ಏಕತಾರಿ | ಒಂದೇ ಅಚ್ಚಿಗೆ ಎಲ್ಲರನ್ನೂ ದೂಡುವ ಅಂಕದ ಬಿಂಕವ ಮುರಿಯಬೇಕಿದೆ

ನೀಟ್‌ನಲ್ಲಿ ಕಲ್ಪನಾ ಕುಮಾರಿ ಅವರ ಸಾಧನೆ ಸುದ್ದಿ ಜೊತೆಗೇ, ನಿರೀಕ್ಷಿತ ಅಂಕ ಪಡೆಯಲಾಗದೆಹೋದ ಹದಿನೆಂಟು ವಯಸ್ಸಿನ ಹುಡುಗಿ ಹೈದರಾಬಾದ್‌ನಲ್ಲಿ ಹತ್ತನೇ ಮಹಡಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯೂ ಬಂದಿದೆ. ಒಟ್ಟಿನಲ್ಲಿ ಹಳೆಯ ರೋಗವೊಂದು ಉಳಿದುಕೊಂಡೇ ಬರುತ್ತಿದೆ!

ಬಿಹಾರ ರಾಜ್ಯದ ಕಲ್ಪನಾ ಕುಮಾರಿ ಈ ಬಾರಿಯ ಎನ್‌ಇಇಟಿ (ನೀಟ್) ಪರೀಕ್ಷೆಯಲ್ಲಿ ಶೇ.99.999 ಅಂಕ ಗಳಿಸಿದ್ದು ಇತ್ತೀಚಿಗೆ ಬಹಳಷ್ಟು ಸುದ್ದಿ ಮಾಡಿತು. ಈ ಸುದ್ದಿ ಬಂದು, ಆಕೆಯ ಪರೀಕ್ಷಾ ಅಂಕದ ಸಾಧನೆಯ ಸಂಭ್ರಮಾಚರಣೆ ತಣ್ಣಗಾಗುವ ಮುನ್ನವೇ ಆಕೆ ಬಿಹಾರ್ ಬೋರ್ಡ್ ಎಕ್ಸಾಮ್ಸ್‌ನ ಹನ್ನೆರಡನೇ ತರಗತಿಯ ಪರೀಕ್ಷೆಯಲ್ಲೂ ಅಗ್ರಸ್ಥಾನ ಪಡೆದ ಸುದ್ದಿ ಬಂದಿದೆ.

ಇದೇ ಸುದ್ದಿಯೊಂದಿಗೆ ಕೈ-ಕೈ ಹಿಡಿದುಕೊಂಡು ಒಂದು ಆತಂಕಕಾರಿ ಸುದ್ದಿಯೂ ಹೊರಬಿದ್ದಿದೆ. ಅದೇನೆಂದರೆ, ಬಿಹಾರ ರಾಜ್ಯದ ಪರೀಕ್ಷೆಯಲ್ಲಿ ಈ ಬಾರಿ ಉತ್ತೀರ್ಣರಾದದ್ದು ಕೇವಲ ಶೇ.೫೩ ಮಂದಿ! ಆದರೆ, ಇದು ಹಿಂದಿನ ವರ್ಷದ ಫಲಿತಾಂಶಕ್ಕಿಂತ ಉತ್ತಮವಾಗಿದೆ. ಕಳೆದ ವರ್ಷ ಒಟ್ಟು ಫಲಿತಾಂಶದಲ್ಲಿ ಉತ್ತೀರ್ಣರಾದವರು ಕೇವಲ ಶೇ.೩೫ ಮಂದಿ.

