ ಸಿಗದೆಹೋಗಿದೆ. ಹೀಗಾಗಿ, ಭಾರತವೇ ಅನನುಕೂಲ ಎದುರಿಸಬೇಕಾಗಿ ಬಂದಿದೆ. ಇಂಥ ಸಮಸ್ಯೆ ಪರಿಹಾರವಾಗದಿದ್ದರೆ ಭಾರತ ಅಂತಾರಾಷ್ಟ್ರೀಯವಾಗಿ ಮೇಲೇಳಲು ಸಾಧ್ಯವಿಲ್ಲ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More