ಶತಪಥ | ದಕ್ಷಿಣ ಕನ್ನಡದ ಇಂಥ ಸ್ಮೃತಿಗಳೇ ನಮ್ಮನ್ನು ಇಂದು ಎಚ್ಚರಿಸಬೇಕಲ್ಲವೇ?

ಉಳ್ಳಾಲ ತೀರದ ಕಡಲನ್ನು ತದೇಕ ನೋಡುತ್ತ ಕುಳಿತೆವೆಂದರೆ, ಅಬ್ಬಕ್ಕನ ಹೋರಾಟ ಕಣ್ಮುಂದೆ ಬರುತ್ತದೆ. ಪೋರ್ಚುಗೀಸರ ದೊಡ್ಡ ಸೈನ್ಯದ ಎದುರು ಪುಟ್ಟ ದಂಡಿನ ಬಲದಿಂದಲೇ ಕಡಲಿನಂತೆ ಮೊರೆದ ರಾಣಿಯಾಕೆ. ಅವಳ ಪ್ರಜಾಪ್ರೀತಿ, ಆಕೆ ಕಟ್ಟಿದ ಜಾತಿ-ಮತ ಮೀರಿದ ಸಮಾಜ ಇಂದಿಗೂ ಮಾದರಿ

ಅವಳದೊಂದು ತೈಲಚಿತ್ರವಿದೆ. ಕೋಟೆಯ ದಂಡೆಗೊರಗಿ ಆಕೆ ನಿಂತಿದ್ದಾಳೆ. ಎದುರು ಅರಬ್ಬೀ ಸಮುದ್ರ, ಅಲ್ಲಿ ತೇಲುವ ದೋಣಿಗಳು, ಹಡಗುಗಳು. ಆಕೆ ಅಭಿಮಾನ, ಚಿಂತೆ, ವಿಷಾದ ಮತ್ತು ವಿಷಣ್ಣತೆ ಬೆರೆತ ದೃಷ್ಟಿಯಲ್ಲಿ ದೂರದಲ್ಲೆಲ್ಲೋ ನೋಡುತಿದ್ದಾಳೆ. ರಾಣಿ ಅಂತ ಹೇಳುವಂತಿಲ್ಲದ ಸಾಮಾನ್ಯ ಉಡುಗೆ-ತೊಡುಗೆ ಆಭರಣದ, ಸೊಂಟಕ್ಕೆ ಡಾಬು ತೊಟ್ಟ ಗಂಭೀರ ಮುಖಚರ್ಯೆ.

ಉಳ್ಳಾಲದ ಧೀರ ರಾಣಿಯೆಂದೇ ಹೆಸರಾದ ಅಬ್ಬಕ್ಕ ದೇವಿಯ ಚಿತ್ರವದು. ನೋಡುತಿದ್ದರೆ, ಅಲ್ಲಿಂದ ಕಣ್ಣು ಕೀಳಲು ಮನಸ್ಸಾಗದು, ಹಾಗಿದೆ ಆ ಚಿತ್ರ.

