ಹಾಡ್ಯನಾಮಿಕ್ಸ್| ಈ ‘ಹಣಾವಣೆ’ 10,000 ಕೋಟಿ ವಹಿವಾಟಿನ ‘ಮತ’ಮ್ಯಾಟಿಕ್ಸ್!

ವಿಧಾನಸಭಾ ಚುನಾವಣೆಯಲ್ಲಿ ಸಾವಿರಾರು ಕೋಟಿ ರುಪಾಯಿ ಕಪ್ಪುಹಣ ಹರಿದುಬಂದು ಮುಖ್ಯವಾಹಿನಿಗೆ ಸೇರುತ್ತದೆ. ಒಂದು ತಿಂಗಳಿಡೀ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ. ಆತಂಕದ ಸಂಗತಿ ಎಂದರೆ, ಹೂಡಿಕೆ ಮಾಡಿ ಗೆದ್ದವರು ಅದನ್ನು ಲಾಭ ಸಹಿತ ಮರಳಿ ಗಳಿಸಲು ಅಡ್ಡ ದಾರಿ ಹಿಡಿಯುತ್ತಾರೆ!

ಯಾಕೆ ಎಲ್ಲರೂ ಚುನಾವಣೆಗಳನ್ನು ಇಷ್ಟಪಡುತ್ತಾರೆ? ವಿಧಾನಸಭಾ, ಲೋಕಸಭಾ ಚುನಾವಣೆಗಳೇಕೆ ಜಾತ್ರೆಯಂತಹ ಅನುಭವ ನೀಡುತ್ತವೆ? ಚುನಾವಣೆ ಬಗ್ಗೆ ಯಾಕೆ ಎಲ್ಲರಿಗೂ ಎಲ್ಲಿಲ್ಲದ ಆಸಕ್ತಿ? ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತಳಹದಿಯೇ ಚುನಾವಣೆ. ಚುನಾವಣೆಯಿಂದಲೇ ಎಲ್ಲವೂ ಆರಂಭ ಮತ್ತು ಅಂತ್ಯ! ಚುನಾವಣೆ ಬೇರೆ-ಬೇರೆ ವರ್ಗದ ಜನರಿಗೆ ಬೇರೆ-ಬೇರೆ ಕಾರಣಕ್ಕಾಗಿ ಇಷ್ಟವಾಗುತ್ತದೆ. ಈ ಇಷ್ಟದ ಪ್ರಮುಖ ಮೂಲ ಹಣವೇ ಆಗಿರುತ್ತದೆ. ಹಣದ ಮೂಲಕ ದಕ್ಕುವ ಅಧಿಕಾರ, ವರ್ಚಸ್ಸು, ಪ್ರಭಾವಳಿಯಿಂದಾಗಿಯೇ ಹಲವರಿಗೆ ಚುನಾವಣೆ ಇಷ್ಟವಾಗುತ್ತದೆ.

ಚುನಾವಣೆ ಈಗ ಬರೀ ಚುನಾವಣೆಯಾಗಿ ಉಳಿದಿಲ್ಲ. ಅದು ‘ಹಣಾವಣೆ’ಯಾಗಿ ಪರಿವರ್ತನೆಗೊಂಡಿದೆ. ಈಗ, ಯಾರೇ ಆದರೂ ಚುನಾವಣಾ ಆಯೋಗ ನಿಗದಿ ಮಾಡಿದ ಮಿತಿಯಲ್ಲೇ ವೆಚ್ಚ ಮಾಡಿ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ! ಸಾಧ್ಯವೇ ಇಲ್ಲ!

