ಹಗೇವು | ಮತ್ತೆ ಹಾಡಬೇಕಿದೆ; ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ…

ಒಂದು ಕಾಡಿನ ಮರ, ಒಂದು ಹಣ್ಣು, ಹನಿ ನೀರು ಕೂಡ ಎಷ್ಟೊಂದು ವರ್ಷಗಳ ನಾಗರಿಕತೆಯ ಪ್ರಯೋಗ, ಪರೀಕ್ಷೆ ಮೂಲಕ ನಮಗೆ ಆಹಾರವಾಗಿ ಒದಗಿಬಂದಿದೆ ಅಲ್ಲವೇ? ಮನುಷ್ಯನ ಅಂತಹ ಹುಡುಕಾಟ, ಕುತೂಹಲ ಮತ್ತು ನಿರಂತರ ಪ್ರಯೋಗದ ಫಲವೇ ನಮ್ಮ ಇಂದಿನ ಆಹಾರ ಬೆಳೆಗಳು ಕೂಡ

ಮೊನ್ನೆ ಹಳ್ಳಿಯಿಂದ ಅವ್ವ ಬಂದಿದ್ದಳು. ಶಿವಮೊಗ್ಗದ ಬಿರುಬಿಸಿಲ ಮಧ್ಯಾಹ್ನ ತಣ್ಣಗೆ ಕುಡಿಯಲು ಹೆಸರು ಕಾಳಿನ ಪಾನಕ ಮಾಡಲು ಹೇಳಿದೆ. ವರ್ಷಗಳ ಬಳಿಕ ಹೆಸರುಕಾಳಿನ ಪಾನಕ ಕುಡಿದಾಗ ದೇಹಕ್ಕಿಂತ, ಮನಸ್ಸಿಗಾದ ಸಮಾಧಾನ ಬೇರೆಯೇ. ಪೇಟೆಯ ಅಂಗಡಿ-ಮುಂಗಟ್ಟುಗಳ ಹಣ್ಣುಹಂಪಲುಗಳಲ್ಲಿ ಸಿಗದ ಏನೋ ಒಂದು ನೆಮ್ಮದಿ ಇಂತಹ ಹಳ್ಳಿಯ ದಿಢೀರ್ ತಯಾರಿಯ ಊಟೋಪಚಾರಗಳಲ್ಲಿ ಸಿಗುವುದು ವಿಶೇಷ.

ಕಲ್ಲಂಗಡಿ, ಕರಬೂಜ, ಕಿತ್ತಳೆ, ಸೇಬು ಮುಂತಾದ ಹಣ್ಣುಗಳನ್ನು ನಿತ್ಯ ಕಾಣದ ಮಲೆನಾಡಿನ ಹಳ್ಳಿಯ ಮಂದಿ ಮನೆಯ ಗದ್ದೆ, ಹಿತ್ತಿಲು, ಹಿತ್ತಿಲಾಚೆಯ ಕಾಡು-ಬನಗಳಲ್ಲಿ ಬೆಳೆಯುವ ಕಾಳು-ಕಡ್ಡಿಗಳಿಂದಲೇ ಬೇಸಿಗೆಯ ದಾಹವನ್ನಷ್ಟೇ ಅಲ್ಲ, ದೈಹಿಕ ರೋಗಭಾದೆಗಳನ್ನೂ ಗೆಲ್ಲುವ ಉಪಾಯಗಳನ್ನು ಕಂಡುಕೊಂಡಿದ್ದರು. ಹಾಗಾಗಿ, ಬೇಸಿಗೆ ಬಂತೆಂದರೆ, ಮಲೆನಾಡಿನ ಮಧ್ಯಾಹ್ನಗಳಲ್ಲಿ ಹೆಸರು ಪಾನಕ, ಕೌರಿ ಪಾನಕ, ಅತ್ತಿ ನೀರು, ಸೊಗದೆ ಬೇರಿನ ಪಾನಕಗಳು ತಂಪಾಗಿಸುತ್ತಿದ್ದವು.

