ಚಿತ್ತವಿತ್ತ | ನಿಜವಾಗಿಯೂ ನಾವೆಲ್ಲ ಅಂದುಕೊಂಡಷ್ಟು ಸಂಭಾವಿತರಾ?

ಬದುಕಿಡೀ ಒಳ್ಳೆಯವರಾಗಿ ಕಾಣಿಸಿಕೊಳ್ಳುವುದಕ್ಕೆ ಹೆಣಗುತ್ತಿರುತ್ತೇವೆ. ನಾವು ಪರಿಪೂರ್ಣರು, ಪ್ರತಿಕ್ಷಣವೂ ನೈತಿಕತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ ಅಂತ ಭಾವಿಸಿಕೊಂಡಿರುತ್ತೇವೆ. ಇದು ಕೇವಲ ಭ್ರಮೆ. ಚುನಾವಣೆ ಸಮಯದಲ್ಲಿ ಬಹುತೇಕರು ಇದೇ ಭ್ರಮೆಯಲ್ಲಿ ಮುಳುಗಿರುತ್ತಾರೆ!

ಈ ಜಗತ್ತಿನಲ್ಲಿ ರಾಜಕಾರಣಿಗಳು ಸರಿ ಇಲ್ಲ, ಅಧಿಕಾರಿಗಳು ಭ್ರಷ್ಟರು, ಇತ್ಯಾದಿ, ಇತ್ಯಾದಿಗಳು ನಾವೆಲ್ಲ ಒಪ್ಪಿಕೊಂಡಿರುವ ಸತ್ಯ. “ಈ ಭ್ರಷ್ಟರ ಜಗತ್ತಿನಲ್ಲಿ ನಾನು ಮಾತ್ರ ಒಳ್ಳೆಯವನು, ನೈತಿಕತೆಯನ್ನು ತುಂಬಾ ಜತನವಾಗಿ ಕಾಪಾಡಿಕೊಂಡು ಬಂದಿದ್ದೇನೆ,” -ಇದು ನನ್ನ ಅಚಲವಾದ ನಂಬಿಕೆ, ನನ್ನಂತೆ ಎಲ್ಲರ ನಂಬಿಕೆಯೂ. ನಾವು ಭ್ರಷ್ಟ ಅಂತ ಕರೆಯುವ ರಾಜಕಾರಣಿಯನ್ನೇ ಕೇಳಿನೋಡಿ; ಅವನು ತನ್ನನ್ನು ಶುದ್ಧ ಅಂತಲೇ ಅಂದುಕೊಂಡಿರುತ್ತಾನೆ. ಅಷ್ಟೇ ಅಲ್ಲ, ಜನ ರಾಜಕಾರಣಿಯನ್ನು ಮಾತ್ರವಲ್ಲ, ನನ್ನನ್ನೂ ಇವನು ಸಂಭಾವಿತ ಅಂತ ಯಾವಾಗಲೂ ಭಾವಿಸಿರಲಿಕ್ಕಿಲ್ಲ. ನಾನು ಜನ ನನ್ನನ್ನು ಭಾವಿಸಬೇಕು ಅಂದುಕೊಂಡಿರುವುದಕ್ಕೂ ಅವರು ನನ್ನನ್ನು ಗ್ರಹಿಸಿಕೊಂಡಿರುವುದಕ್ಕೂ ನಡುವೆ ಅಂತರವಿದೆ. ಅದು ಹೆಚ್ಚಿರಬಹುದು ಅಥವಾ ಕಡಿಮೆ ಇರಬಹುದು.

