ಇಲಾಜು | ಐವತ್ತು ವರ್ಷಗಳಾದರೂ ಕಾಡುತ್ತಲೇ ಇರುವ ರೋಟಿ, ಕಪಡಾ ಮತ್ತು ಮಕಾನ್

ಸರಕಾರ ಯಾವ ಪಕ್ಷದ್ದೇ ಬಂದರೂ, ಆಹಾರ, ವಸತಿ, ಶಿಕ್ಷಣ, ಆರೋಗ್ಯ ಸೇವೆಗಳಿಗೆ ಅಷ್ಟಿಟ್ಟು ತೇಪೆ ಹಚ್ಚುವ ಕೆಲಸ ನಿರೀಕ್ಷಿಸಬಹುದೇ ಹೊರತು ದೂರದೃಷ್ಟಿಯುಳ್ಳ ಯೋಜನೆಗಳನ್ನಲ್ಲ. ಮೂರೂ ಪ್ರಮುಖ ಪಕ್ಷಗಳ ಪ್ರಣಾಳಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ

ಚುನಾವಣೆಗಳಲ್ಲಿ ಭರವಸೆಗಳ ಮಹಾಪೂರವೇ ಹರಿಯುತ್ತದೆ. ಇಂದಿರಾ ಗಾಂಧಿಯ ‘ರೋಟಿ, ಕಪಡಾ ಮತ್ತು ಮಕಾನ್’ ಪ್ರಣಾಳಿಕೆ ಐವತ್ತು ವರ್ಷಗಳಾದರೂ ನೆನಪಿನಲ್ಲಿದೆ. ನಾಲ್ಕು ವರ್ಷಗಳ ಹಿಂದಿನ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮತ್ತು ‘ಅಚ್ಛೇ ದಿನ್’ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿವೆ. ಈ ನಡುವೆಯೇ ಕರ್ನಾಟಕದ ಚುನಾವಣೆ ಮುಗಿದಿದೆ, ಎಲ್ಲ ಪ್ರಮುಖ ಪಕ್ಷಗಳೂ ಹಲವು ಬಗೆಯ ಆಶ್ವಾಸನೆಗಳನ್ನು ಮತದಾರರ ಮುಂದಿಟ್ಟಿವೆ. ಮತದಾರರು ಇವನ್ನೆಲ್ಲ ನೆನಪಿಟ್ಟುಕೊಂಡು, ಸದ್ಯದಲ್ಲೇ ಅಧಿಕಾರಕ್ಕೇರಲಿರುವವರು ಅವನ್ನು ಈಡೇರಿಸುವಂತೆ ಒತ್ತಾಯಿಸಬೇಕಾಗಿದೆ.

ರೋಟಿ, ಕಪಡಾ ಮತ್ತು ಮಕಾನ್ ಪ್ರಣಾಳಿಕೆಯ 50 ವರ್ಷಗಳಲ್ಲಿ ಊಟ, ಬಟ್ಟೆ, ಸೂರುಗಳ ಸ್ಥಿತಿ ಸುಧಾರಿಸಿದ್ದರೂ, ದೇಶದಲ್ಲಿ ಹಸಿವು, ಬಡತನ, ವಸತಿಹೀನರು ಇನ್ನೂ ಇಲ್ಲವಾಗಿಲ್ಲ, ರೋಟಿ, ಕಪಡಾ, ಮಕಾನ್ ಭರವಸೆಗಳನ್ನು ನೀಡುವ ಅಗತ್ಯವೂ ಮರೆಯಾಗಿಲ್ಲ. ರಾಜ್ಯದ ಈ ಚುನಾವಣೆಯಲ್ಲೂ ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ರೋಟಿ, ಕಪಡಾ ಮತ್ತು ಮಕಾನ್ ಭರವಸೆ ಮುಂದುವರಿದಿರುವುದನ್ನು ಕಾಣಬಹುದು.

