ಸ್ಥಿತಿಗತಿ | ಸರ್ಕಾರ ರಚನೆಯ ಸರ್ಕಸ್ಸು ನೋಡುತ್ತ ಮರೆತುಹೋದ ಕೆಲವು ಸಂಗತಿಗಳು

ಸದ್ಯ ಬಿಜೆಪಿಗೆ ಸರ್ಕಾರ ಉಳಿಸಿಕೊಳ್ಳಲು ತ್ವರಿತ ಆಪರೇಶನ್ ಕಮಲವಷ್ಟೇ ದಿಕ್ಕು ಎಂಬಂತಾಗಿದೆ. ಇದು ತಪ್ಪಿದರೆ, ಕಾಂಗ್ರೆಸ್-ಜೆಡಿಎಸ್ ಸೇರಿ ಸರಕಾರ ರಚಿಸಬಹುದು. ಇಷ್ಟೆಲ್ಲ ಸರ್ಕಸ್ ಮಾಡಿ ರಚನೆಗೊಂಡ ಸರಕಾರಗಳು ನಡೆಸುವ ಆಡಳಿತದಲ್ಲಿ ದೊಡ್ಡ ಬದಲಾವಣೆ ನೀರಿಕ್ಷಿಸುವುದು ಕಷ್ಟ

ಕರ್ನಾಟಕದ ವಿಧಾನಸಭೆ ಚುನಾವಣೆ ಮುಗಿದಿದೆ. ಯಾರಿಗೂ ಬಹುಮತ ಇಲ್ಲ. ಆದರೆ ಚುನಾವಣೆ ಹೇಗೆ ನಡೆದಿದೆ, ಅಭ್ಯರ್ಥಿಗಳ ಹಿನ್ನೆಲೆ ಏನು, ಚುನಾವಣೆ ಗೆಲ್ಲಲು ಇವರು ಮಾಡಿದ ಖರ್ಚೆಷ್ಟು, ಅಧಿಕಾರಕ್ಕೇರಿದ ಪಕ್ಷ ಏನು ಮಾಡಬಹುದು ಇವೆಲ್ಲ ಮುಖ್ಯ ಪ್ರಶ್ನೆಗಳಿವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳು ಗೆದ್ದರೆ ತಾವೇನು ಮಾಡುತ್ತೇವೆ, ತಮ್ಮ ಶಿಕ್ಷಣ ನೀತಿ ಏನು, ತಮ್ಮ ಕಾರ್ಮಿಕ ನೀತಿ ಏನು, ತಮ್ಮ ಕೃಷಿ ನೀತಿ ಏನು, ತಮ್ಮ ಕೈಗಾರಿಕಾ ನೀತಿ ಏನೆಂಬುದನ್ನು ಜನರ ಮುಂದಿಟ್ಟು ಮತ ಯಾಚಿಸುವುದು ಪ್ರಜಾಪ್ರಭುತ್ವದ ಕನಿಷ್ಠ ಅಗತ್ಯ. ಆದರೆ ಇಡೀ ಚುನಾವಣೆಯಲ್ಲಿ ಎಲ್ಲೂ ಯಾವುದೇ ಪಕ್ಷ ಕೂಡ ತಾವು ಅಧಿಕಾರಕ್ಕೆ ಬಂದರೆ ಜಾರಿಗೆ ತರುವ ಪಾಲಿಸಿಗಳನ್ನು ಚರ್ಚಿಸಿಲ್ಲ. ಪರಸ್ಪರ ವ್ಯಕ್ತಿಗತ ದೂಷಣೆಯಲ್ಲಿ ಕಾಲಹರಣ ಮಾಡಿವೆ. ದೇಶದ ಪ್ರಧಾನಮಂತ್ರಿ ಕೂಡ ವಿರೋಧ ಪಕ್ಷದ ನಾಯಕರನ್ನು ಹೀಯಾಳಿಸುವುದಕ್ಕೆ ನೀಡಿದ ಮಹತ್ವವನ್ನು ತಮ್ಮದೇ ಪಕ್ಷದ ಸಾಧನೆ ಅಥವಾ ತಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ತರುವ ಪಾಲಿಸಿಗಳ ಬಗ್ಗೆ ಚರ್ಚಿಸಲು ನೀಡಿಲ್ಲ.

