ಶತಪಥ | ನನಗೂ ಒಂಚೂರು ಹೇಳಲಿಕ್ಕಿದೆ, ಕೇಳೀ...

ಅಲ್ಲಿ ಏತಕೋ ಎಲ್ಲ ಪಕ್ಷದವರೂ ಇದ್ದಾರೆ. ಪಕ್ಷಪಕ್ಷಗಳೊಳಗೆ ನುಸುಳಿ ಹೊರಬರುತ್ತ, ಆಂತರ್ಯದೊಳಗೆ ಯಾವ ಪಕ್ಷ, ಬಾಹ್ಯದಲ್ಲಿ ಯಾವ ಪಕ್ಷ ಅಂತ ಪತ್ತೆಯೇ ಆಗದಂತೆ ಇರುವ ಅನೇಕರಿದ್ದಾರೆ. ಇವರೆಲ್ಲ ನಿಜವಾಗಿಯೂ ಮಾತು ಆಡುತಿದ್ದಾರೆಯೋ, ಕೇಳುತಿದ್ದಾರೆಯೋ!

ಅಲ್ಲಿ ಎಲ್ಲರೂ ಸೇರಿರುವುದೇ ಚರ್ಚೆಗಾಗಿ. ಅದು ಗಾಳಿಯಾಡದ ಹಾಲು. ಹವಾ ನಿಯಂತ್ರಿಸಿದ್ದಾರೆ. ಎಂತಲೇ ಅಲ್ಲಿ ಮಾತುಗಳನ್ನು ತಲುಪಿಸುವ ವಾಹಕಗಳೇ ಇಲ್ಲವಾಗಿ ಒಮ್ಮೊಮ್ಮೆ ಅವು ಲಾಚಾರ ಬಿದ್ದುಹೋಗುವ ಸ್ಥಿತಿ ತಲುಪುತ್ತವೆ. ಮಾತುಗಳು ಬಿದ್ದುಹೋಗದಂತೆ ತಡೆಯುವುದು ಎಂಥ ಕಷ್ಟ! ಆದರೆ, ಅಲ್ಲಿ ಕೆಲ ಮಂದಿ ಇದ್ದಾರೆ, ಅವರಿಗೆ ಬೀಳುವ ಮಾತುಗಳನ್ನು ಗಪ್ಪನೆ ಹಿಡಿದು ಚೆಂಡಾಟದಂತೆ ಆಚಿಂದ ಈಚೆಗೆ, ಈಚಿಂದ ಆಚೆಗೆ ದಾಟಿಸುವುದೇ ಕೆಲಸ. ಅವರು ಅಲ್ಲಿ ಸೇರಿದ್ದೇ ಈ ಕೆಲಸಕ್ಕಾಗಿ. ಒಮ್ಮೊಮ್ಮೆ ಮಾತುಗಳು ಢಿಕ್ಕಿ ಹೊಡೆದು ಪರಪರನೆ ಕಿಡಿಯೇಳುವುದಿದೆ. ಅದಕ್ಕೇ ನಾಲ್ಕು ಕಣ್ಣಿನಲ್ಲಿ ಕಾಯುತ್ತ, ಕಿಡಿ ಕಂಡುಬಂದದ್ದೇ ಸೈ, ಅದನ್ನು ಅಲ್ಲಲ್ಲೇ ಹುಶ್ ಮಾಡಿ ದಾಟಿಸುವ ಕುಶಲರೂ ಅಲ್ಲಿದ್ದಾರೆ. ಒಂದು ರೀತಿಯಲ್ಲಿ ಅಲ್ಲಿ ಸೇರಿದ್ದ ಎಲ್ಲರಿಗೂ ಒಂದೊಂದು ಪಾತ್ರವಿದೆ. ಚರ್ಚೆ ಮಾಡುವವರು, ಸ್ವರ ಏರಿಸುವವರು, ಸ್ವರ ಏರಿಸದೆ ಮಾತಿನ ಕಾವು ಮಾತ್ರ ಏರಿಸುವವರು, ನಗೆಚಾಷ್ಟೆಯವರು, ಹುಡುಗಾಟಿಕೆಯವರು. ಕೈ ಬೆರಳೆಣಿಕೆಯಷ್ಟು ಗಂಭೀರದವರೂ ಕೆಲವರು. ಪ್ರಜೆಗಳ ಮನಸ್ಸು ಏನೆಂದೇ ತಿಳಿಯದೆಯೂ ಸುಮ್ಮನೆ ಮೇಜು ಕುಟ್ಟಿ ಈ ಚುನಾವಣೆಯಲ್ಲಿ ತಾವೇ ಗೆಲ್ಲುವವರೆಂದು ಖಡಾಖಂಡಿತ ನುಡಿವ ಲಜ್ಜೆಗೇಡಿಗಳೂ. ಹಾಗೆ ನುಡಿದು, ಗೊತ್ತೇ ಆಗದಂತೆ ಪ್ರಜೆಗಳಿಗೆ ಅವಮಾನ ಮಾಡುವವರೂ. ಫಲಿತಾಂಶ ಬರುವವರೆಗೆ ಕಾಯಲಾಗದವರು, ಗೆಲುವ ಪಕ್ಷ ತಮ್ಮದೇ ಎನ್ನುವವರು, ತಾವೇ ಮುಖ್ಯಮಂತ್ರಿ ಎಂದು ಹನಿ ನಾಚಿಕೆ ಇಲ್ಲದೆ ಘೋಷಿಸಿ ಬೆಚ್ಚಿಬೀಳಿಸುವವರು. ವಿಚಿತ್ರ, ಅಲ್ಲಿ ಏತಕೋ ಎಲ್ಲ ಪಕ್ಷದವರೂ ಇದ್ದಾರೆ. ಪಕ್ಷಪಕ್ಷಗಳೊಳಗೆ ನುಸುಳಿ ಹೊರಬರುತ್ತ ಆಂತರ್ಯದೊಳಗೆ ಯಾವ ಪಕ್ಷ, ಬಾಹ್ಯದಲ್ಲಿ ಯಾವ ಪಕ್ಷ ಅಂತ ಪತ್ತೆಯೇ ಆಗದಂತೆ ಇರುವ ಅನೇಕರಿದ್ದಾರೆ. ಯಾರೊಡನೆ ಇವರೆಲ್ಲ ಮಾತಾಡುತಿದ್ದಾರೆ, ನಿಜವಾಗಿಯೂ ಮಾತು ಆಡುತಿದ್ದಾರೆಯೋ, ಕೇಳುತಿದ್ದಾರೆಯೋ ಏನೂ ತಿಳಿಯುತ್ತಿಲ್ಲ! ಮಾತು ಆಡುವವರು ಯಾರು, ಕೇಳುವವರು ಯಾರು ಗೊತ್ತೇ ಆಗದಂತೆ ಮಾತುಗಳು ಮಾತುಗಳ ಮೇಲೆ ಸವಾರಿ ಮಾಡುತ್ತಿವೆ. ಹವೆಯನ್ನು ನಿಯಂತ್ರಿಸಿದ್ದರಿಂದ ಗಾಳಿಯಂತೂ ಹೊರಬರುತ್ತಿಲ್ಲ, ಅಲ್ಲಿನ ವಿದ್ಯಮಾನಗಳನ್ನು ಹೊರಗೆ ತಲುಪಿಸುವ ಆಸೆಯಾದರೂ ಉಸಿರು ಬಿಡದಂತೆ ಮಾಡಿರುವುರಾಗಿ ಅದಕ್ಕದು ಸಾಧ್ಯವಾಗುತ್ತಿಲ್ಲ. ಅಬ್ಬರ ನೋಡಿದರೆ ಎದುರು ಕೆಮೆರಾಗಳು, ಪತ್ರಿಕೆಯವರು, ಮಾಧ್ಯಮದವರು, ಇದ್ದಿರಬಹುದು ಅನಿಸುತ್ತಿದೆ.