ಬದುಕಿಡೀ ನಾವು ಒಳ್ಳೆಯವರಾಗಿ ಕಾಣಿಸಿಕೊಳ್ಳುವುದಕ್ಕೆ ಹೆಣಗುತ್ತಿರುತ್ತೇವೆ. ನಾವು ಮನುಷ್ಯರಾಗಿ ಪರಿಪೂರ್ಣರು, ಪ್ರತಿಕ್ಷಣವೂ ನೈತಿಕತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ ಅಂತ ಭಾವಿಸಿಕೊಂಡಿರುತ್ತೇವೆ. ಇದು ಕೇವಲ ಭ್ರಮೆ. ನಾವೆಲ್ಲ ಯಾವುದೋ ಗಳಿಗೆಯಲ್ಲಿ ನಮಗೇ ಗೊತ್ತಿಲ್ಲದೆ ನೈತಿಕತೆಯ ಗಡಿಯನ್ನು ದಾಟಿರುತ್ತೇವೆ. ಬೇಕಾದವರಿಗೆ ನೆರವಾಗುತ್ತಲೋ, ನಮ್ಮ ನಿಲುವನ್ನು ಬೇರೆಯವರ ಮೇಲೆ ಹೇರುತ್ತಲೋ ಆ ನೈತಿಕತೆಯ ಎಲ್ಲೆಯನ್ನು ಮೀರಿಬಿಟ್ಟಿರುತ್ತೇವೆ. ಆದರೂ ನನ್ನ ಮಟ್ಟಿಗೆ ನಾನು ಒಳ್ಳೆಯವನೇ, ಪರಮ ಸಂಭಾವಿತ! ಆದರೆ, ಮೂರನೆಯವರಿಗೆ ನಾನು ನೈತಿಕತೆಯನ್ನು ಉಲ್ಲಂಘಿರುವುದು ಕಾಣುತ್ತದೆ. ಇದು ನನ್ನ ವಿಷಯದಲ್ಲಿ ಮಾತ್ರವಲ್ಲ, ನೈತಿಕವಾಗಿ ಪರಿಪೂರ್ಣ ಆಗಿರುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ನಮ್ಮೆಲ್ಲರ ನೈತಿಕತೆಗೂ ಮಿತಿ ಇರುತ್ತದೆ. ಈ ಬಗ್ಗೆ ಅಧ್ಯಯನ ಮಾಡಿರುವ ಪ್ರೊಫೆಸರ್ ಡಾಲಿ ಚಗ್ ಇದನ್ನು ‘ಬೌಂಡೆಡ್ ನೈತಿಕತೆ’ ಅಥವಾ ‘ಸೀಮಿತ ನೈತಿಕತೆ’ ಅಂತ ಕರೆಯುತ್ತಾರೆ.

