ಹಗೇವು | ಕಾಗೋಡು ತಿಮ್ಮಪ್ಪನವರ ಸೋಲು ನಿಜವಾಗಿಯೂ ಅವರ ಸೋಲೇ?

ಕಾಗೋಡು ಅವರ ಸೋಲಿನ ನಂತರದ ಮಾತುಗಳ ಹಿಂದೆ ಪಶ್ಚಾತ್ತಾಪ, ಮರುಕ ಮತ್ತು ಆಘಾತ ಎದ್ದುಕಾಣುತ್ತಿತ್ತು. ಜನ ಒಬ್ಬ ಒಳ್ಳೆಯ ನಾಯಕನ್ನು ಗೆಲ್ಲಿಸಲಿಲ್ಲ ಎಂಬುದು ಪಶ್ಚಾತ್ತಾಪಕ್ಕೆ ಕಾರಣವಾದರೆ, ಜನ ಇಷ್ಟು ಬೇಗನೆ ಇಷ್ಟೊಂದು ಕೃತಘ್ನರಾಗಿಬಿಟ್ಟರಲ್ಲ ಎಂಬುದು ಆಘಾತಕ್ಕೆ ಕಾರಣವಾಗಿತ್ತು

ಮೊನ್ನೆಯ ಚುನಾವಣೆ ಫಲಿತಾಂಶದ ಬಳಿಕ ಊರಿಗೆ ಹೋಗಿದ್ದೆ. ರಾಜಕಾರಣವೆಂದರೆ ಅಧಿಕಾರದ ಹಾವು ಏಣಿಯಾಟವಲ್ಲ; ಬದಲಾಗಿ, ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕವನ್ನು ಮುಚ್ಚುವ ಹೊಣೆಗಾರಿಕೆ ಎಂದೇ ರಾಜಕೀಯ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದಿರುವ ಸಾಗರದ ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪ ಅವರ ಸೋಲು ಬಹುತೇಕ ಜನರಿಗೆ ಆಘಾತ ತಂದಿತ್ತು. ಮತದಾನದ ದಿನ ಅವರ ವಿರುದ್ಧ ಮತ ಹಾಕಿದ ಕೆಲವರು ಕೂಡ, ಅವರು ಸೋಲಬಾರದಿತ್ತು ಎಂಬ ಪಾಪಪ್ರಜ್ಞೆಯ ಮಾತುಗಳನ್ನಾಡಿದರು.

ಹೊಸ ಕಾಲದ ತಂತ್ರಗಾರಿಕೆಯ ಚುನಾವಣಾ ವರಸೆಯ ಮುಂದೆ, ಅಲ್ಲಿ ಸಾಂಪ್ರದಾಯಿಕ ವರಸೆ ಸೋತಿತ್ತು. ಕಾಗೋಡು ಮತ್ತಿತರ ಸಮಾಜವಾದಿ ನಾಯಕರ ೭೦ರ ದಶಕದ ಭೂಸುಧಾರಣಾ ಕಾಯ್ದೆಯಿಂದಾಗಿ ಉಳುವ ಭೂಮಿಯ ಒಡೆತನ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಈಗಲೂ ಬಗರ್‌ಹುಕುಂ, ಅರಣ್ಯ ಹಕ್ಕು ಮತ್ತಿತರ ಕಾಯ್ದೆಯಡಿ ಭೂಮಿ ಹಕ್ಕು ಪಡೆದಿರುವ ಅಲ್ಲಿನ ಮತದಾರರು, ಅದೆಲ್ಲವನ್ನೂ ಮರೆತು ಕಾಗೋಡು ವಿರುದ್ಧ ಮತ ಹಾಕಿದರು ಎಂಬ ಅಂಶವೇ ಬಹಳ ಮುಖ್ಯವಾಗಿ ಚರ್ಚೆಯಾದವು. ಜನರಿಗೆ ಅಭಿವೃದ್ಧಿ, ಅನ್ನ, ಭೂಮಿಯ ಹಕ್ಕು ಮುಂತಾದ ಮೂಲಭೂತ ಸೌಲಭ್ಯಗಳ ಬಗ್ಗೆ ಈಗ ಅಷ್ಟೇನೂ ಆಸಕ್ತಿ ಉಳಿದಿಲ್ಲ. ಅವರಿಗೆ ಧರ್ಮ ಮತ್ತು ದೇಶಭಕ್ತಿಯ ಅಮಲು ನೀಡಲಾಗಿದೆ. ಆ ಅಮಲಿನ ಮುಂದೆ ಹಸಿವು ಮತ್ತು ಸ್ವಾಭಿಮಾನದ ಪ್ರಶ್ನೆ ದೊಡ್ಡದಾಗಿ ಕಾಣುತ್ತಿಲ್ಲ ಎಂಬ ವಿಶ್ಲೇಷಣೆಗಳೂ ಕೇಳಿಬಂದವು.

