ಶತಪಥ | ಮಗು ಸತ್ತಿದೆ, ದೇಶ ಸೂತಕದಲ್ಲಿದೆ

ದೇಶದೆಲ್ಲೆಡೆ ಈಗ, ಕಾಶ್ಮೀರದ ಕಟುವಾ ಜಿಲ್ಲೆಯಲ್ಲಿ ಅಮಾನುಷ ಕೃತ್ಯಕ್ಕೆ ಜೀವತೆತ್ತ ಮಗುವಿನ ಬಗ್ಗೆಯೇ ಚರ್ಚೆ. ಕ್ರಮ ಕೈಗೊಳ್ಳದ ಸರ್ಕಾರಗಳ ವಿರುದ್ಧ, ಘಟನೆಗೆ ಕಾರಣವಾದವರ ವಿರುದ್ಧ, ಮನಸ್ಥಿತಿ ವಿರುದ್ಧ ಆಕ್ರೋಶ ಸಿಡಿದಿದೆ. ಆ ಆಕ್ರೋಶ ಯಾವ ರೂಪದಲ್ಲಿಯೂ ಇರಬಹುದು, ಇಲ್ಲಿ ಪದ್ಯದ ರೂಪದಲ್ಲಿದೆ

ಪೂಜೆ ತಕ್ಷಣ ನಿಲ್ಲಿಸಿ -ಮಗು ಸತ್ತಿದೆ

ಧೂಪ ದೀಪ ನೈವೇದ್ಯ ನಗಾರಿ ಟಕ್ಕೆ ಚಾಮರ

ಈ ಕ್ಷಣವೆ ನಿಲ್ಲಿಸಿ - ಮಗು ಸತ್ತಿದೆ

ಬಂದವರೆ, ಹೋಪವರೆ, ಗಂಟೆ ಬಾರಿಸದಿರೀ...

ದೇಗುಲಗಳಿಗೆ ಬೀಗ ಹಾಕಿ - ಮಗು ಸತ್ತಿದೆ.

-ದೇಶ ಸೂತಕದಲ್ಲಿದೆ.

ಹಸುಳೆ ಇನ್ನೂ ಮನುಷ್ಯಮುಖ ವ್ಯಾಘ್ರಗಳ

ಕೋರೆದಂತದಿ ಸಿಲುಕಿ ಸತ್ತೆಹೋಯಿತು ಮಗು,

ಹೂವಿನಂತಹ ಮಗು ಹೊಸಕಿಯೇ ಹೋಯಿತು

ದೀಪದಂತಹ ಮಗು, ಅಯ್ಯೊ,

ನಂದಿ ಒರಗಿದೆ ಕಾಣಿರೇ,

ಕುದುರೆ ಕಾಯಲು ಹೊರ ಹೊರಟಿದ್ದ ಮಗು,

ಮರಳಿದರೂ ಕುದುರೆ ಮರಳಿಲ್ಲ ಕಾದುಕಾದರೂ

ಮಗು ಉಣ್ಣುವ ಹೊತ್ತು, ಮಗು ಆಡುವ ಹೊತ್ತು

ಮಗು ನಕ್ಕು ನಲಿವ ಹೊತ್ತು ಮರಳಿದರೂ

ಮರಣಿಸಿದೆ ಮಗು, ರಕ್ತ ವಾಸನೆ ವಿಷಯ ಅರುಹಿದೆ

ಅಯ್ಯೊ ಮಗು ಸತ್ತಿದೆ ದೇಶ ಸೂತಕದಲ್ಲಿದೆ.

ಅಳೆಯಲಾರದ ಶೋಕ ಉರಿಯುತ್ತಿದೆ

ಭಾಷೆ ತಿಳಿಯದೆ ನಿಮಗೆ?

