ಸ್ಥಿತಿಗತಿ | ಹಳೆಯ ಪ್ರಶ್ನೆ ಮತ್ತೊಮ್ಮೆ ಜೀವಂತ; ಬ್ಯಾಂಕ್‌ಗಳು ಯಾರಿಗಾಗಿ?

ಬ್ಯಾಂಕ್‌ಗಳ ಉನ್ನತ, ಅತ್ಯುನ್ನತ ಹುದ್ದೆಗಳಲ್ಲಿ ಇರುವವರು ಸರ್ಕಾರದ ಸಲಹೆಗಾರರಾಗುವುದು, ಹಣಕಾಸು ಮಂತ್ರಿ ಆಗುವುದು ಸಾಮಾನ್ಯ ಎಂಬಂತಾಗಿದೆ. ಇದರಿಂದಾಗಿ, ಬ್ಯಾಂಕ್ ಪರಿಧಿ ಎಲ್ಲಿ ಕೊನೆಗೊಳ್ಳುತ್ತದೆ, ಸರಕಾರದ ಪರಿಧಿ ಎಲ್ಲಿ ಆರಂಭವಾಗುತ್ತದೆ ಎನ್ನುವುದೇ ಅರ್ಥವಾಗದ ಸ್ಥಿತಿ ಇದೆ!

ಬ್ಯಾಂಕ್‌ನ ಮೂಲ ಉದ್ದೇಶ ಜನರಿಂದ ಕಡಿಮೆ ಬಡ್ಡಿಗೆ ಡಿಪಾಸಿಟ್ ಪಡೆದು ಗ್ರಾಹಕರಿಗೆ ಹೆಚ್ಚಿನ ಬಡ್ಡಿಗೆ ಸಾಲ ನೀಡುವುದು. ಡಿಪಾಸಿಟ್ ಮೇಲಿನ ಬಡ್ಡಿ ಮತ್ತು ಸಾಲದ ಮೇಲಿನ ಬಡ್ಡಿ ನಡುವಿನ ಅಂತರ ಬ್ಯಾಂಕ್‌ನ ಲಾಭ. ಕಾಲಕ್ರಮೇಣ ಬ್ಯಾಂಕ್‌ಗಳು ಈ ಮೂಲ ಉದ್ದೇಶಕ್ಕೆ ಸಂಬಂಧಿಸಿದ ಚುಟವಟಿಕೆಗಳಿಗಿಂತ ಹೆಚ್ಚಿನ ಚಟುವಟಿಕಗಳನ್ನು ನಡೆಸಲು ಆರಂಭಿಸಿದವು. ಕೊಟ್ಟ ಸಾಲವನ್ನು ಸೆಕ್ಯುರಿಟಿಯಾಗಿ ಪರಿವರ್ತಿಸಿ ಮಾರಾಟ ಮಾಡುವ ಕ್ರಮ ಬೆಳೆಯಿತು. ಇದರಿಂದ ಬ್ಯಾಂಕ್‌ಗಳು ತಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲು ಮೂಲ ಸಾಲಗಾರರು ತಮ್ಮ ಸಾಲ ಸಂದಾಯ ಮಾಡುವವರೆಗೆ ಕಾಯುವುದು ತಪ್ಪಿತು. ಸೆಕ್ಯುರಿಟಿ ಮಾರಾಟದಿಂದ ಸಂಗ್ರಹವಾದ ಮೊತ್ತವನ್ನು ಹೊಸ ಸಾಲಗಾರರಿಗೆ ನೀಡಿ ಬಡ್ಡಿ ಸಂಗ್ರಹಿಸುವುದರಿಂದ ಬ್ಯಾಂಕಿನ ಲಾಭಾಂಶವೂ ಹೆಚ್ಚಾಯಿತು.