ಇದು ಅರ್ಥಶಾಸ್ತ್ರದಿಂದ ತೆಗೆದುಕೊಂಡ ಪರಿಕಲ್ಪನೆ. ಸಾಮಾನ್ಯವಾಗಿ ಅರ್ಥಶಾಸ್ತ್ರ ಮನುಷ್ಯನನ್ನು ವಿವೇಚನಾಶೀಲ ಅಂತಲೇ ಭಾವಿಸುತ್ತದೆ. ಅದರ ಪ್ರಕಾರ, ಮನುಷ್ಯ ತನ್ನ ಯಾವುದೇ ಆಯ್ಕೆಯ ಮೊದಲು, ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ವಿವೇಚನೆಯಿಂದ ಪರಿಶೀಲಿಸಿ, ತನಗೆ ಗರಿಷ್ಠ ಅನುಕೂಲ ತಂದುಕೊಡುವ, ಸಂತೋಷ ಕೊಡುವ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾನೆ. ಇದು ಎಲ್ಲ ಅರ್ಥಶಾಸ್ತ್ರ ಸಿದ್ಧಾಂತಗಳ ಹಿಂದಿರುವ ನಂಬಿಕೆ. ಈ ನಂಬಿಕೆಯನ್ನು ಮೊದಲಿಗೆ ಹರ್ಬರ್ಟ್ ಸೀಮನ್ ಪ್ರಶ್ನಿಸಿದ. ಮನುಷ್ಯರು ವಿವೇಚನಾಶೀಲರು ನಿಜ. ಆದರೆ, ಅವರ ವಿವೇಚನಾಶಕ್ತಿಗೂ ಒಂದು ಮಿತಿ ಇದೆ. ಅವರು ತಮ್ಮ ಆಯ್ಕೆಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ, ಹಾಗೆ ಸಂಗ್ರಹಿಸುವುದಕ್ಕೆ ಸಾಧ್ಯವೂ ಇಲ್ಲ. ಹಾಗೇ ಮಾಹಿತಿಯನ್ನು ಸಂಸ್ಕರಿಸುವ ಮನುಷ್ಯನ ಸಾಮರ್ಥ್ಯಕ್ಕೂ ಒಂದು ಮಿತಿ ಇದೆ. ಹಾಗಾಗಿ ಅವರ ನಿರ್ಧಾರಗಳೂ ತಪ್ಪಾಗುವ ಸಾಧ್ಯತೆ ಇದೆ, ತಪ್ಪಾಗುತ್ತಿರುತ್ತವೆ. ಅಷ್ಟೇ ಅಲ್ಲ, ಅವರಿಗೆ ನಿಜವಾಗಿ ಸಂತೋಷ ಸಿಗುವುದು ಯಾವುದರಿಂದ ಅನ್ನುವುದೂ ತಿಳಿದಿರುವುದಿಲ್ಲ. ಸೀಮನ್ ಇದನ್ನು ಬೌಂಡೆಡ್ ರ‍್ಯಾಷನಾಲಿಟಿ ಅಥವಾ ಸೀಮಿತ ವಿವೇಚನೆ ಅಂತ ಕರೆದ. ಇದು ಮುಂದೆ ಮನುಷ್ಯನ ವರ್ತನೆಯನ್ನು ಅರ್ಥಶಾಸ್ತ್ರದ ವ್ಯಾಪ್ತಿಗೆ ತರುವುದಕ್ಕೆ ಕಾರಣವಾಯಿತು. ಅವನಿಗೆ ನೊಬೆಲ್ ಪ್ರಶಸ್ತಿಯೂ ಬಂದಿತು. ವರ್ತನಾ ಅರ್ಥಶಾಸ್ತ್ರ ಎಂಬ ಒಂದು ಹೊಸ ಶಾಖೆಯೇ ಹುಟ್ಟಿಕೊಂಡಿತು. ಈ ಸೀಮಿತ ವಿವೇಚನೆಯ ಪರಿಕಲ್ಪನೆಯನ್ನೇ ಕೆಲವರು ಮನುಷ್ಯರ ನೈತಕತೆಗೂ ಅನ್ವಯಿಸಿ ಸೀಮಿತ ನೈತಿಕತೆಯ ಪರಿಕಲ್ಪನೆಯನ್ನು ರೂಪಿಸಿದ್ದಾರೆ.

ನಾವು ಒಳ್ಳೆಯವರು, ಯಾವಾಗಲೂ ನೈತಿಕತೆಯನ್ನು ಮೀರುವುದಿಲ್ಲ. ನಮಗೆ ಯಾವುದೇ ಪಕ್ಷಪಾತ ಧೋರಣೆಯೂ ಇಲ್ಲ. ಎಲ್ಲಾ ಸಂದರ್ಭಗಳಲ್ಲೂ ನಾವು ಒಳ್ಳೆಯವರಾಗೇ ಇರುತ್ತೇವೆ. ಹಾಗಂತ ಜನ ನಮ್ಮನ್ನು ನಂಬಬೇಕು ಅಂತ ನಾವು ಬಯಸುತ್ತೇವೆ. ಆದರೆ ಪುರಾವೆಗಳು ಹೇಳುವ ಕಥೆಯೇ ಬೇರೆ. ನಾವೆಲ್ಲಾ ಒಂದಲ್ಲ ಒಂದು ಸಮಯದಲ್ಲಿ ಯಾವ್ಯಾವುದೋ ಅಂಶಗಳಿಂದ ಪ್ರಭಾವಿತರಾಗುತ್ತಿರುತ್ತೇವೆ. ಡಾಕ್ಟರುಗಳು, ನ್ಯಾಯಾಧೀಶರು, ಎಲ್ಲರೂ ತಮ್ಮನ್ನು ವೃತ್ತಿಪರರು ಅಂತಲೇ ಹೇಳಿಕೊಳ್ಳುತ್ತಾರೆ. ಆದರೆ ಅವರ ನಿಧರ್ಾರಗಳು ಕೂಡ ಅವರಿಗೇ ಗೊತ್ತಿಲ್ಲದೆ ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತವೆ. ನಮ್ಮೆಲ್ಲರದ್ದೂ ಒಂದು ಸೀಮಿತವಾದ ನೈತಿಕತೆ.