ಚುನಾವಣೆ ಗೆಲ್ಲಲು ಧಾರಾಳವಾಗಿ ಹಣ ವ್ಯಯಿಸಬೇಕೆನ್ನುವ ಸತ್ಯ ಈಗಾಗಲೇ ಜನಸಾಮಾನ್ಯರ ಪ್ರಜ್ಞೆಯ ಭಾಗ ಆಗಿದೆ. ಆದರೆ, ಧಾರಾಳವಾಗಿ ಸುಳ್ಳು ಹೇಳಬೇಕು, ಅದರಲ್ಲೂ ಉನ್ನತ ಹುದ್ದೆಯಲ್ಲಿರುವವರು ಕೂಡ ಸುಳ್ಳು ಹೇಳಬೇಕೆನ್ನುವುದು ಇತ್ತೀಚಿನ ಸತ್ಯ. ಚುನಾವಣೆ ಗೆಲ್ಲಲು ಹೇಳುವ ಸುಳ್ಳುಗಳನ್ನು ಇತ್ತೀಚಿನ ದಿಗಳಲ್ಲಿ ‘ಪೋಸ್ಟ್ ಟ್ರುಥ್’ ಎನ್ನುವ ಗೌರವಾನ್ವಿತ ಪರಿಭಾಷೆಯಿಂದ ಗುರುತಿಸುವ ಕ್ರಮ ಇದೆ. ಅಂದರೆ, ಜನರ ಭಾವನೆಗಳನ್ನು ಕೆದಕಲು ಅಥವಾ ದಾರಿ ತಪ್ಪಿಸಲು ಆಧಾರರಹಿತ ಹೇಳಿಕೆಗಳನ್ನು ನೀಡುವುದು. ಇದೊಂದು ರೀತಿಯಲ್ಲಿ ಬ್ಯಾಂಕ್‌ಗಳು ತಮ್ಮ ಕೆಟ್ಟ ಸಾಲಗಳನ್ನು ನಾನ್ ಪರ್ಫೋಮಿಂಗ್ ಅಸೆಟ್‌ಗಳೆಂದು ಘೋಷಿಸಿದಂತೆ. ಮಡಿಕೇರಿಯಲ್ಲಿ ಭಾಷಣ ಮಾಡುವಾಗ ಕೊಡಗರ ಗಣ್ಯವ್ಯಕ್ತಿಗಳಿಗೆ ವಿರೋಧಿ ಪಕ್ಷ ಅನ್ಯಾಯ ಮಾಡಿದೆ ಎಂದು, ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಗಣ್ಯರಿಗೆ ಅಪಚಾರ ಮಾಡಿದೆಯೆಂದು ಆಧಾರರಹಿತ ಆರೋಪ ಮಾಡುವುದು ಇದಕ್ಕೆ ಕಾರಣ. ಇವರ ಹೇಳಿಕೆಯ ಸತ್ಯಾಸತ್ಯತೆ ಜನರಿಗೆ ತಿಳಿಯುವ ಮುನ್ನ ಚುನಾವಣೆ ಮುಗಿದಿರುತ್ತದೆ. ಜನರು ಇವರ ಹೇಳಿಕೆಯಿಂದ ಪ್ರಭಾವಿತರಾಗಿ ಮತ ಚಲಾಯಿಸಿರುತ್ತಾರೆ. ಸತ್ಯ ಹೇಳಿಕೆ ಮಾಡಬಹುದಾದ ಎಲ್ಲ ಕೆಲಸವನ್ನು ಸುಳ್ಳು ಹೇಳಿಕೆ ಮಾಡುತ್ತದೆ.

