ಹಂಸಗಾಥ | ಸತ್ಯವೆಂಬುದು ಬೇಷರತ್ತಿನ ವಿವರವಾಗದೆ ರೂಪಾಂತರವಾಗುವ ಸೋಜಿಗ

ಹದಿಮೂರು ವರ್ಷ ತುಂಬಿದ ದಿನ ಅಪ್ಪ ಕೊಟ್ಟ ‘ಮಂಕುತಿಮ್ಮನ ಕಗ್ಗ’ ನಂತರದ ವರ್ಷಗಳಲ್ಲಿ ತನ್ನನ್ನು ಆವರಿಸಿಕೊಂಡ ಬಗೆ, ಲೋಕಕ್ಕೆ ಎದುರಾಗಿಸಿದ ರೀತಿ, ತನ್ನನ್ನು ತಾನು ಕಂಡುಕೊಳ್ಳಲು ಊರುಗೋಲಾದ ವಿಸ್ಮಯದ ಕುರಿತು ಡಿ ವಿ ಗುಂಡಪ್ಪನವರಿಗೆ ಲೇಖಕಿ ಬರೆದ ಅತ್ಯಂತ ಆಪ್ತ ಪತ್ರ ಇಲ್ಲಿದೆ

ಮುದ್ದು ಗುಂಡಪ್ಪ ತಾತ,

‘ನಿರ್ಮಿತ್ರನಿರಲು ಕಲಿ’ ಎಂದವನೂ ನೀನೇ. ‘ಪೊಗು ವಿಶ್ವಜೀವನದ ಜೀವಾಂತರಂಗದಲಿ’ ಎಂದವನೂ ನೀನೇ.

ನಿನ್ನನ್ನು ‘ನೀನು’ ಎಂದು ಏಕವಚನದಲ್ಲಿ, ‘ತಾತ’ ಎಂದು ರಕ್ತಸಂಬಂಧವಿಲ್ಲದಿದ್ದರೂ ಸಲಿಗೆಯಲ್ಲಿ ಕರೆಯುತ್ತಿದ್ದೀನಿ; ಕ್ಷಮೆ ಇರಲಿ. ಮನಸ್ಸು ಅಸ್ಪಷ್ಟ ಸಂವೇದನೆಗಳಲ್ಲಿ, ತೋಚಿಕೆಗಳಲ್ಲಿ ಮುಳುಗಿರುವಾಗೆಲ್ಲ ನಿನ್ನ ಬಳಿ ಬಂದಿದ್ದೇನೆ.

ಪ್ರತಿವರ್ಷ ಹುಟ್ಟುಹಬ್ಬಕ್ಕೆ ಅಪ್ಪ ಉಡುಗೊರೆಯಾಗಿ ಕೊಡುತ್ತಿದ್ದುದು ಪುಸ್ತಕಗಳನ್ನು. 13 ವರ್ಷ ತುಂಬಿದ ದಿನ ಅವರು ಕೊಟ್ಟ ಪುಸ್ತಕ ‘ಮಂಕುತಿಮ್ಮನ ಕಗ್ಗ.’ "ಈಗಲೇ ಅರ್ಥ ಆಗಬೇಕು ಅಂತ ಇಲ್ಲ; ಬಹುಶಃ ಓದೋಕೂ ಕಷ್ಟ ಆಗಬಹುದು, ಆದರೆ ಜೊತೆಯಲ್ಲಿರಲಿ ಇದು, ಯಾವಾಗಲೂ. ನನ್ನನ್ನು ಕಷ್ಟ ಬಂದಾಗೆಲ್ಲ ಕಾಪಾಡಿ, ಧೃತಿಗೆಡದಂತೆ ಮಾಡಿದ್ದು ಈ ಪುಸ್ತಕ,” ಎಂದಿದ್ದು ಇನ್ನೂ ಹಸಿರು ನೆನಪು.

ಅಂದಿನಿಂದ ಇಂದಿನವರೆಗೂ ಎಲ್ಲೇ ಹೋದರೂ ಜೋಳಿಗೆಯಲ್ಲಿ ಈ ಪುಸ್ತಕ ಇದ್ದೇ ಇರುತ್ತದೆ, ತಾತ. ಆಗ, ಕ-ಡ-ಲ್-ಗ-ಳ್-ಒಂದಾ-ದೊ-ಡಂ ಎಂದು ಬರೇ ಅಕ್ಷರಗಳನ್ನು ಕೂಡಿಸಿ-ಕೂಡಿಸಿ ಹಳ್ಳಿಮನೆಯ ಜಗಲಿ ಮೇಲೆ ಕೂತು ಕಗ್ಗಗಳನ್ನು ಓದುತ್ತಿದ್ದೆ. 16 ಆಗುವಷ್ಟರಲ್ಲಿ, ಅರ್ಥದ ಗೋಜಿಗೇ ಹೋಗದೆ ಸ್ನೇಹಿತರ ಜೊತೆ ಕಗ್ಗ ಉಸುರುವ ಪೈಪೋಟಿ. ಅಷ್ಟರಲ್ಲಿ ‘ಮರುಳಮುನಿಯನ ಕಗ್ಗ’ವೂ ಜೊತೆಯಾಗಿತ್ತು.

