ರಾವಿ ತೀರ | ಜಮ್ಮು-ಕಾಶ್ಮೀರದಲ್ಲಿ ಅತ್ಯಾಚಾರ ಆರೋಪಿಗಳ ರಕ್ಷಣೆಗೆ ನಿಂತ ಧರ್ಮ!

ಇತ್ತೀಚೆಗೆ, ಕಾಶ್ಮೀರದಲ್ಲಿ ಪುಟ್ಟ ಹುಡುಗಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಆದರೆ ಸ್ವತಃ ಜನಪ್ರತಿನಿಧಿಗಳೇ ಹಿಂದೂ ಧರ್ಮದ ಗುರಾಣಿ ಹಿಡಿದು ಸಮರ್ಥನೆಗೆ ನಿಂತಿದ್ದಾರೆ. ಇದು ಪಿಡಿಪಿ-ಬಿಜೆಪಿ ಮೈತ್ರಿಯನ್ನು ಅಲುಗಾಡಿಸತೊಡಗಿದೆ

ಹಲವು ವರ್ಷಗಳ ಹಿಂದೆ ಅಕ್ನೂರ್ ಸೇನಾನೆಲೆಯ ಹತ್ತಿರ ಬಕರ್ವಾಲ್ (ಜಮ್ಮು ಮತ್ತು ಕಾಶ್ಮೀರದ ದನ-ಕುರಿಗಾಹಿ ಅಲೆಮಾರಿ ಬುಡಕಟ್ಟು) ಸಮುದಾಯದ ಡೇರೆಗಳು ಒಮ್ಮಿಂದೊಮ್ಮೆಲೆ ಕಾಣಿಸಿಕೊಂಡವು. ನಾನು ಆಗ ಅಲ್ಲೇ ನೆಲೆಸಿದ್ದೆ. ಈ ಬುಡಕಟ್ಟು ಜನರು ಪ್ರತಿದಿನ ಬೆಳಿಗ್ಗೆ ಅಗ್ಗದ ಆಹಾರ ಸೇವಿಸಿ ಕುರಿಹಿಂಡನ್ನು ಮೇಯಿಸುವುದಕ್ಕೆ ಹೊಡೆದುಕೊಂಡು ಹೋಗುವುದನ್ನು ನಾವು ನೋಡುತ್ತಿದ್ದೆವು. ಮಹಿಳೆಯರು ಕುರಿಚರ್ಮದ ತಮ್ಮ ಡೇರೆಗಳನ್ನು ಸರಿಪಡಿಸುವುದು, ಆಗತಾನೇ ಹುಟ್ಟಿದ ಕುರಿಮರಿಗಳ ಆರೈಕೆ ಮಾಡುವುದು ಅಥವಾ ಕತ್ತರಿಸಿದ ಕುರಿ ಉಣ್ಣೆಯನ್ನು ಸ್ವಚ್ಛಗೊಳಿಸಿ ಮಾರಾಟಕ್ಕೆ ಯೋಗ್ಯವನ್ನಾಗಿಸುವುದು ಮುಂತಾದ ಗೃಹಕೃತ್ಯದ ಕೆಲಸಗಳನ್ನು ಮಾಡುತ್ತಿದ್ದರು.

