ಮುಡಿಪು | ಪೆಟ್ಟಿನ ಮೇಲೆ ಪೆಟ್ಟು ತಿಂದು ದಿಟ್ಟಗೊಂಡ ಹೋರಾಟಗಾರ್ತಿ ವರಲಕ್ಷ್ಮಿ

ಬದುಕಿನಲ್ಲಿ ಎದುರಾಗುವ ಆಕಸ್ಮಿಕ ತಿರುವುಗಳು, ಅಚ್ಚರಿದಾಯಕ ಪೆಟ್ಟುಗಳು ವ್ಯಕ್ತಿಯ ದಿಕ್ಕು-ದೆಸೆ ಬದಲಿಸಿಬಿಡಬಹುದು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ವೀರಕಪುತ್ರದಿಂದ ಕುಂಬಳಗೋಡಿಗೆ ವಲಸೆ ಬಂದ ಬಡ ಕುಟುಂಬವೊಂದರ ಹುಡುಗಿ ವರಲಕ್ಷ್ಮಿ ಬದುಕಿನಲ್ಲಿ ಆದದ್ದೂ ಅದೇ

ಅದು 1989ನೇ ಇಸ್ವಿ. ದ್ವಿತೀಯ ಪಿಯುಸಿ ಮುಗಿಸಿದ ಹುಡುಗಿ ಓದು ಮುಂದುವರಿಸುವಷ್ಟು ಆರ್ಥಿಕ ತ್ರಾಣವಿಲ್ಲದೆ ಬೆಂಗಳೂರಿನ ಕುಂಬಳಗೋಡಿನ ಖಾಸಗಿ ಕಾರ್ಖಾನೆಯಲ್ಲಿ ಅಪ್ರೆಂಟಿಸ್ ಆಗಿ ಕೆಲಸಕ್ಕೆ ಸೇರುವಳು. ತಿಂಗಳಿಗೆ 300 ರು. ಸಂಬಳ. ಚಿಕ್ಕ ಹರೆಯದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು, ಕಾಯಂ ಮಾಡಬೇಕೆನ್ನುವಾಗ ಕಿತ್ತೊಗೆಯುವುದು ಸದರಿ ಕಾರ್ಖಾನೆ ಮಾಲೀಕರ ಚಾಳಿ. ಅಂತೆಯೇ, ಆಗಲೂ 150 ಕಾರ್ಮಿಕರ ಪೈಕಿ ಕೆಲವು ಹಿರಿಯರನ್ನು ಕಿತ್ತುಹಾಕಲು ಆಡಳಿತ ಮಂಡಳಿ ನಿರ್ಧರಿಸಿತು. ಸಂಘಟಿತರಾದ ಕಾರ್ಮಿಕರು ಹೋರಾಟ ಆರಂಭಿಸಿದರು. ಈ ಹುಡುಗಿ ಸಂಘಟನೆಯ ಕಿರಿಯ ಸದಸ್ಯೆ.

ದುಡಿಮೆಯ ಜೊತೆಗೇ ಓದು ಮುಂದುವರಿಸುವ ಹಂಬಲ. 1990ರಲ್ಲಿ ಸಂಜೆ ಕಾಲೇಜಿನಲ್ಲಿ ಪದವಿ ಕೋರ್ಸ್‌ಗೆ ಸೇರ್ಪಡೆ. ಬೆಳಗ್ಗೆ 8ಕ್ಕೆ ಮನೆಯಿಂದ ಕಾರ್ಖಾನೆಗೆ. ಸಂಜೆ 5ರವರೆಗೆ ದುಡಿಮೆ. ನಂತರ 30 ಕಿಮೀ ದೂರದ ಸಂಜೆ ಕಾಲೇಜಿಗೆ ಹೋಗಿ ಕಲಿಕೆ. ರಾತ್ರಿ ಮನೆಗೆ ಮರಳುವಾಗ 11 ದಾಟಿರುತ್ತಿತ್ತು. ಮನೆ, ಕಾರ್ಖಾನೆ, ಕಾಲೇಜುಗಳ ಮಧ್ಯೆ ದೈನಂದಿನ ಬದುಕು ಯಾಂತ್ರಿಕ ಚಕ್ರದಂತೆ ತಿರುಗುತ್ತಿದ್ದಾಗಲೇ, ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆ ಹೋರಾಟ ಬಿರುಸು ಪಡೆಯಿತು. ಮಾಲೀಕರ ಜೊತೆ ಸಂಧಾನ ಮಾತುಕತೆಗೆ ತಂಡದ ಜೊತೆ ಹೋಗಲು ಹಿರಿಯ ಮಹಿಳಾ ಪ್ರತಿನಿಧಿಗಳು ಮುಂದಾಗಲಿಲ್ಲ. “ನಾನು ರಜೆ ಹಾಕಿ ಬರುತ್ತೇನೆ,’’ ಎಂದಳು ಈ ಕಿರಿಯ ಸದಸ್ಯೆ.

