ಏಕತಾರಿ | ಕಾಶ್ಮೀರದ ವರದಿ ಮಾಡುವಾಗ ನಮ್ಮ ಮಾಧ್ಯಮ ಹಿಡಿಯುವ ದಾರಿಯೇ ಬೇರೆ!

ಜಮ್ಮು-ಕಾಶ್ಮೀರದ ಘಟನೆಗಳನ್ನು ವರದಿ ಮಾಡುವಾಗ ಭಾರತೀಯ ಮಾಧ್ಯಮಗಳು ಅನುಸರಿಸುವ ಮಾರ್ಗ ಬೇರೆಯೇ ಇದೆ. ಸೈನ್ಯದ ಮಂದಿ ಜೀವ ತೆತ್ತಾಗ ಮಾಧ್ಯಮ ವರ್ತಿಸುವ ಬಗೆಗೂ, ಅಮಾಯಕ ಕಾಶ್ಮೀರಿಗಳು ಬಲಿಯಾದಾಗ ವರ್ತಿಸುವ ಬಗೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಏಕೆ ಹೀಗೆ?

ತಹರೀಕ್-ಎ-ಹುರ್ರಿಯತ್ ಅಧ್ಯಕ್ಷ ಸಯ್ಯದ್ ಅಲಿ ಗಿಲಾನಿ ಇತ್ತೀಚೆಗೆ ತನ್ನ ಬಹುವರ್ಷದ ಗೆಳೆಯ ಮತ್ತು ಸಹ-ಹೋರಾಟಗಾರ ಅಶ್ರಫ್ ಸೆಹ್ರಾಯಿ ಅವರಿಗೆ ಸ್ವಪ್ರೇರಿತರಾಗಿ, ಗೌರವಯುತವಾಗಿ ಅಧಿಕಾರ ಹಸ್ತಾಂತರಿಸಿದರು. ಇದು ಕಾಶ್ಮೀರದ ಸ್ವಾತಂತ್ರ ಹೋರಾಟದ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆ.

ಅಧಿಕಾರ ಹಸ್ತಾಂತರಗೊಂಡು ಕೆಲವೇ ದಿನಗಳಲ್ಲಿ ಸೆಹ್ರಾಯಿ ಅವರು ‘ಕಾಶ್ಮೀರ್ ಇಂಕ್’ ಎಂಬ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, “ಕಾಶ್ಮೀರ ಸ್ವಾತಂತ್ರ ಹೋರಾಟಗಾರ ಈಸ ಫಾಜಿಲಿಯ ಅಂತ್ಯವಿಧಿಯಲ್ಲಿ ಹಲವಾರು ಯುವಕರು, ಕಪ್ಪು ಬಾವುಟ ಬೀಸುತ್ತ ಇಸ್ಲಾಮಿಕ್ ರಾಜ್ಯಗಳಿಗೆ ಬೆಂಬಲ ಸೂಚಿಸಿದ್ದು ತಮಗೆ ಸ್ವೀಕಾರಾರ್ಹವಲ್ಲ. ಈ ರೀತಿಯಾಗಿ ಕಪ್ಪು ಬಾವುಟ ಪ್ರದರ್ಶಿಸುವ ಯುವಕರು ನಮ್ಮ ಸ್ವಾತಂತ್ರ ಹೋರಾಟಕ್ಕೆ ಹಿನ್ನಡೆ ಉಂಟುಮಾಡುತ್ತಾರೆ, ದೆಹಲಿ ಸಾಮ್ರಾಜ್ಯಕ್ಕೆ ಪರೋಕ್ಷವಾಗಿ ಶಕ್ತಿ ತುಂಬುತ್ತಾರೆ. ಇಂಥ ಕೃತ್ಯಗಳಿಂದ ಭಾರತ ಮಾಡಿರುವ ಕಾಶ್ಮೀರದ ಅತಿಕ್ರಮಣವನ್ನು ಸಮರ್ಥಿಸಿಕೊಳ್ಳಲು ಭಾರತಕ್ಕೆ ನೆರವು ಮಾಡಿದಂತಾಗುತ್ತದೆ,” ಎಂದರು. ಮತ್ತೂ ಮುಂದೆ ಹೋಗಿ, ಉಗ್ರಗಾಮಿ ಜಾಕಿರ್ ಮೂಸಾನ ರಾಜಕೀಯ ಮಾರ್ಗದ ಜೊತೆ ತಮಗಿರುವ ಭಿನ್ನಾಭಿಪ್ರಾಯವನ್ನೂ ಸ್ಪಷ್ಟವಾಗಿ ಹೇಳಿದರು.

