ಸಂವಾದ | ಚುನಾವಣಾ ಭಾಷಣಗಳಲ್ಲಿ ಜನರ ಬಗೆಗಿನ ಕಾಳಜಿ ನಿಜಕ್ಕೂ ಎಷ್ಟಿತ್ತು?

ಸಂವಿಧಾನದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಸೇರಿಸಿದ ಆಶಯಕ್ಕೆ ವಿರುದ್ಧವಾಗಿ ರಾಜಕೀಯ ಪಕ್ಷಗಳು ವರ್ತಿಸತೊಡಗಿ ಎಷ್ಟೋ ವರ್ಷಗಳಾಗಿವೆ. ಅಸಂಬದ್ಧ ಚುನಾವಣಾ ಅಭಿಯಾನಗಳು ಎಲ್ಲರನ್ನೂ ಸರಿಸಮವಾಗಿ ಕಾಣುವ ಪ್ರಜಾತಂತ್ರ ವ್ಯವಸ್ಥೆಯ ಮೂಲಬೇರುಗಳನ್ನೇ ಕೀಳಲಾರಂಭಿಸಿವೆ

ನೀವು ಈ ಲೇಖನ ಓದುತ್ತಿರುವ ಹೊತ್ತಿಗೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮುಗಿದಿರುತ್ತದೆ. ಓದುಗರು ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿರುತ್ತಾರೆ. ಅದೂ ಕೂಡಲೇ ಸಿಗುತ್ತದೆ. ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಬಹುದು ಅಥವಾ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಲೂಬಹುದು. ಕರ್ನಾಟಕದಲ್ಲಿ ಇಂತಹದ್ದೊಂದು ಭಾರಿ ಕಾವೇರಿದ ಚುನಾವಣಾ ಪ್ರಚಾರ ಬಿರುಸಿನಿಂದ ನಡೆದಿತ್ತು ಎಂಬ ವಿಷಯವನ್ನು ನಾಡಿನ ಜನ ಕೆಲವೇ ವಾರಗಳಲ್ಲಿ ಮರೆತುಬಿಡುತ್ತಾರೆ. ಘಟಾನುಘಟಿ ರಾಜಕಾರಣಿಗಳು ಮಾಡಿದ ಅಬ್ಬರದ ಭಾಷಣಗಳನ್ನೂ ನೆನಪಿನಿಂದ ಹಿಂದೆ ಸರಿಸುತ್ತಾರೆ. ಅದಾದ ನಂತರ ಬದುಕು ಸಹಜ ಸ್ಥಿತಿಗೆ ಮರಳುತ್ತದೆ. ಆದರೂ ಈ ಚುನಾವಣೆಯಿಂದ ಅಸಹಜವಾದ ಸ್ಥಿತಿಯೊಂದು ಹುಟ್ಟಿಕೊಂಡಿದೆ. ಅದೆಂದರೆ, ಜನರ ಬದುಕಿಗೆ ಸಂಬಂಧಿಸಿದ ಅತಿ ಮುಖ್ಯವಾದ ವಿಷಯಗಳಿಗೆ ರಾಜಕೀಯ ವರ್ಗ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ ಎಂಬುದು.

