ಕಾಶ್ಮೀರದಿಂದ | ಪಾಕ್ ಮರುಭೂಮಿಯಲ್ಲಿ ಕಾಮೋತ್ತೇಜಕ ಹೆಬ್ಬಕದ ಬೇಟೆ ರಾದ್ಧಾಂತ

ಯುನೈಟೆಡ್ ಅರಬ್ ಎಮಿರೇಟ್ಸ್‌ ಸಂಸ್ಥಾಪಕ ಶೇಕ್ ಝಾಯೆದ್ ಬಿನ್ ಸುಲ್ತಾನ್ ಅಲ್-ನಹ್ಯಾನ್ 1960ರ ದಶಕದಲ್ಲಿ ಗಿಡುಗಗಳ ನೆರವಿನಿಂದ ಪಾಕ್ ಮರುಭೂಮಿಗಳಲ್ಲಿ ಬೇಟೆ ಆರಂಭಿಸಿದ. ಆಗ ಕ್ರೀಡೆಯಾಗಿ ಶುರುವಾದ ಬೇಟೆ ಈಗ ಅಲ್ಲಿನ ಜೀವಿಗಳ ಉಳಿವಿಗೆ ಕಂಟಕವಾಗಿ ಪರಿಣಮಿಸಿದೆ

ಚಳಿಗಾಲದ ತಿಂಗಳುಗಳಲ್ಲಿ, ಅದರಲ್ಲೂ ಮುಖ್ಯವಾಗಿ, ನವೆಂಬರ್‌ನಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಪಾಕಿಸ್ತಾನದ ಮರುಭೂಮಿಯಲ್ಲಿ ಒಂದು ಗಮನಾರ್ಹ ಬೆಳವಣಿಗೆ ನಡೆಯುತ್ತದೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್, ಬಹ್ರೇನ್, ಒಮನ್ ದೇಶಗಳ ಅರಬ್ ರಾಜಮನೆತನಗಳಿಗೆ ಸೇರಿದ ಅನೇಕ ರಾಜಕುಮಾರರು, ಅವರೊಂದಿಗೆ ಇನ್ನಷ್ಟು ಮಂದಿ ಇತರರು, ಅಧಿಕೃತವಾಗಿ ಗುರುತಿಸಲಾದ ಕಾಯ್ದಿರಿಸಿದ ಖಾಸಗಿ ಪ್ರದೇಶಗಳಲ್ಲಿ ಹೆಬ್ಬಕ ಪಕ್ಷಿಗಳನ್ನು ಬೇಟೆಯಾಡುವುದಕ್ಕಾಗಿ ಸೇರಿಕೊಳ್ಳುತ್ತಾರೆ. ಈ ಪಕ್ಷಿಗಳಿಗೆ ಸ್ಥಳೀಯವಾಗಿ ತೈಲೂರ್ ಎಂದು ಕರೆಯಲಾಗುತ್ತದೆ. ತರಬೇತುಗೊಂಡ ಗಿಡುಗಗಳಿಂದ ಮೊದಲುಗೊಂಡು ಉಪಗ್ರಹ ಅನ್ವೇಷಕಗಳು, ಬೃಹತ್ ಐಶಾರಾಮಿ ಡೇರೆಗಳು, ವಿಶೇಷವಾಗಿ ವಿನ್ಯಾಸಗೊಳಿಸಿದ ನಾಲ್ಕು ಚಕ್ರದ ಗಾಡಿಗಳು ಮುಂತಾದ ಆಧುನಿಕ ಸಲಕರಣೆಗಳಿಂದ ಸಜ್ಜಿತರಾದ ಈ ಅರಬ್ ರಾಜಕುಮಾರರು ಚಳಿಗಾಲದ ಗಣನೀಯ ಸಮಯವನ್ನು ಈ ಬೇಟೆಯಲ್ಲಿಯೇ ಕಳೆಯುತ್ತಾರೆ.

