ರಾವಿ ತೀರ | ಹೂಡಾ ಕೂಡ ಅಪರಾಧಿಯಾದಲ್ಲಿ ಜೈಲಿನಲ್ಲಿನ ಮಾಜಿ ಸಿಎಂಗಳ ಸಂಖ್ಯೆ ೪!

ಹರಿಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ಮನೆಸರ ಭೂಹಗರಣಕ್ಕೆ ಸಂಬಂಧಿಸಿದಂತೆ 80,000 ಪುಟಗಳ ದೋಷಾರೋಪ ಪಟ್ಟಿಯನ್ನು ಸಿಬಿಐ ಸಿದ್ಧಪಡಿಸುತ್ತಿದೆ. ಈ ಆರೋಪ ಸಾಬೀತಾದಲ್ಲಿ ಜೈಲಿನಲ್ಲಿರುವ ಮಾಜಿ ಮುಖ್ಯಮಂತ್ರಿಗಳ ಸಂಖ್ಯೆ ನಾಲ್ಕಕ್ಕೆ ಏರಲಿದೆ!

ನಿಮಗಿದು ಗೊತ್ತೇ? ಮೂವರು ಮಾಜಿ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಹಗರಣಗಳಲ್ಲಿ ಪಾಲ್ಗೊಂಡಿದ್ದರಿಂದ ಈಗ ಜೈಲಿನಲ್ಲಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಇಂಥ ಭ್ರಷ್ಟ ನಾಯಕರನ್ನು ತಮ್ಮ ಸರಕಾರ ಜೈಲಿಗೆ ಅಟ್ಟಿದ್ದು ಹೇಗೆ ಎಂಬುದರ ಬಗ್ಗೆ ಇತ್ತೀಚೆಗೆ ಎನ್‌ಸಿಸಿ ಕೆಡೆಟ್‌ಗಳ ಗುಂಪೊಂದನ್ನು ಉದ್ದೇಶಿಸಿ ಭಾಷಣ ಮಾಡುವಾಗ ಹೇಳಿಕೊಂಡಿದ್ದಾರೆ. ಲಾಲು ಪ್ರಸಾದ್ ಯಾದವ್, ಜಗನ್ನಾಥ್ ಮಿಶ್ರಾ ಮತ್ತು ಓಂ ಪ್ರಕಾಶ್ ಚೌಟಾಲಾ ಅವರಂಥ ನಾಯಕರ ಕಾರಾಗೃಹವಾಸದ ಉದಾಹರಣೆಗಳಿಂದ, “ಶ್ರೀಮಂತರು ಮತ್ತು ಪ್ರಭಾವಿ ವ್ಯಕ್ತಿಗಳು ತಪ್ಪು ಮಾಡಿದರೂ ಶಿಕ್ಷೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ ಎಂಬ ಈ ಮೊದಲಿನ ನಂಬಿಕೆ ಈಗ ಹುಸಿಯಾಗತೊಡಗಿದೆ,” ಎಂದು ಮೋದಿ ಉಚ್ಛರಿಸುತ್ತಿರುವಾಗಲೇ ಸಿಬಿಐ, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ವಿರುದ್ಧ ಮನೆಸರ ಭೂಹಗರಣಕ್ಕೆ ಸಂಬಂಧಿಸಿದಂತೆ 80,000 ಪುಟಗಳ ಬೃಹತ್ ದೋಷಾರೋಪ ಪಟ್ಟಿ ಸಿದ್ಧಪಡಿಸುತ್ತಿತ್ತು. ಒಂದು ವೇಳೆ, ಈ ಆರೋಪವೂ ಸಾಬೀತಾದಲ್ಲಿ ಜೈಲಿನಲ್ಲಿರುವ ಮಾಜಿ ಮುಖ್ಯಮಂತ್ರಿಗಳ ಸಂಖ್ಯೆ ನಾಲ್ಕಕ್ಕೆ ಏರಲಿದೆ!