ಈ ಎಲ್ಲ ಮಾತುಗಳ ಹಿಂದೆ ಒಂದು ಬಗೆಯ ಪಶ್ಚಾತ್ತಾಪವೂ, ಮರುಕವೂ ಮತ್ತು ಆಘಾತವೂ ಎದ್ದುಕಾಣುತ್ತಿತ್ತು. ಜನ ಒಬ್ಬ ಒಳ್ಳೆಯ ನಾಯಕನ್ನು ಗೆಲ್ಲಿಸಲಿಲ್ಲ ಎಂಬುದು ಪಶ್ಚಾತ್ತಾಪಕ್ಕೆ ಮತ್ತು ಅಂತಹ ಮೂರ್ಖತನವನ್ನು ಮಾಡಿದ ಮತದಾರರ ಬಗ್ಗೆ ಮರುಕಕ್ಕೆ ಕಾರಣವಾದರೆ, ಈ ಜನ ಇಷ್ಟು ಕೃತಘ್ನರಾಗಿಬಿಟ್ಟರಲ್ಲ ಎಂಬುದು ಆಘಾತಕ್ಕೆ ಕಾರಣ.

ಆದರೆ, ನಮ್ಮ ಸಮಾಜ ಕಳೆದ ೨೫ ವರ್ಷಗಳಲ್ಲಿ ತೆರೆದುಕೊಂಡಿರುವ ರಾಜಕಾರಣ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಗಮನಿಸಿದರೆ ಮತ್ತು ಆ ಬದಲಾವಣೆಗಳು ಜನರ ಬದುಕು ಮತ್ತು ಯೋಚನಾಕ್ರಮದ ಮೇಲೆ ಬೀರಿರುವ ಪ್ರಭಾವವನ್ನು ಸೂಕ್ಷ್ಮವಾಗಿ ನೋಡಿದರೆ, ಬಹುಶಃ ಇಂತಹ ಪಶ್ಚಾತ್ತಾಪ, ಮರುಕು ಮತ್ತು ಆಘಾತಗಳಿಗೆ ಕಾರಣವಿರದು.

80ರ ದಶಕದಲ್ಲಿ ಜನತಾ ಪಕ್ಷದ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರದ ವಿಕೇಂದ್ರೀಕರಣಕ್ಕೆ ಚಾಲನೆ ನೀಡಿತು. ಪ್ರತಿ ಗ್ರಾಮ ಮಟ್ಟದಲ್ಲಿ ಜನರೇ ತಮ್ಮ ನಡುವಿನ ಒಬ್ಬರನ್ನು ತಮ್ಮ ಪ್ರತಿನಿಧಿಯಾಗಿ ಆರಿಸಿ ಕಳಿಸುವ ಮೂಲಕ ಸ್ಥಳೀಯವಾಗಿ ಆಡಳಿತದ ತೀರ್ಮಾನಗಳನ್ನು ಕೈಗೊಳ್ಳುವ ಅಧಿಕಾರ ನೀಡುವ ಹೊಸ ರಾಜಕೀಯ ಅಸ್ತ್ರ ಜನರ ಕೈಗೆ ಬಂದಿತು. ಆ ಬಳಿಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರಾಜಕೀಯ ಮೀಸಲಾತಿ ಕೂಡ ಜಾರಿಗೆ ಬಂದಿತು. ಎಲ್ಲ ಸಮುದಾಯ ಮತ್ತು ವರ್ಗಕ್ಕೆ ಸಮಾನ ರಾಜಕೀಯ ಅವಕಾಶ ಕಲ್ಪಿಸುವ ಈ ಮೀಸಲಾತಿ ವ್ಯವಸ್ಥೆಯ ಬಹುದೊಡ್ಡ ಫಲಾನುಭವಿ ಎಂದರೆ ಬಹುಶಃ ಭಾರತೀಯ ಜನತಾ ಪಕ್ಷ.

