ಶತಪಥ | ಹೋಗಿ ಬಾ ರತ್ನಚೇತನವೇ; ಅಶ್ರುತರ್ಪಣವಿದು, ಮುಂದಣವು ಶುಭವಿರಲಿ

ನಿಷ್ಠುರ ಸತ್ಯಗಳನ್ನು ನಾಡಿ ಹಿಡಿದು ಹೇಳಬಲ್ಲ, ಎಷ್ಟು ಮಾತ್ರಕ್ಕೂ ಕಿರುಚು ಎತ್ತರಕ್ಕೇರದ, ಮೆಲುವಿನಲ್ಲಿ ಮೆಲುದನಿ ವಿಜಯಾ ದಬ್ಬೆ ಅವರದು. ನಿಮ್ಮ ಕಿವಿಗೆ ಬೀಳಬೇಕೆಂಬ ಉದ್ದೇಶದಿಂದ ಕೂಗಿ ಮಾತಾಡುವವರಲ್ಲ, ಸುಮ್ಮನೆ ಹೊಗಳುವವರಲ್ಲ, ಸುಮ್ಮನೆ ಅಭಿಪ್ರಾಯ ದಾಟಿಸುವವರೂ ಅಲ್ಲ ಅವರು

ಅಧ್ಯಯನ, ಚಿಂತನೆ, ವಿಮರ್ಶನ ಶಕ್ತಿ, ವಿವೇಕ, ಪ್ರಾಮಾಣಿಕತೆ, ಸಾವಧಾನತೆ ಈ ಎಲ್ಲವೂ ಪಾಂಡಿತ್ಯದೊಂದಿಗೆ ನಿರಹಂಕಾರದಿಂದ ರೂಪು ತಳೆದರೆ ಹೇಗೆ-ಹಾಗೆ ಕನ್ನಡ ಕಂಡ ಅಪರೂಪದ ಲೇಖಕಿ, ವಿಮರ್ಶಕಿ ವಿಜಯಾ ದಬ್ಬೆ. ಮುಖದಲ್ಲಿ ಸ್ನೇಹಶೀಲತೆಯ ಹಣತೆ ಹಚ್ಚಿಟ್ಟಂತಹ ಪುಟ್ಟ ಮುಗುಳ್ನಗೆ. ಅದರ ಮುನ್ನೆಲೆಯಲ್ಲಿ ಪ್ರಾಚಾರ್ಯ-ಗಾಂಭೀರ್ಯ, ನಡೆನುಡಿ ಚರ್ಚೆ ಎಲ್ಲಿಯೂ ಎಲ್ಲೆ ಮೀರದೆ ಘನಸ್ಥಿಕೆ ಕಳೆಯದೆ ತನ್ನ ನಿಲುವಿನಲ್ಲಿ ದೃಢತೆ ಸಾಧಿಸಿದವರು.

ನಿಷ್ಠುರ ಸತ್ಯಗಳನ್ನು ನಾಡಿ ಹಿಡಿದು ಹೇಳಬಲ್ಲ, ಎಷ್ಟು ಮಾತ್ರಕ್ಕೂ ಕಿರುಚು ಎತ್ತರಕ್ಕೇರದ, ಮೆಲುವಿನಲ್ಲಿ ಮೆಲುದನಿ. ಅದರಲ್ಲಿ ವಿಶಿಷ್ಟ ಗ್ರಹಿಕೆಯ ಅವರ್ಣನೀಯ ಬನಿ. ಗೌರವ ಆಸಕ್ತಿಯಿದೆಯೇ, ಕಿವಿಗೊಟ್ಟು ಆಲಿಸಬೇಕು. ತಾನು ಹೇಳುವುದನ್ನು ನೀವು ಕೇಳಬೇಕು ಅಥವಾ ನಿಮ್ಮ ಕಿವಿಗೆ ಬೀಳಬೇಕು ಎಂಬ ಉದ್ದೇಶಮಾತ್ರದಿಂದ ಕೂಗಿ ಮಾತಾಡುವವರಲ್ಲ, ಸುಮ್ಮನೆ ಹೊಗಳುವವರಲ್ಲ, ಸುಮ್ಮನೆ ಅಭಿಪ್ರಾಯ ದಾಟಿಸುವವರೂ ಅಲ್ಲ. ನಿಂತು, ಯೋಚಿಸಿ, ತೂಗಿ, ಕೊಂಚ ತಾಳಿಕೊಂಡು-ತುಟಿಯೊಡೆಯುವವರು.

