ರಾವಿ ತೀರ | ಪರ್ವತಗಳ ತಂಗಾಳಿ ಬೀಸುತ್ತಿದ್ದ ಕಸೌಲಿಯಲ್ಲೀಗ ಪಾತಕದ ವಿಷಗಾಳಿ

ಖುಶ್ವಂತ್ ಸಿಂಗ್ ಬದುಕಿದ್ದ, ಪ್ರೀತಿಸಿದ್ದ ಕಸೌಲಿ ಪಟ್ಟಣ ಈಗ ಹಾಗೇ ಉಳಿದಿಲ್ಲ. ಪ್ರಶಾಂತ ರಸ್ತೆ, ಭವ್ಯ ಮನೆಗಳು, ಹಕ್ಕಿಗಳ ಕಲರವ, ಉಲ್ಲಾಸಕರ ತಂಗಾಳಿ... ಇವೆಲ್ಲದರೊಂದಿಗೆ ಈ ಪಟ್ಟಣಕ್ಕೀಗ, ‘ಅಕ್ರಮ ಕಟ್ಟಡ ಕೆಡವದಿರುವುದಕ್ಕೆ ಕೊಟ್ಟ ಲಂಚ ಸ್ವೀಕರಿಸದ ಅಧಿಕಾರಿ ಹತ್ಯೆಯಾದ ಪಟ್ಟಣ’ ಎಂಬ ಬಿರುದೂ ಸಿಕ್ಕಿದೆ!

ಪತ್ರಕರ್ತ, ಅಂಕಣಕಾರ, ಇತಿಹಾಸಕಾರ ಮತ್ತು ರಾಜತಾಂತ್ರಿಕ ಖುಶ್ವಂತ್ ಸಿಂಗ್ ಅವರಿಗೆ ತಾವು ನಿಧನರಾಗುವ ಸುಮಾರು ಎರಡು ವರ್ಷಗಳ ಹಿಂದಷ್ಟೇ 2012ರ ಶರತ್ಕಾಲದಲ್ಲಿ ತಮ್ಮದೇ ಹೆಸರಿನಲ್ಲಿ ಪ್ರಾರಂಭವಾದ ಸಾಹಿತ್ಯೋತ್ಸವವನ್ನು ಕಾಣುವ ಅವಕಾಶ ಸಿಕ್ಕಿತು. ಅದನ್ನು ಹಿಮಾಚಲ ಪ್ರದೇಶದ ಬೆಟ್ಟಗಳ ನಡುವಿರುವ ಅವರ ಪ್ರೀತಿಯ ಸೇನಾ ಪಟ್ಟಣ ಕಸೌಲಿಯಲ್ಲಿ ಸಂಘಟಿಸಲಾಗಿತ್ತು. ಇದನ್ನು ಅವರ ಗೆಳೆಯರು, ಹಿತೈಶಿಗಳು ಮತ್ತು ಅಭಿಮಾನಿಗಳು ಸೇರಿ ಸಂಘಟಿಸಿದ್ದರೂ ಅದರ ಹಿಂದೆ ಪ್ರೇರಕ ಶಕ್ತಿಯಾಗಿ ನಿಂತವರು ಖುಶ್ವಂತ್ ಸಿಂಗ್ ಅವರ ಪತ್ರಕರ್ತ ಪುತ್ರ ರಾಹುಲ್ ಸಿಂಗ್.

ಈ ವಾರ ಅದೇ ಕಸೌಲಿ ಪಟ್ಟಣ ಮತ್ತೆ ಸುದ್ದಿಯಲ್ಲಿದೆ. ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೆಡವಲು ಹೋದ ಸರ್ಕಾರಿ ಅಧಿಕಾರಿಯೊಬ್ಬರನ್ನು ಅತ್ಯಂತ ಬರ್ಬರವಾಗಿ ಹತ್ಯೆಗೈದಿದ್ದರಿಂದ ಪ್ರಶಾಂತವಾಗಿದ್ದ ಕಸೌಲಿ ಪಟ್ಟಣವೀಗ ಜರ್ಝರಿತವಾಗಿದೆ. ಈ ಪಟ್ಟಣದ ಮೂಲ ಪರಿಸರವನ್ನು ಸಂರಕ್ಷಿಸುವುದಕ್ಕೋಸ್ಕರ ಜಾರಿಗೆ ತಂದಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿ ಹೇಗೆ ಕಾನೂನುಬಾಹಿರವಾಗಿ ಅಕ್ರಮ ಕಟ್ಟಡಗಳನ್ನು ಕಟ್ಟಲಾಗುತ್ತಿದೆ ಎಂಬ ವಿಷಯದ ಬಗ್ಗೆಯೂ ಈ ಕಗ್ಗೊಲೆ ಬೆಳಕು ಚೆಲ್ಲಿದೆ. ಯಾವುದೇ ಲಾಭದ ಉದ್ದೇಶವಿಲ್ಲದೆ ಪ್ರತೀ ವರ್ಷ ಅಕ್ಟೋಬರ್‌ನಲ್ಲಿ ಕಸೌಲಿಯಲ್ಲಿ ಸಂಘಟಿಸಲಾಗುವ ಖುಶ್ವಂತ್ ಸಿಂಗ್ ಸಾಹಿತ್ಯೋತ್ಸವದಿಂದ (ಕೆಎಸ್ಎಲ್ಎಫ್) ಬಂದ ಹಣವನ್ನು ಈ ಪಟ್ಟಣದ ಪರಿಸರವನ್ನು ಸಂರಕ್ಷಿಸುವುದಕ್ಕೋಸ್ಕರ ದೇಣಿಗೆ ನೀಡಲಾಗುತ್ತದೆ ಎಂಬ ವಿಷಯ ಕೆಲವರಿಗೆ ಮಾತ್ರ ಗೊತ್ತಿದೆ. ಅದು ಖುಶ್ವಂತ್ ಸಿಂಗ್ ಹೃದಯಕ್ಕೆ ತೀರಾ ಹತ್ತಿರವಾದ ವಿಷಯ. ಅವರು ಪುಸ್ತಕಗಳನ್ನು ಬರೆಯುತ್ತ, ಅಂಕಣಗಳನ್ನು ಬರೆಯುತ್ತ ಹಲವು ವರ್ಷಗಳ ಕಾಲ ನೆಲೆಸಿದ್ದ ಆ ಸುಂದರ ಪಟ್ಟಣವೀಗ ಹಾಳಾಗುತ್ತಿರುವುದನ್ನು ನೋಡಿದರೆ ಪ್ರಾಯಶಃ ಅವರು ಬಹಳ ನೊಂದುಕೊಳ್ಳುತ್ತಿದ್ದರು.

ಕಸೌಲಿ ಕ್ಲಬ್‌ನಿಂದ ಅನತಿ ದೂರದಲ್ಲಿ ಖುಶ್ವಂತ್ ಸಿಂಗ್ ಅವರಿಗೆ ಹಲವು ವರ್ಷಗಳ ಕಾಲ ಬೇಸಿಗೆಯ ನೆಲೆಯಾಗಿದ್ದ ದೊಡ್ಡ ಬಂಗಲೆ ಇದೆ. ಸಾಹಿತ್ಯೋತ್ಸವಕ್ಕಾಗಿ ಪ್ರತಿವರ್ಷ ದೆಹಲಿಯಿಂದ, ಚಂಡೀಗಢದಿಂದ ಅಥವಾ ಶಿಮ್ಲಾದಿಂದ ಬರುವ ಆಸಕ್ತರಿಗೆ ಇದು ನೋಡಲೇಬೇಕಾದ ಸ್ಥಳ. ಮುಂಬೈನಿಂದ ಬರುವ ಲೇಖಕರು, ಗಣ್ಯರು, ಪಾಕಿಸ್ತಾನದಿಂದ ಬರುವ ಬರಹಗಾರರು, ನಾಟಕಕಾರರು, ಕಸೌಲಿಯ ಶಾಲಾ ಮಕ್ಕಳು ಕೂಡ ಪುಸ್ತಕಗಳ ಬಗ್ಗೆ ಮಾತಾಡುವುದಕ್ಕೆ; ತನ್ನ 97ನೇ ಇಳಿವಯಸ್ಸಿನಲ್ಲೂ ಅಂಕಣಗಳನ್ನು ಬರೆಯುತ್ತಿದ್ದ, ಪುಸ್ತಕಗಳನ್ನು ಕಡೆಯುತ್ತಿದ್ದ ಆ ಪ್ರಚಂಡ ವ್ಯಕ್ತಿಯಿಂದ ಸ್ಫೂರ್ತಿ ಪಡೆಯುವುದಕ್ಕೆ, ಅವರ ಆಲೋಚನೆಗಳನ್ನು ತಲೆಗಿಳಿಸಿಕೊಳ್ಳುವುದಕ್ಕೆ ಇಲ್ಲಿ ನೆರೆಯುತ್ತಾರೆ. ಈ ವರ್ಷ ಖುಶ್ವಂತ್ ಸಿಂಗ್ ಸಾಹಿತ್ಯೋತ್ಸವ ಮೊದಲ ಬಾರಿಗೆ ಲಂಡನ್‌ಗೆ ಹೋಗುತ್ತಿದೆ. ಲಂಡನ್‌ನ ನೆಹರೂ ಸೆಂಟರ್‌ನಲ್ಲಿ 'ಆಂಗ್ಲೋ ಇಂಡಿಯನ್' ಎಂಬ ಶೀರ್ಷಿಕೆಯೊಂದಿಗೆ ನಡೆಯುವ ಈ ಬಾರಿಯ ಸಾಹಿತ್ಯೋತ್ಸವ, ಭಾರತದ ಪೂರ್ವ ಸಂಸ್ಕೃತಿ ಮತ್ತು ಯುನೈಟೆಡ್ ಕಿಂಗ್‌ಡಂ ನಡುವಿನ ಪರಸ್ಪರ ಪ್ರಭಾವ ಮತ್ತು ಅನುಸಂಧಾನಗಳನ್ನು ಪ್ರದರ್ಶಿಸಲಿದೆ.