ಎಲ್ಲ ಜಾತಿಗಳಿಂದಲೂ ಅಭ್ಯರ್ಥಿಗಳಿರುತ್ತಾರೆ. ಆದರೆ ಯಾವುದೇ ಮುಖ್ಯ ಪಕ್ಷಗಳಲ್ಲೂ (ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್) ಅನನುಕೂಲಸ್ಥ ಅಭ್ಯರ್ಥಿಗಳು ಹುಡುಕಿದರೂ ಸಿಗುವುದಿಲ್ಲ. ಕರ್ನಾಟಕ ಎಲೆಕ್ಷನ್ ವಾಚ್ ಅಂಕಿ-ಅಂಶಗಳ ಪ್ರಕಾರ, ಈ ಬಾರಿ ಪುನರ್ ಸ್ಪರ್ಧಿಸುವ ಮುಖ್ಯ ಪಕ್ಷಗಳ 184 ಅಭ್ಯರ್ಥಿಗಳ ಸರಾಸರಿ ಆಸ್ತಿ 2013ರಲ್ಲಿ 26.92 ಕೋಟಿ ರು. ಇತ್ತು. ಅದು 2018ರ ವೇಳೆಗೆ 44.24 ಕೋಟಿ ರು.ಗೆ ಏರಿದೆ. 2013ರಲ್ಲಿ 37 ಕೋಟಿಯಷ್ಟು ಸರಾಸರಿ ಆಸ್ತಿ ಹೊಂದಿದ್ದ ಕಾಂಗ್ರೆಸ್ ಪಕ್ಷದ 108 ಅಭ್ಯರ್ಥಿಗಳು 2018ರಲ್ಲಿ 62 ಕೋಟಿಯಷ್ಟು ಸರಾಸರಿ ಆಸ್ತಿ ಘೋಷಿಸಿದ್ದಾರೆ. ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಸರಾಸರಿ ಆಸ್ತಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಷ್ಟು ಏರಿಕೆ ಕಂಡಿಲ್ಲ, ಹಾಗೆಂದು ಕುಸಿದೂ ಇಲ್ಲ. ಬಿಜೆಪಿಯ 49 ಮತ್ತು ಜೆಡಿಎಸ್‌ನ 24 ಅಭ್ಯರ್ಥಿಗಳ ಸರಾಸರಿ ಆಸ್ತಿ 2013 ಮತ್ತು 2018ರ ನಡುವೆ 7 ಕೋಟಿ ರು.ನಷ್ಟು ವೃದ್ಧಿಯಾಗಿದೆ. ಅಭ್ಯರ್ಥಿಗಳು ಆಸ್ತಿಪಾಸ್ತಿಯಲ್ಲಿ ಮಾತ್ರ ಮುಂದಿರುವುದಲ್ಲ; ಕ್ರಿಮಿನಲ್ ಚಟುವಟಿಕೆಗಳಲ್ಲೂ ಮುಂದಿದ್ದಾರೆ. ಶೇ.15ರಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಸಾಮಾನ್ಯ ಕ್ರಿಮಿನಲ್ ಮೊಕದ್ದಮೆಗಳಿವೆಯೆಂದು ಘೋಷಿಸಿದರೆ, ಶೇ.10ರಷ್ಟು ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆಯೆಂದು ಹೇಳಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಇರುವ ಅಭ್ಯರ್ಥಿಗಳನ್ನು ಎಲ್ಲ ಪಕ್ಷಗಳಲ್ಲೂ ನೋಡಬಹುದು. ಶೇ.37ರಷ್ಟು ಬಿಜೆಪಿ, ಶೇ.27ರಷ್ಟು ಕಾಂಗ್ರೆಸ್ ಮತ್ತು ಶೇ.21ರಷ್ಟು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆಂದು ಎಲೆಕ್ಷನ್ ವಾಚ್ ಅಂಕಿ-ಅಂಶಗಳು ಹೇಳುತ್ತವೆ.