ಆವರೆಗೆ ನಗರ ಪ್ರದೇಶದ ಮೇಲ್ಜಾತಿ ಮತ್ತು ಮೇಲ್ವರ್ಗದ ಪಕ್ಷವಾಗಿ, ರಾಜಕೀಯವಾಗಿ ಅಲ್ಪಸಂಖ್ಯಾತರ ವೇದಿಕೆಯಾಗಿದ್ದ ಭಾರತೀಯ ಜನತಾ ಪಕ್ಷಕ್ಕೆ ಗ್ರಾಮೀಣ ಮಟ್ಟದಲ್ಲಿ ತನ್ನ ಕಾರ್ಯಕರ್ತರ ಜಾಲ ವಿಸ್ತರಣೆಗೆ ಮತ್ತು ಆ ಮೂಲಕ ರಾಜಕೀಯ ಅವಕಾಶದ ಬಾಗಿಲು ತೆರೆದಿದ್ದು ಪಂಚಾಯತ್ ರಾಜ್ ವ್ಯವಸ್ಥೆ. ಅದರಲ್ಲೂ, ರಾಜಕೀಯ ಮೀಸಲಾತಿಯ ಕಾರಣಕ್ಕಾಗಿ ಆ ಪಕ್ಷ ಅನಿವಾರ್ಯವಾಗಿ ತಳಸಮುದಾಯಗಳಿಗೆ ರಾಜಕೀಯ ಅವಕಾಶಗಳನ್ನು ನೀಡಬೇಕಾಯಿತು. ಆವರೆಗೆ ದೂರವಿಟ್ಟಿದ್ದ ಆ ಸಮುದಾಯಗಳನ್ನು ಸಂವಿಧಾನಿಕ ಬದ್ಧತೆಗೆ ಒಳಪಟ್ಟು ಅಪ್ಪಿಕೊಳ್ಳಬೇಕಾಯಿತು.

ಜೊತೆಗೆ, ಆ ಹೊತ್ತಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ತನ್ನ ಕಾರ್ಯಕರ್ತರ ಜಾಲವನ್ನು ಶಾಖೆಗಳ ಮೂಲಕ ವಿಸ್ತರಿಸತೊಡಗಿತ್ತು. ಒಂದು ಕಡೆ ಸಂಘಪರಿವಾರದ ಜಾಲ ವಿಸ್ತರಣೆ, ಮತ್ತೊಂದು ಕಡೆ ಪಂಚಾಯತ್ ರಾಜ್ ವ್ಯವಸ್ಥೆ ಅನಾಯಾಸವಾಗಿ ಒದಗಿಸಿಕೊಟ್ಟ ರಾಜಕೀಯ ಅವಕಾಶವನ್ನು ಬಳಸಿಕೊಂಡ ಬಿಜೆಪಿಗೆ ಮತ್ತೊಂದು ದೊಡ್ಡ ರಾಜಕೀಯ ಲಾಭ ಸಿಕ್ಕಿದ್ದು ೧೯೯೦ರ ದಶಕದ ರಾಮಜನ್ಮಭೂಮಿ ಆಂದೋಲನ. ಬಿಜೆಪಿಯ ಭೀಷ್ಮ ಆಡ್ವಾಣಿಯವರ ರಥಯಾತ್ರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಯಶಸ್ವಿಯಾಗದೆ ಇದ್ದರೂ, ವೈದಿಕ ದೈವ ಮತ್ತು ಧರ್ಮಾಚರಣೆಯಿಂದ ಬಹುದೂರವಿದ್ದ ದೇಶದ ಬಹುಸಂಖ್ಯಾತ ಜನರ ಎದೆಯೊಳಗೆ ರಾಮಮಂದಿರವನ್ನೂ, ಬಿಜೆಪಿಯ ಭಕ್ತಿಯನ್ನೂ ಬಿತ್ತುವಲ್ಲಿ ವಿಫಲವಾಗಲಿಲ್ಲ ಎಂಬುದು ವಾಸ್ತವ.