ಬೆಡೋಯಿನ್ ಅರಬ್ ಸಾಂಸ್ಕೃತಿಕ ಪರಂಪರೆಯಲ್ಲಿ ಗಿಡುಗಗಳ ಸಾಕಾಣಿಕೆಯನ್ನು ಗೌರವಾದರಗಳಿಂದ ಪೂಜ್ಯವಾಗಿ ಕಾಣಲಾಗುತ್ತದೆ. ತರಬೇತುಗೊಂಡ ಗಿಡುಗಗಳ ನೆರವಿನಿಂದ ಪಕ್ಷಿಗಳನ್ನು ಬೇಟೆಯಾಡುವ ಕಲೆಗೆ ಜಾನಪದದಲ್ಲಿ ವಿಶೇಷವಾದ ಮತ್ತು ಬಹಳ ರೊಮ್ಯಾಂಟಿಕ್ ಆದ ಸ್ಥಾನವಿದೆ. ಹೆಬ್ಬಕ ಪಕ್ಷಿಗಳು ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಸೈಬೀರಿಯಾದಿಂದ ಪಾಕಿಸ್ತಾನದ ಬೆಚ್ಚನೆಯ ಹವಾಗುಣದ ಪ್ರದೇಶಗಳಿಗೆ ಸಂತಾನೋತ್ಪತ್ತಿಗಾಗಿ ವಲಸೆ ಬಂದು ಆರು ತಿಂಗಳು ಇಲ್ಲೇ ಉಳಿಯುತ್ತವೆ. ಈ ಪಕ್ಷಿಗಳ ಮಾಂಸವು ಕಾಮೋತ್ತೇಜಕವಾಗಿದೆ ಎಂದು ಅರಬ್ಬರು ನಂಬಿರುವುದರಿಂದ ಈ ಹಕ್ಕಿಯ ಮಾಂಸದಿಂದ ತಯಾರಿಸಿದ ಭಕ್ಷ್ಯಗಳಿಗೆ ಭಾರಿ ಬೇಡಿಕೆ ಇದೆ. ಅರಬ್ ರಾಜಕುಮಾರರು ಕಾನೂನಾತ್ಮಕವಾಗಿ ಬಹುವಿವಾಹಗಳನ್ನು ಮಾಡಿಕೊಳ್ಳುವ ಮೂಲಕ (ಇಸ್ಲಾಮಿನ ಕಾನೂನು ಅಥವಾ ಶರಿಯಾ ಪ್ರಕಾರ, ಏಕಕಾಲದಲ್ಲಿ ನಾಲ್ವರು ಹೆಂಡತಿಯರನ್ನು ಹೊಂದಬಹುದು) ಮತ್ತು ಕಾನೂನುಬಾಹಿರವಾಗಿ (ಇಸ್ಲಾಮಿಕ್ ಪರಿಭಾಷೆಯಲ್ಲಿ ಹೇಳುವುದಾದರೆ ‘ಹರಾಮ್’) ಮದುವೆಯಾಚೆಗೆ ಅನೇಕ ಮಹಿಳೆಯರೊಂದಿಗೆ ದೈಹಿಕ ಸಂಬಂಧಗಳನ್ನು ಇಟ್ಟುಕೊಳ್ಳುವ ಮೂಲಕ ತಮ್ಮ ಲೈಂಗಿಕ ಸಾಹಸಗಳಿಗೆ ಹೆಸರುವಾಸಿಯಾದವರು. ಇಂದ್ರಿಯ ತೃಷೆಯನ್ನು ತಣಿಸಲೆಂದೇ ಈ ಅರಬ್ ರಾಜಕುಮಾರರು ವಿಶ್ವದ ಮೂಲೆಮೂಲೆಗಳಿಂದ ಸುಂದರ ರೂಪದರ್ಶಿಯರನ್ನು, ನಟಿಯರನ್ನು ಕರೆಸಿಕೊಂಡು ಅವರ ಜೊತೆ ಸಮಯ ಕಳೆಯುವುದಕ್ಕೆ ಮಿಲಿಯಾಂತರ ಡಾಲರುಗಳನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಅರಬ್ ರಾಜಕುಮಾರರ ಈ ಸಾಹಸಗಾಥೆಗಳು ಆಗಾಗ ಪಾಶ್ಚಿಮಾತ್ಯ ಟ್ಯಾಬ್ಲಾಯ್ಡ್ ಮಾಧ್ಯಮಗಳಲ್ಲಿ ರಸವತ್ತಾದ ರೋಚಕ ಸುದ್ದಿಯಾಗಿ ಪ್ರಕಟವಾಗುವುದುಂಟು.

