ಮಧ್ಯಮಾವತಿ | ಮೋದಿ ಕಥನದ ಮುಂದುವರಿದ ಭಾಗವಾಗಿ ಬಂದಿದೆ ಕೇಂದ್ರ ಬಜೆಟ್

ಕಳೆದ ನಾಲ್ಕು ವರ್ಷಗಳ ತಮ್ಮ ಆಡಳಿತ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಎಚ್ಚರಿಕೆಯಿಂದ ಮತ್ತು ಪ್ರಜ್ಞಾಪೂರ್ವಕವಾಗಿ ಕಟ್ಟಿದ್ದು ದೇಶವನ್ನಲ್ಲ; ಬದಲಾಗಿ, ಮೋದಿ ಎಂಬ ತಮ್ಮದೇ ಕಥನವನ್ನು, ತಮ್ಮದೇ ವರ್ಚಸ್ಸನ್ನು. ಈ ಮಾತಿಗೆ, 2018ರ ಕೇಂದ್ರ ಬಜೆಟ್ ತಾಜಾ ನಿದರ್ಶನ

ಪ್ರಧಾನಿ ಮೋದಿಯವರ ಪಾಲಿಗೆ ಅವರ ಸರ್ಕಾರದ ಬಹಳ ದೊಡ್ಡ ಸಾಧನೆ ಏನಿರಬಹುದು? ಈ ಪ್ರಶ್ನೆಗೆ ೨೦೧೮ರ ಬಜೆಟ್ ಭಾಷಣವೇ ಉತ್ತರ. ಬಹುಶಃ ಮೋದಿಯವರು ತಮ್ಮ ಸಾಧನೆ ಏನೆಂದುಕೊಂಡಿದ್ದಾರೆ ಎಂಬುದನ್ನು ಇದಕ್ಕಿಂತ ಸಮರ್ಥವಾಗಿ ಹೇಳಲಾಗದು.

ಅವರ ಸರ್ಕಾರದ ಸಾಧನೆ, ‘ಉತ್ತಮ ಸರ್ಕಾರ’ ಎಂಬುದಾಗಲೀ ಅಥವಾ ಮೋದಿಯವರು ಕಾಲಕಾಲಕ್ಕೆ ಚಲಾವಣೆಗೆ ತರುವ ಇಂತಹ ಪದಪುಂಜಗಳೇನೂ ಅಲ್ಲ. ಬಜೆಟ್ ಮಂಡನೆ ವೇಳೆ ಇಂಥ ಘೋಷಣೆಗಳಿಗೆ ಮತ್ತೊಂದು ಸೇರ್ಪಡೆ ಎಂದರೆ, ‘ಸುಲಲಿತ ಜೀವನ.’ ಆದರೆ, ಇಂಥ ಘೋಷಣೆಗಳ ಗುರಿ ವ್ಯವಸ್ಥೆಯ ಸುಧಾರಣೆಯಲ್ಲ. ಬದಲಾಗಿ, ಮೋದಿಯವರ ವ್ಯಕ್ತಿತ್ವ ಮತ್ತು ವರ್ಚಸ್ಸನ್ನು ಬೆಳೆಸುವ ಮೂಲಕ ‘ಮೋದಿ ಕಥನ’ ಕಟ್ಟುುದೇ ಆಗಿರುತ್ತದೆ.

ಸರ್ಕಾರ, ಭಾರತೀಯ ಜನತಾ ಪಾರ್ಟಿ ಹಾಗೂ ಸ್ವತಃ ಪ್ರಧಾನಿ ಕೂಡ ‘ಮೋದಿ’ ಎಂಬ ಅತ್ಯಂತ ನಾಜೂಕಾಗಿ ಹೆಣೆದಿರುವ ವರ್ಚಸ್ಸು ಮತ್ತು ಆ ವರ್ಚಸ್ಸಿನ ಸುತ್ತ ರೂಪುಗೊಂಡಿರುವ ‘ಮೋದಿ ಕಥನ’ವನ್ನೇ ನೆಚ್ಚಿಕೊಂಡಿದ್ದಾರೆ. ೨೦೧೯ರ ಚುನಾವಣೆಯಲ್ಲೂ ಇದೇ ಮೋದಿ ವರ್ಚಸ್ಸು ಮತ್ತು ಕಥನವೇ ಎನ್‌ಡಿಎ ಮೈತ್ರಿಕೂಟದ ಭವಿಷ್ಯ ನಿರ್ಧರಿಸುವ ಅಂಶ ಎಂದೂ ಸಂಪೂರ್ಣ ನಂಬಿದ್ದಾರೆ ಎಂಬುದನ್ನು ಈ ಬಜೆಟ್ ಸಾಬೀತು ಮಾಡಿದೆ.

