ಕಾಶ್ಮೀರದಿಂದ | ಆತ ನಡೆಸಿದ್ದು ೧೫೦ ಎನ್‌ಕೌಂಟರ್, ಕೊಂದಿದ್ದು ೩೦೦ ಅಮಾಯಕರು!

ರಾವ್ ಅನ್ವರ್ ಎಂಬ ಪೊಲೀಸ್ ಅಧಿಕಾರಿಯ ಎರಡು ದಶಕಗಳ ಸೇವಾವಧಿಯು ಅಪಹರಣ, ಸುಲಿಗೆ, ಕೊಲೆಗಳಿಂದ ತುಂಬಿ ತುಳುಕುತ್ತಿದೆ! ಕಳೆದೊಂದು ದಶಕದಲ್ಲಿ ಅನ್ವರ್ ಅಟಾಟೋಪ ತೀರಾ ಹೆಚ್ಚಾಗಿದೆ. ಆದರೂ ತನಿಖೆಗೆ ಹಾಜರಾಗದೆ ರಾಜಾರೋಷವಾಗಿ ತಿರುಗುತ್ತಿದ್ದಾರೆ! ಏಕೆ ಗೊತ್ತೇ?

ಕಳೆದ ಒಂದೂವರೆ ವಾರದಿಂದ ರಾವ್ ಅನ್ವರ್ ಸುದ್ದಿಯಲ್ಲಿ ಇದ್ದಾರೆ. ಅವರ ಬಗ್ಗೆ ಸಾಕಷ್ಟು ಮೃದು ಧೋರಣೆ ಹೊಂದಿದ್ದ ಟಿವಿ ವಾಹಿನಿಗಳೂ ಈಗ ಅವರ ಕ್ರೂರ ಹಾಗೂ ಹಂತಕ ಚರಿತ್ರೆಯ ಬಗ್ಗೆ ಸತತವಾಗಿ ಬೊಬ್ಬೆ ಹಾಕುತ್ತಿವೆ. ಅನೇಕ ದಿನಪತ್ರಿಕೆಗಳು ಅವರ ಭೂತವನ್ನು ಕೆದಕಿ, ಅವರ ದುಷ್ಟತನಕ್ಕೆ ಬಲಿಯಾದ ಮುಗ್ಧರನ್ನು ಸಂದರ್ಶಿಸುತ್ತಿವೆ. ವಿವಾದ ಅವರಿಗೇನೂ ಹೊಸತಲ್ಲ. ಆದರೆ, ಈ ಬಾರಿ ಎಲ್ಲವೂ ಅವರ ಕೈಮೀರಿ ಹೋಗಿದೆ. ಪರಿಸ್ಥಿತಿ ಎಷ್ಟು ಬೇಗ ಬದಲಾಗಿದೆ ಎಂದರೆ, ಅನೇಕ ಚಿಂತಕರು, “ಈಗ ಅನ್ವರ್ ಅವರ ಸಮಯ ಮುಗಿದಿದೆ,” ಎಂದೇ ಹೇಳುತ್ತಿದ್ದಾರೆ. ಕರಾಚಿ ಮೂಲದ ಉರ್ದು ಪತ್ರಿಕೆಯೊಂದು ಇತ್ತೀಚೆಗೆ, ‘ರಾವ್ ಅನ್ವರ್‌ಗೆ ಕಾಯುತ್ತಿದೆ ನೇಣುಗಂಬ’ ಎಂದೇ ಶೀರ್ಷಿಕೆ ನೀಡಿದೆ. ಅನ್ವರ್‌ ದೇಶದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಾಗ್ದಂಡನೆಗೆ ಒಳಗಾಗಿದ್ದಾರೆ. ಖೈಬರ್ ಪಂಖ್ತುಂಖ್ವಾ (ಕೆಪಿಕೆ) ಪ್ರಾಂತೀಯ ಅಸೆಂಬ್ಲಿ ಕೂಡ ಅನ್ವರ್ ಅಪರಾಧಿ ಚಟುವಟಿಕೆಗಳನ್ನು ಖಂಡಿಸಿ ಗೊತ್ತುವಳಿಯೊಂದನ್ನು ಸ್ವೀಕರಿಸಿದೆ.