ಡಾಲಿ ಚಗ್ ಒಂದು ಪ್ರಯೋಗ ಮಾಡಿದರು. ಅಮೆರಿಕದ ಹಲವು ವಿಶ್ವವಿದ್ಯಾನಿಲಯಗಳ ಹಲವು ವಿಭಾಗಗಳನ್ನು ಮತ್ತು ಅವುಗಳಲ್ಲಿ ಕೆಲವು ಪ್ರೊಫೆಸರುಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿಕೊಂಡರು. ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ಕೋರಿ ಇಮೇಲುಗಳನ್ನು ಕಳುಹಿಸಿದರು. ಆದರೆ, ಈ ಪತ್ರಗಳನ್ನು ಬೇರೆ ಬೇರೆ ಗುಂಪಿಗೆ ಸೇರಿದವರ ಹೆಸರಿನಲ್ಲಿ ಕಳುಹಿಸಿದರು. ಪುರುಷರು, ಅವರಲ್ಲಿ ಬಿಳಿಯರು ಮತ್ತು ಕರಿಯರು, ಮಹಿಳೆಯರು ಮತ್ತೆ ಅವರಲ್ಲಿ ಬಿಳಿಯರು ಮತ್ತು ಕರಿಯರು, ಹಾಗೆಯೇ ಭಾರತೀಯರು ಇತ್ಯಾದಿ ಹಲವು ಗುಂಪುಗಳಿಗೆ ಸೇರಿದ ಹೆಸರುಗಳನ್ನು ಆಯ್ಕೆ ಮಾಡಿಕೊಂಡು ಅವರ ಹೆಸರಲ್ಲಿ ಇಮೇಲುಗಳನ್ನು ಕಳುಹಿಸಿದರು. ಬಿಳಿಯ ಪುರುಷನ ಹೆಸರಿನಲ್ಲಿ ಹೋಗಿದ್ದ ಪತ್ರಗಳಿಗೆ ಶೇ.90ರಷ್ಟು ಪ್ರೋತ್ಸಾಹಕರ ಪ್ರತಿಕ್ರಿಯೆಗಳು ಬಂದವು!

ಜಾತಿ, ಧರ್ಮ ಅಥವಾ ಲಿಂಗವನ್ನು ಆಧರಿಸಿರುವ ಕೆಲವು ಪೂರ್ವಗ್ರಹಗಳು ನಮಗೆ ಗೊತ್ತಿಲ್ಲದೆಯೇ ನಮ್ಮಲ್ಲಿ ಬಂದುಬಿಟ್ಟಿರುತ್ತವೆ. ಅದು ನಮ್ಮ ಅರಿವಿಗೇ ಬಾರದಂತೆ ಕ್ಷಣಮಾತ್ರದಲ್ಲಿ ನಮ್ಮ ನಿರ್ಧಾರಗಳನ್ನು ಪ್ರಭಾವಿಸಿಬಿಡುತ್ತವೆ. ಒಳ್ಳೆಯ ಗುಣಗಳನ್ನು ಕೆಲವು ಜಾತಿಯವರಿಗೆ, ಕೆಲವು ಧರ್ಮದವರಿಗೆ ಮತ್ತು ಕೆಲವು ಕೆಟ್ಟ ಗುಣಗಳನ್ನು ಇನ್ನೆಷ್ಟೋ ಜಾತಿ-ಧರ್ಮದವರಿಗೆ ಆರೋಪಿಸುತ್ತೇವೆ. ಇದನ್ನು ನಾವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಮಾಡಿಯೇ ಇರುತ್ತೇವೆ. ಹಾಗೆಯೇ ಒಂದು ನಿರ್ಧಾರ ಸರಿಯೋ ತಪ್ಪು ಅಂತ ನಿರ್ಧರಿಸುವಲ್ಲಿಯೂ ನಮ್ಮ ನಂಬಿಕೆಗಳು, ನಾವು ಬೆಂಬಲಿಸುವ ಪಕ್ಷಗಳು, ನಮ್ಮ ಪರಿಸರ ಇಂತಹ ಹಲವಾರು ಅಂಶಗಳು ಮುಖ್ಯವಾಗುತ್ತವೆ.

ಇವೆಲ್ಲ ನಮ್ಮ ಮನಸ್ಸಿಗೆ ಮಂಕು ಕವಿಸುತ್ತವೆ. ನಮಗೆ ಗೊತ್ತಿಲ್ಲದೆಯೇ ನಮ್ಮ ಪೂರ್ವಗ್ರಹಗಳ ಪ್ರಚಾರಕ್ಕೆ ನಾವು ನಿಂತಿರುತ್ತೇವೆ. ಬಿಳಿಯರು ಮತ್ತು ಕರಿಯರು ಎಂಬ ವಿಂಗಡಣೆಯನ್ನೇ ತೆಗೆದುಕೊಳ್ಳಿ. ಸಾಮಾನ್ಯವಾಗಿ ಬಿಳಿಯರು ಉತ್ತಮರು ಎಂದು ಭಾವಿಸುವುದು ಅಭ್ಯಾಸ. ಇದನ್ನು ಬಿಳಿಯರು ಮಾತ್ರವಲ್ಲ ಹಲವು ಕರಿಯರೂ ಒಪ್ಪಿಕೊಂಡುಬಿಟ್ಟಿರುತ್ತಾರೆ. ಗಂಡಸರು ಮಾತ್ರ ಗಣಿತದಲ್ಲಿ ಜಾಣರು ಅನ್ನುವುದನ್ನು ಹಲವು ಮಹಿಳೆಯರೂ ಅಪ್ರಜ್ಞಾಪೂರ್ವಕವಾಗಿ ಒಪ್ಪಿಕೊಂಡಿರುತ್ತಾರೆ. ಮೃದಂಗ ನುಡಿಸುವ ಮಹಿಳೆಯನ್ನು ಅಥವಾ ಮಹಿಳಾ ಶಸ್ತ್ರಚಿಕಿತ್ಸಕರನ್ನು ಬೆರಗಿನಿಂದ ನೋಡುತ್ತೇವೆ. ಆ ಜಾತಿಯಿಂದ/ಧರ್ಮದಿಂದ ಬಂದಿದ್ದರೂ ಎಷ್ಟೊಂದು ಸುಸಂಸ್ಕೃತನಾಗಿ ನಡೆದುಕೊಳ್ಳುತ್ತಾನೆ ಎನ್ನುವಂತಹ ಮಾತುಗಳನ್ನು ನಾವು ಹಲವು ಬಾರಿ ಕೇಳಿದ್ದೇವೆ. ಕೆಲವು ಗುಂಪಿನ ಜನಕ್ಕೆ ಕೆಲವು ಸಾಮರ್ಥ್ಯಗಳು ಸಾಧ್ಯ ಅಂತ ಅಂದುಕೊಂಡುಬಿಟ್ಟಿದ್ದೇವೆ. ನಾವು ಒಂದು ಜಾತಿಗೆ ಸುಸಂಸ್ಕೃತತೆಯ ಪಟ್ಟವನ್ನು ಕೊಟ್ಟಿರುತ್ತೇವೆ, ಅಂತೆಯೇ ಇನ್ನೊಂದು ಗುಂಪಿಗೆ ಎಲ್ಲ ಅವಗುಣಗಳನ್ನು ಆರೋಪಿಸಿಬಿಡುತ್ತೇವೆ. ಅವರ ವಿರುದ್ಧ ಮಾಡುವ ಆರೋಪಕ್ಕೆ ನಮಗೆ ಯಾವುದೇ ಪುರಾವೆಯೂ ಬೇಕಾಗಿಲ್ಲ. ಅದನ್ನು ಸ್ವಾಭಾವಿಕ ಅನ್ನುವಷ್ಟು ಸಲೀಸಾಗಿ ಒಪ್ಪಿಕೊಳ್ಳುತ್ತೇವೆ. ಒಬ್ಬ ಅಪರಿಚಿತ ಮುಸ್ಲಿಮನನ್ನು ಭಯೋತ್ಪಾದಕ ಅಂತ ಕರೆಯುವುದಕ್ಕೆ ನಮಗೆ ಕಷ್ಟವೇ ಆಗುವುದಿಲ್ಲ!