ಹಸಿ ಹೆಸರುಕಾಳು ನೆನೆಸಿಟ್ಟು, ಹೊರಳುಕಲ್ಲಿನಲ್ಲಿ ರುಬ್ಬಿ, ನೀರು, ಬೆಲ್ಲ ಸೇರಿಸಿ ಮಾಡುವ ಪಾನಕ ರುಚಿಯೊಂದಿಗೆ, ಬೇಸಿಗೆಯ ನೀರಡಿಕೆಯನ್ನೂ ನೀಗಿಸಿ ದೇಹಕ್ಕೆ ತಂಪೆರೆಯಬಲ್ಲದು. ಹಾಗೇ ಅತ್ತಿಮರದಿಂದ ಸಿಗುತ್ತಿದ್ದ ತಿಳಿನೀರು ಕೂಡ ಔಷಧೀಯ ಗುಣಗಳೊಂದಿಗೆ ದೇಹವನ್ನು ತಂಪಾಗಿಸುವ ಅಪರೂಪದ ದ್ರವ. ಬೇಸಿಗೆಯ ಒಕ್ಕಲು ಕಣ ಮತ್ತು ಆಲೆಮನೆಯ ಹೊತ್ತಲ್ಲಿ ಮಲೆನಾಡಿಗರು ಒಣಹುಲ್ಲು ಮತ್ತು ಬೆಂಕಿಬಿಸಿಲ ನಡುವೆ ನಿದ್ರೆಬಿಟ್ಟು ದುಡಿಯುತ್ತಾರೆ. ಆಗ ಸಹಜವಾಗೇ ದೇಹದ ಉಷ್ಣ ಏರಿ, ಪಿತ್ತ, ತಲೆಸುತ್ತು ಸಾಮಾನ್ಯ. ಅಂತಹ ಹೊತ್ತಲ್ಲಿ ಅವರು ಮೊರೆಹೋಗುತ್ತಿದ್ದುದು ಅತ್ತಿಮರಕ್ಕೆ.

ಅತ್ತಿಮರದ ಕಾಂಡದ ಮೇಲೆ ಒಂದು ಕಡೆ ಕತ್ತಿಯಿಂದ ಕೆತ್ತಿ, ತುಸು ಆಳದ ಕಚ್ಚು ಮಾಡಿ, ಕಚ್ಚಿನ ಇಳಿಜಾರಿನಲ್ಲಿ ಬರುವ ನೀರು ಸರಾಗ ಹರಿದುಬರುವಂತೆ ಮಾಡಿ, ಮಡಿಕೆ ಕಟ್ಟುತ್ತಿದ್ದರು. ರಾತ್ರಿ ಕಟ್ಟಿದ ಮಡಿಕೆಯಲ್ಲಿ ಬೆಳಗಿನ ಜಾವಕ್ಕೆ ನೀರು ತುಂಬಿರುತ್ತಿತ್ತು. ಆ ನೀರನ್ನು ಬೆಳಗಿನ ಉಪಹಾರಕ್ಕೆ ಮುನ್ನ ಕುಡಿಯಬೇಕಿತ್ತು. ವಾರದಲ್ಲಿ ಒಂದೆರಡು ಲೋಟದಷ್ಟು ಆ ನೀರು ಕುಡಿದರೂ, ಎಂತಹ ಉಷ್ಣವಿದ್ದರೂ ನೀಗಿ ದೇಹವನ್ನು ತಂಪಾಗಿಸುತ್ತಿತ್ತು.

ಇನ್ನು ಕೌರಿ ಎಂಬ ಕುರುಚಲು ಗಿಡದ ಮಹಿಮೆಯಂತೂ ಅಪಾರ. ಅದರ ತೊಪ್ಪೆಯ ಒಂದು ತುಂಡನ್ನು ರಾತ್ರಿ ಒಂದು ಲೋಟ ನೀರಲ್ಲಿ ನೆನೆಸಿಟ್ಟು, ಮಾರನೇ ದಿನ ಬೆಳಗ್ಗೆ ಎದ್ದವರೇ ಕುಡಿದರೆ ಕೇವಲ ಉಷ್ಣಬಾಧೆಯಷ್ಟೇ ಅಲ್ಲದೆ, ಮಾನಸಿಕ ಒತ್ತಡ ಕೂಡ ದೂರಾಗುತ್ತಿತ್ತು. ದಿನವಿಡೀ ದುಡಿಮೆಯ ದಣಿವಿನ ನಡುವೆಯೂ ಮನಸ್ಸು ಚೇತೋಹಾರಿ ಆಗಿರುತ್ತಿತ್ತು.

ಇದೆಲ್ಲ ಮನುಷ್ಯ ಪ್ರಯತ್ನವೂ ಸೇರಿ ಕಂಡುಕೊಂಡ ಪರಿಹಾರೋಪಾಯಗಳು. ಆದರೆ, ಅಂತಹ ಯಾವ ಮನುಷ್ಯ ಪ್ರಯತ್ನ ಇಲ್ಲದೆಯೂ ಮಲೆನಾಡಿನ ಬಿರುಬಿಸಿಲಿನ ಶಮನದ ಹಲವು ಉಪಾಯಗಳನ್ನು ಪ್ರಕೃತಿಯೇ ಕಂಡುಕೊಂಡಿದೆ. ಅದರಲ್ಲಿ ಕೆಲವನ್ನು ಮನುಷ್ಯ ಎಂಬ ‘ಮೂರ್ಖಜೀವಿ’ಗೂ (ಅಂತಹ ಯಾವ ಒಳಿತನ್ನೂ ತನ್ನೊಳಗೇ ಕಂಡುಕೊಳ್ಳಲಾಗದ ಕಾರಣಕ್ಕೆ!) ಕರುಣಿಸಿದೆ. ಅದು ಕಾಡುಹಣ್ಣುಗಳ ರೂಪದಲ್ಲಿರಬಹುದು, ಗಿಡಮರ ಮೂಲದ ನೀರಿನ ಮೂಲಕ ಇರಬಹುದು; ಕಾಡು ತನ್ನೊಳಗಿನ, ತನ್ನ ಆಶ್ರಯಿಸಿ ಬರುವ ಜೀವಿಗಳಿಗೆ ಬಗೆಬಗೆಯ ಅಭಯ ಒದಗಿಸುತ್ತಲೇ ಬಂದಿದೆ.

ಕಾಡಿನ ನಡುವೆ ದಣಿವಾಗಿ ಬಳಲಿದವರಿಗೆ ಅಲ್ಲೊಂದು ಕುಮಸಮಟ್ಟಿ ಕಾಣಬಹುದು. ಆ ಪೊದೆಯಲ್ಲಿ ಒಂದಿಷ್ಟು ನೇರವಾದ ಒಂದು ರಟ್ಟೆ ದಪ್ಪದ ಕೋಲು ಕಡಿದು ಲಂಬವಾಗಿ ಮೇಲೆತ್ತಿ ಹಿಡಿದರೆ ಹನಿಹನಿ ನೀರು ತಾನಾಗೇ ತೊಟ್ಟಿಕ್ಕತೊಡಗುತ್ತದೆ. ಒಂದು ಮಾರುದ್ದದ ಅಂತಹ ಕೋಲಲ್ಲಿ ಕನಿಷ್ಠ ಅರ್ಧ ಲೀಟರ್ ನೀರಿಗೆ ಬರವಿಲ್ಲ! ಹಾಗೆ ಮತ್ತಿಮರದ ಕೊಟ್ಟು (ಡುಬ್ಬ) ಕೂಡ ಅನರ್ಘ್ಯ ನೀರಿನ ಸೆಲೆ! ಉಬ್ಬಿ ಹೊರಚಾಚಿದ ಅಂತಹ ಕೊಟ್ಟಿನ ತುದಿ ಕಡಿದರೆ ನೀರು ಉಕ್ಕುವುದು.