ಇಂದಿರಾ ಗಾಂಧಿ ‘ರೋಟಿ, ಕಪಡಾ, ಮಕಾನ್’ ಎಂದ ಅರವತ್ತರ ಅಂತ್ಯದಲ್ಲಿ ದೇಶದ ಶೇ.35-44 ಜನತೆ ಹಸಿವಿನಲ್ಲಿತ್ತು. ಕೇವಲ ಒಂದು ಕೋಟಿ ಟನ್ ಗೋಧಿಯನ್ನು ಬೆಳೆಯಲಾಗುತ್ತಿತ್ತು. ಇನ್ನೊಂದು ಕೋಟಿ ಟನ್ ಗೋಧಿಯನ್ನು ಅಮೆರಿಕದಿಂದ ಆಮದು ಮಾಡಲಾಗುತ್ತಿತ್ತು. ಈಗ ಧಾನ್ಯ ಮತ್ತಿತರ ಆಹಾರ ವಸ್ತುಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಿದೆ. ಗೋಧಿಯೊಂದರ ಉತ್ಪಾದನೆಯೇ 10 ಕೋಟಿ ಟನ್ ತಲುಪಿದೆ. ಧಾನ್ಯಗಳನ್ನೂ, ಮಾಂಸೋತ್ಪನ್ನಗಳನ್ನೂ ರಫ್ತು ಮಾಡಲಾಗುತ್ತಿದೆ. ಆದರೆ ಬಡತನ, ನಿರುದ್ಯೋಗ, ಆರ್ಥಿಕ, ಸಾಮಾಜಿಕ ಮತ್ತು ಆಹಾರ ವಿತರಣೆಯಲ್ಲಿ ಅಸಮಾನತೆಗಳಿಂದಾಗಿ ಹಸಿವು ಇನ್ನೂ ಸಂಪೂರ್ಣವಾಗಿ ತೊಡೆದುಹೋಗಿಲ್ಲ. ಶೇ.16ರಷ್ಟು, ಅಂದರೆ 20 ಕೋಟಿ ಜನರು ಈಗಲೂ ಹಸಿವಿನಲ್ಲಿದ್ದಾರೆ. ಶೇ.38ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಹಿಂದುಳಿದ ಭಾಗಗಳಲ್ಲಿ ಈ ಸಮಸ್ಯೆ ಹೆಚ್ಚು ಗಣನೀಯವಾಗಿದೆ. ಅಚ್ಛೇ ದಿನಗಳ ಈ ನಾಲ್ಕು ವರ್ಷಗಳಲ್ಲಿ, ಪಡಿತರಕ್ಕೂ ಆಧಾರ್ ಕಡ್ಡಾಯಗೊಳಿಸಿದ ಬಳಿಕ, ಹಸಿವಿನ ಸೂಚ್ಯಂಕದಲ್ಲಿ 119 ದೇಶಗಳ ಪಟ್ಟಿಯಲ್ಲಿ 100ನೇ ಸ್ಥಾನಕ್ಕೆ ಜಾರಿದ್ದೇವೆ. ಪಡಿತರ ದೊರೆಯದೆ ಕೆಲವರು ಸತ್ತರೆಂಬ ವರದಿಗಳೂ ಬಂದಿವೆ.