ಇನ್ನೂ ದುರಂತ ಅಂದರೆ, ನಮಗೆ ನಮ್ಮ ನಂಬಿಕೆಗಳನ್ನು ಪರೀಕ್ಷಿಸಿಕೊಳ್ಳಲು ಅವಕಾಶಗಳು ಇದ್ದಾಗಲೂ ನಾವು ಅದನ್ನು ನೋಡುವ, ಹುಡುಕುವ ಪ್ರಯತ್ನವನ್ನು ಮಾಡುವುದಿಲ್ಲ. ಅದನ್ನು ನಾವು ನೋಡುವುದಿಲ್ಲ ಅಷ್ಟೇ ಅಲ್ಲ, ನಮಗೆ ಅದನ್ನು ನೋಡುವ ಮನಸ್ಸೂ ಇಲ್ಲ. ಅಮೆರಿಕದ ಕೆಲವು ಮನಶ್ಯಾಸ್ತ್ರಜ್ಞರು ಒಂದು ಪ್ರಯೋಗ ಮಾಡಿದರು. ಅದರಲ್ಲಿ ಪಾಲ್ಗೊಂಡವರ ಕೆಲವು ತಪ್ಪು ಗ್ರಹಿಕೆಗಳನ್ನು ಮತ್ತೊಮ್ಮೆ ಅವಲೋಕನ ಮಾಡಿಕೊಳ್ಳುವುದಕ್ಕೆ ಒಂದು ಅವಕಾಶ ಮಾಡಿಕೊಟ್ಟರು. ಅದಕ್ಕೆ ಬೇಕಾದ ಪೂರಕ ಮಾಹಿತಿಯನ್ನು ಒದಗಿಸಿದರು. ಆದರೆ, ಬಹುಪಾಲು ಜನ ಅವನ್ನು ನೋಡುವುದಕ್ಕೂ ತಯಾರಿರಲಿಲ್ಲ. ತಮ್ಮ ನಂಬಿಕೆಗೆ ವ್ಯತಿರಿಕ್ತವಾದ ಮಾಹಿತಿಯನ್ನು ಅವರು ಸ್ವೀಕರಿಸುವುದಕ್ಕೆ ತಯಾರಿರಲಿಲ್ಲ. ಜನರ ಪೂರ್ವಗ್ರಹಗಳನ್ನು ಕಳಚುವುದು, ನಂಬಿಕೆಯ ಚೌಕಟ್ಟಿನಿಂದ ಆಚೆಗೆ ಬಂದು ಜಗತ್ತನ್ನು ನೋಡುವಂತೆ ಮಾಡುವುದು ಅಷ್ಟು ಸರಳವಲ್ಲ.