ಹಾಗೇ, ಕಾಡಿನ ಹಣ್ಣುಗಳ ಲೋಕವಂತೂ ಇನ್ನಷ್ಟು ವೈವಿಧ್ಯಮಯ. ಬೇಸಿಗೆಯ ಹೊತ್ತಿಗೆ ಮಲೆನಾಡಿನ ಕಾಡುಗಳಲ್ಲಿ ಥರಾವರಿ ಹಣ್ಣುಗಳ ಮೇಳವೇ ನಡೆಯುತ್ತದೆ. ಅದು ಸಂಪಿಗೆ ಹಣ್ಣಿರಬಹುದು, ಕವಳಿ, ಬೆಣ್ಣೆ (ಮುಳ್ಳುಹಣ್ಣು) ಹಣ್ಣು, ದಡಸಲು ಹಣ್ಣು, ತುಮರಿಹಣ್ಣು, ಕಾಡುಮಾವು, ಹೀಗೆ ನೂರಾರು ಹಣ್ಣುಗಳು ಮನುಷ್ಯರೂ ಸೇರಿ ಖಗಮೃಗಗಳ ಕಾಡಿನ ಮಕ್ಕಳ ಸಂಸಾರವನ್ನು ಪೊರೆಯುತ್ತವೆ. ನಾವು ಚಿಕ್ಕವರಿದ್ದಾಗ, ಬೇಸಿಗೆಯ ಶಾಲೆಯ ರಜೆಯಲ್ಲಿ ನಿತ್ಯ ಬೆಳಗಿನ ತಿಂಡಿ ಮುಗಿಸುತ್ತಲೇ ಓಡುತ್ತಿದ್ದುದು ಕಾಡಿನ ಹಣ್ಣಿನ ಮರಗಳ ಕಡೆಗೇ. ಕೈಯಲ್ಲಿ ಮುತ್ತುಗದ ಎಲೆಯ ಕೊಟ್ಟೆ ಹಿಡಿದುಕೊಂಡು ಮಕ್ಕಳ ಸೈನ್ಯ ಹೊರಟರೆ, ಮನೆಯಂಚಿನ ದಡಸಲ, ತಮರಿ ಮರಗಳು, ಕವಳಿ ಮಟ್ಟಿಗಳು ಬರಿದಾಗುತ್ತಿದ್ದವು. ಬಹುತೇಕ ಮಧ್ಯಾಹ್ನ ಊಟ ನಮಗೆ ಈ ವನರಾಶಿಯೇ.

ಇನ್ನು, ಕೆರೆ-ಹೊಳೆಗಳೂ ನಮ್ಮ ಬಾಯಿಚಪಲ ತೀರಿಸುತ್ತಿದ್ದವು. ಕೆರೆಯ ತಾವರೆ ಬೀಜ, ನಾವೆಲ್ಲ ಕೆರೆಗಡ್ಡೆ ಎಂದು ಕರೆಯುತ್ತಿದ್ದ ನೈದಿಲೆಯ ಗಡ್ಡೆಗಳು, ಚಿಮಟಿಮುಳ್ಳು ಎಂಬ ಮುಳ್ಳಿನ ಕಾಯಿಯ ಬೀಜ, ಹೀಗೆ ಬಗೆಬಗೆಯ ತಿನಿಸುಗಳು ಕೆರೆಯಂಗಳದಲ್ಲೂ ಸಿಗುತ್ತಿದ್ದವು. ಅದರಲ್ಲೂ, ಬೇಸಿಗೆಯ ತುದಿಯಲ್ಲಿ ಕೆರೆಯ ನೀರು ಬತ್ತಿದ ವೇಳೆ ಕೆರೆಗೋಡನ್ನು ಗದ್ದೆಗಳಿಗೆ ಸಾಗಿಸುವಾಗ ಆ ಮೆಕ್ಕಲುಮಣ್ಣಿನಲ್ಲಿ ಸಿಗುತ್ತಿದ್ದ ಒಣ ತಾವರೆಬೀಜಗಳನ್ನು ಹುಡುಕಿ-ಹುಡುಕಿ ತಿನ್ನುವುದೇ ಒಂದು ವಿಚಿತ್ರ ಮೋಜು.

ಊರೊಳಗಿನ ಮಾವು, ಗೋಡಂಬಿಗಳ ರುಚಿಯನ್ನು ನಿವಾಳಿಸಿ ಬಿಸಾಕುವಂತಹ ರುಚಿಯ, ಒಗರಿನ ಈ ಕಾಡುಹಣ್ಣುಗಳ ಜಗತ್ತೇ ವಿಸ್ಮಯ. ಯಾವ ಹಣ್ಣಿನ ಒಳಗೆ ಯಾವ ಮಾಯೆಯ ರುಚಿಯೋ, ಯಾವ ಮೋಹಕ ಒಗರೋ. ಈ ರುಚಿ, ಒಗರು, ರಸಗಳ ಹೊರತಾಗಿಯೂ ಅವುಗಳ ಒಳಗಿನ ಜೀವಪೊರೆಯ ಗುಣಗಳು ಏನೇನೋ! ಯಾವ ಹಣ್ಣಿನ ಒಳಗೆ ಯಾವ ಔಷಧೀಯ ಗುಣವಿದೆಯೋ, ಯಾವ ಗಡ್ಡೆಯ ಒಳಗೆ ಯಾವ ಜೀವಶಕ್ತಿಯ ಬಲವಿದೆಯೋ? ಬಲ್ಲವರಿಲ್ಲ.