ಕರ್ನಾಟಕದ ಈ ಚುನಾವಣೆಗಳಲ್ಲೂ ರೋಟಿಯ ಭರವಸೆಯನ್ನು ಮತ್ತೆ ನೀಡಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅನ್ನಭಾಗ್ಯ, ಮಾತೃಪೂರ್ಣ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ಹೇಳಲಾಗಿದ್ದರೆ; ಭಾಜಪದ ಪ್ರಣಾಳಿಕೆಯಲ್ಲಿ ಅನ್ನಭಾಗ್ಯದ ಬದಲಿಗೆ ಅನ್ನ ದಾಸೋಹ, ಇಂದಿರಾ ಕ್ಯಾಂಟೀನ್ ಬದಲಿಗೆ ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್ ನಡೆಸುವ ಭರವಸೆ ನೀಡಲಾಗಿದೆ. ಅನ್ನಭಾಗ್ಯವನ್ನು ಕನ್ನಭಾಗ್ಯ ಎಂದು ಜರೆದು,ಇಂದಿರಾ ಕ್ಯಾಂಟೀನನ್ನು ಲೇವಡಿ ಮಾಡಿ, ಅಧಿಕಾರಕ್ಕೆ ಬಂದರೆ ಇವನ್ನು ಹಿಂಪಡೆಯುವುದಾಗಿ ಘೋಷಿಸಿದ್ದ ಭಾಜಪ ನಾಯಕತ್ವವು, ಹಸಿದ ಜನರಿಗೆ ರೋಟಿಯ ಅಗತ್ಯವನ್ನು ಕೊನೆಗೂ ಒಪ್ಪಿಕೊಂಡು, ಅವನ್ನು ಮುಂದುವರಿಸುವ ಭರವಸೆ ನೀಡಬೇಕಾಯಿತು. ಜನತಾದಳದ ಪ್ರಣಾಳಿಕೆಯಲ್ಲಿ ಅಂತಹ ಆಶ್ವಾಸನೆಗಳು ಕಾಣುವುದಿಲ್ಲ. ಶಾಲೆಯ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ನೀಡುವ ಬಗ್ಗೆ, ಮಾಂಸಾಹಾರ ಸೇವಿಸುವ ಹಕ್ಕನ್ನು ಖಚಿತಪಡಿಸುವ ಬಗ್ಗೆ ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಏನಿಲ್ಲ. ರೈತರ ಸಾಲ ಮನ್ನಾ, ಬೆಂಬಲ ಬೆಲೆ, ನೀರಾವರಿಗೆ ಆದ್ಯತೆ ಇತ್ಯಾದಿಗಳು ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ಇವೆ, ಆದರೆ, ಕೃಷಿಯಲ್ಲಿ ಆಧುನಿಕ ವಿಧಾನಗಳನ್ನು ಅಭಿವೃದ್ಧಿಪಡಿಸಿ, ಉತ್ಪಾದಕತೆಯನ್ನು ಹೆಚ್ಚಿಸುವ ಬಗ್ಗೆ ಯಾವ ಪ್ರಣಾಳಿಕೆಗಳಲ್ಲೂ ಹೆಚ್ಚೇನೂ ಹೇಳಲಾಗಿಲ್ಲ. ಭಾಜಪ ಮತ್ತು ಜನತಾದಳಗಳ ಪ್ರಣಾಳಿಕೆಗಳಲ್ಲಿ ಇಸ್ರೇಲ್ ಹಾಗೂ ಚೀನಾ ಮಾದರಿ ಕೃಷಿಯನ್ನು ಇಲ್ಲೂ ಉತ್ತೇಜಿಸುವ ಬಗ್ಗೆ ಹೇಳಲಾಗಿದೆ. ಆದರೆ, ನಮ್ಮದೇ ರಾಜ್ಯದಲ್ಲಿರುವ ಅತ್ಯುನ್ನತ ಕೃಷಿ ವಿಜ್ಞಾನ ಕೇಂದ್ರ, ಇತರ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿ, ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಯಾವ ಯೋಜನೆಯೂ ಅವುಗಳಲ್ಲಿಲ್ಲ. ಮೀನುಗಾರಿಕೆಗೆ ಪ್ರೋತ್ಸಾಹದ ಬಗ್ಗೆ ಕಾಂಗ್ರೆಸ್ ಮತ್ತು ಭಾಜಪ ಪ್ರಣಾಳಿಕೆಯಲ್ಲಿ ಒಂದೆರಡು ಸಾಲುಗಳಿದ್ದರೆ, ಕೋಳಿ ಮತ್ತು ಪಶುಸಾಕಣೆ ಬಗ್ಗೆ ಜನತಾದಳದ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕುಲಾಂತರಿ ತಳಿಗಳ ಪ್ರಸ್ತಾಪವಿರುವುದು ನಮ್ಮನ್ನು ಎಚ್ಚರಿಸಬೇಕಾಗಿದೆ.

ಬಟ್ಟೆಯ ಬಗ್ಗೆ ಯಾವ ಪ್ರಣಾಳಿಕೆಗಳಲ್ಲೂ ಏನೂ ಕಾಣುವುದಿಲ್ಲ. ನಿರ್ದಿಷ್ಟ ಪಂಗಡಗಳವರಿಗೆ ಮತ್ತು ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳ ಬಗ್ಗೆ ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ಭರವಸೆಗಳನ್ನು ನೀಡಲಾಗಿದೆ. ಹೀಗೆ, ರೋಟಿ ಮತ್ತು ಮಕಾನ್‌ ಭರವಸೆಗಳು ಇಂದಿಗೂ ಪ್ರಸ್ತುತವಾಗಿ ಉಳಿದಿವೆ. ಜೊತೆಗೆ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿ ಸರಕಾರದ್ದಾಗಿದ್ದರೂ, ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಇವೆರಡರ ಬಗ್ಗೆ ಪ್ರಾಮಾಣಿಕ ಬದ್ಧತೆಯೇ ಕಾಣುವುದಿಲ್ಲ.