ಜೀವನವಿಡೀ ವಿವಿಧ ಯುದ್ಧಗಳಲ್ಲೇ ಕಳೆದಳಲ್ಲವೇ ಅಬ್ಬಕ್ಕ ದೇವಿ! ಯುದ್ಧದ ಮಾಮೂಲಿ ಅರ್ಥದಲ್ಲಷ್ಟೇ ಅಲ್ಲ, ಯುದ್ಧವನ್ನೇ ಬದುಕಬೇಕಾಗಿ ಬಂದ ಮಹಿಳೆ ಅವಳು. ಪೋರ್ಚುಗೀಸರೊಂದಿಗೆ ಯುದ್ಧ, ಸಂಸಾರದಲ್ಲಿ ಸಾಂಗತ್ಯವಿಲ್ಲದೆ ಪತಿಯೊಡನೆ ನಿರಂತರ ನಡೆದ ವೈಮನಸ್ಯ ಯುದ್ಧ, ಈ ಎಲ್ಲದರಿಂದ ಮನೋಭಿತ್ತಿಯಲ್ಲಿ ಉಂಟಾಗುವ ತಳಮಳ, ನೋವು, ಆತಂಕಗಳನ್ನು ಮೀರಿ ಹೊರಬರಲು ನಡೆಸುತಿದ್ದ ನಿತ್ಯಯುದ್ಧ. ‘ಹ್ಜೆ! ಪೊಂಜೋಕುಲು’ ಎಂಬ ಸಸಾರದ ನುಡಿ ಇಂದಿಗೂ ಜೀವಂತ ಇರುವಾಗ, ಹದಿನಾರನೇ ಶತಮಾನದಲ್ಲಿ ಹೆಣ್ಣು ಎಂಬ ಕಾರಣಕ್ಕೆ ರಣರಂಗದಲ್ಲಿಯೂ ಎದುರಿಸಬೇಕಾದ ಹೋರಾಟಗಳು. ಅವಳ ಪತಿಗೂ ಪೋರ್ಚುಗೀಸ್ ಅಧಿಕಾರಿಗಳಿಗೂ ಆಕೆ ಕಾಣುತಿದ್ದುದು ಒಬ್ಬ ಹೆಣ್ಣಾಗಿ ಮಾತ್ರ. ಆಕೆಯೊಡನೆ ಯುದ್ಧ ಮಾಡಿ ಸೋತಾಗೆಲ್ಲ ಅವರು ನೋಯುತಿದ್ದುದು ಸೋತಿದ್ದಕ್ಕಷ್ಟೇ ಅಲ್ಲ, ಒಬ್ಬ ಹೆಣ್ಣಿನೊಂದಿಗೆ ಯುದ್ಧ ಮಾಡಿ ಸೋಲು ಅನುಭವಿಸಿದೆವಲ್ಲ, ಎಂದು!

ಈ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೀರಾಗ್ರಣಿ ಮಹಿಳೆಯರನೇಕರಿದ್ದಾರೆ. ಅತಿ ಹೆಸರಾಂತರೊಂದಿಗೆ ಅಲ್ಲಲ್ಲೇ ಪ್ರಾದೇಶಿಕ ಪರಿಧಿಯಲ್ಲಿ ಸೆಣಸಿದವರು ಬೇಕಷ್ಟು ಮಂದಿ ಸಿಗುತ್ತಾರೆ. ಅವರ ಜೀವನ ಕತೆಯೆಂದರೆ ಒಂದೋ ದುರ್ಬಲ ರಾಜನ ಪತ್ನಿಯರಾಗಿ; ಇಲ್ಲ, ಪತಿಯ ನಿಧನದ ನಂತರ ರಾಜ್ಯಸೂತ್ರವನ್ನು ಹಿಡಿದವರಾಗಿ ನಡೆಸಿದ ಹೋರಾಟದ ವೀರ ಕತೆ. ಆದರೆ, ಪತಿಯೇ ಪತ್ನಿಯನ್ನು ಸೋಲಿಸಲು ಸತತವಾಗಿ ಶತ್ರುವಿನೊಂದಿಗೆ ಸೇರಿ ಹುನ್ನಾರ ನಡೆಸಿದ ಉದಾಹರಣೆ ಪ್ರಾಯಶಃ ನಮ್ಮ ಅಬ್ಬಕ್ಕ ದೇವಿಯದು ಮಾತ್ರ.

ಅಂದಹಾಗೆ, ಇಬ್ಬರು ಅಬ್ಬಕ್ಕ ದೇವಿ ಇದ್ದರು ಎನ್ನುತ್ತಾರೆ; ಒಬ್ಬಳು ತಾಯಿ, ಇನ್ನೊಬ್ಬಳು ಮಗಳು. ಅಚ್ಚರಿಯೆಂದರೆ, ಇಬ್ಬರ ಜೀವನವೂ ಒಂದೇ ಮಾದರಿಯದು. ಒಂದೆಡೆ, ಕುಡುಕ ಬೇಜವಾಬ್ದಾರಿ ವಂಚಕ ಪತಿಗಳೊಂದಿಗೆ ಹೋರಾಟ. ಇನ್ನೊಂದೆಡೆ ಪೋರ್ಚುಗೀಸರೊಂದಿಗೆ ಹೋರಾಟ. ಕೈ ಹಿಡಿದ ಗಂಡಂದಿರೇ ಪೋರ್ಚುಗೀಸರು ಚೆಲ್ಲುವ ಕಾಸಿನ ದಾಸರಾಗಿ, ಅವರೊಂದಿಗೆ ಸೇರಿ ಸ್ವಂತ ಪತ್ನಿಯರ ವಿರುದ್ಧವೇ ಕತ್ತಿ ಮಸೆದಿರುವುದು. ಎಂತಲೇ ಈ ಮಹಿಳೆಯರು ಪುರುಷ ವೈರಿಗಳನ್ನು ಮಾತ್ರವಲ್ಲ, ಕೈಹಿಡಿದ ಹೇಡಿ ಗಂಡನನ್ನೇ ಎದುರಿಸಿದ ಸ್ಥೈರ್ಯ ಅವರ ಕೆಚ್ಚಿನ ಕಾಂತಿಗೆ ಗರಿ ಮೂಡಿಸಿದೆ. ಅಬ್ಬಕ್ಕ ಎಂದೊಡನೆ ಆ ಇಬ್ಬರ ಕತೆಯೂ ಕೂಡಿದ ಸಂಗಮ ಕಥನವಾಗುತ್ತದೆ.

ಸೊಂಟಕ್ಕೆ ಡಾಬು, ಕೈಗಳಿಗೆ ಗಾಜಿನ ಬಳೆ ತೊಟ್ಟು ರೈತ ಮಹಿಳೆಯರು ಉಡುವಂಥ ಸೀರೆಯುಟ್ಟು ಅಬ್ಬಕ್ಕ ರಾಣಿ ಬರಿಗಾಲಿನಲ್ಲಿ ತನ್ನ ಬೆಂಗಾವಲಿನವರೊಂದಿಗೆ ಬರುತಿದ್ದರೆ, ಪ್ರವಾಸಿಗರು ಇವಳು ರಾಣಿಯೇ ಎಂದು ಬೆರಗಾಗುತಿದ್ದರಂತೆ. ಆಕೆ ರಾಣಿಗಿಂತ ಹೆಚ್ಚು, ಪ್ರಜೆಗಳಿಗೆ ತಾಯಿಯಂತಿದ್ದಳು. ಅಂತರ್ಜಾತಿಯ ವಿವಾಹವನ್ನು ಆಗಲೇ ಸ್ವತಃ ನಿಂತು ಮಾಡಿಸಿದವಳು. ಜೈನ ಮತಸ್ಥಳಾಗಿ ಕಾರುಣ್ಯಮಯಿಯಾದರೆ, ವಂಚಕರಿಗೆ ಹಾಗೂ ತಮ್ಮನ್ನು ಆಳಲು ರಾಜ್ಯ ಕಬಳಿಸಲು ಹೊಂಚು ಹಾಕುವ ವಿದೇಶಿಯರ ಮಟ್ಟಿಗೆ ಕಾಠಿಣ್ಯ ಹೃದಯಿ.

ಆಕೆ ಬೆಳೆದದ್ದೇ ವೀರವನಿತೆಯಂತೆ. ಸೋದರಮಾವ, ಜೈನ ಅರಸು ತಿರುಮಲರಾಯನ ಗರಡಿಯಲ್ಲಿ. ಆತ ಅವಳ ಭವಿಷ್ಯ ಈ ರೀತಿಯಾದೀತು ಎಂದು ಅರಿಯದೆಯೇ, ಯುದ್ಧದ ಮಟ್ಟುಗಳನ್ನು ಕಲಿಸಿ ಸಮರಕಲಾ ಪ್ರವೀಣೆಯಾಗಿಸಿದ್ದ. ಆದರೆ, ಅವಳನ್ನು ಮಂಗಳೂರಿನ ಬಂಗರಸನೊಂದಿಗೆ ಮದುವೆ ಮಾಡಿಕೊಟ್ಟ ಕ್ಷಣವೇ ಅವಳ ನಿಜವಾದ ಯುದ್ಧ ಆರಂಭವಾಗಿಬಿಟ್ಟಿತ್ತು. ಅದು ಹದಿನಾರನೇ ಮತ್ತು ಹದಿನೇಳನೇ (ಇಬ್ಬರು ಅಬ್ಬಕ್ಕ ದೇವಿಯರ ಆಡಳಿತವನ್ನು ಗಣಿಸಿ) ಶತಮಾನ. ಪೋರ್ಚುಗೀಸರಿಗೆ ಕಪ್ಪ ಕೊಡಲು ಒಪ್ಪದೆ ಯುದ್ಧಕ್ಕೆ ವೀಳ್ಯ ನೀಡಿದ ಇಂಡಿಯಾದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಆಕೆ ಅಬ್ಬರಿಸಿ ಎದ್ದುನಿಂತವಳು.