ಚುನಾವಣೆ ಬಂದರೆ ಹಣದ ಪ್ರವಾಹವೇ ಹರಿಯುತ್ತದೆ. ಈ ಒಂದು ತಿಂಗಳಲ್ಲಿ ಏನಿಲ್ಲವೆಂದರೂ ಸುಮಾರು 10,000 ಕೋಟಿ ರುಪಾಯಿ ನಮ್ಮ ರಾಜ್ಯದ ಅರ್ಥವ್ಯವಸ್ಥೆಗೆ ಬಂದು ಸೇರುತ್ತದೆ! ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಹಣ ಮೇಲ್ಮಟ್ಟದಲ್ಲಿ ಕೈಬದಲಾಗುವುದಿಲ್ಲ. ಹಾಗಾದಾಗ ಅದು ಅರ್ಥವ್ಯವಸ್ಥೆಗೆ  ಬರುವುದಿಲ್ಲ, ಕಪ್ಪುಹಣ ಆಗಿಬಿಡುತ್ತದೆ. ಬದಲಿಗೆ, ವಿವಿಧ ಹಂತಗಳಲ್ಲಿ ಹಂಚಿಕೆಯಾಗುತ್ತದೆ. ಆದು ಮತದಾರನಿಗೆ ನೇರವಾಗಿ ನೀಡುವ ಹಣವಾಗಿರಬಹುದು, ಸರಕಾಗಿರಬಹುದು. ಚುನಾವಣೆಗಾಗಿ ಮಾಡುವ ವೆಚ್ಚ ಇರಬಹುದು. ಪೋಸ್ಟರ್, ಬ್ಯಾನರ್, ಕರಪತ್ರ, ಬ್ಯಾಡ್ಜುಗಳು, ಕಾರು, ಜೀವು, ಆಟೋ, ಧ್ವನಿವರ್ಧಕ ಹೀಗೆ ಹತ್ತಾರು ರೂಪದಲ್ಲಿ ಅಭ್ಯರ್ಥಿಗಳು ಹಣ ವಿನಿಯೋಗಿಸುತ್ತಾರೆ. ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ವೆಚ್ಚವು ಒಂದು ರೀತಿಯಲ್ಲಿ ಬೋನಸ್ ಸಿಕ್ಕ ಹಾಗೆ. ತಿಂಗಳಿಡೀ ಬಾಡಿಗೆ ಕಾರು ಓಡಿಸುವವರಿಗೆ, ಆಟೋ ಚಾಲಕರಿಗೆ, ಧ್ವನಿವರ್ಧಕ ಬಾಡಿಗೆ ನೀಡುವವರಿಗೆ, ಕರಪತ್ರ, ಬ್ಯಾನರ್, ಬ್ಯಾಡ್ಜು ಸಿದ್ಧಪಡಿಸುವವರಿಗೆ ಕೈತುಂಬಾ ಕೆಲಸ. ಕೈತುಂಬಾ ಸಂಪಾದನೆ. ಇವರೆಲ್ಲರಿಗೂ ಖುಷಿ ಏಕೆಂದರೆ, ಎಲ್ಲ ಪಾವತಿಗಳು ಮುಂಗಡವಾಗಿರುತ್ತವೆ ಅಥವಾ ತಕ್ಷಣವೇ ಆಗಿಬಿಡುತ್ತವೆ. ಎಷ್ಟೋ ಕಾರು, ಆಟೋ ಮಾಲಿಕರು ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ.

ಚುನಾವಣೆ ಎಂದರೆ ಹೋಟೆಲ್‌ಗಳು, ಬಾರು, ರೆಸ್ಟೊರೆಂಟುಗಳು ತುಂಬಿ ತುಳುಕುತ್ತಿರುತ್ತವೆ. ವೈನ್ ಷಾಪುಗಳಲ್ಲೂ ಜನ ಸಾಲುಗಟ್ಟಿ ನಿಲ್ಲುತ್ತಾರೆ. ಒಂದು ತಿಂಗಳ ಮಟ್ಟಿಗೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳ ಸೃಷ್ಟಿಯಾಗಿಬಿಡುತ್ತದೆ. ಈ ವೇಳೆ ಯಾರೂ ನಿರುದ್ಯೋಗಿಗಳಾಗಿರುವುದಿಲ್ಲ. ಹಣದ ಹರಿವು ಪ್ರವಾಹದೋಪಾದಿಯಲ್ಲಿ ಇರುವುದರಿಂದ ಎಲ್ಲರೂ ಸಂಪಾದಿಸುತ್ತಾರೆ, ಲಾಭ ಮಾಡಿಕೊಳ್ಳುತ್ತಾರೆ. ಅಧಿಕಾರ ಹಿಡಿಯುವ ಉಮೇದಿನಲ್ಲಿ ಅಭ್ಯರ್ಥಿಗಳು ನೀರಿನಂತೆ ಹಣ ಚೆಲ್ಲುತ್ತಾರೆ. ಯಾವ ಅಭ್ಯರ್ಥಿಗಳು ಎಷ್ಟು ಹಣ ಚೆಲ್ಲುತ್ತಾರೆ ಎಂಬುದರ ಅಂದಾಜು ಯಾರಿಗೂ ದಕ್ಕುವುದಿಲ್ಲ.

ಈ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಎಷ್ಟು ಕೋಟಿ ಹಣ ಖರ್ಚು ಮಾಡಬಹುದು? ಚುನಾವಣಾ ಆಯೋಗ ನೀಡಿರುವ ವೆಚ್ಚ ಮಿತಿ 28 ಲಕ್ಷ ರುಪಾಯಿಯ ಲೆಕ್ಕದಲ್ಲಿ ನೋಡಿದರೆ, ಅಭ್ಯರ್ಥಿಗಳು ಮಾಡಬಹುದಾದ ವೆಚ್ಚ 627 ಕೋಟಿ ರುಪಾಯಿಗಳು. ರಾಜ್ಯದ 224 ವಿಧಾಸಭಾ ಕ್ಷೇತ್ರಗಳಲ್ಲಿ ಸರಾಸರಿ ಹತ್ತು ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆಂಬ ಅಂದಾಜಿನಲ್ಲಿ ಈ ಲೆಕ್ಕಾಚಾರ.