ಅವರ ಸ್ತ್ರೀಪರ, ಸ್ತ್ರೀವಾದಿ ನಿಲುವು ಕೂಡ ಸ್ವಜನ ಪಕ್ಷಪಾತದ ಸ್ವಸಹಾನುಭೂತಿಯ ಅಥವಾ ಕುರುಡುವಾದ ಪ್ರತಿವಾದದ ಅಮಲಿನದಲ್ಲ. ಬದಲು, ಅದು ಒಟ್ಟು ಸಮಾಜದ ಒಮ್ಮುಖ ಬೆಳವಣಿಗೆಯ ವಿರುದ್ಧ, ಕಣ್ಣುಪಟ್ಟಿ, ಹಳದಿಕನ್ನಡಕಗಳ ವಿರುದ್ಧ. ಹಾಗಾಗಿ, ಸಹಜವಾಗಿಯೇ ಅವರು ತುಳಿವವರ ಎದುರಾಳಿಯಾಗಿದ್ದರು. ನೋವು, ವಂಚನೆ, ಅತ್ಯಾಚಾರ, ಹಿಂಸೆಗೆ ಒಳಗಾಗುವವರಲ್ಲಿ ಹೆಚ್ಚಾಗಿ, ಹೆಚ್ಚಿನವರು, ಮಹಿಳೆಯರೇ ಆಗಿರುವುದು ಇಲ್ಲಿನ ವಿಪರ್ಯಾಸವಷ್ಟೆ?

ಪ್ರಾಧ್ಯಾಪಕಿಯಾಗಿ ವಿದ್ಯಾರ್ಥಿವೃಂದದ ಅಪಾರ ಪ್ರೀತಿ ಗಳಿಸಿ, ತಮ್ಮ ಸಮತಾ ವೇದಿಕೆ ಮೂಲಕ ಸಮಾಜೋನ್ಮುಖ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡು, ಮಹಿಳೆ ಬರೆದ ಸಾಹಿತ್ಯವನ್ನು ತಾನು ಕಂಡು ಅನುಭವಿಸಿದ, ಅಷ್ಟೇ ಅಲ್ಲ ಅಧ್ಯಯನ ನಡೆಸಿದ ಹಿನ್ನೆಲೆಯಲ್ಲಿ ಓದಿಕೊಂಡು ವಿಮರ್ಶೆಯ ಮೂಸೆಗೊಡ್ಡಿದ ಶ್ರೀಮತಿ ವಿಜಯಾ ದಬ್ಬೆ ಈ ಎಲ್ಲದರ ಫಲವಾಗಿ ಆಂತರ್ಯದಲ್ಲಿ ಒಬ್ಬ ಪಕ್ವ ಸಾಹಿತ್ಯ ಮತ್ತು ಸಮಾಜ ವಿಮರ್ಶಕಿಯಾಗಿಯೂ ಬೆಳೆದರು. ತನ್ನ ಸುತ್ತಲ ಸ್ತ್ರೀ ಪರಿವಾರದ ನಾನಾ ದುಃಖ, ದುಮ್ಮಾನಗಳಿಗೆ ತೀವ್ರವಾಗಿಯೂ ರಚನಾತ್ಮಕವಾಗಿಯೂ ತುಡಿಯುವ ಆ ಗುಣವಾದರೂ ಅವರ ಸ್ವ-ಭಾವದ ಮೂಲಸ್ರೋತದಲ್ಲಿಯೇ ಇತ್ತಲ್ಲವೇ?

ಆ ಮೂಲಸ್ರೋತದ ಗಂಗೋತ್ರಿ ಅವರ ಬಾಲ್ಯದ ಪುಟಗಳಲ್ಲಿವೆ ಎಂದು ನನಗೆ ತಿಳಿದದ್ದು ಮಾತ್ರ ಅಂದು, ಹೊಸೂರಿನಲ್ಲಿ; ಅವರು ಅಪಘಾತಕ್ಕೆ ಸಿಕ್ಕುವ ಕೆಲವೇ ದಿನಗಳ ಮೊದಲು...