ಅವಳ ನಿಷ್ಠಾವಂತ ಪುಟ್ಟ ಪಡೆ ರಾತ್ರೋರಾತ್ರಿ, ಕೇವಲ ಸೋಗೆ ದೊಂದಿ ಒಗೆದು ರಾತ್ರಿ ವಿಲಾಸದಲ್ಲಿ ಮುಳುಗಿದ್ದ ಪೋರ್ಚುಗೀಸರ ಸಾಲಾನುಸಾಲು ಯುದ್ಧನೌಕೆಗಳಿಗೆ ಬೆಂಕಿ ಹಚ್ಚಿ, ಹೀನಾಯವಾಗಿ ಓಡಿಸಿದ್ದು ಯುರೋಪಿನಲ್ಲಿಯೂ ಸುದ್ದಿಯಾಗಿತ್ತಂತೆ.

ಅಂದು ವ್ಯಾಪಾರದ ದೊಡ್ಡ ಕೇಂದ್ರವಾಗಿತ್ತು ಉಳ್ಳಾಲದ ಬಂದರು. ಅವಳ ವಹಿವಾಟೋ! ಆಫ್ರಿಕಾ, ಗ್ರೀಸ್, ಅರಬ್ ರಾಷ್ಟಗಳವರೆಗೂ ಹರಡಿತ್ತು. ಗ್ರೀಕ್ ಭಾಷೆಯಲ್ಲಿ ತುಳು ಶಬ್ದಗಳೂ ಬೆರೆತುಹೋಗಿರುವುದು ಇದಕ್ಕೊಂದು ಸಣ್ಣ ಪುರಾವೆ.

ಮಲಬಾರಿನ ಅರಸ ಜಾಮೊರಿನ್, ಕೆಳದಿಯ ವೆಂಕಟಪ್ಪ ನಾಯಕ, ಗೆರಸೊಪ್ಪೆಯ ರಾಣಿ... ಒಟ್ಟು ಗುಲಾಮಗಿರಿಗೆ ಒಪ್ಪದ ರಾಜ-ರಾಣಿಯರ ನೆರವಿನೊಂದಿಗೆ ತನ್ನ ಉಳ್ಳಾಲವನ್ನು ವಿದೇಶಿ ಆಕ್ರಮಣದಿಂದ ಕಾಪಾಡಿಕೊಳ್ಳಲು ಆಕೆ ಪಟ್ಟ ಬವಣೆ ಒಂದೆರಡು ರೀತಿಯದಲ್ಲ. ಅಜೇಯಳಾಗಿ ಕಾದುತಿದ್ದ ಅವಳನ್ನು ಕೊನೆಗೂ ಶತ್ರುಗಳು ಮೋಸದಿಂದ ಬೆನ್ನಿಗೆ ಇರಿದು ಕೊಲ್ಲಬೇಕಾಯಿತು ಎನ್ನುತ್ತಾರೆ.

ಇದನ್ನೂ ಓದಿ : ಶತಪಥ | ಕೆಂಪು ಗುಲಾಬಿಯ ಕುರಿತು ಕಾವ್ಯ ಬರೆಯಲು ಹೋಗಿ...

