ಇಲಾಜು | ಆಧಾರ್‌ನಿಂದ ಜನರ ಆರೋಗ್ಯ, ಚಿಕಿತ್ಸೆಯ ವೈಯಕ್ತಿಕ ಮಾಹಿತಿ ಬಟಾಬಯಲು!

ಸರಕಾರಿ ನೆರವಿಗೆ ಆಧಾರ್ ಕಡ್ಡಾಯಗೊಳಿಸಿ 2016ರಲ್ಲಿ ತಂದ ಕಾಯಿದೆಯಲ್ಲಿ ವ್ಯಕ್ತಿಯ ವೈದ್ಯಕೀಯ ವಿವರ ಸಂಗ್ರಹಿಸುವಂತಿಲ್ಲ ಎಂದು ಹೇಳಲಾಗಿದೆ. ಆದರೂ ಸರಕಾರವೇ ಅದನ್ನು ಮೀರಿ, ಆಸ್ಪತ್ರೆ ದಾಖಲಾತಿ, ವೈದ್ಯಕೀಯ ಪರೀಕ್ಷೆ, ಕೆಲವು ಚಿಕಿತ್ಸೆಗಳಿಗೆ ಆಧಾರ್ ಕಡ್ಡಾಯಗೊಳಿಸತೊಡಗಿದೆ!

ಈಗಷ್ಟೇ ಹುಟ್ಟಿದ ಮಗುವಿನಿಂದ ಹಿಡಿದು, ಕೊನೆಗಾಲದಲ್ಲಿರುವ ವೃದ್ಧರವರೆಗೆ ಎಲ್ಲರ ಕೈಬೆರಳುಗಳು, ಕಣ್ಣಿನ ಪಾಪೆಗಳು ಮತ್ತು ಭಾವಚಿತ್ರಗಳು ಈಗ ಭಾರತ ಸರಕಾರದ ಸೊತ್ತು. ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ ಎಂದವರು ಪ್ರತಿಯೊಬ್ಬ ಭಾರತೀಯನ ಪ್ರತಿಯೊಂದು ಕೆಲಸಕ್ಕೂ ಕೇಂದ್ರದ ಅನುಮತಿಯಿರಬೇಕೆಂಬ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ. ವ್ಯವಹರಿಸುವುದಕ್ಕೆ, ಪಡಿತರದ ಊಟಕ್ಕೆ, ವಿಮೆಗೆ, ರೋಗದ ಚಿಕಿತ್ಸೆಗೆ, ಗರ್ಭಪಾತಕ್ಕೆ ಆಧಾರ್ ಬೆರಳಚ್ಚಿನ ಒಪ್ಪಿಗೆ ಪಡೆಯಬೇಕಾದ ಅಮಾನವೀಯ ವ್ಯವಸ್ಥೆಗೆ ಪಕ್ಷಭೇದವಿಲ್ಲದೆ ರಾಜ್ಯ ಸರಕಾರಗಳೂ ಒಪ್ಪಿವೆ, ರೋಗಿಗಳ ಹಿತರಕ್ಷಕರಾಗಬೇಕಾದ ವೈದ್ಯರೂ ಮೌನವಾಗಿದ್ದಾರೆ.