ನಿಲ್ಲಿಸಿ ನಗು ಸಂಭ್ರಮ ತಾಳ ತಂಬೂರಿ ಭಜನೆ

ಶ್ಲೋಕ ಸಮಾರಾಧನೆ ಚುನಾವಣೆ ಚಿತಾವಣೆ

ಎಲ್ಲಿ ಸತ್ತಿರುವ, ಆ ದೇವಾಧಿ ದೇವ

ಕೂಗು ಕೇಳದ ಕೆಪ್ಪ, ಕಣ್ಣು ಕಾಣದ ಕುರುಡ

ಎಳೆ ತನ್ನಿ ಹೊರಗೆ

ಕೊಂದ ರಕ್ಕಸರ ಕೊಲುವ ರಕ್ಕಸರ

ಕೊಚ್ಚಿ ಸಂಹರಿಸಿ, ಒಳ ನಡೆಯಲಿ

ತೆರೆಯದಿರಿ ಅದುವರೆಗೂ ಗರ್ಭಗುಡಿಯ

ಒಳಹೋಗದಿರಿ ಯಾರೂ ತೊಳೆಯದಿರಿ ಮೈಲಿಗೆಯ

ದೇಶ ಸೂತಕದಲ್ಲಿದೆ. ಮೌನ ಸಾಕಾಗಿದೆ ಶಬ್ದ

ಮಾತು ಸಾಕಾಗಿದೆ, ಮಗುವಿನ ಜೀವ ಬೇಕಾಗಿದೆ,

ಅದೋ ಕಂಪಿಸುತಿದೆ ಗಾಳಿ, ನಿಂತ ನೆಲ ಅದುರುತ್ತಿದೆ,

ಕೇಳುತಿದೆಯೇ ಮತ್ತೆ! ಎಲ್ಲಿಂದಲೋ ದನಿ?

“ಕಾಪಾಡೀ...” ಇದೆಲ್ಲಿಂದ ಮತ್ಯಾರು ಯಾರಿಂದ ಎಲ್ಲೀವರೆಗೆ

ಸದ್ದಿಲ್ಲದೆ ಕೂಗುಮಗುವಿನ ಬಾಯಿ ಒತ್ತಿದೆ,

ಓ ನಿತ್ಯ ಸೂತಕ ದೇಶವೇ, ಭಾಷೆ ತಿಳಿಯದ ದೇಶವೇ

ಹಗಲುವೇಷದ ದೇಶವೇ, ಕಣ್ಣು ಕಿತ್ತಿಹ ದೇಶವೇ,

ಹೆಣ್ಣನರಿಯದ ಹದ್ದುಗಿಡುಗಗಳ

ಕಾಕಪೋಕಗಳ ಬೀದಿ ಬಸವಗಳ

ಬೀಡಾಗುತ್ತಿರುವ ದೇಶವೇ

ನನ್ನ ಭಾರತಮಾತೆಯೇ-ಸಾಕಿನ್ನು

ಬಾ, ಹೋಗೋಣ ದೂರ ಎಲ್ಲಾದರೂ ದೂರ - ಎಂದರೂ

ಬಿಟ್ಟು ಹೋಗಲಾದರೂ ಎಲ್ಲಿಗೆ!

ಇದನ್ನೂ ಓದಿ : ಶತಪಥ | ವೃತ್ತದ ಒಳಗೂ ಸಲ್ಲದೆ ಅಂತ್ಯಕ್ಕೂ ಸಲ್ಲದೆ ಬದುಕುವವರು, ವೃತ್ತಾಂತ ಆಗದವರು
ಇಲಾಜು | ಆರೋಗ್ಯ ಸೇವೆ ಕೊರತೆಯಿಂದ 2016ರಲ್ಲಿ 25 ಲಕ್ಷ ಭಾರತೀಯರ ಪ್ರಾಣಹರಣ
ಚಿತ್ತವಿತ್ತ | ಮುಂದೊಂದು ದಿನ ಮನುಷ್ಯರೇ ಅತ್ಯಂತ ನಿರುಪಯುಕ್ತ ಆಗಿಬಿಡಬಹುದು!
ಮೂಡಲ್ಮಾತು | ‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?
Editor’s Pick More