ಕಾಶ್ಮೀರದಿಂದ | ಮುಂಬೈ ದಾಳಿ ಕುರಿತು ಷರೀಫ್‌ಗೆ ದಿಢೀರ್ ಕಾಳಜಿ ಬಂದದ್ದೇಕೆ?

ಪಾಕಿಸ್ತಾನವು ಏಕಕಾಲಕ್ಕೆ ಸ್ಥಿರವಾಗಿಯೂ ಮತ್ತು ಅಸ್ಥಿರವಾಗಿಯೂ ಇರುವ ದೇಶ! ಈ ದೇಶದಲ್ಲಿ ಖಳನಾಯಕರು ಮತ್ತು ನಾಯಕರು ರಾಷ್ಟ್ರೀಯ ತಿರುಗುಪೀಠದಲ್ಲಿ ಕುಳಿತು ತಂತಮ್ಮ ಸ್ಥಾನಗಳನ್ನು ನಿರಾಯಾಸವಾಗಿ ಅದಲುಬದಲು ಮಾಡಿಕೊಳ್ಳುವ ಪರಿ ನಿಜಕ್ಕೂ ಬೆರಗು ಹುಟ್ಟಿಸುತ್ತದೆ

ಪಾಕಿಸ್ತಾನದ ರಾಜಕೀಯ ವಾತಾವರಣ ಎಂದೂ ನಿರಾಶಾದಾಯಕವಾಗಿಲ್ಲ. ಯಾವಾಗ ನೋಡಿದರೂ ಇಡೀ ದೇಶವನ್ನು ಆಕರ್ಷಿಸುವಂತಹ ಹಾಗೂ ದೇಶದ ಒಳಗೆ ಮತ್ತು ಹೊರಗೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗುವಂತಹ ಕನಿಷ್ಠ ಒಂದಾದರೂ ದೊಡ್ಡ ಸಂಘರ್ಷ ಇದ್ದೇ ಇರುತ್ತದೆ. ಅದೇ ಸಮಯದಲ್ಲಿ ಇತರ ಹಲವು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಹಲವು ವರ್ಷಗಳ ಹಿಂದೆ, ನೆದರ್ಲೆಂಡ್‌ನ ಸಮ್ಮೇಳನವೊಂದರಲ್ಲಿ ಪಾಕಿಸ್ತಾನದ ಬಗ್ಗೆ ಮಾತಾಡುತ್ತ ನಾನು ಆಡಿದ ಒಂದು ಮಾತು ಇಂದಿಗೂ ಯಥಾವತ್ತಾಗಿ ಪ್ರಸ್ತುತ ಅನ್ನಿಸುತ್ತದೆ: “ಪಾಕಿಸ್ತಾನವು ಸ್ಥಿರವಾಗಿ ಅಸ್ಥಿರವಾಗಿರುವ ದೇಶ. ಈ ದೇಶದಲ್ಲಿ ಖಳನಾಯಕರು ಮತ್ತು ನಾಯಕರು ರಾಷ್ಟ್ರೀಯ ತಿರುಗುಪೀಠದಲ್ಲಿ ಕುಳಿತು ತಂತಮ್ಮ ಸ್ಥಾನಗಳನ್ನು ನಿರಾಯಾಸವಾಗಿ ಅದಲುಬದಲು ಮಾಡಿಕೊಳ್ಳುವ ಪರಿ ನಿಜಕ್ಕೂ ಬೆರಗು ಹುಟ್ಟಿಸುತ್ತದೆ.”

ತಮ್ಮದೇ ಎಡವಟ್ಟುಗಳಲ್ಲಿ ಕುತ್ತಿಗೆ ತನಕ ಮುಳುಗಿರುವ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಇತ್ತೀಚೆಗೆ ಇನ್ನೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. 'ಡಾನ್' ಪತ್ರಿಕೆಗೆ ನೀಡಿದ ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಅವರು, ಹೆಚ್ಚೂಕಡಿಮೆ ಮುಂಬೈ ಭಯೋತ್ಪಾದಕ ದಾಳಿಯನ್ನು ವ್ಯವಸ್ಥಿತವಾಗಿ ಯೋಜಿಸಿ ಜಾರಿ ಮಾಡಿದ್ದು ಪಾಕಿಸ್ತಾನ ಪ್ರಭುತ್ವವೇ ಎಂಬರ್ಥದಲ್ಲಿ ಆರೋಪಿಸಿದ್ದಾರೆ. ಇದೇ ಅರ್ಥ ಬರುವ ಮಾತುಗಳನ್ನು ಈ ಹಿಂದೆಯೂ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ಹಿಡಿದು ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲಿಕ್ ತನಕ ಹಲವಾರು ನಾಯಕರೂ ಆಡಿದ್ದಾರಾದರೂ ಹಲವು ಜನರು ಮತ್ತು ರಾಜಕಾರಣಿಗಳು ನವಾಜ್ ಷರೀಫ್ ಅವರನ್ನು ಮಾತ್ರ ದ್ರೋಹಿ ಎಂದು ಖಂಡಿಸಿದ್ದಾರೆ.