ಚುನಾವಣೆಯ ಮುಂಚಿನ ಕೆಲವು ತಿಂಗಳುಗಳಲ್ಲಿ ಆಗಲೇ ಗಗನಕ್ಕೇರಿದ ಪೆಟ್ರೊಲ್ ಮತ್ತು ಡಿಸೇಲ್ ಬೆಲೆಗಳು ಏರಿದ ಸ್ಥಿತಿಯಲ್ಲೇ ನಿಂತುಕೊಂಡಿದ್ದವು. ಅದು ರಾಜ್ಯದ ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವಂತಹ ವಿಷಯ. ಅದರ ಬಗ್ಗೆ ಈ ಚುನಾವಣಾ ಅಭಿಯಾನದಲ್ಲಿ ಯಾವೊಬ್ಬ ರಾಜಕಾರಣಿಯೂ ಮಾತಾಡಿದ್ದನ್ನು ನಾನಂತೂ ಕಾಣೆ. ಅದೇ ರೀತಿ, ಸಿಬಿಎಸ್ಸಿ ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದಲ್ಲಿ ಭುಗಿಲೆದ್ದಿದ್ದ ಕೋಲಾಹಲದ ಬಗ್ಗೆಯೂ ಯಾರೂ ತಮ್ಮ ಚುನಾವಣಾ ಭಾಷಣಗಳಲ್ಲಿ ಮಾತಾಡಿದ್ದನ್ನು ನಾನು ನೋಡಲಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಇಂದು ಯಾವ ಹಂತಕ್ಕೆ ಕುಸಿದಿದೆ ಎಂಬ ಬಗ್ಗೆ ಇಡೀ ದೇಶದಲ್ಲಿ ಉತ್ತಮ ಶಿಕ್ಷಣದ ಉದ್ದಿಷ್ಟ ಸ್ಥಳ ಎಂದೇ ಹೆಸರುವಾಸಿಯಾದ ರಾಜ್ಯವೊಂದರ ಚುನಾವಣೆಯ ಸಂದರ್ಭದಲ್ಲಿ ಯಾರೊಬ್ಬರೂ ಮಾತಾಡಲಿಲ್ಲ. ತಾವು ಅಧಿಕಾರಕ್ಕೆ ಬಂದರೆ ಇಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ರಾಜಕೀಯ ಪಕ್ಷಗಳು ಆಶ್ವಾಸನೆ ಕೊಡುತ್ತ ಪುಂಖಾನುಪುಂಖವಾಗಿ ಭಾಷಣ ಬಿಗಿದವೇ ಹೊರತು ಅತ್ಯವಶ್ಯವಾಗಿ ಬೇಕಿರುವ ಕೌಶಲ್ಯ ಸುಧಾರಣೆಯ ಬಗ್ಗೆ ಯಾರೂ ಮಾತಾಡಲಿಲ್ಲ.

ಅಡುಗೆಕೋಣೆ, ಕಾರ್ಯಸ್ಥಳ, ಶಾಲೆಗಳಂತಹ ಅತ್ಯಂತ ಮುಖ್ಯವಾದ ವಿಷಯಗಳ ಬಗ್ಗೆ ಗಾಢ ಮೌನ ತಾಳಿದ ಈ ರಾಜಕಾರಣಿಗಳು, ತಂತಮ್ಮ ಎದುರಾಳಿಗಳ ವಿರುದ್ಧ ವಾಗ್ದಾಳಿ ಮಾಡುತ್ತಾ ಕೆಸರೆರಚಾಡುವುದಕ್ಕೆ ಬೇಕಾದಷ್ಟು ಸಮಯವನ್ನು ವಿನಿಯೋಗಿಸಿದರು. ಬೇಕಾದಷ್ಟು ಹಸಿ-ಹಸಿ ಸುಳ್ಳುಗಳನ್ನು ಯಾವ ಮುಚ್ಚುಮರೆಯೂ ಇಲ್ಲದೆ ಹರಿಬಿಟ್ಟರು. ಈ ವಿಷಯದಲ್ಲಿ ಬಿಜೆಪಿ ಮುಂಚೂಣಿಯಲ್ಲಿತ್ತು. ಆದರೆ, ಕಾಂಗ್ರೆಸ್ ಕೂಡ ಬಹಳ ಹಿಂದೆ ಏನಿರಲಿಲ್ಲ. ಈ ದೇಶದ ಪ್ರಧಾನಮಂತ್ರಿಗಳು ಚುನಾವಣಾ ಅಭಿಯಾನದಲ್ಲಿ ಭಾಷಣ ಮಾಡುವುದಕ್ಕಾಗಿ, ಎದುರಾಳಿಗಳ ವಿರುದ್ಧ ವಿಷ ಕಾರುವುದಕ್ಕಾಗಿ ಹಲವಾರು ದಿನಗಳನ್ನು ಕಳೆದಿದ್ದನ್ನು ನೋಡಿದರೆ ಅಸಹ್ಯವೆನಿಸುತ್ತದೆ. ಅದು ಉನ್ನತವಾದ ಪ್ರಧಾನಮಂತ್ರಿಯ ಹುದ್ದೆಗೆ ಶೋಭೆ ತರುವಂತಹದ್ದಲ್ಲ. ಅವರು ಆ ಉನ್ನತ ಹುದ್ದೆಯ ಘನತೆಯನ್ನು ವಿಧಾನಸಭಾ ಚುನಾವಣೆಯೊಂದರಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬನ ಮಟ್ಟಕ್ಕೆ ಇಳಿಸಿಬಿಟ್ಟರು. ಇದೆಲ್ಲ ನಡೆದಿದ್ದು ನಿಮ್ಮ ಹಣ, ನನ್ನ ಹಣ ಅಥವಾ ನಮ್ಮ ನಿಮ್ಮೆಲ್ಲರ ಸಾರ್ವಜನಿಕ ಹಣದಲ್ಲಿ. ಮೇಲ್ನೋಟಕ್ಕೆ ಈ ಹಣ ರಾಜಕೀಯ ಪಕ್ಷಗಳ ತಿಜೋರಿಗಳಿಂದ ಬಂದಿರುವಂತೆ ತೋರುತ್ತದೆಯಾದರೂ ಆ ಪಕ್ಷಗಳಿಗೆ ಉದಾರವಾಗಿ ದೇಣಿಗೆ ನೀಡಿದ ಹಣವಂತರು ಅದನ್ನು ನಮ್ಮ-ನಿಮ್ಮಿಂದಲೇ ಹೇಗೆ ವಸೂಲಿ ಮಾಡಬೇಕು ಎಂಬ ದಾರಿಗಳನ್ನು ಕೂಡಲೇ ಹುಡುಕಿಕೊಂಡುಬಿಡುತ್ತಾರೆ.

