ಸ್ಥಿತಿಗತಿ | ಸಿರಿವಂತರೇ, ಸರಕಾರಿ ಬ್ಯಾಂಕ್‌ಗಳನ್ನು ದಯವಿಟ್ಟು ಬಿಟ್ಟುಬಿಡಿ

ಕೆಲವು ಆರ್ಥಿಕ ತಜ್ಞರು ಸರಕಾರಿ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಪರಿಹಾರವನ್ನು ಸೂಚಿಸುತ್ತಿದ್ದಾರೆ. ಇದು ಖಂಡಿತ ಸರಿಯಾದ ಪರಿಹಾರವಲ್ಲ. ಏಕೆಂದರೆ, ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಿದರೆ ಈಗ ತಲುಪುವ ಅಲ್ಪಸ್ವಲ್ಪ ಹಣಕಾಸು ಕೂಡ ಬಡಜನರಿಗೆ ತಲುಪುವುದಿಲ್ಲ

ಸರಕಾರಿ ಬ್ಯಾಂಕ್‌ಗಳು ಸೃಷ್ಟಿಸಿರುವ ಕೆಟ್ಟ ಸಾಲ, ಅವು ಅನುಭವಿಸುತ್ತಿರುವ ನಷ್ಟ, ಮಲ್ಯ ಮತ್ತು ನೀರವ್ ಮೋದಿ ಪ್ರಕರಣಗಳು ಬ್ಯಾಂಕ್‌ ಖಾಸಗೀಕಣದ ಚರ್ಚೆಯನ್ನು ಮುಂಚೂಣಿಗೆ ತಂದಿವೆ. ಖಾಸಗೀಕರಣ ನಮಗೆ ಹೊಸತೇನಲ್ಲ. ಐವತ್ತು-ಅರವತ್ತರ ದಶಕದಲ್ಲಿ ಬಹುತೇಕ ಬ್ಯಾಂಕ್‌ಗಳು ಖಾಸಗಿ ಒಡೆತನದಲ್ಲಿದ್ದವು. ವಿವಿಧ ಪ್ರದೇಶಗಳಲ್ಲಿನ ವ್ಯಾಪಾರಿ ಸಮುದಾಯಗಳು ಮತ್ತು ಇತರ (ಆರ್ಥಿಕವಾಗಿ) ಬಲಾಢ್ಯ ಸಮುದಾಯಗಳು ತಮ್ಮ ಸಮುದಾಯದ ಜನರ ಶಿಕ್ಷಣ, ಉದ್ಯೋಗ, ವ್ಯಾಪಾರ, ಉದ್ದಿಮೆಗಳಿಗೆ ಹಣಕಾಸು ಒದಗಿಸುವ ಉದ್ದೇಶದಿಂದ ಹಲವು ಬ್ಯಾಂಕ್‌ಗಳನ್ನು ಆರಂಭಿಸಿದ್ದವು. ಈ ಖಾಸಗಿ ಬ್ಯಾಂಕ್‌ಗಳು ಸಮಾಜದ ಎಲ್ಲರಿಂದಲೂ (ನಿಶ್ಚಿತ ಠೇವಣಿ, ಸಣ್ಣ ಉಳಿತಾಯ, ಪಿಗ್ಮಿ ಇತ್ಯಾದಿಗಳ ಮೂಲಕ) ಹಣ ಸಂಗ್ರಹ ಮಾಡುತ್ತಿದ್ದವು. ಆದರೆ, ಹಣಕಾಸಿನ ನೆರವು ನೀಡುವ ಸಂದರ್ಭದಲ್ಲಿ ತಮ್ಮ-ತಮ್ಮ ಸಮುದಾಯಗಳ ಉದ್ಯಮಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದವು. ಇದರಿಂದಾಗಿ ಸಣ್ಣಪುಟ್ಟ ಕೃಷಿಕರು ಅಥವಾ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಬ್ಯಾಂಕ್‌ ಸಾಲ ಗಗನಕುಸುಮವೇ ಆಗಿತ್ತು.