ಅಂತಾರಾಷ್ಟ್ರೀಯವಾಗಿ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲಾಗಿರುವ ಲಷ್ಕರ್-ಇ-ತಯ್ಬಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಷರೀಫ್ ಒತ್ತಾಯಿಸಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿ ಕೋಲಾಹಲವೇ ಎದ್ದಿದೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದು ವಾದಿಸುವವರು ಒಂದು ಕಡೆ ಹಾಗೂ ಈ ವಿಷಯದಲ್ಲಿ ಸುಖಾಸುಮ್ಮನೆ ಪಾಕಿಸ್ತಾನದ ಮೇಲೆ ಸುಳ್ಳು ಆರೋಪ ಹೊರಿಸಿ ಅದನ್ನು ಎಳೆದು ತರಲಾಗುತ್ತಿದೆ ಎಂದು ಭಾರತ ಮತ್ತು ಪಶ್ಚಿಮದ ದೇಶಗಳನ್ನು ಖಂಡಿಸುವವರು ಇನ್ನೊಂದು ಕಡೆಯಿದ್ದು, ಈ ಎರಡೂ ಗುಂಪುಗಳ ನಡುವೆ ಸಾರ್ವಜನಿಕ ಅಭಿಪ್ರಾಯ ಇಬ್ಬಾಗವಾಗಿದೆ. ಈ ಭಯೋತ್ಪಾದನಾ ಕೃತ್ಯದ ಮಾಸ್ಟರ್ ಮೈಂಡ್ ಯಾರು ಹಾಗೂ ಅದನ್ನು 2008ರಲ್ಲಿ ಜಾರಿಗೊಳಿಸಿದ್ದು ಯಾರು ಎಂದು ನಿಖರವಾಗಿ ಹೇಳುವುದು ಕಷ್ಟವಾದರೂ, ನವಾಜ್ ಷರೀಫ್ ಅವರು ಲಷ್ಕರ್-ಇ-ತಯ್ಬಾ ಉಗ್ರ ಸಂಘಟನೆಯ ಮಾಜಿ ಪರಮೋಚ್ಚ ನಾಯಕ ಹಫೀಜ್ ಸಯೀದ್ ಜೊತೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ ಎಂಬುದನ್ನು ನಾನು ಬಲ್ಲೆ. ನ್ಯಾಯಾಲಯವು ತಮ್ಮ ಮೇಲೆ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿ ವಿಚಾರಣೆಗೊಳಪಡಿಸಿದ್ದರಿಂದ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಷರೀಫ್ ಅವರು, ಸಯೀದ್ ಅವರೊಂದಿಗೆ ರಾಜಿ ಮಾಡಿಕೊಳ್ಳಲು ದೂತರನ್ನು ರವಾನಿಸಿದ್ದರು. ಸಯೀದ್ ಅವರನ್ನು ನಾನೂ ಕೆಲವು ಬಾರಿ ಭೇಟಿಯಾಗಿದ್ದೇನೆ. ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದು ಎಂದರೆ, ಕೆಲವು ತಿಂಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲೇ. ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಲಷ್ಕರ್ ಸಂಘಟನೆಯ ಕೈವಾಡದ ಬಗ್ಗೆ ನಾನು ಅವರೊಂದಿಗೆ ವೈಯಕ್ತಿಕವಾಗಿ ಮಾತಾಡಿದ್ದೇನೆ. ಆದರೆ, ಅದರಲ್ಲಿನ ತಮ್ಮ ಭಾಗೀದಾರಿಕೆಯನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ವಿವರವಾದ ಸಂದರ್ಶನಕ್ಕಾಗಿ ನಾನು ಪದೇಪದೇ ಮನವಿ ಮಾಡಿದ್ದರೂ ಇಲ್ಲಿಯತನಕ ಅವರಿಂದ ಒಪ್ಪಿಗೆ ಬಂದಿಲ್ಲ.