ಅದಾಗಲೇ ದುಡಿಯುವ ಜನರ ಕಷ್ಟನಷ್ಟಗಳ ಸಮೀಪ ದರ್ಶನವಾಗಿತ್ತು. ಕಾಲೇಜಿನ ಓದು ತುಸು ಲೋಕಜ್ಞಾನಕ್ಕೆ ತೆರೆದಿತ್ತು. ಸಂಬಳ, ಉದ್ಯೋಗ ಭದ್ರತೆ ಮತ್ತಿತರ ವಿಷಯಗಳಲ್ಲಿ ಕಾರ್ಮಿಕರು ಅನುಭವಿಸುತ್ತಿರುವ ಅನ್ಯಾಯಗಳ ಕುರಿತು ಮಾಲೀಕರೆದುರು ಹಿರಿಯರು ವಾದ ಮಂಡಿಸುತ್ತಿದ್ದಾಗ ಈಕೆಯೂ ಸಮರ್ಥ ಧ್ವನಿಯಾದಳು. ಸಂಧಾನದ ಫಲ, 300 ರು. ಇದ್ದ ಸಂಬಳ 600ಕ್ಕೆ ಏರಿತು. ಸಮವಸ್ತ್ರ, 2ನೇ ಶನಿವಾರ ರಜೆ, 1.50 ರು.ಗೆ ಊಟ ಮತ್ತಿತರ ಸವಲತ್ತು ದೊರಕಿದವು. ಸಂಘಟಿತವಾಗಿ ಹೋರಾಡಿದರೆ ಏನನ್ನಾದರೂ ಸಾಧಿಸಬಹುದೆನ್ನುವ ಎಚ್ಚರ ಮೂಡಿತು. ಹೀಗೆ, 19 ವಯಸ್ಸಿನ ವರಲಕ್ಷ್ಮಿ ಎಂಬ ಹುಡುಗಿಯೊಳಗೆ ದಿಟ್ಟ, ಗಟ್ಟಿಗ ಹೋರಾಟಗಾರ್ತಿಯೊಬ್ಬಳು ಹುಟ್ಟಿದಳು.

ಬಳಿಕ, ದುಡಿಮೆ, ಓದು, ಓಡಾಟಗಳ ಜೊತೆಗೆ ಕಾರ್ಮಿಕ ಸಂಘಟನೆಯನ್ನು ಅಕ್ಕಪಕ್ಕದ ಕಾರ್ಖಾನೆಗಳಿಗೆ ವಿಸ್ತರಿಸುವ, ಅಲ್ಲಿನ ಸಮಸ್ಯೆಗೆ ಧ್ವನಿ ನೀಡುವ ಹೊಣೆ ಹೆಗಲೇರಿತು. ಇಂತಿರುವಾಗ ಇನ್ನೊಂದು ನಿರ್ಣಾಯಕ ಘಟನೆ ನಡೆದೇಹೋಯಿತು. 1993ನೇ ಇಸ್ವಿ. ಗೇರುಪಾಳ್ಯದ ಫುಡ್ ಟೆಕ್‌ ಕಾರ್ಖಾನೆ ಮಾಲೀಕರು ಎಲ್ಲ ಕಾಯಂ ನೌಕರರನ್ನು ತೆಗೆದು, ಗುತ್ತಿಗೆ ಪದ್ಧತಿ ತರಲು ಮುಂದಾಗಿದ್ದರು. ಮಾಲೀಕರೊಂದಿಗಿನ ಸೌಹಾರ್ದ ಮಾತುಕತೆ ಪ್ರಯೋಜನಕ್ಕೆ ಬರಲಿಲ್ಲ. ವರಮಹಾಲಕ್ಷ್ಮಿಹಬ್ಬದ ದಿನ ಕಾರ್ಮಿಕರು, ಕಾರ್ಮಿಕ ಸಂಘಟನೆ ಮುಖಂಡರು ಸುಮಾರು 200 ಮಂದಿ ಕಾರ್ಖಾನೆ ಮುಂದೆ ಹೋರಾಟ ಆರಂಭಿಸಿದರು.