ಅಷ್ಟೊಂದು ಕಡಿಮೆ ಫಲಿತಾಂಶ ಪಡೆದ ರಾಜ್ಯದಿಂದಲೇ ಇಂಥ ಸಾಧನೆ ಮಾಡಿದ ಕಲ್ಪನಾ ಕುಮಾರಿಯನ್ನು ಮೆಚ್ಚಬೇಕಾದದ್ದು ಹೌದು. ಹೆಣ್ಣನ್ನು ಅಬಲೆಯೆಂದು ಇಂದಿಗೂ ಹೇಳಲಾಗುವ ಲೋಕದಲ್ಲಿ ಮತ್ತು ಇನ್ನೂ ಸಮಾನ ಸ್ಥಾನ, ಗೌರವವನ್ನು ಹೆಣ್ಣಿಗೆ ಕೊಡಲಾಗದ ದುನಿಯಾದಲ್ಲಿ ಹೆಣ್ಣೊಬ್ಬಳು ಅಸಾಮಾನ್ಯ ಎಂಬಂತಹ ಸಾಧನೆ ಮಾಡಿದಾಗ ಅದನ್ನು ಗಟ್ಟಿದನಿಯಲ್ಲಿ ಹೇಳಬೇಕಾದದ್ದೇ. ಕಲ್ಪನಾ ಕುಮಾರಿ ಅವರ ಸಾಧನೆಯನ್ನು ಗುರುತಿಸಬೇಕಾದದ್ದೇ ಆದರೂ ಅವರ ಈ ಸಾಧನೆ, ಅದರಲ್ಲೂ ವಿಶೇಷವಾಗಿ ಅವರ ಸಾಧನೆಯ ಸಂಭ್ರಮಾಚರಣೆ, ಬಹುಶಃ ಸಾಮಾಜಿಕ, ಮುಖ್ಯವಾಗಿ ವಿದ್ಯಾರ್ಥಿ ಸಮುದಾಯದ, ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎಂದೇ ಹೇಳಬೇಕು.

ಕಲ್ಪನಾ ಕುಮಾರಿ ಅವರ ಸಾಧನೆ ವಿಶಿಷ್ಟ ಇರಬಹುದು. ಆದರೆ, ಅವರನ್ನು ಮತ್ತು ಅವರು ಪಡೆದ ಅಂಕವನ್ನು ಮಾದರಿ ಆಗಿಸುವುದು ಅಸೂಕ್ಷ್ಮ ಮತ್ತು ಅನಾರೋಗ್ಯಕರ. ಏಕೆಂದರೆ, ಇಂಥ ಸಂಭ್ರಮಾಚರಣೆಯ ಹಿಂದೆ ಅಂಕಗಳೇ ವಿದ್ಯಾರ್ಥಿಗಳನ್ನು ಅಳೆಯುವ ಅಳತೆಗೋಲು ಎಂಬ ಭಾವನೆ ಅಡಗಿದೆ ಮತ್ತು ಇವು ಅಂಕಗಳು ಬಹಳ ಮಹತ್ವ ಇರುವಂಥವು ಎಂಬುದನ್ನು ಸಾರುವಂತಿದೆ. ಅಲ್ಲದೆ, ಆ ದಿಕ್ಕಿನಲ್ಲೇ ಎಲ್ಲರೂ ಶ್ರಮಿಸಬೇಕು ಎಂಬುದನ್ನು ಮಾತ್ರ ಹೇಳುವುದಲ್ಲದೆ, ಅದನ್ನೇ ಆದರ್ಶವಾಗಿ ರೂಪಿಸುತ್ತದೆ.

ಕಲ್ಪನಾ ಕುಮಾರಿ ಅವರ ಸಾಧನೆಯ ಸುದ್ದಿಯ ಜೊತೆಜೊತೆಗೆ, ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಪಡೆಯಲಾಗದೆಹೋದ ಹದಿನೆಂಟು ವಯಸ್ಸಿನ ಹುಡುಗಿ ಹೈದರಾಬಾದ್ ನಗರದಲ್ಲಿ ಹತ್ತನೇ ಮಹಡಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯೂ ಬಂದಿದೆ. ಈ ಸಾವಿಗೆ ಅಂಕ ವ್ಯಾಮೋಹ ಸಮಾಜವೇ ಪರೋಕ್ಷ ಕಾರಣ ಎಂದರೆ ತಪ್ಪಾಗಲಾರದು. ಲೋಕಕ್ಕೆ, ಸಮಾಜಕ್ಕೆ ಪೊಳ್ಳು ಆದರ್ಶಗಳನ್ನು ನಿರ್ಮಿಸೋದು ಸಮಾಜದ ಆರೋಗ್ಯವನ್ನು, ಬಹುತ್ವವನ್ನು ಮತ್ತು ಸಮಾಜದ ಎಲ್ಲ ವ್ಯಕ್ತಿಯ ವೈಯಕ್ತಿಕತೆಯನ್ನು ನಾಶ ಮಾಡುವುದಕ್ಕೆ ಬರೆಯಲ್ಪಡುವ ಮುನ್ನುಡಿ.