ಮಕ್ಕಳು ಬಯಲಿನಲ್ಲಿ ಆಟವಾಡುತ್ತಿದ್ದರು. ಕೆಲವೊಮ್ಮೆ ಅವರು ನಮ್ಮ ಮಿಲಿಟರಿ ಕ್ವಾಟ್ರಸ್ ಬಳಿ ಬಂದು, ಬೇಲಿಯಾಚೆ ನಿಂತು, ಹಿಂಜರಿಕೆಯಿಂದ ಇಣುಕಿ, ತಮ್ಮ ಲೋಕಕ್ಕಿಂತ ತೀರಾ ಭಿನ್ನವಾದ ಲೋಕವೊಂದನ್ನು ಕುತೂಹಲದಿಂದ ನೋಡುತ್ತಿದ್ದರು. ದಿನ ಕಳೆದಂತೆ ನಾನು ಸಣ್ಣ ಹುಡುಗಿಯೊಬ್ಬಳಿಗೆ ಹತ್ತಿರವಾದೆ. ಚಿಂದಿಯಂಥ ಸಲ್ವಾರ್ ತೊಟ್ಟಿದ್ದ ಆಕೆಯ ತಮ್ಮ ನಮ್ಮ ಮನೆಯ ಹತ್ತಿರವೇ ಆಟವಾಡುತ್ತಿದ್ದ. ನಾನು ಎಂದೂ ಕಂಡಿರದಷ್ಟು ಪ್ರಜ್ವಲವಾಗಿ ಹೊಳೆಯುವ ಮುಖ ಅವಳದಾಗಿತ್ತು. ಆ ಮುಖದಲ್ಲಿ ಮಿನುಗುತ್ತಿದ್ದ ಅವಳ ವಿಶಾಲ ಕಣ್ಣುಗಳನ್ನು ಬಚ್ಚಿಡುವುದಕ್ಕೆ ಅವಳ ಕೊಳಕು ಚರ್ಮ ಮತ್ತು ಬಟ್ಟೆಗಳಿಗೆ ಸಾಧ್ಯವಾಗಿರಲಿಲ್ಲ. ಅವಳು ಬಳ್ಳಿಯಂತೆ ಹಗುರ ದೇಹದವಳು. ಕೆಲ ದಿನಗಳ ನಂತರ ನಮ್ಮ ಸೇನಾನೆಲೆಯ ಬಳಿ ಬಿಡಾರ ಹೂಡಿದ್ದ ಈ ಹೊಸ ಜನರ ಬಗ್ಗೆ ನನಗಿದ್ದ ಕುತೂಹಲ ಇನ್ನಷ್ಟು ಗರಿಗೆದರಿ, ನಾನು ಅವರ ಬಿಡಾರಗಳಿಗೆ ಹೋಗಲಾರಂಭಿಸಿದೆ. ಅವರ ಮುಕ್ತ ಮುಗುಳ್ನಗೆ ಮತ್ತು ಬೆಚ್ಚನೆಯ ಆತಿಥ್ಯ ನನ್ನನ್ನು ದಂಗುಬಡಿಸಿತು. ಉಣ್ಣೆಯ ಚೀಲಗಳ ಮಧ್ಯೆ ಕುಳಿತು ಕಾವಾ ಪಾನಿಯ ಹೀರುತ್ತ, ಬ್ರೆಡ್ ತಿನ್ನುತ್ತಿದ್ದ ನನ್ನ ಬಳಿ ಆಸಿಫಾ (ಅವಳನ್ನು ಹಾಗೆಯೇ ಕರೆಯೋಣ) ಬರುತ್ತಿದ್ದಳು. ಅನುಮಾನಾಸ್ಪದ ಅಲೆಮಾರಿಗಳು ರಾಜಕೀಯ ಗಡಿಗಳು ಮಸುಕಾಗಿರುವ ಎತ್ತರದ ಕಣಿವೆ, ಘಾಟಿಗಳಲ್ಲಿ ಒಡಾಡುತ್ತಿರುತ್ತಾರಾದ್ದರಿಂದ ಅಂತಹ ಅಲೆಮಾರಿಗಳಿಂದ ಯಾವಾಗಲೂ ದೂರವಿರಬೇಕು ಎಂಬ ಕಠಿಣ ಎಚ್ಚರಿಕೆಯನ್ನು ನಮ್ಮ ಮಿಲಿಟರಿ ವ್ಯವಸ್ಥೆ ನಮಗೆ ನೀಡಿರುತ್ತದೆ. ಅಂತಹ ಎಚ್ಚರಿಕೆಯ ನಡುವೆಯೂ ನಮ್ಮ ಸ್ನೇಹ ಸುಂದರವಾಗಿ ಅರಳಲಾರಂಭಿಸಿತು. ಅವರ ನಿಶ್ಚಿಂತೆಯ ಉಲ್ಲಾಸಭರಿತ ಚೈತನ್ಯವನ್ನು ನೋಡಿ, ಅವರ ವೇದನಾರಹಿತ ಲೋಕವನ್ನು ನೋಡಿ ನನಗೆ ನಿಜಕ್ಕೂ ಹೊಟ್ಟೆಕಿಚ್ಚು ಆಗುತ್ತಿತ್ತು. ಒಂದು ದಿನ ಬೆಳೆಗ್ಗೆ ಎದ್ದು ನೋಡಿದರೆ, ಹೇಗೆ ಬಕರ್ವಾಲ್ ಬುಡಕಟ್ಟು ಡೇರೆಗಳು ಹಠಾತ್ತನೆ ನಮ್ಮ ಸೇನಾನೆಲೆಯ ಬಳಿ ಪ್ರತ್ಯಕ್ಷವಾಗಿದ್ದವೋ ಅದೇ ರೀತಿಯಲ್ಲಿ ಹಠಾತ್ತನೆ ಅಲ್ಲಿಂದ ಮಾಯವಾಗಿಬಿಟ್ಟಿದ್ದವು. ತಮ್ಮ ಡೇರೆಗಳನ್ನು ಅಲ್ಲಿಂದ ತೆಗೆದು ಬೇರೆ ಕಡೆ ಹೋಗುವಂತೆ ಮಿಲಿಟರಿಯು ಅವರಿಗೆ ಆಜ್ಞೆ ಮಾಡಿತ್ತು.

ಸದಾ ಉಲ್ಲಾಸದಿಂದ ನಸುನಗುತ್ತಿದ್ದ ಪುಟ್ಟ ಆಸಿಫಾ ನನ್ನ ನೆನಪಿನಂಗಳದಲ್ಲಿ ಅಳಿಸಲಾಗದ ಅಚ್ಚಿನಂತೆ ನೆಲೆಯೂರಿದ್ದಳು. ಕಳೆದ ತಿಂಗಳು ಎಂಟು ವರ್ಷದ ಬಕರ್ವಾಲ್ ಹುಡುಗಿಯೊಬ್ಬಳನ್ನು ಅತ್ಯಂತ ಬರ್ಬರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾದಾಗ ನಿರ್ಗತಿಕಳಂತಿದ್ದ ಅವಳ ಚಿತ್ರ ಆಸಿಫಾಳನ್ನೇ ಹೋಲುತ್ತಿದೆಯಲ್ಲ ಅಂತ ನನಗೆ ಪದೇಪದೇ ಅನ್ನಿಸುತ್ತಿತ್ತು. ಆದರೆ, ಈ ಚಿತ್ರದಲ್ಲಿದ್ದ ಹುಡುಗಿಯ ಮುಖ ಕುರುಚಲು ಅರಣ್ಯವೊಂದರಲ್ಲಿ ನೆಲವನ್ನು ನೋಡುತ್ತಿತ್ತು. ಅವಳ ಕಾಲುಗಳನ್ನು ಮುರಿಯಲಾಗಿತ್ತು. ಹಲ್ಲಿನಿಂದ ಕಚ್ಚಿದ ಗಾಯಗಳು ದೇಹದ ತುಂಬೆಲ್ಲ ಕಾಣಿಸುತ್ತಿದ್ದವು. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಪರಾಧ ವಿಭಾಗದ ತನಿಖೆಯ ಪ್ರಕಾರ, ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು (ಎಸ್ಪಿಓ) ಈ ಎಂಟು ವರ್ಷದ ಎಳೆಯ ಬಾಲೆಯನ್ನು ಅತ್ಯಾಚಾರಗೈದು ಕೊಂದಿದ್ದರು. ಆರೋಪಿಗಳನ್ನು ಬಂಧಿಸಿದಷ್ಟೂ ಕದಲಿಕೆ, ಆ ಪುಟ್ಟ ಹುಡುಗಿಯನ್ನು ಅತ್ಯಾಚಾರಗೈದು ಕೊಂದಾಗ ರಾಜ್ಯದ ರಾಜಕೀಯದಲ್ಲಿ ಆಗಿರಲಿಲ್ಲ!