ಇಂತಹ ಸಂದರ್ಭದಲ್ಲಿ ಸಮಾಜದ ಎಲ್ಲರಿಗೂ ಹಣಕಾಸು ಪೂರೈಸುವ ಉದ್ದೇಶದಿಂದ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲಾಯಿತು. 1955ರಲ್ಲಿ ಇಂಪೀರಿಯಲ್ ಬ್ಯಾಂಕ್‌ ಆಫ್ ಇಂಡಿಯಾವನ್ನು ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ಕಾಯಿದೆಯಡಿಯಲ್ಲಿ ರಾಷ್ಟ್ರೀಕರಣ ಮಾಡುವುದರೊಂದಿಗೆ ಭಾರತದಲ್ಲಿ ಬ್ಯಾಂಕ್‌ ರಾಷ್ಟ್ರೀಕರಣ ಪ್ರಕ್ರಿಯೆ ಆರಂಭವಾಯಿತು. 1960ರಲ್ಲಿ ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾದ ಏಳು ರಾಜ್ಯ ಮಟ್ಟದ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲಾಯಿತು. 1969ರಲ್ಲಿ 14 ಮತ್ತು 1980ರಲ್ಲಿ 7 ಖಾಸಗಿ ವಾಣಿಜ್ಯ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಎಂಬತ್ತರ ದಶಕದ ವೇಳೆಗೆ ಹೆಚ್ಚೂಕಡಿಮೆ ಶೇ.90ರಷ್ಟು ಬ್ಯಾಂಕ್‌ ವ್ಯವಹಾರಗಳು ಸರಕಾರದ ಸ್ವಾಮ್ಯಕ್ಕೆ ಬಂದವು. ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದ ಸಣ್ಣಪುಟ್ಟ ಕೃಷಿಕರು, ಉದ್ಯಮಿಗಳು ಅಲ್ಪಸ್ವಲ್ಪ ಬ್ಯಾಂಕ್‌ ಸಾಲ ಪಡೆಯುವುದು ಸಾಧ್ಯವಾಯಿತು. ಆಲ್ ಇಂಡಿಯಾ ಡೆಟ್ ಆ್ಯಂಡ್ ಇನ್‌ವೆಸ್ಟ್‌ಮೆಂಟ್ ಸರ್ವೆ ಪ್ರಕಾರ, ಗ್ರಾಮೀಣ ಕುಟುಂಬಗಳ ಒಟ್ಟು ಸಾಲದಲ್ಲಿ ಅಸಾಂಸ್ಥಿಕ ಮೂಲದ ಸಾಲ 1991ರಲ್ಲಿ ಶೇ.17.5ಕ್ಕೆ ಇಳಿದಿತ್ತು.

ಈ ಸ್ಥಿತಿ ಹೆಚ್ಚು ದಿನ ಮುಂದುವರಿಯಲಿಲ್ಲ. ಕೇವಲ ಒಂದೇ ದಶಕದಲ್ಲಿ (1990ರಲ್ಲಿ) ನವ ಉದಾರೀಕರಣ ನೀತಿಗಳ ಹೆಸರಲ್ಲಿ ಸರಕಾರವೇ ಎಲ್ಲ ಕ್ಷೇತ್ರಗಳಲ್ಲೂ ಖಾಸಗೀಕರಣವನ್ನು ಪ್ರೋತ್ಸಾಹಿಸಲು ಆರಂಭಿಸಿತು. ಆ ಸಂದರ್ಭದಲ್ಲಿ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಿಲಿಲ್ಲ. ಆದರೆ, ಸರಕಾರಿ ಬ್ಯಾಂಕ್‌ಗಳು ಕೂಡ ಖಾಸಗಿ ಬ್ಯಾಂಕ್‌ಗಳೊಂದಿಗೆ ಸ್ವರ್ಧಿಸಿ ಲಾಭ ಗಳಿಸಬೇಕೆನ್ನುವ ಒತ್ತಡ ಹೇರಲಾಯಿತು. ಸರಕಾರಿ ಬ್ಯಾಂಕ್‌ಗಳು ತಮ್ಮ ಸಾಲ ನೀತಿಯನ್ನು ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾಗಿ ಬದಲಾಯಿಸಿಕೊಂಡವು. ಅಂದರೆ, ಸಾಲ ಸಂದಾಯ ಮಾಡಲು ಶಕ್ತಿಯುಳ್ಳ ದೊಡ್ಡ ವ್ಯಾಪಾರ, ಉದ್ದಿಮೆ, ಕೃಷಿಗೆ ಸರಕಾರಿ ಸಾಲದ ಹೆಚ್ಚಿನ ಪಾಲನ್ನು ನೀಡಿ, ಸಾಲ ಸಂದಾಯ ಮಾಡಲು ಅಸಮರ್ಥರಾಗಿರುವ ಸಣ್ಣಪುಟ್ಟ ವ್ಯಾಾಪಾರ, ಉದ್ದಿಮೆ, ಕೃಷಿಗಳಿಗೆ ಕಡಿಮೆ ಸಾಲ ನೀಡುವ ನೀತಿಯನ್ನು ಜಾರಿಗೆ ತಂದವು. ಹೀಗೆ, ಸರಕಾರಿ ಸಾಲದ ಶೇ.60ನ್ನು ಸಾಮಾನ್ಯ ವಲಯಕ್ಕೆ, ಶೇ.40ನ್ನು ಆದ್ಯತಾ ವಲಯಕ್ಕೆ ನೀಡುವ ಸಾಲ ನೀತಿ ಜಾರಿಗೆ ಬಂತು. ಆದ್ಯತಾ ವಲಯದಲ್ಲಿ ಕೃಷಿ, ಸಣ್ಣಪುಟ್ಟ ವ್ಯಾಪಾರ, ಉದ್ದಿಮೆಗಳು ಮತ್ತು ಬಡತನ ನಿವಾರಣಾ ಕಾರ್ಯಕ್ರಮಗಳು ಸೇರಿವೆ. ಈ ಮೂರು ವಲಯಗಳಲ್ಲಿರುವವರನ್ನು ಸೇರಿಸಿದರೆ ನಮ್ಮ ಸಮಾಜದ ಶೇ.90ರಷ್ಟು ಜನರು ಸರಕಾರಿ ಸಾಲದ ಶೇ.40ನ್ನು ಹಂಚಿಕೊಳ್ಳಬೇಕು ಮತ್ತು ಸರಕಾರಿ ಸಾಲದ ಶೇ.60ರಷ್ಟನ್ನು ಅಲ್ಪಸಂಖ್ಯೆಯಲ್ಲಿರುವ (ಶೇ.10ರಷ್ಟಿರುವ) ದೊಡ್ಡ ವ್ಯಾಪಾರ, ಉದ್ದಿಮೆ, ಕೃಷಿಗೆ ಹೋಗಬೇಕೆನ್ನುವ ಸಾಲ ನೀತಿ ಜಾರಿಗೆ ಬಂತು.

2008ರವರೆಗೆ ಕೃಷಿ ಕ್ಷೇತ್ರಕ್ಕೆ ನೀಡುವ ಆದ್ಯತಾ ವಲಯದ ಹಣಕಾಸಿನ ಬಹುಭಾಗ ದೊಡ್ಡ ಹಿಡುವಳಿದಾರರ ಪಾಲಾಗಿ ಸಣ್ಣ, ಅತಿ ಸಣ್ಣ ಕೃಷಿಕರು ಏನೇನೂ ಹಣಕಾಸು ಸೌಲಭ್ಯಗಳಿಲ್ಲದೆ ನರಳುತ್ತಿದ್ದರು. 2005-06ರಲ್ಲಿ ಬ್ಯಾಂಕ್‌ಗಳು ನೀಡಿದ ಆದ್ಯತಾ ವಲಯದ ಸಾಲದಲ್ಲಿ ಶೇ.7ರಷ್ಟು ಮಾತ್ರ ಸಣ್ಣ ಉದ್ದಿಮೆಗಳಿಗೆ ಹೋಗಿದೆ. ಇದೇ ಅವಧಿಯಲ್ಲಿ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ನಗರದ ಕೋಆಪರೇಟಿವ್ ಬ್ಯಾಂಕ್‌ಗಳು ನೀಡಿದ ಒಟ್ಟು ಸಾಲಗಳ ಶೇ.3ರಷ್ಟು ಮಾತ್ರ ಅತಿ ಸಣ್ಣ ಉದ್ದಿಮೆಗಳಿಗೆ ಹೋಗಿದೆ. ಸಣ್ಣ ಮತ್ತು ಅತಿ ಸಣ್ಣ ಕೃಷಿಕರು, ಖಾದಿ ಮತ್ತು ಗ್ರಾಾಮೋದ್ಯೋಗ ಚಟುವಟಿಕೆಗಳು, ಸಾಂಪ್ರದಾಯಿಕ ಕಸುಬುಗಳು, ಪರಿಶಿಷ್ಟ ಪಂಗಡ ಮತ್ತು ಜಾತಿ ಜನರ ಉದ್ದಿಮೆಗಳು, ಸ್ವಸಹಾಯ ಸಂಘಗಳು ಇವೆಲ್ಲ ತಳಸ್ತರದ ಜನರ ಆರ್ಥಿಕ ಚಟುವಟಿಕೆಗಳ ವ್ಯಾಪ್ತಿಯೊಳಗೆ ಬರುವ ಉದ್ದಿಮೆಗಳು. ಆದ್ಯತಾ ವಲಯದ ಸಾಲದ ಶೇ.10ನ್ನು ಇವರಿಗೆ ನೀಡಬೇಕೆಂದು ನಿಗದಿಯಾಗಿದೆ. ಆದರೆ, ವಾಸ್ತವದಲ್ಲಿ 1990ರ ಮೊದಲು ಶೇ.9.5ರಷ್ಟು ಹಣಕಾಸು ಇವರಿಗೆ ಪೂರೈಕೆಯಾದರೆ 