ಮೊದಲೆಲ್ಲ ಅಪರಾಧ ನಡೆದ ಸ್ಥಳದಿಂದ ಬೆರಳಚ್ಚುಗಳನ್ನು ಸಂಗ್ರಹಿಸಿ, ಶಂಕಿತರ ಬೆರಳಚ್ಚಿನೊಂದಿಗೆ ತಾಳೆ ಹಾಕಿ, ಅಪರಾಧಿಗಳನ್ನು ಗುರುತಿಸುವುದಿತ್ತು. ಈ ಆಧಾರ್ ವ್ಯವಸ್ಥೆಯಲ್ಲಿ, ಎಲ್ಲ ಭಾರತೀಯರೂ ಕಳ್ಳ-ಸುಳ್ಳರೇನೋ ಎಂಬಂತೆ, ಎಲ್ಲರ ಬೆರಳಚ್ಚುಗಳನ್ನು ಸಂಗ್ರಹಿಸಿಟ್ಟುಕೊಂಡು, ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕ ಮತ್ತದರ ಜಿಪಿಎಸ್, ಎಲ್ಲ ಬಗೆಯ ವಿಮೆ, ಆರೋಗ್ಯ ಸೇವೆ, ಶಾಲೆ-ಕಾಲೇಜು-ಪರೀಕ್ಷೆ-ಉದ್ಯೋಗಗಳಿಗೆ ದಾಖಲಾತಿ, ಮದುವೆ ಇತ್ಯಾದಿಯಾಗಿ ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ಆಧಾರ್ ಸಂಖ್ಯೆಗೆ ಗಂಟು ಹಾಕಿ, ಆ ಬೆರಳಚ್ಚಿನ ವ್ಯಕ್ತಿಯು ಎಲ್ಲಿ, ಯಾವಾಗ, ಏನು ಮಾಡಿದ್ದಾನೆ ಎಂದು ಹಿಂಬಾಲಿಸಲಾಗುತ್ತದೆ, ಪ್ರತೀ ನಾಗರಿಕನ ಬಗ್ಗೆ ಅಂತಹ ಅಗಾಧ ಪ್ರಮಾಣದ ಮಾಹಿತಿಯನ್ನು ಸರಕಾರವು ಸಂಗ್ರಹಿಸಿಟ್ಟುಕೊಳ್ಳುವುದಕ್ಕೂ, ಖಾಸಗಿ ಕಂಪನಿಗಳೊಂದಿಗೆ ಹಂಚಿಕೊಳ್ಳುವುದಕ್ಕೂ ಸಾಧ್ಯವಾಗುತ್ತದೆ.

ಆಧಾರ್ ಯೋಜನೆ, ಅದರ ಗೌಪ್ಯತೆ ಮತ್ತು ಬಳಕೆಗಳಿಗೆ ನಮ್ಮ ಸಂಸತ್ತು ಇನ್ನೂ ಪೂರ್ಣ ಅನುಮೋದನೆಯನ್ನು ನೀಡಿಲ್ಲ. ಹಾಗಿದ್ದರೂ, ಸರಕಾರದ ನೆರವನ್ನು ಪಡೆಯಲು ಆಧಾರ್ ಕಡ್ಡಾಯವೆಂದು ಆಯವ್ಯಯ ಪಟ್ಟಿಯೊಳಗೆ ತೂರಿಸಿ, ಮೊಬೈಲ್ ಸಂಪರ್ಕದಿಂದ ಹಿಡಿದು ಆರೋಗ್ಯ ಸೇವೆಗಳವರೆಗೆ ಎಲ್ಲಕ್ಕೂ ಆಧಾರ್ ಬೇಕೇಬೇಕೆಂದು ಬೆದರಿಸಲಾಗುತ್ತಿದೆ. ಅತ್ತ, ಆಧಾರ್ ಮೂಲಕ ಸೋರಿಕೆಯನ್ನು ತಡೆದುದರಿಂದ ಹೆಚ್ಚೇನೂ ಉಳಿಸಲಾಗಿಲ್ಲ ಎಂದು ರಿಸರ್ವ್ ಬ್ಯಾಂಕಿನ ವರದಿಯೇ ಒಪ್ಪಿದೆ. ಇವನ್ನೆಲ್ಲ ನೋಡುವಾಗ, ಸರಕಾರದ ನೆರವಿಗೆ ಆಧಾರ್ ಪಡೆಯಬೇಕೆನ್ನುವ ನೆಪದಲ್ಲಿ ಎಲ್ಲರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಿ, ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವುದೇ ಆಧಾರ್ ಹಿಂದಿನ ಮುಖ್ಯ ಉದ್ದೇಶವೆಂಬ ಸಂಶಯಗಳೇಳುತ್ತವೆ. ಆಧಾರ್‌ ಯೋಜನೆಯ ಹಿಂದಿರುವ ದಿಗ್ಗಜ ತಂತ್ರಜ್ಞರೆಲ್ಲರೂ ಆಧಾರ್ ಆಧಾರಿತ ಕಾರ್ಪೊರೆಟ್ ಯೊಜನೆಗಳಲ್ಲೂ, ತೆರಿಗೆ ಸಂಗ್ರಹದ ವ್ಯವಸ್ಥೆಯಲ್ಲೂ ಭಾಗಿಗಳಾಗಿದ್ದಾರೆ ಎನ್ನುವುದು ಇದನ್ನು ಪುಷ್ಟೀಕರಿಸುತ್ತದೆ.