ಎಂತಹ ರಾಣಿಯಾಗಿದ್ದಳು ಅಬ್ಬಕ್ಕ! ಬ್ಯಾರಿಗಳ ಒಂದು ದಂಡೇ ಅವಳ ಬಳಿ ಇನ್ನಿಲ್ಲದ ಸ್ವಾಮಿನಿಷ್ಠೆಯಿಂದ ಬೆಂಗಾವಲಿತ್ತು. ‘ಮುಸಲ್ಮಾನರಾದರೂ...’ ಎಂಬ ವಿಶೇಷಣದ ಅಗತ್ಯವೇ ಇಲ್ಲದೆ ಅವರು ಅಪ್ಪಟ ಮುಸಲ್ಮಾನರಾಗಿದ್ದುಕೊಂಡೇ ಗೌರವ ಪಡೆದಿದ್ದರು. ತಮ್ಮತನ ಕಾಪಾಡಿಕೊಂಡೇ ಅವಳ ರಾಜ್ಯದಲ್ಲಿ ಮನುಷ್ಯಪ್ರೀತಿ ನೀಡಿದ್ದರು, ಪಡೆದಿದ್ದರು. ಅವಳಿಗಾಗಿ ಕಾದಿದ, ಗೆದ್ದ, ಸೋತ, ಮರಣ ಹೊಂದಿದ ಸೈನಿಕರಲ್ಲಿ ಮೊಗವೀರರು ಮತ್ತು ಬ್ಯಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವಳ ರಾಜ್ಯದಲ್ಲಿ ಪ್ರೀತಿ ಮತ್ತು ಸೌಹಾರ್ದತೆ ಸಹಜವಾಗಿಯೇ ನೆಲೆಸಿತ್ತಂತೆ. ಉಳ್ಳಾಲದ ಪ್ರಸಿದ್ಧ ದರ್ಗಾ, ಅಲ್ಲಿನ ಚರ್ಚ್ ಮತ್ತು ಸೋಮೇಶ್ವರ ದೇವಸ್ಥಾನ, ಈ ಮೂರಕ್ಕೂ ಯಾವ ಫರಕ್ಕೂ ಇಲ್ಲದೆ ಮೂರೂ ಮತಸ್ಥರು ನಡೆದುಕೊಳ್ಳುತಿದ್ದರು. ಎಲ್ಲ ಪ್ರಜೆಗಳಿಗೂ ಯಾವ ಭೇದ-ಭಾವವಿಲ್ಲದ ಆಕೆ ತಾಯಿಯೇ ಆಗಿದ್ದಳು.

ಉಳ್ಳಾಲ ತೀರದ ಆ ಕಡಲನ್ನು ತದೇಕ ನೋಡುತ್ತ ಕುಳಿತೆವೆಂದರೆ, ಅಂದಿನ ಆ ಹೋರಾಟ ಚಿತ್ರವತ್ ಕಣ್ಮುಂದೆ ಕಟ್ಟುತ್ತದೆ. ಪೋರ್ಚುಗೀಸರ ದೊಡ್ಡ ಸೈನ್ಯದ ಎದುರು ತನ್ನ ಪುಟ್ಟ ದಂಡಿನ ಬಲದಿಂದಲೇ ಕಡಲಿನಂತೆ ಮೊರೆದ ರಾಣಿ ಅವಳು. ಹೆಣ್ಣಿನ ಸಹಜ ಗುಣವಾದ ಜಾಣ್ಮೆಯಿಂದ ಉಪಾಯದಿಂದ ಕಾರ್ಯ ಸಾಧಿಸುತ್ತಿದ್ದ ಬುದ್ಧಿವಂತ ರಾಣಿಯೂ ಆಗಿದ್ದಳು. ಹುಟ್ಟಾ ಅಭಿಮಾನಿ ಹಾಗೂ ಛಲವಂತೆಯಾಗಿದ್ದ ಅವಳ ಪ್ರಜಾಪ್ರೀತಿ, ಆಕೆ ಕಟ್ಟಿದ ಜಾತಿ-ಮತ ಮೀರಿದ ಸಮಾಜ, ಅವಳ ಯುದ್ಧ ವೈಖರಿ, ಎಲ್ಲವೂ ಇಂದಿಗೂ ಮಾದರಿಯಾಗಿ ಉಳಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಇಂಥ ಎಲ್ಲ ಸ್ಮೃತಿಗಳೇ ಇಂದು ನಮ್ಮನ್ನು ಎಚ್ಚರಿಸಬೇಕಾದ ತ್ರಾಣಿಕಗಳಾಗಿವೆಯಲ್ಲವೇ?

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More