ಏನು ವಿಷಯ, ಈಗ ಯಾವ ವಿಷಯ ಎಂಬುದೂ ತಿಳಿಯದ ಹಾಗೆ ಚರ್ಚೆಯ ವಿಷಯಗಳೂ ಒಂದರೊಳಗೊಂದು ಚಹರೆಯೇ ಕಾಣದಂತೆ ಬೆರೆತುಹೋಗಿವೆ. ಎಲ್ಲ ಒಟ್ಟು ಗದ್ದಲದ ಗೂಡಾಗಿದೆ. ನಡುನಡುವೆ ಪಾನೀಯ ಮತ್ತು ತಿಂಡಿ ವಿತರಣೆಯಂತೂ ನಿರಂತರವಿದೆ. ಯಾರೂ ಬಾಗಿಲು ದೂಡಿ ಒಳಗೆ ಇಣುಕಲೂ ಸಾಧ್ಯವಿಲ್ಲದ ಹಾಗೆ ಸುತ್ತ ಬಲವಾದ ಪಹರೆ ಇದೆ.

ಇಂತಿರುವಾಗ ಅಲ್ಲೊಂದು ದನಿ ಕೇಳುತ್ತಿದೆ.

"ನನಗೂ ಒಂಚೂರು ಹೇಳಲಿಕ್ಕಿದೆ, ಕೇಳಿ...”

ಎಲ್ಲಿಂದ ಈ ದನಿ?

ಒಳಗಿಂದಲೋ ಹೊರಗಿಂದಲೋ?

ಎಲ್ಲರಿಗಿಂತ ಈ ದನಿ ದೊಡ್ಡದಿದೆಯಾದರೂ, ಅದು ಕೇಳುವಂತೆ ಕೂಗುತ್ತಿದೆಯಾದರೂ ಯಾರಿಗಾದರೂ ಕೇಳಿಸಿದ ಹಾಗೆ ಕಾಣುತ್ತಿಲ್ಲ.

ಎಲ್ಲಿಂದ ಈ ದನಿ? ಕಂಗಾಲಾದಂತಾಗಿ ಎಲ್ಲ ಒಮ್ಮೆ ಸುತ್ತ ಕಣ್ಣೋಡಿಸಿದರು: ಯಾರೂ ಕಾಣಲಿಲ್ಲವಾಗಿ ಚರ್ಚೆ ಮುಂದುವರಿಸಿದರು. ಚರ್ಚೆಗೆ ಬೇಕಾದಷ್ಟು ವಿಷಯಗಳಿದ್ದವು. ಅವು ಚರ್ಚೆಯಲ್ಲಿ ನೆನೆದು ಒದ್ದೆ ಮುದ್ದೆಯಾಗಿದ್ದರೂ ಮತ್ತೆ ಮತ್ತೆ ಅದನದನ್ನೇ ಚರ್ಚಿಸುತಿದ್ದರು. ಮಾತುಗಳು ಕರಗುವುದಿಲ್ಲ, ಬದಲು ಖಾಲಿ ಸದ್ದಾಗುತ್ತ ಮಾಯವಾಗುತ್ತವೆ. ಮತ್ತೆ ಮರುಳರಂತೆ ಮರಳುತ್ತವೆ. ಮಾತುಗಳ ಹಣೆಬರಹವೇ ಇಷ್ಟು. ಅವಕ್ಕೂ ಅತ್ತ ಇತ್ತ ಯಾರ್ಯಾರೋ ಆಡಿಸಿದಂತೆ ಆಡೀ ಆಡೀ ಮಿದುಳು ಸಡಿಲಾಗಿದೆ.

ಮತ್ತೆ ದನಿ,

“ನನಗೂ ಒಂಚೂರು ಹೇಳಲಿಕ್ಕಿದೆ, ಕೇಳೀ...”

ದನಿ ಕೇಳಿಬರುವುದು ಬೇರೆ, ಕೇಳಿಸುವುದು ಬೇರೆ. ಕೇಳಿಸದ ಮೇಲೆ ಕೂಗಿಯಾದರೂ ಏನು? ಎನ್ನುವಂತಿಲ್ಲ. ಕೇಳಿಸುವವರೆಗೂ ಕೂಗುವುದೇ ಸರಿ ಎಂದು ನಿರ್ಧರಿಸಿದ ಮೇಲೆ!

ದನಿಯಲ್ಲಿ ಒಲೆಯ ಉರಿಯಂಥ ಉರಿ ಇದೆ. ಜೀವದೊಳಗಿನ ಬೆಳಕಿನಂಥ ಬೆಂಕಿ ಇದೆ. ನಂದಿಸಲಾರದ ಬೆಂಕಿ ಇದು- ನಂದಿಸಲೆಂದೇ ಇರುವವರು ಪಿಸುಗುಡುತ್ತಲೂ ಮತ್ತೆ ಎಲ್ಲರೂ ಸುತ್ತಮುತ್ತ ನೋಡಿದರು. ಕಣ್ಣಲ್ಲೇ ಹಾಲಿನ ಮೂಲೆಮೂಲೆಗಳಲ್ಲಿಯೂ ಹುಡುಕಿದರು. ಉಹು, ಯಾರೂ ದೃಷ್ಟಿಗೆ ಬೀಳುತ್ತಿಲ್ಲ.

“ಇಲ್ಲಿ, ಇಲ್ಲಿ ನೋಡಿ, ನಾನಿಲ್ಲಿದ್ದೇನೆ, ನಾ ಹೇಳುವುದನ್ನು ಸ್ವಲ್ಪ ಕೇಳಿ, ಕೇಳಿ...” -ಒಂದೇ ಸಮನೆ ದನಿ ತೂರಿಬರುತ್ತಿದೆ.

ಅದೇನು ಝಳಪು ಅದರಲ್ಲಿ? ಜಟರಾಗ್ನಿಯ ಝಳಪೇ ಅದು?