ಆ ಹೊತ್ತಿಗಾಗಲೇ ಸಮಾಜವಾದಿ ಚಳವಳಿ ಮತ್ತು ರಾಜಕಾರಣ ಹುಟ್ಟುಹಾಕಿದ್ದ ಜನಪರ, ಬಡವರ ಪರ ರಾಜಕಾರಣದ ಭರವಸೆ ಕೂಡ ಬತ್ತಿಹೋಗಿತ್ತು. ಆರಂಭದಿಂದಲೂ ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಭಾವಿಗಳ ಪಕ್ಷವಾಗಿದ್ದ ಕಾಂಗ್ರೆಸ್ಗೆ ಜನ ಆವರೆಗೆ ಮತಹಾಕುತ್ತ ಬಂದಿದ್ದರೂ, ಅದು ತಮ್ಮದೇ ಪಕ್ಷ ಎಂಬ ಆಪ್ತ ಭಾವನೆ ಬರುವಂತಹ ಸ್ಥಳೀಯ ನಾಯಕತ್ವಗಳ ಕೊರತೆ ಇತ್ತು. ಜಮೀನ್ದಾರರು, ಪ್ರತಿಷ್ಠಿತ ಕುಟುಂಬಗಳ ಕೈಯಲ್ಲೇ ಇದ್ದ ಕಾಂಗ್ರೆಸ್ಸಿನ ಅಧಿಕಾರ ಮತ್ತು ರಾಜಕಾರಣ ಜನಸಾಮಾನ್ಯರನ್ನು ಇಡಿಯಾಗಿ ಒಳಗೊಳ್ಳಲು ಸಿದ್ಧವಿರಲಿಲ್ಲ. ಆ ಕಾರಣದಿಂದಾಗಿಯೇ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಹುಟ್ಟಿಕೊಂಡಿದ್ದ ಸಮಾಜವಾದಿ ಹಿನ್ನೆಲೆಯ ಜನತಾ ಪರಿವಾರ ಆರಂಭದಲ್ಲಿ ಯಶಸ್ಸು ಕಂಡಿತ್ತು. ಜನರ ಪಕ್ಷವಾಗಿ ಜನಮನ ಗೆದ್ದಿತ್ತು.