ಕಳೆದ ಶನಿವಾರ ಎರಡು ಪ್ರಮುಖ ಜನಸ್ತೋಮಗಳನ್ನು ಆಯೋಜಿಸಲಾಗಿತ್ತು: ಲಾಹೋರಿನಲ್ಲಿ ಒಂದು ಹಾಗೂ ಕರಾಚಿಯಲ್ಲಿ ಇನ್ನೊಂದು. ಇತ್ತೀಚೆಗಷ್ಟೇ ಮತ್ತೆ ಕ್ರಿಯಾಶೀಲವಾಗಿರುವ ರಾಜಕೀಯ ಸಂಘಟನೆ ಮುತ್ತಾಹಿದ್ ಮಜ್ಲಿಸ್ ಅಮಲ್ (ಎಂಎಂಎ) ಕಡೆಯಿಂದ ಲಾಹೋರಿನ ಚಾರಿತ್ರಿಕ ಮಿನಾರ್-ಇ-ಪಾಕಿಸ್ತಾನ್ (ಪಾಕಿಸ್ತಾನ ಗೋಪುರ) ಬಳಿ ಕಳೆದ ಕೆಲವು ದಿನಗಳಿಂದ ಶಕ್ತಿಪ್ರದರ್ಶನಗಳು ನಡೆಯುತ್ತಿವೆ. ಇದು ಹಲವು ಇಸ್ಲಾಮಿಕ್ ಗುಂಪುಗಳ ವಿಶಾಲ ವೇದಿಕೆಯಾಗಿದ್ದು, ಇದರಲ್ಲಿರುವ ಇಸ್ಲಾಮಿಕ್ ಗುಂಪುಗಳ ನಡುವೆ ಇಸ್ಲಾಮಿನ ಗ್ರಹಿಕೆ, ವಿವರಣೆ ಮತ್ತು ಆಚರಣೆಗಳಲ್ಲಿ ಎಷ್ಟೊಂದು ವ್ಯತ್ಯಾಸಗಳಿವೆ ಎಂದರೆ ಕೆಲವು ಗುಂಪುಗಳ ಜನರು ಇನ್ನು ಕೆಲವು ಗುಂಪುಗಳ ಜನರನ್ನು ಮುಸ್ಲಿಮರು ಎಂದು ಪರಿಭಾವಿಸುವುದೇ ಇಲ್ಲ! ಇಷ್ಟೊಂದು ಭಿನ್ನತೆಗಳನ್ನು ಹೊಂದಿರುವ ಹಲವು ಇಸ್ಲಾಮಿಕ್ ಗುಂಪುಗಳು ಈಗ ಒಂದೇ ವೇದಿಕೆಯಡಿ ಸೇರಿ ಸಾಮಾಜಿಕವಾಗಿ, ರಾಜಕೀಯವಾಗಿ ಎದ್ದುಕಾಣುವಂತೆ ಛಿದ್ರವಾಗಿರುವ ಜನರನ್ನು ಮತ್ತೆ ಒಂದುಗೂಡಿಸಿ ಸಾಮರಸ್ಯ ಮೂಡಿಸುವಂತಹ ಏಕೀಕೃತ ಇಸ್ಲಾಂ ಧರ್ಮದ ಬ್ರಾಂಡನ್ನು ಪ್ರಚುರಪಡಿಸುತ್ತಿವೆ. 2003ರಲ್ಲಿನ ಅವರೆಲ್ಲ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರಿಂದ ಅಶಾಂತಿಯಿಂದ ಕೂಡಿದ ಖೀಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ಈ ವೇದಿಕೆ ಅಧಿಕಾರಕ್ಕೇರಿತ್ತು. ಆದರೆ, ಅವರ ಆಡಳಿತಕ್ಕೂ ಹಾಗೂ ಅವರ ಹಿಂದೆ ಅಧಿಕಾರದಲ್ಲಿದ್ದ 'ಇಸ್ಲಾಮೇತರ' ಆಡಳಿತಕ್ಕೂ ಏನೂ ವ್ಯತ್ಯಾಸ ಇರಲಿಲ್ಲ. ಅಲ್ಲದೆ, ಈ ಇಸ್ಲಾಮಿಕ್ ಪಕ್ಷಗಳು ಇತರ ರಾಜಕೀಯ ಗುಂಪುಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿವೆ. ಕುತೂಹಲಕಾರಿ ವಿಷಯ ಎಂದರೆ, ಈ ಇಸ್ಲಾಮಿಕ್ ಪಕ್ಷಗಳು ಹಿಂದೆ ಯಾವ ಗುಂಪುಗಳನ್ನು ಅಧಾರ್ಮಿಕ ಎಂದು ಜರಿದಿದ್ದರೋ ಈಗ ಅದೇ ಗುಂಪುಗಳೊಂದಿಗೆ ಕೈಜೋಡಿಸಿ ಒಂದೂಗೂಡಿವೆ.