ಹೂಡಾ ದೋಷಾರೋಪ ಪಟ್ಟಿಯನ್ನು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ನಾನಾ ಕಾರಣಗಳಿಂದಾಗಿ ಕೂತೂಹಲದಿಂದ ಗಮನಿಸಲಾಗುತ್ತದೆ. ಈ ಭೂಹಗರಣವನ್ನು ಹರಿಯಾಣದಲ್ಲಿ 2015ರಲ್ಲಿ ಅಧಿಕಾರಕ್ಕೆ ಬರುತ್ತಲೇ ಬಿಜೆಪಿ ಸರಕಾರ ಸಿಬಿಐಗೆ ವರ್ಗಾಯಿಸಿತು. ಎಂದಿನಂತೆ ಹೂಡಾ, ಇದೊಂದು ರಾಜಕೀಯ ಪ್ರೇರಿತ ಕ್ರಮ ಎಂದು ಜರಿದರಾದರೂ, ಹಿಂದಿನ ಕಾಂಗ್ರೆಸ್ ಸರಕಾರದ ನಾಲ್ಕು ಭೂವಿವಾದಗಳಲ್ಲಿ ಇದು ಕೂಡ ಒಂದು ಎಂಬುದು ಗಮನಾರ್ಹ ಸಂಗತಿ. ಇಲ್ಲಿ ಗಮನಿಸಬೇಕಾದ ಇನ್ನೊಂದು ಬಹುಮುಖ್ಯ ವಿಷಯವೆಂದರೆ, ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ ಚೌಟಾಲಾ (ಪ್ರಧಾನಿ ಉಲ್ಲೇಖಿಸಿರುವಂತೆ) 2013ರಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪ ಸಾಬೀತಾಗಿ ಈಗಾಗಲೇ ಅನೇಕ ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅಂದರೆ, ಅವರು ಜೈಲು ಸೇರಿದ್ದು ಯುಪಿಎ ಸರಕಾರದ ಅವಧಿಯಲ್ಲಿ. ಆದರೆ, ಇತರರು ಮಾಡಿದ ಒಳ್ಳೆಯ ಕೆಲಸಗಳನ್ನು ತಮ್ಮದೆಂದು ಸಾರಿ ಹೆಸರು ಸಂಪಾದಿಸಲು ಹೊರಟಿದ್ದಾರೆ ಮೋದಿಯವರು. ಅವರ ಕೈಕೆಳಗಿನ ತನಿಖಾ ಸಂಸ್ಥೆಗಳು ಕೂಡ ಮೋದಿ ಅವರಷ್ಟೇ ವೇಗದಲ್ಲಿ ಪ್ರತಿಪಕ್ಷ ನಾಯಕರನ್ನು ಹಣಿಯಲು ಸನ್ನದ್ಧವಾಗಿರುವಂತೆಯೇ, ಇನ್ನೊಂದೆಡೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಎನ್‌ಡಿಎ ಮಿತ್ರಪಕ್ಷಗಳು ಶಿಕ್ಷೆಯಿಂದ ಪಾರಾಗಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಪಂಜಾಬ್‌ನ ಪ್ರಭಾವಿ ಕುಟುಂಬ ಹಾಗೂ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕೂಡ ಅಂಥ ಪಕ್ಷಗಳಲ್ಲಿ ಒಂದು.