ಅದು 1998ರ ಕೊನೆ ದಿನಗಳು. ಶ್ರೀಮತಿ ನಾಗಮಣಿ ಎಸ್ ರಾವ್ ನೇತೃತ್ವದಲ್ಲಿ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರಿನ ಹೊರವಲಯದಲ್ಲಿರುವ ಹೊಸೂರಿನಲ್ಲಿ ಕೆಲ ಲೇಖಕಿಯರನ್ನು ಆಮಂತ್ರಿಸಿ, ಮೂರು ದಿನಗಳ ಕಾಲ ಒಟ್ಟಿಗೆ ಇರುವಂತೆ ಹಾಗೂ ಚರ್ಚೆ, ಮಾತುಕತೆ ನಡೆಸುವಂತೆ ಏರ್ಪಾಟು ಮಾಡಿತ್ತು (ಕರ್ನಾಟಕ ಲೇಖಕಿಯರ ಸಂಘ ಹಮ್ಮಿಕೊಳ್ಳುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಇದೂ ಒಂದು). ಅಲ್ಲಿನ ಸುಂದರ ನಿಸರ್ಗಧಾಮದಲ್ಲಿ ನಾವು ಸೇರಿದ್ದೆವು. ಒಟ್ಟಿಗೇ ಊಟ, ತಿಂಡಿ, ತಿರುಗಾಟ, ಸಂವಾದ, ನಗೆ, ಕುಶಾಲುಗಳಲ್ಲಿ ಮನೆಮಂದಿಯಂತೆ ಕಾಲ ಕಳೆದೆವು. ಆಹ್ವಾನಿತ ಲೇಖಕಿಯರು ಬರವಣಿಗೆಗೆ ತಾವು ತೆರೆದುಕೊಂಡ ಬಗ್ಗೆ, ತಮ್ಮ ವಾತಾವರಣ ಮುಂತಾದುವುಗಳನೆಲ್ಲ ಆತ್ಮಕಥನಾತ್ಮಕವಾಗಿ ಹೇಳುತ್ತ, ಉಳಿದವರು ಆಲಿಸುತ್ತ, ಸಂವಾದಿಸುತ್ತ- ಹೀಗೆ ಸಭೆ ಆಪ್ತವಾಗಿ ನಡೆಯಿತು. ರಾತ್ರಿ ಶ್ರೀಮತಿ ವಿಜಯಾ, ಶ್ರೀಮತಿ ಸಂಧ್ಯಾ ರೆಡ್ಡಿ ಮತ್ತು ನಾನು ಒಂದೇ ಕೋಣೆಯಲ್ಲಿ ಉಳಿದಿದ್ದೆವು. ಅದೂ ಇದೂ ಮಾತಾಡುತ್ತ ವಿಜಯಾ, ಸ್ತ್ರೀಪರ-ಸ್ತ್ರೀವಾದಿ ಮುಂತಾದ ಶಬ್ದಗಳು, ವಿಚಾರಗಳು ಹೇಗೆ ಫಕ್ಕನೆ ಕೇಳಿದೊಡನೆ ಜನ ಗೊಂದಲಗೊಳ್ಳುತ್ತಾರೆ, ಅವರಿಗವು ಅಸಂಗತ, ಅಧಿಕಪ್ರಸಂಗದ, ಅನಗತ್ಯ ಚಿಂತನೆಗಳಾಗಿ, ಅಭ್ಯಾಸಕ್ಕೆ ಹೊರತಾದ ವಿಷಯವಾಗಿಯೂ ಒಮ್ಮೊಮ್ಮೆ ತಮಾಷೆಯಾಗಿಯೂ ಕೇಳುತ್ತವೆ; ಆದರೆ, ಶೋಧಿಸುತ್ತ ಅಧ್ಯಯನ ಮಾಡುತ್ತ ಹೋದಂತೆ ಹೇಗೆ ಅವು ಮನುಷ್ಯಲೋಕದ ಒಂದು ಅಗಾಧವಾದ ಕತ್ತಲ ಪದರವನ್ನು ಕಾಣಿಸಿಕೊಡುತ್ತವೆ ಎಂದು, ತನ್ನ ಸಮತಾ ವೇದಿಕೆ ಮತ್ತು ಅಂದು ನಡೆದ ಓದು-ಚರ್ಚೆಯ ಆಧಾರದಲ್ಲಿ ಹೇಳಿದ್ದರು. ಅವರೊಡನೆ ಅಷ್ಟು ದೀರ್ಘ ಮಾತುಕತೆ ಅದೇ ಮೊದಲು ನನಗೆ, ಆದರೆ ಎಂತು ಅದೇ ಕೊನೆಯದೂ ಆಗಿಬಿಟ್ಟಿತು!