ಲಂಡನ್‌ನಲ್ಲಿ ಯಾಕೆ? ಖುಶ್ವಂತ್ ಸಿಂಗ್ ಆತ್ಮೀಯರ ಪ್ರಕಾರ, ಖುಶ್ವಂತ್ ಸಿಂಗ್ ಅವರು ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಓದಿದ್ದು ಮಾತ್ರವಲ್ಲದೆ, ನೆಹರೂ ಕಾಲದಲ್ಲಿ ಭಾರತದ ರಾಜತಾಂತ್ರಿಕರಾಗಿ ಲಂಡನಿನಲ್ಲಿ ನಿಯೋಜಿತವಾಗಿದ್ದರಿಂದ ಅವರು ಇಂಗ್ಲೆಂಡನ್ನು ತಮ್ಮ ಎರಡನೆಯ ಮನೆ ಎಂದೇ ಪರಿಗಣಿಸಿದ್ದರು. ಭಾರತ-ಪಾಕ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಹಾಗೂ ಪರಿಸರದ ಬಗ್ಗೆ ಬಹಳ ಕಾಳಜಿ ಇಟ್ಟುಕೊಂಡಿದ್ದ ಅವರು, ಬ್ರಿಟಿಷ್ ಮೌಲ್ಯಗಳ ಪ್ರಶಂಸಕರಾಗಿದ್ದರು. ಲಂಡನ್ನಿನಲ್ಲಿರುವ ಅವರ ಸ್ನೇಹಿತ ಬಳಗವೇ ಈ ಸಾಹಿತ್ಯೋತ್ಸವವನ್ನು ಅಲ್ಲಿ ಸಂಘಟಿಸುವುದಕ್ಕೆ ಆಸಕ್ತಿ ತೋರಿದೆ.

ಆದರೆ, ಖುಶ್ವಂತ್ ಸಿಂಗ್ ಸಾಹಿತ್ಯೋತ್ಸವದ ಮೂಲಗೃಹ ಮಾತ್ರ ಹಿಮಚ್ಛಾದಿತ ಪರ್ವತಗಳಿಂದ ಆವರಿಸಿರುವ, ಪೈನ್ ಸುಗಂಧದ ತಂಗಾಳಿ ಬೀಸುವ ಮತ್ತು ವಸಾಹತು ಕಾಲದ ಬಂಗಲೆಗಳಿಂದ ಕಂಗೊಳಿಸುವ ಕಸೌಲಿ ಪಟ್ಟಣವೇ ಆಗಿರುತ್ತದೆ. ಹಿತವಾದ ತಂಪು ವಾತಾವರಣ, ನಯನಮನೋಹರ ಪರ್ವತಗಳಿಂದ ಮನಮೋಹಕವಾಗಿರುವ ಈ ಪಟ್ಟಣವನ್ನು ಬ್ರಿಟಿಷರು ಒಂದು ಸೇನಾನೆಲೆಯನ್ನಾಗಿ ಅಭಿವೃದ್ಧಿ ಮಾಡಿದ್ದರು. ಇಂದಿಗೂ ಅದು ಸೇನಾನೆಲೆಯಾಗಿಯೇ ಉಳಿದುಕೊಂಡಿದೆ. ಕಸೌಲಿಯಲ್ಲಿರುವ ಮಿಲಿಟರಿ ಅಧಿಕಾರಿಗಳೂ ಖುಶ್ವಂತ್ ಸಿಂಗ್ ಸಾಹಿತ್ಯೋತ್ಸವದ ಅವಿಭಾಜ್ಯ ಅಂಗವಾಗಿಯೇ ಇದ್ದಾರೆ. ಅವರ ನೆರವಿಲ್ಲದೆ ಇದ್ದಿದ್ದರೆ ಪ್ರತಿವರ್ಷ ಈ ಸಾಹಿತ್ಯೋತ್ಸವವನ್ನು ಆಯೋಜಿಸುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಹೀಗೆ, ಖುಶ್ವಂತ್ ಸಿಂಗ್ ಸಾಹಿತ್ಯೋತ್ಸವ ಭಾರತೀಯ ಸೈನಿಕರಿಗೆ ಸಮರ್ಪಿತವಾಗಿದೆ. ಖುಶ್ವಂತ್ ಸಿಂಗ್ ಬದುಕಿದ್ದಾಗಲೇ 2012 ಮತ್ತು 2013ರಲ್ಲಿ ನಡೆದ ಮೊದಲ ಎರಡು ಸಾಹಿತ್ಯೋತ್ಸವಗಳಿಗೆ ತೀರಾ ವಯಸ್ಸಾಗಿದ್ದ ಖುಶ್ವಂತ್ ಸಿಂಗ್ ಬರುವುದಕ್ಕೆ ಆಗಲಿಲ್ಲ. ಅವರು ಎಲ್ಲರಿಗೂ ತಮ್ಮ ಸಂದೇಶವನ್ನು ಕಳಿಸಿಕೊಟ್ಟಿದ್ದರು:

