ಸಂವಾದ | ಭೂಪೇನ್ ಖಾಖರ್ ಅವರ ‘ಫಾರಿನ್ ಸೋಪು’ ಪಿಸುಗುಡುವ ಸತ್ಯಗಳು

ಸೋಪನ್ನು ಮೊದಲು ಕತೆಯ ಮುಖ್ಯ ಪಾತ್ರಧಾರಿ ಉಪಯೋಗಿಸುತ್ತಾನೆ, ನಂತರ ಅವನ ಪಕ್ಕದ ಮನೆಯವನು, ಮತ್ತವನ ಹೆಂಡತಿ, ಅವರ ಮಗ; ಕೊನೆಗೆ ಆ ಹುಡುಗ ಸಾಕಿದ್ದ ನಾಯಿಗೆ ಸ್ನಾನ. ಇಷ್ಟೆಲ್ಲ ಆಗುವ ಹೊತ್ತಿಗೆ ಸೋಪಿನ ಕತೆ ಮುಗಿದೇಹೋಗುತ್ತದೆ. ಇದು ಆ ಕುಟುಂಬಗಳಲ್ಲಿ ತಳಮಳ ಸೃಷ್ಟಿಸುತ್ತದೆ!

ನೈಸರ್ಗಿಕ ಪರಿವರ್ತನೆಯನ್ನು ವಿವರಿಸುವುದಕ್ಕೆ, ಕನಿಷ್ಠ ಮೇಲುನೋಟದ ಹಂತದಲ್ಲಿ ಕಾಣುವ ಪರಿವರ್ತನೆಯನ್ನು ವರ್ಣಿಸುವುದಕ್ಕೆ ಗುಜರಾತಿ ಕಲ್ಪನಾಕತೆಯೊಂದನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸುತ್ತೇನೆ. 1980ರ ದಶಕದ ಕೊನೆಯ ಹಂತದಲ್ಲಿ ಗುಜರಾತಿ ಕವಿ, ನಾಟಕಕಾರ ಭರತ್ ನಾಯ್ಕ್ ಅವರು ‘ಗದ್ಯಪರ್ವ' ಎಂಬ ನಿಯತಕಾಲಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯ ಪ್ರಧಾನ ಒತ್ತು ಇದ್ದದ್ದು ಸಿದ್ಧ ಮಾದರಿಯನ್ನು ಮೀರಿ ಸೃಷ್ಟಿಯಾದ ಗುಜರಾತಿ ಸಾಹಿತ್ಯಕೃತಿಗಳನ್ನು ಒಂದೆಡೆ ತರಬೇಕು ಎಂಬ ಲಕ್ಷ್ಯದ ಮೆಲೆ. ನಿಘಂಟು ಪರಿಭಾಷೆಯಲ್ಲಿ ಇಂತಹ ಬರೆಹಗಳನ್ನು 'ತಾಲ್-ಪಡಿ' ಎಂದು ಕರೆಯಲಾಗುತ್ತದೆ. ಈ ಪ್ರಯತ್ನದ ಪೂರಕ ಚಟುವಟಿಕೆಯಾಗಿ, ಲೇಖಕರ ವಾರ್ಷಿಕ ಶಿಬಿರವೊಂದನ್ನು ಏರ್ಪಡಿಸುವುದಕ್ಕೆ 'ಗದ್ಯಪರ್ವ' ನಿರ್ಧರಿಸಿತು. ಈ ಶಿಬಿರಕ್ಕೆ ಜೊತೆಗೂಡಿ ಉಳಿಯುವುದು ಎಂಬರ್ಥ ನೀಡುವ 'ಸಹಚರ್ಯ' ಎಂಬ ಹೆಸರು ನೀಡಲಾಯಿತು. ಶಿಬಿರದಲ್ಲಿ ಭಾಗವಹಿಸುವ ಬರೆಹಗಾರರು ಯಾವುದರ ಬಗ್ಗೆಯಾದರೂ, ಏನಾದರೂ ಬರೆದು ಇತರರೆದುರು ವಾಚಿಸಬಹುದಿತ್ತು. ಶಿಬಿರದಲ್ಲಿ ಭಾಗವಹಿಸಿದ್ದ ಕೆಲವು ಬರೆಹಗಾರರು ಮೂಲತಃ ವರ್ಣಚಿತ್ರ ಕಲಾಕಾರರಾಗಿದ್ದರು. ಅವರಲ್ಲಿ ಒಬ್ಬರು ಭೂಪೇನ್ ಖಾಖರ್ ಎಂಬುವವರು. ತಮ್ಮದೇ ವಿಶಿಷ್ಟ ಆಧ್ಯಾತ್ಮಿಕ ನೆಲೆಯಲ್ಲಿ ಮೂರ್ತಿಭಂಜಕರಾಗಿದ್ದ ಅವರು ಆ ಹೊತ್ತಿಗಾಗಲೇ ಶ್ರೇಷ್ಠ ಪ್ರಯೋಗಶೀಲ ವರ್ಣಚಿತ್ರ ಕಲಾಕಾರ ಎಂದು ಹೆಸರುವಾಸಿಯಾಗಿದ್ದರು. ಅಲ್ಲಿಯತನಕ ಅವರು ಯಾವುದೇ ಸಾಹಿತ್ಯಿಕ ಕೃತಿಗಳನ್ನು ಪ್ರಕಟಿಸಿರಲಿಲ್ಲ; ಆದರೆ, ಅವರು ನಿರಂತರವಾಗಿ ಭಾಗವಹಿಸುತ್ತಿದ್ದ ‘ಸಹಜರ್ಯ’ ಶಿಬಿರಗಳು ಅವರೊಳಗಿದ್ದ ಬರಹಗಾರನನ್ನು ಪ್ರಕಟಿಸುವುದಕ್ಕೆ ಅವರಿಗಿದ್ದ ಸಂಕೋಚವನ್ನು ತೊಡೆದುಹಾಕುವಲ್ಲಿ ನೆರವಾದವು. ಹಿಂಜರಿಕೆಯನ್ನು ದಾಟಿ ಬಂದ ಅವರು, 'ಮೌಜಿಲಾ ಮನಿಲಾಲ್' ಎಂಬ ಶೀರ್ಷಿಕೆಯಲ್ಲಿ ಒಂದು ಅಸಹಜ ನಾಟಕವನ್ನು ಹಾಗೂ ಕೆಲವು ಕಿರುಗತೆಗಳನ್ನು ಬರೆದರು. ನಾನು 'ಸಹಚರ್ಯ' ಶಿಬಿರಗಳಲ್ಲಿ ಎಂದೂ ಭಾಗವಹಿಸಿಲ್ಲವಾದರೂ ಖಾಖರ್ ಮತ್ತು ನಾನು ಒಂದೇ ನಗರದಲ್ಲಿ ವಾಸಿಸುತ್ತಿದ್ದುದರಿಂದ ಹಾಗೂ ಇಬ್ಬರೂ ಸ್ನೇಹಿತರಾಗಿದ್ದರಿಂದ ಅವರು ತಮ್ಮ ಬರೆಹಗಳನ್ನು ಸಣ್ಣ ಗೆಳೆಯರ ಗುಂಪಿಗೆ ಓದಿಹೇಳುವುದನ್ನು ಕೇಳಿಸಿಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಅವರು ಬರೆದ ಒಂದು ಕಿರುಗತೆಗೆ 'ಫಾರಿನ್ ಸೋಪು' ಎಂಬ ವಿಚಿತ್ರ ಶೀರ್ಷಿಕೆ ಕೊಟ್ಟಿದ್ದರು. ನಂತರ ಈ ಕತೆಯನ್ನು ನಾನು (ರಂಗನಿರ್ದೇಶಕ ನೌಶಿಲ್ ಮೆಹ್ತಾ ಅವರ ಸಹಯೋಗದೊಂದಿಗೆ) ಇಂಗ್ಲಿಷ್‌ಗೆ ಭಾಷಾಂತರ ಮಾಡಿದೆ.