ಶಾಲಾ ಶಿಕ್ಷಣವನ್ನು ಮೌಲ್ಯಯುತಗೊಳಿಸಿ, ಕಲಿಕೆಯನ್ನು ಆಸಕ್ತಿದಾಯಕವಾಗಿ ಮಾಡಬಲ್ಲ ಕಾರ್ಯಯೋಜನೆಗಳು ಯಾವ ಪಕ್ಷಗಳ ಪ್ರಣಾಳಿಕೆಗಳಲ್ಲೂ ಇಲ್ಲ. ಕಾಂಗ್ರೆಸ್ ಮತ್ತು ಜನತಾದಳದ ಪ್ರಣಾಳಿಕೆಗಳಲ್ಲಿ ಸರಕಾರಿ ಶಾಲೆಗಳ ಸೌಲಭ್ಯಗಳನ್ನು ಉತ್ತಮಪಡಿಸುವ ಬಗ್ಗೆ ಹೇಳಲಾಗಿದ್ದರೂ, ಕಟ್ಟಡ ಮತ್ತು ಉಪಕರಣಗಳತ್ತ ಹೆಚ್ಚಿನ ಒತ್ತು ನೀಡಲಾಗಿದೆಯೇ ಹೊರತು, ಅವನ್ನು ಹೆಚ್ಚು ಆಕರ್ಷಕಗೊಳಿಸುವ ಬಗ್ಗೆ ನಿರ್ದಿಷ್ಟ ಯೋಜನೆಗಳಿಲ್ಲ. ಭಾಜಪ ಮತ್ತು ಜನತಾದಳಗಳ ಪ್ರಣಾಳಿಕೆಗಳಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣದ ಬಗ್ಗೆ ಹೇಳಲಾಗಿದ್ದರೂ, ಅದು ಕಾರ್ಯರೂಪಕ್ಕೆ ಬರುವಾಗ ಹೇಗಿದ್ದೀತೆಂದು ಹೇಳಲಾಗದು.

ಇದನ್ನೂ ಓದಿ : ಇಲಾಜು | ಅಪರಾಧಿಯನ್ನು ಗಲ್ಲಿಗೇರಿಸುವುದಕ್ಕಿಂತ ಕ್ರೌರ್ಯವನ್ನು ಕೊಲ್ಲುವುದು ಒಳ್ಳೆಯದು