ಇದನ್ನೂ ಓದಿ : ರಾವಿ ತೀರ | ಸೇನೆಯ ಸರ್ವಧರ್ಮ ಸಹಿಷ್ಣುತೆಗೂ ಸಂಚಕಾರ ತಂದೊಡ್ಡಿತೇ ಸರ್ಕಾರ?

"ನಾನೊಬ್ಬ ಆಜ್ಞೇಯತಾವಾದಿ. ನನ್ನ ಸಿಖ್ ಅಸ್ಮಿತೆಯ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಆದರೆ, ಧರ್ಮಕ್ಕಾಗಿ ನನ್ನ ಹತ್ತಿರ ಸಮಯವಿಲ್ಲ. ಅದರ ಬದಲಿಗೆ, ನಾನು ಮಾನವತೆ, ಸತ್ಯ, ಅಹಿಂಸೆ ಮತ್ತು ಪರಿಶ್ರಮವನ್ನು ನಂಬುತ್ತೇನೆ. ಲೆ ಹಂಟ್ ಅವರ 'ಅಬೊ ಬೆನ್ ಅಡೆಮ್' ಮತ್ತು ಕಿಪ್ಲಿಂಗ್ ಅವರ 'ಇಫ್' ಕೃತಿಗಳಲ್ಲಿ ನಾನು ನಂಬಿರುವ ತತ್ವ ಬಹಳ ಚೆನ್ನಾಗಿ ಅಭಿವ್ಯಕ್ತಗೊಂಡಿದೆ. ನನಗೆ ತುಂಬಾ ವಯಸ್ಸಾಗಿದ್ದರಿಂದ ಈ ಸಾಹಿತ್ಯೋತ್ಸವದಲ್ಲಿ ಭಾಗವಹಿಸುವುದಕ್ಕೆ ಆಗುತ್ತಿಲ್ಲ. ಈ ಕವಿತೆಗಳು ಈ ಸಾಹಿತ್ಯೋತ್ಸವಕ್ಕೆ ನನ್ನ ಕಾಣಿಕೆಗಳು. ಅವುಗಳನ್ನು ಸ್ವೀಕರಿಸಿ, ಅವುಗಳೊಂದಿಗೆ ಬಾಳಿ."

ಬೇಸರದ ವಿಷಯ ಎಂದರೆ, ಖುಶ್ವಂತ್ ಸಿಂಗ್ ಬದುಕಿದ್ದ, ಪ್ರೀತಿಸಿದ್ದ ಕಸೌಲಿ ಈಗ ಹಾಗೇ ಉಳಿದಿಲ್ಲ. ಪ್ರಶಾಂತ ರಸ್ತೆಯುದ್ದಕ್ಕೂ ನಿಂತ ಭವ್ಯ ಮನೆಗಳು, ಹುಲುಸಾದ ಬೆಟ್ಟಗಳ ಇಳಿಜಾರಿನಿಂದ ಬರುವ ಹಕ್ಕಿಗಳ ಕಲರವ, ಪರ್ವತಗಳಿಂದ ಬೀಸುವ ಉಲ್ಲಾಸಕರ ತಂಗಾಳಿ... ಇವೆಲ್ಲವುಗಳ ಜೊತೆಗೆ ಈ ಪಟ್ಟಣಕ್ಕೀಗ ಹೊಸದೊಂದು ಹೆಗ್ಗುರುತು ಸೃಷ್ಟಿಯಾಗಿದೆ: ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು ಕೆಡವದಿರುವುದಕ್ಕೆ ಕಟ್ಟಡದ ಮಾಲೀಕ ಕೊಡಲು ಬಂದ ಲಂಚವನ್ನು ಸ್ವೀಕರಿಸದೆ ಇದ್ದುದರಿಂದ ಸರ್ಕಾರಿ ಪಟ್ಟಣ ಯೋಜಕ ಶಾಹಿಲ್ ಬಾಲ ಅವರ ಹತ್ಯೆಯಾದ ಪಟ್ಟಣ!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More