ಇದಾಗಿ ಸ್ವಲ್ಪ ಸಮಯದಲ್ಲೇ ಸೆಹ್ರಾಯಿ ಅವರ ಮಗ ಜುನೈದ್ ಅಶ್ರಫ್, ಉಗ್ರಗಾಮಿ ಸಂಘಟನೆ ಹಿಜಬುಲ್ ಮುಜಾಹಿದ್ದೀನ್ ಸೇರಿದ್ದಾನೆ, ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಂಡಿದ್ದಾನೆ ಎಂಬ ಸುದ್ದಿ ಬಂದಿತು. ಇಪ್ಪತ್ತಾರು ವರ್ಷದ ಜುನೈದ್ ಎಂಬಿಎ ಪದವೀಧರನಾಗಿದ್ದು, ಆತ ಕಣ್ಮರೆಯಾದ ಮಾರನೇ ದಿನವೇ ಸೆಹ್ರಾಯಿ ಅವರ ಕುಟುಂಬ ಈ ಕುರಿತು ಪೊಲೀಸ್ ದೂರು ದಾಖಲಿಸಿತ್ತು. ಅದರ ಮಾರನೆಯ ದಿನ ಶಸ್ತ್ರಾಸ್ತ್ರಗಳನ್ನು ಹಿಡಿದ ಜುನೈದ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿತು. ಇಷ್ಟು ಸಾಕಿತ್ತು ಭಾರತೀಯ ಮಾಧ್ಯಮಗಳಿಗೆ!

ದೆಹಲಿಯಲ್ಲಿ ಕುಳಿತ ಸ್ವಯಂಘೋಷಿತ ಕಾಶ್ಮೀರ ಪರಿಣಿತರೆಲ್ಲರೂ, “ಹುರ್ರಿಯತ್ ಮತ್ತು ಹಿಜಬುಲ್ ಮುಜಾಹಿದ್ದೀನ್ ನಡುವೆ ಇರುವ ಸಂಬಂಧಕ್ಕೆ, ನಂಟಿಗೆ ಇದು ಪುರಾವೆ ಮತ್ತು ಜುನೈದ್ ಹಿಜಬುಲ್ ಮುಜಾಹಿದ್ದೀನ್ ಸೇರಿರುವುದರ ಅರ್ಥ ಹುರ್ರಿಯತ್ ಎಂಬುದು ಹಿಜಬುಲ್ ಮುಜಾಹಿದ್ದೀನಿನ ರಾಜಕೀಯ ಚಹರೆ,” ಎಂದೆಲ್ಲ ಬ್ರೇಕಿಂಗ್ ನ್ಯೂಸ್ ಕೊಡಲಾರಂಭಿಸಿದರು. ಅಷ್ಟಕ್ಕೇ ನಿಲ್ಲದ ಕೆಲವು ಮಾಧ್ಯಮಗಳು, ಮಗನನ್ನೇ ತಿದ್ದಲಾಗದ ತಂದೆ ರಾಜಕೀಯ ಮುಖಂಡತ್ವ ವಹಿಸಲಿಕ್ಕೆ ಅರ್ಹರೇ ಎಂಬ ನೈತಿಕ ಪ್ರಶ್ನೆಗಳನ್ನು ಎತ್ತಿದವು. ಈ ಮೂಲಕ, ಕಾಶ್ಮೀರವನ್ನು ವರದಿ ಮಾಡುವ ಒಂದು ಭಾರತೀಯ ಮಾರ್ಗವಿದೆ ಎಂಬುದು ಮತ್ತೊಮ್ಮೆ ಸಾಬೀತಾಯಿತು!