“ಗಂಡಸರಿಗಿಂತ ಹೆಂಗಸರಿಗೆ ಕಡಿಮೆ ಹಲ್ಲು ಇವೆ,” ಅಂತ ಖ್ಯಾತ ಚಿಂತಕ ಅರಿಸ್ಟಾಟಲ್ ಹೇಳುತ್ತಿದ್ದ. ಅವನಿಗೆ ಇಬ್ಬರು ಹೆಂಡತಿಯರು ಬೇರೆ! ಒಬ್ಬಳ ಹಲ್ಲು ಎಣಿಸಿನೋಡಿದ್ದರೂ ಸತ್ಯ ಗೊತ್ತಾಗುತ್ತಿತ್ತು. ಹಾಗೆ ನೋಡುವುದು ಅವನಿಗೆ ಬೇಕಾಗಿರಲಿಲ್ಲ ಅಷ್ಟೆ. ಅದು ಕೇವಲ ನೋಡುವುದಕ್ಕೆ ಸಂಬಂಧಿಸಿದ್ದಲ್ಲ, ಅದೊಂದು ಮಾನಸಿಕ ಸ್ಥಿತಿಯೂ ಹೌದು. ತಮ್ಮ ಪಕ್ಷದಲ್ಲೇ ಹೇರಳವಾಗಿ ಭ್ರಷ್ಟರನ್ನು ಇಟ್ಟುಕೊಂಡು ಇನ್ನೊಂದು ಪಕ್ಷದ ಮೇಲೆ ಭ್ರಷ್ಟತೆಯ ಆರೋಪ ಮಾಡುವುದಕ್ಕೆ ಯಾವ ಸಮಸ್ಯೆಯೂ ಇಲ್ಲ. ನಮ್ಮ ತೀರ್ಮಾನಗಳ ಜಗತ್ತಿನಲ್ಲಿ ನಾವು ಹಾಯಾಗಿ ಇರುತ್ತೇವೆ. ಅದನ್ನು ಯಾರಾದರೂ ಛಾಲೆಂಜ್ ಮಾಡಿದಾಗಷ್ಟೇ ನಾವು ಅದನ್ನು ಮತ್ತೆ ಅವಲೋಕಿಸುವುದು. ಆಗಲೂ ನಾವು ಅದರ ಸಮರ್ಥನೆಗೆ ನಿಲ್ಲಬಹುದು; ಕೆಲವೊಮ್ಮೆ ಅದನ್ನು ದಾಳಿಯಾಗಿ ಗ್ರಹಿಸುತ್ತ ಯುದ್ಧಕ್ಕೇ ಬಿದ್ದುಬಿಡುತ್ತೇವೆ.

ಇದಕ್ಕೆ ಸಂಬಂಧಿಸಿದ, ಆದರೆ ಸ್ವಲ್ಪ ಭಿನ್ನವಾದ ಇನ್ನೊಂದು ಪ್ರವೃತ್ತಿಯನ್ನು ಗಮನಿಸಬಹುದು. ಒಂದು ಅಧ್ಯಯನವನ್ನು ಮೂರು-ನಾಲ್ಕು ಸಂಶೋಧಕರು ಸೇರಿ ಮಾಡಿರುತ್ತಾರೆ ಅಂದುಕೊಳ್ಳಿ. ಅವರೆಲ್ಲರನ್ನೂ ಪ್ರತ್ಯೇಕವಾಗಿ ಆ ಅಧ್ಯಯನದಲ್ಲಿ ಅವರ ಪಾಲೆಷ್ಟು ಅಂತ ಕೇಳಿ; ಅವರು ಹೇಳುವುದನ್ನೆಲ್ಲ ಒಟ್ಟಿಗೆ ಕೂಡಿದರೆ ಅದು ಶೇಕಡ ನೂರೈವತ್ತೋ, ನೂರಾ ಅರವತ್ತೋ ಆಗಿಬಿಡಬಹುದು! ಹಾಗೆಯೇ ಒಂದು ಕುಟುಂಬದಲ್ಲಿ ತಮ್ಮ ಪಾಲು ಎಷ್ಟು ಎಂದು ಗಂಡ-ಹೆಂಡತಿಯನ್ನು ಪ್ರತ್ಯೇಕವಾಗಿ ಕೇಳಿ ನೋಡಿ; ಅದನ್ನು ಒಟ್ಟಿಗೆ ಕೂಡಿಸಿದರೆ ಶೇಕಡ ನೂರು ಮೀರಿಬಿಡುತ್ತದೆ. ನಮ್ಮ ಪಾತ್ರವನ್ನು ಹಿಗ್ಗಿಸಿಕೊಳ್ಳುವ ಪ್ರವೃತ್ತಿ ನಮ್ಮೆಲ್ಲರಲ್ಲೂ ಇದೆ.