ಇದನ್ನೂ ಓದಿ : ‘ಸಿಟಿ ಜನಕ್ಕೆ ವೋಟರ್ ಐಡಿ ಮುಖ್ಯ, ವೋಟಿಂಗ್ ಅಲ್ಲ’ ಎಂಬ ವ್ಯಂಗ್ಯ ನಿಜವಾಯಿತೇ?

ಸಂವಿಧಾನ ರಚನಾ ಸಭೆಯ ಸದಸ್ಯರನ್ನು ಈ ಚುನಾವಣೆಯ ಅಬ್ಬರದ ಅಭಿಯಾನಕ್ಕೆ ಕರೆದುಕೊಂಡು ಬರುವಂತಹ ಕಾಲಯಂತ್ರವೇನಾದರೂ ನಮ್ಮಲ್ಲಿ ಇದ್ದಿದ್ದರೆ, ಅವರು ಇದನ್ನೆಲ್ಲ ನೋಡಿ ಏನೆಂದುಕೊಳ್ಳುತ್ತಿದ್ದರೋ ಏನೋ? ಸಂವಿಧಾನದಲ್ಲಿ ಪ್ರಜಾಪ್ರತಿನಿಧಿ ವಿಧಿಯನ್ನು ಸೇರಿಸಿರುವುದರ ಉದ್ದೇಶವೇ ಜನರ ಕೆಲಸ-ಕಾರ್ಯಗಳನ್ನು ಮಾಡುವುದಕ್ಕಾಗಿ ಸಾರ್ವಜನಿಕ ಸೇವಾ ಮನೋಭಾವದ ಕೆಲವು ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಲು. ಪಕ್ಷಗಳು ಹೇಗೆ ನಡೆದುಕೊಳ್ಳುತ್ತವೆ ಎಂಬುದರ ಬಗೆಗಿನ ಬ್ರಿಟಿಷ್ ಅನುಭವಗಳನ್ನಾಧರಿಸಿಯೇ ಇಲ್ಲಿಯೂ ಪಕ್ಷಗಳ ಅಸ್ತಿತ್ವಕ್ಕೆ ಅವಕಾಶ ನೀಡಿದ್ದು. ಎಷ್ಟು ಪಕ್ಷಗಳು ಸ್ಪರ್ಧಿಸಬಹುದು ಎಂಬುದರ ಬಗ್ಗೆ ಭಾರತದಲ್ಲಿಂದು ಒಂದು ರೀತಿಯ ಅರಾಜಕತೆ ಇದೆ. ಪಕ್ಷಗಳಿಗಿರುವ ಹಣಕಾಸು ಅಗತ್ಯಗಳೇ ಭ್ರಷ್ಟಾಚಾರದ ಮೂಲಗಳಾಗಿವೆ. ಅಲ್ಲದೆ, ವಿಶಾಲ ಕಾರ್ಯಕರ್ತರ ನೆಲೆಯ ಮೇಲೆ ಕಾರ್ಯನಿರ್ವಹಿಸುವ ಪಕ್ಷಗಳಂತೂ ಸಂವಿಧಾನದಲ್ಲಿ ಯಾವ ಆಶಯದಿಂದ ಪ್ರಜಾಪ್ರತಿನಿಧಿ ಕಾಯ್ದೆಯನ್ನು ಸೇರಿಸಲಾಯಿತೋ ಆ ಆಶಯಕ್ಕೆ ಅನುಗುಣವಾಗಿ ವರ್ತಿಸುವುದನ್ನು ಕೈಬಿಟ್ಟು ಎಷ್ಟೋ ವರ್ಷಗಳಾಗಿಹೋಗಿವೆ. ಈ ರೀತಿಯ ಚುನಾವಣಾ ಅಭಿಯಾನಗಳು, ಈ ರೀತಿಯ ರಾಜಕೀಯ ಪಕ್ಷಗಳು ಎಲ್ಲ ನಾಗರಿಕರನ್ನು ಸರಿಸಮಾನರನ್ನಾಗಿ ಕಾಣುವ ಪ್ರಜಾತಂತ್ರ ವ್ಯವಸ್ಥೆಯ ಮೂಲಬೇರುಗಳನ್ನೇ ಕೀಳಲಾರಂಭಿಸಿವೆ.