ಒಂದು ಕಾಲದಲ್ಲಿ ಹೆಬ್ಬಕ ಪಕ್ಷಿಗಳು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮರುಭೂಮಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಸಿಗುತ್ತಿದ್ದವು. ಆದರೆ, ಅವುಗಳ ಮಾಂಸ ಕಾಮೋತ್ತೇಜಕ ಎಂಬ ಜನರ ಮೂಢನಂಬಿಕೆಯ ಕಾರಣದಿಂದಾಗಿ ಅವುಗಳ ಬೇಟೆ ಹೆಚ್ಚಾಗಿ, 1970ರ ದಶಕದ ಹೊತ್ತಿಗೆ ಹೆಬ್ಬಕ ಪಕ್ಷಿಗಳ ಸಂತತಿ ಅಳಿವಿನಂಚಿಗೆ ಬಂದುನಿಂತಿತು. ಈ ಮೂಢನಂಬಿಕೆಯನ್ನು ವಿಜ್ಞಾನವು ಅಲ್ಲಗಳೆದಿದ್ದರೂ ಜನರಲ್ಲಿನ ಭಾವನೆ ಮಾತ್ರ ಆಳವಾಗಿ ಬೇರೂರಿದೆ.

ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಅಳಿವಿನಂಚಿನ ಜೀವಿಗಳ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪಕ್ಷಿಯನ್ನು ಅಳಿವಿನಂಚಿನಲ್ಲಿರುವ ಜೀವಿ ಎಂದು ಪರಿಗಣಿಸಲಾಗಿದೆ. ವಿಶ್ವದಲ್ಲಿ ಈ ಪಕ್ಷಿಗಳ ಸಂಖ್ಯೆ ಹೆಚ್ಚೆಂದರೆ 1,00,000 ಇರಬಹುದೆಂದು ಅಂದಾಜಿಸಿದ ಪರಿಸರ ಸಂರಕ್ಷಣಾ ಸಂಸ್ಥೆಯು, ಈ ಪಕ್ಷಿಯನ್ನು ಅಳಿವಿನಂಚಿನಲ್ಲಿರುವ ಜೀವಿಗಳ ಕೆಂಪುಪಟ್ಟಿಗೆ ಸೇರಿಸಿದೆ. ಕೋಳಿ ಗಾತ್ರದಲ್ಲಿರುವ ಈ ಪಕ್ಷಿಯು, ಬಲೂಚಿಸ್ಥಾನ ಪ್ರಾಂತ್ಯದ ಅಧಿಕೃತ ರಾಜಪಕ್ಷಿಯಾಗಿದೆ. ಅಧಿಕೃತ ವನ್ಯಜೀವಿ ಅಂದಾಜಿನ ಪ್ರಕಾರ, ಪ್ರತಿವರ್ಷ ಸುಮಾರು 40,000 ಹೆಬ್ಬಕ ಪಕ್ಷಿಗಳು ಪಾಕಿಸ್ತಾನಕ್ಕೆ ವಲಸೆ ಬರುತ್ತವೆ. ಅಂದರೆ, ವಿಶ್ವಾದ್ಯಂತ ಈಗ ಉಳಿದಿರುವ ಈ ಪಕ್ಷಿ ಸಂತತಿಯ ಹೆಚ್ಚೂಕಮ್ಮಿ ಅರ್ಧದಷ್ಟು ಭಾಗ ವಲಸೆಯಲ್ಲಿ ಪಾಲ್ಗೊಳ್ಳುತ್ತವೆ. ಅಳಿವಿನಂಚಿನಲ್ಲಿರುವ ಈ ಪಕ್ಷಿಗಳ ಅವ್ಯಾಹತ ಬೇಟೆಯಿಂದ ಎಚ್ಚರಗೊಂಡ ವನ್ಯಜೀವಿ ಸಂರಕ್ಷಕರು, ಈ ಪಕ್ಷಿ ಸಂತತಿಯನ್ನು ಉಳಿಸಿ ಬೆಳೆಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮೇಲೆ ಒತ್ತಡ ತಂದರು. ಪರಿಣಾಮವಾಗಿ, 1972ರಲ್ಲಿ ಈ ಪಕ್ಷಿಯ ಬೇಟೆಯನ್ನು ಜನಸಾಮಾನ್ಯರಿಗೆ ಮಾತ್ರ ನಿಷೇಧಿಸಲಾಯಿತು. ಏಕೆಂದರೆ, ಅರಬ್ ರಾಜಮನೆತನದವರಿಗೆ- ಸೌದಿ ಅರೇಬಿಯಾ ಮತ್ತು ಬಹ್ರೆನ್ ದೇಶಗಳ ದೊರೆಗಳು, ಕುವೈತ್‌ನ ಅಮೀರ್, ದುಬೈನ ಆಡಳಿತಗಾರ ಹಾಗೂ ಮಧ್ಯಪ್ರಾಚ್ಯದ ಇತರ ಪ್ರಬಲ ಮತ್ತು ಕುಲೀನ ಮನೆತನಗಳಿಗೆ- ಈ ಹಕ್ಕಿಗಳನ್ನು ಬೇಟೆಯಾಡುವುದಕ್ಕೆ ವಿಶೇಷ ಪರವಾನಗಿ ನೀಡಲಾಗಿತ್ತು.