ಆದರೆ, ಎಂಬತ್ತರ ದಶದಕ ಹೊತ್ತಿಗೆ ಹಲವು ಕಾರಣಗಳಿಂದಾಗಿ ಜನತಾ ಪರಿವಾರ ಜನಬೆಂಬಲದಿಂದ ದೂರವೇ ಉಳಿಯಿತು. ಆ ರಾಜಕೀಯ ನಿರ್ವಾತವನ್ನು ಸಮರ್ಥವಾಗಿ ಬಳಸಿಕೊಂಡ ಬಿಜೆಪಿಗೆ, ಕರ್ನಾಟಕದ ಮಟ್ಟಿಗೆ ನೆಲೆ ಒದಗಿಸಿದ್ದು ಪಂಚಾಯತ್ ರಾಜ್ ವ್ಯವಸ್ಥೆಯೇ ಎಂದರೆ ಅತಿಶಯೋಕ್ತಿಯಲ್ಲ. ದೇಶದ ಇತರೆಡೆಗಳಲ್ಲಿ ರಾಮಜನ್ಮಭೂಮಿ ರಥಯಾತ್ರೆ ಮತ್ತು ಆಂದೋಲನಗಳು ಬಿಜೆಪಿಯ ನೆಲೆಯನ್ನು ವಿಸ್ತರಿಸಿದರೆ, ಕರ್ನಾಟಕದಲ್ಲಿ ಮಾತ್ರ ನಿಧಾನವಾಗಿ, ಆದರೆ ಬಹಳ ಗಟ್ಟಿಯಾಗಿ ಅದಕ್ಕೆ ನೆಲೆ ಒದಗಿಸಿದ್ದು ಪಂಚಾಯತ್ ರಾಜ್ ವ್ಯವಸ್ಥೆಯ ರಾಜಕೀಯ ಮೀಸಲಾತಿ.

ಜೊತೆಗೆ, ಆವರೆಗೆ ಪ್ರಭಾವಿ ಜಾತಿ-ಜನಾಂಗಗಳ ಪಾಲಿಗೆ ಮಾತ್ರ ಅಧಿಕಾರ ಎಂಬ ಪರಿಸ್ಥಿತಿಯಿಂದ ಅವಕಾಶ ವಂಚಿತರಾಗಿ, ನಿರ್ಲಕ್ಷಿತ ಭಾವನೆಯಿಂದ ಇದ್ದ ಸಣ್ಣಪುಟ್ಟ ಸಮುದಾಯಗಳು ಮೀಸಲಾತಿಯ ಪರಿಣಾಮವಾಗಿ ಬಿಜೆಪಿಯಲ್ಲಿ ಅವಕಾಶ ಪಡೆಯುವ ಭರವಸೆ ಕಂಡವು. ಕಾಂಗ್ರೆಸ್ ರಾಜಕೀಯವಾಗಿ ತಳಸಮುದಾಯಗಳಿಗೆ ಅವಕಾಶ ನೀಡಿದ್ದರೂ, ಹಾಗೆ ಅವಕಾಶ ಪಡೆದ ನಾಯಕರು ಇತರ ಸಮುದಾಯಗಳನ್ನೂ, ಹೊಸ ತಲೆಮಾರಿನ ಯುವ ಸಮೂಹವನ್ನೂ ಜೊತೆಗಿಟ್ಟುಕೊಂಡು ಬೆಳೆಸಿದ್ದು ವಿರಳ. ಇತರ ಸಮುದಾಯಗಳಿರಲಿ, ತನ್ನದೇ ಇಡೀ ಸಮುದಾಯವನ್ನೂ ರಾಜಕೀಯ ಲಾಭಕ್ಕೆ ಮಾತ್ರ ಬೆಳೆಸಿಕೊಂಡು ಉಳಿದಂತೆ ಯಥಾಸ್ಥಿತಿಯಲ್ಲಿಟ್ಟ ಉದಾಹರಣೆಗಳೂ ಇದ್ದವು. ಹಾಗಾಗಿ, ಕಾಂಗ್ರೆಸ್ಸಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತಪರ ರಾಜಕಾರಣವನ್ನು ಮೀರಿಯೂ ಆ ಸಮುದಾಯಗಳ ಜನಸಾಮಾನ್ಯರು ಆ ಪಕ್ಷದ ಸ್ಥಳೀಯ ನಾಯಕತ್ವದ ವಿರುದ್ಧ ಒಂದು ಒಳಗುದಿಯ ಆಕ್ರೋಶವನ್ನು ಹೊಂದಿದ್ದರು.