ವೈಯಕ್ತಿಕ ಮಾಹಿತಿಯ ಸಂಗ್ರಹ, ಬಳಕೆ ಮತ್ತು ಹಂಚಿಕೆಯ ಬಗ್ಗೆ ಸ್ಪಷ್ಟವಾದ ನಿರ್ಬಂಧಗಳಿಲ್ಲದೆ, ಖಾಸಗಿ ಕಂಪನಿಗಳಿಗೂ ಅವಕಾಶವಿತ್ತಿರುವುದರಿಂದ, 125 ಕೋಟಿ ಭಾರತೀಯರ ಮಹಾ ಮಾಹಿತಿಯ ಬಗ್ಗೆ ಕಾರ್ಪೊರೆಟ್ ಹಾಗೂ ತಂತ್ರಜ್ಞಾನ ಕಂಪನಿಗಳು ಅತ್ಯಾಸಕ್ತಿಯಿಂದ ದುಡಿಯತೊಡಗಿವೆ. ಅನ್ಯ ದೇಶಗಳೂ ಈ ಮಾಹಿತಿಯನ್ನು ಪಡೆಯುವುದಕ್ಕೆ ಉತ್ಸುಕವಾಗಿವೆ; ನಮ್ಮ ರೈತರ (ಅಂದರೆ ಬಹುತೇಕ ಭಾರತೀಯರ) ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವ ಬಗ್ಗೆ ಇಸ್ರೇಲ್‌ ಈಗಾಗಲೇ ಪ್ರಸ್ತಾಪಿಸಿದೆ. ಕೋಟಿಗಟ್ಟಲೆ ಭಾರತೀಯರಿಗೆ ಅತಿ ಕಡಿಮೆ ದರದಲ್ಲಿ ಮೊಬೈಲ್ ಒದಗಿಸಿರುವ ಅತಿ ದೊಡ್ಡ ಕಂಪನಿಯು ಮಹಾ ಮಾಹಿತಿ ವಿಶ್ಲೇಷಣೆಗಾಗಿ ಇಸ್ರೇಲ್ ಜೊತೆ ಒಡಂಬಡಿಕೆಗೆ ಹೊರಟಿದೆ. ಒಟ್ಟಿನಲ್ಲಿ, ಆಧಾರ್ ಜೋಡಿತ ಮಾಹಿತಿಗೆ ಈಗಾಗಲೇ ವಿಪರೀತ ಬೇಡಿಕೆ ಕುದುರಿದೆ.

ಅದರಲ್ಲೂ, ಪ್ರತೀ ನಾಗರಿಕನ ಜನ್ಮಾರಭ್ಯ ಆರೋಗ್ಯ ಮಾಹಿತಿಯನ್ನು ಕಲೆ ಹಾಕುವುದೇ ಆಧಾರ್ ಯೋಜನೆಯ ಮುಖ್ಯ ಉದ್ದೇಶವಿರುವಂತೆ ತೋರುತ್ತಿದೆ. ಆಧಾರ್ ಯೋಜನೆಯ ರೂವಾರಿ ನಂದನ್ ನಿಲೇಕಣಿ ಮೊದಲಿನಿಂದಲೂ ಅದನ್ನು ಹೇಳುತ್ತಲಿದ್ದಾರೆ. ಕೇಂದ್ರ ಸರಕಾರವು ಹೆಣೆಯುತ್ತಿರುವ ತಂತ್ರಗಳೂ ಅದನ್ನೇ ಸೂಚಿಸುತ್ತಿವೆ. ಆರೋಗ್ಯ ಸಂಬಂಧಿ ಮಿಂದಾಖಲೆಗಳ ಮಾನದಂಡಗಳನ್ನು ಫೆಬ್ರವರಿ 2016ರಲ್ಲಿ ಪ್ರಕಟಿಸಲಾಗಿದ್ದು, ಆಧಾರ್‌ ಜೋಡಣೆಗೆ ಆದರಲ್ಲಿ ಮಹತ್ವ ನೀಡಲಾಗಿದೆ. ಸರಕಾರಿ ನೆರವಿಗೆ ಆಧಾರ್ ಕಡ್ಡಾಯಗೊಳಿಸಿ ಮಾರ್ಚ್ 2016ರಲ್ಲಿ ತಂದ ಆಧಾರ್ ಕಾಯಿದೆಯಲ್ಲಿ [2(ಕೆ)] ವ್ಯಕ್ತಿಯ ವೈದ್ಯಕೀಯ ವಿವರಗಳನ್ನು ಸಂಗ್ರಹಿಸುವಂತಿಲ್ಲ ಎಂದು ಹೇಳಲಾಗಿದ್ದರೂ, ಸರಕಾರವೇ ಅದನ್ನು ಮೀರಿ, ಆಸ್ಪತ್ರೆ ದಾಖಲಾತಿ, ವೈದ್ಯಕೀಯ ಪರೀಕ್ಷೆಗಳು ಮತ್ತು ಕೆಲವು ಚಿಕಿತ್ಸೆಗಳಿಗೆ ಆಧಾರ್ ಕಡ್ಡಾಯಗೊಳಿಸತೊಡಗಿದೆ. ಮಾರ್ಚ್ 2017ರಲ್ಲಿ ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ರಾಷ್ಟ್ರೀಯ ಗಣಕೀಕೃತ ಆರೋಗ್ಯ ಪ್ರಾಧಿಕಾರವನ್ನು ರಚಿಸಿ, 2025ರ ವೇಳೆಗೆ ದೇಶದ ನಾಗರಿಕರ ರೋಗಗಳು ಮತ್ತು ಆರೋಗ್ಯ ಸರ್ವೇಕ್ಷಣೆಯ ವಿವರಗಳಿರುವ ಆಧಾರ್ ಜೋಡಿತ ಆರೋಗ್ಯ ಮಾಹಿತಿ ಜಾಲವನ್ನೂ, ಆರೋಗ್ಯ ಮಾಹಿತಿ ವಿನಿಮಯ ವ್ಯವಸ್ಥೆಯನ್ನೂ ಎಲ್ಲೆಡೆ ಸ್ಥಾಪಿಸುವ ಬಗ್ಗೆ ಹೇಳಲಾಗಿದೆ. ದೇಶದ ಎಲ್ಲ ಖಾಸಗಿ ಹಾಗೂ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಜನರ ಮೊಬೈಲ್ ಮತ್ತಿತರ ಸಾಧನಗಳಲ್ಲಿ ಮತ್ತು ಮಿಂಬಲೆಯಲ್ಲಿ ಲಭ್ಯವಾಗುವ ಎಲ್ಲ ಭಾರತೀಯರ ಆರೋಗ್ಯ ಸಂಬಂಧಿ ಮಿಂದಾಖಲೆಗಳನ್ನು ಸಂಯೋಜಿಸುವ ಬಗ್ಗೆಯೂ ಅದರಲ್ಲಿ ಹೇಳಲಾಗಿದೆ. ಈ ಮಾಹಿತಿಗಳ ಸಂಗ್ರಹ, ವಿಶ್ಲೇಷಣೆ ಹಾಗೂ ಹಂಚಿಕೆಗಳಲ್ಲಿ ಖಾಸಗಿ ವಲಯವು ಭಾಗಿಯಾಗಲಿದೆ ಎಂದೂ ಹೇಳಲಾಗಿದೆ.