ತುಂಬಾ ಗೌರವಯುತವಾಗಿ ಗಿಲಾನಿ ಪದತ್ಯಾಗ ಮಾಡಿ ಅಧಿಕಾರ ಹಸ್ತಾಂತರ ಮಾಡಿದ್ದು, ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಹುರ್ರಿಯತ್ ತನ್ನ ನಿಲುವನ್ನು ವಿವರಿಸಿ ಹೇಳಿದ್ದು, ಇವೆಲ್ಲವೂ ಒಂದು ಪ್ರಮುಖ ಸುದ್ದಿಯಾಗದೆ ಜುನೈದ್ ಹಿಜಬುಲ್ ಮುಜಾಹಿದ್ದೀನ್ ಸೇರಿದ್ದನ್ನೇ ಒಂದು ಪ್ರಮುಖ ಸುದ್ದಿಯಾಗಿಸಿದ ಭಾರತೀಯ ಮಾಧ್ಯಮಗಳು, ಮಗನ ರಾಜಕೀಯ ಮಾರ್ಗ ಹೇಗೆ ತಂದೆಯ ರಾಜಕೀಯ ಮಾರ್ಗವನ್ನು ಅಳಿಯಲು ಸಾಧ್ಯ? ತಂದೆ ಮತ್ತು ಮಗನ ರಾಜಕೀಯ ಮಾರ್ಗ ಭಿನ್ನವಾಗಿರಲು ಸಾಧ್ಯವಿಲ್ಲವೇ? ತಂದೆ ಮತ್ತು ಮಗನ ರಾಜಕೀಯ ಮಾರ್ಗ ಭಿನ್ನವಾಗಿರುವ ಸಂದರ್ಭದಲ್ಲಿ ಅವರು ವೈಯಕ್ತಿಕ ಬದುಕಿನಲ್ಲಿ ಸಂಬಂಧ ಹೊಂದಿದವರು ಎನ್ನುವ ಕಾರಣಕ್ಕೆ ಅವರ ರಾಜಕೀಯ ನಿಲುವಿನಲ್ಲೂ ಒಂದು ಅಂತರಸಂಬಂಧ ಇರಲೇಬೇಕೇ? ಮಾಧ್ಯಮಗಳು ವಿವೇಚನೆಯ ಇಂಥ ಯಾವುದೇ ಪ್ರಶ್ನೆಗಳನ್ನು ಕೇಳಿಕೊಳ್ಳದೆಹೋಗಿದೆ.

ಇಂಥ ಪ್ರಶ್ನೆಗಳು ಗೈರು ಆಗಿರಲು ಭಾರತೀಯ ಮಾಧ್ಯಮದ, 'ತಂದೆಯಂತೆ ಮಗ ನೆಡೆದುಕೊಳ್ಳಬೇಕು', 'ತಂದೆಯ ನಿಲುವಿಗೆ ಮಗ ಬದ್ಧನಾಗಿರಬೇಕು' ರೀತಿಯ ಸಂಪ್ರದಾಯಸ್ಥ ನೋಟವೇ ಕಾರಣವಾಗಿದೆ ಎಂದರೆ ಸುಳ್ಳಾಗದು. ಇಲ್ಲವಾದಲ್ಲಿ ಮಗ, ಅದೂ ಇಪ್ಪತ್ತಾರು ವಯಸ್ಸಿನವ, ಪದವೀಧರ, ತನ್ನ ವೈಯಕ್ತಿಕ ಆಲೋಚನೆ ಹೊಂದಿದ್ದು ತನ್ನ ಆಲೋಚನೆಗೆ ಸರಿ ಎನ್ನಿಸುವ ಮಾರ್ಗ ಆಯ್ದುಕೊಂಡಿರುವ ಸಾಧ್ಯತೆ ಭಾರತೀಯ ಮಾಧ್ಯಮಕ್ಕೆ ಹೊಳೆಯುತ್ತಿತ್ತು.