ಎರಡು ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದಾಗ, ಹಿಂದೆಂದೂ ಕಂಡು ಕೇಳಿರದ ಶೇ.೧೦೦ ಅಂಕಗಳನ್ನು ಭದ್ರಾವತಿಯ ಎಸ್ ರಂಜನ್ ಗಳಿಸಿ ಇತಿಹಾಸ ರಚಿಸಿದ್ದರು. ಆ ಸಂದರ್ಭದಲ್ಲಿ, ೬೨೫ಕ್ಕೆ ೬೨೫ ಅಂಕ ಪಡೆದ ರಂಜನ್ ಅವರ ಉತ್ತರಪತ್ರಿಕೆಯನ್ನು ಬಹಿರಂಗಪಡಿಸುವಂತೆ ಕೋರಿ ಶಿರಸಿಯ ಅಜಿತ್ ನಾಡಿಗ್ ಅಂದಿನ ಶಿಕ್ಷಣ ಮಂತ್ರಿಗಳಾದ ಕಿಮ್ಮನೆ ಅವರಿಗೆ ಒಂದು ಬಹಿರಂಗ ಪತ್ರವ ಬರೆದಿದ್ದರು ಎಂಬ ನೆನಪು. ಅಷ್ಟೇ ಅಲ್ಲದೆ, ರಂಜನ್ ಅವರ ಉತ್ತರಪತ್ರಿಕೆಯ ಜೆರಾಕ್ಸ್ ಪ್ರತಿಯನ್ನು ರಾಜ್ಯದ ಎಲ್ಲ ಶಾಲೆಗಳಿಗೆ ಕಳುಹಿಸಿಕೊಡಬೇಕು ಎಂದು ಸಹ ಅವರು ಕೋರಿದ್ದರು. ಆ ಪತ್ರದಲ್ಲಿ ರಂಜನ್ ಅವರ ಉತ್ತರಪತ್ರಿಕೆ ಹೇಗೆ ಉಳಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಅಥವಾ ಮಾರ್ಗಸೂಚಿಯಾಗಿ ಕೆಲಸ ಮಾಡಬಹುದು ಮತ್ತು ಅದರಿಂದ ಹೇಗೆ ಉಳಿದ ವಿದ್ಯಾರ್ಥಿಗಳಿಗೂ ಉಪಯೋಗ ಆಗುತ್ತದೆ ಎಂಬಂತೆ ಹೇಳಲಾಗಿತ್ತು. ಮಾತ್ರವಲ್ಲದೆ, ರಂಜನ್ ಒಂದು 'ಆದರ್ಶ' ಎಂದು ಬಿಂಬಿಸಲಾಗಿತ್ತು.

ಈ ಬಾರಿ ಕಲ್ಪನಾ ಕುಮಾರಿ ಅವರ ಫಲಿತಾಂಶಕ್ಕೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಜನಸಮೂಹ ತೋರಿದ ಪ್ರತಿಕ್ರಿಯೆ ಇದಕ್ಕಿಂತ ಹೆಚ್ಚೇನೂ ಭಿನ್ನವಿರಲಿಲ್ಲ. ಕಲ್ಪನಾ ಕುಮಾರಿ ಅಥವಾ ರಂಜನ್ ಮಾದರಿ ಆಗಬೇಕಿಲ್ಲ, ಅವರುಗಳ ಅಂಕಪಟ್ಟಿಯೂ ಮಾದರಿ ಆಗಬೇಕಿಲ್ಲ. ಮುಖ್ಯವಾಗಿ, ಕಲ್ಪನಾ ಮತ್ತು ರಂಜನ್ ಸಹ ಇದೇ ಸಾಧನೆಯ ಕಲ್ಪನಾ ಮತ್ತು ರಂಜನ್ ಮತ್ತೆ ಮತ್ತೆ ಆಗಬೇಕಿಲ್ಲ.