ನಂತರದ ದಿನಗಳಲ್ಲಿ ಬ್ಯಾಂಕ್‌ಗಳು ಕೂಡ ಇತರ ಕಂಪನಿಗಳಂತೆ ಷೇರುಗಳನ್ನು ಮಾರಾಟ ಮಾಡಿ ಬಂಡವಾಳ ಸಂಗ್ರಹಿಸಲು ಆರಂಭಿಸಿದವು. ಷೇರುಗಳ ಮೂಲಕ ಸಂಗ್ರಹಿಸಿದ ಬಂಡವಾಳವನ್ನು ಬ್ಯಾಂಕ್‌ಗಳು ಇತರ ಕಂಪನಿಗಳ ರೀತಿಯಲ್ಲಿ ವಿವಿಧ ಯೋಜನೆಗಳಲ್ಲಿ ವಿನಿಯೋಗಿಸಲು ಆರಂಭಿಸಿದವು. ಬ್ಯಾಂಕ್‌ಗಳು ತಮ್ಮ ಜೀವವಿಮೆ, ಮ್ಯೂಚುವಲ್ ಫಂಡ್ ಕಂಪನಿಗಳನ್ನು ನಡೆಸುವುದು, ಇತರ ಕಂಪನಿಗಳ ಷೇರುಗಳನ್ನು ಮಾರುವುದು ಇತ್ಯಾದಿ ಚಟುವಟಿಕೆಗಳನ್ನು ಇಂದು ಎಲ್ಲ ಬ್ಯಾಂಕ್‌ಗಳು ಮಾಡುತ್ತಿವೆ. ಯುರೋಪ್ ಮತ್ತು ಅಮೆರಿಕದ ದೊಡ್ಡ ಬ್ಯಾಂಕ್‌ಗಳು ಬಿಲಿಯನ್‌ಗಟ್ಟಲೆ ಮೊತ್ತವನ್ನು ತೈಲ, ಕಬ್ಬಿಣ, ಅಲ್ಯೂಮಿನಿಯಂ ಇತ್ಯಾದಿ ಕಚ್ಚಾ ಸಾಮಗ್ರಿಗಳ ಖರೀದಿಗೆ ಬಳಸಿವೆ. ಬ್ಯಾಂಕ್‌ಗಳು ಕಚ್ಚಾಸಾಮಗ್ರಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುವುದರಿಂದ ಅವುಗಳ ಪೂರೈಕೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ಕಚ್ಚಾ ಸಾಮಗ್ರಿಗಳ ಬೆಲೆಗಳನ್ನು ತಮಗೆ ಲಾಭ ಬರುವಂತೆ ನಿರ್ಧರಿಸುತ್ತಿದ್ದವು.

ಕೇವಲ ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸಿ ಬ್ಯಾಂಕ್‌ಗಳು ಲಾಭ ಮಾಡುತ್ತಿರುವುದಲ್ಲ; ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಅವುಗಳ ಪೂರೈಕೆ ಮೇಲೆ ಹಿಡಿತ ಸಾಧಿಸಿಯೂ ಲಾಭ ಮಾಡುತ್ತಿವೆ. ಇಂತಹ ಕಾನೂನುಬದ್ಧ ಚಟುವಟಿಕೆಗಳ ಜೊತೆಗೆ ಡ್ರಗ್ ಮಾಫಿಯಾ, ಆರ್ಮ್ಸ್ ಡೀಲರ್, ಸೆಕ್ಸ್ ಟ್ರೇಡ್, ತೆರಿಗೆ ವಂಚನೆ ಇತ್ಯಾದಿ ಚಟುವಟಿಕೆಗಳಿಂದ ಸಂಗ್ರಹವಾದ ಕಪ್ಪುಹಣವನ್ನು ಬಿಳಿ ಮಾಡಲು ಮತ್ತು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ರವಾನಿಸಲು ಕೆಲವು ಬ್ಯಾಂಕ್‌ಗಳು ಸಹಕರಿಸುತ್ತಿವೆ. ಬ್ಯಾಂಕ್‌ಗಳು