ತಂತಾನೇ | ಅಭಿನಂದನೆಯ ಅಪ್ಪುಗೆಯೂ ಅಪರಾಧ ಎಂದುಬಿಟ್ಟರೆ ಹೇಗೆ?

ಒಬ್ಬರು ಗೆದ್ದಾಗ ಮತ್ತೊಬ್ಬರು ಅಭಿನಂದಿಸುವ ಹಾವಭಾವಗಳನ್ನು, ಆನಂದವನ್ನು ಹೊರಸೂಸುವ ಮಾಧ್ಯಮವಾದ ಅಪ್ಪುಗೆಯನ್ನು ನ್ಯಾಯಾಲಯವೇ ಲಿಂಗಮಿತಿ ದೃಷ್ಟಿಯಲ್ಲಿ ನೋಡಿದರೆ ರಾಜಕಾರಣಿಗಳು ಹಚ್ಚುವ ಬೆಂಕಿಯನ್ನು ಆರಿಸುವವರು ಯಾರು? 

ಆ ದಿನ ಕ್ರಿಸ್ತನ ಆಗಮನಕ್ಕೆ ಸಂಭ್ರಮದ ಮಾರುಕಟ್ಟೆಯಾಗಿತ್ತು ಲಂಡನ್‌ನ ಕ್ಯಾಂಡನ್ ಟೌನ್. ಚೀಸ್ ಉಂಡೆಯ ತುದಿಗೆ ಸ್ವಲ್ಪವೇ ಉದುರಿಕೊಂಡಿದ್ದ ದಾಲ್ಚಿನ್ನಿ ಪುಡಿ ಅದರ ಮೇಲ್ಮೆತ್ತಿಕೊಂಡಿದ್ದ ಸಕ್ಕರೆ ಕಡ್ಡಿಯನ್ನು ನೆಕ್ಕುತ್ತಾ ನಡುಗುವ ಚಳಿಯಲ್ಲೂ ನೀರಾಗದೆ ಕುಳಿತಿದ್ದೆ ಅಲ್ಲೇ ಒಂದು ಕಟ್ಟೆಯ ಮೇಲೆ. ಒಣ ಹುಲ್ಲಿನಿಂದ ಹಿಡಿದು ಜೋಸೆಫ್‌ನ ಟೊಪ್ಪಿಗೆಯವರೆಗೂ ಎಲ್ಲವೂ ಬೆಲೆ ನಮೂದಿಸಿಕೊಂಡು ಕುಳಿತಿದ್ದವು ಅಲ್ಲಿ. ಬ್ರೆಡ್ಡು, ಬನ್ನು, ಕೇಕ್ ಎಂದರೆ ಮುಗಿಯಲಾರದಷ್ಟು ವಿಧದ ತಿಂಡಿಗಳು, ಹಣ್ಣುಗಳು ಎನ್ನುವ ಹೆಸರಿನಲ್ಲಿ ನೂರೆಂಟು ಆಕಾರಗಳು ಬಣ್ಣ ತಳೆದಿದ್ದವು ಬುಟ್ಟಿಗಳಲ್ಲಿ. ತರಕಾರಿಗಳ ಮೇಲೆ ಎಲೆಗಳು ಇತ್ತಿದ್ದ ಮಂಜಿನ ಮುತ್ತು ಇನ್ನೂ ಕಣ್ತೆರೆದೆಯೇ ತಕ್ಕಡಿಯೊಳಗೆ ಕೂರುತ್ತಿದ್ದವು. ಒರಟೇನೋ ಎನಿಸಿಕೊಳ್ಳುವ ಮಾರಾಟಗಾರರು ನಸುನಗುತ್ತಲೇ ನಾಜೂಕಿನವರೊಂದಿಗೆ ವ್ಯಾಪಾರ ಕುದುರಿಸಿಕೊಳ್ಳುತ್ತಿದ್ದರು. ಹಬ್ಬಕ್ಕೆ ಸಾಮಾನು ಹೊತ್ತೊಯ್ಯಲು ಬಂದವರೆಲ್ಲ ಕೈ ಕುಲುಕುವಿಕೆಯಲ್ಲಿ, ಅಪ್ಪುಗೆಯಲ್ಲಿ, ಮುತ್ತುಗಳಲ್ಲಿ ಪರಿಚಯದ ವಿನಿಮಯವಾಗುತ್ತಿದ್ದರು. ಕ್ರಿಸ್‌ಮಸ್‌ಗೆ ಇನ್ನೆರಡೇ ದಿನಗಳು ಬಾಕಿ. ಆ ಕೊರೆತದಲ್ಲೂ ಲಾಯರ್ ಬುದ್ಧಿ ಕೈಬಿಡದೆ ಜೊತೆಯಲ್ಲೇ ತಣ್ಣಗಾಗುತ್ತಿತ್ತು. ಅದಕ್ಕೇ ಇರಬೇಕು ಅನಾಯಾಸವಾಗಿ ಅದೇ ಹತ್ತು ದಿನಗಳ ಹಿಂದಷ್ಟೇ ಈ ದೇಶದ ನ್ಯಾಯಾಲಯವೊಂದು ಕೊಟ್ಟಿದ್ದ ತೀರ್ಪೊಂದು ಮಫ್ಲರಿನಂತೆ ನೆನಪಿನ ಕತ್ತು ಸುತ್ತಿಕೊಂಡಿತು.

ಆ ದಿನ ಶಾಲೆಯಲ್ಲೊಂದು ಸಮಾರಂಭ. ಆ ಹುಡುಗಿ ತನ್ನ ವಯಸ್ಸಿನಷ್ಟೇ ಸುಂದರವಾದ ಮಾತುಗಳಲ್ಲಿ ಅದರಷ್ಟೇ ಆಕರ್ಷಣೀಯವಾದ ಶೈಲಿಯಲ್ಲಿ ಭಾಷಣ ಮಾಡಿ ಗೆದ್ದಿದ್ದಾಳೆ. ನೆರೆದವರ ಖುಷಿಯು ಚಪ್ಪಾಳೆ ಆಗುತ್ತಿರುವಾಗ ಅದೇ ಶಾಲೆಯ ವಿದ್ಯಾರ್ಥಿ ಅವಳ ಗೆಳೆಯ ಎಲ್ಲರೆದುರು ಅವಳನ್ನು ಅಪ್ಪಿ ಲಘು ಮುತ್ತಿನಿಂದ ಅಭಿನಂದಿಸಿಬಿಟ್ಟ. ಅಲ್ಲಿಗೆ ಶಾಲೆಯ ಆಡಳಿತ ಮಂಡಳಿಯವರ ಅಹಂಗೆ ಪೆಟ್ಟು ಬಿತ್ತು. ತಾನು ಪಾಲಿಸುತ್ತಿದ್ದ ಶಿಸ್ತಿನಿಂದಲೇ ಸಮಾಜದಲ್ಲಿ ತನಗೊಂದು ಮರ್ಯಾದಸ್ತ ಇಮೇಜ್ ಇದೆ ಎಂದುಕೊಂಡ ಶಾಲೆಯ ಮುಖ್ಯಸ್ಥರು ಶಿಸ್ತು ಪಾಲನೆ ಎನ್ನುವ ನಂಬಿಕೆಯಲ್ಲಿ, ಮುತ್ತು ಕೊಟ್ಟ ಮಗನನ್ನು, ತೆಗೆದುಕೊಂಡ ಹೂವನ್ನು ಸಸ್ಪೆಂಡ್ ಮಾಡಿಬಿಟ್ಟರು. ಈ ನೆಲದ ಎಲ್ಲ ಏರುಪೇರುಗಳ ಬಾಣದ ಮೊನಚಿಗೆ ಗುರಿಯಾಗುವುದು ಅವಳೇ ತಾನೇ? ಅದಕ್ಕೇ ಆತಂಕಗೊಂಡ ಹುಡುಗಿಯ ಕುಟುಂಬ ಶಾಲೆಯ ನಿರ್ಧಾರವನ್ನು ಒಪ್ಪಿ ಊರಾಂತರವಾಗಿಬಿಟ್ಟಿತು. ಇನ್ನೇನು ನಾಲ್ಕು ತಿಂಗಳುಗಳಲ್ಲಿ ಮುಖ್ಯ ತರಗತಿಯ ಪರೀಕ್ಷೆ ಬರೆಯಬೇಕಿದ್ದ ಹುಡುಗನ ಭವಿಷ್ಯದ ದೂರದೃಷ್ಟಿಯಿಂದ ಮನೆಯವರು, ಹುಡುಗನ ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಆಡಳಿತ ಮಂಡಳಿಯಲ್ಲಿ ಮನವಿ ಮಾಡಿಕೊಂಡರು. ಉಹುಂ, ಶಾಲೆಗೆ ತನ್ನ ಅಸ್ತಿತ್ವಕ್ಕೆ ಕಾರಣವಾದ ಮಕ್ಕಳ ಬದುಕಿಗಿಂತ ಆಡಳಿತದ ಚುಕ್ಕಾಣಿ ಹೆಚ್ಚೆನಿಸಿತು. ಆಗುವುದಿಲ್ಲ ಎಂದುತ್ತರಿಸಿದರು. ಹುಡುಗನ ಮನೆಯವರು ಬಿಡದೆಯೇ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಮೊರೆಹೋದರು. ಹೌದು, ಮಕ್ಕಳ ಬದುಕಿಗೇ ಆದ್ಯತೆ ಎನ್ನುವ ನಂಬಿಕೆಯ ಮೇಲೆ ಸ್ಥಾಪಿತವಾಗಿರುವ ಆಯೋಗ ಆ ಹುಡುಗನನ್ನು ಶಾಲೆಗೆ ಮರುಸೇರ್ಪಡೆ ಮಾಡಿಕೊಂಡು ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕೆಂದು ನಿರ್ದೇಶನ ನೀಡಿತು. ಆದರೆ, ಅಧಿಕಾರದ ಅಹಂಗೆ ವಿದ್ಯೆ ಎಲ್ಲಿರುತ್ತದೆ ಬರಿಯ ಅಭ್ಯಾಸ ತಾನೇ? ಹಾಗಾಗಿ ಶಾಲೆಯು ಆಯೋಗದ ನಿರ್ದೇಶನವನ್ನು ಮೂಲೆಗುಂಪಾಗಿಸಿದಾಗ ಪ್ರಕರಣವು ಉಚ್ಚ ನ್ಯಾಯಾಲ0ು ತಲುಪಿತು. ಅದೂ ಆಯೋಗದ ಮಾತನ್ನೇ ತೀರ್ಪಿನ ರೂಪದಲ್ಲಿ ಠೇಂಕರಿಸಿಬಿಟ್ಟಿತು.

ಅವನ ಅವಳ ನಡುವೆ ಹೂವು ಮುತ್ತಾಗುವುದನ್ನು, ಮಾತು ಅಪ್ಪುಗೆಯಲ್ಲಿ ಮೌನವಾಗುವುದನ್ನು ಪೆಟಾರಿಯಲ್ಲಿ ಮುಚ್ಚಿಟ್ಟು ಖಾಸಗಿ ಎನ್ನುವ ಠಸ್ಸೆ ತಗುಲಿಸಿ, ಸಂಬಂಧಗಳು ಎಂದರೆ ಆಚೆ ಬದಿಯ ಮನೆಯವರು ಎದುರುಮನೆಯ ಮುಂದಿರುವ ಕೊಚ್ಚೆಯಲ್ಲಿ ಕಳೆದುಕೊಂಡೆವು ಎನ್ನುತ್ತಿರುವ ಕಾಲುಂಗುರವನು, ಹಿಂದಿನ ಮನೆಯವರು ಹಿಡಿದಿರುವ ಮೊಂಬತ್ತಿ ಬೆಳಕಿನಲ್ಲಿ ಈಚೆ ಮನೆಯವರು ಹುಡುಕಿದಂಥ ಒಂದು ಏಕಾಂಕ ನಾಟಕ ಎಂದು ಬಿಂಬಿಸಿಬಿಟ್ಟಿದ್ದೇವಲ್ಲ!