"ಇದೇ ಯಶಸ್ಸನ್ನು ಪಿಯುನಲ್ಲೂ ಕಾಯ್ದುಕೊಳ್ಳಬೇಕಾಗಿದೆ," ಎಂದು ರಂಜನ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಆ ಮಾತು ಬಹಳ ಆತಂಕಕಾರಿಯಾಗಿತ್ತು. ಏಕೆಂದರೆ, ಅಂಕ ಸಂಭ್ರಮದಲ್ಲಿ ರಂಜನ್ ಎಂಬ ಹುಡುಗನನ್ನು ಮಾದರಿ ಆಗಿಸುವ ಹೊತ್ತಿನಲ್ಲಿ ಈ ಸಮಾಜದ ಅಂಕ ವ್ಯಾಮೋಹ ಇತರರ ಮೇಲೆ ಒತ್ತಡ ಹೇರಿದ್ದು ಮಾತ್ರವಲ್ಲ, ಸ್ವತಃ ರಂಜನ್ ಮೇಲೂ ಒತ್ತಡ ಹೇರಿತ್ತು. ಕಲ್ಪನಾ ಕುಮಾರಿಯೂ ಇಂಥ ಒತ್ತಡಕ್ಕೆ ಒಳಗಾಗಿದ್ದಾರೆ ಏನೇನೂ ಆಶ್ಚರ್ಯವಿಲ್ಲ.

ರಂಜನ್ ಅವರ ಮಾತಿನಲ್ಲಿ ಅಂಕ ಪಡೆಯುವುದೇ ಯಶಸ್ಸು ಎಂಬ ಭಾವನೆ ಅಡಗಿತ್ತು. ಈ ಭಾವನೆ ಸಂಭ್ರಮಾಚರಣೆಯ ನಡುವಿನಲ್ಲಿರುವ ಕಲ್ಪನಾ ಅವರ ಮನಸ್ಸಿನ ಆಳಕ್ಕೆ ಈಗಾಗಲೇ ಇಳಿದಿರುವ ಎಲ್ಲ ಸಾಧ್ಯತೆ ಇದೆ. ಇದು ಕಲ್ಪನಾ ಅವರನ್ನು ನುಂಗಿಹಾಕುವ ಮುನ್ನ ಅವರಿಗೆ ಆಪ್ತ ಸಲಹೆ ನೀಡುವಂತಾಗಬೇಕು. ಅದೇ ಹೊತ್ತಿಗೆ, ಫೇಲ್ ಆಗಿರುವ ವಿದ್ಯಾರ್ಥಿಗಳಿಗೂ, ಇದು ಬದುಕಿನ ಅಂತ್ಯ ಅಲ್ಲ ಎಂದು ಹೇಳುವ ಆಪ್ತಸಲಹಾಕಾರರು ಬೇಕು.

ಈ ದಿಶೆಯಲ್ಲಿ ನಮ್ಮ ಸಮಾಜ ಗಮನ ಹರಿಸಿದ್ದರೆ ಬಹುಶಃ ಹೈದರಾಬಾದಿನ ಹುಡುಗಿಯ ಪ್ರಾಣ ಉಳಿಯುತಿತ್ತೇನೋ. ಈಗ ಬಿಹಾರದಲ್ಲಿ ಅನುತ್ತೀರ್ಣರಾಗಿ ಧೈರ್ಯಗೆಟ್ಟ ಅನೇಕಾನೇಕ ವಿದ್ಯಾರ್ಥಿಗಳ ಮನಸ್ಸು ಕಮರಿಹೋಗದಂತೆ, ಕೀಳರಿಮೆಗೆ ಜಾರದಂತೆ ನೋಡಿಕೊಳ್ಳಬಹುದಿತ್ತೇನೋ!