ವಾಸ್ತವವಾಗಿ ಅಭ್ಯರ್ಥಿಗಳು ಮಾಡುವ ವೆಚ್ಚ ಎಷ್ಟು? ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕೋಟಿ ಮೀರಿ ವೆಚ್ಚ ಮಾಡುವಾಗ ವಿಧಾನಸಭಾ ಚುನಾವಣೆಗೆ ಐದು ಕೋಟಿ ರುಪಾಯಿಯಾದರೂ ಬೇಡವೇ? ಚುನಾವಣೆಯಲ್ಲಿ ನುರಿತು ಪರಿಣಿತರಾದ, ಈಗ ಮರುಆಯ್ಕೆ ಬಯಸುತ್ತಿರುವ ಶಾಸಕರೊಬ್ಬರು ಕೊಟ್ಟ ಲೆಕ್ಕಚಾರ ಹೆಚ್ಚು ವಾಸ್ತವವಾಗಿದೆ. ಅವರ ಪ್ರಕಾರ, ಚುನಾವಣಾ ಆಯೋಗ ನಿಗದಿ ಮಾಡಿರುವ 28 ಲಕ್ಷ ರುಪಾಯಿ ಏನೇನೂ ಸಾಕಾಗದು. ಏಕೆಂದರೆ, ಒಂದು ಕ್ಷೇತ್ರದಲ್ಲಿ ಸರಾಸರಿ ಒಂದೂವರೆ ಲಕ್ಷ ಮತದಾರರು ಇದ್ದಾರೆ ಎಂದರೆ, ಪ್ರತಿಯೊಬ್ಬ ಮತದಾರರನ್ನು ಖುದ್ದು ಭೇಟಿ ಮಾಡಿ ಮತ ಯಾಚಿಸಲು ದಕ್ಕುವ ಸರಾಸರಿ ಮೊತ್ತ ಕೇವಲ 18-20 ರುಪಾಯಿ ಮಾತ್ರ. ಇಷ್ಟು ಕಡಿಮೆ ಮೊತ್ತದಲ್ಲಿ ಮತದಾರರನ್ನು ಭೇಟಿ ಮಾಡಿ ಮತ ಯಾಚಿಸುವುದು ಸಾಧ್ಯವಿಲ್ಲ. ಅವರ ಪ್ರಕಾರ, ರಾಜಕೀಯ ಪಕ್ಷದ ಸಾಮಾನ್ಯ ಅಭ್ಯರ್ಥಿಯು ಒಬ್ಬ ಮತದಾರನ ಮೇಲೆ ವಿನಿಯೋಗಿಸುವ ವೆಚ್ಚ ಸುಮಾರು 1,000 ರುಪಾಯಿ. ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಇದು 2,000 ರುಪಾಯಿ ದಾಟಬಹುದಂತೆ. ಮತದಾರರ ಮೇಲೆ ವಿನಿಯೋಗಿಸುವ ವೆಚ್ಚ ಎಂದರೆ, ತಿಂಗಳಿಡೀ ಕ್ಷೇತ್ರದಲ್ಲಿ ನಡೆಯುವ ಪ್ರಚಾರ, ಸಭೆ, ಸಮಾರಂಭ, ಸಾರಿಗೆ, ಕಾರ್ಯಕರ್ತರ ಊಟೋಪಚಾರ, ಮತದಾರರಿಗೆ ನೀಡುವ ಉಡುಗೊರೆ ಇತ್ಯಾದಿ ಸೇರಿರುತ್ತದೆ. ಆ ಲೆಕ್ಕದಲ್ಲಿ ಒಂದೂವರೆ ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಅಭ್ಯರ್ಥಿಯು 15 ಕೋಟಿ ರುಪಾಯಿ ವೆಚ್ಚ ಮಾಡಬೇಕಾಗುತ್ತದೆ. ಪ್ರಮುಖ ಮೂರು ರಾಜಕೀಯ ಪಕ್ಷದ ಅಭ್ಯರ್ಥಿಗಳು ಸರಾಸರಿ 10 ಕೋಟಿ ವೆಚ್ಚ ಮಾಡುತ್ತಾರೆ, ಇನ್ನುಳಿದ ಅಭ್ಯರ್ಥಿಗಳೆಲ್ಲ ಸೇರಿ 10 ಕೋಟಿ ಖರ್ಚು ಮಾಡುತ್ತಾರೆಂದುಕೊಂಡರೂ 8,960 ಕೋಟಿ ರುಪಾಯಿಗಳಾಗುತ್ತದೆ! ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮಾಡುವ ವೆಚ್ಚ 20-25 ಕೋಟಿ ಮೀರುತ್ತದೆ ಎಂಬ ಅಂದಾಜಿದೆ. ಹೀಗಾಗಿ, ಚುನಾವಣೆ ವೇಳೆಗೆ ವೆಚ್ಚವಾಗುವ ಹಣ 10,000 ಕೋಟಿ ದಾಟಬಹುದು.