ಸಹಜ ಸಮಾಜವನ್ನು ಕಟ್ಟುವ ಮನುಷ್ಯ ಸಂವೇದನೆ0ುಲ್ಲಿ ಕಾನೂನುಗಳನ್ನು ಅರ್ಥೈಸಿಕೊಳ್ಳಬೇಕಾದ ಸೂಕ್ಷ್ಮ, ಜವಾಬ್ದಾರಿಯುತ ಮತ್ತು ಸುಂದರವಾದ ಭಾಷ್ಯ ಬರೆಯಬಹುದಾದ ಸ್ಥಾನದಲ್ಲಿ ಕುಳಿತಿರುವ ನ್ಯಾಯಾಧೀಶರುಗಳು ಇದಕ್ಕೆ ಹೊರತಾಗಲಿಲ್ಲವಲ್ಲ. “ಅಬ್ಬ! ಸದ್ಯ ಯಾವುದೇ ವಿವಾದ ಇಲ್ಲದೆ ನಿವೃತ್ತರಾದರೆ ಸಾಕು,” ಎನ್ನುವ ಪ್ರಾರ್ಥನೆಯಂತೆ ತೀರ್ಪುಗಳನ್ನು ನೀಡುತ್ತಿದ್ದಾರೆ ಪಾಪ. ಒಬ್ಬರು ಗೆದ್ದಾಗ ಮತ್ತೊಬ್ಬರು ಅಭಿನಂದಿಸುವ ಹಾವಭಾವಗಳನ್ನು, ಆನಂದವನ್ನು ಹೊರಸೂಸುವ ಮಾಧ್ಯಮವಾದ ಅಪ್ಪುಗೆಯನ್ನು ನ್ಯಾಯಾಲಯವೇ ಲಿಂಗಮಿತಿ ದೃಷ್ಟಿಯಲ್ಲಿ ನೋಡಿದರೆ ರಾಜಕಾರಣಿಗಳು ಹಚ್ಚುವ ಬೆಂಕಿಯನ್ನು ಆರಿಸುವವರು ಯಾರು ಎನ್ನುವ ಪ್ರಶ್ನೆಯೊಂದಿಗೆ ಹೆಚ್ಚುತ್ತಿದ್ದ ಚಳಿಗೆ ಮತ್ತೊಂದು ಶಾಲು ಹೊದೆಯಲು ಅತ್ತ ತಿರುಗಿದೆ.

ಇದನ್ನೂ ಓದಿ : ತಂತಾನೇ | ಆ ಸುಂದರಿ ಹೇಳಿದಳು ಗಂಡಾಗು ಎಂದು, ನಾನು ಒಪ್ಪಿದೆ, ಆಮೇಲೆ?