ಆದರೆ, ಅನುಕೂಲ ಮತ್ತು ಲಾಭದ ಮೇಲೆಯೇ ಎಲ್ಲವುಗಳ ಮೌಲ್ಯ ನಿರ್ಧರಿಸುವ ಆಧುನಿಕ ಮನಸ್ಸು, ಇಂತಹ ಕಾಡುಹಣ್ಣುಗಳನ್ನು ಈಗ ಮರೆತಿದೆ. ಪೇಟೆಯ ಹಣ್ಣಿನಂಗಡಿ ಎಂಬ ತಾಜಾ ವಿಷದ ಆಕರ್ಷಕ ರೂಪಕ್ಕೆ ನಾವು ಮನಸೋತಿದ್ದೇವೆ. ಅದು ನಮ್ಮ ಓಟದ ಬದುಕಿನ ನಗರದ ನೆಲೆಗೆ ಅನಿವಾರ್ಯವೂ ಆಗಿದೆ. ಈಗ ಪೇಟೆಯಲ್ಲಷ್ಟೇ ಅಲ್ಲ, ಹಳ್ಳಿಯಲ್ಲೂ ಕಲ್ಲಂಗಡಿ, ಕರಬೂಜ, ಮೂಸಂಬಿ, ಕಿತ್ತಳೆಗಳ ಕಾಲವೇ. ಅಲ್ಲಿನ ಮಕ್ಕಳಿಗೂ ಕವಳೆ, ದಡಸಲು, ಪರಿಗೆ, ಸಂಪಿಗೆ ಹಣ್ಣುಗಳು ಕಣ್ಣೆದರು ಕಂಡರೂ ರುಚಿ ನೋಡುವ ಉತ್ಸಾಹವೂ ಇಲ್ಲ, ಆಸಕ್ತಿಯೂ ಇಲ್ಲ. ಪೇಟೆ ತಿನಿಸುಗಳಿಗೆ ಒಗ್ಗಿರುವ ನಾಲಿಗೆಗೆ ಕಾಡಹಣ್ಣುಗಳು ರೋಚಕ ಎನಿಸುತ್ತಿಲ್ಲ.

ಆದರೆ, ಇದು ಕೇವಲ ರುಚಿಯ, ಮೋಜಿನ ಸಂಗತಿಯಷ್ಟೇ ಅಲ್ಲವಲ್ಲ? ಒಂದು ಕಾಡಿನ ಮರ, ಒಂದು ಹಣ್ಣು, ಒಂದು ಕಾಯಿ, ಹನಿ ನೀರು ಕೂಡ ಎಷ್ಟೊಂದು ವರ್ಷಗಳ ನಾಗರಿಕತೆಯ ಪ್ರಯೋಗ, ಪರೀಕ್ಷೆಗಳ ಮೂಲಕ ನಮಗೆ ಆಹಾರವಾಗಿ ಒದಗಿಬಂದಿದೆ ಅಲ್ಲವೇ? ಮನುಷ್ಯನ ಅಂತಹ ಹುಡುಕಾಟ, ಕುತೂಹಲ ಮತ್ತು ನಿರಂತರ ಪ್ರಯೋಗಗಳ ಫಲವೇ ನಮ್ಮ ಇಂದಿನ ಆಹಾರ ಬೆಳೆಗಳು ಕೂಡ. ಹಾಗೇ, ಈ ಕಾಡಿನ ಹಣ್ಣುಗಳಲ್ಲೂ ಜೀವಗಳ ಪೊರೆಯುವ ಯಾವೆಲ್ಲ ಗುಣಗಳಿವೆಯೋ? ನಮ್ಮ ವಿಜ್ಞಾನ ಜಗತ್ತು ಇಂತಹ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದು ವಿರಳ. ಒಂದು ವೇಳೆ, ಅಲ್ಲೊಂದು ಇಲ್ಲೊಂದು ಸಂಶೋಧನೆಗಳು ನಡೆದಿದ್ದರೂ ಅವು ಯಾರಿಗೆ ತಲುಪಬೇಕೋ ಅವರಿಗೆ ತಲುಪದೆ ಸೆಮಿನಾರು ಹಾಲ್‌ಗಳಲ್ಲೇ ಸಮಾಧಿಯಾದ ಉದಾಹರಣೆಗಳೇ ಹೆಚ್ಚು.