ಆದರೆ ಈಗ… ಈಗ ನೀ ಬರೆದ ಕಗ್ಗಗಳು ಮನುಷ್ಯನ ಮಾನಸಲೋಕದಿಂದ ಸೃಷ್ಟಿಗೊಂಡ ವಿಸ್ಮಯಗಳಲ್ಲಿ ಒಂದಾಗಿ, ರಕ್ತದಲ್ಲೇ ಬೆರೆತು, ಧಮನಿಗಳಲ್ಲಿ ನನ್ನ ಇರವಿಗೇ ಅಗತ್ಯವಾದ ಪವಾಡದಂತೆ ಓಡುತ್ತವೆ. ಉಸಿರು, ಉಸಿರು ಎನ್ನುವ ಪವಾಡದಂತೆ.

ನಿನ್ನ ಬರಹದ ವಿಮರ್ಶೆ ಇದಲ್ಲ, ಆ ಯೋಗ್ಯತೆ ಇಲ್ಲ. ನಿನ್ನ ಬರಹದ ಆಳ-ವಿಸ್ತಾರಗಳು ಈ ಅಲ್ಪಮತಿಗೆ ದೊರಕಿಬಿಟ್ಟಿದೆ ಎಂಬ ಭ್ರಮೆಯೂ ಇಲ್ಲ. ನಿನ್ನನ್ನು ಅವರವರದ್ದೇ ಅನುಭವಗಳ ಹಿನ್ನೆಲೆಯಲ್ಲಿ ಅರಿಯಲು ಪ್ರತಿದಿನ ಯತ್ನಿಸುವ ಜೀವಗಳೆಷ್ಟೋ. ಪ್ರತಿ ನಸುಕಿನಲ್ಲಿ ಪ್ರಾರ್ಥನೆ ಮಾಡುವ ಅಭ್ಯಾಸವಂತೂ ಇಲ್ಲ. ಆದರೆ, ಕಗ್ಗದರ್ಶನವಾಗದ ದಿನವಿಲ್ಲ.

ನಿನ್ನ ನೆನಪು ಇಂದೇಕೋ ತೀಕ್ಷ್ಣ, ತೀವ್ರ; ನಿನಗೆ ಪತ್ರ ಬರೆಯಲು ದೊರೆತ ಮುದ್ದು ನೆಪ. ನೀನಿಲ್ಲ... ಆದರೂ ಇದ್ದೀಯಾ… ಹೇಗೋ. ಈಗ ನಿನ್ನ ಮನಸ್ಸಿನ ಪರಿಚಯ ಪ್ರತಿ ಸಲ ನಿನ್ನನ್ನು ಓದಿದಾಗಲೂ ವಿವಿಧ ಮಜಲುಗಳನ್ನು ಪಡೆಯುತ್ತದೆ. ನಿನ್ನ ಅಂತಃಕರಣ, ತಾದಾತ್ಮ್ಯ, ಬದುಕನೀಕ್ಷಿಸುವ ಪರಿ, ತಾಳ್ಮೆ, ಸಹಿಷ್ಣುತೆ… ಆಗಾಗ ಇಣುಕಿ ಓದುವವನನ್ನೂ ಕಲಕಿಬಿಡುವ ನಿನ್ನವೇ ಗೊಂದಲ, ಶಂಕೆ, ದ್ವಂದ್ವ- ಅದನ್ನೂ ಸೋಗು ಹಾಕದೆ ಬರೆಯುವ ನಿನ್ನ ಅಪ್ಪಟ ಪ್ರಾಮಾಣಿಕತೆ.

ನೀನು ಎಷ್ಟು ಸಹಜವಾಗಿ, ಸರಳವಾಗಿ ರೂಢಿಗತ ಕಲ್ಪನೆಗಳನ್ನು ಪ್ರಶ್ನಿಸುತ್ತೀಯ. ಆದರೆ, ಅದರಲ್ಲಿ ವ್ಯಂಗ್ಯ, ಕುಹಕ, ಅಣಕವಿಲ್ಲ. ಬದಲಿಗೆ, ಅಪಾರ ತಾಳ್ಮೆಯಿದೆ, ನಿಷ್ಕಲ್ಮಶ ಕೌತುಕವಿದೆ, ಇರುವುದನ್ನು ಇದ್ದಂತೆಯೇ ಅರಿಯುವ ಮುಗ್ಧ ಹಂಬಲವಿದೆ. ಸ್ವಾನುಭವಕ್ಕೆ ನಿಷ್ಠವಾಗೇ ಅತಿಮಾನುಷದೆಡೆಗೆ ಹಾತೊರೆಯುತ್ತೀಯ.