ಇದನ್ನೂ ಓದಿ : ಹಾಡ್ಯನಾಮಿಕ್ಸ್ | ಲಕ್ಷ ಕೋಟಿಗಳ ಲೆಕ್ಕಾಚಾರದಲ್ಲಿ ನಲುಗಿದ ರೈತರ ಹಿತಾಸಕ್ತಿ

ಇಲ್ಲಿ ಮತ್ತೊಂದು ಪ್ರಮುಖ ಅಂಶ ಎಂದರೆ, ಚುನಾವಣೆಯಲ್ಲಿ ವೆಚ್ಚವಾಗುವ ಶೇ.90ರಷ್ಟು ಹಣ ಕಪ್ಪುಹಣ. ಚುನಾವಣೆ ವೇಳೆ ಸುಮಾರು 1,000 ಅಭ್ಯರ್ಥಿಗಳಿಗೆ ಸೇರಿದ 9,000 ಕೋಟಿ ರುಪಾಯಿ ಕಪ್ಪುಹಣವು ಕೋಟ್ಯಾಂತರ ಜನರ ನಡುವೆ ಹರಿದು ಮುಖ್ಯವಾಹಿನಿಗೆ ಬರುತ್ತದೆ. ಚುನಾವಣೆ ವೇಳೆ ಮಾಡಿದ ವಿವಿಧ ಸರಕು ಮತ್ತು ಸೇವೆಗಳಿಗೆ ಲೆಕ್ಕಪತ್ರವಿಲ್ಲದೆ ಪಾವತಿ ಮಾಡಬಹುದು. ಆದರೆ, ಕೊನೆ ಹಂತದಲ್ಲಿ ಅಂದರೆ, ಕಾರು ಚಾಲಕ ಬಿಲ್ ನೀಡದೆ ಹಾಗೆ ಹಣ ಪಡೆಯಬಹುದು. ಅದೇ ಹಣದಿಂದ ಆತ ಯಾವುದೋ ವಸ್ತುಗಳನ್ನು ಖರೀದಿಸುತ್ತಾನೆ. ಆ ವಸ್ತುವಿಗೆ ಪೂರ್ವನಿಗದಿತ ತೆರಿಗೆ ಪಾವತಿಸುತ್ತಾನೆ. ಅಂದರೆ, ಯಾವುದೋ ಒಂದು ಹಂತದಲ್ಲಿ ಕಪ್ಪುಹಣ ಆರ್ಥಿಕತೆಯ ಮುಖ್ಯವಾಹಿನಿಗೆ ಸೇರಿಬಿಡುತ್ತದೆ. ಒಂದೇ ತಿಂಗಳಲ್ಲಿ ಸುಮಾರು 10,000 ಕೋಟಿ ನಗದು ಆರ್ಥಿಕ ವ್ಯವಸ್ಥೆಗೆ ಹರಿದುಬಂತೆಂದರೆ ಆರ್ಥಿಕ ಚಟುವಟಿಕೆಗೆ ಚೇತರಿಕೆ ಬರುತ್ತದೆ. ಎಲ್ಲರೂ ಕೈಚೆಲ್ಲಿ ಖರ್ಚು ಮಾಡುತ್ತಾರೆ. ವ್ಯಾಪಾರ ವಹಿವಾಟು ದುಪ್ಪಟ್ಟಾಗುತ್ತದೆ. ಆ ಲೆಕ್ಕದಲ್ಲಿ ಚುನಾವಣೆ ಕೂಡ ಕಪ್ಪಹಣವನ್ನು ಹೊರಗೆ ಎಳೆಯುವ ಒಂದು ಸುಲಭ ಮಾರ್ಗ‍!

ಆದರೆ, ಆತಂಕ ಏನೆಂದರೆ, ಗೆದ್ದು ಬಂದವರು ಚುನಾವಣೆಯಲ್ಲಿ ಮಾಡಿದ್ದ ಹೂಡಿಕೆಯನ್ನು ಲಾಭ ಸಹಿತ ಗಳಿಸಲು ಅಡ್ಡದಾರಿ ಹಿಡಿಯುತ್ತಾರಲ್ಲ ಅದು! ಅದನ್ನು ತಡೆಯುವುದು ಹೇಗೆ?

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More