ದೇಶದಲ್ಲಿ ಇನ್ನೇನು 2019ರ ಲೋಕಸಭಾ ಚುನಾವಣೆ ಎದುರಾಗಲಿದೆ. ಅದು ದೇಶ ಕಂಡ ಅತ್ಯಂತ ಕುತೂಹಲಕಾರಿ ಮತ್ತು ಅಬ್ಬರದ ಚುನಾವಣೆಯಾಗಲಿದೆ ಎಂದು ಕಾಣುತ್ತದೆ. ಬಿಜೆಪಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪರಿಗಣಿಸಿದರೆ ಮತ್ತು ಅದರಿಂದ ಚುನಾವಣಾ ಅಭಿಯಾನದ ಭಾಷೆಯ ಗುಣಮಟ್ಟದಲ್ಲಿ ಆಗುತ್ತಿರುವ ಬದಲಾವಣೆಯನ್ನು ನೋಡಿದರೆ, ಮುಂದಿನ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಾರ್ವಜನಿಕ ಚರ್ಚೆ ಇನ್ನೆಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲದು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. “ಅಯ್ಯೋ, ಅದನ್ನೆಲ್ಲ ಬದಲಾಯಿಸೋಕೆ ಸಾಧ್ಯನಾ?” ಅಂತ ಕೈಕಟ್ಟಿ ಕುಳಿತುಕೊಳ್ಳಬೇಕೋ ಅಥವಾ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿರುವುದನ್ನು ಪ್ರತಿಭಟಿಸಿ ದನಿ ಎತ್ತಬೇಕೋ ಎಂಬ ಪ್ರಶ್ನೆಯೀಗ ನಮ್ಮ ಮುಂದಿದೆ. ಇತ್ತೀಚಿನ ದಿನಗಳಲ್ಲಿ ನೀಡಲಾದ ಅತ್ಯಂತ ಕೆಟ್ಟ ಮತ್ತು ಆಕ್ರಮಣಕಾರಿ ಹೇಳಿಕೆಗಳ ಒಂದು ಪಟ್ಟಿ ಮಾಡಿ, ಯಾರ್ಯಾರು ಆ ಹೇಳಿಕೆಗಳನ್ನು ನೀಡಿದ್ದಾರೋ ಅವರೆಲ್ಲರಿಗೆ ಅದನ್ನು ಕಳಿಸುವುದಕ್ಕೆ ಇದು ಸಕಾಲವಾಗಿದೆ. ಹತ್ತು ಸಾವಿರ ನಾಗರಿಕರು ಸಹಿ ಮಾಡಿದ ಅಂತಹ ಹೇಳಿಕೆಗಳ ಪಟ್ಟಿಯನ್ನು ಈ ಹೊಣೆಗೇಡಿ ರಾಜಕಾರಣಿಗಳಿಗೆ ಕಳಿಸಿದರೆ ಪ್ರಾಯಶಃ ಅದರಿಂದ ಅವರಿಗೆ ಹೊಣೆಗಾರಿಕೆಯ ಪ್ರಜ್ಞೆಯಾದರೂ ಬರಬಹುದು. ಪ್ರಜಾತಂತ್ರಕ್ಕೆ ಪುಂಡರ ಆರ್ಭಟ ಎಷ್ಟು ಅಪಾಯಕಾರಿಯೋ ನಾಗರಿಕರ ಮೌನವೂ ಕೂಡ ಅಷ್ಟೇ ಅಪಾಯಕಾರಿ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More