ನೆಲಮುಗಿಲು | ಮೈಸೂರಿನ ಎಳನೀರು ಭೈರವೇಶ್ವರ ಮತ್ತು ಅಳಿಲು ಪ್ರೀತಿ

ದಿನವೂ ಎಳನೀರು ಕುಡಿಯುತ್ತ ಅಳಿಲಿಗಾಗಿ ಮರವನ್ನೇ ನಾನು ಗಮನಿಸುತ್ತಿದ್ದರೂ ಅಳಿಲು ನನಗೆ ಎರಡು ದಿನಗಳಾದ ಮೇಲೆ ಕಾಣಿಸಿತು. ನಾನು ಅವೊತ್ತು ಮರದಿಂದ ಸ್ವಲ್ಪ ದೂರ ನಿಂತಿದ್ದೆ. ಅಳಿಲು ಕೆಳಗಿಳಿದು ಬಂದು ಎಳನೀರು ಬುಡ್ಡೆಯೊಳಗಿದ್ದ ಕಾಯಿ ಹೆಕ್ಕಿ ತಿನ್ನತೊಡಗಿತು

ಸುಡು ಬೇಸಿಗೆ. ಬೆಳಿಗ್ಗೆಯಿಂದ ವಿದ್ಯಾರ್ಥಿಗಳು ಮತ್ತು ರೋಗಿಗಳ ಒಡನಾಟದಲ್ಲಿ ದಿನದ ಕೆಲಸ ಮುಗಿಸಿ ಸಂಜೆ ನಾಲ್ಕಕ್ಕೆ ಮನೆಗೆ ವಾಪಸಾಗುವ ಸಮಯ. ಮನೆಗೆ ಬರುವ ದಾರಿಯಲ್ಲಿ ಎಳನೀರು ಗಾಡಿ ಕಂಡಿತು. ಬೇಸಿಗೆಯ ದಣಿವಾರಿಸಿಕೊಳ್ಳಲು ಎಳನೀರು ಕುಡಿಯಲು ಕಾರು ನಿಲ್ಲಿಸಿದೆ. ದಿನವೂ ನಾನು ಈ ರಸ್ತೆಯಲ್ಲೇ ಓಡಾಡುತ್ತಿದ್ದರೂ ಈ ಎಳನೀರು ಗಾಡಿಯವನನ್ನು ನೋಡಿಯೇ ಇರಲಿಲ್ಲವಲ್ಲ, ಎಂದುಕೊಂಡು ಕಾರಿನಿಂದ ಇಳಿದೆ. ಈ ರಸ್ತೆ ಅಗಲವಾಗಿದ್ದು, ರಸ್ತೆಬದಿಯ ಎರಡು ಕಡೆಗಳಲ್ಲೂ ಹಳೆಯ ಎತ್ತರದ ಮರಗಳು ಸೂರ್ಯನ ರಶ್ಮಿಯನ್ನು ರಸ್ತೆಗೆ ಬೀಳಿಸದೆ ದಟ್ಟವಾದ ನೆರಳನ್ನು ನಮಗೆ ದಯಪಾಲಿಸಿದ್ದವು. ಮರಗಳ ತಂಪಾದ ನೆರಳಿನಲ್ಲಿ ಎಳನೀರಿನವ ಗಾಡಿಯನ್ನು ಇಟ್ಟಿದ್ದಾನೆ. ಗಾಡಿಯ ಹಿಂಭಾಗ ಕುಳಿತುಕೊಳ್ಳಲು ಸಿಮೆಂಟ್ ಕಟ್ಟೆ ಇದೆ. ಪಕ್ಕದಲ್ಲಿ ದೊಡ್ಡದಾದ ಮರ ತನ್ನ ಬಾಹುಗಳನ್ನು ವಿಶಾಲವಾಗಿ ಚಾಚಿದೆ.