ಕಣ್ಮರೆಯಾಗುತ್ತಿರುವ ಅಥವಾ ಕೈಗೆಟುಕದ ತೃಪ್ತಿಯ ಕುರಿತ ಕತೆ ಅದಾಗಿತ್ತು. ಕೆಳಮಧ್ಯಮ ವರ್ಗದ ಜನರು ವಾಸಿಸುವ ಪ್ರದೇಶವೊಂದಕ್ಕೆ ಯಾರೋ ಒಬ್ಬರು ಅಕಸ್ಮಾತಾಗಿ ಸ್ನಾನದ ಸೋಪೊಂದನ್ನು ತರುವುದರ ಸುತ್ತ ಈ ಕತೆ ಹರಡಿಕೊಂಡಿದೆ. ಅಲ್ಲಿನ ಜನರಿಗೆ ಹೊಸತಾಗಿದ್ದ ಈ ವಸ್ತು ಸ್ವಲ್ಪೇ ಸಮಯದಲ್ಲಿ ಎಲ್ಲರೂ ಆಸೆಪಡುವ ವಸ್ತುವಾಗಿ ಪರಿವರ್ತನೆಯಾಗುತ್ತದೆ. ಮೊದಲು ಅದನ್ನು ಕತೆಯ ಮುಖ್ಯಪಾತ್ರದಾರಿ ಉಪಯೋಗಿಸುತ್ತಾನೆ, ನಂತರ ಅವನ ಪಕ್ಕದ ಮನೆಯವನು, ಮತ್ತವನ ಹೆಂಡತಿ, ಅವರ ಮಗ ಉಪಯೋಗಿಸುತ್ತಾರೆ. ಕೊನೆಗೆ ಆ ಹುಡುಗ ಸಾಕಿದ್ದ ನಾಯಿಗೆ ಸ್ನಾನ ಮಾಡಿಸುವುದಕ್ಕೂ ಈ ಸೋಪನ್ನು ಬಳಸಲಾಗುತ್ತದೆ. ಇಷ್ಟೆಲ್ಲ ಆಗುವ ಹೊತ್ತಿಗೆ ಸೋಪಿನ ಕತೆ ಮುಗಿದೇಹೋಗುತ್ತದೆ. ಸೋಪು ಮುಗಿದುಹೋಗಿದ್ದು ಈ ಎರಡೂ ಕುಟುಂಬಗಳ ನಡುವೆ ಬಹಳ ಗಂಭೀರ ತಳಮಳ ಸೃಷ್ಟಿಸುತ್ತದೆ. ಈ ತಳಮಳ ಕಾಫ್ಕಾ ಅವರ ‘ಮೆಟಮಾರ್ಫಸಿಸ್’ನಲ್ಲಿ ನಾಯಕ ಅನುಭವಿಸುವ ತಳಮಳಕ್ಕಿಂತ ಕಮ್ಮಿಯೇನಿರುವುದಿಲ್ಲ.