ಒಬ್ಬ ಪದವೀಧರ ಹುಡುಗ ಯಾಕೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುತ್ತಾನೆ ಎಂಬ ಪ್ರಶ್ನೆಯನ್ನು ಭಾರತೀಯ ಮಾಧ್ಯಮ ಜುನೈದ್ ವಿಷಯದಲ್ಲಿ ಮಾತ್ರವಲ್ಲ, ಅವನಂಥ ಅನೇಕ ಸುಶಿಕ್ಷಿತರು ಶಸ್ತ್ರಾಸ್ತ್ರ ಕೈಗೆತ್ತಿಕೊಂಡಾಗ ಕೇಳಲಿಲ್ಲ. ಅಂಥ ಪ್ರಶ್ನೆ ಎತ್ತಿದಾಗ ಸುಮ್ಮನೆ, 'ಬ್ರೈನ್ ವಾಶ್,’ 'ಪಾಕಿಸ್ತಾನದ ಷಡ್ಯಂತ್ರ' ಎಂಬಂತಹ ಆಲಸಿ ವಿಶ್ಲೇಷಣೆ ನಡೆಸಿದೆ.

ಯಾವುದು ಆಲಸಿ ವಿಶ್ಲೇಷಣೆ ಎಂಬಂತೆ ಕಾಣಿಸುತ್ತದೆಯೋ ಅದು ಎಷ್ಟು ಆಲಸಿಯೋ ಅಷ್ಟೇ ಉದ್ದೇಶಪೂರ್ವಕ ಮತ್ತು ಪೂರ್ವನಿಯೋಜಿತ. ಯಾಕೆಂದರೆ, ಭಾರತೀಯ ಮಾಧ್ಯಮಗಳಿಗೆ ಕಾಶ್ಮೀರದ ಕುರಿತು ನಿಜ ಚಿತ್ರಣ ನೀಡುವುದಕ್ಕಿಂತ ಹೆಚ್ಚಾಗಿ ಭಾರತೀಯ ಪ್ರಭುತ್ವ, ಭಾರತೀಯ ಜನರಲ್ಲಿ ಕಾಶ್ಮೀರದ ಕುರಿತು ಮೂಡಿಸಲು ಬಯಸುವ ಚಿತ್ರಣ ನೀಡುವ ಅಗತ್ಯ ಇದೆ. ಇಲ್ಲವಾದಲ್ಲಿ ಹುರ್ರಿಯತ್‌ನ ಹೊಸ ನಾಯಕ ಸ್ಪಷ್ಟಪಡಿಸಿದ ತಮ್ಮ ನಿಲುವನ್ನು ಒಂದು ಸುದ್ದಿಯಾಗಿಸದ ಭಾರತೀಯ ಮಾಧ್ಯಮ, ಜುನೈದ್‌ನ ರಾಜಕೀಯ ಮಾರ್ಗವನ್ನು ಎಳೆದುತಂದು ಆತನ ತಂದೆಯ ರಾಜಕೀಯ ಮಾರ್ಗಕ್ಕೆ ಗಂಟು ಹಾಕಿ ಇಲ್ಲದ ಸಂಬಂಧ ಕಲ್ಪಿಸಿಕೊಂಡು ಅದನ್ನೇ ಪುರಾವೆ ಎನ್ನುತ್ತ ಹುರ್ರಿಯತ್ತಿನ ರಾಜಕೀಯ ನಿಲುವಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿರಲಿಲ್ಲ.

ಕಾಶ್ಮೀರದ ಪ್ರತ್ಯೇಕತಾವಾದಿಗಳು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಇತರರ ಮಕ್ಕಳನ್ನು ಬೀದಿಗಿಳಿಸಿ ರಾಜಕೀಯ ನಡೆಸುತ್ತಾರೆ ಎಂಬ ಆರೋಪಗಳನ್ನು ಈತನಕ ಮಾಡುತ್ತ ಬಂದಿದ್ದ ಭಾರತೀಯ ಪ್ರಭುತ್ವ ಮತ್ತು ಭಾರತೀಯ ಮಾಧ್ಯಮಕ್ಕೆ ಜುನೈದ್ ಉಗ್ರಗಾಮಿ ಸಂಘಟನೆ ಸೇರಿದ್ದು ಒಂದು ಸಂಕಟ ತಂದಿತು. ಯಾಕೆಂದರೆ, ಪ್ರತ್ಯೇಕತಾವಾದಿಗಳ ರಾಜಕೀಯಕ್ಕೆ ಮಸಿ ಬಳೆಯುವ ಒಂದು ಮಾರ್ಗ ಅಲ್ಲಿಗೆ ತಪ್ಪಿಹೋಯಿತು. ಆದರೆ, ತಕ್ಷಣ ಎಚ್ಚೆತ್ತುಕೊಂಡ ಪ್ರಭುತ್ವ ಮತ್ತು ಮಾಧ್ಯಮ ಜುನೈದ್ ಉಗ್ರಗಾಮಿ ಸಂಘಟನೆ ಸೇರಿದ್ದೇ ಹಿಜಬುಲ್ ಮುಜಾಹಿದ್ದೀನ್ ಮತ್ತು ಹುರ್ರಿಯತಿಗೆ ನಂಟಿದೆ ಎಂಬ ಸುಳ್ಳು ಹೆಣೆಯಿತು ಮತ್ತು ಅದನ್ನು ಜೋರಾಗಿ ಪ್ರಚಾರ ಮಾಡಿತು. ಅದು ಮಾಡದೆ ಹೋದಲ್ಲಿ, ಹುರ್ರಿಯತ್ತಿನ ನಿಲುವು ಮತ್ತು ಕಾಶ್ಮೀರದ ಸ್ಥಿತಿಯ ಸಂಕೀರ್ಣತೆ ಜನರಿಗೆ ತಿಳಿಯುವ ಅಪಾಯ ಇದೆ; ಅಂಥ ಸಾಧ್ಯತೆಗಳನ್ನು ಇಲ್ಲವಾಗಿಸಲು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳ ಕುರಿತು ಒಂದು ನೆಗೆಟಿವ್ ಅಭಿಪ್ರಾಯ ಜನರಲ್ಲಿ ಮೂಡಿಸಲು ಬಹಳಷ್ಟು ವರ್ಷಗಳಿಂದ ಭಾರತೀಯ ಪ್ರಭುತ್ವ ಮತ್ತು ಮಾಧ್ಯಮ ಈ ಬಗೆಯ ವರದಿಗಾರಿಕೆ, ಪ್ರಚಾರದಲ್ಲಿ ತೊಡಗಿದೆ.

ಇದನ್ನೂ ಓದಿ : ರಾವಿ ತೀರ | ಜಮ್ಮು-ಕಾಶ್ಮೀರದಲ್ಲಿ ಅತ್ಯಾಚಾರ ಆರೋಪಿಗಳ ರಕ್ಷಣೆಗೆ ನಿಂತ ಧರ್ಮ!