ತಿರುಗಿದವಳನ್ನು ನಿಲ್ಲಿಸಿದ್ದು ತಾಜಾತಾಜ ಹರೆಯವೊಂದು ಓಡಿಬಂದು ಕುರುಚಲು ಗಡ್ಡವೊಂದಕ್ಕೆ ಬಿಗಿಯಾಗಿ ಮುತ್ತಿಕ್ಕಿದ ದೃಶ್ಯ. ಆ ಬಿಳಿ ಕೆನ್ನೆಗೆ ಮೆತ್ತಿಕೊಂಡ ಕೆಂಪು ಬಣ್ಣದಿಂದ ಅರಿವಿಗೆ ಬಂತು- ಮುತ್ತು ಕೊಟ್ಟವಳು ಹುಡುಗಿ, ತೆಗೆದುಕೊಂಡು ನವಿಲಾದವನು ಹುಡುಗ ಎಂದು. ಅವರಿಬ್ಬರ ಹಣೆಯ ಮೇಲೂ ಗೆರೆ ಮೂಡಿರಲಿಲ್ಲ, ಅದಕ್ಕೇ ಅವರು ದಂಪತಿಗಳಂತೂ ಅಲ್ಲ. ಅಣ್ಣ-ತಂಗಿ ಎನ್ನಲು ಆ ಮುತ್ತಿನ ಬಿಗಿತ ಬಿಡುತಿಲ್ಲ. ಅವರುಗಳ ಹಿಂದೆಯೇ ಎರಡೂ ಬದಿಯಿಂದಲೂ ಬರುತಿದ್ದ ಬೇರೆ-ಬೇರೆ ವಯಸ್ಸಿನ ಅವರದ್ದೇ ಕುಟುಂಬದವರೇನೋ ಎಂದುಕೊಳ್ಳಬಹುದಾದ ಜನರು, ಅವರುಗಳೆಲ್ಲ ಗುಂಪಾಗಿ ನಿಂತು ಮಾತನಾಡುತ್ತಿದ್ದದ್ದು ಎಲ್ಲವನ್ನು ನೋಡುತ್ತಿದ್ದರೆ ಈ ಮುತ್ತು ಕೊಟ್ಟು-ತೆಗೆದುಕೊಂಡ ಅವಳ ಮತ್ತು ಅವನ ನಡುವಿನ ಸಂಬಂಧ ಏನಿರಬಹುದು? ನಮ್ಮ ನೆಲದಲ್ಲಿಯೇ ಆಗಿದ್ದಿದ್ದರೆ ನ್ಯಾಯಾಲಯವನ್ನಾದರೂ ಕೇಳಬಹುದಿತ್ತು! ಆದರೀಗ ನ್ಯಾಯಾಧೀಶರುಗಳಿಂದ, ನೆಲದಿಂದ ದೂರದಲ್ಲಿದ್ದೇನೆ; ಅದಕ್ಕೇ ಮನುಷ್ಯ ಸಂವೇದನೆಗೆ ಹತ್ತಿರವಾಗಿದ್ದೇನೆ. ಎದುರುಗಿದ್ದವರೆಲ್ಲ ಯಕ್ಷಕಿನ್ನರರಂತೆ ಭಾಸವಾಗುತ್ತಿದ್ದಾರೆ. ಅಪ್ಪಟ ಪ್ರೀತಿ ಎನ್ನುವ ಭಾವಕ್ಕೆ ಆಕಾಶನೀಲಿ ಬಣ್ಣದ ದೊಗಲೆ ಅಂಗಿ ತೊಡಿಸಿ, ಕಣ್ಣುಗಳಿಗೆ ಹೊಂಬಣ್ಣದ ಎರಡು ನಕ್ಷತ್ರಗಳನ್ನು ಸಿಕ್ಕಿಸಿಬಿಟ್ಟಿದೆಯೇನೋ ಈ ಲಘುವಾದ ಹಿಮಪಾತ ಎನ್ನಿಸುತ್ತಿದೆ. ಅವರುಗಳು ನಗುವಾಗುತ್ತಿದ್ದಾರೆ. ಇಲ್ಲೇ ಪಕ್ಕದಲ್ಲೇ ನಾ ಕೊಟ್ಟ, ಕೊಂಡು ಜೋಪಾನಿಸಿಕೊಂಡ ಮುತ್ತು, ಅಪ್ಪುಗೆಗಳ ಒಂದು, ಎರಡು ಗೀಚಿಕೊಳ್ಳುತ್ತ ಪುಲಕಿತಳಾಗುತ್ತಿದ್ದೇನೆ.

ಇಲಾಜು | ಆರೋಗ್ಯ ಸೇವೆ ಕೊರತೆಯಿಂದ 2016ರಲ್ಲಿ 25 ಲಕ್ಷ ಭಾರತೀಯರ ಪ್ರಾಣಹರಣ
ಚಿತ್ತವಿತ್ತ | ಮುಂದೊಂದು ದಿನ ಮನುಷ್ಯರೇ ಅತ್ಯಂತ ನಿರುಪಯುಕ್ತ ಆಗಿಬಿಡಬಹುದು!
ಮೂಡಲ್ಮಾತು | ‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?
Editor’s Pick More