ಹಬ್ಬದ ಬಟ್ಟೆ ತೊಟ್ಟು ಪ್ರತಿಭಟನೆಗೆ ಬಂದಿದ್ದ ಯುವತಿ ವರಲಕ್ಷ್ಮಿ, ಅದೇ ಮೊದಲ ಬಾರಿ ಮೋರಿ ಮೇಲೇರಿ ನಿಂತು, ಪ್ರತಿಭಟನಾನಿರತರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಪೊಲೀಸರು ಲಾಠಿ ಪ್ರಹಾರ ಆರಂಭಿಸಿದರು. ಮುಗ್ಗರಿಸಿ ಬಿದ್ದ ಆಕೆಯನ್ನು ತುಳಿದುಕೊಂಡೇ ಹೆಚ್ಚಿನವರು ಓಟ ಕಿತ್ತರು. “ನಾವೇನು ತಪ್ಪು ಮಾಡಿಲ್ಲ. ಬಂದಿದ್ದೆಲ್ಲ ಬರಲಿ,’’ ಎಂದು ದೃಢವಾಗಿ ನಿಂತ ವರಲಕ್ಷ್ಮಿ ಮತ್ತಿತರರನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದರು, ಬಂದೂಕಿನ ಹಿಂಬದಿಯಿಂದ ಎಲ್ಲೆಂದರಲ್ಲಿ ತಿವಿದರು. ಮಹಿಳೆಯರೂ ಸೇರಿ 14 ಜನರನ್ನು ಬಂಧಿಸಲಾಯಿತು. ಊರ ತುಂಬ 144ನೇ ಸೆಕ್ಷನ್ ಬಿದ್ದಿತು. ಕೋರ್ಟ್ ಮುಂದೆ ಹಾಜರುಪಡಿಸುವ ದಿನ ವರಲಕ್ಷ್ಮಿಯ ಹಿಂದೆ-ಮುಂದೆ ಇಬ್ಬಿಬ್ಬರು ಮಹಿಳಾ ಪೊಲೀಸರು, ಬಿಗಿ ಪೊಲೀಸ್‌ ರಕ್ಷಣೆ. ಕಾರ್ಖಾನೆ ಮಾಲೀಕರ ಜೊತೆ ರಾಜಕಾರಣಿಗಳು, ಪೊಲೀಸರು ಕೈಜೋಡಿಸಿ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರು. ಆದರೆ, ಸುತ್ತಲಿನ ಕಾರ್ಖಾನೆಗಳ ಕಾರ್ಮಿಕ ಸಂಘಟನೆಗಳು ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದವು.

ಈ ಬೆಳವಣಿಗೆ ಯಾವುದೇ ಬಡ, ಸಂಪ್ರದಾಯಸ್ಥ ಕುಟುಂಬದಲ್ಲಿ ಮೂಡಿಸುವಂಥ ತಲ್ಲಣಗಳನ್ನೇ ವರಲಕ್ಷ್ಮಿ ಕುಟುಂಬದಲ್ಲೂ ಮೂಡಿಸಿತು. “ನಿಮ್ಮ ಮಗಳು ಹೋರಾಟ ನಿಲ್ಲಿಸದಿದ್ದರೆ ಪರಿಣಾಮ ನೆಟ್ಟಗಿರಲ್ಲ,’’ ಎಂದು ಕೆಲವರು ಎಚ್ಚರಿಸಿದರು. ಆತಂಕಕ್ಕೆ ಬಿದ್ದ ಮನೆಯವರು, “ಕಾರ್ಖಾನೆ, ಕಾಲೇಜು ಯಾವುದಕ್ಕೂ ಹೋಗಬೇಡ,’’ ಎಂದು ತಾಕೀತು ಮಾಡಿದರು. “ಕಾಲೇಜಿಗೆ ಹೋದ್ರೆ ತಾನೇ ಇಷ್ಟೆಲ್ಲ...’’ ಎಂದ ಅಪ್ಪ, ಅಂಕಪಟ್ಟಿಯನ್ನು ಸುಡಲು ಮುಂದಾದರು. ಆದರೆ, ಮನೆಯೊಳಗೆ ಎಷ್ಟೇ ಹಠ ಹಿಡಿದರೂ ಊರವರ ಮುಂದೆ ಮಗಳನ್ನು ಬಿಟ್ಟುಕೊಡಲಿಲ್ಲ ಹೆತ್ತಮ್ಮ. ಅದು ವರಲಕ್ಷ್ಮಿಯ ಆತ್ಮವಿಶ್ವಾಸವನ್ನು ಕಾಪಿಟ್ಟಿತು.