“ಒಂದು ಎಳನೀರು ಕೊಡಿ,” ಎಂದು ಹೇಳಿ ನಿಂತೆ. ಆತನ ಗಾಡಿಯ ಸುತ್ತಮುತ್ತ ನೋಡುತ್ತೇನೆ, ಒಂದು ಕಡ್ಡಿಕಸ ಇಲ್ಲ! ಅಷ್ಟು ಸ್ವಚ್ಛವಾಗಿದೆ. ನಾನು ಆತನ ಕಾರ್ಯವೈಖರಿಯನ್ನು ಗಮನಿಸಿದೆ. ಪ್ರತಿ ವ್ಯಕ್ತಿ ಎಳನೀರು ಕುಡಿದು ಮುಗಿಸುತ್ತಿದ್ದಂತೆಯೇ ತಕ್ಷಣ ಎಳನೀರ ಬುಡ್ಡೆಯನ್ನು ತನ್ನ ಕೈಗಳನ್ನು ಚಾಚಿ ಅವರಿಂದ ತೆಗೆದುಕೊಳ್ಳುತ್ತಿದ್ದ. ಇದರಿಂದ ಯಾರೊಬ್ಬರೂ ಖಾಲಿಯಾದ ಬುಡ್ಡೆಯನ್ನು ಎಸೆಯುವ ಮುಂಚೆಯೇ ಬುಡ್ಡೆಗಳು ಈತನ ಕೈ ಸೇರುತ್ತಿದ್ದವು. ಒಳಗೆ ಕಾಯಿ ಇದ್ದರೆ ಅರ್ಧ ಹೋಳು ಮಾಡಿಕೊಡುತ್ತಿದ್ದ. ಇಲ್ಲದಿದ್ದರೆ, ಕುಡಿದ ಎಳನೀರ ಬುಡ್ಡೆಗಳನ್ನು ಆಗಿಂದಾಗಲೇ ತನ್ನ ಪಕ್ಕಕ್ಕೆ ಗಾಡಿಗೆ ಒರಗಿಸಿಟ್ಟ ಗೋಣಿಚೀಲದಲ್ಲಿ ಹಾಕಿಬಿಡುತ್ತಿದ್ದ. ಹೀಗಾಗಿ, ಒಂದು ಎಳನೀರ ಬುಡ್ಡೆಯಾಗಲೀ ಅಥವಾ ಕಾಯಿಯ ಯಾವುದೇ ಭಾಗವಾಗಲೀ, ನೆಲದ ಮೇಲೆ ಇರಲೇ ಇಲ್ಲ. ಆಗಲೇ ಗೋಣಿಚೀಲ ಮುಕ್ಕಾಲು ಭಾಗ ತುಂಬಿತ್ತು.

ಬೇಸಿಗೆ ಆದ್ದರಿಂದ ದಿನವೂ ಈತನ ಬಳಿ ಎಳನೀರು ಕುಡಿಯಲು ಆರಂಭಿಸಿದೆ. ನಿಲ್ಲಲು ತಂಪಾದ ನೆರಳು, ಆತನ ಗಾಡಿಯ ಸುತ್ತಮುತ್ತ ಸ್ವಚ್ಛವಾದ ನೆಲ ಮತ್ತು ಹಸಿರು ತುಂಬಿ ತೂಗುತ್ತಿದ್ದ ಬಹುದೊಡ್ಡ ಮರಗಳು. ದಿನವೂ ಈತನ ಕಾರ್ಯವೈಖರಿ ನೋಡಿ ಮೆಚ್ಚುಗೆಯಾಗುತ್ತಿತ್ತು. ಆಗಾಗ ನೆಲವನ್ನು ಗುಡಿಸುತ್ತಿದ್ದ, ಗಾಡಿಯನ್ನು ಮತ್ತು ತನ್ನ ಎಳನೀರು ಕೊಯ್ಯುವ ಮಚ್ಚನ್ನು ಬಟ್ಟೆಯಿಂದ ಸ್ವಚ್ಛಗೊಳಿಸುತ್ತಿದ್ದ. ಆತನ ಗಾಡಿಯ ಮೇಲೆ ಭೈರವೇಶ್ವರ ಎಂದು ಬರೆದಿದ್ದನ್ನು ಗಮನಿಸಿದೆ.