ಒಂದು ವಾರದ ಹಿಂದಷ್ಟೇ ಪಾಕಿಸ್ತಾನದ ಆರ್ಥಿಕ ಹಾಗೂ ಅಪರಾಧ ರಾಜಧಾನಿ ಎನ್ನಿಸಿರುವ ಅತ್ಯಂತ ದೊಡ್ಡ ಜಿಲ್ಲೆ ಕರಾಚಿಯ ಸೀನಿಯರ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿದ್ದರು ಈ ಅನ್ವರ್. ನಾಲ್ಕು ಜನ ಶಂಕಿತ ಉಗ್ರರನ್ನು ಕೊಂದ ಯೋಚಿತ ಎನ್‌ಕೌಂಟರ್‌ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ನಂತರ ಅವರನ್ನು ಅಮಾನತುಗೊಳಿಸಲಾಯಿತು. ಎನ್‌ಕೌಂಟರ್‌ಗೆ ಹತರಾದವರ ಪೈಕಿ ಒಬ್ಬನನ್ನು 27 ವರ್ಷದ ಬುಡಕಟ್ಟು ವ್ಯಾಪಾರಿ ಹಾಗೂ ಮಾಡೆಲ್ ಆಗಬಯಸಿದ್ದ ನಖೀಬುಲ್ಲಾ ಮೆಹ್ಸೂದ್ ಎಂದು ನಂತರದಲ್ಲಿ ಗುರುತಿಸಲಾಗಿದೆ. ಅನ್ವರ್ ಅವರು ಈ ನಖೀಬುಲ್ಲಾನನ್ನು ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಸಂಘಟನೆಯ ಉಗ್ರವಾದಿ ಆಗಿದ್ದ ಎಂಬುದು ಅನ್ವರ್ ಅವರ ವಾದವಾಗಿದ್ದರೂ, ಸಾರ್ವಜನಿಕರಿಂದ ವ್ಯಕ್ತವಾದ ಆಕ್ರೋಶಕ್ಕೆ ಮಣಿದು ಸರಕಾರ ಈ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು ತನಿಖೆಯ ಭರವಸೆ ನೀಡಿದೆ. ಪೊಲೀಸರು ನಡೆಸಿರುವ ತರಾತುರಿ ತನಿಖೆಯಿಂದ, 'ಇದು ಅಮಾಯಕ ನಾಗರಿಕನನ್ನು ಕೊಂದ ನಕಲಿ ಎನ್‌ಕೌಂಟರ್’ ಎಂಬುದು ಖಚಿತಪಟ್ಟಿದೆ. ತನಿಖೆ ಕೈಗೊಂಡ ಹೆಚ್ಚುವರಿ ಐ.ಜಿ ಸನಾವುಲ್ಲಾ ಅಬ್ಬಾಸಿ ಅವರು ನ್ಯಾಯದ ಭರವಸೆ ನೀಡಿದ್ದಾರಾದರೂ ಇನ್ನೂ ಈಡೇರಿಲ್ಲ. ನ್ಯಾಯಾಲಯದ ಆದೇಶಗಳು, ಮಾಧ್ಯಮ ಅಭಿಯಾನ ಮತ್ತು ನ್ಯಾಷನಲ್ ಅಸೆಂಬ್ಲಿಯ ಖಂಡನೆ ಹಾಗೂ ಕೆಪಿಕೆ ಪ್ರಾಂತೀಯ ಸರಕಾರದ ವಾಗ್ದಂಡನೆಯ ಮಧ್ಯೆಯೂ ರಾವ್ ಅನ್ವರ್, ತಮ್ಮ ಇತರ ಹಂತಕ ಪೊಲೀಸರ ಗುಂಪಿನಂತೆ ಆರಾಮವಾಗಿ ತಿರುಗಾಡಿಕೊಂಡು ಇದ್ದಾರೆ.