ಆ ಆಕ್ರೋಶ ಮತ್ತು ಅಸಮಾಧಾನಕ್ಕೆ ಮತ್ತಷ್ಟು ತಿದಿಯೊತ್ತಿ ಅವರನ್ನು ಜಾತಿ-ಉಪಜಾತಿಗಳ ಬದಲಾಗಿ, ಧರ್ಮ ಮತ್ತು ಪರಧರ್ಮದ ಮೇಲೆ ಸಂಘಟಿಸುವ ಕೆಲಸವನ್ನು ಬಿಜೆಪಿ ಮತ್ತು ಸಂಘಪರಿವಾರಗಳು ಮಾಡಿದವು. ಅದರಲ್ಲೂ, ಐವತ್ತು ದಶಕಗಳ ಕಾಲ ಕೆಲವೇ ಕೆಲವರ ಕೈಯಲ್ಲಿ ಉಳಿದ ಅಧಿಕಾರದಲ್ಲಿ ತಮಗೂ ಪಾಲು ಪಡೆಯುವ ನಿರೀಕ್ಷೆಯಲ್ಲಿದ್ದ ಸಂಖ್ಯಾಬಾಹುಳ್ಯವಿರದ ಸಣ್ಣಪುಟ್ಟ ಜಾತಿ-ಜನಾಂಗಗಳು ಬಿಜೆಪಿ ಪರ ಗಟ್ಟಿಯಾಗಿ ನಿಂತವು. ಕಾಂಗ್ರೆಸ್ಸಿನಲ್ಲಿ ರಾಜಕೀಯ ಅವಕಾಶವನ್ನು ಪಡೆದ ಸಮುದಾಯಗಳ ಜನಸಾಮಾನ್ಯರು ಕೂಡ ತಮ್ಮದೇ ಸಮುದಾಯದ ಪ್ರಭಾವಿಗಳ ವಿರುದ್ಧ ಬಿಜೆಪಿಯೊಂದಿಗೆ ನಿಂತರು.

ಆದರೆ, ತಳಮಟ್ಟದಲ್ಲಿನ ಈ ಸ್ಥಿತ್ಯಂತರವನ್ನು ಗ್ರಹಿಸುವಲ್ಲಿ ವಿಫಲವಾದ ಕಾಂಗ್ರೆಸ್ ಮತ್ತು ಜನತಾ ಪರಿವಾರಗಳು, ಬಿಜೆಪಿಯನ್ನು ಬ್ರಾಹ್ಮಣ ಪಕ್ಷ, ಕೆಲವೇ ಮಂದಿ ಹಿಂದುತ್ವವಾದಿಗಳ ಪಕ್ಷ ಎಂಬ ಭ್ರಮೆಯಲ್ಲಿಯೇ ಉಳಿದವು ಮತ್ತು ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ವಿರುದ್ಧ ಕೋಮುವಾದದ ಅಸ್ತ್ರವನ್ನೇ ಮತ್ತೆ ಮತ್ತೆ ಬಳಸಿದವು. ಅದಕ್ಕೆ ಪ್ರತಿಯಾಗಿ ಬಿಜೆಪಿ, ಮುಸ್ಲಿಂ ಭಯೋತ್ಪಾದನೆಯ ಗುಮ್ಮ ಮತ್ತು ಕಾಂಗ್ರೆಸ್ ರಾಜಕೀಯ ಫಲಾನುಭವಿಗಳ ದರ್ಪ, ದೌಲತ್ತುಗಳನ್ನೇ ಮುಂದಿಟ್ಟುಕೊಂಡು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಕಣಜದಲ್ಲಿ ಬಿಲ ಕೊರೆಯಿತು! ಅದರ ಪರಿಣಾಮವೇ ಇಂದು ಬಿಜೆಪಿ ಕೆಲವೇ ಮಂದಿ ರಾಜಕೀಯ ಅಲ್ಪಸಂಖ್ಯಾತರ ಪಕ್ಷವಾಗಿ ಉಳಿದಿಲ್ಲ ಎಂಬುದು ಈ ಚುನಾವಣೆಯಲ್ಲಿ ಬಹಳ ನಿಚ್ಚಳವಾಗಿ ಸಾಬೀತಾಗಿದೆ.