ಇದನ್ನೂ ಓದಿ : ಕಾಶ್ಮೀರದಿಂದ | ಆತ ನಡೆಸಿದ್ದು ೧೫೦ ಎನ್‌ಕೌಂಟರ್, ಕೊಂದಿದ್ದು ೩೦೦ ಅಮಾಯಕರು!

ಯುನೈಟೆಡ್ ಅರಬ್ ಎಮಿರೇಟ್ಸ್‌ ಸಂಸ್ಥಾಪಕ ಶೇಕ್ ಝಾಯೆದ್ ಬಿನ್ ಸುಲ್ತಾನ್ ಅಲ್-ನಹ್ಯಾನ್ 1960ರ ದಶಕದಲ್ಲಿ ಅತ್ಯುತ್ತಮವಾಗಿ ತರಬೇತುಗೊಂಡ, ದಷ್ಟಪುಷ್ಟವಾಗಿ ಬೆಳೆದ ಗಿಡುಗಗಳ ನೆರವಿನಿಂದ ಪಾಕಿಸ್ತಾನದ ಮರುಭೂಮಿಗಳಲ್ಲಿ ಬೇಟೆಯಾಡುವುದನ್ನು ಪ್ರಾರಂಭಿಸುವುದರೊಂದಿಗೆ ಈ ಹೆಬ್ಬಕ ಪಕ್ಷಿಗಳನ್ನು ಬೇಟೆಯಾಡುವ ಕ್ರೀಡೆ ಪ್ರಾರಂಭವಾಯಿತು. ಅವರ ನಿಧನದ ನಂತರ ಅವರ ಕುಟುಂಬ ಮತ್ತು ಇತರ ಸೌದಿಗಳು, ಖತಾರ್ಗಳು ಪಾಕಿಸ್ತಾನದ ಗುಡ್ಡಗಾಡು ಪ್ರದೇಶದಲ್ಲಿನ ತಮ್ಮ ಚಳಿಗಾಗಲದ ತಾತ್ಕಾಲಿಕ ಬೇಟೆಗೆ ಅನುವಾಗಲೆಂದು ಅಲ್ಲಿ ಅರಮನೆ, ವಿಶ್ರಾಂತಿಗೃಹ, ಪುಟ್ಟ ವಿಮಾನ ನಿಲ್ದಾಣ, ರಸ್ತೆಗಳು, ಲೋಕೋಮೋಟಿವ್ ಮುಂತಾದ ಮೂಲಸೌಕರ್ಯಗಳನ್ನು ನಿರ್ಮಿಸುವುದಕ್ಕೆ, ನಿರ್ವಹಿಸುವುದಕ್ಕೆ ಮಿಲಿಯಾಂತರ ಡಾಲರುಗಳನ್ನು ಖರ್ಚು ಮಾಡುವುದನ್ನು ಮುಂದುವರಿಸಿದರು. ದೂರದ ಪಾಕಿಸ್ತಾನಿ ಗುಡ್ಡಗಾಡುಗಳಲ್ಲಿ ಈ ಅರಬ್ ರಾಜಮನೆತನಗಳ ಉಪಸ್ಥಿತಿಯು ಸ್ಥಳೀಯ ಬಡಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದಲ್ಲದೆ, ಇದರಿಂದ ಆಸ್ಪತ್ರೆಗಳು, ಶಾಲೆಗಳು ಮತ್ತಿತರ ಸಮುದಾಯ ಸೌಕರ್ಯಗಳ ನಿರ್ಮಾಣಕ್ಕೂ ನೆರವಾಯಿತು. ಆದರೆ, ಈ ಅರಬ್ ಕುಲೀನರು ನವಿಲು, ಜಿಂಕೆ ಮತ್ತು ಕವುಜಗಗಳಂತಹ ಅಳಿವಿನಂಚಿನಲ್ಲಿರುವ ಇತರ ಪಕ್ಷಿಗಳನ್ನೂ ಬೇಟೆಯಾಡುತ್ತಿದ್ದಾರಲ್ಲದೆ, ಅವರ ಬೇಟೆಗಾಗಿ ನಿಗದಿಪಡಿಸಿದ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರವೇ ಹತ್ತು ದಿನಗಳಲ್ಲಿ ನೂರು ಹಕ್ಕಿಗಳಿಗೆ ಮೀರದಂತೆ ಬೇಟೆಯಾಡುವುದಕ್ಕೆ ಕೊಟ್ಟಿರುವ ಪರವಾನಗಿಯ ನಿಯಮಾವಳಿ ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪಗಳೂ ಆಗಾಗ ಕೇಳಿಬರುತ್ತಿದ್ದವು.