ಇದನ್ನೂ ಓದಿ : ಕಾಶ್ಮೀರದಿಂದ | ಇಮ್ರಾನ್ ಖಾನ್ ಮೂರನೇ ಮದುವೆ ಮತ್ತು ಪ್ರಧಾನಿ ಪಟ್ಟದ ಕನಸು

ನಿಯಮಗಳ ಪ್ರಕಾರ ಅನ್ವರ್ ಒಬ್ಬ ಮಧ್ಯಮ ರ‍್ಯಾಂಕ್‌ನ ಅಧಿಕಾರಿ. ಆದರೆ, ಅವರು ಬೆಳೆಸಿಕೊಂಡಿರುವ ಪ್ರಭಾವ ಮತ್ತು ಸಂಪರ್ಕ ಮಾತ್ರ ಯಾರ ಊಹೆಗೂ ನಿಲುಕದ್ದು. ಅವರ ಪ್ರಭಾವವನ್ನು ಈ ಕೆಲವು ಸತ್ಯಗಳಿಂದ ಯಾರಾದರೂ ಅರಿತುಕೊಳ್ಳಬಹುದು: ಸಿಂಧ್ ಪ್ರಾಂತದ ಐ.ಜಿ ಅವರು ನೇಮಿಸಿರುವ ಪೊಲೀಸ್ ತನಿಖಾ ತಂಡದ ಮುಂದೆ ಅವರು ಹಾಜರಾಗಲು ನಿರಾಕರಿಸಿದ್ದಾರೆ. ಈ ತಂಡ ತಮ್ಮ ವಿರುದ್ದ ತಾರತಮ್ಯ ಮನೋಭಾವ ಹೊಂದಿದೆ ಎಂಬುದು ಅನ್ವರ್ ವಾದ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಚಿಸಿರುವ ಉನ್ನತ ಮಟ್ಟದ ನಿಯೋಗವನ್ನೂ ಅವರು ನಿರ್ಲಕ್ಷಿಸಿದ್ದಾರೆ. ಸರಣಿ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿದ್ದರೂ ಅವರನ್ನು ಬಂಧಿಸುವ ಪ್ರಯತ್ನವೇ ನಡೆದಿಲ್ಲ ಮತ್ತು ಅವರು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಎರಡು ದಿನಗಳ ಹಿಂದೆ ಮಧ್ಯರಾತ್ರಿ ಹೊತ್ತಿನಲ್ಲಿ ದೇಶದಿಂದ ಪಲಾಯನಗೈಯಲು ಯತ್ನಿಸಿದಾಗ ಅವರನ್ನು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಅಧಿಕಾರಿಗಳು ತಡೆದರು. ಕೌತುಕದ ಸಂಗತಿ ಏನೆಂದರೆ, ಅವರು ಏರ್‌ಪೋರ್ಟ್‌ನಿಂದ ನಿರ್ಗಮಿಸಲು ಅನುಮತಿ ನೀಡಲಾಯಿತು ಎನ್ನಲಾಗಿದೆ; ಆದರೂ ಅವರನ್ನು ಬಂಧಿಸುವ ಪ್ರಯತ್ನ ನಡೆಯಲಿಲ್ಲ. ಅವರು ದೇಶದಿಂದ ನಿರ್ಗಮಿಸಲು ಅನುಮತಿ ನೀಡುವ ಎನ್‌ಒಸಿ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಒದಗಿಸಿದ್ದರೂ ಅವರನ್ನು ಬಂಧಿಸುವ ಧೈರ್ಯವನ್ನು ಯಾವೊಬ್ಬ ಅಧಿಕಾರಿಯೂ ತೋರಲಿಲ್ಲ. ಅನ್ವರ್ ನಡೆಸಿದರೆನ್ನಲಾದ ಕೊಲೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಮಿತಿ, ಅವರು ದೇಶದಿಂದ ಪಲಾಯನಗೈಯದಂತೆ ನಿಷೇಧ ವಿಧಿಸಲು ಶಿಫಾರಸು ಮಾಡಿದೆಯಾದರೂ ಆಂತರಿಕ ಸಚಿವಾಲಯ ಇನ್ನೂ ಅವರನ್ನು ಅಧಿಕೃತವಾಗಿ ನಿರ್ಗಮನ ನಿಯಂತ್ರಣ ಪಟ್ಟಿಗೆ ಸೇರಿಸಲು ಅನುಕೂಲವಾಗುವಂತೆ ನೋಟಿಸ್ ಜಾರಿ ಮಾಡಿಲ್ಲ. ವ್ಯಾಪಕ ಪ್ರತಿಭಟನೆಗಳು ಮತ್ತು ಮಾಧ್ಯಮಗಳ ತೀಕ್ಷ್ಣ ವರದಿಗಳ ಮಧ್ಯೆಯೂ ಈತನಿಂದ ಹತನಾದ ನಖೀಬುಲ್ಲಾ ಅವರ ತಂದೆ ತಮ್ಮ ಪುತ್ರನ ಸಾವಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಒಂದು ವಾರ ಬೇಕಾಯಿತು.