ಹುಟ್ಟಿನಿಂದ ಸಾವಿನವರೆಗೆ ಪ್ರತಿಯೊಬ್ಬ ಭಾರತೀಯನ ಆರೋಗ್ಯದ ಸ್ಥಿತಿಗತಿ, ವೈದ್ಯಕೀಯ ಭೇಟಿಗಳು, ಪರೀಕ್ಷೆಗಳು, ಪಡೆದ ಲಸಿಕೆಗಳು ಮತ್ತು ಚಿಕಿತ್ಸೆಗಳು ಮುಂತಾದ ಸಕಲ ವಿವರಗಳನ್ನು ನಿಜಕಾಲದಲ್ಲಿ ದಾಖಲಿಸುವುದು, ವಿಶ್ಲೇಷಿಸುವುದು ಮತ್ತು ಖಾಸಗಿ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಇವನ್ನು ಹಂಚಿಕೊಳ್ಳುವುದು ಆಧಾರ್ ಯೋಜನೆಯ ಮಹಾ ಉದ್ದೇಶವೆನ್ನಲು ಇಷ್ಟು ಸಾಲದೇ? ಯಾವ ಪ್ರದೇಶದಲ್ಲಿ ಯಾರಿಗೆ ಯಾವ ರೋಗವಿದೆ, ಯಾವ ವೈದ್ಯರು ಯಾರಿಗೆ ಯಾವ ಚಿಕಿತ್ಸೆ ನೀಡುತ್ತಾರೆ, ಯಾವ ವ್ಯಕ್ತಿ ಯಾವ ರೋಗಕ್ಕೆ ಯಾರಿಂದೆಲ್ಲ ಏನೆಲ್ಲ ಚಿಕಿತ್ಸೆ ಪಡೆಯುತ್ತಾನೆ ಎಂಬುದೆಲ್ಲವನ್ನೂ ತಿಳಿದು, ಅಂಥವರನ್ನು ವಹಿವಾಟಿನ ದಾಳಗಳಾಗಿಸಲು ಖಾಸಗಿ ಕಂಪನಿಗಳಿಗೆ ಇದರಿಂದ ಅತಿ ಸುಲಭವಾಗಲಿದೆ. ಹಾಗೆಯೇ, ವ್ಯಕ್ತಿಗೆ ತಗುಲಿದ ರೋಗದ ಕಳಂಕವನ್ನು ಶಾಶ್ವತಗೊಳಿಸಿ ಸತಾಯಿಸುವುದಕ್ಕೂ, ವಿಮೆಯನ್ನು ನಿರಾಕರಿಸುವುದಕ್ಕೂ, ಕಂತನ್ನು ಬೇಕಾಬಿಟ್ಟಿ ಹೆಚ್ಚಿಸುವುದಕ್ಕೂ ಸಮರ್ಥನೆಯೊದಗಲಿದೆ.

ಇದನ್ನೂ ಓದಿ : ಸ್ಟೇಟ್ ಆಫ್ ದಿ ನೇಶನ್ | ಆಧಾರ್ ಅಂಕಿ-ಅಂಶ ಸೋರಿಕೆ ಬಗ್ಗೆ ಆತಂಕವೇಕೆ ಗೊತ್ತೇ?

ವೈದ್ಯಕೀಯ ದಾಖಲೆಗಳನ್ನು ಆಧಾರ್‌ ಜೊತೆ ಗಣಕೀಕರಿಸುವುದರಿಂದ ಎಲ್ಲೇ ಹೋದರೂ ತ್ವರಿತ ಚಿಕಿತ್ಸೆ ಪಡೆಯುವುದು ಸುಲಭವಾಗಲಿದೆ ಎಂಬ ಸಬೂಬನ್ನು ನೀಡಲಾಗುತ್ತಿದೆ. ಆದರೆ ಮಿಂದಾಖಲೆಗಳ ಮಾನದಂಡಗಳನ್ನು ಗಮನಿಸಿದರೆ ಈ ಬಗ್ಗೆಯೂ ಸಂಶಯಗಳೇಳುತ್ತವೆ. ಈ ದಾಖಲೆಗಳನ್ನು ನೋಡುವುದಕ್ಕೆ, ಪಡೆಯುವುದಕ್ಕೆ, ಸೇರಿಸುವುದಕ್ಕೆ ರೋಗಿ ಹಾಗೂ ವೈದ್ಯನ ಬೆರಳಚ್ಚುಗಳ ಸಮ್ಮತಿ ಬೇಕಾಗುತ್ತದೆ; ಬೇರೆ ವೈದ್ಯರ ಬಳಿಗೆ ಹೋದರೆ ಮತ್ತೆ ಎಲ್ಲರೂ ಬೆರಳೊತ್ತಬೇಕಾಗುತ್ತದೆ. ತುರ್ತು ಸ್ಥಿತಿಗಳಲ್ಲಿ ಬೇರೆ ವೈದ್ಯರಿದ್ದರಂತೂ ಇದು ಇನ್ನಷ್ಟು ಜಟಿಲವಾಗುತ್ತದೆ. ಎಲ್ಲೋ ಒಂದೆಡೆ ಮಾಹಿತಿಯನ್ನು ಸೇರಿಸುವಾಗ ತಪ್ಪಾಗಿದ್ದರೆ, ಅದನ್ನು ಸರಿಪಡಿಸಲು ರೋಗಿಯು ಮತ್ತಷ್ಟು ಹೆಣಗಾಡಬೇಕಾಗುತ್ತದೆ. ನಮ್ಮ ದೇಶದಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆಯ ಕ್ರಮಗಳು, ಕೌಶಲ್ಯಗಳು, ಸೌಲಭ್ಯಗಳು ಹಲವು ತೆರನಾಗಿರುವುದರಿಂದ ಇಂತಹ ಕೇಂದ್ರೀಕೃತ ವ್ಯವಸ್ಥೆಯು ಅಪಾರ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು. ವೈದ್ಯಕೀಯ ಸಿಬಂದಿಯು ಈ ದಾಖಲೆಗಳನ್ನು ತುಂಬುವುದಕ್ಕೇ ಕಾಲವ್ಯಯ ಮಾಡಬೇಕಾಗಿ, ರೋಗಿಗಳ ಆರೈಕೆಯೂ ಇನ್ನಷ್ಟು ಬಳಲಲಿದೆ.

ಆಹಾರ ಮತ್ತು ಸರಕಾರಿ ಆರೋಗ್ಯ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಿದ್ದರಿಂದ ಈಗಾಗಲೇ ಅನೇಕರಿಗೆ ಸಮಸ್ಯೆಗಳಾದ ಬಗ್ಗೆ ವರದಿಗಳಾಗಿವೆ. ಬೆರಳಚ್ಚು ತಾಳೆಯಾಗದೆ, ಸರ್ವರ್ ದೊರಕದೆ, ಪಡಿತರ ತಪ್ಪಿ ಹಸಿವಿನಿಂದ ಸತ್ತದ್ದು, ಕುಷ್ಠದಿಂದ ಬೆರಳುಗಳು ಮತ್ತು ಮುಖಚರ್ಯೆ ಬದಲಾಗಿ ಆಹಾರ-ಔಷಧ ಸಿಗದಾಗಿದ್ದು, ಆಧಾರ್ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಗರ್ಭಪಾತ ಮಾಡಿಸದೆ ನಕಲಿಗಳಿಂದ ಮಾಡಿಸಿ ಸಾವನ್ನಪ್ಪಿದ್ದು, ಆಧಾರ್ ಗುರುತಿಸಿಕೊಳ್ಳಲು ಒಪ್ಪದೆ ಎಚ್‌ಐವಿ ಚಿಕಿತ್ಸೆ ತೊರೆದದ್ದು ಎಲ್ಲ ಆಗಿವೆ. ಆಧಾರ್ ಇಲ್ಲದೆ ಆರೋಗ್ಯ ಸೇವೆ ಇಲ್ಲ ಎಂಬಂತಾದರೆ, ಬೆರಳಚ್ಚು ತಪ್ಪಿದರೆ, ಎಂದಿನ ವೈದ್ಯರು ಇಲ್ಲದಿದ್ದರೆ, ಮಾಹಿತಿಯಲ್ಲಿ ತಪ್ಪಿದ್ದರೆ, ಸರ್ವರ್ ಮೌನವಾದರೆ ಚಿಕಿತ್ಸೆಯೇ ಸಿಗದಂತಾಗಲಿದೆ. ಅದೇನೇ ಆದರೂ, ಮಾಹಿತಿ ಕಣಜವನ್ನು ನಿಯಂತ್ರಿಸುವ ಮಹಾ ಬಂಡವಾಳಗಾರರಿಗೆ ಒಳ್ಳೆಯದೇ ಆಗಲಿದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More