ಅರಬ್ ಶೇಖ್‌ಗಳು ಸ್ಥಳೀಯ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ದುಬಾರಿ ಬೆಲೆಯ ಐಶಾರಾಮಿ ಉಡುಗೊರೆ ನೀಡುವ ಮೂಲಕ ಇಡೀ ವ್ಯವಸ್ಥೆಯನ್ನು ಮತ್ತು ಅದರ ಕಾರ್ಯಶೀಲ ಯಂತ್ರಾಂಗವನ್ನು ಬುಡಮೇಲು ಮಾಡಿಬಿಡುತ್ತಾರೆ. ಉದಾಹರಣೆಗೆ, 2014ರಲ್ಲಿ ತಾಬುಕ್ ಪ್ರಾಂತ್ಯದ ರಾಜ್ಯಪಾಲನಾಗಿದ್ದ ಸೌದಿ ರಾಜಕುಮಾರ್ ಫಾಹ್ದ್ ಬಿನ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ 2,100ಕ್ಕೂ ಹೆಚ್ಚು ಪಕ್ಷಿಗಳನ್ನು ಬೇಟೆಯಾಡಿ ಕೊಂದ. ಆದರೂ ಆತನ ವಿರುದ್ಧ ಯಾವುದೇ ಕ್ರಮ ಜರುಗಿಸುವ ಮಾತು ದೂರವಿರಲಿ, ಅವನಿಗೆ ಕನಿಷ್ಠ ವಾಗ್ದಂಡನೆಯನ್ನೂ ವಿಧಿಸಲಿಲ್ಲ. ಇದು ದೊಡ್ಡ ಸುದ್ದಿಯಾಯಿತಲ್ಲದೆ, ಅಳಿವಿನಂಚಿನಲ್ಲಿರುವ ಸಂತತಿಗಳ ಭವಿಷ್ಯದ ಬಗ್ಗೆ ಆತಂಕಿತರಾದ ವನ್ಯಜೀವಿ ಸಂರಕ್ಷಕ ಕಾರ್ಯಕರ್ತರು ಮೋಜಿನ ಬೇಟೆಯ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಒತ್ತಡ ತರಲಾರಂಭಿಸಿದರು. ಪರಿಣಾಮವಾಗಿ, 2015ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಈ ಬೇಟೆಯ ಮೇಲೆ ಸಂಪೂರ್ಣ ನಿಷೇಧ ಹೇರಿತು. ಆದರೆ, "ಈ ಬೇಟೆಯ ಪರವಾನಗಿಗಳು ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಸಂಬಂಧಗಳ 'ಬಹುಮುಖ್ಯ ವಿಷಯ' ಆಗಿವೆ," ಎಂದು ಪಾಕಿಸ್ತಾನದ ಸಂಯುಕ್ತ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ ಮೇಲೆ 2016ರಲ್ಲಿ ಈ ನಿಷೇಧವನ್ನು ಭಾಗಶಃ ತೆರವುಗೊಳಿಸಲಾಗಿದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More