ಗುರುವಾರ ಬಜೆಟ್‌ನ ಮಹತ್ವದ ಅಂಶವಾಗಿ ‘ವಿಶ್ವದ ಅತ್ಯಂತ ದೊಡ್ಡ ಸರ್ಕಾರಿ ಅನುದಾನಿತ ಅರೋಗ್ಯ ವಿಮಾ ಯೋಜನೆ’ ಘೋಷಣೆಯಾಗುತ್ತಲೇ ಈ ಅಂಶ ಶತಸಿದ್ಧವಾಯಿತು. ೧೦ ಕೋಟಿ ಬಡ ಕುಟುಂಬಗಳ ೫೦ ಕೋಟಿ ಜನರನ್ನು ತಲುಪುವ ಗುರಿ ಹೊಂದಿರುವ ಈ ಮಹತ್ವದ ಯೋಜನೆ, ಸದ್ಯ ‘ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ’ ಎಂಬ ಹೆಸರು ಪಡೆದಿದ್ದು, ಪ್ರತಿ ಕುಟುಂಬಕ್ಕೆ ವಾರ್ಷಿಕ ಐದು ಲಕ್ಷ ರು.ವರೆಗಿನ ಆರೋಗ್ಯ ವೆಚ್ಚವನ್ನು ಭರಿಸಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಆರ್ಥಿಕ ಸ್ಥಿತಿಗತಿ ಮೀರಿ ದೇಶದ ಎಲ್ಲ ಜನರಿಗೂ ವಿಸ್ತರಿಸಬಹುದು. ಆ ಮೂಲಕ, ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಾಗಿ ವಿಕಾಸಗೊಳಿಸಬಹುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಗೆ ಭರವಸೆ ನೀಡಿದ್ದಾರೆ.

ಕೇಂದ್ರ ಬಜೆಟ್ ಹಾಗೂ ಈ ಸರ್ಕಾರದ ಎಲ್ಲ ಆಡಳಿತ ನೀತಿಗಳು ಮೋದಿಯವರ ವರ್ಚಸ್ಸನ್ನು ಹೇಗೆ ಬೆಳೆಸುತ್ತಿವೆ; ಅವುಗಳೆಲ್ಲದರ ಶ್ರೇಯ ಅವರೊಬ್ಬರಿಗೇ ಹೇಗೆ ಸಲ್ಲುತ್ತದೆ ಎಂಬ ಅನುಮಾನಗಳಿರುವವರು, ಬಜೆಟ್ಟಿನ ಅಂತಿಮ ಸ್ವರೂಪವನ್ನು ಮಾತ್ರ ಗಮನಿಸದೆ, ೨೦೧೪ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿಯವರು ತಮ್ಮ ವರ್ಚಸ್ಸನ್ನು ಹೇಗೆ ಕಟ್ಟುತ್ತ ಬಂದಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಅದು ಸ್ವಚ್ಛ ಭಾರತ ಅಭಿಯಾನ ಇರಬಹುದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಇರಬಹುದು ಅಥವಾ ನೋಟು ರದ್ದತಿಯಂತಹ ನೀತಿ-ನಿರ್ಧಾರ ಇರಬಹುದು; ಸರ್ಕಾರದ ಎಲ್ಲ ಬೃಹತ್ ಕಾರ್ಯಕ್ರಮಗಳು ದೇಶದ ಜನಸಾಮಾನ್ಯರ ಮನಸ್ಸಿನಲ್ಲಿ ಮೋದಿ ವರ್ಚಸ್ಸು ಮತ್ತು ವ್ಯಕ್ತಿತ್ವದ ಅಚ್ಚಳಿಯದ ಮೊಹರನ್ನು ಒತ್ತಿವೆ. ಆ ಮೂಲಕ ಮೋದಿ ಕಥನವನ್ನು ಕಟ್ಟಿವೆ. ಸರ್ಕಾರದ ನೀತಿ, ನಿರ್ಧಾರ ಮತ್ತು ಆರ್ಥಿಕ ಆಡಳಿತದ ವಿಷಯದಲ್ಲಿ ಜಿಎಸ್‌ಟಿ ಮತ್ತು ನೋಟು ರದ್ದತಿಯ ಕ್ರಮಗಳು ಯಶಸ್ಸು ಗಳಿಸಿಲ್ಲ ಎಂಬುದು ನಿಜ. ಆದರೆ, ಇಂತಹ ಕೆಟ್ಟ ಆಡಳಿತಾತ್ಮಕ ನೀತಿಗಳು, ಅಂತಹ ಕಾರ್ಯಕ್ರಮಗಳನ್ನು ಸರ್ಕಾರದ ಪ್ರಮುಖ ಸಾಧನೆಗಳೆಂದು ಬಿಂಬಿಸುವಲ್ಲಿ ತೊಡಕಾಗಲಿಲ್ಲ ಎಂಬುದನ್ನೂ ಮರೆಯುವಂತಿಲ್ಲ. ಆ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಗತ್ಯ ಹಣಕಾಸು ಅನುದಾನ ಲಭ್ಯವಿದೆಯೇ ಅಥವಾ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಈಗಿನ ಅವ್ಯವಸ್ಥೆಯಿಂದ ಮೇಲೆತ್ತುವ ನಿಟ್ಟಿನಲ್ಲಿ ಎಷ್ಟರಮಟ್ಟಿಗೆ ನೆರವಾಗಲಿದೆ ಎಂಬ ಮೂಲಪ್ರಶ್ನೆಗಳನ್ನು ಹೊರತುಪಡಿಸಿಯೂ, ಹೊಸ ಆರೋಗ್ಯ ವಿಮಾ ಯೋಜನೆ ಮೋದಿ ಕಥನದ ಮತ್ತೊಂದು ರೋಚಕ ಆಯಾಮವಾಗಲಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.