ಸರಕಾರಗಳಿಗೂ ದೊಡ್ಡ ಮೊತ್ತದ ಸಾಲ ನೀಡುತ್ತಿವೆ. ಅಷ್ಟು ಮಾತ್ರವಲ್ಲ, ಬ್ಯಾಂಕ್‌ಗಳ ಉನ್ನತ ಹುದ್ದೆಯಲ್ಲಿರುವವರು ಸರಕಾರದ ಸಲಹೆಗಾರರಾಗುವುದು, ಹಣಕಾಸು ಮಂತ್ರಿಗಳಾಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ಎಲ್ಲಿ ಬ್ಯಾಂಕ್ ಪರಿಧಿ ಕೊನೆಗೊಂಡು ಸರಕಾರದ ಪರಿಧಿ ಆರಂಭವಾಗುತ್ತದೆ ಎನ್ನುವುದು ಅರ್ಥವಾಗದ ಸ್ಥಿತಿ ಇದೆ. ಬ್ಯಾಂಕ್‌ಗಳ ಇಂತಹ ಅನಿಯಂತ್ರಿತ ವ್ಯವಹಾರಗಳಿಂದ ದೊಡ್ಡ ಪ್ರಮಾಣದ ಲಾಭ ಆದಂತೆ ನಷ್ಟ ಕೂಡ ಆಗುತ್ತಿದೆ. ಲಾಭ ಶ್ರೀಮಂತರ ಪಾಲಾದರೆ, ನಷ್ಟ ಎಲ್ಲರ ಪಾಲಾಗುತ್ತಿದೆ.

ಭಾರತದ ಕತೆ ಇದಕ್ಕಿಂತ ಸ್ವಲ್ಪ ಭಿನ್ನ ಇದೆ. ಭಾರತದಲ್ಲಿ ಖಾಸಗಿ ಬ್ಯಾಂಕ್‌ಗಳ ಪ್ರಭಾವ ಕಡಿಮೆ ಇದೆ. ಇಂದು ಭಾರತದ ಶೇ.೭೨ರಷ್ಟು ಬ್ಯಾಂಕ್‌ಗಳು ಸರಕಾರಿ ಬ್ಯಾಂಕ್‌ಗಳು. ಹಾಗೆಂದು ಇಲ್ಲಿ ಬ್ಯಾಂಕ್ ಕ್ಷೇತ್ರದಲ್ಲಿ ಅವಾಂತರಗಳಿಲ್ಲ ಎನ್ನುವ ಹಾಗಿಲ್ಲ. ಇಲ್ಲೂ ದೊಡ್ಡ ಪ್ರಮಾಣದ ಸಾರ್ವಜನಿಕ ಸಂಪನ್ಮೂಲವನ್ನು ಕೆಲವೇ ಕೆಲವು ಖಾಸಗಿ ವ್ಯಕ್ತಿಗಳಿಗೆ, ಕಂಪನಿಗಳಿಗೆ ವರ್ಗಾಯಿಸುವಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸಿವೆ. ಆರ್‌ಬಿಐ ಮೂಲಗಳ ಪ್ರಕಾರ, 2015ನೇ ಹಣಕಾಸು ವರ್ಷದ ಕೊನೆಯ ವೇಳೆಗೆ ವಾಣಿಜ್ಯ ಬ್ಯಾಂಕ್‌ಗಳು ನೀಡಿದ ಒಟ್ಟು ಸಾಲ 76.6 ಲಕ್ಷ ಕೋಟಿ ರು.ಗಳು. ಇದರಲ್ಲಿ 3.22 ಲಕ್ಷ ಕೋಟಿ ರು.ಗಳಷ್ಟು ಕೆಟ್ಟ ಸಾಲ. ಸಾಲ ಪುನಾರಚನೆಯ ಮೊತ್ತವನ್ನು ಕೆಟ್ಟ ಸಾಲದ ಮೊತ್ತ 3.22 ಕೋಟಿಗೆ ಸೇರಿಸಿದರೆ ಒಟ್ಟು ಕೆಟ್ಟ ಸಾಲದ ಮೊತ್ತ ಶೇ.11ರಷ್ಟು ಅಥವಾ 8.47 ಲಕ್ಷ ಕೋಟಿ ರು.ನಷ್ಟಿದೆ. ಆರ್‌ಬಿಐ ಮೂಲಗಳ ಪ್ರಕಾರ, 5 ಕೋಟಿಗಿಂತ ಹೆಚ್ಚು ಸಾಲ ಪಡೆದವರು ಅತೀ ಹೆಚ್ಚು (ಶೇ.87ರಷ್ಟು) ಕೆಟ್ಟ ಸಾಲ ಸೃಷ್ಟಿಸಿದ್ದಾರೆ.