ಈಗ ಮತ್ತೆ ಮನೇಸರ (ಗುರಗಾಂವ್) ಪ್ರಕರಣಕ್ಕೆ ಬರೋಣ. ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಹಿಂದಿನ ಸರಕಾರ ಗುರಗಾಂವ್ ಜಿಲ್ಲೆಯ ಮನೇಸರದಲ್ಲಿ ಮನರಂಜನೆ ಮತ್ತು ವಸತಿ ಸೌಲಭ್ಯಗಳನ್ನುಳ್ಳ ಇಂಡಸ್ಟ್ರಿಯಲ್ ಮಾಡೆಲ್ ಟೌನ್‌ಶಿಪ್ (ಐಎಂಟಿ) ನಿರ್ಮಿಸಲು 912 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿತು. ಆದರೆ, 2004 ಮತ್ತು 2007ರಲ್ಲಿ ಖಾಸಗಿ ಬಿಲ್ಡರ್‌ಗಳು ಇಲ್ಲಿ ಪ್ರವೇಶಿಸಿ, ಸರಕಾರ ಭೂಸ್ವಾಧೀನ ಮಾಡಿಕೊಂಡರೆ ರೈತರಿಗೆ ಪುಡಿಗಾಸಿನ ಪರಿಹಾರ ದೊರೆಯಲಿದೆ ಎಂಬ ಆತಂಕವನ್ನು ರೈತರಲ್ಲಿ ಸೃಷ್ಟಿಸಿದರು. ಸಿಬಿಐ ಪ್ರಕಾರ, ಈ ಬಿಲ್ಡರ್‌ಗಳು ಸುಮಾರು 400 ಎಕರೆ ಭೂಮಿಯನ್ನು ಆಯಾ ಮಾಲೀಕರಿಂದ ಎಕರೆಗೆ 20-25 ಲಕ್ಷ ರು. ದರದಲ್ಲಿ ಖರೀದಿಸಿದರು. ಆಗ ಅಲ್ಲಿನ ಭೂಮಿ ಬೆಲೆ ಎಕರೆಗೆ ನಾಲ್ಕು ಕೋಟಿ ರುಪಾಯಿ ಇತ್ತು. ಅಂದರೆ, ರೈತರಿಗೆ ಸುಮಾರು 1,600 ಲಕ್ಷ ರು.ಗಳ ಹಾನಿ ಉಂಟಾಗಿತ್ತು.

1894ರ ಭೂಸ್ವಾಧೀನ ಕಾಯಿದೆ ಪ್ರಕಾರ, ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಕೆಲವು ರಿಯಲ್ ಎಸ್ಟೇಟ್ ಡೆವಲಪರ್‌ಗಳು 400 ಎಕರೆ ಭೂಮಿಯನ್ನು ರೈತರಿಂದ ಕಡಿಮೆ ಬೆಲೆಗೆ ಖರೀದಿಸಲು ಅಧಿಕಾರಿಗಳೊಂದಿಗೆ ಶಾಮೀಲಾದರು ಎನ್ನಲಾಗಿದೆ. ಭೂಮಾಲೀಕರು ಈ ಬೆಲೆಗೆ ಮಾರದಿದ್ದರೆ ಸರಕಾರವೇ ಅವರ ಭೂಮಿಯನ್ನು ಪುಡಿಗಾಸಿನ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಆತಂಕವನ್ನೂ ಇಲ್ಲಿ ಸೃಷ್ಟಿಸಲಾಗಿತ್ತಂತೆ. ಈ ವದಂತಿಗಳಿಂದ ಕಂಗೆಟ್ಟ ರೈತರು, ಅತಿ ಕಡಿಮೆ ಬೆಲೆಗೆ, ಅಂದರೆ ಪ್ರತಿ ಎಕರೆಗೆ 20-25 ಲಕ್ಷಗಳಂತೆ ಸುಮಾರು ನೂರು ಕೋಟಿ ರು.ಗೆ ಮಾರಿಬಿಟ್ಟರು. ಆಗಿನ ಮಾರುಕಟ್ಟೆ ಬೆಲೆ ಎಕರೆಗೆ ನಾಲ್ಕು ಕೋಟಿ ರು.ಗಳಂತೆ ಹಿಡಿದು ಲೆಕ್ಕ ಮಾಡಿದರೆ, ಅದರ ಮೊತ್ತ ಸುಮಾರು 1,600 ಕೋಟಿ ರು. ಆಗಬೇಕಿತ್ತು ಎಂದಿದೆ ಸಿಬಿಐ.

2007ರ ಆಗಸ್ಟ್‌ನಲ್ಲಿ ಸರಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಿ, ಆ ಭೂಮಿಯಲ್ಲಿ ವಸತಿ ಕಾಲೊನಿಗಳನ್ನು ನಿರ್ಮಿಸಲು ಬಿಲ್ಡರ್‌ಗಳಿಗೆ ಲೈಸೆನ್ಸ್ ನೀಡಿತು. ಇದರಿಂದ ಬಿಲ್ಡರ್‌ಗಳಿಗೆ ಮತ್ತು ಅಧಿಕಾರಿಗಳಿಗೆ ಶುಕ್ರದೆಸೆಯೇ ಶುರುವಾಯಿತು.