ಕಾಶ್ಮೀರಕ್ಕೆ ಸ್ವಾತಂತ್ರ ಹೋರಾಟಗಾರ, ಭಾರತಕ್ಕೆ ಆತಂಕವಾದಿಯಾದ ಬುರ್ಹಾನ್ ವಾನಿಯನ್ನು ೨೦೧೬ನೇ ಇಸವಿಯಲ್ಲಿ ಭಾರತದ ಪ್ರಭುತ್ವ ಕೊಂದ ಬಳಿಕ ಇಡೀ ಕಾಶ್ಮೀರ ಪ್ರತಿಭಟನೆಗಿಳಿಯಿತು. ತಿಂಗಳುಗಟ್ಟಲೆ ಪ್ರತಿರೋಧ ವ್ಯಕ್ತಪಡಿಸಿತು. ಕಣಿವೆ ಪ್ರಕ್ಷುಬ್ಧಗೊಂಡಿತ್ತು. ಆ ಸಮಯದಲ್ಲಿ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡ ನನಗಾದ ಒಂದು ಅನುಭವವನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ನಾನು ಮನೆಯಿಂದ ಹೊರಡುವ ಹೊತ್ತಿಗಾಗಲೇ ಸೈನ್ಯದ ಗುಂಡಿಗೆ, ಪೆಲ್ಲೆಟ್ಟಿಗೆ ಐವತ್ತಕ್ಕೂ ಹೆಚ್ಚು ಕಾಶ್ಮೀರಿಗಳು ಪ್ರಾಣ ಕಳೆದುಕೊಂಡಿದ್ದರು; ಅಂಥ ಭೀಕರ ಸ್ಥಿತಿ. ಜಮ್ಮು ಪ್ರವೇಶಿಸಿದ ದಿನದಿಂದ ನನಗೆ ಪ್ರತಿನಿತ್ಯವೂ ಒಂದು ಫೋನ್ ಕರೆ ಖಂಡಿತವಾಗಿ ಬರುತಿತ್ತು; ಅದು ನನ್ನ ಅಮ್ಮನದ್ದು. "ಊಟ ಆಯ್ತಾ?", "ತಿಂಡಿ ಆಯ್ತಾ?" ಇಂಥ ಪ್ರಶ್ನೆಗಳನ್ನು ಕೇಳುತ್ತಿದ್ದ ಅಮ್ಮನಿಗೆ ರಾಜಕೀಯ, ಪ್ರಕ್ಷುಬ್ಧತೆ ಇವೆಲ್ಲ ಅರ್ಥವಾಗದ್ದು. ಅಮ್ಮನ ಕರೆ ಬಿಟ್ಟರೆ ನನಗೆ ಬೇರೆ ಯಾವ ಕರೆಗಳೂ ಬರುತ್ತಿರಲಿಲ್ಲ. ಆದರೆ, ನಾನಿಲ್ಲಿ ಇರುವ ಸಂದರ್ಭದ್ದಲ್ಲೇ ಉರಿ ದಾಳಿ ನಡೆಯಿತು ಮತ್ತು ಅದರಲ್ಲಿ ಹದಿನೆಂಟು ಸೈನಿಕರು ಮೃತರಾದರು. ಅದರ ಬೆನ್ನಿಗೇ ಶುರುವಾಯಿತು ಸ್ನೇಹಿತರೆಲ್ಲರ ಕರೆ ಬರುವುದು; "ಎಲ್ಲಿದ್ದಿ?", "ಹೇಗಿದ್ದಿ?", "ಸಾಕು, ಈಗ ವಾಪಸ್ ಬಾ," ಇತ್ಯಾದಿ ಇತ್ಯಾದಿ. ಐವತ್ತು ಮಂದಿ ಕಾಶ್ಮೀರಿಗಳನ್ನು ಬಲಿ ತೆಗೆದುಕೊಂಡಿದ್ದ ಪ್ರಕ್ಷುಬ್ದ ನೆಲಕ್ಕೆ ನಾನು ಹೋದಾಗ ನನ್ನ ಯಾವ ಸ್ನೇಹಿತರಿಗೂ ನಾನು ಅಪಾಯಕ್ಕೆ ಸಮೀಪ ಹೋಗುತ್ತಿದ್ದೇನೆ ಎಂದು ಅನ್ನಿಸಲಿಲ್ಲ. ಆದರೆ, ಉರಿ ದಾಳಿ ಅವರೆಲ್ಲರನ್ನು ಕದಲಿಸಿತು. ನಾನು ಅಪಾಯಕ್ಕೆ ಸಮೀಪ ಇದ್ದು, ನಾನೂ ಅಪಾಯಕ್ಕೆ ಒಳಗಾಗಬಹುದು ಎಂಬ ಭೀತಿ ಅವರನ್ನು ಕಾಡಿತು. ಆಗ ನಾನು ಕೇಳಿಕೊಂಡ ಪ್ರಶ್ನೆ ಇಷ್ಟೇ: "ಐವತ್ತಕ್ಕೂ ಹೆಚ್ಚು ಮಂದಿ ಕಾಶ್ಮೀರಿಗಳು ಸತ್ತಾಗ ಯಾಕೆ ಇವರಿಗೆಲ್ಲ ಇಲ್ಲಿನ ಪ್ರಕ್ಷುಬ್ಧತೆಯ ಕಾವು ತಿಳಿಯಲಿಲ್ಲ?" ಉತ್ತರ ತಿಳಿಯುವುದು ಕಷ್ಟವಿರಲಿಲ್ಲ. ಯಾಕೆಂದರೆ, ಮಾಧ್ಯಮ, ಸೈನ್ಯದ ಕೈಯಿಂದ ಆದ ಐವತ್ತು ಮಂದಿ ಕಾಶ್ಮೀರಿಗಳ ಹತ್ಯೆಯನ್ನು ವರದಿಯೇ ಮಾಡಿರಲಿಲ್ಲ ಅಥವಾ ತೀರಾ ಕ್ಷುಲ್ಲಕ ಎಂಬಂತೆ ವರದಿ ಮಾಡಲಾಗಿತ್ತು. ಅದೇ ಉರಿ ದಾಳಿಯಲ್ಲಿ ಸೈನ್ಯದ ಹದಿನೆಂಟು ಮಂದಿಯ ಹತ್ಯೆಯಾದಾಗ ದೇಶವೇ ಆಪತ್ತಿನಲ್ಲಿದೆ ಎಂಬಂತೆ ಉನ್ಮತ್ತವಾಗಿ ವರದಿ ಮಾಡಿತು. ಆ ವರದಿ ಮಾಡಿದ ಬಗೆಗೆ ಸ್ನೇಹಿತರೆಲ್ಲ ಹೆದರಿಕೊಂಡು ನಾನು ಅಪಾಯದಲ್ಲಿದ್ದೇನೆ ಎಂದು ಭಾವಿಸಿದರು. ಆ ಹದಿನೆಂಟು ಸೈನಿಕರ ಜೀವಕ್ಕೆ ಬೆಲೆ ಇರಲಿಲ್ಲ ಎಂದಲ್ಲ. ಆದರೆ, ಐವತ್ತಕ್ಕೂ ಮಿಕ್ಕ ಅಮಾಯಕ ಕಾಶ್ಮೀರಿಗಳ ಜೀವಕ್ಕೆ ಬೆಲೆ ಇಲ್ಲವೇ ಎಂಬುದು ಪ್ರಶ್ನೆ. ಇದು ವರದಿಗಾರಿಕೆಯ ರಾಜಕೀಯ! ಇದು ಕಾಶ್ಮೀರವನ್ನು ವರದಿ ಮಾಡುವ ಭಾರತೀಯ ಮಾರ್ಗ!