ಈ ರೀತಿ, ನಮ್ಮ ಸರಕಾರಿ ಬ್ಯಾಂಕ್‌ಗಳು ಉದ್ದಿಮೆಗಳಿಗೆ ಧಾರಾಳವಾಗಿ ಸಾಲ ನೀಡಿರುವುದರಿಂದ ಬಹುತೇಕ ಖಾಸಗಿ ಉದ್ದಿಮೆಗಳ ಸಾಲ ಮತ್ತು ಅವರ ಸ್ವಂತ ಬಂಡವಾಳದ ಅನುಪಾತ ವ್ಯಾಪಾರದ ಎಲ್ಲ ನಿಯಮಗಳನ್ನೂ ಮೀರಿ ಬೆಳೆದಿದೆ. ಉದ್ಯಮಿಯ ಸ್ವಂತ ಬಂಡವಾಳ ಒಂದು ಕೋಟಿಯಷ್ಟಿರುವಾಗ ಅಷ್ಟೇ ಪ್ರಮಾಣದ ಸಾಲ ಇರುವುದು ಆದರ್ಶ ಸ್ಥಿತಿ. ಆದರೆ, ಇವತ್ತಿನ ದಿನಗಳಲ್ಲಿ ಈ ಆದರ್ಶ ಅನುಪಾತವನ್ನು ಅನುಸರಿಸುವ ಉದ್ದಿಮೆಗಳ ಸಂಖ್ಯೆ ಕಡಿಮೆ. ಬಹುತೇಕ ಉದ್ದಿಮೆಗಳ ಸಾಲ ಮತ್ತು ಬಂಡವಾಳದ ಅನುಪಾತ ಮೂರು ಅಥವಾ ನಾಲ್ಕು ಪಟ್ಟು ಇರುವುದು ಸಾಮಾನ್ಯ. ಆದರೆ, ನಮ್ಮಲ್ಲಿ ಈ ಲೆಕ್ಕಾಚಾರವನ್ನು ಅಡಿಮೇಲು ಮಾಡುವಷ್ಟು ಸಾಲ ಮತ್ತು ಸ್ವಂತ ಬಂಡವಾಳದ ಅನುಪಾತ ಇದೆ. 2003-04ರಲ್ಲಿ ಉದ್ಯಮಿ ಒಂದು ಕೋಟಿ ಸ್ವಂತ ಬಂಡವಾಳ ಹೂಡಿದಾಗ ಎಂಟು ಕೋಟಿಯಷ್ಟು ಬ್ಯಾಂಕ್ ಸಾಲ ಮಾಡಿದರೆ, 2013-14ರ ವೇಳೆಗೆ ಉದ್ಯಮಿ ಒಂದು ಕೋಟಿ ಸ್ವಂತ ಬಂಡವಾಳ ವಿನಿಯೋಗಿಸಿ ಹನ್ನೆರಡು ಕೋಟಿಯಷ್ಟು ಸಾಲ ಪಡೆದಿದ್ದಾರೆ. ಸಾಲ ಸಂದಾಯ ಮಾಡುವ ಇರಾದೆ ಇರುವ ಉದ್ಯಮಿಗಳು ಈ ರೀತಿ ಮಾಡುವುದಿಲ್ಲ.

ಇದನ್ನೂ ಓದಿ : ಮೋದಿ ಆಪ್ತ ಅದಾನಿಯವರನ್ನು ನಿಷ್ಕ್ರಿಯ ಸಾಲಗಳ ನಾಜೂಕಯ್ಯ ಎಂದದ್ದೇಕೆ ಸ್ವಾಮಿ?