ಒಂದು ದಿನ ಎಳನೀರು ಕುಡಿಯುತ್ತ ಎದುರಿಗೆ ಹಳದಿ ಹೂವುಗಳನ್ನು ಮೈದುಂಬಿಗೊಂಡು ತೂಗುತ್ತಿದ್ದ ಮರದ ಸೌಂದರ್ಯವನ್ನು ಆಸ್ವಾದಿಸುತ್ತ ನಿಂತಿದ್ದೆ. ಇದ್ದಕ್ಕಿದ್ದಂತೆ ನನ್ನ ಎಡಕ್ಕಿರುವ ದೊಡ್ಡ ಮರದ ಮೇಲಿನಿಂದ ತೀವ್ರವಾದ ದನಿಯಲ್ಲಿ ಕಿಚಪಿಚ ಕಿಚಪಿಚ ಎಂದು ಚೀರುವ ಶಬ್ದ ಕೇಳಿಸಿತು. ನೋಡುತ್ತೇನೆ, ಅಳಿಲು ಮರದ ರೆಂಬೆಗಳಿಂದ ಕಾಂಡದ ಮೇಲೆ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಜೋರಾಗಿ ಸದ್ದು ಮಾಡುತ್ತ ಕೆಳಗಿಳಿಯುತ್ತಿದೆ. ಮೇಲ್ಭಾಗದಲ್ಲಿ ಕಾಗೆಗಳು ಸದ್ದು ಮಾಡುತ್ತಿದ್ದವು. ಬಹುಶಃ ಕಾಗೆಗಳಿಗೂ ಈ ಅಳಿಲಿಗೂ ಏನೋ ಕಿತಾಪತಿಯಾಗಿರಬೇಕು. ಆಗಲೇ ನನಗೆ ಕಾಣಿಸಿದ್ದು ನನ್ನ ತಲೆಗಿಂತ ಸ್ವಲ್ಪ ಎತ್ತರದಲ್ಲಿ ಆ ಮರದ ಕಾಂಡಕ್ಕೆ ಒಂದರ ಮೇಲೊಂದು ದಪ್ಪದಾದ ಮೊಳೆಗಳನ್ನು ಹೊಡೆದಿದ್ದಾರೆ. ಆ ಮೊಳೆಗಳಿಗೆ ಹಾಲುಗಾಯಿಯಿರುವ ಎಳನೀರ ಬುಡ್ಡೆಯ ಅರ್ಧ ಹೋಳುಗಳನ್ನು ಮೇಲಿನ ಮೊಳೆಗೊಂದು ಮತ್ತು ಕೆಳಗಿನ ಮೊಳೆಗೊಂದು ಸಿಕ್ಕಿಸಿದ್ದಾರೆ. ಕಾಗೆ ಮತ್ತು ಅಳಿಲಿನ ಕಿರುಚಾಟ ನಿಂತಿತ್ತು. ಕಾಂಡದ ಕೆಳಗೆ ಬರುತ್ತಿದ್ದ ಅಳಿಲು ಹತ್ತಿರವೇ ನಿಂತು ಗಮನಿಸುತ್ತಿದ್ದ ನನ್ನನ್ನು ನೋಡಿ ಮತ್ತೆ ಸರಸರನೆ ಮೇಲೇರಿಬಿಟ್ಟಿತು.

ನನ್ನ ಎಳನೀರು ಕೂಡ ಮುಗಿದಿತ್ತು. ನಾನು ಎಳನೀರ ಬುಡ್ಡೆಯನ್ನು ಅರ್ಧ ಹೋಳಾಗಿಸಲು ಗಾಡಿಯವನಿಗೆ ಕೊಟ್ಟು ಮತ್ತೆ ಮರಕ್ಕೆ ಸಿಕ್ಕಿಸಿದ್ದ ಎಳನೀರ ಬುಡ್ಡೆಗಳ ಹೋಳುಗಳನ್ನು ಗಮನಿಸಿದೆ. ಇದು ಬಹುಶಃ ಅಳಿಲಿಗೇ ಇರಬಹುದು ಎಂದುಕೊಂಡೆ. ಎಳನೀರಿನ ಬುಡ್ಡೆಯನ್ನು ಕೊಚ್ಚುತ್ತಿದ್ದ ಗಾಡಿಯವನನ್ನು ಕೇಳಿದೆ, “ಮರಕ್ಕೆ ಎಳನೀರು ಬುಡ್ಡೆ ನೀವೇ ಸಿಕ್ಕಿಸಿದ್ದೀರಾ? ಏತಕ್ಕೆ?” “ಕೆಲವರು ಎಳನೀರು ಕುಡಿದು ಕಾಯಿ ತಿನ್ನದೆ ಹಾಗೆಯೇ ಹೋಗಿರುತ್ತಾರೆ. ಅಂತಹ ಬುಡ್ಡೆಗಳ ಹೋಳನ್ನು ಇಲ್ಲಿ ಸಿಕ್ಕಿಸಿದ್ದೇನೆ. ಈ ಮರದಲ್ಲಿರುವ ಅಳಿಲು ಕಾಯಿಯನ್ನು ತಿನ್ನುತ್ತದೆ. ಅಳಿಲಿಗಾಗಿ ದಿನವೂ ಮರಕ್ಕೆ ಸಿಕ್ಕಿಸುತ್ತೇನೆ,” ಎಂದ. ನನ್ನ ಊಹೆ ಸರಿಯಾಗಿದೆ ಎಂದುಕೊಳ್ಳುತ್ತ, ಅಳಿಲು ಕಾಣಿಸಬಹುದೇ ಎಂದು ಮರದ ರೆಂಬೆಗಳನ್ನೆಲ್ಲ ಒಮ್ಮೆ ಕಣ್ಣಾಡಿಸಿದೆ. ಆದರೆ, ನನ್ನ ಕಣ್ಣಿಗೆ ನಿಲುಕಲಿಲ್ಲ. ನಾಳೆ ನೋಡೋಣವೆಂದು ವಾಪಸಾದೆ.