ಇದನ್ನೂ ಓದಿ : ಹಗೇವು | ತೇಜಸ್ವಿ ಜೊತೆ ಮೂರು ತಾಸಿನ ಮಾತು ಮತ್ತು ಹಿಡಿತಕ್ಕೆ ಸಿಗದ ಕಾಲದ ಓಟ

ಕಾಡಿನ ಮೇಲೆ ತಲೆಮಾರುಗಳ ಬಳಿಕವೂ ಪ್ರೀತಿ ಹುಟ್ಟಬೇಕೆಂದರೆ, ಆಗಬೇಕಿರುವುದು ಇಂತಹ ಹಣ್ಣುಹಂಪಲುಗಳ ಮಹತ್ವವನ್ನು ತಲುಪಿಸುವ ಕಾರ್ಯ. ಅದು ವೈಜ್ಞಾನಿಕ ಮಾಹಿತಿಯೊಂದಿಗೆ ನಡೆದರೆ, ಎಲ್ಲವನ್ನೂ ಅಳೆದು, ತೂಗಿ ವಿಶ್ಲೇಷಿಸಿ ಒಪ್ಪುವ ಹೊಸ ತಲೆಮಾರುಗಳಿಗೆ ಬೇಗ ಅರ್ಥವಾದೀತು. ಅದಿಲ್ಲದೆಯೂ, ಬೇಸಿಗೆ ಶಿಬಿರಗಳ ಹೊತ್ತಲ್ಲಿ, ಅಂತಹ ಹಣ್ಣು-ಕಾಯಿ-ಗಡ್ಡೆಗಳ ಪರಿಚಯ ಮಾಡಿಸುವ ಕಾರ್ಯವಾದರೂ ಕೆಲಮಟ್ಟಿಗೆ ಎಳೆಯರಲ್ಲಿ ಕಾಡಿನ ಪ್ರೀತಿ ಹುಟ್ಟಬಹುದು.

ಏಕೆಂದರೆ, ಕಾಡೆಂದರೆ ಮನುಷ್ಯನ ಲಾಭ-ಅನುಕೂಲಗಳನ್ನೂ ಮೀರಿದ ಒಂದು ವಿದ್ಯಮಾನ. ಹಿರಿಯರು ಕಾಡಿನ ಮರದಲ್ಲಿ, ಹರಿವ ನೀರಲ್ಲೂ ದೇವರನ್ನು ಕಂಡದ್ದು ಅದಕ್ಕೇ. ಪೊರೆವ ಕಾಡಿನ ಕುರಿತು, ‘ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ...’ ಎಂದು ಹಾಡಿದ್ದು. ಈಗ, ಮನುಕುಲದ ಒಳಿತಿಗಾಗಿ ಮತ್ತೆ ಆ ಹಾಡು ಹಾಡಲೇಬೇಕಿದೆ.

ಕಾಶ್ಮೀರದಿಂದ | ಷರೀಫರ ಪತನಕ್ಕೆ ನ್ಯಾಯಾಂಗದ ಬದ್ಧತೆ ಕಾರಣವೋ ಅಥವಾ ಮಿಲಿಟರಿ?
ಶತಪಥ | ಭಾಗ್ಯಾದ ಬಳೆಗಾರ ಬಳೆ ತೊಡಿಸಿದ ಕೈಗಳು
ಇಲಾಜು | ಸುದ್ದಿ ಆಗುತ್ತಲೇ ಇರುವ ‘ಆಯುಷ್ಮಾನ್ ಭಾರತ’ದ ಅಸಲಿ ಕತೆ
Editor’s Pick More