ಇದನ್ನೂ ಓದಿ : ರಾವಿ ತೀರ | ಮಹಿಳಾ ಸುರಕ್ಷತೆಯಲ್ಲಿ ಸೊನ್ನೆ ಸುತ್ತುತ್ತಲೇ ಇದೆ ಖಟ್ಟರ್ ಸರ್ಕಾರ

ಐಎಂಟಿ ನಿರ್ಮಾಣದ ನಿರ್ಧಾರದಿಂದ ಹಿಂದೆ ಸರಿದ ಸರಕಾರದ ಕ್ರಮ ಭೂಸ್ವಾಧೀನ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಮತ್ತು ಅದು ಅಧಿಕಾರದ ದುರುಪಯೋಗ ಎಂದು ದೂರಿ, 2015ರಲ್ಲಿ ರೈತರು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದರು. ಈ ಭೂಕಬಳಿಕೆಯ ನಂತರ ಬಿಲ್ಡರ್‌ಗಳಿಗೆ ಸಾಕಷ್ಟು ಲಾಭ ಮಾಡಿಕೊಡಲಾಯಿತು ಎಂದೂ ಅವರು ವಾದಿಸಿದರು. ನಂತರದಲ್ಲಿ ಅಧಿಕಾರಕ್ಕೆ ಬಂದ ಮನೋಹರ ಲಾಲ್ ಖಟ್ಟರ್ ಸರಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ತನ್ನದೇನೂ ಅಭ್ಯಂತರವಿಲ್ಲ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಒಂದು ಅಫಿಡವಿತ್ ಸಲ್ಲಿಸಿತು. ಕೊನೆಗೂ ಸಿಬಿಐ, 2015ರ ಸೆಪ್ಟೆಂಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡಿತು.

ಹೂಡಾ ಮತ್ತು ಅವರ ಸಹಚರರು ನ್ಯಾಯಾಲಯದಲ್ಲಿ ಈ ಪ್ರಕರಣದ ಹೋರಾಟ ನಡೆಸಿರುವಾಗ, ಮೋದಿ ಅವರು ಬಾದಲ್ ಅವರ ಡ್ರಗ್ ದೊರೆಗಳ ಜೊತೆಗಿನ ಶಂಕಿತ ನಂಟಿನ ಬಗ್ಗೆ ಯಾಕೆ ಅಷ್ಟೇ ವೇಗದಲ್ಲಿ ಸಾರ್ವಜನಿಕರ ಸಂದೇಹವನ್ನು ನಿವಾರಿಸುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಅವರ ಸಹೋದರ ಮತ್ತು ಮಾಜಿ ಕೇಂದ್ರ ಸಚಿವ ಬಿಕ್ರಂ ಸಿಂಗ್ ಮಜೀಥಿಯಾ ಅವರ ಶಂಕಿತ ಡ್ರಗ್ಸ್ ಡೀಲರ್‌ಗಳ ಜೊತೆಗಿನ ನಂಟಿನ ಬಗ್ಗೆ ಜಾರಿ ನಿದೇಶನಾಲಯ ವಿಚಾರಣೆ ಆರಂಭಿಸಿತ್ತು. ಆದರೆ, ಮೊದಲ ಸುತ್ತಿನ ವಿಚಾರಣೆಯ ನಂತರ ಈ ಪ್ರಕರಣದ ಬಗ್ಗೆ ಮೃದು ಧೋರಣೆ ತಳೆಯಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಮಜೀಥಿಯಾ ನಂಟಿನ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ರಕ್ಷಣೆ ಕೊಡಿ ಎಂದು ಹೇಳುವಲ್ಲಿಗೆ ಬಂದುನಿಂತಿದೆ ಈ ಪ್ರಕರಣ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More