ಇದನ್ನೂ ಓದಿ : ಕಾಶ್ಮೀರದಿಂದ | ಪಾಕ್ ಮರುಭೂಮಿಯಲ್ಲಿ ಕಾಮೋತ್ತೇಜಕ ಹೆಬ್ಬಕದ ಬೇಟೆ ರಾದ್ಧಾಂತ

ಕರಾಚಿಯಲ್ಲಿ ಜನಸ್ತೋಮವನ್ನು ಸಂಘಟಿಸಿದ್ದು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪುಷ್ತುನ್ ತಹಫುಜ್ ಮೂವ್ಮೆಂಟ್ (ಪಿಟಿಎಂ) ಎಂಬ ಸಂಘಟನೆ. ದೇಶದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಅಫ್ಘಾನಿಸ್ತಾನ ಗಡಿ ಪ್ರದೇಶದ ಬುಡಕಟ್ಟು ಪ್ರದೇಶದಲ್ಲಿನ ಮಿಲಿಟರಿಯ ಅತಿರೇಕಗಳನ್ನು ಕೊನೆಗಾಣಿಸಬೇಕೆಂಬುದು ಈ ಚಳವಳಿಯ ಪ್ರಮುಖ ಬೇಡಿಕೆಯಾಗಿತ್ತು. ಈ ಚಳವಳಿಯ ನಾಯಕ ಮಂಜೂರ್ ಪಷ್ತೀನ್ ಅವರನ್ನು ಬಂಧಿಸಲಾಯಿತಲ್ಲದೆ, ಅಧಿಕೃತ ಟಿಕೆಟುಗಳನ್ನು ಹೊಂದಿದ್ದರೂ ಎರಡು ವಿಮಾನಯಾನ ಕಂಪನಿಗಳು ಅವರಿಗೆ ವಿಮಾನ ಹತ್ತುವುದಕ್ಕೆ ಅವಕಾಶ ನೀಡಲಿಲ್ಲ. ಹತ್ತು ಹಲವು ಅಡ್ಡಿ-ಆತಂಕಗಳನ್ನು ದಾಟುತ್ತ, ನೂರಾರು ಮೈಲಿಗಳನ್ನು ಕಾರಿನಲ್ಲಿ ಪಯಣಿಸಿ ಈ ಜನಸ್ತೋಮ ನೆರೆದಿದ್ದ ಸ್ಥಳಕ್ಕೆ ಬಂದ ಪಷ್ತೀನ್ ಅವರಿಗೆ, ಅಷ್ಟೊತ್ತಿಗಾಗಲೇ ಭಾವನಾತ್ಮಕ ಉನ್ಮಾದದಿಂದ ಕುಣಿಯುತ್ತಿದ್ದ ಜನಸ್ತೋಮದಿಂದ ಅಭೂತಪೂರ್ವ ಸ್ವಾಗತ ದೊರೆಯಿತು. ಪ್ರಭುತ್ವ ಸಂರಚನೆಗಳಿಗೆ ಬಲವಾದ ಪ್ರತಿರೋಧ ಒಡ್ಡುತ್ತಿರುವ ಉತ್ಸಾಹಿ ಯುವಕ ಪಷ್ತೀನ್, ಪ್ರಭುತ್ವಧಾರೆಯಿಂದ ಕವಲೊಡೆದಿರುವ ಜನಸಮುದಾಯಗಳನ್ನು ಒಪ್ಪಿಕೊಂಡು ಅವುಗಳಿಗೆ ನ್ಯಾಯವೊದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಈತ ಅಫ್ಘಾನಿಸ್ತಾನ ಅಥವಾ ಅಮೆರಿಕಗಳ ನೆರವಿನ ಮೇಲೆ ಅತಿಯಾಗಿ ಅವಲಂಬಿಸಿರುವಂತೆ ಕಾಣುತ್ತಿರುವುದರಿಂದ ಜನ ಆತನ ಚಳವಳಿಯನ್ನು ಈ ನೆಲದ ಮೂಲ ಹಕ್ಕುಗಳ ಆಂದೋಲನವಾಗಿ ನೋಡುವುದಕ್ಕಿಂತ ಹೆಚ್ಚಾಗಿ ಅನುಮಾನದಿಂದಲೇ ನೋಡುವಂತಾಗಿದೆ. ಕುತೂಹಲಕಾರಿ ವಿಷಯ ಎಂದರೆ, ಇಡೀ ಮಾಧ್ಯಮ ಸಮೂಹ ಈ ಚಳವಳಿಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ಒಂದೂ ವರದಿಯನ್ನು ಪ್ರಕಟಿಸಲಿಲ್ಲವಾದರೂ, ಲಾಹೋರಿನಲ್ಲಿ ನಡೆದ ಎಂಎಂಎ ಜನಸ್ತೋಮಕ್ಕಿಂತ ಕರಾಚಿಯಲ್ಲಿ ನಡೆದ ಪಿಟಿಎಂ ಜನಸ್ತೋಮ ಹೆಚ್ಚು ಆಕರ್ಷಣೀಯವೂ, ಪ್ರಭಾವಶಾಲಿಯೂ ಆಗಿತ್ತು.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More