ರಂಜನ್ ಅವರ ಐತಿಹಾಸಿಕ ಅಂಕ ಸಾಧನೆಯ ಸಂದರ್ಭದಲ್ಲಿ ಕಿಮ್ಮನೆಯವರಿಗೆ ಬರೆದ ಪತ್ರದಲ್ಲಿ ಅಜಿತ್ ಉತ್ತರಪತ್ರಿಕೆಯ ಪ್ರತಿಯನ್ನು ಶಾಲೆಗಳಿಗೆ ಕಳುಹಿಸಿಕೊಟ್ಟರೆ ಅದರಿಂದ, "ವಿದ್ಯಾರ್ಥಿಗಳಿಗೆ ಪರೀಕ್ಷೆ ಹೇಗೆ ಬರೆಯಬೇಕು, ಬರವಣಿಗೆ ಕೌಶಲ್ಯ, ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆಯುವ ಕಲೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ," ಎಂದು ಬರೆದಿದ್ದರು. ಇಂಥ ಆಶಯಗಳ ಅಪಾಯ ಕೇವಲ ಅಂಕ ವ್ಯಾಮೋಹ ಮಾತ್ರವಲ್ಲ, ಎಲ್ಲ ಉತ್ತರಗಳನ್ನೂ ಏಕರೂಪಿಯಾಗಿಸುವ ಬಯಕೆಯೂ ಕಾಣಿಸುತ್ತದೆ. ಇದು ಆತಂಕಕಾರಿ. ಶಿಕ್ಷಣ ವಿದ್ಯಾರ್ಥಿಗಳಿಗೆ ತಮ್ಮ-ತಮ್ಮ ಸ್ವಭಾವ, ಶಕ್ತಿ, ಆಸಕ್ತಿಗಳನ್ನು ಕಂಡುಕೊಂಡು ಅವನ್ನು ಬೆಳೆಸಲು ಸಹಾಯ ಮಾಡಬೇಕೇ ಹೊರತು, ಎಲ್ಲರಿಂದಲೂ ಒಂದೇ ಬಗೆಯ ಸ್ವರವನ್ನು ಹೊರಡಿಸುವಂತೆ ಮಾಡುವುದಲ್ಲ. ಎಲ್ಲರೂ ರಂಜನ್ ಬರೆದಂತೆ ಉತ್ತರ ಬರೆಯಬೇಕಿಲ್ಲ ಎಂಬುದನ್ನು ಶಿಕ್ಷಣ ಎಲ್ಲ ವಿದ್ಯಾರ್ಥಿಗಳಿಗೂ ತಿಳಿಸಿಕೊಡಬೇಕು, ಎಲ್ಲರೂ ತಮ್ಮ-ತಮ್ಮ ಉತ್ತರ ಕಂಡುಕೊಳ್ಳಬೇಕು, ತಮ್ಮ ಧ್ವನಿಯನ್ನು, ತಮ್ಮ ಸ್ವರವನ್ನು ಕಂಡುಕೊಳ್ಳಬೇಕು, ಸ್ವಂತಿಕೆ ಬೆಳೆಸಿಕೊಳ್ಳಬೇಕು.

ಕಲ್ಪನಾ ಅವರ ಸಾಧನೆಯನ್ನು ಹೊಗಳಿ ಕೊಂಡಾಡುವ ನಾವು ಇತರರನ್ನೂ ಕಲ್ಪನಾ ಆಗಿಸುವ ಬಯಕೆ ಹೊಂದಿದ್ದೇವೆ. ತಮ್ಮೊಳಗಿನ ತಾವನ್ನು ಹುಡುಕಿಕೊಳ್ಳಲು ಸಹಾಯ ಮಾಡದೆ ಕಲ್ಪನಾ ರೀತಿಯಾಗದಿರುವುದೇ ಒಂದು ಅಪರಾಧ ಎಂಬ ಮನೋಸ್ಥಿತಿಗೆ ವಿದ್ಯಾರ್ಥಿಗಳನ್ನು ತಳ್ಳುತ್ತಿದ್ದೇವೆ.

ಅಂಕದ ಬಿಂಕವನ್ನು ಮುರಿಯುವ ತುರ್ತು ಇದೆ. ಇದನ್ನು ಒಂದು ಸಮಾಜವಾಗಿ ನಾವು ಅರಿಯದೆ ಹೋದರೆ ಮುಂದಿನ ಪೀಳಿಗೆಯ ಜೀವಂತಿಕೆಯ ಕುತ್ತಿಗೆ ಹಿಚುಕಿದಂತಾಗುತ್ತದೆ. ಈ ಅಂಕ ವ್ಯಾಮೋಹಕ್ಕೆ ಒಳಗಾದ ಸಮಾಜದಲ್ಲಿ ಆಗಲೇ ಕೆಲವು ತಲೆಮಾರಿನ ವಿದ್ಯಾರ್ಥಿಗಳು ಸಹಜತೆ, ನೈಜತೆ ಕಳೆದುಕೊಂಡು ಫ್ಯಾಕ್ಟರಿಯಲ್ಲಿ ತಯಾರಿಸಲಾದ ಅಚ್ಚಿನ ಗೊಂಬೆಯಾಗಿರುವುದು ನಮ್ಮ ಕಣ್ಣನ್ನು ತೆರೆಸಬೇಕಿದೆ.