ಹೆತ್ತವರ ಹಠ, ಆತಂಕಕ್ಕೆ ಕಾರಣಗಳಿದ್ದವು. ಆಗ ಇನ್ನೂ ಹಳ್ಳಿಯಂತಿದ್ದ ಕುಂಬಳಗೋಡು ವರಲಕ್ಷ್ಮಿಯ ತಾಯಿ ಊರು. ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ವೀರಕಪುತ್ರ ಗ್ರಾಮದವರು. ಕುಂಬಾರಿಕೆ ಮಾಡಿ ಬದುಕು ನಿರ್ವಹಿಸುತ್ತಿದ್ದ ಬಡ ಕುಟುಂಬ ರಾಗಿ, ಹುರುಳಿ, ಹುಣಸೆ ಹಣ್ಣಿಗೆ ಮಡಿಕೆ-ಕುಡಿಕೆಗಳನ್ನು ಮಾರುತ್ತಿತ್ತು. ನಿರಂತರ ಬರ ಬದುಕನ್ನು ಹೈರಾಣಾಗಿಸಿತ್ತು. ಕುಂಬಾರಿಕೆ ನೆಲ ಕಚ್ಚಿತು. ಬೇರೆ ದಾರಿ ಕಾಣದೆ ಉದ್ಯೋಗ ಮತ್ತು ಮಕ್ಕಳ ಭವಿಷ್ಯವನ್ನು ಅರಸಿ ಕುಂಬಳಗೋಡಿಗೆ ಬಂದು ನೆಲೆಸಿತ್ತು ಈ ಕುಟುಂಬ. ಬಾಲ್ಯದಿಂದಲೇ ಹೆತ್ತವರ ಜೊತೆ ಮಣ್ಣು ತುಳಿಯುತ್ತ, ಕಡಲೆಬೀಜ ಬಿಡಿಸಿ ಕಷ್ಟಕ್ಕೆ ಹೆಗಲು ಕೊಡುತ್ತಲೇ ಬಂಗಾರಪೇಟೆಯಲ್ಲಿ ಪ್ರಥಮ ಪಿಯುಸಿ ಓದಿದ್ದ ವರಲಕ್ಷ್ಮಿ, ಕೆಂಗೇರಿಯಲ್ಲಿ ದ್ವಿತೀಯ ಪಿಯುಸಿಗೆ ಸೇರಿದಳು. ಆದರೆ, ಆರ್ಥಿಕ ಸಂಕಷ್ಟ ಮುಂದಿನ ಓದಿಗೆ ಆಸ್ಪದ ನೀಡಲಿಲ್ಲ. ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದಳು. ದುಡಿಯುತ್ತಲೇ ಓದಿ, ಬದುಕು ಕಟ್ಟಿಕೊಳ್ಳುವ ಛಲ ಮೊಳೆಯಿತು. ಇಂಥ ಹೊತ್ತಲ್ಲಿ ಹೋರಾಟ, ಪೊಲೀಸು,‌ ಸ್ಟೇಷನ್, ಕೋರ್ಟು, ಜೈಲು ಸಹವಾಸದಂಥ ಅನಪೇಕ್ಷಿತ ಘಟನೆಗಳು ನಡೆದದ್ದು ಬಡ ಕುಟುಂಬವನ್ನು ಕಂಗಾಲಾಗಿಸಿತ್ತು.

ಆದರೆ, ವರಲಕ್ಷ್ಮಿ ಹಠವೇ ಮೇಲುಗೈ ಪಡೆಯಿತು. ಕಾರ್ಖಾನೆ ಆಡಳಿತ ಮಂಡಳಿ 1994ರ ಫೆಬ್ರವರಿಯಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಿತು. ನಾಲ್ಕು ತಿಂಗಳಲ್ಲೇ ಸಿಐಟಿಯು ಪೂರ್ಣಾವಧಿ ಕಾರ್ಯಕರ್ತೆ ಎಂದು ಸ್ವೀಕರಿಸಿ, ಅಂಗನವಾಡಿ ಯೂನಿಯನ್‌ ಜವಾಬ್ದಾರಿಯನ್ನು ನೀಡಿತು. ಆವರೆಗೆ ಕುಂಬಳಗೋಡು ಪ್ರಾಂತ್ಯಕ್ಕೆ ಸೀಮಿತವಾಗಿದ್ದ ವರಲಕ್ಷ್ಮಿ, ರಾಜ್ಯವ್ಯಾಪಿ ಹೋರಾಟಕ್ಕೆ ತೆರೆದುಕೊಂಡರು.