ಸೆಹ್ರಾಯಿ ಅವರ ದಿಟ್ಟ, ನೇರ, ಸ್ಪಷ್ಟ ನಿಲುವುಗಳನ್ನು ವರದಿ ಮಾಡುವುದು ಬಿಟ್ಟು ಜುನೈದ್ ಮಾರ್ಗವನ್ನು ಎಳೆದು ತಂದು ಸೆಹ್ರಾಯಿ ಅವರನ್ನು ದುಷ್ಕರ್ಮಿ ಎಂಬಂತೆ ಚಿತ್ರಿಸುವುದು, ಭಾರತೀಯ ಮಾಧ್ಯಮ ಈ ತನಕ ನೆಡೆಸಿಕೊಂಡು ಬಂದ ಸಂಪ್ರದಾಯದ ಮುಂದುವರಿಕೆ ಅಷ್ಟೆ.

ಚಿತ್ರ: ಹುರ್ರಿಯತ್ ಮಾಜಿ ಅಧ್ಯಕ್ಷ ಸಯ್ಯದ್ ಅಲಿ ಗಿಲಾನಿ ಮತ್ತು ಹಾಲಿ ಅಧ್ಯಕ್ಷ ಅಶ್ರಫ್ ಸೆಹ್ರಾಯಿ

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More