ಇದನ್ನೂ ಓದಿ : ಏಕತಾರಿ | ಕಾಶ್ಮೀರದ ವರದಿ ಮಾಡುವಾಗ ನಮ್ಮ ಮಾಧ್ಯಮ ಹಿಡಿಯುವ ದಾರಿಯೇ ಬೇರೆ!

ಅಂಕಗಳ ಅಚ್ಚಿನಲ್ಲಿ ಮನಸ್ಸುಗಳ ಆತ್ಮಗಳ ಮಣ್ಣು ಹಾಕಿ ಏಕರೂಪಿ ವ್ಯಕ್ತಿಗಳನ್ನು ಹೊರತೆಗೆಯುವುದು ಬೇಡ. ಈ ಅಂಕ ಆಧಾರಿತ ಅಚ್ಚನ್ನು ಪ್ರಮಾಣೀಕರಿಸುವ ಮುಖಾಂತರ ಒಂದು ಶ್ರೇಣಿಕೃತ ವ್ಯವಸ್ಥೆಗೆ ಅಡಿಪಾಯ ಹಾಕುವುದು ಬೇಡ. ಈ ಮಾದರಿ ನಿರ್ಮಾಣದ ವ್ಯಸನ ಇತರ ಮಾದರಿಗಳನ್ನು, ಇತರ ಮಾರ್ಗಗಳನ್ನು, ಇತರ ರೂಪಗಳನ್ನು ನಮಗೆ ಅರಿವಾಗದಂತೆ ನಮ್ಮ ಸಾಮೂಹಿಕ ಸಾಮಾನ್ಯ ಜ್ಞಾನವನ್ನು ಕುರೂಪಗೊಳಿಸುತ್ತ ಹೋಗುತ್ತದೆ. ಈ ಅಚ್ಚನ್ನು ಮುರಿಯುವುದು ಅತ್ಯವಶ್ಯ.

ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪಡೆಯದ ವಿದ್ಯಾರ್ಥಿಗಳಿಗೆ, ಅಂಕವು ಬದುಕಿನಲ್ಲಿ ಯಾವ ಮಹತ್ವವನ್ನೂ ಹೊಂದಿಲ್ಲ ಎಂದು ಹೇಳುವ ಅವಶ್ಯಕತೆ ಮತ್ತು ಅಗತ್ಯ ಇದೆ. ಇಲ್ಲವಾದಲ್ಲಿ ಈ ಅಂಕ ಸಂಭ್ರಮದಲ್ಲಿ ಅಂಕ ಪಡೆದ ವಿದ್ಯಾರ್ಥಿ ಅಂಕ ಪಡೆಯುವುದೇ ಮುಖ್ಯ ಎಂದು ಭಾವಿಸಿ, ಅಂಕ ಪಡೆಯದ ವಿದ್ಯಾರ್ಥಿ ಕೀಳರಿಮೆಗೆ ಒಳಗಾಗಿ, ಹೀಗೆ ಎರಡೂ ಬಗೆಯವರು ಬದುಕಿಗೆ ತಯಾರಾಗಲು ವಿಫಲರಾಗುವ ಮತ್ತು ತಮ್ಮ-ತಮ್ಮ ಸ್ವಭಾವ ಕಂಡುಕೊಳ್ಳಲಾಗದೆ ಇರುವ ಸಾಧ್ಯತೆ ಇದೆ. ಈ ಅಂಕ ಸಂಭ್ರಮದಿಂದ ಎಲ್ಲರಿಗೂ ನಷ್ಟವೇ ಹೆಚ್ಚು. ಗೆದ್ದವನಿಗೆ ಗೆಲುವಿನ ನಿರರ್ಥಕತೆ ಮತ್ತು ಸೋತವನಿಗೆ ಸೋಲಿನ ಪ್ರಭಾವಶೂನ್ಯತೆಯನ್ನು ತಿಳಿಹೇಳುವುದು ಮುಖ್ಯ.

ಚಿತ್ರ: ಕಲ್ಪನಾ ಕುಮಾರಿ

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More