ಏನು ಅಂತ ಹುಡುಕುವಷ್ಟು ವ್ಯವಧಾನವಿಲ್ಲ. ಸಂಜೆಯೊಳಗೆ ಎಲ್ಲ ಬರ್ಖಾಸ್ತ್ ಆಗಬೇಕು. ಅಷ್ಟರೊಳಗೆ ತಂತಮ್ಮ ಮಾತಿನ ಗಾಡಿ ಗುರಿ ತಲುಪಬೇಕು. ದೇಶವನ್ನಾಳುವವರು ತಾವೇ, ರಾಜ್ಯಕ್ಕೆ ತಾವೇ, ಬಡವರಿಗೆ ಶ್ರೀಮಂತರಿಗೆ ತಾವೇ, ಮಹಿಳೆಯರಿಗೆ-ಅಲಕ್ಷಿತರಿಗೆ ತಾವೇ, ಎಲ್ಲರಿಗೂ ಎಲ್ಲದಕೂ ತಾವೇ ತಾವೇ ತಾವೇ...

ಇತ್ತ ಗದ್ಗದಗೊಂಡಿದೆ ದನಿ... ಪ್ರಶ್ನೆಯಾಗಿ ಬದಲಾಗಿದೆ. ಕೊಲೆಗೆ? ಅತ್ಯಾಚಾರಕ್ಕೆ? ಅನಾಚಾರಕ್ಕೆ? ಅವಜ್ಞೆಗೆ?

ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತ ಕಾಲ ಎಷ್ಟಾಯಿತು?

ಇದನ್ನೂ ಓದಿ : ಶತಪಥ | ಕಟ್ಟುವೆವೇ ನಾವು ಹೊಸ ನಾಡೊಂದನು? ಕಟ್ಟುವೆವೇನು!

ಸಮಯ ಓಡಿತು, ಚರ್ಚೆ ಮುಗಿಯಿತೋ ಎಂಬಂತೆ ಬಾಗಿಲು ತೆರೆಯಿತು. ಒಳಗಿನ ಗಾಳಿಯೂ ಬಿಡುಗಡೆ ಪಡೆಯಿತು. ಏನಾದರೂ ತಿಳಿಸೀತೇ, ಒಳಗೇನು ನಡೆಯಿತು? ಯಾರು ಗೆದ್ದರು, ಸೋತರು, ಮಾತಾಯಿತೇ ಕದನವಾಯಿತೇ, ನಡೆದದ್ದೇನು? ಆದರೆ ಗಾಳಿಯೋ, ಏನೋ ಭಯಗೊಂಡಂತೆ ಸ್ತಬ್ದಮೂಕವಾಗಿತ್ತು. “ಏನು ಸೆಕೆ! ಏನು ಸೆಕೆ!” ಎನ್ನುತ್ತ ಎಲ್ಲ ಹೊರಬಂದರು. ಅವರೂ ಎಲ್ಲ ಈಗ ಮೌನವಾಗಿದ್ದರು. ವಾದವಿವಾದದ ಗಾವಿನಲ್ಲಿ ಕರಟಿದಂತಿದ್ದಿರುತ್ತಾರೆ, ಸುಸ್ತಾದವರಿಂತಿರುತ್ತಾರೆ, ಗೋಜಲಿನಲ್ಲಿ ಯಾರ್ಯಾರದೋ ವಾಹನದಲ್ಲಿ ಯಾರ್ಯಾರೋ ನುಗ್ಗಿ ಜಾಗ ಖಾಲಿ ಮಾಡುತ್ತಾರೆ ಅಂತಂದುಕೊಂಡರೆ, ಅಚ್ಚರಿಯೇ! ತಾವು ಒಳಗೆ ಇರಲೇ ಇಲ್ಲ ಎನ್ನುವಂತೆ ಎಲ್ಲರೂ ನಿರಾಳವಾಗಿದ್ದರು.

ಬಿಡಲಿಲ್ಲ ದನಿ ಬೆನ್ನಟ್ಟಿತು...

“ನಾನೂ ಏನೋ ಹೇಳಲಿಕ್ಕಿದೆ, ಕೇಳೀ...” ಕೂಗಿತು.

ಗಾಳಿ ಕೂಗನ್ನು ತಲುಪಿಸುತ್ತಿದ್ದಂತೆ ಕಾರುಗಳೆಲ್ಲ ಕಿವಿಯೇ ಇಲ್ಲ ಎಂಬಂತೆ ಭರ್ರಭರ್ರನೆ ಹೊರಟುಹೋದವು.

ವಾಹನಗಳ ಕತ್ತು ಹಿಂದೆ ತಿರುಗಲಾರದು.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More