ಆದರೆ, ಈ ಬದಲಾವಣೆಯನ್ನು, ಬಿಜೆಪಿಯ ಸಾಮಾಜಿಕ ಕಾರ್ಯಸೂಚಿಯ ಪರಿಣಾಮವನ್ನೂ ಲೆಕ್ಕಕ್ಕೇ ತೆಗೆದುಕೊಳ್ಳದ ಇತರ ರಾಜಕೀಯ ಪಕ್ಷಗಳು, ನಾಯಕರು ಮತ್ತು ರಾಜಕೀಯ ವಿಶ್ಲೇಷಕರು ಮಾತ್ರ ಈಗಲೂ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಇಡಿಯಾಗಿ ಕಾಂಗ್ರೆಸ್ ಮತಬ್ಯಾಂಕ್ ಎಂದು ಹೇಳುವ ಲೆಕ್ಕಾಚಾರದಲ್ಲಿಯೇ ಮುಳುಗಿರುವುದು ವಿಪರ್ಯಾಸ.

ಇದನ್ನೂ ಓದಿ : ಮಲೆನಾಡು, ಮಧ್ಯ ಕರ್ನಾಟಕದಲ್ಲಿ ಕೇಸರಿ ಕಲರವ; ಕಾಂಗ್ರೆಸ್ ಅತಿರಥರಿಗೆ ಸೋಲು

ಅದರಲ್ಲೂ, ಈ ಬಾರಿ ಮಲೆನಾಡು ಭಾಗದಲ್ಲಿ ಪ್ರಮುಖವಾಗಿ, "ಕಾಂಗ್ರೆಸ್ ಮೇಲ್ಜಾತಿ ವಿರೋಧಿ, ಅದು ಹಿಂದೆ ಜಾರಿಗೆ ತಂದ ಭೂಸುಧಾರಣೆ ಕಾನೂನಿನಿಂದ ಈಗ ಜಾರಿಗೊಳಿಸಿರುವ ಗ್ರಾಮೀಣ ಉದ್ಯೋಗ ಖಾತರಿ, ಅನ್ನಭಾಗ್ಯದಂತಹ ಯೋಜನೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೇಲ್ಜಾತಿಗಳ ವಿರುದ್ಧ. ಹಿಂದುತ್ವವಾದಿ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧದ ಅದರ ನಿಲುವುಗಳು ಕೂಡ ದೇಶದ ಬಹುಸಂಖ್ಯಾತ ಹಿಂದೂಗಳ ಮತ್ತು ಆ ಹಿಂದೂಗಳ ಹಿತಕಾಯುವ ಮೇಲ್ಜಾತಿಗಳ ವಿರುದ್ಧವೇ,” ಎಂಬುದನ್ನು ಪ್ರಮುಖವಾಗಿ ಬಿಂಬಿಸಲಾಯಿತು. ಎರಡು ದಶಕಗಳ ಸುದೀರ್ಘ ಕಾರ್ಯಸೂಚಿಯ ಫಲದ ಹೊರತಾಗಿ, ಈ ಬಗೆಯ ತಕ್ಷಣದ ತಂತ್ರಗಾರಿಕೆಗಳು ಕೂಡ ಬಿಜೆಪಿಗೆ ಈ ಬಾರಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯ ಗೈರುಹಾಜರಿಯಲ್ಲಿಯೂ ಒಳ್ಳೆಯ ಫಲ ಕೊಟ್ಟಿವೆ.

ಈ ವಾಸ್ತವದ ಹಿನ್ನೆಲೆಯ ಅರಿವು ಇಲ್ಲದೆಹೋದರೆ, ಜನಪರ ನಾಯಕನೊಬ್ಬನ ಸೋಲಿಗೆ ಕೇವಲ ಕೋಮುವಾದವನ್ನೋ, ಕಾಂಚಣದ ಮಾಯೆಯನ್ನೋ ಶಪಿಸುತ್ತ ಕೂರುವ ಮೂರ್ಖತನ ಮುಂದುವರಿಯಲಿದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More