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸರಕಾರಿ ಬ್ಯಾಂಕ್‌ಗಳ ಸಾಲದಿಂದಲೇ ನಡೆಯುವ ಕಂಪನಿಗಳನ್ನು ಖಾಸಗಿ ಕಂಪೆನಿಗಳೆಂದು ಕರೆಯುವುದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಕೆಲವು ಸಂಶೋಧಕರು ಎತ್ತಿದ್ದಾರೆ. ಸಂಶೋಧಕರ ಪ್ರಶ್ನೆಯಲ್ಲಿ ಅರ್ಥವಿದೆ. ಏಕೆಂದರೆ, ನಮ್ಮ ದೇಶದ ಉಳಿತಾಯದಲ್ಲಿ ಶೇ.70ಕ್ಕಿಂತಲೂ ಹೆಚ್ಚಿನ ಉಳಿತಾಯವನ್ನು ಮಾಡುವುದು ಸಣ್ಣಪುಟ್ಟ ಕುಟುಂಬಗಳು. ಉದ್ಯಮಿಗಳ ಉಳಿತಾಯ ಶೇ.30ಕ್ಕಿಂತಲೂ ಕಡಿಮೆ ಇದೆ. ಕುಟುಂಬಗಳ ಉಳಿತಾಯದಲ್ಲಿ ಬ್ಯಾಂಕ್ ಡಿಪಾಸಿಟ್‌ಗಳದ್ದೇ ಸಿಂಹಪಾಲು. ಆದುದರಿಂದ ಖಾಸಗಿ ಕಂಪನಿಗಳು ದೊಡ್ಡ ಪ್ರಮಾಣದ ಸರಕಾರಿ ಬ್ಯಾಂಕ್‌ಗಳ ಸಾಲದಿಂದ ನಡೆಯುತ್ತಿವೆ ಎಂದರೆ, ಇಂತಹ ಸಣ್ಣಪುಟ್ಟ ಕುಟುಂಬಗಳ ಉಳಿತಾಯದಿಂದ ಉದ್ಯಮಗಳು ನಡೆಯುತ್ತಿವೆ ಎಂದು ಅರ್ಥ. ಹೀಗೆ, ಉದ್ದಿಮೆಗಳಿಗೆ ಬೇಕಾಬಿಟ್ಟಿ ಸಾಲ ನೀಡುವುದು ಮತ್ತು ಉದ್ದಿಮೆಗಳು ಸಾಲ ಕಟ್ಟದಿರುವುದು ಸಾಮಾನ್ಯವಾಗಿದೆ. ಇದರಿಂದ ಸರಕಾರಿ ಬ್ಯಾಂಕ್‌ಗಳು ಸಂಕಷ್ಟದಲ್ಲಿವೆ. ಈ ಸಂಕಷ್ಟವನ್ನು ಭಾಗಶಃ ಪರಿಹರಿಸಲು ಸರಕಾರ ಕೆಲವು ಲಕ್ಷ ಕೋಟಿಯಷ್ಟು ತೆರಿಗೆ ಹಣವನ್ನು ಬ್ಯಾಂಕ್‌ಗಳಿಗೆ ತುಂಬುತ್ತಿದೆ. ಜೊತೆಗೆ, ಖಾಸಗಿ ಕಂಪನಿಗಳ ಕೋಟಿಗಟ್ಟಲೆ ಕೆಟ್ಟ ಸಾಲವನ್ನು ಬ್ಯಾಂಕ್‌ಗಳು ಮನ್ನಾ ಮಾಡುತ್ತಿವೆ. ನಮ್ಮಲ್ಲಿ ಮೂರನೇ ಎರಡರಷ್ಟು ತೆರಿಗೆ ಸಂಗ್ರಹ ಪರೋಕ್ಷ ತೆರಿಗೆಯಿಂದ ಬರುವುದರಿಂದ ಉದ್ದಿಮೆಗಳ ಸಾಲ ಮನ್ನಾಕ್ಕೆ ಬಡವರ ತೆರಿಗೆ ಮತ್ತು ಉಳಿತಾಯ ಬಳಕೆ ಆಗುತ್ತಿದೆ.