ರಾವ್ ಅನ್ವರ್ ಅವರ ಎರಡು ದಶಕಗಳ ಪೊಲೀಸ್ ಸೇವಾವಧಿ ಅಪಹರಣ, ಸುಲಿಗೆ ಮತ್ತು ಕೊಲೆಗಳಂಥ ಅಸಂಖ್ಯ ಅಪರಾಧ ಕೃತ್ಯಗಳಿಂದ ತುಂಬಿ ತುಳುಕುತ್ತಿದೆ. ಕರಾಚಿಯ ಪ್ರಮುಖ ದಿನಪತ್ರಿಕೆ ‘ಉಮ್ಮತ್’ ಪ್ರಕಾರ, ಅನ್ವರ್ ಅವರು ಕಳೆದ ಒಂದು ದಶಕದಲ್ಲಿ 150ಕ್ಕೂ ಹೆಚ್ಚಿನ ಎನ್‌ಕೌಂಟರ್ ನಡೆಸಿ, 300ಕ್ಕೂ ಹೆಚ್ಚಿನ ಜನರನ್ನು ಕೊಂದಿದ್ದಾರೆ. ಈ ವರ್ಷದ ಜನವರಿ ಮೊದಲ ಎರಡು ವಾರಗಳಲ್ಲಿಯೇ ಇವರು ನಖೀಬುಲ್ಲಾ ಸೇರಿದಂತೆ ಏಳು ಜನರನ್ನು ಮತ್ತು ಜ.13ರಂದು ಇತರ ಮೂವರನ್ನು ಕೊಂದುಹಾಕಿದ್ದಾರೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಐದು ಮಿಲಿಯನ್ ಅಮೆರಿಕನ್ ಡಾಲರ್ ಬೆಲೆಯ ಮನೆ ಹೊಂದಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಇವರ ಕುಟುಂಬ ಸದಸ್ಯರು ಹಲವು ವಿಧದ ಉದ್ಯಮ ನಡೆಸುತ್ತಿದ್ದಾರೆ. ಕೆಲವು ವರದಿಗಳ ಪ್ರಕಾರ, ಅನ್ವರ್ ಅವರು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಮುಖ್ಯಸ್ಥ ಆಸಿಫ್ ಅಲಿ ಜರ್ದಾರಿ ಅವರಿಗೆ ತುಂಬಾ ಆತ್ಮೀಯರಾಗಿದ್ದಾರೆ. ಪಿಪಿಪಿ ಆಡಳಿತದ ಸಿಂಧ್ ಸರಕಾರ ಯಾಕೆ ಅನ್ವರ್ ವಿಷಯದಲ್ಲಿ ಮೃದುವಾಗಿದೆ ಎಂಬುದಕ್ಕೆ ಉತ್ತರ ಅವರ ಈ ಗೆಳೆತನದಲ್ಲಿ ದೊರೆಯುತ್ತದೆ. ಸಿಂಧ್ ಸರಕಾರದ ವಾರ್ತಾ ಸಚಿವ ಸೈಯದ್ ನಾಸಿರ್ ಹುಸೇನ್ ಶಾ ಅವರು ಅನ್ವರ್ ಅವರನ್ನು ವೀರ-ಧೀರ ಅಧಿಕಾರಿ ಎಂದು ಇತ್ತೀಚೆಗೆ ಹಾಡಿ ಹೊಗಳಿದ್ದು ಬಹುಶಃ ಇದೇ ಕಾರಣಕ್ಕೇ ಇರಬೇಕು!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More