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯವನ್ನು ಸುತ್ತಿ ಸಂಘಟನೆ ಮಾಡಿದ್ದರಿಂದ ಆಗ ಕೇವಲ ಮೂರು ತಾಲೂಕಿನಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಈಗ 140 ತಾಲೂಕಿಗೆ ವಿಸ್ತರಿಸಿದೆ. 90 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಹಳ್ಳಿಹಳ್ಳಿಗಳಲ್ಲಿರುವ ಅಸಂಘಟಿತ ಕಾರ್ಮಿಕರ ಧ್ವನಿ ಏಕತ್ರಗೊಂಡು ವಿಧಾನಸೌಧಕ್ಕೆ ಶಕ್ತಿಯುತವಾಗಿ ಅಪ್ಪಳಿಸಿ, ಅಧಿಕಾರಸ್ಥರು ತಿರುಗಿ ನೋಡುವಂತಾಗುವಲ್ಲಿ ವರಲಕ್ಷ್ಮಿಯವರ ಅವಿಶ್ರಾಂತ ಸುತ್ತಾಟದ ಪಾತ್ರ ದೊಡ್ಡದು. ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಮತ್ತು ಅಖಿಲ ಭಾರತ ಅಧ್ಯಕ್ಷೆಯೂ ಆಗಿ ನಿರ್ಣಾಯಕ ಹೋರಾಟಗಳನ್ನು ಸಂಘಟಿಸಿದ್ದಾರೆ. ಅಕ್ಷರ ದಾಸೋಹ ಖಾಸಗೀಕರಣಕ್ಕೆ ತಡೆ ಬಿದ್ದಿದೆ, ಕಾರ್ಮಿಕರ ಗೌರವಧನ 300ರಿಂದ 2,200ಕ್ಕೆ ಹೆಚ್ಚಿದೆ, ಅಪಘಾತ ವಿಮೆ, ಪಿಂಚಣಿ ಮುಂತಾದ ಸವಲತ್ತುಗಳು ದೊರಕಿವೆ ಎಂದರೆ ಅದರ ಅಗ್ರಶ್ರೇಯ ಇವರ ನೇತೃತ್ವದ ಚಳವಳಿಗೇ ಸಲ್ಲಬೇಕು.

ಈ ಮಧ್ಯೆ, 1994ರಲ್ಲಿ ನಡೆದ ಕುಂಬಳಗೋಡು ಗ್ರಾಪಂ ಚುನಾವಣೆಯಲ್ಲಿ ಸಿಐಟಿಯು ಅಭ್ಯರ್ಥಿಯಾಗಿ ನಿಂತು ಗೆದ್ದರು. ತಾಪಂ ಚುನಾವಣೆಯಲ್ಲಿ ಸೋತದ್ದೂ ಆಯಿತು. ಇದೇ ಸಂದರ್ಭ, 1996-97ರಲ್ಲಿ ಹೆಜ್ಜಾಲ ಬೆಳ್ಳಿಯಪ್ಪ ಟೆಕ್ಸ್‌ಟೈಲ್ಸ್‌ನಲ್ಲಿ ನಡೆದ ಘಟನೆ ಅವರೊಳಗಿನ ಹೋರಟಗಾರ್ತಿಯನ್ನು ಮತ್ತಷ್ಟು ಮೊನಚುಗೊಳಿಸಿತು. ಅದು ಉಪ ಚುನಾವಣೆ ಕಾಲ. ಕಾರ್ಮಿಕ ಸಂಘಟನೆ ಹೋರಾಟ ರಾಜಕೀಯ ದುರ್ಬಳಕೆಗೆ ತುತ್ತಾಯಿತು. ಪರಿಣಾಮ, ಪೊಲೀಸ್‌ ಗೋಲಿಬಾರ್‌ ನಡೆದು 3 ಮಂದಿ ಸ್ಥಳದಲ್ಲೇ ಮೃತಪಟ್ಟು, 21 ಮಂದಿ ಗಂಭೀರ ಗಾಯಗೊಂಡರು. ಮುಂಚೂಣಿಯಲ್ಲಿದ್ದ ವಿಜಿಕೆ ನಾಯರ್‌, ಸುಬ್ರಹ್ಮಣ್ಯ, ವರಲಕ್ಷ್ಮಿ ಮುಂತಾದವರ ವಿರುದ್ಧ 35 ಕೇಸು ದಾಖಲಾದವು. ತಿಂಗಳಲ್ಲಿ 10-15 ದಿನ ಕೋರ್ಟ್‌ಗೆ ಅಲೆದಾಟ. ನ್ಯಾಯಾಂಗ ತನಿಖೆ ಇವರನ್ನೆಲ್ಲ ನಿರಪರಾಧಿಗಳು ಎಂದು ಸಾರಿತಾದರೂ, ಕ್ರಾಂತಿಕಾರಿ ಹೋರಾಟದ ಕಾರಣ 'ನಕ್ಸಲೈಟ್‌' ಎನ್ನುವ ಹಣೆಪಟ್ಟಿ ಅಂಟಿಸಿ, ಹೋರಾಟದ ಧ್ವನಿ ಉಡುಗಿಸುವಂಥ ಹುನ್ನಾರಗಳು ನಡೆದವು.