ಇದನ್ನೂ ಓದಿ : ನೆಲಮುಗಿಲು | ಒಂಟಿತನವು ವ್ಯಕ್ತಿಯೊಬ್ಬನ ವೈಯಕ್ತಿಕ ನ್ಯೂನತೆ ಎಂಬುದು ಸರಿಯಲ್ಲ

ದಿನವೂ ಎಳನೀರು ಕುಡಿಯುತ್ತ ಅಳಿಲಿಗಾಗಿ ಮರವನ್ನೇ ನಾನು ಗಮನಿಸುತ್ತಿದ್ದರೂ ಅಳಿಲು ನನಗೆ ಎರಡು ದಿನಗಳಾದ ಮೇಲೆ ಕಾಣಿಸಿತು. ನಾನು ಮರದ ತೀರಾ ಹತ್ತಿರವೇ ನಿಂತಿರುತ್ತಿದ್ದೆನೋ ಏನೋ. ಅವೊತ್ತು ಸ್ವಲ್ಪ ದೂರ ನಿಂತಿದ್ದೆ. ಅಳಿಲು ಕೆಳಗಿಳಿದು ಬಂದು ಕಾಂಡದ ಮೇಲೆ ಮೊಳೆಗಳಿಗೆ ಸಿಕ್ಕಿಸಿದ್ದ ಎಳನೀರು ಬುಡ್ಡೆಯೊಳಗಿದ್ದ ಕಾಯಿಯನ್ನು ತನ್ನ ಪುಟ್ಟ ಬಾಯಲ್ಲಿ ಹೆಕ್ಕಿ-ಹೆಕ್ಕಿ ತಿನ್ನತೊಡಗಿತು. ಈ ದೃಶ್ಯವನ್ನು ನೋಡಿ ಬಹಳ ಖುಷಿಯಿಂದ ನನ್ನ ಎಳನೀರನ್ನು ಕುಡಿದು ಮುಗಿಸಿದೆ. ಎಳನೀರಿನವನನ್ನು ಮಾತಿಗೆಳೆದೆ. “ಇವತ್ತು ಅಳಿಲು ನನ್ನ ಕಣ್ಣಿಗೂ ಕಾಣಿಸಿಕೊಂಡಿತು. ಅದಕ್ಕೆ ಬಹುಶಃ ನೀವು ರೂಢಿ ಆಗಿರಬೇಕು,” ಎಂದೆ. “ಹೌದು. ಅದಕ್ಕೆ ನಾನು ಭೈರವೇಶ್ವರ ಎಂದು ಹೆಸರಿಟ್ಟಿದ್ದೇನೆ. ಅದು ನನಗೆ ಹೆದರುವುದಿಲ್ಲ. ಎರಡು ವರ್ಷಗಳಿಂದ ನನಗೆ ಒಗ್ಗಿಕೊಂಡಿದೆ.” “ಹೌದೇ! ಬಹಳ ಸಂತೋಷ. ನಿಮ್ಮ ಗಾಡಿಯ ಮೇಲೂ ನೀವು ಭೈರವೇಶ್ವರ ಎಂದು ಬರೆಸಿದ್ದೀರ ಅಲ್ಲವೇ?” “ಹೌದಮ್ಮ. ಭೈರವೇಶ್ವರ ನಮ್ಮ ಮನೆದೇವರು. ನಾನು ಪ್ರತಿ ತಿಂಗಳು ಭೈರವೇಶ್ವರನ ದರ್ಶನಕ್ಕೆ ತಪ್ಪದೆ ಹೋಗುತ್ತೇನೆ. ಇಲ್ಲಿಂದ ಮುನ್ನೂರು ಕಿಲೋಮೀಟರ್ ಆಗ್ತದೆ. ಆದರೂ ನಾನು ತಪ್ಪಿಸುವುದಿಲ್ಲ. ಅಳಿಲಿಗೂ ಅದೇ ಹೆಸರೇ ಇಟ್ಟಿದ್ದೇನೆ,” ಎಂದ ಆತನ ದನಿಯಲ್ಲಿ ಭಯ, ಭಕ್ತಿಯ ಜೊತೆಗೆ ಅಳಿಲಿನ ಮೇಲಿನ ಪ್ರೀತಿಯೂ ಒಸರುತ್ತಿತ್ತು. “ಓಹ್! ನಿಮ್ಮ ಎಳನೀರ ಗಾಡಿಗೆ ಮತ್ತು ಅಳಿಲುಗೆರಡಕ್ಕೂ ನಿಮ್ಮ ಮನೆದೇವರ ಹೆಸರೇ ಇಟ್ಟಿದ್ದೀರಿ. ಪ್ರಾಣಿ ಪ್ರೀತಿ ನೋಡಿ ಖುಷಿ ಆಯಿತು. ಹಾಗೆಯೇ ನೀವು ನಿಮ್ಮ ಸುತ್ತಮುತ್ತಲ ಜಾಗವನ್ನೂ ತುಂಬ ಕಾಳಜಿಯಿಂದ ಸ್ವಚ್ಛಗೊಳಿಸುವುದನ್ನು ನೋಡಿ ಆಶ್ಚರ್ಯವಾಯಿತು. ನಿಮ್ಮನ್ನು ನೋಡಿ ಸ್ವಚ್ಛ ಭಾರತ ಅಭಿಯಾನ ಮಾಡುತ್ತಿರುವವರು ಕಲಿಯಬಹುದಾಗಿದೆ,” ಎಂದೆ. “ಅದೇನೋ ಗೊತ್ತಿಲ್ಲ. ನನಗೆ ಎಲ್ಲ ಕ್ಲೀನಾಗಿ ಇರಬೇಕು. ನಿಂತ ಜಾಗದಲ್ಲಿ ಗಲೀಜಾದರೆ ನಿಮಗೂ ಎಳನೀರು ಕುಡಿಯಲು ಬೇಜಾರಲ್ಲವೇ? ಹಾಗೆಯೇ ಅಳಿಲು ನನಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ಸಾತ್ ಕೊಡತ್ತೆ. ಅದಕ್ಕೂ ಎಳನೀರ ಕಾಯಿ ತಿನ್ನಲು ಬಲು ಇಷ್ಟ. ನಾನು ತಪ್ಪದೆ ಅದಕ್ಕೆ ಹಾಕುತ್ತೇನೆ. ಅದು ತಿಂದು ಕಿಚಪಿಚ ಸದ್ದು ಮಾಡಿ ಹೋದಾಗ ನನಗೂ ಖುಷಿ,” ಎಂದಾಗ ಆತನ ಮುಖದ ತುಂಬಾ ನಗು ಮೂಡಿತ್ತು. “ಭಾಳ ಸಂತೋಷ ಆಯ್ತು. ನಿಮ್ಮ ಹೆಸರೇನು?” ಎಂದೆ. “ನನ್ನ ಹೆಸರು ಭೈರವೇಶ್ವರನೇ! ಮನೆದೇವರು.”

ನಾಸ್ತಿಕಳಾದರೂ ನನಗೆ ದೇವರು ಎಂಬ ನಂಬಿಕೆ ಮೇಲೆ ಅವನಿಗಿದ್ದ ವಿಶ್ವಾಸ ಅರ್ಥವಾಯಿತು. ನನ್ನ ಮತ್ತು ಆತನ ನಂಬಿಕೆ ಏನೇ ಇರಲಿ. ಆತನ ನಂಬಿಕೆ ಜೀವಪರ ನಡೆಯಲ್ಲಿ ರೂಪುಗೊಂಡಿರುವ ರೀತಿ ನನಗೆ ಇಷ್ಟವಾಯಿತು. ಕೊನೆಗೆ ನಮ್ಮನ್ನು ನಡೆಸುವುದು ಪ್ರೀತಿ, ಅಂತಃಕರಣ, ಪರಸ್ಪರ ವಿಶ್ವಾಸ ಮತ್ತು ಜೀವಪರ ಮೌಲ್ಯಗಳಷ್ಟೇ. ಈ ಮೌಲ್ಯಗಳಿಗೆ ದೇವರ ಅಸ್ತಿತ್ವದ ಗೊಡವೆ ಇರುವುದಿಲ್ಲ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More