1990ರ ನಂತರ ಇವರಿಗೆ ಪೂರೈಕೆಯಾಗುವ ಹಣಕಾಸು ಸೌಲಭ್ಯ ಕಡಿಮೆಯಾಗುತ್ತ ಶೇ.6.5ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಸರಕಾರಿ ಬ್ಯಾಂಕ್‌ಗಳ ಸಾಲದ ಬಹುಭಾಗ (ಅಂದಾಜು ಶೇ.75ರಷ್ಟು) ದೊಡ್ಡ ವ್ಯಾಪಾರ, ಉದ್ದಿಮೆ, ಕೃಷಿಗಳಿಗೆ ಹರಿದಿದೆ.

ಇದನ್ನೂ ಓದಿ : ಸ್ಥಿತಿಗತಿ | ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಮತ್ತು ಪರಿಪೂರ್ಣತೆಯ ಪ್ರಶ್ನೆ

ಪಡೆದ ಸಾಲವನ್ನು ಬಡ್ಡಿ ಸಮೇತ ಮರುಸಂದಾಯ ಮಾಡಿದರೆ ದೊಡ್ಡ ಪ್ರಮಾಣದ ಸಾಲ ದೊಡ್ಡ ಉದ್ದಿಮೆ, ವ್ಯಾಪಾರಿ, ಕೃಷಿಕರಿಗೆ ಹೋಗುವುದನ್ನು ನಕಾರಾತ್ಮವಾಗಿ ನೋಡುವ ಅಗತ್ಯವಿಲ್ಲ. ಆದರೆ, ವಾಸ್ತವ ಆ ರೀತಿ ಇಲ್ಲ. ಆರ್‌ಬಿಐ ಮೂಲಗಳ ಪ್ರಕಾರ, 2015ನೇ ಹಣಕಾಸು ವರ್ಷದ ಕೊನೆ ವೇಳೆಗೆ ವಾಣಿಜ್ಯ ಬ್ಯಾಂಕ್‌ಗಳು ನೀಡಿದ ಒಟ್ಟು ಸಾಲ 76.6 ಲಕ್ಷ ಕೋಟಿ ರು. ಇದರಲ್ಲಿ 3.22 ಲಕ್ಷ ಕೋಟಿಗಳಷ್ಟು ಮರುಸಂದಾಯವಾಗದಿರುವ ಸಾಲ. 2017ರ ವೇಳೆಗೆ ಕೆಟ್ಟ ಸಾಲದ ಮೊತ್ತ ರೂ.7 ಲಕ್ಷ ಕೋಟಿಗಳನ್ನು ಮೀರಿದೆ. ಸಾಲ ಬಾಕಿ ಇಟ್ಟವರಲ್ಲಿ ಅನುಕೂಲಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆರ್‌ಬಿಐ ಮೂಲಗಳ ಪ್ರಕಾರ, ಮಾರ್ಚ್ 2015ರ ವೇಳೆಗೆ ಒಟ್ಟು ಸಾಲ ಬಾಕಿ ಇಟ್ಟವರಲ್ಲಿ 5 ಕೋಟಿಗಿಂತ ಹೆಚ್ಚು ಸಾಲ ಬಾಕಿ ಇಟ್ಟವರು ಶೇ.74ರಷ್ಟಿದ್ದರೆ ಸೆಪ್ಟಂಬರ್ 2015ರ ವೇಳೆಗೆ ಇವರ ಸಂಖ್ಯೆ ಶೇ.87ಕ್ಕೆ ಏರಿದೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಇಂದಿನ ದುಃಸ್ಥಿತಿಗೆ ನಮ್ಮ ಸಮಾಜದ ಅನುಕೂಲಸ್ಥರೇ ಕಾರಣವೆಂದು ಮೇಲಿನ ಅಂಕಿ-ಅಂಶಗಳು ಸಾಬೀತುಪಡಿಸುತ್ತಿವೆ. ಸರಕಾರ ಜನರ ತೆರಿಗೆ ಹಣವನ್ನು ಬ್ಯಾಂಕ್‌ಗಳಿಗೆ ತುಂಬಿ ಅವುಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದೆ. ಇದು ಸರಿಯಾದ ಪರಿಹಾರವಲ್ಲ. ಏಕೆಂದರೆ, ತೆರಿಗೆ ಹಣದಲ್ಲಿ ಪರೋಕ್ಷ ತೆರಿಗೆ ಪಾಲು ಮೂರನೇ ಎರಡರಷ್ಟಿದೆ. ಅಂದರೆ, ಅನುಕೂಲಸ್ಥರು ಬಾಕಿ ಇಟ್ಟ ಸಾಲದ ಹೊರೆಯನ್ನು ಅನನುಕೂಲಸ್ಥರು ಹೊರಬೇಕೆನ್ನುವ ತೀರ್ಮಾನ ಇದಾಗಿದೆ.