ಜಮ್ಮು ಮತ್ತು ಕಾಶ್ಮೀರದಲ್ಲಿ ಮಗುವೊಂದನ್ನು ಅಮಾನವೀಯವಾಗಿ ಅತ್ಯಾಚಾರಗೈದು ಕೊಂದಿದ್ದನ್ನು ಈಗ ಹೇಗೆ ಕೋಮುವಾದೀಕರಣ ಮಾಡಲಾಗುತ್ತಿದೆ ಎಂಬ ನಾಚಿಕೆಗೇಡಿನ ವಿಷಯವನ್ನೇ ನಾವೀಗ ನೋಡುತ್ತಿರುವುದು. ಈ ಘಟನೆಯಲ್ಲಿ ಬಂಧಿತರಾಗಿರುವ ಇಬ್ಬರೂ ಎಸ್ಪಿಓಗಳು ಹಿಂದೂಗಳಾಗಿದ್ದರಿಂದ ಕಾಥುವಾ ಮತ್ತು ಸುತ್ತಮುತ್ತಲಿನ ಜನರೆಲ್ಲ ಸೇರಿಕೊಂಡು ಹಿಂದೂ ಏಕತಾ ಮಂಚ್ ರಚಿಸಿಕೊಂಡಿದ್ದಾರೆ. ಇನ್ನೊಂದು ಸಮುದಾಯದ ನಾಯಕರ ಒತ್ತಡದಲ್ಲಿ ತನಿಖೆ ಮಾಡಲಾಗಿದೆ ಎಂಬ ವಾದದ ಆಧಾರದಲ್ಲಿ ಈ ಸಂಘಟನೆಯು ಅಪರಾಧ ವಿಭಾಗದ ಪೊಲೀಸರು ನಡೆಸಿದ ತನಿಖೆಯನ್ನೇ ತಿರಸ್ಕರಿಸಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಜಮ್ಮು ಪ್ರದೇಶದ ಹಿಂದೂಗಳು ಬೇಡಿಕೆ ಇಟ್ಟಿದ್ದಾರೆ. ಇವೆಲ್ಲವಕ್ಕಿಂತ ಕೆಟ್ಟದ್ದೇನೆಂದರೆ, ಬಿಜೆಪಿಯ ಇಬ್ಬರು ಕ್ಯಾಬಿನೆಟ್ ಮಂತ್ರಿಗಳು ಹಾಗೂ ಇನ್ನೊಂದಿಬ್ಬರು ಬಿಜೆಪಿ ಶಾಸಕರು ಈ ಸಂಘಟನೆಯನ್ನು ಬಹಿರಂಗವಾಗಿ ಬೆಂಬಲಿಸುತ್ತ, ಬಂಧಿತರಾಗಿರುವ ಎಸ್ಪಿಓಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಹಿಂದೂ ಬಾಹುಳ್ಯದ ಜಮ್ಮು ಪ್ರದೇಶದಲ್ಲಿ ಅಪರಾಧದ ತನಿಖೆ ನಡೆಸುತ್ತಿರುವ ತನಿಖಾ ತಂಡವು ಕಾಶ್ಮೀರದಲ್ಲಿ ಏನೇನು ಮಾಡಿತು ಎಂಬುದರ ಬಗ್ಗೆಯೂ ಕರಾಳ ಕುಯುಕ್ತಿಗಳನ್ನೂ ಹರಿಬಿಡಲಾಗುತ್ತಿದೆ. ಕಾಶ್ಮೀರಿಗಳಿಂದ, ಅದರಲ್ಲೂ ನಿರ್ದಿಷ್ಟವಾಗಿ ಆಡಳಿತಾರೂಢ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಡೆಯಿಂದ ಬಂದ ಪ್ರತಿದಾಳಿ ಕೂಡ ಅಷ್ಟೇ ವೇಗವೂ, ಕಠಿಣವೂ ಆಗಿತ್ತು. ಪರಿಸ್ಥಿತಿ ಎಲ್ಲಿಯತನಕ ಹೋಗಿದೆ ಎಂದರೆ, ಪಿಡಿಪಿ-ಬಿಜೆಪಿ ಮೈತ್ರಿಕೂಟದ ಬುಡವೇ ಈಗ ಅಲ್ಲಾಡತೊಡಗಿದೆ. ಅತ್ಯಾಚಾರಕ್ಕೊಳಗಾದ ಮಗುವಿಗೆ ನ್ಯಾಯ ಸಿಗದಿದ್ದರೆ ಮೈತ್ರಿಕೂಟದಿಂದ ಹೊರನಡೆಯುವುದಾಗಿ ಪಿಡಿಪಿ ಶಾಸಕರು ಬೆದರಿಕೆಯೊಡ್ಡಿದ್ದಾರೆ.

ಇದನ್ನೂ ಓದಿ : ಹೆಣ್ಣು ಹುಟ್ಟಿದರೆ ಸಿಹಿ ಹಂಚುವ ಹರ್ಯಾಣದ ಚಾಪ್ಪರ್‌ಗೆ ಇನ್ನೊಂದು ಮುಖವಿದೆ!

ನಾವೀಗ ಎಂತಹ ಹಾಸ್ಯಾಸ್ಪದ ದುಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದರೆ, ಆ ಪುಟ್ಟ ಹುಡುಗಿಯ ಮೇಲೆ ನಡೆದ ಅಪರಾಧಕ್ಕಿಂತಲೂ ಅವಳ ಧರ್ಮವೇ ಪ್ರಮುಖವಾಗಿಬಿಟ್ಟಿದೆ. ಆಕೆಯ ಮೇಲೆ ದೌರ್ಜನ್ಯವೆಸಗಿ ಹತ್ಯಗೈದ ಕೊಲೆಗಡುಕರಿಗೆ ಸದ್ಯದಲ್ಲೇ ಶಿಕ್ಷೆಯಾಗುತ್ತದೆ ಎಂದು ನಿರೀಕ್ಷಿಸುವುದೂ ಕಷ್ಟವಿದೆ. ಏಕೆಂದರೆ, ಈಗ ನಡೆಯುತ್ತಿರುವ ಸಾರ್ವಜನಿಕ ಚರ್ಚೆಯು ಈ ಅಪರಾಧಕ್ಕೂ ಮತ್ತು ಬಂಧಿತರಾಗಿರುವ ಆರೋಪಗಳಿಗೂ ಸಂಬಂಧ ಕಲ್ಪಿಸಬಹುದಾದ ಸಾಕ್ಷಾಧಾರಗಳ ಸುತ್ತ ಇಲ್ಲ, ಬದಲಿಗೆ ಅವರ ಧರ್ಮ ಯಾವುದು ಎಂಬುದರ ಸುತ್ತ ಗಿರಕಿ ಹೊಡೆಯುತ್ತಿದೆ. ಹಿಂದೂ ಪುರುಷರು ಮುಸ್ಲಿಂ ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡುವುದಿಲ್ಲ ಎಂದು ಹೇಳಲು ಹೊರಟಿದ್ದಾರೆಯೇ ಈ ಗಣ್ಯ ಬಿಜೆಪಿ ಮಂತ್ರಿಗಳು? ಅಥವಾ ಕಾಶ್ಮೀರಿ ಮುಸ್ಲಿಮರು ಹಿಂದೂ ಬಾಹುಳ್ಯದ ಪ್ರದೇಶದಲ್ಲಿ ಪೊಲೀಸ್ ಕೆಲಸವನ್ನು ಮಾಡಬಾರದು ಎಂದು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆಯೇ? ಅಥವಾ ಈಗಾಗಲೇ ಕೋಮುಭಾವನೆಯಿಂದ ಭಾವೋದ್ವೇಗಕ್ಕೊಳಗಾಗಿರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳ ನಡುವೆ ಕೋಮುವಾದಿ ವಿಭಜನೀಯ ರಾಜಕೀಯ ಮಾಡಲು ಇದೊಂದು ಅವಕಾಶ, ಅದನ್ನು ಸದುಪಯೋಗಪಡಿಸಿಕೊಳ್ಳೋಣ ಎಂದು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆಯೇ? ಇವೆಲ್ಲವೂ ಸಾಧ್ಯ, ಇವುಗಳಿಂತ ಹೆಚ್ಚಿನದೂ ಸಾಧ್ಯ.