ಅನುದಾನದ ಲಭ್ಯತೆಯ ಬಗ್ಗೆ ಶಂಕೆ ವ್ಯಕ್ತಪಡಿಸುವ ಜನ ಅರ್ಥ ಮಾಡಿಕೊಳ್ಳದಿರುವ ಸಂಗತಿ ಎಂದರೆ, ಈ ಯೋಜನೆಯ ಉದ್ದೇಶಿತ ಫಲಾನುಭವಿಗಳು ಕೇವಲ ಆರೋಗ್ಯ ವಿಮಾ ಸೌಲಭ್ಯವನ್ನಷ್ಟೇ ಪಡೆಯುವುದಿಲ್ಲ. ಆ ವಿಮಾ ಸೌಲಭ್ಯ ಅವರ ಪಾಲಿಗೆ ನಿಜವಾಗಬಹುದು ಅಥವಾ ಆಗದೆಯೂ ಇರಬಹುದು. ಆದರೆ, ಬಜೆಟ್ ಘೋಷಣೆಯ ತಕ್ಷಣದ ಲಾಭವೆಂದರೆ, ಅವರೆಲ್ಲರ ಕಣ್ಣಲ್ಲಿ ಮೋದಿಯ ಕಥನ ಇನ್ನಷ್ಟು ಹಿಗ್ಗಲಿದೆ.

ಆ ಅರ್ಥದಲ್ಲಿ ಮೋದಿಯವರು ಮತದಾರರಿಗೆ ಹಂಚುತ್ತಿರುವುದು, ಹಿಂದಿನ ಕಾಂಗ್ರೆಸ್ ಸರ್ಕಾರದ ಕೃಷಿ ಸಾಲ ಮನ್ನಾದಂಥ ಯೋಜನೆ ಅಥವಾ ಸೌಲಭ್ಯವಲ್ಲ. ಬದಲಾಗಿ, ಮೋದಿ ಎಂಬ ತಮ್ಮದೇ ಕಥನವನ್ನು, ತಮ್ಮದೇ ವರ್ಚಸ್ಸನ್ನು ಮತ್ತು ಭಾರತ ಸರ್ಕಾರದ ಚುಕ್ಕಾಣಿ ತಮ್ಮ ಕೈಯಲ್ಲೇ ಇರಲಿದೆ ಎಂಬ ಆಶ್ವಾಸನೆಯನ್ನು.

ಇದನ್ನೂ ಓದಿ : ಷೇರುಪೇಟೆ ರಕ್ತದೋಕುಳಿಗೆ ₹5 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ನಷ್ಟ! 