ಕೆಲವು ಆರ್ಥಿಕ ತಜ್ಞರು ಸರಕಾರಿ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಪರಿಹಾರವನ್ನು ಸೂಚಿಸುತ್ತಿದ್ದಾರೆ. ಇದು ಕೂಡ ಸರಿಯಾದ ಪರಿಹಾರವಲ್ಲ. ಏಕೆಂದರೆ, ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಿದರೆ ಈಗ ತಲುಪುವ ಅಲ್ಪಸ್ವಲ್ಪ ಹಣಕಾಸು ಕೂಡ ಬಡಜನರಿಗೆ ತಲುಪುವುದಿಲ್ಲ. ಇಂತಹ ಪರಿಹಾರಗಳ ಬದಲು, ಸರಕಾರಿ ಬ್ಯಾಂಕ್‌ಗಳನ್ನು ಬಡವರಿಗೆ ಸೀಮಿತಗೊಳಿಸಿ, ಅನುಕೂಲಸ್ಥರಿಗೆ ಖಾಸಗಿ ಬ್ಯಾಂಕ್‌ಗಳನ್ನು ಅವಲಂಬಿಸಲು ಸೂಚಿಸುವುದು ಸೂಕ್ತ ಪರಿಹಾರವಾಗಬಹುದು. ಈ ಸಲಹೆ ಇಂದು ನಮ್ಮಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ವ್ಯವಹಾರಗಳಿಗೆ ಹತ್ತಿರವಿದೆ. ನಮ್ಮಲ್ಲಿ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಅನುಕೂಲಸ್ಥರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಿದರೆ ಅನನುಕೂಲಸ್ಥರು ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸುತ್ತಿದ್ದಾರೆ. ಇದೇ ರೀತಿ, ಬಡವರು ಸರಕಾರಿ ಆಸ್ಪತ್ರೆಗಳಿಗೆ ಹೋದರೆ ಅನುಕೂಲಸ್ಥರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾಾರೆ. ಬಡವರು ಸರಕಾರಿ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿದರೆ ಅನುಕೂಲಸ್ಥರು ಖಾಸಗಿ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. ಇದೇ ನೀತಿಯನ್ನು ವಿಸ್ತರಿಸಿ ಸಾಲ ಮರುಸಂದಾಯ ಮಾಡಲು ಸಾಮರ್ಥ್ಯವಿಲ್ಲದ, ಆದರೆ ಇಚ್ಛೆಯುಳ್ಳ ತಳವರ್ಗದ ಜನರಿಗೆ ಸರಕಾರಿ ಬ್ಯಾಂಕ್‌ಗಳನ್ನು ಮೀಸಲಿರಿಸಿ, ಮರುಸಂದಾಯ ಮಾಡಲು ಶಕ್ತಿಯುಳ್ಳ, ಆದರೆ ಇಚ್ಛೆ ಇಲ್ಲದ ಅನುಕೂಲಸ್ಥರಿಗೆ ಖಾಸಗಿ ಬ್ಯಾಾಂಕ್‌ಗಳಲ್ಲಿ ವ್ಯವಹರಿಸುವಂತೆ ಸೂಚಿಸುವುದು ಹೆಚ್ಚು ಸೂಕ್ತ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More