ಅನುಭವ-ಭಾವ-ಅನಿಸಿಕೆಗಳನ್ನು ಅರಿಯುವುದಕ್ಕಾಗಿ ಭಾಷೆಯನ್ನು ದುಡಿಸಿಕೊಳ್ಳುತ್ತೀಯ. ಭಾವಾಭಿವ್ಯಕ್ತಿಗೂ ಎಷ್ಟು ಶಿಸ್ತು, ಕಾವ್ಯದ ಅತ್ಯಂತ ಕ್ಲಿಷ್ಟ ವಿವರಗಳ ಲೇಪ. ನಿನ್ನ ಮೂಲಕ ನಮ್ಮ ಭಾಷೆ ಎಷ್ಟು ಪಳಗಿದೆ. ಕಷ್ಟದಲ್ಲೇ ಬದುಕು ಸವೆಸಿದೆ, ಆದರೆ ನಿನ್ನ ಜೀವನಪ್ರೀತಿ ಕುಗ್ಗಲಿಲ್ಲ. ನಿನ್ನ ಸಂಪರ್ಕಕ್ಕೆ ಬಂದ ಎಲ್ಲ ಮನಸ್ಸುಗಳಿಗೂ ದೊರೆಯುವುದು ಒಂದು ನಿಷ್ಕಪಟ ಸ್ನೇಹ, ಅಕ್ಷರ ಸಾಹಚರ್ಯ.

ದ್ವಂದ್ವಗಳನ್ನು ನೀನೇ ಬಿತ್ತುತ್ತೀಯ, ಅವೇ ದ್ವಂದ್ವಗಳಿಗೆ ಪರಿಹಾರವಲ್ಲದಿದ್ದರೂ ಅವುಗಳು ಸಂಧಿಸಲೆಂದು ಸೇರುಚುಕ್ಕಿಯೊಂದಕ್ಕಾಗಿ ತುಡಿಯುತ್ತೀಯ. ಎಷ್ಟು ತೀವ್ರ ಆ ಭಾವಸಂಸ್ಕರಣೆ. ಆ ಭಾವುಕತನ ಮರುಳಲ್ಲ; ಅದು ಗಾಢವಾದ, ಘನವಾದ, ತಿಳಿವಳಿಕೆಯುಳ್ಳ ಭಾವುಕತೆ, ಭಾವಕಾಂಡ. ನಿನ್ನನ್ನೋದುವುದು ಸುಖಸ್ವಪ್ನದಂತೆ, ಓದು ಮುಗಿದ ಮೇಲೂ ಆ ಸ್ವಪ್ನದ ಮತ್ತು ಇಳಿಯುವುದಿಲ್ಲ.

ಮುದ್ದು ತಾತ,

ಕಗ್ಗ ಓದುವುದು, ಅರ್ಹತೆ ಇಲ್ಲದಿದ್ದರೂ ವಿದ್ವದ್ಘೋಷ್ಠಿಯೊಂದರಲ್ಲಿ ಭಾಗವಹಿಸಿದಂತೆ. ಆದರೆ, ಪಾಂಡಿತ್ಯ ಮೆರೆಯಲು ಬರುವ ಯೋಗಿಯಲ್ಲ ನೀನು. ಮನಸ್ಸು ಸಂತಸದಲ್ಲಿ ನಲಿವಾಗ ನೀನೂ ಭಾಗವಹಿಸಿ ಅದನ್ನು ನೂರ್ಮಡಿಗೊಳಿಸುತ್ತ, ಅದೇ ಮನಸ್ಸು ಮ್ಲಾನವಾಗಿದ್ದಾಗ ಪಕ್ಕ ಕೂತು ತಲೆ ನೇವರಿಸುತ್ತ ಸಮಾಧಾನ, ಸಾಂತ್ವನ ತರುವ ಸ್ನೇಹಿತ ನೀನು, ಆತ್ಮಬಂಧು ನೀನು.

‘ನಿರ್ಮಿತ್ರನಿರಲು ಕಲಿ’ ಎಂದವನೂ ನೀನೇ. ‘ಪೊಗು ವಿಶ್ವಜೀವನದ ಜೀವಾಂತರಂಗದಲಿ’ ಎಂದವನೂ ನೀನೇ. ‘ಸ್ವಸ್ಥತೆಯ ಕದಲಿಸದ ಜಗದಾಸ್ಥೆ’ ಎಂಬ ಉದಾತ್ತ ಚಿಂತನೆ ಕೊಟ್ಟ ಆ ನಿನ್ನ ಮಹಾಚಿತ್ತಕ್ಕೆ ನನ್ನ ನಮ್ರ ನಮನ.