ಕೋಟ್ಯಧೀಶ ಅಭ್ಯರ್ಥಿಗಳು ಚುನಾವಣೆ ಗೆಲ್ಲಲು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಚುನಾವಣಾಪೂರ್ವದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದ ಮೊತ್ತದಿಂದಲೇ (122 ಕೋಟಿ ರು.) ಅಭ್ಯರ್ಥಿಗಳು ಮಾಡುವ ಖರ್ಚನ್ನು ಅಂದಾಜು ಮಾಡಬಹುದು. ಈ ಹಿಂದೆ ಪ್ರತಿ ಮತಕ್ಕೂ ಕೆಲವು ನೂರು ವಿನಿಯೋಗಿಸಬೇಕಿತ್ತು. ಆದರೆ, ಇಂದು ಕೆಲವು ನೂರು ರುಪಾಯಿಗಳಿಗೆ ಮತ ಗಿಟ್ಟುವುದಿಲ್ಲ, ಕೆಲವು ಸಾವಿರ ವಿನಿಯೋಗಿಸಬೇಕಾಗಿದೆ. ಅಂದರೆ, ಹಲವು ಕೋಟಿ ರುಪಾಯಿಗಳನ್ನು ಖರ್ಚು ಮಾಡಲು ಶಕ್ತಿ ಇಲ್ಲದವರು ಚುನಾವಣೆ ಸ್ಪರ್ಧಿಸುವ ಕನಸು ಕಾಣಲು ಸಾಧ್ಯವಿಲ್ಲ. ಇಂತಹ ಕೋಟ್ಯಧೀಶರನ್ನು ಚುನಾಯಿಸುವ ಮತದಾರರ ಆಸ್ತಿ ಸ್ಥಿತಿ ಏನಿರಬಹುದು? 2016ರಲ್ಲಿ ಕರ್ನಾಟಕದ ವಾರ್ಷಿಕ ತಲಾ ಆದಾಯ ಸ್ಥಿರ ಬೆಲೆಯಲ್ಲಿ 1,23,877 ರು. ಆಗಿತ್ತು. ಒಂದು ಕುಟುಂಬದಲ್ಲಿ ಇಬ್ಬರು ಗಳಿಸುವವರಿದ್ದಾರೆಂದು ಊಹಿಸಿದರೂ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರು. ದಾಟುವುದಿಲ್ಲ. ಇಷ್ಟೊಂದು ಕನಿಷ್ಠ ಗಳಿಕೆವುಳ್ಳವರ ಆಸ್ತಿ ಕೆಲವು ಲಕ್ಷ ದಾಟಲು ಸಾಧ್ಯವಿಲ್ಲ. ಅಂದರೆ, ಕೆಲವು ಲಕ್ಷ ಆಸ್ತಿವುಳ್ಳವರನ್ನು ಹಲವು ಕೋಟಿ ಆಸ್ತಿವುಳ್ಳವರು ಪ್ರತಿನಿಧಿಸಲು ಹಲವು ಕೋಟಿ ಸಾರ್ವಜನಿಕ ಸಂಪತ್ತು ವ್ಯಯಿಸಿ ನಡೆಸುವ ಪ್ರಹಸನ ಇದು.

ಇದನ್ನೂ ಓದಿ : ಸ್ಥಿತಿಗತಿ | ಸಿರಿವಂತರೇ, ಸರಕಾರಿ ಬ್ಯಾಂಕ್‌ಗಳನ್ನು ದಯವಿಟ್ಟು ಬಿಟ್ಟುಬಿಡಿ

ಇಷ್ಟೊಂದು ಅಸಮಾನತೆ ಇರುವ ಪ್ರಜಾಪ್ರಭುತ್ವದಲ್ಲಿ ಜನರ ಇಷ್ಟ-ಕಷ್ಟಗಳನ್ನು ಕೇಳಿ ಚುನಾವಣೆಗಳು ನಡೆಯುವುದಿಲ್ಲ ಮತ್ತು ಸರಕಾರಗಳು ರೂಪುಗೊಳ್ಳುವುದಿಲ್ಲ. ನಮ್ಮಲ್ಲೂ ಚುನಾವಣೆ ನಡೆದಿದೆ. ಯಾವ ಪಕ್ಷಕ್ಕೂ ಬಹುಮತ ಇಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರ ಪಾತ್ರ ಪ್ರಮುಖ. ಬಹುಮತ ಇಲ್ಲದ, ಆದರೆ ಅತಿ ಹೆಚ್ಚು ಸೀಟು ಪಡೆದ ಪಕ್ಷವನ್ನು ಸರಕಾರ ರಚಿಸಲು ಆಮಂತ್ರಿಸಬೇಕೇ ಅಥವಾ ಒಟ್ಟು ಸೇರಿ ಸರಕಾರ ರಚಿಸುತ್ತೇವೆ ಎಂದು ಕೋರಿಕೆ ಮುಂದಿಟ್ಟ ಪಕ್ಷಗಳನ್ನು ಆಮಂತ್ರಿಸಬೇಕೇ ಎನ್ನುವ ಪ್ರಶ್ನೆ ರಾಜ್ಯಪಾಲರ ಮುಂದೆ ಬಂದಿತ್ತು. ಇಂತಹ ಸ್ಥಿತಿ ಮೊದಲ ಬಾರಿಗೆ ಉದ್ಭವ ಆಗಿದ್ದಲ್ಲ. ಬೇರೆ ರಾಜ್ಯಗಳಲ್ಲೂ ಇಂತಹ ಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭಗಳಲ್ಲಿ ತೆಗೆದುಕೊಂಡ ನಿರ್ಣಯಗಳು ಮತ್ತು ಕೋರ್ಟ್‌ಗಳು ನೀಡಿದ ತೀರ್ಮಾನಗಳನ್ನು ಬಳಸಿಕೊಂಡು ರಾಜ್ಯಪಾಲರು ಯಾರನ್ನು ಆಮಂತ್ರಿಸಬೇಕೆಂದು ತೀರ್ಮಾನಿಸಬಹುದು; ಆದರೆ, ಇವೆಲ್ಲವೂ ರಾಜ್ಯಪಾಲರು ಸ್ವತಂತ್ರರಾಗಿ ಕಾರ್ಯನಿರ್ವಹಿಸುವಾಗ ಅನುಸರಿಸುವ ಕ್ರಮಗಳು. ಇಂದು ಅಂತಹ ಸ್ಥಿತಿ ಇಲ್ಲ. ರಾಜ್ಯಪಾಲರನ್ನು ನೇಮಕ ಮಾಡುವ ಕೇಂದ್ರ ಸರಕಾರ ರಾಜ್ಯಪಾಲರು ತಮ್ಮ ಆಜ್ಞೆಯಂತೆ ನಡೆದುಕೊಳ್ಳಬೇಕೆಂದು ಬಯಸುತ್ತದೆ. ಆದುದರಿಂದ ಕೇಂದ್ರ ಸರಕಾರದ ಬಯಕೆಯಂತೆ ಬಿಜೆಪಿ ಸರಕಾರ ರಚಿಸಲು ರಾಜ್ಯಪಾಲರು ಕೋರಿದ್ದಾಗಿದೆ, ಅದೀಗ ವಿವಾದವೂ ಆಗಿದೆ.

ಇದೀಗ ಬಿಜೆಪಿ ನಿರ್ದಿಷ್ಟ ಅವಧಿಯೊಳಗೆ ಬಹುಮತ ಸಾಬೀತುಪಡಿಸಬೇಕಿದೆ. ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಅಧಿಕೃತವಾಗಿ 9 ಎಂಎಲ್‌ಎಗಳ ಕೊರತೆ ಇದೆ. ಈ ಕೊರತೆಯನ್ನು ತುಂಬಿಸಲು ಬಿಜೆಪಿಗೆ ಇರುವ ಮಾರ್ಗಗಳು ಕೂಡ ತುಂಬಾ ಸೀಮಿತ. ಬಿಜೆಪಿ ಈ ಹಿಂದೆ ನಡೆಸಿದ ಆಪರೇಶನ್ ಕಮಲವನ್ನು ಪುನರಾವರ್ತಿಸುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಅದಾಗದಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರಕಾರ ರಚಿಸಬಹುದು. ಇಷ್ಟೆಲ್ಲ ಸರ್ಕಸ್ ಮಾಡಿ ರಚನೆಗೊಂಡ ಸರಕಾರಗಳು ನಡೆಸುವ ಆಡಳಿತದಲ್ಲಿ ದೊಡ್ಡ ಬದಲಾವಣೆ ನೀರಿಕ್ಷಿಸುವುದು ಕಷ್ಟ. ಪ್ರಾದೇಶಿಕ ಪಕ್ಷಗಳಿಗೆ ಆರ್ಥಿಕ ನೀತಿಯೇ ಇಲ್ಲ. ಕಾಂಗ್ರೆಸ್ ಪಕ್ಷ ಆರಂಭಿಸಿದ ಮಾರುಕಟ್ಟೆ ನಿರ್ದೇಶಿತ ಆರ್ಥಿಕ ನೀತಿಯನ್ನು ಬಿಜೆಪಿ ಮುಂದುವರಿಸುತ್ತಿದೆ. ಆದುದರಿಂದ ಯಾವುದೇ ಪಕ್ಷ ಸರಕಾರ ರಚಿಸಿದರೂ ಕರ್ನಾಟಕದ ಜನರು ಆಡಳಿತದಲ್ಲಿ, ಆರ್ಥಿಕ ನೀತಿಯಲ್ಲಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅಮೂಲಾಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More