ಇದನ್ನೂ ಓದಿ : ಚಿತ್ತವಿತ್ತ | ಎಚ್ಚರಿಕೆ, ನಿಮ್ಮ ಮನಸ್ಸಿಗೆ ಕನ್ನ ಹಾಕುವವರು ಬರುತ್ತಿದ್ದಾರೆ!

ಹೀಗೆ ಇಂತಹ ಹಲವಾರು ಸಮಸ್ಯೆಗಳನ್ನು ತುಂಬಾ ಪ್ರೀತಿಯಿಂದ ಸಾಕಿಕೊಂಡು ಬಂದಿದ್ದೇವೆ. ಇದು ಯಾರದೋ ಕೆಲವರ ಸಮಸ್ಯೆಯಲ್ಲ. ಪ್ರತಿಯೊಬ್ಬರ ಸಮಸ್ಯೆಯೂ ಹೌದು. ಇದು ಮನುಷ್ಯರ ಸ್ವಭಾವ. ಯಾರೋ ಕೆಲವರು ಮಾಡುತ್ತಾರೆ, ಉಳಿದವರು ಮಾಡುವುದಿಲ್ಲ ಅಂತ ಅಲ್ಲ. ನಮ್ಮೆಲ್ಲರದ್ದೂ ಇದೇ ಪ್ರವೃತ್ತಿ.

ಬಹುಶಃ ಪದೇಪದೇ ನಮ್ಮ ನಿಲುವುಗಳನ್ನು ಪರೀಕ್ಷೆಗೆ ಒಡ್ಡಿಕೊಳ್ಳುತ್ತ, ಲಭ್ಯವಿರುವ ಮಾಹಿತಿಯನ್ನು ಸೂಕ್ತವಾಗಿ ಸಂಸ್ಕರಿಸುತ್ತ, ನಮ್ಮ ಪೂರ್ವಗ್ರಹಗಳನ್ನು ಪ್ರಜ್ಞಾಪೂರ್ವಕವಾಗಿ ಸರಿಮಾಡಿಕೊಳ್ಳುತ್ತ ಹೋಗುವ ಪ್ರಕ್ರಿಯೆ ನಿರಂತರವಾಗಿ ನಮ್ಮೊಳಗೇ ನಡೆಯದಿದ್ದಲ್ಲಿ, ನಮ್ಮ ನೈತಿಕತೆಯ ಸೀಮಿತತೆಯನ್ನು ಕಿರಿದುಗೊಳಿಸುವುದಕ್ಕೆ ಸಾಧ್ಯವಿಲ್ಲ. ಜೊತೆಗೆ, ನಮ್ಮನ್ನು ನಾವು ಅರ್ಥ ಮಾಡಿಕೊಂಡಿರುವುದಕ್ಕೂ ಜಗತ್ತು ನಮ್ಮನ್ನು ಪರಿಭಾವಿಸಿರುವುದಕ್ಕೂ ನಡುವಿನ ಕಂದರ ಕಡಿಮೆಯಾಗುವುದಿಲ್ಲ.

ಚಿತ್ರ: ಪ್ರೊಫೆಸರ್ ಡಾಲಿ ಚಗ್

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More