ಮರುದಿನ ಬೆಳಿಗ್ಗೆ, ಸುತ್ತ ಅರಳಿನಿಂತ ತೋಟದ ಘಮವನ್ನು ಕದ್ದು ಯಾರೂ ಕಾಣದ ಹಾಗೆ ಸದ್ದಿಲ್ಲದೆ ಜಾರುವ ಕಳ್ಳನಂತೆ ಬೀಸುತ್ತಿದ್ದ ಗಾಳಿಯಲ್ಲಿ, ಛತ್ರಿಯಂತೆ ಹರಡಿ ನಿಂತ ಮರದಡಿ ಎಲ್ಲ ನೆರೆದಿದ್ದಾರೆ. ಈಗ ವಿಜಯಾ ದಬ್ಬೆ ಅವರ ಮಾತಿನ ಸರದಿ. ಅದೇ ಘನ ಗಂಭೀರ-ತಿಳಿಹಾಸ್ಯ ಬೆರೆತ ಮೆಲುದನಿಯಲ್ಲಿ ತಮ್ಮ ಬಾಲ್ಯದ ಕೆಲ ಸಂಕಟದ ಗಳಿಗೆಗಳನ್ನು ನೆನೆಯುತ್ತಿದ್ದಾರೆ. ಅವು ಅವರ ಸ್ವಂತದ್ದು ಮಾತ್ರವಲ್ಲ, ಅವರ ಸುತ್ತಣ ಇತರರದೂ. ಹಿಂದೆಯೇ ಹೇಳಿದಂತೆ, ಪರರ ದುಃಖಕ್ಕೆ ಮಿಡಿವ ಅವರ ಕಂಬನಿಯ ಮೂಲಸ್ರೋತದ ಗಂಗೋತ್ರಿ ಅಡಗಿದ ತಾಣ ಕಾಣಿಸಿದ್ದು ಆಗಲೇ ನನಗೆ.

ಚಟುವಟಿಕೆಯಿಂದ ಕೂಡಿದ ವಿಜಯಾ ಅವರನ್ನು ನೋಡಿದ್ದೂ ಅದೇ ಕೊನೆ. ಕೆಲ ದಿನಗಳಲ್ಲಿಯೇ ಅವರು ಅಪಘಾತಕ್ಕೆ ಸಿಲುಕಿ ಆಸ್ಪತ್ರೆ ಸೇರಿದ, ಬೇಗ ಚೇತರಿಸಿಕೊಳ್ಳಲಾಗದ ಸುದ್ದಿ! ಏನಿದು! ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನಿಗಿನಿಗಿಸುವ ಚೇತನವೊಂದು ತನ್ನ ಗತಿ ಬದಲಿಸಿ ಒಳಸರಿಯುವುದೆಂದರೇನು! ವಿಜಯಾ ಒಳಸರಿದದ್ದಂತೂ ಮಹಿಳಾ ಸಾಹಿತ್ಯ ಲೋಕಕ್ಕೇ ಆದ ಪ್ರಬಲ ಆಘಾತ.

ಅವರು ಮನೆಗೆ ಮರಳಿದ ಮೇಲೊಮ್ಮೆ ಮೈಸೂರಿಗೆ ಹೋಗಿ ನೋಡಿ ಬಂದರೂ ಸಮಾಧಾನ ಮಾತ್ರ ದೂರವೇ ಉಳಿಯಿತು. ಮುಂದೊಮ್ಮೆ ಮೈಸೂರಿನಲ್ಲಿ ನಡೆದ ಒಂದು ಕಾರ್ಯಕ್ರಮದ ಸಮಾರೋಪಕ್ಕೆ ಆಗಮಿಸಿ ಏಳೆಂಟು ನಿಮಿಷಗಳ ಕಾಲ ಅವರು ಮಾತನಾಡಿದರೂ ವಿಜಯಾ ದಬ್ಬೆ ಎಂಬ ಆ ಶಾಂತ ಉರಿಯುವ ಚಿಂತನಾಗ್ನಿ ಮಾತ್ರ ಒಳಗಿಂದ ಎದ್ದು ಪ್ರಜ್ವಲಿಸಲೇ ಇಲ್ಲ.