ಭೂಪೇನ್ ಖಾಖರ್ ಅವರ ಚಿತ್ರಕಲೆ ಕುರಿತ ಸಾಕ್ಷ್ಯಚಿತ್ರ

ಸಮಾಜದ ಇಂತಹ ಚಿಕ್ಕಪುಟ್ಟ ದೌರ್ಬಲ್ಯದೆಡೆಗೆ ತೀಕ್ಷ್ಣದೃಷ್ಟಿ ಹೊಂದಿದ್ದ ಖಾಖರ್, ಈ ಕತೆಯ ಮೂಲಕ ಸಮಾಜವು ಸಮುದಾಯದಿಂದ ಗ್ರಾಹಕಜಾಲಕ್ಕೆ ಪರಿವರ್ತನೆಯಾಗುತ್ತಿರುವುದನ್ನು ಬೆಟ್ಟುಮಾಡಿ ತೋರಿಸಿದ್ದರು. ಈ ಕತೆಯು ಸೃಷ್ಟಿಯಾದ ಕಾಲಘಟ್ಟವೂ ಕತೆಯೊಂದಿಗೆ ಚೆನ್ನಾಗಿ ಹೊಂದಿಕೆಯಾಗಿತ್ತು; ಅಲ್ಲಿಯತನಕ ಜನಾಂಗ ಅಸ್ಮಿತೆಯ ರಾಜಕೀಯದಲ್ಲಿ ಬಂಧಿಯಾಗಿದ್ದ ಭಾರತವನ್ನು ನವಉದಾರವಾದಿ ಆರ್ಥಿಕ ನೀತಿಗಳು ಬದಲಿಸುತ್ತಿದ್ದ ಕಾಲಘಟ್ಟದಲ್ಲಿ ಈ ಕೃತಿ ಹೊರಬಂದಿತ್ತು. ಅದಕ್ಕಿಂತಲೂ ಮುಖ್ಯವಾದ ವಿಷಯ ಏನೆಂದರೆ, ಗುಜರಾತಿ ಸಮಾಜ ಈ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿತ್ತು. ಆದರೂ, ಇಂತಹದ್ದೇ ಸಾಮಾಜಿಕ ಉದ್ವೇಗಗಳನ್ನು ಅಭಿವ್ಯಕ್ತಿಸುತ್ತಿದ್ದ ಖಾಖರ್ ಅವರ ಮನಮೋಹಕ ವರ್ಣಚಿತ್ರಗಳು ಬಂಡವಾಳ ಹೂಡುವವರಿಗೆ ಇಷ್ಟದ ವಸ್ತುಗಳಾಗಿದ್ದರಿಂದ ಅವರೊಬ್ಬ ಒಳ್ಳೆಯ ವರ್ಣಚಿತ್ರ ಕಲಾಕಾರರು ಎಂದು ಜನಪ್ರಿಯರಾದರೇ ಹೊರತು ಬರೆಹಗಾರ ಎಂಬುದನ್ನು ಗುಜರಾತಿ ಸಮಾಜ ಗುರುತಿಸಲೇ ಇಲ್ಲ.

ಇದನ್ನೂ ಓದಿ : ಸಂವಾದ | 190 ಬುಡಕಟ್ಟುಗಳ ಜನ ಇಷ್ಟವಿಲ್ಲದಿದ್ದರೂ ಅಲೆಮಾರಿ ಆಗಿರುವುದೇಕೆ?

ಆ ದಿನಗಳಲ್ಲಿ ಮರಾಠಿ ಕವಿ ದಿಲೀಪ್ ಚಿತ್ರೆ ಅವರು, ಜನರ ಹುಸಿ ಅಧ್ಯಾತ್ಮಿಕ ಅನುಭವವಾಗಿ ಪರಿವರ್ತನೆಯಾಗುತ್ತಿದ್ದ 'ಚಂಗಲವಾದ್' ಉಪಭೋಗಿ ಸಂಸ್ಕೃತಿಯನ್ನು ವಿಮರ್ಶಿಸುತ್ತ ಸರಣಿ ಲೇಖನಗಳನ್ನೇ ಬರೆದರು. ಮಾರುಕಟ್ಟೆಗೆ ಬಂದುಬೀಳುತ್ತಿದ್ದ ತರಹೇವಾಗಿ ಉಪಭೋಗಿ ವಸ್ತುಗಳು ಬಿಡಿಬಿಡಿ ವ್ಯಕ್ತಿಗಳನ್ನು ಗ್ರಾಹಕರನ್ನಾಗಿಯೂ ಹಾಗೂ ಈ ವಸ್ತುಗಳ ಬಳಕೆಯನ್ನು