ಇದ್ಯಾವುದಕ್ಕೂ ವರಲಕ್ಷ್ಮಿ ಎದೆಗುಂದಲಿಲ್ಲ. ಬಿದ್ದ ಪ್ರತಿ ಪೆಟ್ಟುಗಳಿಂದ ಮತ್ತಷ್ಟು ಮಾಗಿ, ಗಟ್ಟಿಯಾದ ಅವರು ಅಸಂಘಟಿತ, ದುರ್ಬಲ ವರ್ಗದ ಜನರ ಪರ ಪ್ರಬಲ ಧ್ವನಿ ಮೊಳಗಿಸತೊಡಗಿದರು. ದುಡಿದು, ಓದಿ ಕುಟುಂಬಕ್ಕೆ ಆಧಾರವಾಗಬೇಕು ಎನ್ನುತ್ತಿದ್ದವರು ತನ್ನಂಥದ್ದೇ ಸಾವಿರಾರು ಕುಟುಂಬಗಳ ಹಿತಕ್ಕೆ ದುಡಿಯುವ ಪಣ ತೊಟ್ಟರು. ನಿರಂತರ ಕಟಿಬದ್ಧ ಹೋರಾಟದ ಫಲವೇ, ಹದಿಮೂರು ಕೇಂದ್ರೀಯ‌ ಕಾರ್ಮಿಕ ಸಂಘಟನೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅವರು ಸಿಐಟಿಯು ರಾಜ್ಯಾಧ್ಯಕ್ಷೆಯಾಗಿ ಆಯ್ಕೆಯಾದರು. ಇದಕ್ಕೆ ಮೊದಲು ಆಂಧ್ರದ ಸಿಐಟಿಯು ಘಟಕದಲ್ಲಿ ಪುಣ್ಯವತಿ 6 ತಿಂಗಳ ಅವಧಿಗೆ ಅಧ್ಯಕ್ಷರಾಗಿದ್ದರ ಹೊರತು, ಮಹಿಳೆಯೊಬ್ಬರು ಕಾರ್ಮಿಕ ಸಂಘಟನೆಯ ಪೂರ್ಣಾವಧಿ ನೇತೃತ್ವ ವಹಿಸಿದ ಉದಾಹರಣೆ ಇಲ್ಲ ಎನ್ನುವುದು ವರಲಕ್ಷ್ಮಿ ಹೆಚ್ಚುಗಾರಿಕೆ.