ಈ ಹಿನ್ನೆಲೆಯಲ್ಲಿ, “ಮೋದಿ ಇದ್ದಾರಲ್ಲ…” ಎಂಬಂಥ ಘೋಷಣೆಗಳ, ಉದ್ಗಾರಗಳ ಹಿಂದಿನ ಭಾವನಾತ್ಮಕ ಆಂದೋಲನಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಳೆದ ನಾಲ್ಕು ವರ್ಷಗಳ ತಮ್ಮ ಆಡಳಿತದಲ್ಲಿ ಮೋದಿಯವರು ಅತ್ಯಂತ ಎಚ್ಚರಿಕೆಯಿಂದ ಮತ್ತು ಪ್ರಜ್ಞಾಪೂರ್ವಕವಾಗಿ ಕಟ್ಟಿದ್ದು ದೇಶವನ್ನಲ್ಲ; ಬದಲಾಗಿ ಮೋದಿ ಎಂಬ ತಮ್ಮದೇ ಕಥನವನ್ನು, ತಮ್ಮದೇ ವರ್ಚಸ್ಸನ್ನು. ಮೋದಿಯವರ ವಿರೋಧಿಗಳು ಹಲವರು ಅವರ ಆಡಳಿತ ಶೈಲಿಯನ್ನು ಬಡಾಯಿ ಅಥವಾ ಬೊಗಳೆ ಘೋಷಣೆಗಳ ಆಡಳಿತ ಎಂದು ಟೀಕಿಸುತ್ತಾರೆ. ಆದರೆ, ಹಾಗೆ ಹೇಳುವಾಗ ಅವರು, ಮೋದಿಯವರು ತಮ್ಮ ಆಡಳಿತದ ಮೂಲಕ ಯಾವುದೇ ಯೋಜನೆ, ಸೌಲಭ್ಯವನ್ನು ಮಾತ್ರ ಮಾರುತ್ತಿಲ್ಲ. ಬದಲಾಗಿ, ಅಂತಹ ಯೋಜನೆ-ಸೌಲಭ್ಯಗಳ ಜಾರಿಯ ಹಿಂದಿರುವ ವ್ಯಕ್ತಿಯನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂಬುದನ್ನು ಮರೆಯುತ್ತಾರೆ. ಮೋದಿಯ ಈ ಚಾಣಾಕ್ಷತನವನ್ನು ಅರ್ಥೈಸುವಲ್ಲಿ ಎಡವುತ್ತಾರೆ.

ಮೋದಿಯವರು ೨೦೧೬ರ ನವೆಂಬರಿನಲ್ಲಿ ನೋಟು ರದ್ದತಿಯನ್ನು ಘೋಷಿಸಿದಾಗ, ದಶಕಗಳ ಕಾಲ ದೇಶದ ತೆರಿಗೆ ಕದ್ದು ಶ್ರೀಮಂತರಾದ ಭ್ರಷ್ಟರು ಮತ್ತು ಕಳ್ಳರ ವಿರುದ್ಧದ ಐತಿಹಾಸಿಕ ದಿಟ್ಟ ಕ್ರಮ ಎಂದೇ ಹೇಳಲಾಯಿತು. ಕಪ್ಪುಹಣದ ಕುಳಗಳ ಭರ್ಜರಿ ಬೇಟೆ ಎಂದೇ ನಂಬಿಸಲಾಗಿತ್ತು. ೨೦೧೭ರ ಜುಲೈನಲ್ಲಿ ಜಿಎಸ್‌ಟಿ ಜಾರಿಯಾದಾಗ ಕೂಡ, ಮೋದಿಯವರ ಹಣಕಾಸು ಸಚಿವರು ನೆಹರು ಅವರ ಸ್ವಾತಂತ್ರ್ಯೋತ್ಸವದ ಭಾಷಣದ ಮಾತುಗಳನ್ನು ಉಲ್ಲೇಖಿಸಿ, “ದೇಶದ ಭವಿಷ್ಯವನ್ನೇ ಬದಲಿಸುವ ಕ್ಷಣ ಇದು,” ಎಂದಿದ್ದರು. ಹಾಗಾಗಿಯೇ, ಕಾಂಗ್ರೆಸ್‌ ನಾಯಕ ಮಣಿಶಂಕರ್ ಅಯ್ಯರ್, ಮೋದಿಯವರನ್ನು ಕ್ಷುಲ್ಲಕ ವ್ಯಕ್ತಿ (ನೀಚ್ ಆದ್ಮಿ) ಎಂದು ನಿಂದಿಸಿದಾಗ, ಅದು ಕೇವಲ ಮೋದಿವರಿಗೆ ಹೇಳಿದ ಮಾತಲ್ಲ; ಬಡ ಭಾರತೀಯರೆಲ್ಲರಿಗೂ ಮಾಡಿದ ಅವಮಾನ ಎಂದೇ ಬಿಂಬಿಸಲಾಯಿತು!

ಅದು ‘ಮೋದಿ ಕಥನ’ದ ಪರಿಣಾಮ! ಈಗಿನ ಬಜೆಟ್ ಕೂಡ ಆ ಕಥನದ ಮುಂದುವರಿದ ಭಾಗ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More