ಒಂದು ರೀತಿಯ ಭಾವೋನ್ಮಾದವನ್ನಾಗಿಯೂ ಪರಿವರ್ತಿಸಲಾರಂಭಿಸಿತು; ಅದಕ್ಕೂ ಮೊದಲು ಕೇವಲ ಕಾಮ ಮತ್ತು ಅಧ್ಯಾತ್ಮಿಕತೆಗಳೊಂದಿಗೆ ಬೆಸೆದುಕೊಂಡಿದ್ದ ಇಂತಹ ಭಾವೋದ್ರೇಕತೆ ಈಗ ಗ್ರಾಹಕವಸ್ತುಗಳ ಬಳಕೆಗೂ ವ್ಯಾಪಿಸಿತ್ತು. ಲಾರೆನ್ಸ್ ಬಿಕ್ರೆನ್ ಅವರು ಅಮೆರಿಕ ಸಮಾಜದ ಬಗ್ಗೆ ಹೇಳಿದ್ದು ಭಾರತೀಯ ಸಮಾಜಕ್ಕೂ ಯಥಾವತ್ತಾಗಿ ಅನ್ವಯವಾಗಲಾರಂಭಿಸಿತ್ತು: "ಆರ್ಥಿಕ ಪುರುಷ ಮಾರುಕಟ್ಟೆಯ ನಿಯಮಕ್ಕೆ ಶರಣಾಗುವ ಮೂಲಕ ಮಾತ್ರವೇ ತನ್ನ ಸ್ವಾತಂತ್ರ್ಯವನ್ನು ಈಡೇರಿಸಿಕೊಂಡಂತೆ, ಮಾನಸಿಕ ಪುರುಷ ಮತ್ತು ಮಹಿಳೆಯರು ಲೈಂಗಿಕ ಮಾರುಕಟ್ಟೆಗೆ ಶರಣಾಗುವ ಮೂಲಕ ಮಾತ್ರವೇ ತಮ್ಮ ಸ್ವಾತಂತ್ರ್ಯವನ್ನು ಈಡೇರಿಸಿಕೊಂಡರು."

1980ರ ದಶಕದ ಭಾರತದಲ್ಲಿ ಕೊರತೆಯೊಂದಿಗೆ ಹೊಂದಿಕೊಳ್ಳುವ ಲೋಕವಿತ್ತು. ಆ ದಿನಗಳಲ್ಲಿ ಜನರು ತಮ್ಮ ಜೀವಮಾನವಿಡೀ ದುಡಿದು, ದುಡಿಮೆಯ ಕೊನೆಯ ದಿನಗಳಲ್ಲಿ ತಮ್ಮ ಕುಟುಂಬಗಳಿಗಾಗಿ ಸಣ್ಣ ಮನೆಗಳನ್ನು ಕಟ್ಟಿಕೊಳ್ಳುವ ಯೋಚನೆ ಮಾಡುತ್ತಿದ್ದರು. 1990ರ ದಶಕದಲ್ಲಿ, ಯುವ ಉದ್ಯೋಗಿಗಳು ಮೊದಲ ಕೆಲಸ ಸಿಕ್ಕ ಕೂಡಲೇ ತಿಂಗಳ ಕಂತಿನ (ಇಎಂಐ) ಯೋಜನೆಗಳ ಅಡಿಯಲ್ಲಿ ಬ್ಯಾಂಕುಗಳಿಂದ ಸಾಲ ಪಡೆದು ಮನೆಗಳನ್ನು ಖರೀದಿಸಲಾರಂಭಿಸಿದರು. 1980ರ ದಶಕದ ತನಕ, ವರ್ತಮಾನವು ತಾವು ಹಿಂದೆ ಗಳಿಸಿದ್ದೇನು, ಕಳೆದುಕೊಂಡಿದ್ದೇನು ಎಂಬುದರ ಒಟ್ಟು ಮೊತ್ತವಾಗಿರುತ್ತಿತ್ತು. 1990ರ ದಶಕದಲ್ಲಿ, ವರ್ತಮಾನವು ಭವಿಷ್ಯದಲ್ಲಿ ಸಂಭವಿಸಬಹುದಾದ ಲಾಭ-ನಷ್ಟ ಸಾಧ್ಯತೆಗಳ ಒಟ್ಟು ಮೊತ್ತವಾಯಿತು. ಇಂದು, ಭವಿಷ್ಯವೇ ಕೊನೆಯಿಲ್ಲದ ದಿವಾಳಿಕೋರತನಕ್ಕೆ ಬಂದು ನಿಂತಿದೆ!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More