ಇದನ್ನೂ ಓದಿ : ಮುಡಿಪು | ಸುಸ್ಥಿರ ಸಾಧನೆಯ ಪಥಿಕ, ನಿಧಾನಗತಿ ಪ್ರತಿಪಾದಕ ರವಿಕುಮಾರ್

ವೈಯಕ್ತಿಕ ಸಂತೋಷ, ಕುಟುಂಬದ ಹಿತವನ್ನು ಪಕ್ಕಕ್ಕಿಟ್ಟು ಬದುಕನ್ನು ಹೋರಾಟಕ್ಕೆ ಮುಡಿಪಿಟ್ಟ ಅವರನ್ನು, “ನೀವು ತುಳಿದ ದಾರಿ ಸರಿಯಾದುದಲ್ಲ ಎಂದು ಯಾವತ್ತಾದರೂ ಅನ್ನಿಸಿದೆಯಾ?’’ ಎಂದು ಕೇಳಿದೆ. “ಮೊದಲ ಹೋರಾಟದಲ್ಲಿ ಬಿದ್ದ ಲಾಠಿ ಏಟಿನ ಗಾಯದ ಕಲೆ ಮೈಮೇಲೆ ಇನ್ನೂ ಇದೆ. ತುಳಿತಕ್ಕೊಳಗಾದವರು, ಅಸಂಘಟಿತ ಕಾರ್ಮಿಕರ ಸಂಘಟನೆಗಾಗಿ ಸುತ್ತಾಟ ಮತ್ತು ಅವರ ಪರ ಹೋರಾಟದಲ್ಲೇ ಹೆಚ್ಚು ತೊಡಗಿದ್ದರಿಂದ ಹಾಗೂ ತಾಯಿ ನಿಧನರಾದ ಬಳಿಕ ಕುಟುಂಬದ ಜವಾಬ್ದಾರಿ ಹೆಗಲೇರಿದ್ದರಿಂದ ಮದುವೆ ಆಗಲಿಲ್ಲ. ಬೇಸರವೇನಿಲ್ಲ. ಕೆಲಸಗಳು ಆತ್ಮತೃಪ್ತಿ ನೀಡುತ್ತಿವೆ. ಸಾವಿರಾರು ಹೆಣ್ಮಕ್ಕಳು ತೋರುವ ಪ್ರೀತಿ, ವಿಶ್ವಾಸ, ಅಭಿಮಾನದ ಮುಂದೆ ಬೇರೆ ಸಾರ್ಥಕತೆ ಇನ್ನೇನಿದ್ದೀತು?” ಎಂದು ಮರುಪ್ರಶ್ನೆ ಹಾಕಿದರು.

“ಖಾಸಗೀಕರಣ, ಗುತ್ತಿಗೆ ಪದ್ಧತಿ ವ್ಯಾಪಿಸುತ್ತಿದೆ. ಮತೀಯ ಕಾರಣ ಮುಂದೊಡ್ಡಿ ಕಾರ್ಮಿಕ ಸಂಘಟನೆಗಳನ್ನು ಒಡೆದು ಆಳುವ ಪ್ರವೃತ್ತಿಯೂ ಹೆಚ್ಚುತ್ತಿದೆ. ರಾಜ್ಯದಲ್ಲೇ ಮೂವತ್ತು ಇಲಾಖೆಗಳಲ್ಲಿರುವ ಎರಡೂವರೆ ಲಕ್ಷಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರ ಹಿತ ಕಾಯುವುದು ತುರ್ತು ಅಗತ್ಯ. ಕೆಪಿಟಿಸಿಎಲ್‌ ಗುತ್ತಿಗೆ ಕಾರ್ಮಿಕರ ಹಿತ ರಕ್ಷಣೆಗಾಗಿ ಬೃಹತ್ ಹೋರಾಟ ಸಂಘಟಿಸುತ್ತಿದ್ದೇವೆ. ಮನಸ್ಸುಗಳನ್ನು, ನಾಡಿನ ಸೌಹಾರ್ದವನ್ನು ಒಡೆದು ಆಳಲೆತ್ನಿಸುತ್ತಿರುವ ಕೋಮುವಾದಿ ರಾಜಕಾರಣದ ವಿರುದ್ಧವೂ ಸಂಘಟಿತ ಹೋರಾಟ ನಡೆಸಬೇಕಿದೆ,’’ -ಕಾಮ್ರೆಡ್ ವರಲಕ್ಷ್ಮಿ ತಮ್ಮೆದುರಿನ ಗುರಿ ಮತ್ತು ಗಂಭೀರ ಸವಾಲುಗಳನ್ನು ಪಟ್ಟಿ ಮಾಡುತ್ತ ಹೋದರು. ವೈಯಕ್ತಿಕ ಬದುಕು, ಸುಖ ಸಂತೋಷದ ಬಗ್ಗೆ ಪ್ರಶ್ನೆ ಕೇಳಿದ ನಾನು ಬೆಪ್ಪಾಗಿ ಕುಳಿತೆ!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More