ಈ ಭಯಾನಕ ಅಪರಾಧ ಕುರಿತ ರಾಜಕೀಯ ಕಾವೇರುತ್ತಿರುವಾಗ ಈ ಅಪರಾಧಕ್ಕೆ ಬಲಿಯಾದ ಆ ಪುಟ್ಟ ಹುಡುಗಿಯ ಆಕ್ರಂದನ ಯಾರಿಗೆ ಕೇಳುತ್ತದೆ? ಆಘಾತಕ್ಕೊಳಗಾದ ಆಕೆಯ ಮುಖ ನೆಲ ನೋಡುತ್ತಿರುವಂತೆ ಕಾಣುತ್ತಿದೆ; ಈಗ ಯಾವುದೋ ಬಕರ್ವಾಲ್ ಡೇರೆಯಲ್ಲಿ ದಿಗ್ಭ್ರಾಂತನಾಗಿ ಕುಳಿತಿರಬಹುದಾದ ಆಕೆಯ ತಂದೆ ಆಕೆಗಾಗಿ ಪ್ರೀತಿಯಿಂದ ತಂದುಕೊಟ್ಟಿರಬಹುದಾದ ನೇರಳೆ ಬಣ್ಣದ ಸಲ್ವಾರ್ ಆಕೆ ಮೈಮೇಲೆ ಇನ್ನೂ ಉಲ್ಲಾಸಭರಿತವಾಗಿದೆ. ಈ ಬಾಲಕಿಗಿಂತ ಎಷ್ಟೋ ಪಟ್ಟು ಸುರಕ್ಷಿತವಾದ ಪರಿಸರದಲ್ಲಿ ತನ್ನ ಬಾಲ್ಯವನ್ನು ಕಳೆದ ನನ್ನ ಆಸಿಫಾ ಸುರಕ್ಷಿತವಾಗಿರಲೆಂದು ನಾನು ಪ್ರಾರ್ಥಿಸಿದೆ. ಅಂತೆಯೇ, ಕಾಥುವಾದಲ್ಲಿ ನ್ಯಾಯಕ್ಕಾಗಿ ಕೂಗುತ್ತಿರುವ ಈ ನತದೃಷ್ಟ ಪುಟ್ಟ ಮಗುವಿಗೆ ನ್ಯಾಯ ಸಿಗಲೆಂದೂ ಪ್ರಾರ್ಥಿಸಿದೆ. ಜಮ್ಮು ಮತ್ತು ಕಾಶ್ಮೀರದ ನಾಯಕರು ಈ ಘಟನೆಯ ಕುರಿತು ಕೋಮುರಾಜಕಾರಣದ ಧೂಳನ್ನು ಎಬ್ಬಿಸಿ, ಅಪರಾಧಿಗಳಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಪ್ರಾಯಶಃ ದುರುಳರು ಈ ಹುಡುಗಿಗೆ ಮಾಡಿದ ಅನ್ಯಾಯಕ್ಕಿಂತ ಘೋರ ಅನ್ಯಾಯವಾಗಿದೆ.

ಹಂಸಗಾಥ | ಘನತೆಯಿಂದ ಸಾಯುವುದೂ ಸಾರ್ಥಕ ಬದುಕಿನ ಲಕ್ಷಣವೇ ತಾನೇ?
ಇಲಾಜು | ಮಹಾ ಹೀರೋ, ಅಸಹಾಯಕ ವಿಲನ್; ಚುನಾವಣೆ ಗೆಲ್ಲಲು ಸುಲಭ ಸೂತ್ರ!
ಮಿಲೇ ಸುರ್ | ಶಿಂಷಾದಿಂದ ಕಾಣೆಯಾದವರ ದಾರಿ ಕೊನೆಯಾಗಿದ್ದು ಕುರುಬರಹಳ್ಳಿಯಲ್ಲಿ
Editor’s Pick More