ಅನನುಕೂಲಸ್ಥರ ಉಳಿತಾಯ ಹಾಗೂ ತೆರಿಗೆ ಹಣವನ್ನು ಅನುಕೂಲಸ್ಥರಲ್ಲಿ ಕ್ರೋಢೀಕರಿಸುವ ಕೆಲಸವನ್ನು ಇಂದು ಬ್ಯಾಂಕ್‌ಗಳು ಮಾಡುತ್ತಿವೆ. ಎಲ್ಲರಿಗೆ ಸೇರಿದ ಸಂಪನ್ಮೂಲಗಳನ್ನು ಕೆಲವರ ಸ್ವಾಧೀನಕ್ಕೆ ನೀಡುವ ನಿರ್ಧಾರಗಳನ್ನು ಜಾತಿ-ಧರ್ಮಗಳ ಜೊತೆಗೆ, ಹಲವು ಕೋಟಿ ವಿನಿಯೋಗಿಸಿ ಚುನಾಯಿಸಲ್ಪಟ್ಟ ಕೋಟ್ಯಧೀಶ ಜನಪ್ರತಿನಿಧಿಗಳೇ ಕೈಗೊಳ್ಳುತ್ತಿರುವುದು. ಕೋಟ್ಯಧೀಶ ಜನಪ್ರತಿನಿಧಿಗಳು ಹಲವು ಕ್ಷೇತ್ರಗಳಲ್ಲಿ ಉದ್ಯಮಿಗಳೂ ಆಗಿದ್ದಾರೆ. ಆದುದರಿಂದಲೇ ಕೋಟ್ಯಧೀಶ ಜನಪ್ರತಿನಿಧಿ ಮತ್ತು ಕೋಟ್ಯಧೀಶ ಉದ್ದಿಮೆದಾರರ ಆಸಕ್ತಿಗಳು ಮೇಳೈಸಿದಷ್ಟು ಮೂರು ಹೊತ್ತಿನ ಊಟಕ್ಕೆ ಪರದಾಡುವ ಮತದಾರರ ಆಸಕ್ತಿಗಳು ಮೇಳೈಸುವುದಿಲ್ಲ. ಹೀಗೆ, ಸಮಾನ ಆಸಕ್ತಿಯುಳ್ಳ ಉದ್ದಿಮೆದಾರರು, ರಾಜಕಾರಣಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಸರಕಾರಿ ಬ್ಯಾಂಕ್ ಲೂಟಿಗೆ ಮತ್ತು ಆ ಮೂಲಕ ನಮ್ಮ ತೆರಿಗೆ ಹಣ ಹಾಗೂ ಉಳಿತಾಯದ ದರೋಡೆಗೆ ಕಾರಣರಾಗಿದ್ದಾರೆ. ಇದೇ ಕಾರಣದಿಂದ ಡೆಮಾಕ್ರಸಿ, ಬ್ಯೂರೋಕ್ರಸಿ ಮತ್ತು ಬ್ಯಾಂಕೋಕ್ರಸಿಗಳು ನಕಾರಾತ್ಮಕ ದೃಷ್ಟಿಯಿಂದ ಹೆಚ್ಚೂಕಡಿಮೆ ಒಂದೇ ಅರ್ಥವನ್ನು ನೀಡುತ್ತಿವೆ. ಎಲ್ಲರಿಗೆ ಸೇರಿದನ್ನು ಕೆಲವರಲ್ಲಿ ಕ್ರೋಢೀಕರಿಸುವ ಕೆಲಸವನ್ನು ಈ ಮೂರೂ ಅಂಗಗಳು ಸೇರಿ ನಡೆಸುತ್ತಿವೆ. ಈ ಅಪವಿತ್ರ ಮೈತ್ರಿಯನ್ನು ಅರ್ಥ ಮಾಡಿಕೊಂಡು ಜನರು ತಮ್ಮ ರಾಜಕೀಯ ನಡವಳಿಕೆಯನ್ನು ಬದಲಾಯಿಸಿಕೊಳ್ಳದಿದ್ದರೆ ಈ ಸಮಸ್ಯೆಗೆ ದೂರಗಾಮಿ ಪರಿಹಾರ ಸಾಧ್ಯವಿಲ್ಲ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More