ಇದನ್ನೂ ಓದಿ : ದಿಟ್ಟತನದ ಗಟ್ಟಿ ಹೋರಾಟಗಾರ್ತಿ ವಿಜಯಾ ದಬ್ಬೆ ಸ್ತ್ರೀಚೈತನ್ಯದ ಸಂಕೇತ

ನಿರಂತರ ಇಪ್ಪತ್ತು ವರ್ಷಗಳ ಕಾಲ ಸ್ಮೃತಿ-ವಿಸ್ಮೃತಿಗಳ ನಡುವೆ ಹೋರಾಡುತ್ತಲೇ ಇದ್ದ ಈ ಅಪೂರ್ವ ಸಂವೇದನಾಶೀಲ ವಿಮರ್ಶಕಿ-ಕವಿ, ಆರುವ ಮುಂಚಿನ ದೀಪದಂತೆ ಕೆಲತಿಂಗಳಿಂದ ಚೇತರಿಸಿಕೊಳ್ಳುತಿದ್ದರು. ಅವರ ನೆನಪಿನ ಶಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತ ಇತ್ತು. ಹಲವಾರು ಕವನಗಳನ್ನು ಸಹ ಬರೆದರು. 2017ರ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸ್ವೀಕಾರಕ್ಕೆ ಬರುವವರಿದ್ದರು. ಆದರೆ, ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ಕೊನೆಗೂ ವಿಧಿ, ಹಣತೆಯಂತೆ ಸಣ್ಣಗೆ ಉರಿಯುತಿದ್ದ ಆ ಜೀವವನ್ನು ಉರುಪಿ ಆರಿಸಿಯೇಬಿಟ್ಟಿತು. ಜೊತೆಗೆ, ಎಂದಾದರೊಂದು ದಿನ ಮುಂಚಿನ ವಿಜಯಾ ದಬ್ಬೆ ಬಂದೇ ಬರುವರೆಂದು ಕೇವಲ ಹಂಬಲಕ್ಕಾಗಿಯೇ ಸಾಕಿಕೊಂಡ ನಮ್ಮ ಹಂಬಲವನ್ನೂ ನಿಷ್ಕರುಣೆಯಿಂದ ಆರಿಸಿಬಿಟ್ಟಿತು.

ಅಂಥ ಉಜ್ವಲ ಕ್ರಿಯಾಶೀಲೆಯನ್ನು ಅದು ದಿಢೀರನೆ ನಿಷ್ಕ್ರಿಯಗೊಳಿಸಿದ್ದೇಕೆ? ಇಪ್ಪತ್ತು ವರ್ಷಗಳ ಕಾಲ ಇರಿಸಿ ಈಗ ಕರೆಸಿಕೊಂಡದ್ದೇಕೆ? ಕರೆಸಿಕೊಂಡು ಅವರನ್ನದು ಮುಕ್ತಗೊಳಿಸಿತೇ ಅಥವಾ ಮತ್ತೆ ಅರಳುವ ಅವಕಾಶವನ್ನೇ ನಿರಾಕರಿಸಿತೇ? ವಿಧಿಯನ್ನೀಗ ದಯಾಳುವೆನ್ನಲೇ? ಕ್ರೂರವನ್ನಲೇ? ಒಟ್ಟಾರೆ ಅದು ಅವರೊಡನೆ ಅಕ್ಷಮ್ಯ ಆಟವೊಂದನ್ನು ಆಡಿಯೇಬಿಟ್ಟಿತು.

ವಿಜಯಾ ದಬ್ಬೆ ಅವರ ಆ ನಿಶ್ಚೇತನದ ದೀರ್ಘದಿನಗಳನ್ನು ನೆನೆದರೆ- ಒಮ್ಮೆ, ಅವರು ಮುಕ್ತಗೊಂಡರು ಅನಿಸುತ್ತದೆ. ಇನ್ನೊಮ್ಮೆ, ಅವರು ಚೇತರಿಸಿಕೊಂಡು ಮುಂಚಿನಂತಾಗಲು ಒಂದಾದರೂ ಅವಕಾಶ ದೊರೆತಿದ್ದರೆ! -ತಪಿಸುವಂತಾಗುತ್ತದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More