ಆರೋಗ್ಯ ಸೇವೆಗಳ ಸುಧಾರಣೆಗೆ ದೂರಗಾಮಿ ಯೋಜನೆಗಳು ಯಾವ ಪ್ರಣಾಳಿಕೆಗಳಲ್ಲೂ ಕಾಣುವುದಿಲ್ಲ. ಭಾಜಪದ ಪ್ರಣಾಳಿಕೆಯಲ್ಲಿ ಆರೋಗ್ಯ ಸೇವೆಗಳ ಮೊದಲ ಪುಟದಲ್ಲಿ ಯೋಗಭಂಗಿಯೇ ಇದ್ದು, ಒಳಗೆಯೂ ಹಲವೆಡೆ ಆಯುಷ್ ಪದ್ಧತಿಗೇ ಒತ್ತು ನೀಡಲಾಗಿದೆ. ಕೇಂದ್ರದ ಹೊಸ ಆಯವ್ಯಯದಲ್ಲಿ ಹೇಳಲಾಗಿರುವ ಆಯುಷ್ಮಾನ್ ಭಾರತ ಯೋಜನೆಯ ಪುನರುಚ್ಚರಿಸಲಾಗಿದ್ದು, ಅದಕ್ಕೆ ಎಷ್ಟು ಹಣವನ್ನು ಒದಗಿಸಲಾಗುವುದೆಂಬ ವಿವರಗಳಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ ಅನುಗುಣವಾಗಿ ಸುಧಾರಿಸಲಾಗುವುದೆಂದು ಹೇಳಲಾಗಿದೆ. ಆದರೆ, ಈಗ ರಾಜ್ಯದ ಶೇ.84ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೇವಲ ಒಬ್ಬರೇ ವೈದ್ಯರಿದ್ದು, ಆ ಮಾನದಂಡಗಳನುಸಾರ ಅಲ್ಲೆಲ್ಲ ಇಬ್ಬರು ವೈದ್ಯರನ್ನು ನೇಮಿಸುವುದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಭಾಜಪದ ಪ್ರಣಾಳಿಕೆಯಲ್ಲಿಲ್ಲ. ಎಲ್ಲ ರೋಗಿಗಳ ಕಾಯಿಲೆ ಮತ್ತು ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ಕೂಡಿಡಲು ಗಣಕ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದೆಂದು ಭಾಜಪ ಹೇಳಿರುವುದನ್ನು ಎಚ್ಚರಿಕೆಯಿಂದ ನೋಡಬೇಕಾಗುತ್ತದೆ. ಜನತಾದಳದ ಪ್ರಣಾಳಿಕೆಯಲ್ಲಿ ಸರಕಾರಿ ಆರೋಗ್ಯ ಸೇವೆಗಳ ಸುಧಾರಣೆಯ ಬಗ್ಗೆ ಹೆಚ್ಚೇನೂ ಹೇಳಲಾಗಿಲ್ಲ. ಬದಲಿಗೆ, ಅಲ್ಲಲ್ಲಿ ಸರಕಾರಿ ಮತ್ತು ಖಾಸಗಿ ವೈದ್ಯರ ಕೂಟವನ್ನು ರಚಿಸಿ, ಆ ಮೂಲಕ ನಿರ್ದಿಷ್ಟ ಆರೋಗ್ಯ ಸೇವೆಗಳನ್ನು ಒದಗಿಸುವ ಯೋಜನೆಯನ್ನು ರೂಪಿಸಲಾಗುವುದೆಂದೂ, ಅದಕ್ಕಾಗಿ 8,000 ಕೋಟಿ ರುಪಾಯಿಗಳನ್ನು ಒದಗಿಸಲಾಗುವುದೆಂದೂ ಹೇಳಲಾಗಿದೆ. ಇಂಥ ಯೋಜನೆಯು ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸುವ ಎಲ್ಲ ಸಾಧ್ಯತೆಗಳೂ ಇದ್ದು, ಸಮಗ್ರ ಆರೋಗ್ಯ ಸೇವೆಗಳು ಲಭ್ಯವಾಗುವ ಖಾತರಿಯೂ ಇಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲ ಸ್ತರದ ಆರೋಗ್ಯ ಸೇವೆಗಳನ್ನು ಸುಧಾರಿಸುವ ಬಗ್ಗೆ ಹೇಳಲಾಗಿದ್ದು, ಅದಕ್ಕಾಗಿ ಉತ್ಪನ್ನದ ಶೇ.0.9 ಬದಲಿಗೆ ಶೇ.1.5ರಷ್ಟು ಹಣ ಒದಗಿಸಲಾಗುವುದೆಂದು ಹೇಳಲಾಗಿದೆ. ಈಗಾಗಲೇ ಘೋಷಿಸಿರುವ ಆರೋಗ್ಯ ಭಾಗ್ಯ ಯೋಜನೆಯ ಮಾದರಿಯನ್ನೇ ಮುಂದುವರಿಸುವ ಇರಾದೆಯು ಪ್ರಣಾಳಿಕೆಯಲ್ಲಿದೆ. ಆದರೆ, ಅಂಥ ಯೋಜನೆಯಲ್ಲಿ ಖಾಸಗಿ ಆರೋಗ್ಯ ಸೇವೆಗಳ ಬಳಕೆಯನ್ನು ಉತ್ತೇಜಿಸಲಾಗುತ್ತದೆಯೇ ಹೊರತು, ಸರಕಾರಿ ವ್ಯವಸ್ಥೆಯ ಒಳಿತಾಗುವುದಿಲ್ಲ. ಒಟ್ಟಿನಲ್ಲಿ, ಯಾವ ಪಕ್ಷಕ್ಕೂ ಸರಕಾರಿ ಆರೋಗ್ಯ ಸೇವೆಗಳನ್ನೇ ಸುಧಾರಿಸುವ ಹುಮ್ಮಸ್ಸಿದ್ದಂತೆ ಕಾಣುವುದಿಲ್ಲ.

ಸರಕಾರ ಯಾವ ಪಕ್ಷದ್ದೇ ಬಂದರೂ, ರೋಟಿ, ಕಪಡಾ, ಮಕಾನ್, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಅಷ್ಟಿಟ್ಟು ತೇಪೆ ಹಚ್ಚುವ ಕೆಲಸವನ್ನಷ್ಟೇ ನಿರೀಕ್ಷಿಸಬಹುದಲ್ಲದೆ, ದೂರದೃಷ್ಟಿಯುಳ್ಳ, ಕ್ರಾಂತಿಕಾರಿಯಾದ ಯೋಜನೆಗಳನ್ನಲ್ಲ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More