ಕತ್ತಲು ಸುರಂಗದೊಳಗಿಂದ ಹಾದುಹೋಗುವಾಗ ತನ್ನ ನಡೆಯದೇ ಸದ್ದು ಇಮ್ಮಡಿಗೊಂಡು ಕಡೆಗೆ ಬೆಳಕನ್ನು ಕಂಡು ಶಾಂತಗೊಳ್ಳುವ ರೈಲಿನಂತೆ, ಕಗ್ಗ ಓದುವಾಗ ದ್ವಂದ್ವಗಳ ಮೂಲಕ ಹಾದುಹೋಗುತ್ತಲೇ ಮಾನಸಿಕ ತೆರವಿನಲ್ಲಿ ಎಲ್ಲೋ ಹೊಸ ಬೆಳಕನ್ನು ಕಂಡುಕೊಳ್ಳುವಂತಿರುತ್ತದೆ. ಸತ್ಯ ಎನ್ನುವುದೂ ಬೇಷರತ್ತಿನ ವಿವರವಾಗಬೇಕಿಲ್ಲ; ಅದೂ ಕಾಲಕ್ಕೆ, ಮನಸ್ಥಿತಿಗೆ ತಕ್ಕಂತೆ ಮಾರ್ಪಾಡಾಗಬಹುದು, ಹಾಗೆ ರೂಪಾಂತರವಾಗುವ ಶಕ್ಯತೆಯೇ ಸುಂದರ ಎನಿಸುತ್ತದೆ.

ಇದನ್ನೂ ಓದಿ : ಹಂಸಗಾಥ | ಬೆಂಗಳೂರಿನ ಬ್ರಿಗೇಡ್ ರಸ್ತೆಯ ಘಟನೆ ಮತ್ತು ಮೆಗನ್ ಮರ್ಕೆಲ್ ಮದುವೆ

ಈ ಅಡ್ಡಾಟದಲ್ಲಿ ಎಷ್ಟೋ ಸಲ ನಿನ್ನ ಕೈಹಿಡಿದು ಗಮ್ಯದ ಗೊಡವೆ ಇಲ್ಲದೆ ಶಾಂತವಾಗಿ ನಡೆಯುವಂತಾಗುತ್ತದೆ, ಮೊಮ್ಮಗಳು ಅಜ್ಜನ ಕೈಹಿಡಿದು ನಡೆಯುವಾಗ ಇರುವಷ್ಟು ಪ್ರಶ್ನಾತೀತ ನಂಬುಗೆ, ನೇಹ ನೀನೆಂದರೆ.

ಯಾವುದೋ ಒಂದು ದೇಶ-ಕಾಲಕ್ಕೆ ಸ್ಥಿರವಾಗಿ ಹೊಂದಿಕೊಳ್ಳದೆ, ಎಲ್ಲ ದೇಶ-ಕಾಲಗಳಿಗೂ ಸಂಬಂಧಿಸಿದಂತೆ, ತಾನು ತೀವ್ರವಾಗಿ ತಾನೇ ಆಗಿ, ಭೌತಿಕ ಇರವು ಮುಗಿದ ಮೇಲೂ ಬದುಕುಳಿಯುವ ಸಮಯಾತೀತ ಜೀವಗಳಲ್ಲಿ ನೀನೂ ಒಬ್ಬ. ನಿನ್ನಂಥ ಜೀವಗಳು ಇದ್ದುಹೋದ ಇದೇ ಜೀವನದಲ್ಲಿ, ಈ ವಿಶ್ವದ ಅನಂತತೆಯಲ್ಲಿ ಒಂದು ಯಕಃಶ್ಚಿತ್ ಬಿಂದುವಾಗಿ ನಶ್ವರತೆಯ ವಿರುದ್ಧ ಸೆಣಸುತ್ತಲೇ ಸತ್ಯ-ಸೌಂದರ್ಯದ ಹುಡುಕಾಟದಲ್ಲಿರುವುದೇ, ಇದೇ ಜೀವನದ ಕೊಡುಗೆ.

ಅಷ್ಟರಮಟ್ಟಿಗಿನ ಕೃತಜ್ಞತೆಯ ಅರ್ಪಣೆ ನಿನಗೆ, ಪ್ರತಿದಿನವೂ. ಜೊತೆಗಿರು, ಹೀಗೇ. ಅಷ್ಟು ಸಾಕು.

ಅಪಾರ, ಅನವರತ ಅಕ್ಕರೆ,

ನಿನ್ನ ಅಭಿಮಾನಿ

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More